ಅಂಕಣಗಳು

ಪ್ರಜಾಪ್ರಭುವೇ ಗಮನಿಸಿ ಸಹಿ ಹಾಕು, ಇದು ಶಾಸಕರ ರಿಪೋರ್ಟ್ ಕಾರ್ಡ್

ಪ್ರಜಾಪ್ರಭುವೇ ಗಮನಿಸಿ ಸಹಿ ಹಾಕು, ಇದು ಶಾಸಕರ ರಿಪೋರ್ಟ್ ಕಾರ್ಡ್
Published On :

ನಮ್ಮೂರಿನ ಸಮಸ್ಯೆಗಳನ್ನು ಪ್ರಸ್ತಾಪಿಸಿ ಎಂದು ಶಕ್ತಿ ಸೌಧಕ್ಕೆ ಆರಿಸಿ ಕಳುಹಿಸಿದರೆ ಬಾಯಿಗೆ ಮೇಣ ಹಾಕಿಕೊಂಡು ಕೂರುತ್ತಾರೆ. ಜನರ ಗೋಳುಗಳ ಬಗ್ಗೆ ಪ್ರಶ್ನಿಸಿ ಎಂದು ಚುನಾಯಿಸಿದರೆ ವಿಧಾನಸೌಧಕ್ಕೆ ಬಂದು ಹಾಜರಿ ಹಾಕಿ ಹೋಗುತ್ತಾರೆ. ಇನ್ನು ಕೆಲವರು ಅಧಿಕಾರವಿದ್ದರೆ ಮಾತ್ರ ವಿಧಾನಸೌಧದ ಮೆಟ್ಟಿಲು ಹತ್ತುತ್ತಾರೆ. ಇಂತಹ ಜನಪ್ರತಿನಿಧಿಗಳ ಮಧ್ಯ ಕಲಾಪದ ಪ್ರತಿಯೊಂದು ದಿನವೂ ಹಾಜರಿದ್ದು, ಘಟಾನುಘಟಿಗಳ ಮಧ್ಯೆ ಜನರ ಪರ ಧ್ವನಿ ಎತ್ತುವ ವಿಧಾನಸಭಾ ಸದಸ್ಯರೂ ಇದ್ದಾರೆ.
ರಾಜ್ಯದ 14ನೇ ವಿಧಾನಸಭೆಯ ಮೊದಲ 3 ಅಧಿವೇಶನದ ರಿಪೋರ್ಟ್ ಕಾರ್ಡ್ ಇದು.
ಸಿದ್ದರಾಮಯ್ಯ ಸರ್ಕಾರದ ಕಾಲಾವಧಿಯಲ್ಲಿ ಇಲ್ಲಿಯವರೆಗೆ ಒಟ್ಟು 3 ಅಧಿವೇಶನಗಳಲ್ಲಿ 51 ದಿನಗಳ ಕಾಲ ಕಲಾಪ ನಡೆದಿದೆ. ಕೇವಲ 6 ಗಂಟೆಗಳ ಅಡಚಣೆ ಮಧ್ಯೆ ಪ್ರತಿ ದಿನ ಸರಾಸರಿ 5 ಗಂಟೆ 37 ನಿಮಿಷಗಳ ಕಾಲ ಕಲಾಪ ನಡೆದಿದೆ. ಇದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ 15ನೇ ಲೋಕಸಭೆಯ ಸರಾಸರಿ ಕಲಾಪದ ಅವಧಿ ಕೇವಲ 2 ಗಂಟೆ 53 ನಿಮಿಷ. ಆದರೆ ಲೋಕಸಭೆಯ ಈವರೆಗಿನ ಸರಾಸರಿ ಕಲಾಪದ ಅವಧಿಗಿಂತ ಇದು 42 ನಿಮಿಷ ಕಡಿಮೆಯಾಗಿದೆ.
ಕಲಾಪದಲ್ಲಿನ ಪ್ರಲಾಪಗಳು ಕೇವಲ ಅಧಿಕಾರ ಇದ್ದಾಗ ಮಾತ್ರ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರುಗಳಾದ ಜಮೀರ್ ಅಹ್ಮದ್, ಸಿ.ಪಿ.ಯೋಗೇಶ್ವರ, ಡಿ.ಸುಧಾಕರ್, ವರ್ತೂರು ಪ್ರಕಾಶ್ ಹಾಗೂ ಸಂತೋಷ್ ಲಾಡ್ ಸಾಬೀತು ಮಾಡಿದ್ದಾರೆ. ಇವರನ್ನು ಸೇರಿದಂತೆ ಒಟ್ಟು 28 ಶಾಸಕರು ನೆಪ ಮಾತ್ರಕ್ಕೂ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಅನಿಲ್ ಲಾಡ್, ಆನಂದ್ ಸಿಂಗ್, ರಮೇಶ್ ಜಾರಿಕಿಹೊಳಿ, ಎಂ.ಕೃಷ್ಣಪ್ಪ ಸೇರಿದಂತೆ 43 ಶಾಸಕರು 51 ದಿನದ ಕಲಾಪದಲ್ಲಿ ಒಂದು ಕ್ಷಣವೂ ಜನರ ಪರ ಧ್ವನಿಯೆತ್ತಿಲ್ಲ. ಶಾಸನ ಸಭೆಗೆ ಬಂದು ಸುಮ್ಮನೇ ಹೋಗಿದ್ದಾರೆ. ಇನ್ನೊಂದು ವಿಚಿತ್ರವೆಂದರೆ ಮಂತ್ರಿಗಿರಿಯಿಂದ ಕೆಳಗಿಳಿದ ಬಳಿಕದ ಅಧಿವೇಶನದಲ್ಲಿ ಸಂತೋಷ್ ಲಾಡ್ ಭಾಗಿಯೇ ಆಗಿಲ್ಲ. ಬಜೆಟ್ ಅಧಿವೇಶನದವರೆಗ ಅವರ ಹಾಜರಿ ಶೂನ್ಯ. ಇವರಲ್ಲಿ 13 ಶಾಸಕರು ಪ್ರಶ್ನೋತ್ತರ ಅಥವಾ ಯಾವುದೇ ಚರ್ಚೆಯಲ್ಲಿ ಭಾಗವಹಿಸದೇ ತಮ್ಮ ಅಸ್ತಿತ್ವವನ್ನೇ ತೋರಿಸಿಲ್ಲ.
ಕಲಾಪದಲ್ಲಿ ಹಾಜರಾಗಲು ಅಸಡ್ಡೆ ತೋರುವ ಶಾಸಕರ ಮಧ್ಯೆ ಉತ್ಸಾಹದಿಂದ ಪಾಲ್ಗೊಳ್ಳುವ 17 ಸದಸ್ಯರು ಇದ್ದಾರೆ.
ಸದಸ್ಯರಿಗೆ ಶಾಸನ ಸಭೆಯ ನಿಯಮ ಗೊತ್ತಿಲ್ಲ
ಈ ವಿಧಾನಸಭೆಗೆ ಒಂದು ಕಪ್ಪು ಚುಕ್ಕೆಯೆಂದರೆ ಇವತ್ತಿನವರೆಗೆ ಯಾವುದೇ ಒಬ್ಬ ಸದಸ್ಯರ ಖಾಸಗಿ ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾಗಿಲ್ಲ. ಇದನ್ನು ಹೊರತುಪಡಿಸಿ 10 ಖಾಸಗಿ ವ್ಯಕ್ತಿಗಳ ಪ್ರಸ್ತಾಪವೊಂದು ಸಮಿತಿಯ ಮುಂದಿದೆ. ಬೆರಳೆಣಿಕೆಯ ಸದಸ್ಯರಿಗೆ ಶಾಸನ ಸಭೆ ನಿಯಮಗಳ ಬಗ್ಗೆ ಮಾಹಿತಿ ಇರುವುದು ಇದಕ್ಕೆ ಕಾರಣವೆಂದು ಸಮೀಕ್ಷೆ ನಡೆಸಿದ ರಿಜೋರ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಹಳಬರಿಗಿಂತ ಉತ್ತಮ
ಕರ್ನಾಟಕ ವಿಧಾನಸಭೆಯ ಇತಿಹಾಸವನ್ನು ನೋಡಿದಾಗ ಕಳೆದ 13 ವಿಧಾನಸಭೆಯ ಸರಾಸರಿ ಕಲಾಪವು 247.4 ದಿನವಾಗಿದೆ. ವಾರ್ಷಿಕ ಸರಾಸರಿಯು 50.90 ದಿನವಷ್ಟೆ. ಇಲ್ಲಿಯವರೆಗೆ ಅತಿ ಹೆಚ್ಚು ಕಲಾಪ ನಡೆದಿರುವುದು ದೇವರಾಜ್ ಅರಸ್ ಅಧಿಕಾರಾವಧಿಯಲ್ಲಿ. ಆಗ ಸರಾಸರಿ 85.40 ದಿನಗಳ ಕಾಲ ಪ್ರತಿ ವರ್ಷ ಕಲಾಪ ನಡೆದಿತ್ತು. ಸಿದ್ದರಾಮಯ್ಯ ಸರ್ಕಾರದ ಮೊದಲ ವರ್ಷದಲ್ಲಿ ಸರಾಸರಿಗಿಂತ ಉತ್ತಮವಾಗಿದ್ದರೂ ಗರಿಷ್ಠ ಮಟ್ಟ ತಲುಪಲು ಸಾಧ್ಯವಾಗಿಲ್ಲ. ಸಾಕಷ್ಟು ವಿಚಾರಗಳಿಗೆ ಸಿದ್ದರಾಮಯ್ಯ ಸರ್ಕಾರವನ್ನು ಅರಸ್‌ಗೆ ಹೋಲಿಸಲಾಗುತ್ತದೆ. ಆದರೆ ವಿಧಾನಸಭೆ ಕಲಾಪಕ್ಕೆ ಹೋಲಿಸಿದರೆ ಶೇ.60ರಷ್ಟು ಹಿಂದೆ ಬಿದ್ದಿದೆ.
ಕಲಾಪ ವ್ಯರ್ಥ ಕಡಿಮೆ
ಹಿಂದಿನ ಲೋಕಸಭೆಯ ಅಧಿವೇಶನವನ್ನು ಗಮನಿಸಿದಾಗ ಕಲಾಪ ನಡೆದದ್ದಕ್ಕಿಂತ ಗಲಾಟೆಯಾಗಿರುವುದೇ ಹೆಚ್ಚು. ಜನರ ಬಗ್ಗೆ ಚರ್ಚಿಸಿದ್ದಕ್ಕಿಂತ ಆಡಳಿತ-ಪ್ರತಿ ಪಕ್ಷಗಳ ಹಗ್ಗ ಜಗ್ಗಾಟದಲ್ಲೇ ಕಲಾಪ ವ್ಯರ್ಥವಾಗಿತ್ತು. ಆದರೆ ಕರ್ನಾಟಕದ 14ನೇ ವಿಧಾನಸಭೆಯ ಮೊದಲ 3 ಅಧಿವೇಶನ ಇದಕ್ಕೆ ವ್ಯತಿರಿಕ್ತವಾಗಿದೆ. ಲೋಕಸಭೆಯ ಒಟ್ಟು ಶೇ.30.83ರಷ್ಟು ಅವಧಿ ವ್ಯರ್ಥವಾಗಿದ್ದರೆ, ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಗಲಾಟೆಯಿಂದ ಕಲಾಪ ಮುಂದೂಡಿದ್ದು ಅಥವಾ ವ್ಯರ್ಥವಾಗಿದ್ದು ಕೇವಲ ಐದೂವರೆ ಗಂಟೆ. ಸಚಿವರು ಹಾಗೂ ಅಧಿಕಾರಿಗಳ ಗೈರು ವಿರೋಧಿಸಿ ಬಿಜೆಪಿ ಸದಸ್ಯರು ಧರಣಿ ಮಾಡಿದ್ದರಿಂದ 11 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಗಿತ್ತು. ಇನ್ನು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರೈತನ ಸಾವಿನಿಂದ 5 ಗಂಟೆ 11 ನಿಮಿಷಗಳ ಕಾಲ ಸಭೆ ನಡೆದಿರಲಿಲ್ಲ. ಜೆಡಿಎಸ್‌ನ ವೈಎಸ್‌ವಿ ದತ್ತ ಅವರ ವಿವಾದಾತ್ಮಕ ಹೇಳಿಕೆಯಿಂದ ಸುಮಾರು 10 ನಿಮಿಷಗಳ ಕಾಲ ಕಲಾಪಕ್ಕೆ ಅಡಚಣೆಯಾಗಿತ್ತು.


ಸಮರ್ಥಸ್ಪೀಕರ್!
ಲೋಕಸಭೆ ಹಾಗೂ ವಿಧಾನಸಭೆ ಕಲಾಪವನ್ನು ತೂಗಿ ನೋಡಿರುವ ರಿಜೋರ್ಸ್ ಸಂಸ್ಥೆ, ಕಲಾಪವನ್ನು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದಿದೆ. ಸಭೆ ನಡೆಯುವಾಗ ಯಾವುದೇ ವಿವಾದಗಳು ಎದುರಾದಾಗ ಅದನ್ನು ಸೂಕ್ತವಾಗಿ ನಿಭಾಯಿಸಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರನ್ನು ನಿಯಂತ್ರಿಸುವ ಚಾಣಾಕ್ಷತನ ಹೊಂದಿದ್ದಾರೆ. ಆದರೆ ಲೋಕಸಭೆಯಲ್ಲಿ ಜನರ ತೆರಿಗೆ ಹಣಕ್ಕೆ ಬೆಲೆಯೇ ಇಲ್ಲವೆಂಬಂತೆ ಸದಸ್ಯರು ವರ್ತಿಸಿದರು. ಯಾವೊಂದು ವಿಚಾರದ ಬಗೆಗೂ ಚರ್ಚೆ ನಡೆಸಲಿಲ್ಲ. ಆದರೆ ಕರ್ನಾಟಕದಲ್ಲಿ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದ್ದಾರೆ ಎನ್ನುವುದು ಸಂಶೋಧನಾ ತಂಡದ ಅಭಿಪ್ರಾಯವಾಗಿದೆ. ಇದೇ ಕಾರಣದಿಂದ 15ನೇ ಲೋಕಸಭೆಯ ಎರಡು ಪಟ್ಟು ಕಾಲಾವಧಿಯಲ್ಲಿ ಚರ್ಚೆ ನಡೆದಿದೆ.
ಶಾಸಕರಾಗುವವರು ಜನರ ಮಧ್ಯದಿಂದ ಬಂದರೆ ಜನರ ಸಮಸ್ಯೆ ಅರ್ಥವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಯಾರನ್ನೋ ನಿಲ್ಲಿಸಿ ಗೆಲ್ಲಿಸಿದರೆ ಸಮಸ್ಯೆ ಗೊತ್ತಾಗುತ್ತಾ? ಶಾಸಕರು ವಿಧಾನಮಂಡಲದಲ್ಲಿ ಸಕ್ರಿಯರಾಗಿಲ್ಲದಿರುವುದಕ್ಕೆ ರಾಜಕೀಯ ಪಕ್ಷಗಳು ಹಾಗೂ ಮತದಾರರೇ ಕಾರಣ. ರಾಜಕೀಯ ಪಕ್ಷಗಳು ಯಾರನ್ನೋ ಗೆಲ್ಲಿಸಿ ಕಳಿಸೋದ್ದನ್ನು ಈ ಬಾರಿಯ ರಾಜ್ಯಸಭೆ, ಮೇಲ್ಮನೆ ಚುನಾವಣೆ ನೋಡಿದರೆ ಗೊತ್ತಾಗುತ್ತದೆ. ಹೀಗೆ ಶಾಸಕರಾದವರಿಂದ ಏನು ನಿರೀಕ್ಷಿಸಲು ಸಾಧ್ಯ? ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ಎಂದು ಹೇಳಿಸಿಕೊಳ್ಳಲು ಶಾಸಕರು ಚಿಕ್ಕಮಕ್ಕಳೇನು? ಅವರಿಗೆ ಎಲ್ಲವನ್ನೂ ಕಲಿಸಿಕೊಡಲು ಸಾಧ್ಯವೇ? ಅವರು ತಿಳಿದುಕೊಂಡು ಕಲಾಪದಲ್ಲಿ ಭಾಗವಹಿಸಬೇಕು. ಪ್ರಶ್ನೆ ಕೇಳಿ ಎಂದು ಹೇಳಿಕೊಡಲು ಸಾಧ್ಯವೇ? ಕಲಾಪಕ್ಕೇ ಬರುವುದಿಲ್ಲ ಎಂದರೆ ಇವರ ಜವಾಬ್ದಾರಿಯಾದರೂ ಏನು?
= ರಿಜೋರ್ಸ್ ಸಂಶೋಧನೆ ವೇದಿಕೆ 14ನೇ ವಿಧಾನಸಭೆಯಲ್ಲಿ ಶಾಸಕರ ಸಾಧನೆ ಕುರಿತು ನೀಡಿದ ರಿಪೋರ್ಟ್‌ಗೆ ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ  ಪ್ರತಿಕ್ರಿಯೆ.


ಘಟಾನುಘಟಿಗಳ ನಿರ್ಲಕ್ಷ್ಯ
ಮೂರು ಅಧಿವೇಶನಗಳಲ್ಲಿ ಒಟ್ಟು 540 ಚುಕ್ಕೆ ಗುರುತಿನ ಪ್ರಶ್ನೆ ಹಾಗೂ 5900 ಚುಕ್ಕೆ ರಹಿತ ಪ್ರಶ್ನೆಗಳನ್ನು ಸದಸ್ಯರು ಕೇಳಿದ್ದಾರೆ. ಇದರರ್ಥ ಪ್ರತಿ ಶಾಸಕರು ಸರಾಸರಿ 2.4 ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ದಿನ ಕೇವಲ 15 ಪ್ರಶ್ನೆಗಳನ್ನು ಕೇಳಲು ಮಾತ್ರ ಅವಕಾಶವಿರುವುದರಿಂದ ಈ ಸಂಖ್ಯೆ ಕಡಿಮೆಯಿದೆ. ಆದರೆ ಪ್ರಶ್ನೆ ಕೇಳಿದ ಸದಸ್ಯರು ಉಪಪ್ರಶ್ನೆಗಳನ್ನೇ ಕೇಳುವುದಿಲ್ಲ. 540 ಪ್ರಶ್ನೆಗಳಿಗೆ ಕೇವಲ 54 ಉಪ ಪ್ರಶ್ನೆ ಕೇಳಿದ್ದು, 54 ಪ್ರಶ್ನೆಗಳನ್ನು ಕೇಳಲು ಸದಸ್ಯರು ಹಾಜರೇ ಇರಲಿಲ್ಲ. ಇದು ನಮ್ಮ ಶಾಸಕರಕ ಆಸಕ್ತಿಗೆ ಹಿಡಿದ ಕನ್ನಡಿ. ಚುಕ್ಕೆ ರಹಿತ ಪ್ರಶ್ನೆಗೆ ಸಂಬಂಧಿಸಿ ಲೋಕಸಭೆ ಸದಸ್ಯರ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್ಚಿದೆ. ಕೇಂದ್ರದಲ್ಲಿ ಇದು ಪ್ರತಿ ಸದಸ್ಯರಿಗೆ 28.07 ಇದ್ದರೆ ಕರ್ನಾಟಕದಲ್ಲಿ 30.12 ಇದೆ. ಆದರೆ ಕರ್ನಾಟಕದ ಸಂಸದರು ಶಾಸಕರಿಗಿಂತ ಹೆಚ್ಚು ಕಾರ್ಯಶೀಲರಾಗಿದ್ದಾರೆ. ಕರ್ನಾಟಕದ 28 ಸದಸ್ಯರು ಸರಾಸರಿ 57.32 ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದಾರೆ.


ರಾಜ್ಯದ ಚರ್ಚೆಗಿಂತ ಕ್ಷೇತ್ರಕ್ಕೆ ಸೀಮಿತ
ವಿಧಾನಸಭೆಯಲ್ಲಿ ನಡೆದ ಒಟ್ಟಾರೆ ಚರ್ಚೆಯಲ್ಲಿ ಶೇ.72ರಷ್ಟು ಶಾಸಕರ ಕ್ಷೇತ್ರದ ಸಮಸ್ಯೆಗೆ ಸೀಮಿತವಾಗಿತ್ತು. ತಮ್ಮ ಕ್ಷೇತ್ರದಲ್ಲಿನ ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ರಾಜ್ಯಪಾಲರ ಭಾಷಣ, ಬಜೆಟ್ ಮೇಲಿನ ಚರ್ಚೆಗಳಲ್ಲಿ ಗಮನ ನೀಡಿದ್ದಾರೆ. ಇದರಲ್ಲಿ ಶೇ.48ರಷ್ಟು ಚರ್ಚೆ ತಮ್ಮ ಕ್ಷೇತ್ರದಲ್ಲಿ ಬಿಡುಗಡೆಯಾಗದ ಅನುದಾನ, ಗುತ್ತಿಗೆ, ಕಾಮಗಾರಿ ವಿಳಂಬಕ್ಕೆ ಶಾಸಕರು ಹೆಚ್ಚು ಮಹತ್ವ ನೀಡಿದ್ದಾರೆ. ಆದರೆ ಶಾಸಕರು ಖಾಸಗಿ ವಿಧೇಯಕ ಮಂಡನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎನ್ನುವುದು ಸಂಶೋಧನಾ ಸಂಸ್ಥೆಯ ವಾದವಾಗಿದೆ.
ಶಾಸನಬದ್ಧ ಚರ್ಚೆಗಳು
ವಿಷಯ                 ಭಾಗವಹಿಸಿದ ಸದಸ್ಯರು
ರಾಜ್ಯಪಾಲರ ಭಾಷಣ     72
ಸಂತಾಪ     44
ಚುನಾವಣೆ    31
ಸಚಿವರ ಹೇಳಿಕೆ     20
ಸಮಿತಿಯ ವರದಿಗಳು    8
ಅಭಿನಂದನೆ     7
ಹಕ್ಕು    4
ಪ್ರಕಟಣೆ    1

ಮೂರು ಅಧಿವೇಶನದಲ್ಲಿ ಇಬ್ಬರು ಸದಸ್ಯರು ಹಕ್ಕು ಚ್ಯುತಿ ಮಂಡನೆ ಮಾಡಿದ್ದಾರೆ. ಇವರಲ್ಲಿ ರಮೇಶ್‌ಕುಮಾರ್ ಹಾಗೂ ಮಾನಪ್ಪ ವಜ್ಜಲ್ ಸೇರಿದ್ದಾರೆ. ಇದನ್ನು ಹೊರತು ಪಡಿಸಿ ನೆಲ್ಸನ್ ಮಂಡೇಲಾ ಅವರ ಸಂತಾಪದ ಮೇಲೆ ಒಂದಿಡಿ ದಿನ ಚರ್ಚೆ ನಡೆದಿದೆ.

ಸರ್ಕಾರಿ ಕಲಾಪದ ಮೇಲೆ ಚರ್ಚೆ
ವಿಷಯ                 ಭಾಗವಹಿಸಿದ ಸದಸ್ಯರು
ಶಾಸನ ರಚನೆ     300
ಆಯವ್ಯಯ     114
ಪರಿಷತ್ ಸಂದೇಶ    3
ಇದರಲ್ಲಿ ಒಟ್ಟು 28 ವಿಧೇಯಕಗಳು ಅನುಮೋದನೆಯಾಗಿವೆ.

ಸದಸ್ಯರ ಇತರೆ ಚರ್ಚೆಗಳು
ವಿಷಯ                 ಭಾಗವಹಿಸಿದ ಸದಸ್ಯರು
ಬೇಡಿಕೆಗಳು     3
ಅಧ್ಯಕ್ಷರ ಅಪ್ಪಣೆ ಮೇರೆಗೆ     571
ಪ್ರಶ್ನೋತ್ತರ     504
ಸಾರ್ವಜನಿಕ ಮಹತ್ವದ ವಿಷಯ    316
ಗಮನ ಸೆಳೆಯುವ ಸೂಚನೆ     286
ನಿಲುವಳಿ ಸೂಚನೆ    114
ಅರ್ಧ ಗಂಟೆ ಚರ್ಚೆಗಳು    13
ಅಲ್ಪಾವಧಿ ಚರ್ಚೆ    7

17 ಜನಪ್ರತಿನಿಧಿಗಳ ಶೇ.100 ಹಾಜರಿ!
ಸದನವನ್ನು ಸಂಪೂರ್ಣ ಕಡೆಗಣಿಸಿದ ಸದಸ್ಯರೂ ಇದ್ದಾರೆ. ಹಾಗೆಯೇ ಒಂದು ದಿನವನ್ನೂ ತಪ್ಪಿಸಿಕೊಳ್ಳದೇ ಕಲಾಪಕ್ಕೆ ಹಾಜರಾದ ಶಾಸಕರಿದ್ದಾರೆ. ಸಂತೋಷ್ ಲಾಡ್ ಅಂಥವರು ಅಧಿಕಾರ ಹೋದ ತಕ್ಷಣ ವಿಧಾನಸಬೆಯನ್ನು ಮರೆತಿರುವುದೂ ಇದೆ. ಅಧಿಕಾರ ಸಿಕ್ಕ ಕೂಡಲೇ ವಿಧಾನಸೌಧ ನೆನಪಿಸಿಕೊಂಡ ಶಾಸಕರೂ ಇದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಪ್ರತಿಪಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಸನದಿಂದಲೂ ದೂರವಾಗಿದ್ದಲ್ಲದೇ, ಚರ್ಚೆಯಲ್ಲಿ ಭಾಗವಹಿಸವುದೂ ವಿರಳವಾಗಿದೆ.

ಶೇ.100ರ ಹಾಜರಿ
= ಕಾಶಪ್ಪನವರ್ ಶಿವಶಂಕರಪ್ಪ- ಹುನಗುಂದ
= ಬಿ.ಎನ್.ವಿಜಯ್‌ಕುಮಾರ್- ಜಯನಗರ
= ಬಿ.ಎ.ಬಸವರಾಜ- ಕೆ.ಆರ್.ಪುರ
= ಅಶೋಕ ಪಟ್ಟಣ- ರಾಮದುರ್ಗ
= ಬಿ.ಎಂ.ನಾಗರಾಜ- ಶಿರಗುಪ್ಪ
= ಟಿ.ರಾಘುಮೂರ್ತಿ- ಚಳ್ಳಕೆರೆ
= ಜೆ.ಆರ್.ಲೋಬೋ- ಮಂಗಳೂರು ನಗರ ದಕ್ಷಿಣ
= ಎಚ್.ಕೆ.ಕುಮಾರಸ್ವಾಮಿ- ಸಕಲೇಶಪುರ
= ಕೆ.ಬಿ.ಕೋಳಿವಾಡ- ರಾಣೆಬೆನ್ನೂರು
= ಕೆ.ಜಿ.ಬೋಪಯ್ಯ- ವಿರಾಜಪೇಟೆ
= ತನ್ವೀರ್ ಸೇಠ್- ನರಸಿಂಹ ರಾಜ
= ಕೆ.ಬಿ.ಪ್ರಸನ್ನಕುಮಾರ್- ಶಿವಮೊಗ್ಗ
= ಕೆ.ಶಡಕ್ಷರಿ- ತಿಪ್ಟೂರ್
= ಡಾ.ರಫೀಕ್ ಅಹ್ಮದ್- ತುಮಕೂರು ನಗರ

ಕಡಿಮೆ ಹಾಜರಿ ಶಾಸಕರು
ಶಾಸಕರು      ಕ್ಷೇತ್ರ      ಶೇಕಡಾವಾರು
ಸಂತೋಷ್ ಲಾಡ್                 ಕಲಘಟಗಿ     00.00
ಸಿ.ರಘು     ಸಿ.ವಿ.ರಾಮನ್‌ನಗರ     23.53
ಸಿ.ಪಿ.ಯೋಗೇಶ್ವರ      ಚನ್ನಪಟ್ಟಣ    25.49
ಡಿ.ಕೆ.ಶಿವಕುಮಾರ್      ಕನಕಪುರ     31.43
ಇಕ್ಬಾಲ್ ಅನ್ಸಾರಿ     ಗಂಗಾವತಿ    35.29
ಬಾಲಚಂದ್ರ ಜಾರಕಿಹೊಳಿ    ಅರಭಾವಿ    37.25
ಮಲ್ಲಿಕಾರ್ಜುನ ಖೂಬಾ    ಬಸವಕಲ್ಯಾಣ    37.25
ಆನಂದಸಿಂಗ್    ವಿಜಯನಗರ     39.22
ಹಾಲಾಡಿ ಶ್ರೀನಿವಾಸ ಶೆಟ್ಟಿ    ಕುಂದಾಪುರ     39.22
ಟಿ.ಎಚ್.ಸುರೇಶ ಬಾಬು     ಕಂಪ್ಲಿ      41.18
ವರ್ತೂರು ಪ್ರಕಾಶ     ಕೋಲಾರ     45.10
ಅರವಿಂದ್ ಪಾಟೀಲ್     ಖಾನಾಪುರ     50.98
ತಿಪ್ಪರಾಜು     ರಾಯಚೂರು ಗ್ರಾ.    50.98
ಎಚ್.ಡಿ.ಕುಮಾರಸ್ವಾಮಿ     ರಾಮನಗರ     51.85
ಜಿ.ಟಿ.ದೇವೇಗೌಡ      ಚಾಮುಂಡೇಶ್ವರಿ     58.82

ಅತಿ ಹೆಚ್ಚು ಚರ್ಚೆಯಲ್ಲಿ ಭಾಗವಹಿಸಿದ ಶಾಸಕರು

ಟಿ.ಬಿ.ಜಯಚಂದ್ರ- 216
ಸಿದ್ದರಾಮಯ್ಯ- 125
ಜಗದೀಶ್ ಶೆಟ್ಟರ್- 80
ವಿ.ಶ್ರೀನಿವಾಸ್ ಪ್ರಸಾದ್- 73
ಎಚ್.ಕೆ.ಪಾಟೀಲ್- 58
ಎಚ್.ಡಿ.ರೇವಣ್ಣ- 57
ಕೆ.ಎಂ.ಶಿವಲಿಂಗೇಗೌಡ- 52
ಎಚ್.ಡಿ.ಕುಮಾರಸ್ವಾಮಿ- 48
ಬಿ.ಎಸ್.ಯಡಿಯೂರಪ್ಪ- 45
ಆರ್.ವಿ.ದೇಶಪಾಂಡೆ- 45

ಚರ್ಚೆಯಲ್ಲೇ ಭಾಗವಹಿಸದ ಶಾಸಕರು

    ಎ.ವೆಂಕಟೇಶ ನಾಯ್ಕ್- ದೇವದುರ್ಗ
    ಅಬ್ಬಯ್ಯ ಪರ್ಸಾದ್- ಹುಬ್ಬಳ್ಳಿ-ಧಾರವಾಡ ಪೂರ್ವ
    ಆನಂದ್ ಸಿಂಗ್- ವಿಜಯದುರ್ಗ
    ಅನಿಲ್ ಲಾಡ್- ಬಳ್ಳಾರಿ ನಗರ
    ಅಪ್ಪಾಜಿ ಎಂ.ಜೆ- ಭದ್ರಾವತಿ
    ಅರವಿಂದ್ ಬೆಲ್ಲದ್- ಹುಬ್ಬಳ್ಳಿ-ಧಾರವಾಡ ಪಶ್ಚಿಮ
    ಅಶೋಕ ಪಟ್ಟಣ- ರಾಮದುರ್ಗ
    ಬಿ.ನಾಗೇಂದ್ರ- ಕೂಡ್ಲಿಗಿ
    ಬಿ.ಜಿ.ಗೋವಿಂದಪ್ಪ- ಹೊಸದುರ್ಗ
    ಬಿ.ಎಂ.ನಾಗರಾಜ- ಶಿರಗುಪ್ಪ
    ಜಮೀರ್ ಅಹ್ಮದ್ ಖಾನ್- ಚಾಮರಾಜಪೇಟೆ
    ಬಸವರಾಜ್ ನೀಲಪ್ಪ ಶಿವಣ್ಣವರ್- ಬ್ಯಾಡಗಿ
    ಭರಮಗೌಡ ಅಲಗೌಡ ಕಾಗೆ- ಕಾಗ್ವಾಡ
    ಭೋಜರಾಜ ರಾಮಚಂದ್ರ- ಅಲ್ನಾಡ್
    ಸಿ.ಪಿ.ಯೋಗೇಶ್ವರ- ಚನ್ನಪಟ್ಟಣ
    ಸಿ. ಪುಟ್ಟರಂಗನಶೆಟ್ಟಿ- ಚಾಮರಾಜನಗರ
    ಚಿಮ್ಮಣಕಟ್ಟಿ ಬಾಳಪ್ಪ ಭೀಮಪ್ಪ- ಬಾದಾಮಿ
    ಡಿ.ಜಿ.ಶಾಂತನ ಗೌಡ- ಹೊನ್ನಾಳಿ
    ದತ್ತಾತ್ರೇಯ ಪಾಟೀಲ್ ರೇವೂರ್- ಗುಲ್ಬರ್ಗ ದಕ್ಷಿಣ
    ಫೈರೋಜ್ ನೂರುದ್ದೀನ್ ಸೇಠ್- ಬೆಳಗಾವಿ ಉತ್ತರ
    ಹಂಪಯ್ಯ ಸಾಹೂಕಾರ ಬಳ್ಳಟಗಿ- ಮಾನ್ವಿ
    ಸಿ.ಮಂಜುನಾಥ್- ಮುಳಬಾಗಿಲು
    ಜಿ.ರಾಮಕೃಷ್ಣ- ಗುಲ್ಬರ್ಗ ಗ್ರಾಮೀಣ
    ಗೋಪಾಲಯ್ಯ ಕೆ- ಮಹಾಲಕ್ಷ್ಮಿ ಬಡಾವಣೆ
    ಎಚ್.ಪಿ.ರಾಜೇಶ- ಜಗಳೂರು
    ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ
    ಇನಾಂದಾರ್ ದಾನಪ್ಪಗೌಡ ಬಸನಗೌಡ- ಕಿತ್ತೂರ್
    ಇಕ್ಬಾಲ್ ಅನ್ಸಾರಿ- ಗಂಗಾವತಿ
    ರಮೇಶ ಜಾರಕಿಹೊಳಿ- ಗೋಕಾಕ್
    ರಾಘವೇಂದ್ರ ಬಸವರಾಜ್ ಇಟ್ನಾಳ್- ಕೊಪ್ಪಳ
    ಎಂ.ಕೃಷ್ಣಪ್ಪ- ಬೆಂಗಳೂರು ದಕ್ಷಿಣ
    ಎಂ.ಕೃಷ್ಣಪ್ಪ- ವಿಜಯನಗರ
    ಎಂ.ಟಿ.ಬಿ.ನಾಗರಾಜ- ಹೊಸಕೋಟೆ
    ಮಕ್ಬುಲ್ ಬಗವಾನ್- ಬಿಜಾಪುರ ನಗರ
    ಪ್ರಭು ಚೌವ್ಹಾಣ್- ಔರಾದ್
    ಪ್ರಿಯಕೃಷ್ಣ- ಗೋವಿಂದರಾಜನ ನಗರ
    ಆರ್.ವಿ.ದೇವರಾಜ್- ಚಿಕ್ಕಪೇಟೆ
    ಎಸ್.ಮುನಿರಾಜು- ದಾಸರಹಳ್ಳಿ
    ಎಸ್.ಎಸ್.ಮಲ್ಲಿಕಾರ್ಜುನ- ದಾವಣಗೆರೆ ಉತ್ತರ
    ಎಸ್.ಜಯಣ್ಣ- ಕೊಳ್ಳೆಗಾಲ
    ಎಸ್.ರಘು- ಸಿ.ವಿ.ರಾಮನ್‌ನಗರ
    ವಿನಯ್ ಕುಲಕರ್ಣಿ- ಧಾರವಾಡ

ಒಂದೂ ಪ್ರಶ್ನೆ ಕೇಳದ ಶಾಸಕರು
= ಎ.ವೆಂಕಟೇಶ ನಾಯಕ- ದೇವದುರ್ಗ
= ಅಪ್ಪಾಜಿ ಎಂ.ಜೆ- ಭದ್ರಾವತಿ
= ಅಶೋಕ ಪಟ್ಟಣ- ರಾಮದುರ್ಗ
= ಬಿ.ಬಿ.ನಿಂಗಯ್ಯ- ಮೂಡಗೆರೆ
= ಬಿ.ಜಿ.ಗೋವಿಂದಪ್ಪ- ಹೋಸದುರ್ಗ
= ಜಮೀರ್ ಅಹ್ಮದ್ ಖಾನ್- ಚಾಮರಾಜಪೇಟೆ
= ಸಿ.ಪಿ.ಯೋಗೇಶ್ವರ- ಚನ್ನಪಟ್ಟಣ
= ಚನ್ನಬಸಪಪ್ಪ ಬಾಳಪ್ಪ ಶಿವಳ್ಳಿ- ಕುಂದಗೋಳ
= ಡಿ.ಜಿ.ಶಾಂತನಗೌಡ- ಹೊನ್ನಾಳಿ
= ಡಿ.ಸುಧಾಕರ- ಹಿರಿಯೂರು
= ಫೈರೋಜ್ ನೂರುದ್ದೀನ್ ಸೇಠ್- ಬೆಳಗಾವಿ ಉತ್ತರ
= ಜಿ.ಹಂಪಯ್ಯ ಸಾಹೂಕಾರ್ ಬಳ್ಳಟಗಿ- ಮಾನ್ವಿ
= ಎಚ್.ಡಿ.ಕುಮಾರಸ್ವಾಮಿ- ರಾಮನಗರ
= ಇನಾಂದಾರ್ ದಾನಪ್ಪನಗೌಡ ಬಸನಗೌಡ- ಕಿತ್ತೂರ್
= ರಮೇಶ ಜಾರಕಿಹೊಳಿ- ಗೋಕಾಕ್
= ಕೆ.ಶಡಕ್ಷರಿ- ತಿಪ್ಟೂರು
= ಕೆ.ಶಿವಮೂರ್ತಿ- ಮಾಯಕೊಂಡ
= ಪ್ರಿಯಕೃಷ್ಣ- ಗೋವಿಂದರಾಜ್ ನಗರ
= ಪ್ರಿಯಾಂಕ ಖರ್ಗೆ- ಚಿತ್ತೂರ್
= ಸಿ.ವರ್ತೂರ್ ಪ್ರಕಾಶ್- ಕೋಲಾರ
= ಆರ್.ವಿ.ದೇವರಾಜ್- ಚಿಕ್ಕಪೇಟೆ
= ಸಿ.ಜಯಣ್ಣ- ಕೊಳ್ಳೆಗಾಲ
= ಸಿ.ರಾಘು- ಸಿ.ವಿ.ರಾಮನ್ ನಗರ
= ಸಾ.ರಾ.ಮಹೇಶ್- ಕೃಷ್ಣರಾಜನಗರ
= ವಿನಿಶಾ ನೆರೊ- ನಾಮನಿರ್ದೇಶಿತ ಸದಸ್ಯೆ
= ಟಿ.ಎಚ್.ಸುರೇಶ್ ಬಾಬು- ಕಂಪ್ಲಿ
= ವಿ.ರಾಜಣ್ಣ- ಚನ್ನಗಿರಿ

ಅತಿ ಹೆಚ್ಚು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದವರು
=  ಪಿ.ರಾಜೀವ್- ಕುಡಚಿ    16
= ತನ್ವೀರ್ ಸೇಠ್- ನರಸಿಂಹರಾಜ     13
=  ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ- ಬಸವಕಲ್ಯಾಣ     12
=  ಚನ್ನಬಸವರಾಜ್ ಶಂಕರರಾವ್ ನಾಡಗೌಡ- ಮುದ್ದೇಬಿಹಾಳ     10
=  ಸಿ.ಟಿ.ರವಿ- ಚಿಕ್ಕಮಗಳೂರು     10
=  ಯು.ಬಿ.ಬಣಕಾರ್- ಹಿರೇಕೆರೂರ್    10
=  ಗುರುಪಾದಪ್ಪ ನಾಗಮಾರಪಲ್ಲಿ- ಬೀದರ್     9
=  ಎನ್.ಚೆಲುವರಾಯಸ್ವಾಮಿ- ನಾಗಮಂಗಲ     9
=  ಎಚ್.ಸಿ.ಬಾಲಕೃಷ್ಣ- ಮಾಗಡಿ     9
=  ಸಿ.ರಾಜಣ್ಣ- ಶಿಡ್ಲಘಟ್ಟ     9

ಅತಿ ಹೆಚ್ಚು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದವರು
- ಭೀಮಣ್ಣ ಖಂಡ್ರೆ- ಭಾಲ್ಕಿ     162
= ಎನ್.ಎ.ಹ್ಯಾರೀಸ್- ಶಾಂತಿ ನಗರ     160
= ಗುರುಪಾದಪ್ಪ ನಾಗಮಾರಪಲ್ಲಿ- ಬೀದರ್    156
= ಗೋಪಾಲಯ್ಯ ಕೆ- ಮಹಾಲಕ್ಷ್ಮಿ ಬಡಾವಣೆ    147
= ಸಿ.ಟಿ.ರವಿ- ಚಿಕ್ಕಮಗಳೂರು    128
= ಸುಧಾಕರ್ ಲಾಲ್- ಕೊರಟಗೆರೆ    115
= ಪಿ.ರಾಜೀವ್- ಕುಡಚಿ     110
= ಶಿವಾನಂದ ಪಾಟೀಲ್- ಬಸವನ ಬಾಗೇವಾಡಿ     104
= ವೈ.ವಿ.ಪಾಟೀಲ್- ಇಂಡಿ    103
= ವಿ.ಸುನೀಲ್‌ಕುಮಾರ್- ಕಾರ್ಕಳ    103
= ಎಚ್.ಡಿ.ರೇವಣ್ಣ- ಹೊಳೆನರಸೀಪುರ     103
ಇವೆರಡು ಪಟ್ಟಿಯಲ್ಲಿ ಹಳೆಯ ಮುಖಗಳಾದ ಸಿ.ಟಿ.ರವಿ, ಗುರುಪಾದಪ್ಪ ನಾಗಮಾರಪಲ್ಲಿ, ಎಚ್.ಡಿ.ರೇವಣ್ಣ ಹಾಗೂ ಚೆಲುವರಾಯ ಸ್ವಾಮಿ ಹೆಸರಿದೆ. ಇದರ ಜತೆಗೆ ಹೊಸ ಸದಸ್ಯರಾದ ಪಿ.ರಾಜೀವ್, ಶಿವಾನಂದ ಪಾಟೀಲ್ ಹಾಗೂ ಸುನೀಲ್ ಕುಮಾರ್ ಹೆಸರೂ ಇದೆ.

ಸದಾ ಸರ್ಕಾರಕ್ಕೆ ಜಯಚಂದ್ರ
ಮಹತ್ವ ವಿಚಾರಗಳ ಮೇಲಿನ ಚರ್ಚೆಯಲ್ಲಿ ಘಟಾನುಘಟಿ ಶಾಸಕರೇ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಬಹುತೇಕ ಮುಖ್ಯಮಂತ್ರಿ ಆಕಾಂಕ್ಷಿತ ಸದಸ್ಯರುಗಳೇ ಈ ಚರ್ಚೆಯನ್ನು ಆವರಿಸಿಕೊಂಡಿದ್ದರೇ, ಅರಸಿಕೇರೆಯ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಅವರು ಮಾತ್ರ ಇವರ ಮಧ್ಯೆ ಸೇರಿಕೊಂಡು ಕ್ಷೇತ್ರದ ಜನರ ಪರ ವಾದ ಮಂಡಿಸಿದ್ದಾರೆ.
ರಾಜ್ಯ ಸರ್ಕಾರದ ಪರ ಮುಖ್ಯಮಂತ್ರಿಗಿಂತ ಹೆಚ್ಚು ಸರ್ಕಾರದ ಪರ ವಾದ ಮಂಡಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಎದ್ದುಕಾಣುತ್ತಾರೆ.
ಬಹುತೇಕ ವಿಚಾರಗಳಲ್ಲಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದಾರೆ. ಸರ್ಕಾರ ಸಂಕಷ್ಟಕ್ಕೆ ಸಿಲುಕಿದಾಗ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇದಲ್ಲದೇ ಮಾಜಿ ಮುಖ್ಯಮಂತ್ರಿಗಳು ಈ ಚರ್ಚೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿರುವುದು ಚರ್ಚೆಯ ಗಾಂಭೀರ್ಯವನ್ನು ಹೆಚ್ಚಿಸಿದೆ.
ಆದರೆ ಹಿರಿಯ ಶಾಸಕರ ಪ್ರಾಬಲ್ಯ ಹೆಚ್ಚಿರುವುದರಿಂದ ಹೊಸ ಶಾಸಕರು ಚರ್ಚೆಯಲ್ಲಿ ಬಾಯಿ ತೆರೆಯಲು ಹಿಂಜರಿಯುತ್ತಾರೆ. ಮಾಜಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ರಮೇಶ್‌ಕುಮಾರ್, ಸದನವು ದಾರಿ ತಪ್ಪುತ್ತಿದ್ದಾಗ ಅಥವಾ ಕ್ಲಿಷ್ಟಕರ ಸಂದರ್ಭದಲ್ಲಿ ಸಲಹೆ ನೀಡಿ ಕಲಾಪವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ನೆರವಾಗುತ್ತಿದ್ದಾರೆ ಎಂದು ರಿಜೋರ್ಸ್ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.