Hmm... ಪಾಂಚ್ ಅರವಿಂದ ಕೇಜ್ರಿವಾಲ್

Updated on: 

- ಏನ್ ಸಾರ್, ಕಾಣೆಯಾಗ್‌ಬಿಟ್ರಿ? ಧೂಳಿಂದ ಎದ್ ಬರೋ ಪ್ರೋಗ್ರಾಮ್ ಏನಾದ್ರೂ ಇದ್ಯ?
ಧೂಳಿಂದ ಎದ್‌ಬರೋಕೆ ನಾನು ದೇವೇಗೌಡ ಅಲ್ಲ, ಕೇಜ್ರಿವಾಲ್. ನಾನು ಪುಟ್‌ಪಾತ್‌ನಿಂದ ಎದ್‌ಬರ್ತೀನಿ.

- ಕೊರಳಲ್ಲಿರೋ ಶಾಲು ಸುತ್ತಿಕೊಂಡು ಹೊಡ್ಕೊತಾ ಇದೀರ... ಇರ್ಲಿ, ಆದ್ರೂ ನಿಮಗ್ ಹಿಂಗಾಗ್‌ಬಾರ್‌ದಿತ್ತು...ಅಲ್ವಾ?
ಏನ್ ಮಾಡೋಕಾಗಲ್ಲ, ಕೇಜ್ರಿವಾಲ್ ಹಳ್ಳಕ್ ಬಿದ್ರೆ ಕೇಜಿಗಟ್ಲೆ ಕಲ್ಲು.

- ಅದೇನೇ ಇರ್ಲಿ, ಪಾಪ ನಿಮಗೆ ಕೈಯಿಗ್ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲ...
ನೆನಪಿಸಿಕೊಂಡ್ರೆ ನನ್ ಬಾಯಿಗೆ ಏನೇನೋ ಬರುತ್ತೆ ಬ್ಯಾಡ ಬಿಡಿ. ಅದೆಲ್ಲ ಕಿಡಿಗೇಡಿಗಳ ಕೆಲಸ.

-    ಅಂದಹಾಗೆ, ನಿಮಗೆ ಅಹಂಕಾರ ಜಾಸ್ತಿ. ನೀವು 'ಆಮ್ ಆದ್ಮೀ' ಅಲ್ಲ, 'ಅಹಂ ಆದ್ಮೀ' ಅಂತಾರೆ ನಿಮಗಾಗದವರು?
ಆಮ್ ಆದ್‌ಮೀನೋ, ಅಹಂ ಆದ್‌ಮೀನೋ ಗೊತ್ತಿಲ್ಲ, ಆದ್ರೆ ನಾನು ಮನಮೋಹನ್ ಸಿಂಗ್ ಥರಾ ಹೇಳಿದ್ದಕ್ಕೆಲ್ಲಾ 'ಎಸ್‌' ಅನ್ನೋ 'ಹ್ಞಾಂ ಆದ್ಮೀ' ಅಂತೂ ಅಲ್ಲ.

- ಹೋಗ್ಲಿ, ಕಾಂಗ್ರೆಸ್ ಜೊತೆ ಚೆನ್ನಾಗಿದ್ದು ಸಿದ್ಧರಾಮಯ್ಯ ಅವರ ಟಚ್‌ನಲ್ಲಿರಿ. ಅವರು ನಿಮಗೆ 'ಗಾದಿ ಭಾಗ್ಯ' ಕರುಣಿಸಬಹುದು, ಇಲ್ಲಾಂದ್ರೆ ಬಿಜೆಪಿ ಸಂಪರ್ಕಿಸಿದರೆ 'ಮೋದಿ ಭಾಗ್ಯ'ನಾದ್ರೂ ಸಿಗಬಹುದು..
ಅಯ್ಯೋ, ಹಾದಿ ಭಾಗ್ಯ ಇಲ್ಲದೆ ಈಗ್ಲೇ ದಾರಿತಪ್ಪಿ ಪುಟ್‌ಪಾತ್‌ಗೆ ಬಂದಿದೀನಿ. ಇನ್ನು ಅವೆಲ್ಲ ಬೇಕಾ..?
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಯಾವುದೇ ಶುಭ ಸಮಾರಂಭ ಇರಲಿ 'ಒಮ್ಮೆ ಭೇಟಿ ಕೊಡಿ' ಅಂತ ಬೋರ್ಡ್ ತಗಲಾಕಿಕೊಂಡಿರುವ ಹೂವಿನ ಅಲಂಕಾರ ಮಾಡುವ ಅಂಗಡಿಗಳು ಎಷ್ಟೋ ಸಿಗಬಹುದು. ಆದರೆ ಅಲ್ಲಿಗೆ ಭೇಟಿ ಕೊಡುವ ಮುನ್ನ ನೀವೇ
ಸ್ವಂತವಾಗಿ ಈ ಹೂವಿನ ಡಿಸೈನ್ ಮಾಡುವ ಬಗ್ಗೆ ಆಸಕ್ತಿ ಇದ್ದರೆ ಇಲ್ಲಿನ ವೆಬ್‌ಸೈಟ್‌ಗಳಿಗೆ ಭೇಟಿ ಕೊಡಿ.
n bit.ly/1jIbdOY    n abt.cm/1gISAHN
n bit.ly/MDQX4N    n bit.ly/1bUPcwb
n bit.ly/1ehekvC


ಹರಿ-ಕಥೆ
ನೀವೊಂದು ಹಳೇ ಕಥೆ ಕೇಳಿರ್ತೀರಿ. ಒಂದು ಮನೇಲಿ ನಾಯಿ, ಕತ್ತೆ ಇದ್ದವು. ಒಂದಿನ ರಾತ್ರಿ ಮನೆಗೆ ಕಳ್ಳರು ಬಂದರು. ಕತ್ತೆ ಅದನ್ನು ನೋಡಿ ನಾಯಿಗೆ ಬೊಗಳೋಕೆ ಹೇಳಿತು. ಅದಕ್ಕೆ ನಾಯಿ ನಮ್ಮ ಯಜಮಾನ ನನ್ನನ್ನು ಸರಿಯಾಗಿ ನೊಡ್ಕೊಳೊಲ್ಲ, ನಾನ್ಯಾಕೆ ಬೊಗಳಲಿ ಅಂತ ಸುಮ್ಮನಾಯ್ತು. ಕೊನೆಗೆ ಕತ್ತೆ ಅರಚೋಕೆ ಶುರು ಮಾಡ್ತು. ಕಳ್ಳರು ಓಡಿ ಹೋದ್ರು. ಮನೆ ಮಾಲೀಕ ಎದ್ದು ಬಂದ. ಯಾರೂ ಕಾಣಿಸಲಿಲ್ಲ. ಕತ್ತೆ ಮೇಲೆ ಸಿಟ್ಟು ಬಂದು ಸುಮ್‌ಸುಮ್‌ನೆ ಅರಚುತ್ತೆ ಅಂತ ಕೋಲು ತಗೊಂಡು ಸರಿಯಾಗಿ ಎರಡು ಬಾರಿಸಿದ.
ಕಥೆಯ ನೀತಿ: ನಮ್ ಕೆಲ್ಸ ಎಷ್ಟಿದೆಯೋ ಅಷ್ಟ್ ಮಾಡ್‌ಬೇಕು, ಇನ್ನೊಬ್ರ ಕೆಲಸದಲ್ಲಿ ತಲೆಹಾಕೋಕ್ ಹೋಗ್‌ಬಾರ್‌ದು.
ಈಗ ಅದರ ಮುಂದುವರಿದ ಭಾಗ. ಆ ಮನೆ ಪಕ್ಕದಲ್ಲಿ ಸಾಫ್ಟ್‌ವೇರ್ ಕಂಪನಿ ಸಿಇಒ ಒಬ್ಬನ ಮನೆ ಇತ್ತು. ಅಲ್ಲೂ ಒಂದು ನಾಯಿ, ಒಂದು ಕತ್ತೆ. ಒಂದಿನ ರಾತ್ರಿ ಮನೆಗೆ ಕಳ್ಳರು ಬಂದರು. ಕತ್ತೆ ಅದನ್ನು ನೋಡಿ ನಾಯಿಗೆ ಬೊಗಳೋಕೆ ಹೇಳಿತು. ಅದಕ್ಕೆ ನಾಯಿ ನಮ್ಮ ಯಜಮಾನ ನನ್ನನ್ನು ಸರಿಯಾಗಿ ನೊಡ್ಕೊಳೊಲ್ಲ, ನಾನ್ಯಾಕೆ
ಬೊಗಳಲಿ ಅಂತ ಸುಮ್ಮನಾಯ್ತು. ಕೊನೆಗೆ ಕತ್ತೆ ಅರಚೋಕೆ ಶುರು ಮಾಡ್ತು. ಕಳ್ಳರು ಓಡಿ ಹೋದ್ರು. ಮನೆ ಮಾಲೀಕ ಎದ್ದು ಬಂದ. ಯಾರೂ ಕಾಣಿಸಲಿಲ್ಲ. ಆದರೆ, ಸ್ವಲ್ಪ ಸಮಾಧಾನದಿಂದ ಯೋಚಿಸಿ, ಮಲಗಿದ್ದ ನಾಯಿಯನ್ನು ನೋಡಿ ಓಹೋ ಕಳ್ಳರು ಬಂದಿರಬೇಕು, ಅದಕ್ಕೇ ಕತ್ತೆ ಅರಚಿದೆ ಅಂತ ಜಡ್ಜ್ ಮಾಡಿ ಕತ್ತೆಗೆ ಶಭಾಷ್‌ಗಿರಿ ಕೊಟ್ಟ. ಈ ಕಡೆ ಮನೆ ಕತ್ತೆ, ನಾನು ಆ ಮನೆಯಲ್ಲಾದ್ರೂ ಹುಟ್ಟಬಾರದಿತ್ತೇ ಅಂತ ಬೇಜಾರು ಮಾಡ್ಕೊಂತು. ಮರುದಿನ ಬೆಳಗ್ಗೆ ಸಿಇಓ ಹೊರಗೆ ಬಂದು ತನ್ನ ಕತ್ತೆಗೆ ಎರಡು ಹಿಡಿ ಮೇವು ಜಾಸ್ತಿ ಹಾಕಿ, 'ನೀನು ಒಳ್ಳೆ ಕೆಲಸಗಾರ. ಇನ್ಮುಂದೆ ನಾಯಿ ಮಾಡೋ ಕೆಲಸನೂ ನೀನೇ ಮಾಡ್‌ಬೇಕು' ಅಂತ ಆರ್ಡರ್ ಮಾಡಿ  ಹೋದ.
ಇಬ್ಬರು ಮಾಲೀಕರ ವರ್ತನೆಯಲ್ಲಿ ಏನೇ ಬದಲಾವಣೆ ಇದ್ರೂ ಕಥೆಯ ನೀತಿ ಮಾತ್ರ ಅದೇ: ನಮ್ ಕೆಲ್ಸ ಎಷ್ಟಿದೆಯೋ ಅಷ್ಟ್ ಮಾಡ್‌ಬೇಕು, ಇನ್ನೊಬ್ರ ಕೆಲಸದಲ್ಲಿ ತಲೆಹಾಕೋಕ್ ಹೋಗ್‌ಬಾರ್‌ದು.

ಸ್ಕ್ಯಾಂಡಲ್‌ವುಡ್
ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ದೇಶಕರಿದ್ದಾರೆ. ಅವರು ಚಿತ್ರೋದ್ಯಮದ ಪ್ರಕಾರ ಹಿರಿಯ ನಿರ್ದೇಶಕರೂ ಅಲ್ಲ, ನಂ.1 ನಿರ್ದೇಶಕರೂ ಎನಿಸಿಕೊಳ್ಳುವುದಿಲ್ಲ. ಅವರು ಹಿಟ್ ಚಿತ್ರಗಳನ್ನು ಕೊಟ್ಟವರು. ಅವರು ಒಂದು ಚಿತ್ರದ ವಂಡರ್‌ಗಳಲ್ಲ. ವಂಡರ್ ಎನಿಸುವಂಥ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ಕೊಟ್ಟವರು. ಮೆಜೆಸ್ಟಿಕ್ ಚಿತ್ರದಿಂದ ದರ್ಶನ್‌ಗೆ ಬ್ರೇಕ್ ಕೊಟ್ಟ ಪಿ.ಎನ್.ಸತ್ಯ ಅಂಥವರಲ್ಲೊಬ್ಬರು. ಹಾಗಂತ ಸತ್ಯ ಕೇವಲ ಒಂದು ಸಿನಿಮಾಕ್ಕೆ ಸೀಮಿತವಲ್ಲ. ಮೆಜೆಸ್ಟಿಕ್‌ನ ನಂತರ ದರ್ಶನ್ ಕೆರಿಯರ್ ಇಳಿಮುಖವಾಗಿದ್ದಾಗ ಮತ್ತೆ ಅಂಡರ್‌ವರ್ಲ್ಡ್‌ನ ಇನ್ನೊಂದು ವರ್ಶನ್ ತೋರಿಸುವ ದಾಸ ಚಿತ್ರ ಮಾಡಿ ದರ್ಶನ್ ಕೈಗೆ ಅನೇಕ ವರ್ಷ ಲಾಂಗ್ ಅಂಟಿಕೊಳ್ಳುವಂತೆ ಮಾಡಿದವರು. ರಿಮೇಕ್ ಚಿತ್ರಗಳನ್ನು ಮಾಡಲು ಹೆಸರಾದ ಎಂ.ಡಿಶ್ರೀಧರ್  ಮತ್ತು ಕೆ. ಮಾದೇಶ್ ಕೂಡ ಇದೇ ಕೆಟಗರಿಗೆ ಸೇರಿದವರು. ಇವರ ಚಿತ್ರಗಳ ಲಿಸ್ಟ್ ತೆಗೆದು ನೋಡಿದರೆ ಇವರು ಸೋತಿದ್ದೇ ಕಡಿಮೆ. ಎಂತೆಂಥ ದೊಡ್ಡ ಸ್ಟಾರ್‌ಗಳಿಗೆ ರಿಮೇಕ್ ಸಿನಿಮಾ ಮಾಡಿ ಮರುಹುಟ್ಟು ಕೊಟ್ಟವರು. ಆದರೆ ಇವರನ್ನು ಯಾರೂ ಚಿತ್ರರಂಗದ ಟಾಪ್ ನಿರ್ದೇಶಕರ ಪಟ್ಟಿಯಲ್ಲಿ ಸೇರಿಸುವುದಿಲ್ಲ. ಏನಿದ್ದರೂ ಇನ್ನೊಂದು ಸಿನಿಮಾ ಸಿಗುವುದು ಕಷ್ಟವೇನೂ ಆಗುವುದಿಲ್ಲ ಎಂಬಂಥ ಸಿನಿಮಾ ಬದುಕು ಇವರದ್ದು. 'ಇದು ಸಿನಿಮಾ ರಂಗ. ಇಲ್ಲಿ ಯಶಸ್ಸಿಗೆ ಮಾತ್ರ ಬೆಲೆ. ಗೆದ್ದವನೇ ಮಹಾಶೂರ' ಎನ್ನುವ ಮಾತುಗಳಿದ್ದರೂ ಇಂಥ ನಿರ್ದೇಶಕರನ್ನು ಯಾರಾದರೂ ಹೊಗಳುವುದು ಅಪರೂಪ. ಆದರೆ ಸೋತ ಚಿತ್ರಗಳ ಮೂಲಕವೂ ಹೆಸರು  ಮಾಡಿದ, ಎರಡು, ಮೂರು ಸಿನಿಮಾ ಮಾಡಿದ ನಿರ್ದೇಶಕರನ್ನು ಪುಟ್ಟಣ್ಣ ಕಣಗಾಲರ ಅಪರಾವತಾರ ಎನ್ನುವಂತೆ ಮಾತನಾಡುವ ಉದಾಹರಣೆಗಳೂ ಇವೆ. ಇಂಥ ಉದಾಹರಣೆಗಳನ್ನು ನೋಡಿದಾಗ ಸದ್ಯ, ಗಾಂಧಿನಗರದಲ್ಲೇ ಯಶಸ್ಸೊಂದೇ ಮೂಲ ಮಂತ್ರ ಅಲ್ಲ ಎಂಬ ಸಮಾಧಾನದ ನಿಟ್ಟುಸಿರು ಕೇಳಿಸುವುದು ಸತ್ಯ.

ಡಬ್ಕುಡಬಲ್ ತುದಾಂಡಲ್...
- ಸ್ಯಾಮ್‌ಸಂಗ್ ನೋಟ್ ನಂತರ ನೋಟ್ 2 ಬಂತು
ಅದೇ ರೀತಿ, ಎಚ್‌ಟಿಸಿ ಒನ್, ನಂತರದ ಮಾಡೆಲ್ ಬಂದರೆ ಅದು, ಎಚ್‌ಟಿಸಿ 'ಒನ್ 2'?
-    ಜನಪ್ರಿಯತೆ ಕಳೆದುಕೊಂಡ ಡೈಲಿ ಪತ್ರಿಕೆಯನ್ನ ಏನೆನ್ನಬಹುದು?
'ವೀಕ್‌'ಲೀ
-    ಮಂಡ್ಯದಲ್ಲಿ ಎಲೆಕ್ಷನ್‌ಗೆ ನಿಂತುಕೊಳ್ಳೋಕೆ ರಮ್ಯಾಗಿಂತ ಜಾಸ್ತಿ ಅರ್ಹತೆ ಇರೋದು ರಕ್ಷಿತಾ-ರಾಧಿಕಾ ಅವರಿಗೆ.
ಯಾಕಂದ್ರೆ 'ಮಂಡ್ಯ' ಸಿನಿಮಾದಲ್ಲಿ ರಮ್ಯಾ ಇರಲೇ ಇಲ್ಲ.
- ರಾಖಿ ಸಾವಂತ್ ಬಿಜೆಪಿಗೆ.
ಸ್ವಯಂವರದಲ್ಲಂತೂ ಹುಡುಗ ಸಿಗಲಿಲ್ಲ, ಸ್ವಯಂ ಸೇವಕರಲ್ಲಾದ್ರೂ ಸಿಗಬಹುದು ಅನ್ನೋ ಯೋಚನೆ ಇರಬಹುದು.
- ದೇಶ ಬದಲಿಸಬೇಕು ಅಂದ್ರೆ ಬ್ರಹ್ಮಚಾರಿಗಳೇ ಆಗಬೇಕು
ಗೃಹಸ್ಥರಿಗೆ ಅಟ್‌ಲೀಸ್ಟ್ ತಮ್ಮಿಷ್ಟ ಬಂದಂಗೆ ಟಿವಿ ಚಾನೆಲ್ ಬದಲಾಯಿಸೋಕೂ ಆಗಲ್ಲ.
- ಸಿನಿಮಾ ಮಂದಿಯ ಲಗ್ನಪತ್ರಿಕೆ ಹೇಗಿರುತ್ತೆ?
ಮುಂದಿನ ವಾರ ನನಗೆ 'ಬಿಡುಗಡೆ' ಅಲ್ಲ ಬಂಧನ. ಆದರೂ ಅವತ್ತು 'ಮಾರ್ನಿಂಗ್ ಶೋ' ಸಮಯಕ್ಕೆ ನೀವೆಲ್ಲ ಬರಬೇಕು. ಬೆಳಿಗ್ಗೆ ಪಟಾಕಿ ಸದ್ದು, 'ಹಾಲಿನ ಅಭಿಷೇಕ' 'ಕುದುರೆ ಸವಾರಿ' ಇರುತ್ತೆ. ಡ್ಯಾನ್ಸ್ ಇರುತ್ತೆ, ಮ್ಯೂಸಿಕ್ ಇರುತ್ತೆ. ನೀವು  ಕುಟುಂಬ ಸಮೇತವಾಗಿ ಕುಳಿತು ಆಶೀರ್ವದಿಸಬೇಕು. ಮಿಸ್ಸಾದ್ರೆ 'ಫಸ್ಟ್ ಶೋ'ಗಾದ್ರೂ ಬರಬಹುದು. ಆಗ ಕ್ಯೂನಲ್ಲಿ ನಿಂತ್ಕೊಂಡು ಆಶೀರ್ವದಿಸಿ. ಮೊದಲು ಇಷ್ಟ ಪಟ್ಟು, ಈಗ ಕಷ್ಟಪಟ್ಟು ಮಾಡ್ತಾ ಇದೀವಿ. ನಮ್ಮ ಈ ಪ್ರಯತ್ನದಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ, ಅಲ್ಪಸ್ವಲ್ಪ ಕಾಮಿಡಿನೂ ಇರುತ್ತೆ. ನಾನು ಕಾಳು ಹಾಕಿ ಪಟಾಯ್ಸಿದೀನಿ, ನೀವು ಅಕ್ಕಿಕಾಳು ಹಾಕಿ ಹರಸಿ. ಇನ್ಮೇಲೆ ನಾವಿಬ್ರೂ ಒಂದೇ ಕುಟುಂಬದವರ ಥರ ಇರ್ತೀವಿ. ನಮ್‌ದು ಸೂಪರ್ ಹಿಟ್ ಪೇರ್ ಆಗೋದಕ್ಕೆ ನಿಮ್ಮ ಬೆಂಬಲ, ಆಶೀರ್ವಾದ ಅಗತ್ಯ.

   ಹರಿ
harikannadaprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com