ಸತ್ವವನು ಪರೀಕ್ಷಿಸುವ ಸಮಯ ಬಂದಿಹುದು...

Updated on: 

ಪರೀಕ್ಷೆಗಳು ಶುರುವಾಗುತ್ತಿವೆ.
ಎಲ್ಲ ಮನೆಗಳಲ್ಲೂ ಅಘೋಷಿತ ಕರ್ಫ್ಯೂ ಜಾರಿಯಾಗಿದೆ. 'ಮಕ್ಕಳ ಪರೀಕ್ಷೆ ಮುಗಿಯುವವರೆಗೂ ಟಿ.ವಿ. ಹಾಕುವಂತಿಲ್ಲ. ಸಿನಿಮಾ ನೋಡುವಂತಿಲ್ಲ. ಶಾಪಿಂಗ್‌ಗೆ ಹೋಗುವಂತಿಲ್ಲ. ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥದ ವಿಷಯವನ್ನು ಎತ್ತುವಂತಿಲ್ಲ. ನೆಂಟರನ್ನು ಮನೆಗೆ ಆಹ್ವಾನಿಸುವಂತಿಲ್ಲ. ಅವರ ಮನೆಗೂ ಹೋಗುವಂತಿಲ್ಲ. ಮಕ್ಕಳ ಪರೀಕ್ಷೆ ಮುಗಿಯುವವರೆಗೂ, ಯಾವುದೇ ಕಾರಣಕ್ಕೂ ಜಗಳ ಮಾಡುವಂತಿಲ್ಲ. ಮಕ್ಕಳಲ್ಲಿ ತಪ್ಪು ಹುಡುಕುವಂತಿಲ್ಲ. ರಾತ್ರಿ ತುಂಬಾ ಬೇಗನೆ ಮಲಗುವಂತಿಲ್ಲ. ಬೆಳಗ್ಗೆ ತಡವಾಗಿ ಏಳುವಂತಿಲ್ಲ...' ಇಂಥವೇ ಹಲವಾರು ನಿಯಮಗಳನ್ನು ಎಲ್ಲ ಪೋಷಕರೂ ತಮಗೆ ತಾವೇ ಹಾಕಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ, ಈಗ ಪರೀಕ್ಷೆಯ ತಲೆಬಿಸಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗಿಂತ ಹೆಚ್ಚಾಗಿ ಈ ಮಕ್ಕಳ ಪೋಷಕರಿಗೆ ಹೆಚ್ಚಾಗಿ ಕಾಡುತ್ತಿದೆ. ಹೆಚ್ಚಿನ ತಂದೆ ತಾಯಿಗಳದ್ದು ಒಂದೇ ಆಸೆ, ನಮ್ಮ ಮಗಳು ಈ ಬಾರಿಯ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಬರಲಿ!
ಉಹುಂ, ಹದಿನೈದಿಪ್ಪತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗೆಲ್ಲ ರ್ಯಾಂಕ್‌ಗಳು ಇದ್ದುದ್ದು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ತರಗತಿಗಳಿಗೆ. ಅದರಲ್ಲೂ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರ್ಯಾಂಕ್ ಬಂದವರ ಫೋಟೋಗಳು ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದ್ದವು. ರ್ಯಾಂಕ್ ಪಡೆಯಲು ಆ ವಿದ್ಯಾರ್ಥಿಗಳು ಎಷ್ಟೆಲ್ಲ ಶ್ರಮಪಟ್ಟರು, ಅವರು ದಿನಕ್ಕೆ ಎಷ್ಟು ಗಂಟೆಗಳ ಕಾಲ ಓದುತ್ತಿದ್ದರು, ಟ್ಯೂಷನ್‌ಗೆ ಹೋಗುತ್ತಿದ್ದರೋ ಹೇಗೆ ಎಂಬ ವಿವರಗಳೆಲ್ಲ ಅಲ್ಲಿರುತ್ತಿದ್ದವು. ಸ್ವಾರಸ್ಯವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕನ್ನಡಕ ಹಾಕಿಕೊಂಡಿರುತ್ತಿದ್ದರು. ಅದನ್ನು ಗಮನಿಸಿದ ಕಿಲಾಡಿ ಮಗುವೊಂದು, 'ಅಪ್ಪಾ, ನೀನೂ ನನಗೆ ಕನ್ನಡಕ ಕೊಡಿಸಿದ್ದರೆ ನಾನು ಖಂಡಿತ ರ್ಯಾಂಕ್ ಬಂದಿರುತ್ತಿದ್ದೆ' ಎಂದು ಕಮೆಂಟ್ ಮಾಡಿದ್ದ ವ್ಯಂಗ್ಯ ಚಿತ್ರವೊಂದು ಆ ದಿನಗಳಲ್ಲಿ ಪ್ರಕಟವಾಗಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಮುಂದೆ, ರ್ಯಾಂಕ್ ಬರಲಿಲ್ಲ ಎಂಬ ಕಾರಣದಿಂದಾಗಿಯೇ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದರು. ಆತ್ಮಹತ್ಯೆ ಮಾಡಿಕೊಂಡರು ಎಂಬುದು ಎಲ್ಲ ಪೋಷಕರ ದೂರಾದಾಗ, ರ್ಯಾಂಕ್ ನೀಡುವ ಪದ್ಧತಿಯನ್ನೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಿಂದ ತೆಗೆದು ಹಾಕಲಾಯಿತು. ವಿಪರ್ಯಾಸ ನೋಡಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯೂಸಿಗೆ ಇಲ್ಲದ ರ್ಯಾಂಕ್ ಎಂಬ ಮಾಯಾವಿ ಈಗ ಎಲ್‌ಕೆಜಿಯಿಂದ ಎಂಟನೇ ತರಗತಿಯವರೆಗಿನ ಮಕ್ಕಳಿಗೆ ಅಮರಿಕೊಂಡು ಆಟ ಆಡಿಸುತ್ತಿದೆ. 'ರ್ಯಾಂಕ್ ವಿಜೇತ ಮಗುವಿನ ಪೋಷಕರು' ಅನ್ನಿಸಿಕೊಳ್ಳುವ ಆಸೆಯಿಂದ ಪೋಷಕರು ಮಕ್ಕಳಿಗೆ ವಾರ್ನ್ ಮಾಡುತ್ತಿದ್ದಾರೆ: ಈ ಬಾರಿ ಐದರಲ್ಲಿ ಒಂದು ರ್ಯಾಂಕ್ ನಿನ್ನದಾಗಬೇಕು, ಇಲ್ಲದಿದ್ರೆ ಅಷ್ಟೆ...'
ನಿಜ ಹೇಳಲಾ? ನನಗೆ ಹಾಗೂ ನನ್ನ ವಾರಿಗೆಯ ಹುಡುಗ-ಹುಡುಗಿಯರಿಗೆ ಇಂಥ ಸಂಕಟಗಳು ಇರಲೇ ಇಲ್ಲ. ಅದರಲ್ಲೂ ಹಳ್ಳಿಯ ಶಾಲೆಗಳಲ್ಲಿ ಓದದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬುದು ಹೆದರಿಕೆ ಹುಟ್ಟಿಸುವ 'ಗುಮ್ಮ' ಆಗಿರಲಿಲ್ಲ. ವರ್ಷದ ಬಾಕಿ ದಿನಗಳಲ್ಲಿ ನಡೆಯುತ್ತಿದ್ದ ಟೆಸ್ಟ್, ಅರ್ಧ ವಾರ್ಷಿಕ ಪರೀಕ್ಷೆಯಂತೆಯೇ ವಾರ್ಷಿಕ ಪರೀಕ್ಷೆಗಳೂ ನಡೆದು ಹೋಗುತ್ತಿದ್ದವು. ಪರೀಕ್ಷೆ ಮುಗಿದ ದಿನವೇ, ಪ್ರಾಚಾರ್ಯರು ಎಲ್ಲ ವಿದ್ಯಾರ್ಥಿಗಳನ್ನು ಎದುರಿಗೆ ನಿಲ್ಲಿಸಿಕೊಂಡು ಮುಂದಿನ ತಿಂಗಳ ಎರಡನೇ ಶನಿವಾರ ಫಲಿತಾಂಶ ತಿಳಿಸಲಾಗುತ್ತದೆ. ಅವತ್ತು ಎಲ್ಲರೂ ತಪ್ಪದೇ ಶಾಲೆಗೆ ಬರಬೇಕು ಎಂದು ಅಪ್ಪಣೆ ಮಾಡುತ್ತಿದ್ದರು. ಅವರು ಹೇಳಿದ ದಿನವೇ ರಿಸಲ್ಟ್ ತಿಳಿಯುವ ಆಸೆಯಿಂದ ಶಾಲೆಯತ್ತ ಹೊರಟವರು, ಊರದೇವರಿಗೆ ಪೂಜೆ ಮಾಡಿಸಲು, ದೇವರೇ, ನಮ್ಮನ್ನು ಪಾಸ್ ಮಾಡಿಸಪ್ಪಾ ಎಂದು ಪ್ರಾರ್ಥಿಸಲು ಮರೆಯುತ್ತಿರಲಿಲ್ಲ. ಎಲ್ಲರೂ ತುಂಬ ಕುತೂಹಲದಿಂದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾಗಲೇ, ಹೆಡ್ ಮಾಸ್ಟರು ಘೋಷಿಸುತ್ತಿದ್ದರು: 'ಐದನೇ ತರಗತಿಯಲ್ಲಿ ಎಲ್ಲರೂ ಪಾಸ್?' ಅವರ ಮಾತು ಮುಗಿಯುತ್ತಿದ್ದಂತೆಯೇ ಆರನೇ ತರಗತಿಯ ಮಕ್ಕಳಲ್ಲಿ ವಿಪರೀತ ಚಡಪಡಿಕೆ. ಹೆಚ್ಚಿನ ಸಂದರ್ಭಗಳಲ್ಲಿ ಏಳನೇ ಪರೀಕ್ಷೆಯವರೆಗೂ ಪರೀಕ್ಷೆಗೆ ಹಾಜರಾದವರೆಲ್ಲ ಪಾಸ್ ಆಗಿಬಿಡುತ್ತಿದ್ದರು. ನಿಮ್ಮ ಕ್ಲಾಸಲ್ಲಿ ಎಲ್ರೂ ಪಾಸಾ? ಎಷ್ಟು ಜನ ಫೇಲ್ ಆದರು ಎಂಬಂಥ ಮಾತುಗಳು ಶುರುವಾಗುತ್ತಿದ್ದವು. ಎಂಟನೇ ತರಗತಿಯ ನಂತರವೇ.
ಪರೀಕ್ಷೆ ದಿನ ಪ್ರಕಟವಾಗುತ್ತಿದ್ದಂತೆಯೇ ನಾವು ಹುಡುಗ- ಹುಡುಗಿಯರೆಲ್ಲ; ಈ ವರ್ಷ ನಾನು ಪಾಸ್ ಆಗ್ತೀನೋ ಅಥವಾ ಇಲ್ಲವೋ ಎಂದು ಮುಂಚಿತವಾಗಿಯೇ ತಿಳಿದುಕೊಳ್ಳಲು ಕಂಡುಕೊಂಡಿದ್ದ ಮಾರ್ಗಗಳಿದ್ದವಲ್ಲ: ಅವುಗಳನ್ನು ನೆನಪಿಸಿಕೊಂಡರೆ ಈಗಲೂ ನಗು ಬರುವುದುಂಟು. ಒಂದೆರಡು ಸ್ಯಾಂಪಲ್ ಕೇಳಿ: ಶಾಲೆಗೆ ಹೋಗುವ ದಾರಿಯಲ್ಲಿ ಸಣ್ಣ ಇರುವೆಗಳು ಹರಿದಾಡುತ್ತಿದ್ದ ಒಂದು ಗೂಡು ಕಂಡರೆ ಸಾಕು, ತಕ್ಷಣವೇ ಅಲ್ಲಿಗೆ ಹೋಗಿ, ನಮ್ಮ ಇಷ್ಟದೈವವನ್ನು ಪ್ರಾರ್ಥಿಸಿ, ಆ ಗೂಡಿನ ಮೇಲೆ ಕೈ ಇಡಬೇಕು. ಇರುವೆ ನಮ್ಮ ಕೈ ಮೇಲೆ ಹತ್ತಿ, ತೋಳಿನವರೆಗೂ ಸಾಗಿಬಂದರೆ, ಈ ವರ್ಷ ಪಾಸ್ ಆಗುತ್ತದೆ ಎಂದು ಲೆಕ್ಕ! ಪರೀಕ್ಷೆಯಲ್ಲಿ ಬರೆಯದಿದ್ದರೂ ಪರವಾಗಿಲ್ಲ, ಪಾಸ್ ಆಗಬೇಕು ಎಂದು ಆಸೆಪಡುತ್ತಿದ್ದ ನಾವು, ಆ ಇರುವೆ ಮೇಲೆ ಮೇಲೆ ಸಾಗಲಿ ಎಂದು ಏನೇನೋ ಸರ್ಕಸ್ ಮಾಡುತ್ತಿದ್ದೆವು. ಪಾಪ, ಆ ಇರುವೆಗಳೋ, ಪ್ರಾಣಭಯದಿಂದ ಅಂಗೈ ಮೇಲಿಂದ ಛಕ್ಕನೆ ಹಾದಿ ಬದಲಿಸಿ ಕೆಳಗೆ ಬೀಳುತ್ತಿದ್ದವು. ಕಡೆಗೂ ಒಂದು ಇರುವೆಯನ್ನು ತೋಳಿನ ತನಕ ಹತ್ತಿಸಿಕೊಳ್ಳುವವರೆಗೂ ನಾವು ಶಾಲೆಯ ಕಡೆ ಹೆಜ್ಜೆ ಹಾಕುತ್ತಿರಲಿಲ್ಲ!
ಮತ್ತೊಂದು ಆಟದ ವರಸೆ ಹೀಗಿತ್ತು: ಫಲಿತಾಂಶ ತಿಳಿಯ ಬಯಸಿದವರು ತಮ್ಮ ಕೈಯನ್ನು ಮುಂದಕ್ಕೆ ಚಾಚಬೇಕು. ಆಗ ಮತ್ತೊಬ್ಬರು, ಎರಡು ಬೆರಳುಗಳನ್ನು ಮಡಿಚಿಕೊಂಡು, ತೋರು ಬೆರಳಿಂದ ಆರಂಭಿಸಿ, 'ಸ್ಟೆಪ್ ಬೈ ಸ್ಟೆಪ್ ಎಂಬಂತೆ, ಪಾಸು-ಫೇಲು, ಪಾಸು, ಫೇಲು ಎಂದು ಹೇಳುತ್ತಾ ಸಾಗಬೇಕು. ತೋಳು ಮಡಚುವ ಜಾಗಕ್ಕೆ ಬಂದಾಗ 'ಪಾಸು' ಎಂಬುದು ಲೆಕ್ಕ ಆಗಿಬಿಟ್ಟರೆ ಪರೀಕ್ಷೆಯಲ್ಲಿ ಪಾಸ್ ಎಂದೇ ಅರ್ಥ. ಬೈ ಛಾನ್ಸ್, ಫೇಲ್ ಎಂಬ ಮಾತಿಗೇ ಲೆಕ್ಕ ಮುಗಿದರೆ, ನಾವು ಹೆದರುತ್ತಿರಲಿಲ್ಲ. ಪಾಸು-ಫೇಲು ಎಂದು ಹೇಳುತ್ತಾ ಭವಿಷ್ಯ ತಿಳಿಸುವವನನ್ನೇ ಬದಲಿಸುತ್ತಿದ್ದೆವು. ಕೊನೆಗೂ ಹೇಗಾದರೂ ಮಾಡಿ 'ಪಾಸು' ಎಂಬುದೇ ಕಡೆಯ ಲೆಕ್ಕವಾಗಿ ಬರುವಂತೆ ಮಾಡಿಕೊಂಡು- ಅಬ್ಬಾ, ನಾನೂ ಪಾಸಾದೆ ಎಂದು ಖುಷಿಪಡುತ್ತಿದ್ದೆವು. ನಿಜ ಹೇಳಬೇಕೆಂದರೆ, ಈಗಿನ ಕಾಲದ ಮಕ್ಕಳು, ಎಲ್ಲ ರೀತಿಯಿಂದಲೂ ನಮಗಿಂತ ಬುದ್ಧಿವಂತರಾಗಿದ್ದಾರೆ. ಆದರೆ, ನನ್ನ ವಾರಿಗೆಯ ಮಂದಿಗೆ ಸಿಕ್ಕಂಥ ಸ್ವಚ್ಛಂದ ಬಾಲ್ಯ ಆ ಮಕ್ಕಳಿಗೆ ಸಿಗುತ್ತಲೇ ಇಲ್ಲ ಎಂಬುದು ನೆನಪಾದಾಗ ಸಂಕಟವಾಗುತ್ತದೆ. ನನ್ನೆಲ್ಲ ಸೋದರ-ಸೋದರಿಯರಿಗೂ ನಾನು ಹೇಳುವುದಿಷ್ಟೆ: ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲರಿಗೂ ಯಶಸ್ಸು ಸಿಗಲಿ.

 -ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com