ಮಹಿಳೆಯರ ರಕ್ಷಣೆಗೆ ಹೊಸ ಕಾನೂನು ಬೇಕೇ?

ಮಹಿಳಾ ರಾಷ್ಟ್ರಪತಿಯೊಬ್ಬರ ಕಾಲಾವಧಿಯಲ್ಲಿ, 35 ಜನರಿಗೆ ಸಂವಿಧಾನದ 72ನೇ ವಿಧಿಯ ಅನ್ವಯ, ಕ್ಷಮಾದಾನ ದೊರೆಯಿತು. ಇದರಲ್ಲಿ 2-3 ಬಾರಿ ಮುಗ್ಧ ಹೆಂಗಸನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಶಿಕ್ಷೆಗೊಳಗಾದವರೂ ಇದ್ದಾರೆ. ಭಾರತದಲ್ಲಿ ಇಂತಹ ನಡೆಗಳನ್ನು ಮಾನ್ಯ ಮಾಡುವ ಜನರಿರುವಾಗ, ಹೊಸ ಕಾಯಿದೆಗಳ ರಚನೆ ಔಚಿತ್ಯ ಪರಾಮರ್ಶೆಗೊಳಪಡುವುದಿಲ್ಲವೇ? ಇತ್ತೀಚೆಗೆ ಮಹಿಳೆಯರ ಮೇಲೆ ಹಲವು ದೌರ್ಜನ್ಯ ಪ್ರಕರಣಗಳು ಭಾರತವನ್ನು ಪಾಕಿಸ್ತಾನದೊಟ್ಟಿಗೆ ಸಮೀಕರಿಸುವ ಮುನ್ನುಡಿ ಇಡಲಾಗುತ್ತಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿವೆ.
ಈ ಬರವಣಿಗೆಗೆ ಅಡಿಯಿಡುವ ಮುನ್ನ ನಡೆದ ಭಾರತೀಯ ಮಹಿಳೆ ಮೇಲಿನ ದೌರ್ಜನ್ಯ ಹಾಗೂ 2012ರ ಡಿಸೆಂಬರ್ 16ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಅಮಾನವೀಯ, ಅತ್ಯಾಚಾರದ ನಂತರ, ಭಾರತೀಯ ಯುವ ಸಮುದಾಯದಲ್ಲಿ ಲಿಂಗಭೇದವಿಲ್ಲದೆ, ಅತ್ಯಾಚಾರಿಗಳ ವಿರುದ್ದ, ದೊಡ್ಡಮಟ್ಟದ ಶಕ್ತಿಯುತ ಕಾಯಿದೆಯ ರಚನೆಗೆ, ವಿಸ್ತೃತ ಹೋರಾಟ ಉಗಮಿಸಿತು. ಆ ಘಟನೆಯ ನಂತರ ಭಾರತದ ಮೂಲೆ ಮೂಲೆಗಳಲ್ಲೂ, ಹಂತ ಹಂತವಾಗಿ, ಸ್ತ್ರೀಯರ ಮೇಲಿನ ರಾಕ್ಷಸ ರೂಪದ, ದೌರ್ಜನ್ಯ ಪ್ರಕರಣಗಳು ಸಾದೃಶವಾದವು. ಹೋರಾಟದ ತೀವ್ರತೆಗೆ ಮಣಿದ ಕೇಂದ್ರ ಸರ್ಕಾರ, ಮಹಿಳೆಯರ ಪರವಾದ ಮಸೂದೆಗೆ ಅನುಮೋದನೆ ಪಡೆಯಿತು. ಇದು ಆರೋಗ್ಯಕರ ಬೆಳವಣಿಗೆಯೇ ಸರಿ. ಆದರೆ ಇಲ್ಲಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಯಿತೇ ಅಥವಾ ಮಹಿಳೆಯರ ಪರವಾದ ಪ್ರಬಲವಾದ ಕಾನೂನುಗಳು ಹಿಂದೆ ಅಸ್ತಿತ್ವದಲ್ಲಿ ಇರಲಿಲ್ಲವೆ? ಮಹಿಳೆಯರ ರಕ್ಷಣೆಗೆ ನವ ಮಸೂದೆ ಅಥವಾ ಕಾನೂನಿನ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ವಾಸ್ತವ. ಪ್ರಸ್ತುತ ಮುಂಬೈ ಅತ್ಯಾಚಾರ ಪ್ರಕರಣ (2013) ಮತ್ತೆ ಹಳೆಯದೇ ಕೂಗಿಗೆ ಜೀವ ನೀಡಿದೆ. ಭಾರತದಲ್ಲಿ ಪ್ರಾಚೀನ ಭಾರತದಿಂದ ಸ್ವಾತಂತ್ರೋತ್ತರ ಭಾರತದವರೆಗೂ, ಮಹಿಳೆಯನ್ನು ಶೋಷಣೆ ಮಾಡುತ್ತಿರುವುದು ಸಾರ್ವತ್ರಿಕ ಸತ್ಯ. ಆದರೆ ಸ್ವಾತಂತ್ಯ್ರಾನಂತರ, ಭಾರತ ಸಂವಿಧಾನ ಮಹಿಳೆಯರಿಗೆ ವಿಶೇಷವಾದ ಸವಲತ್ತು ಹಾಗೂ ಕಾನೂನುಗಳನ್ನು ರೂಪಿಸಿದೆ. ಜಗತ್ತಿನ ಬೇರಾವುದೇ ದೇಶಕ್ಕೆ ಸಮೀಕರಿಸಲಾಗದಷ್ಟು ಮಹಿಳಾ ಕಾನೂನುಗಳು, ಭಾರತೀಯ ಸ್ತ್ರೀಯರ ಪಾಲಿಗಿವೆ. ಆದರೆ ಶೈಕ್ಷಣಿಕ ಜ್ಞಾನ ಹಾಗೂ ಮಾಹಿತಿ ಕೊರತೆಯಿಂದ ಮಹಿಳೆಯರು ತಮ್ಮ ಪರವಾದ ಎಲ್ಲಾ ಕಾಯಿದೆಗಳ ಸದ್ಬಳಕೆಯಿಂದ ವಂಚಿತರಾಗುತ್ತಿರುವುದು ಶೋಚನೀಯ ಅಂಶ.
1946 ರ ಸಂವಿಧಾನ ರಚನಾ ಸಭೆಯಲ್ಲಿ ಸೂಚಿಸಲ್ಪಟ್ಟ 7465 ತಿದ್ದುಪಡಿಗಳಲ್ಲಿ, ಚರ್ಚಿತವಾದ 2473 ವಿಷಯಗಳಲ್ಲಿ, 1/4 ಭಾಗದಷ್ಟು ಅಂಶಗಳು ಸ್ತ್ರೀ ಕೇಂದ್ರಿತವೇ ಆಗಿದ್ದವು ಎಂಬುದು ಸತ್ಯಾಂಶ.
ಮಹಿಳೆಯರಿಗಾಗಿಯೇ ನಿರ್ದಿಷ್ಟ ಶಾಸನಗಳಿಂದ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯಿದೆ 1956, ವರದಕ್ಷಿಣೆ ನಿಷೇಧ ಕಾಯಿದೆಯ, 1961 (1961 ರ 28) (1986 ರಲ್ಲಿ ತಿದ್ದುಪಡಿ), ಮಹಿಳೆಯರ(ನಿಷೇಧ) ಕಾಯಿದೆ, 1986ರ ಇನ್ಡೀಸೆಂಟ್ ಪ್ರಾತಿನಿದ್ಯ, ಸತಿ(ತಡೆಗಟ್ಟುವಿಕೆ) ಕಾಯಿದೆ, 1987 (1988 ರ 3) ಆಯೋಗ, ದೇಶೀಯ ಹಿಂಸಾಚಾರ ಕಾಯಿದೆಯಿಂದ ವುಮೆನ್, 2005 ರಕ್ಷಣೆಯ ಕಾಯಿದೆ, ಕೆಲಸದ ಸಮಯದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ನಿಷೇಧವನ್ನು ಮತ್ತು ರಿಡ್ರೆಸೆಲ್ ಕಾಯಿದೆ, 2013. ಮಹಿಳಾ ಸಂಬಂಧಿತ ಶಾಸನಗಳಿಂದ, ಭಾರತೀಯ ಪೀನಲ್ ಕೋಡ್ 1860, ಭಾರತೀಯ ಎವಿಡೆನ್ಸ್ ಕಾಯಿದೆ 1872, ಭಾರತೀಯ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆ 1872(1872 ರ 15), ವಿವಾಹಿತರು ಮಹಿಳೆಯರ ಆಸ್ತಿಯ ಕಾಯಿದೆ 1874 (1874 ರ 3), ಗಾರ್ಡಿಯನ್ಸ್ ಮತ್ತು ವಾರ್ಡ್ಸ್ನ ಕಾಯಿದೆ 1890, ವರ್ಕ್ ಮನ್ಸ್ ಕಾಂಪೆನ್ಸೇಷನ್ ಕಾಯಿದೆ 1923, ಮಹಿಳೆಯರ ಕಾಯಿದೆ ರಾಷ್ಟ್ರೀಯ ಆಯೋಗ 1990, ಮಾನವ ಹಕ್ಕುಗಳ ಕಾಯಿದೆ 2006, ಜುವೈನೈನ್ ಜಸ್ಟಿಸ್ ಕಾಯಿದೆ 2000, ಬಾಲಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯಿದೆ, ಪೂರ್ವ ನಟಾಲ್ ಡಯಾಗ್ನೋಸ್ಟಿಕ್ ತಂತ್ರಗಳು( ದುರುಪಯೋಗದ ನಿಯಂತ್ರಣ ಮತ್ತು ತಡೆಗಟ್ಟುವಿಕೆ) 1994 ಕಾಯಿದೆಯಡಿ, 14ನೇ ವಿಧಿ ಕಾನೂನಿನ ಮುಂದೆ ಎಲ್ಲರೂ ಸಮಾನರು, 15ನೇ ವಿಧಿ ರಾಜ್ಯವು ಲಿಂಗಾಧಾರಿತ ಭೇದ ಮಾಡುವಂತಿಲ್ಲ, 39ನೇ ವಿಧಿ ಸ್ತ್ರೀಯರ ಮತ್ತು ಪುರುಷರ ನಡುವಿನ ಸಮಾನತೆಯ ಹಕ್ಕು, 42 ನೇ ವಿಧಿ ಪ್ರಸೂತಿ ಪರಿಹಾರದ ಹಕ್ಕು, ಭಾರತದ ದಂಡ ಸಂಹಿತೆಯ 304ಬಿ(1) ಕಲಂ, 304ಬಿ(2) ಕಲಂ, 498ಎಕಲಂ,113ಎ ಕಲಂ, ಲಿಂಗ ಆಯ್ಕೆ ನಿಷೇಧ ಕಾನೂನು 1994 ಕಲಂ2(ಒ), ಕಲಂ 3ಎ, ಕಲಂ(4), 4(5) ಕಲಂ (22), ಹೆರಿಗೆ ಸೌಲಭ್ಯ ಅಧಿನಿಯಮ 1961, ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ಮಸೂದೆ 2005, ಭಾರತೀಯ ವಾರಸುದಾರಿಕೆ ಕಾಯಿದೆ 2005, ಭಾರತೀಯ ವಾರಸುದಾರಿಕೆ ಕಾಯಿದೆ ಕಲಂ (14), ಹಿಂದು ವಿವಾಹ ಕಾಯಿದೆ ಕಲಂ(13), ಭಾರತೀಯ ದಂಡ 1973 ಕಲಂ(125), 1986 ಮುಸ್ಲಿಂ ಮಹಿಳಾ ವಿಚ್ಚೇದನಾ ರಕ್ಷಣೆ.
1961 ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯಿದೆ ಜಾರಿಗೆ ಬಂದಿದ್ದರೂ, ಅದರ ಆಚರಣೆ ಅಂತ್ಯ ಕಂಡಿದೆಯೇ? 1929 ರಲ್ಲಿ ಬಾಲ್ಯ ವಿವಾಹ ಕಾಯಿದೆ ಅಸ್ತಿತ್ವ ಕಂಡಿದ್ದರೂ, ಇದು ಬುಡಸಮೇತ ಅದೃಶ್ಯವಾಗಿದೆಯೇ? ಖಂಡಿತ ಇಲ್ಲ. ಭಾರತದಲ್ಲಿ ಮೇಲಿನಂತೆ ಸ್ತ್ರೀ ಪರವಾದ ಅದಮ್ಯ ಮತ್ತು ಕಠಿಣ ಕಾಯಿದೆಗಳು ಸಂರಚನೆಯಾಗಿ, ಸಾಕಷ್ಟು ಕಾಲಘಟ್ಟವೇ ಕಳೆದುಹೋಗಿದೆ. ಆದರೆ ಅವುಗಳ ಆಚರಣೆ ಮಾತ್ರ ಸಕ್ರಮವಾಗಿಲ್ಲ. ಕಾಯಿದೆಗಳ ಅನುಷ್ಠಾನದಲ್ಲಿ ದೊಡ್ಡಮಟ್ಟದ ನೂನ್ಯತೆ ಇದೆ. ಇಚ್ಚಾಶಕ್ತಿಯ ಕೊರತೆ ಇದೆ. ಅನುಷ್ಟಾನಕ್ಕೆ ಬಾಹ್ಯ ತಡೆಗೋಡೆ ಇದೆ. ನಮ್ಮಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಲು ಯಾವುದೇ ನೂತನ ಕಾಯಿದೆಗಳ ರಚನೆ ಖಂಡಿತ ಅವಶ್ಯಕವಿಲ್ಲ. ಯಾವುದೇ ಹೊಸ ಕಾಯಿದೆಯ ಮುಖೇನ ಮಹಿಳೆಯರ ಮೇಲಿನ ಆಕ್ರಮಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಉದಾ: 2006 ನವ ಮಹಿಳಾ ದೌರ್ಜನ್ಯ ಕಾಯಿದೆ (ಪ್ರಸ್ತುತ ಮಹಿಳಾ ದೌರ್ಜನ್ಯ ಕಾಯಿದೆ 2010ರಲ್ಲಿ ತಿದ್ದುಪಡಿಯಾಗಿದೆ.) ಗಿಂತ ಪರಿಣಾಮಕಾರಿಯಾದ ಕಾಯಿದೆ ಬೇರೊಂದು ಕಾಯಿದೆಯ ಅವಶ್ಯಕತೆ ಖಂಡಿತ ಇಲ್ಲ. (ಮಹಿಳೆಯನ್ನು ಅನುಚಿತವಾಗಿ ದೃಷ್ಟಿಸಿದ್ದಕ್ಕೂ ಯಾವುದೇ ಸಾಕ್ಷ್ಯಗಳ ಹೊರತಾಗಿ ಕೇಸು ದಾಖಲಿಸಬಹುದು.) ಮಹಿಳಾ ರಾಷ್ಟ್ರಪತಿಯೊಬ್ಬರ ಕಾಲಾವಧಿಯಲ್ಲಿ, 35 ಜನರಿಗೆ ಸಂವಿಧಾನದ 72 ನೇ ವಿಧಿಯ ಅನ್ವಯ, ಕ್ಷಮಾದಾನ ದೊರೆಯಿತು. ಇದರಲ್ಲಿ 2-3 ಬಾರಿ ಮುಗ್ಧ ಹೆಂಗಸನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಶಿಕ್ಷೆಗೊಳಗಾದವರೂ ಇದ್ದಾರೆ. ಭಾರತದಲ್ಲಿ ಇಂತಹ ನಡೆಗಳನ್ನು ಮಾನ್ಯ ಮಾಡುವ ಜನರಿರುವಾಗ, ಹೊಸ ಕಾಯಿದೆಗಳ ರಚನೆ ಔಚಿತ್ಯ ಪರಾಮರ್ಶೆಗೊಳಪಡುವುದಿಲ್ಲವೇ? ಇತ್ತೀಚೆಗೆ ಮಹಿಳೆಯರ ಮೇಲೆ ಹಲವು ದೌರ್ಜನ್ಯ ಪ್ರಕರಣಗಳು ಭಾರತವನ್ನು ಪಾಕಿಸ್ತಾನದೊಟ್ಟಿಗೆ ಸಮೀಕರಿಸುವ ಮುನ್ನುಡಿ ಇಡಲಾಗುತ್ತಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿವೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಮೂದುಗೊಂಡ ಅತ್ಯಾಚಾರ ಪ್ರಕರಣಗಳು: 2008-5446, 2009- 5336, 2010-5484, 2011-7112, 2012- 8541. ಮೊನ್ನೆ ದೆಹಲಿ ಅತ್ಯಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಅಸ್ತಿತ್ವದಲ್ಲಿರುವ ಕಾಯಿದೆಗಳ ಅನುಸಾರವೇ ಎಂಬುದು ವಾಸ್ತವ.
ಆದ್ದರಿಂದ ಯಾವುದೇ ಹೊಸ ಕಾಯಿದೆಯ ರಚನೆಗೆ ಹೋರಾಟ ಮಾಡುವ ಬದಲು, ಈಗಾಗಲೇ ಸಂವಿಧಾನ ನೀಡಿರುವ ಶಾಸನಬದ್ದ ಕಾನೂನುಗಳ ವಾಸ್ತವ ಆಚರಣೆಗೆ, ಅವುಗಳ ಅನುಷ್ಟಾನದಲ್ಲಿನ ನ್ಯೂನತೆ ತಿದ್ದುಪಡಿಗೆ, ಹೋರಾಡುವುದು ಅನಿವಾರ್ಯ ನಡಾವಳಿಯಾಗಿದೆ.
-ಸುಧಾಕರ ಹೊಸಳ್ಳಿ
ಕರ್ನಾಟಕ ರಾಜ್ಯ ಮುಕ್ತ ವಿ.ವಿ., ಕಾರವಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


