ಅಂಕಣಗಳು

ಮಾತಿಗೆ ಅಧಿಕಾರವೇ ಬೇಕೆಂದೇನಿಲ್ಲ: ನಾಣ್‌ನುಡಿ

ಮಾತಿಗೆ ಅಧಿಕಾರವೇ ಬೇಕೆಂದೇನಿಲ್ಲ: ನಾಣ್‌ನುಡಿ
Published On :

ತಲೆ ನೋವಾದರೆ ತಲೆಯನ್ನೇ ಕಡಿದು ಹಾಕಲು ಸಾಧ್ಯವಿಲ್ಲ, ಮೇಲ್ಮನೆ ಅತಿ ಅಗತ್ಯ
ವಿಧಾನ ಪರಿಷತ್ ಅಥವಾ ವಿಧಾನಸಭೆಯ ವರದಿಗಳನ್ನು ಓದುವಾಗ ಎಂ.ಸಿ.ನಾಣಯ್ಯ ಹೆಸರು ಕಾಣಲಿಲ್ಲ ಎಂದರೆ ಒಂದು ರೀತಿಯ ಬೇಸರವಾಗುವ ಮಟ್ಟಿಗೆ ಕಲಾಪವನ್ನು ಅವರು ಆವರಿಸಿಕೊಂಡಿದ್ದರು. ಯಾವುದೇ ಮುಲಾಜಿಲ್ಲದೇ ತಮ್ಮ ವರಸೆ ಪ್ರದರ್ಶಿಸುತ್ತಿದ್ದ ನಾಣಯ್ಯ, 'ಕನ್ನಡಪ್ರಭ'ದ ರಾಜೀವ ಹೆಗಡೆ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

-ಇನ್ನು ಮುಂದೆ ವಿಧಾನ ಪರಿಷತ್ ಅಥವಾ ಸಭೆಯಲ್ಲಿ ನಾಣಯ್ಯ ಅವರ ಮಾತು ಕೇಳಲು ಸಾಧ್ಯವಿಲ್ಲ. ಇಂದಿನ ರಾಜಕಾರಣಕ್ಕೆ ನಿಮ್ಮ ಅಗತ್ಯವಿಲ್ಲವೇ?
ಕಳೆದ 30 ವರ್ಷದಿಂದ ರಾಜಕೀಯದ ಸಾಕಷ್ಟು ಮಜಲುಗಳನ್ನು ನೋಡಿಕೊಂಡು ಬಂದಿದ್ದೇನೆ. ಅಧಿಕಾರಕ್ಕೆ ಅಂಟುಕೊಂಡವನು ನಾನಲ್ಲ. ಹೊಸಬರಿಗೆ ಅವಕಾಶ ಕೊಡಲೇಬೇಕಾಗುತ್ತದೆ. ಹಾಗಂದ ಮಾತ್ರಕ್ಕೆ ನಾಣಯ್ಯ ಬದಲಾಗುವುದಿಲ್ಲ. ಶಾಸಕನಾಗಿ ವಿಧಾನಸಭೆಗೆ ಕಾಲಿಡುವಾಗ ಹೇಗಿದ್ದೆನೋ ಅದೇ ಜೀವನಶೈಲಿ, ವರ್ತನೆಯನ್ನು ಇಂದೂ ಇಟ್ಟುಕೊಂಡಿದ್ದೇನೆ. ಸಮಾಜಪರವಾದ ನನ್ನ ಧ್ವನಿ ಎಂದಿಗೂ ಕುಗ್ಗುವುದಿಲ್ಲ. ಅಷ್ಟಕ್ಕೂ ಈ ಸದನ ನಡೆಯುವುದು ವರ್ಷಕ್ಕೆ 40-50 ದಿನಗಳು ಮಾತ್ರ. ನನ್ನ ಮಾತಿಗೆ ಅಧಿಕಾರ ಬೇಕಿಲ್ಲ.
-ವ್ಯವಸ್ಥೆಯ ಮೇಲಿನ ಕೋಪಕ್ಕೆ ಇಂತಹ ಮಾತು ಬರುತ್ತಿದೆಯೇ? ವಿಧಾನ ಪರಿಷತ್‌ಗೆ ನಿಮ್ಮ ಜಾಗಕ್ಕೆ ಉದ್ಯಮಿಗಳು, ರೀಯಲ್ ಎಸ್ಟೇಟ್ ದಲ್ಲಾಳಿಗಳು ಬರುತ್ತಿದ್ದಾರೆಯಲ್ಲವೇ?
ಹಾಗೇನಿಲ್ಲ. ಆದರೆ ಕಳೆದೊಂದು ದಶಕದಿಂದ ರಾಜಕೀಯ ವ್ಯವಸ್ಥೆ ಕುಲಗೆಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಧಃಪತನದತ್ತ ಸಾಗಿದೆ. ಬಿಜೆಪಿ ಸರ್ಕಾರದ ಸಮಯದಲ್ಲಿ ನಡೆದ ಉಪಚುನಾವಣೆಗಳ ನಂತರ ಜಾತಿ, ಹಣ, ತೋಳ್ಬಲದಿಂದ ಮಾತ್ರ ಚುನಾವಣೆ ನಡೆಸಲು ಸಾಧ್ಯ ಎನ್ನುವ ಮಟ್ಟಿಗೆ ವ್ಯವಸ್ಥೆ ಹಾಳಾಗಿದೆ. ಇದೇ ಕಾರಣದಿಂದ ಶಾಸಕಾಂಗದ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
-ಇಂತಹ ವಿಚಾರಗಳಿಂದಲೇ ವಿಧಾನಪರಿಷತ್‌ನ ಅಗತ್ಯದ ಬಗ್ಗೆ ಪ್ರಶ್ನೆ ಏಳುತ್ತಿದೆ?
ತಲೆ ನೋವಾದರೆ ತಲೆಯನ್ನೇ ಕಡಿದು ಹಾಕಲು ಸಾಧ್ಯವಿಲ್ಲ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಎರಡು ಶತಮಾನದಿಂದ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಮೇಲ್ಮನೆ ಅಗತ್ಯವಿದೆ ಎನ್ನುವುದರ ಅರಿವು ಅವರಿಗಿದೆ. ಸದನಕ್ಕೆ ನಾಮನಿರ್ದೇಶನ ಮಾಡುವಾಗ ಅಥವಾ ಇನ್ನಿತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅಪರಾಧ ಹಿನ್ನೆಲೆ ಉಳ್ಳವರು, ರೀಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಕಳ್ಳ ಪೋಕರನ್ನು ಪೋಷಿಸಿದರೆ ಸದನದ ಗುಣಮಟ್ಟ ಹೇಗೆ ಉಳಿಯಲು ಸಾಧ್ಯ. ರಾಜಕೀಯ ಪಕ್ಷಗಳು ಪ್ರಾಥಮಿಕ ವ್ಯವಸ್ಥೆಯಲ್ಲಿಯೇ ಎಡವಿ ಸದನದ ಅಸ್ತಿತ್ವ ಪ್ರಶ್ನಿಸುವುದು ಸೂಕ್ತವಲ್ಲ. ಇಷ್ಟಕ್ಕೂ ಗುಣಮಟ್ಟ ಕುಸಿತ ವಿಧಾನ ಪರಿಷತ್‌ಗೆ ಸೀಮಿತವಲ್ಲ. ವಿಧಾನಸಭೆಗೆ ಬರುತ್ತಿರುವ ಶಾಸಕರಲ್ಲಿಯೂ ಇಂತಹದೇ ಗುಣವಿದೆ. ಇನ್ನು ಕೆಲವರು ಸಾರ್ವಜನಿಕರ ಹಣ ಪೋಲು ಎನ್ನುತ್ತಾರೆ. ಹಾಗಿದ್ದರೆ ಮುಂದೊಂದು ದಿನ ವಿಧಾನಸಭೆಯ ಬಗೆಗೂ ಇಂತಹುದೇ ಮಾತು ಬಂದರೆ ಅದನ್ನು ಒಪ್ಪಿಕೊಂಡು ಸರ್ವಾಧಿಕಾರ ಅಪ್ಪಿಕೊಳ್ಳಲು ನಾವು ತಯಾರಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಅಷ್ಟಕ್ಕೂ ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆರಂಭವಾಗಿದ್ದೇ ವಿಧಾನ ಪರಿಷತ್ ಮೂಲಕ. ವಿಧಾನಸಭೆ ಎಡವಿದಾಗಲೆಲ್ಲ ವಿಧಾನಪರಿಷತ್ ಬುದ್ದಿ ಹೇಳಿದೆ. ಇವೆರಡು ಸದನಗಳು ಕಪ್ ಮತ್ತು ಸಾಸರ್ ಇದ್ದಂತೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಂದಕ್ಕೊಂದು ಅನಿವಾರ್ಯ ಹಾಗೂ ಅವಶ್ಯಕ.
- ನಿಮ್ಮನ್ನು ಪಕ್ಷ ನಿರ್ಲಕ್ಷಿಸಿದೆ. ಇದೇ ರೀತಿ ಜೆಡಿಎಸ್ ಕೇವಲ ಅಪ್ಪ-ಮಕ್ಕಳಿಗೆ ಮಾತ್ರ ನಿಷ್ಠವಾಗುತ್ತಿದೆ. ಕಾರ್ಯಕರ್ತರು ಹಾಗೂ ಜನರಿಂದ ಪಕ್ಷ ದೂರವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ, ಇದನ್ನು ಒಪ್ಪುತ್ತೀರಾ?
ಪಕ್ಷ ಎಲ್ಲವನ್ನೂ ಕೊಟ್ಟಿದೆ. ಆದರೆ ಈಗ ಅಪ್ಪ-ಮಕ್ಕಳ ಪಕ್ಷದ ಆರೋಪದ ಜತೆ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿರುವ ಪಕ್ಷವು ಈ ಆರೋಪದಿಂದ ಹೊರಬಂದು ಜನತಾ ಪರಿವಾರವನ್ನು ಒಂದು ಗೂಡಿಸುವ ಕೆಲಸ ಮಾಡಬೇಕು. ಜನತಾ ಪರಿವಾರದ ಪ್ರತಿಯೊಂದು ಸರ್ಕಾರವನ್ನು ಜನರು ಹೊಗಳುತ್ತಾರೆ, ಇಷ್ಟಪಡುತ್ತಾರೆ ಎನ್ನುವುದನ್ನು ನಮ್ಮ ನಾಯಕರು ತಿಳಿಯಬೇಕು. ಇದ್ಯಾವುದೇ ವಿಚಾರವನ್ನು ಒಣ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಒಟ್ಟಿಗೆ ಹೋಗಬೇಕು. ಕುಮಾರಸ್ವಾಮಿ ಮೇಲೆ ಜನರಿಟ್ಟಿದ್ದ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗಲು ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಆಲೋಚಿಸಬೇಕು. ಕಾರ್ಯಕರ್ತರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಅರಿಯಬೇಕು. ವಿಧಾನಸಭೆ ಚುನಾವಣೆಯಲ್ಲಿನ ಭಾಗಶಃ ಯಶಸ್ಸನ್ನು ಉಳಿಸಿಕೊಳ್ಳಲು ಪಕ್ಷ ವಿಫಲವಾಗಿದೆ. ಇಂದು ಬಿಜೆಪಿ, ಕಾಂಗ್ರೆಸ್‌ನಲ್ಲಿರುವ ಬಹುತೇಕ ನಾಯಕರು ಜನತಾ ಪರಿವಾರದವರಾಗಿದ್ದಾರೆ. ಆದರೆ ಜೆಡಿಎಸ್‌ನಲ್ಲಿಂದು ನಾಯಕತ್ವ ಸಮಸ್ಯೆ ಎದುರಾಗಿದೆ.
-  ಕಿರಿಯ ಸದಸ್ಯರಿಗೆ ನಿಮ್ಮ ಕಿವಿಮಾತೇನು?
ಸದನದಲ್ಲಿ ದಿನವಿಡಿ ಕೂರುವ ಅಭ್ಯಾಸ ಮಾಡಿಕೊಳ್ಳಬೇಕು. ಇಂದಿನ ಬಹುತೇಕ ಶಾಸಕರು ಮಂತ್ರಿಗಳೊಂದಿಗೆ ಚೀಟಿ ವ್ಯವಹಾರದಲ್ಲಿಯೇ ನಿರತರಾಗಿರುತ್ತಾರೆ. ಸದನದಲ್ಲಿ ಭಾಗವಹಿಸಿ ಹಿರಿಯರ ಮಾತುಗಳನ್ನು ಕೇಳಿ ಕಾಲಪದ ರೀತಿ ರಿವಾಜು ತಿಳಿದುಕೊಳ್ಳುವ ಬದಲು, ಮಂತ್ರಿಗಳ ಹಿಂದೆ ಬಿದ್ದು ತಮ್ಮ ಕೆಲಸ ಮಾಡಿಸಿಕೊಳ್ಳುವುದರಲ್ಲಿಯೇ ಆಸಕ್ತಿ ತೋರುತ್ತಾರೆ. ನಾನು ಇಂದು ಈ ಹೆಸರು ಮಾಡಲು ಅರಸ್ ಅವರ ವ್ಯಕ್ತಿತ್ವ ಕಾರಣ. ಅವರು ಹೇಳುತ್ತಿದ್ದಿದ್ದು ಒಂದೇ, ಯಾವುದೇ ಸಭೆ ಅಥವಾ ಸದನ ಕಲಾಪವಿರಲಿ, ದಿನವಿಡಿ ಕೂರುವ ಸೌಜನ್ಯವಿರಲಿ ಎಂದು ಹೇಳುತ್ತಿದ್ದರು. ಈ ಮಾತು ಇಂದಿನ ಯುವಕರಿಗೂ ಅನ್ವಯವಾಗುತ್ತದೆ.

ಅದೃಶ್ಯ ಮತದಾರರ ನಾಯಕ ಮೋದಿ ಮತ್ತು ಅರಸ್
ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವರಾಜ್ ಅರಸ್ ಅವರು ಅದೃಶ ಮತದಾರರ ನಾಯಕರಿವರು. ವ್ಯವಸ್ಥೆಯ ಬಗ್ಗೆ ಹೇಸಿಗೆಯಾದಾಗ ಪಕ್ಷಾತೀತವಾಗಿ ಜನ ಮತ ಮಾಡುತ್ತಾರೆ. ಇದರ ಲಾಭ ಮೋದಿಗೆ ಬಂದಿದೆ. ಮೋದಿ ಇಲ್ಲದ ಬಿಜೆಪಿಗೆ ಇಷ್ಟು ಸೀಟುಗಳು ದೊರೆಯಲು ಸಾಧ್ಯವಿಲ್ಲ. ಈ ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಃಪತನವಾದಾಗ ದೇವರಾಜ್ ಅರಸ್ ಇಂತಹುದೇ ಮತಗಳಿಂದ ಯಶಸ್ವಿಯಾಗಿದ್ದರು. ಈಗ ಮೋದಿಯೂ ಇಂತಹ ಆಶಾಭಾವನೆಯ ನಾಯಕ. ಇವರ ಮೇಲೆ ನಿರೀಕ್ಷೆಯ ಗೋಪುರವಿದೆ. ಅವರ ಚಿಂತನೆ, ಮಾತುಗಳು ರಾಷ್ಟ್ರಕ್ಕೆ ಬೇಕು. ಜಾತ್ಯಾತೀತ ಎಂದರೆ ಕೇವಲ ಓಲೈಕೆಯಲ್ಲ ಎನ್ನುವುದು ತಿಳಿಯಬೇಕಿದೆ. ಆದರೆ ಮಾತನಾಡಿದಷ್ಟು ಸುಲಭವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವುದು ಪ್ರಧಾನಿಯಾದ ಬಳಿಕ ಮೋದಿಗೆ ಈಗ ತಿಳಿದಿದೆ ಎಂದು ನಾಣಯ್ಯ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.