

ಅಧಿಕಾರ ರಾಜಕೀಯದ ಸರ್ವಬಣ್ಣಗಳನ್ನು ಮೈಗೂಡಿಸಿಕೊಂಡಿದ್ದ ಹಂಸರಾಜ ಭಾರದ್ವಾಜ್ ಅವರು ಎರಡು ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯಪಾಲರ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಹಾಗೆ ಹೋಗುವ ಮುನ್ನ ರಾಜಕಾರಣದ ನಾನಾ ಮಜಲುಗಳು, ತಂತ್ರ, ಕುತಂತ್ರಗಳು, ಜನಸ್ನೇಹಿ ಮಧುರ ಕ್ಷಣಗಳು, ಅನಪೇಕ್ಷಣೀಯ ವಿವಾದಗಳು ಹಾಗೂ ಸ್ವಾರ್ಥ ಸಾಧನೆ ಉದ್ದೇಶಿತ ಘಟನಾವಳಿಗಳನ್ನು ರಾಜಭವನದ ಪಡಸಾಲೆಯಲ್ಲಿ ದಾಖಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
ರಾಜಭವನ ದಂತಗೋಪುರ ಎಂಬ ನಂಬಿಕೆಯನ್ನು ಸುಳ್ಳಾಗಿಸಿದ, ರಾಜಭವನ ಜನಸಾಮಾನ್ಯರಿಗೆ ನಿಲುಕುವಂತೆ ಮಾಡಿದ ಕೀರ್ತಿ ಹಂಸರಾಜ ಭಾರದ್ವಾಜ್ ಅವರದು. ಅದೇ ರೀತಿ ಅಪಾತ್ರರು, ಅಯೋಗ್ಯರಿಗೆ ರಾಜಭವನದ ಬಾಗಿಲನ್ನು ತೆರೆದ ಅಪಕೀರ್ತಿಗೂ ಅವರು ಭಾಜನರಾಗಿದ್ದಾರೆ. ಸರೋವರದಲ್ಲಿ ಕುತ್ತಿಗೆವರೆಗೂ ದೇಹ ಮುಳುಗಿಸಿದ ಹಂಸದ ಶಿರೋಭಾಗ ಹಾವಿನ ತಲೆಯಂತೆಯೂ ಕಾಣಿಸುತ್ತದೆ. ರಾಜ್ಯಪಾಲರ ಹುದ್ದೆಗೆ ಹಂಸ ಮತ್ತು ಹಾವು ಎರಡೂ ಗುಣಗಳನ್ನು ಲೇಪಿಸಿದ ಕಾರಣಕ್ಕೆ ಅವರು ವಿವಾದಗಳ ಮೂಟೆಯನ್ನೇ ಹೊತ್ತೊಯ್ದಿದಿದ್ದಾರೆ.
ನಿಜ. ಹಂಸರಾಜ ಅವರದು ವರ್ಣರಂಜಿತ ವ್ಯಕ್ತಿತ್ವ. ಉತ್ತಮ ವಾಗ್ಮಿ. ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ನಿಷ್ಣಾತರು. ಅರ್ಥಾತ್ ಚಾಣಕ್ಯ. ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸುವಾಗ ಆಡಳಿತ ಹಾಗೂ ಪ್ರತಿಪಕ್ಷ ಎಂಬ ಭೇದ ಎಣಿಸುತ್ತಿರಲಿಲ್ಲ. ಅದು ಆಡಳಿತ ಪಕ್ಷವಿರಲಿ, ಪ್ರತಿಪಕ್ಷವಿರಲಿ ರಾಜಭವನಕ್ಕೆ ಮಣಿಯಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು. ಹೀಗಾಗಿ ವಿಧಾನಸೌಧದ ರಾಜಕೀಯ ರೀತಿ-ರಿವಾಜುಗಳನ್ನು ರಾಜಭವನದ ಚಟುವಟಿಕೆಗಳು ಹಿಂದಿಕ್ಕಿದವು, ಮಂಕಾಗಿಸಿದವು. ಆಡಳಿತಾರೂಢರು ರಾಜಭವನದ ಮುಂದೆ ಶಿರ ಬಾಗಲೇಬೇಕು ಎಂಬ ಸ್ವಯಂ ವಿಧಿತ ತತ್ವವನ್ನು ಪ್ರತಿಪಾದಿಸುವಾಗ ತಮ್ಮನ್ನು ರಾಜ್ಯಪಾಲರ ಹುದ್ದೆಗೆ ತಂದ ಕಾಂಗ್ರೆಸ್ ಅಥವಾ ವಿರೋಧಿ ಪಕ್ಷಗಳ ವ್ಯತ್ಯಾಸ ಹುಡುಕುತ್ತಿರಲಿಲ್ಲ. ಹೀಗಾಗಿ ಅವರು ಬಿಜೆಪಿ ಸರ್ಕಾರಕ್ಕೆ ಸಿಂಹಸ್ವಪ್ನರಾದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನೂ ಕಾಡಿದರು. ಸರ್ಕಾರದ ಪ್ರತಿನಿಧಿಗಳು ನೆಮ್ಮದಿ ಅರಸಿ ರಾಜಭವನದ ಪಡಸಾಲೆ ಎಡತಾಕುವಂತೆ ಮಾಡಿದರು. ಅವರಿಗೆ ರಾಜಕೀಯ ಪಾಠ ಮಾಡುತ್ತಲೇ ರಾಜಭವನದಿಂದ ವಿಧಾನಸೌಧದಲ್ಲಿ ರಾಜಕೀಯ ಮಾಡಿದರು. ಹೀಗಾಗಿ ಅವರಿಗೆ ವಿವಾದಗಳ ರಾಜ್ಯಪಾಲರು ಎಂಬ ಬಿರುದು ಬೆನ್ನಿಗಂಟಿಕೊಂಡಿತು.
ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್ ಸಾರಥ್ಯ ಹಿಡಿದು, ಮುಂದುವರಿಸಿದ ನೆಹರು ಕುಟುಂಬಕ್ಕೆ ಅದರಲ್ಲೂ ಇಂದಿರಾ ಗಾಂಧಿ ಅವರಿಗೆ ಪರಮಾಪ್ತರಾಗಿದ್ದ ಹಂಸರಾಜ ಮೊದಲಿನಿಂದಲೂ ವಿವಾದ ಪ್ರಿಯರು. ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ 1982ರಲ್ಲಿ ರಾಜ್ಯಸಭೆ ಪ್ರವೇಶಿಸುವ ಮೂಲಕ ಅಧಿಕಾರ ರಾಜಕೀಯ ಹಿಡಿದ ಅವರು ಕರ್ನಾಟಕದ ರಾಜ್ಯಪಾಲರಾಗುವವರೆಗೂ ಹಿಂಬಾಗಿಲ ರಾಜಕೀಯದಲ್ಲಿ ಮಿಂದೆದ್ದವರು. ಅವರಿಗೆ ಸತತ ರಾಜ್ಯಸಭೆ ಸದಸ್ಯತ್ವ ಸಿಗಲು ಕಾಂಗ್ರೆಸ್‌ಗಿಂತ ಮಿಗಿಲಾಗಿ ಇಂದಿರಾ ಗಾಂಧಿ ಕುಟುಂಬದ ಬಗ್ಗೆ ಅವರಿಗಿದ್ದ ನಿಷ್ಠೆಯೇ ಕಾರಣ. ಆ ನಿಷ್ಠೆ ಈಗಲೂ ಮುಂದುವರೆದಿದೆ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಜತೆ ನಿಷ್ಠೆ ಕಾಯ್ದುಕೊಂಡಿರುವಂತೆ ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಜತೆಯೂ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿಯೇ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸೇರಿದಂತೆ ಹಲವು ಹುದ್ದೆಗಳು ಅರಸಿಕೊಂಡು ಬಂದಿದ್ದವು.
ಹಂಸರಾಜ ಭಾರದ್ವಾಜ್ ಅವರು ಸ್ವಾಮಿ ನಿಷ್ಠೆ ಹಾಗೂ ಅಧಿಕಾರದ ನಡುವೆ ಅವಿನಾಭಾವ ಸಂಬಂಧ ಕಡಿದು ಕೊಂಡಿದ್ದರು. ಇದು ಕಾಂಗ್ರೆಸ್ ಪಾಳೆಯದಲ್ಲಿ ರೂಢಿಗತ ಪ್ರಾಶಸ್ತ್ಯ ಪಡೆದುಕೊಂಡಿದ್ದರೂ ಭಾರದ್ವಾಜ್ ಅವರು ಸ್ವಲ್ಪ ಹೆಚ್ಚಿಗೇ ನಿಷ್ಠೆ ಕಾಯ್ದುಕೊಂಡಿದ್ದರು. ಈ ನಿಷ್ಠೆಯನ್ನು ಎರ್ರಾಬಿರ್ರಿ ಪ್ರದರ್ಶಿಸಲು ಹೋಗಿ ವಿವಾದಗಳಲ್ಲಿ ಸಿಲುಕಿಕೊಂಡರು. ಸಿಲುಕಿಕೊಂಡರು ಎನ್ನುವುದಕ್ಕಿಂತ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡರು ಎಂಬುದೇ ಸರಿ. ರಾಜೀವ್ ಗಾಂಧಿ ಸಂಪುಟದಲ್ಲಿ ಕಾನೂನು ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಭಾರದ್ವಾಜ್, ಮನಮೋಹನ್‌ಸಿಂಗ್ ಸರ್ಕಾರದಲ್ಲಿ ಸಂಪುಟ ದರ್ಜೆಗೆ ಬಡ್ತಿ ಪಡೆದರು. ಜತೆಗೆ ಯುಪಿಎ-1 ಸರ್ಕಾರದಲ್ಲಿ 'ಪೀಡೋತ್ಪಾದಕ'ನಾಗಿ ಅವಿರ್ಭವಿಸಿದರು. ಮನಮೋಹನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂದಕ್ಕೆ ಪಡೆದಾಗ ವಿಶ್ವಾಸಮತ ಸಂಪಾದನೆಗಾಗಿ ಸಂಸದರಿಗೆ 'ಮತಕ್ಕಾಗಿ ಹಣ' ಕೊಟ್ಟ ಆಪಾದನೆಗೆ ಗುರಿಯಾದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿದ್ದ ಮುಲಾಯಂ ಸಿಂಗ್ ಯಾದವ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಆ ಪ್ರಕರಣವನ್ನು ಕೈ ಬಿಡುವಂತೆ ಸಾಲಿಸಿಟರ್ ಜನರಲ್ ಮೂಲಕ ಇವರೇ ಅಫಿಡವಿಟ್ ಸಲ್ಲಿಸಿದ್ದರು. ಅದೊಂದು ದೊಡ್ಡ ವಿವಾದವೇ ಆಗಿತ್ತು. ವಿವಾದವನ್ನು ಸಂಭಾಳಿಸಿಕೊಳ್ಳುವಷ್ಟರಲ್ಲಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಾಕು ಬೇಕಾಗಿ ಹೋಗಿತ್ತು.
ಅಷ್ಟೇ ಅಲ್ಲ, ಬೋಫೋರ್ಸ್ ಫಿರಂಗಿ ಖರೀದಿ ಹಗರಣದ ಪ್ರಮುಖ ಆರೋಪಿ ಒಟಾವಿಯೋ ಕ್ವಟ್ರೋಚಿಯ ಲಂಡನ್ ಬ್ಯಾಂಕ್ ಖಾತೆ ಮರು ಚಾಲನೆಗೆ ಶಿಫಾರಸು ಮಾಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ಯಾವುದೇ ಕಡತವನ್ನು ಪರಿಶೀಲನೆ ಮಾಡಬಹುದು ಎಂಬ ಹೇಳಿಕೆ ನೀಡಿ ಪ್ರತಿಪಕ್ಷಗಳಿಂದ ಹಿಗ್ಗಾಮುಗ್ಗಾ ತರಾಟೆಗೆ ಒಳಗಾಗಿದ್ದರು. ಇಂತಹ ಹಂಸರಾಜ ಅವರನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡಿ ಕಳುಹಿಸಿ ಕೊಡಲಾಗಿತ್ತು. ನಿಜ ಹೇಳಬೇಕೆಂದರೆ ಯಡಿಯೂರಪ್ಪ ಸರ್ಕಾರವನ್ನು ಪ್ರತಿಪಕ್ಷವಾಗಿ ಕಾಡಿದ್ದು ಕಾಂಗ್ರೆಸ್ ಅಲ್ಲ, ಬದಲಿಗೆ ಇದೇ ಹಂಸರಾಜ ಭಾರದ್ವಾಜ್ ಅವರು. ಯಡಿಯೂರಪ್ಪ ಸರ್ಕಾರ ಕೂಡ ಅದಕ್ಕೆ ಸಾಕಷ್ಟು ಅವಕಾಶಗಳನ್ನು ಒದಗಿಸಿಕೊಟ್ಟಿತ್ತು. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ್ ರೆಡ್ಡಿ ಬಳಗ, ಕೃಷ್ಣಯ್ಯ ಶೆಟ್ಟಿ ಮತ್ತಿತರರು ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗುವಲ್ಲಿ ಇವರ ಪಾತ್ರ ಹಿರಿದು. ಮಂತ್ರಿ-ಮಹೋದಯರಿಗೆ ಎಷ್ಟರ ಮಟ್ಟಿಗೆ ಭಯ ಹುಟ್ಟಿಸಿದ್ದರೆಂದರೆ ಆರೋಪಗಳು ಇದ್ದ, ಇಲ್ಲದ ಅನೇಕ ಮಂತ್ರಿಗಳು ಆಗಾಗ್ಗೆ ರಾಜಭವನಕ್ಕೆ ಹೋಗಿ ಯೋಗಕ್ಷೇವು ವಿಚಾರಿಸಿಕೊಂಡು ಬರುತ್ತಿದ್ದರು. ಭಾರದ್ವಾಜ್ ಅವರು ಇದನ್ನು ಇಷ್ಟ ಪಡುತ್ತಿದ್ದರು. ಸದಾನಂದಗೌಡರು ಯಡಿಯೂರಪ್ಪ ಅವರಿಗಿಂತ ಉತ್ತಮ ಮುಖ್ಯಮಂತ್ರಿ ಎಂದು ಹೇಳುವಷ್ಟರ ಮಟ್ಟಿಗೆ. ಯಡಿಯೂರಪ್ಪ ಅವರು ಗವರ್ನರ್ ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿರಲಿಲ್ಲ. ಸದಾನಂದಗೌಡರು ಭೇಟಿ ಮಾಡುತ್ತಿದ್ದರು ಎಂಬುದಷ್ಟೇ ಇದಕ್ಕೆ ಕಾರಣವಲ್ಲ, ಗವರ್ನರ್ ಮಾತು ನಿಜಾರ್ಥದಲ್ಲಿ ಸರಿಯಾಗಿಯೇ ಇತ್ತು. ಆದರೆ, ಯಡಿಯೂರಪ್ಪ ವಿರುದ್ಧ ಬಂಡಾಯ ಚಟುವಟಿಕೆಗಳಿಗೆ ಹಂಸರಾಜ ಭಾರದ್ವಾಜ್ ಅವರ ಕೊಡುಗೆಯೂ ಸಾಕಷ್ಟಿತ್ತು. ಸರ್ಕಾರದ ವೈಫಲ್ಯಗಳು ಹಾಗೂ ಹಗರಣಗಳನ್ನು ಇಲ್ಲಿ ಮತ್ತು ದಿಲ್ಲಿ ಮಟ್ಟದಲ್ಲಿ ಪ್ರಬಲವಾಗಿ ಪ್ರತಿಬಿಂಬಿಸುವಲ್ಲಿ ಭಾರದ್ವಾಜ್ ಯಶಸ್ವಿಯಾಗಿದ್ದರು. ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಗಣಿ ಹಗರಣ ಕುರಿತು ರೂಪಿಸಿದ ವರದಿ ಸಕಾರಾತ್ಮಕವಾಗಿ ಕೆಲಸ ಮಾಡುವಲ್ಲಿ ಗವರ್ನರ್ ಸಹಕಾರಿ ಆಗಿದ್ದರು.
ನಿಜ ಹೇಳಬೇಕೆಂದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಪ್ರತಿಷ್ಠಾಪನೆ ಆಗುವಲ್ಲಿ ಪಕ್ಷದ ನಾಯಕರಿಗಿಂತ ಹಂಸರಾಜ ಭಾರದ್ವಾಜ್ ಅವರ ಕೊಡುಗೆಯೇ ಹೆಚ್ಚು. ಹಿಂದೆ ಬಿಜೆಪಿ ಸರ್ಕಾರದ ಹುಳುಕುಗಳನ್ನು ಮುಂದಿಟ್ಟುಕೊಂಡು ಸಮರ್ಥವಾಗಿ ಹೋರಾಟ ನಡೆಸಿದ್ದು ಅವರೇ. ಅವರು ಬರೀ ಗವರ್ನರ್ ಅಷ್ಟೇ ಆಗಿರಲಿಲ್ಲ. ಪ್ರತಿಪಕ್ಷ ನಾಯಕರ ಪಾತ್ರವನ್ನೂ ನಿರ್ವಹಿಸಿದ್ದರು.
ಮುಂದೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಜನಪ್ರಿಯ ಯೋಜನೆಗಳನ್ನು ತರಾತುರಿಯಲ್ಲಿ ಪ್ರಕಟಿಸಿದಾಗಲೂ ಆ ಬಗ್ಗೆ ಚಕಾರ ಎತ್ತಲು ಹಂಸರಾಜ ಹಿಂದೆ ಮುಂದೆ ನೋಡಿರಲಿಲ್ಲ. ಸಿದ್ದರಾಮಯ್ಯ ಅವರೇ ಮುಜುಗರ ಆಗುವಂತೆ ಅವರ ಸಂಪುಟ ಸದಸ್ಯರ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಸಿದ್ದರಾಮಯ್ಯ ಅವರು ಎಷ್ಟರ ಮಟ್ಟಿಗೆ ಪೇಚಿಗೆ ಸಿಕ್ಕಿದ್ದರೆಂದರೆ ಗವರ್ನರ್ ಬಾಯಿ ಮುಚ್ಚಿಸಲು ಹೈಕಮಾಂಡ್ ಮೊರೆ ಹೋಗಿದ್ದರು. ಮಾನವೀಯ ದೌರ್ಜನ್ಯಗಳಿಗೆ ಅತೀತರಲ್ಲದ ಹಂಸರಾಜ್ ಒಂದಷ್ಟು ಹೆಜ್ಜೆಗಳನ್ನು ಇಟ್ಟರು. ಸರ್ಕಾರಗಳ ಮೇಲೆ ಹಿಡಿತ ಸಾಧಿಸುತ್ತಿದ್ದೇನೆ ಎಂಬ ಭ್ರಮೆ ಅವರಿಂದ ಒಂದಷ್ಟು ಪ್ರಮಾದಗಳನ್ನು ಮಾಡಿಸಿತು. ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿದ್ದ ರಾಜ್ಯಪಾಲರನ್ನು ನಾನಾ ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವರು ತಮ್ಮ ಕಾರ್ಯಸಾಧನೆಗಾಗಿ ನೇರ ಭೇಟಿ ಮಾಡಲು ಆರಂಭಿಸಿದರು. ಮುಖ್ಯಮಂತ್ರಿ, ಮಂತ್ರಿಗಳ ಆಕ್ಷೇಪಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ನೇಮಕ, ವರ್ಗಾವಣೆಗೆ ಕೈ ಹಾಕಿದರು. ಇದರಿಂದಾಗಿ ಕಳಂಕಿತರು, ಅನರ್ಹರು ವಿಶ್ವವಿದ್ಯಾಲಯಗಳ ಆಯಕಟ್ಟಿನ ಜಾಗಗಳನ್ನು ಅಲಂಕರಿಸಿದರು. ಇಲ್ಲೆಲ್ಲ ಭ್ರಷ್ಟಾಚಾರದ ಅನುಮಾನಗಳು, ಅದರ ಜತೆ ಜತೆಗೆ ವಿವಾದಗಳು ಸೃಷ್ಟಿಯಾದವು. ಅಧಿಕಾರದಿಂದ ನಿರ್ಗಮಿಸುವ ಕೊನೆಯ ಕ್ಷಣಗಳಲ್ಲಿ ಅವರು ಮಾಡಿದ ಆದೇಶಗಳು ರಾಜ್ಯಪಾಲರ ಹುದ್ದೆಯ ಗೌರವ-ಘನತೆಗಳಿಗೇ ಸೆಡ್ಡು ಹೊಡೆದಿವೆ.
ಹಂಸರಾಜ್ ಅವರು ಒಂದೆಡೆ ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿದಂತೆಯೇ ಮತ್ತೊಂದೆಡೆ ತಮ್ಮ ನಡೆ-ನುಡಿಗಳು ಅನ್ಯರ ಚರ್ಚೆಗೆ ವಸ್ತುವಾಗಲು ಅವಕಾಶ ಮಾಡಿಕೊಟ್ಟರು. ರಾಜಭವನ ಜನಸಾಮಾನ್ಯರ ಭವನವನ್ನಾಗಿ ಪರಿವರ್ತಿಸಿದಂತೆಯೇ ರಾಜ್ಯಪಾಲರು ಅದೇ ಜನರ ಬಾಯಿಗೆ ಬೀಳುವಂತೆ ವರ್ತಿಸಿದರು. ಒಬ್ಬ ವ್ಯಕ್ತಿಯ ಉತ್ತಮ ಕೆಲಸಗಳನ್ನು ಆತನ ಲೋಪದೋಷಗಳೇ ನುಂಗಿ ಮೆರೆದವು. ಇದಕ್ಕೆ ಹಂಸರಾಜ್ ಕೂಡ ಹೊರತಲ್ಲ ಎಂಬುದನ್ನು ಅವರ ನಿರ್ಗಮನದ ಬೆನ್ನಲ್ಲಿ ಪ್ರತಿಧ್ವನಿಸುತ್ತಿರುವ ಚರ್ಚೆಗಳೇ ಪ್ರತಿಬಿಂಬಿಸುತ್ತಿವೆ.
ಲಗೋರಿ: ಕೆಸರು ಮೆತ್ತಿಕೊಂಡ ಹೂವು ಪರಿಮಳ ಬೀರಲಾಗದು.
- ಪಿ. ತ್ಯಾಗರಾಜ್
thyagarjun@gmail.com