ಮಹಿಳಾ ಆಯೋಗ ಮಾತಾಡಿದಾಗ...

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ನಮಸ್ಕಾರಗಳು. ನನ್ನ ಹೆಸರು ಮಹಿಳಾ ಆಯೋಗ. ನಿಮ್ಮ ಸರ್ಕಾರದಲ್ಲಿರುವ ವಿವಿಧ ಆಯೋಗಗಳಲ್ಲಿ ನಾನೂ ಒಬ್ಬಳು. ಬಹುಶಃ ನನ್ನ ಪರಿಚಯ ನಿಮಗಿದ್ದರೂ ಮರೆತಿರುತ್ತೀರಿ ಎನ್ನುವ ಭಾವನೆಯಿಂದ ನಿಮಗೆ ನನ್ನನ್ನು ಪರಿಚಯಿಸಿಕೊಳ್ಳುತ್ತಿದ್ದೇನೆ. ವಿಪರ್ಯಾಸ ಅಂದರೆ ಕಳೆದ 1 ವರ್ಷದಿಂದ ನಾನು ಅನಾಥಳಾಗಿದ್ದೇನೆ. ಸುಮಾರು 3 ಕೋಟಿ ಮಹಿಳೆಯರಿರುವ ಕರ್ನಾಟಕದಲ್ಲಿ ನನ್ನನ್ನು ಅಲಂಕರಿಸಲು ಯಾರು ದಿಕ್ಕಿಲ್ಲದಂತಾಗಿದೆ. ನನ್ನನ್ನು ಮುನ್ನಡೆಸಲು ಯಾರನ್ನು ನೇಮಿಸಬೇಕೆಂಬ ನಿಮ್ಮ ರಾಜಕೀಯ ಲೆಕ್ಕಾಚಾರದಲ್ಲಿ ನಾನು ಬಡವಳಾಗಿದ್ದೇನೆ. ನನ್ನ ಸಹಾಯವನ್ನು ಅರಸಿ ಬರುವವರ ಕಷ್ಟಗಳನ್ನು ಪರಿಹರಿಸಲು ಸಾಧ್ಯವಾಗದ ದಯನೀಯ ಸ್ಥಿತಿಯಲ್ಲಿ ನಾನಿದ್ದೇನೆ.
ಆದ್ದರಿಂದ ಈಗಲಾದರೂ ನನ್ನ ಸಮಸ್ಯೆಗಳತ್ತ ಕಿವಿಗೊಡುವಿರೆಂಬ ಆಶಯದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಇಂದು ಮಾರ್ಚ್ 8, ಮಹಿಳಾ ದಿನಾಚರಣೆ. ನನ್ನ ಸಮಸ್ಯೆಯನ್ನು ನಿಮ್ಮ ಮುಂದೆ ಬಿಚ್ಚಿಡಲು ಇದಕ್ಕಿಂತ ಸೂಕ್ತ ದಿನ ಮತ್ತೊಂದಿರಲಾರದು ಎನ್ನುವ ಆಶಯದಿಂದ ನನ್ನ ಕಷ್ಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನೊಬ್ಬಳ ನೋವಲ್ಲ. ಇದು ರಾಜ್ಯದ ಪ್ರತಿಯೊಬ್ಬ ಮಹಿಳೆಯ ನೋವಿನ ಕೂಗಾಗಿದೆ. ದಯವಿಟ್ಟು ಆಲಿಸಿ...
ನಾನು ರಾಜ್ಯದಲ್ಲಿ 1996ರಿಂದಲೂ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ ಇಂದಿಗೂ ನನ್ನ ಬಗ್ಗೆ ರಾಜಕೀಯ ಪಕ್ಷಗಳು ಹೊಂದಿರುವ ಧೋರಣೆ ಬದಲಾಗಿಲ್ಲ. ಆದ್ದರಿಂದ ಎಲ್ಲರೂ ನನ್ನನ್ನು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಆಯೋಗ ಎಂದು ಅಪಹಾಸ್ಯ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ರಾಜ್ಯದಲ್ಲಿರುವ ಮಹಿಳೆಯರ ಕಣ್ಣೀರನ್ನು ಒರೆಸಲು ನನ್ನನ್ನು ನಾಮ್ಕೆವಾಸ್ತೆಗೆ ಎಂಬಂತೆ ಹುಟ್ಟುಹಾಕಿದ್ದೀರಿ. ಮಹಿಳೆಯರ ಮೇಲೆ ಎಸಗುವ ಅಪರಾಧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುವ ಮತ್ತೊಂದು ಪೊಲೀಸ್ ಠಾಣೆ ಎನ್ನುವ ಹಣೆಪಟ್ಟಿಯನ್ನು ನನ್ನ ಮೇಲೆ ತೂಗು ಹಾಕಲಾಗಿದೆ.
ಇಂದು ನನ್ನನ್ನು ನೆಚ್ಚಿಕೊಂಡಿರುವ ಕೋಟ್ಯಂತರ ಮಹಿಳೆಯರ ದಿನ. ಇಂದು ನೀವೆಲ್ಲ ಸೇರಿ ಮಹಿಳೆಯರ ಬಗ್ಗೆ ಒಂದಷ್ಟು ಕನಿಕರ ತೋರುತ್ತೀರಿ. ಕೆಲವೊಂದು ಯೋಜನೆಗಳನ್ನು ಕಿವಿಯಿಲ್ಲದ ಗಾಳಿಯಲ್ಲಿ ತೂರಿಬಿಟ್ಟು ವಿಧಾನಸೌಧದತ್ತ ಮುಖ ಮಾಡುತ್ತೀರಿ. ಮತ್ತೆ ನನ್ನತ್ತ ತಿರುಗಿ ನೋಡುವುದು ಮುಂದಿನ ಮಾರ್ಚ್ 8ರಂದೇ. ಆ ಹೊತ್ತಿಗಾಗಲೇ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ ಅನೇಕ ಬರ್ಬರ ಕೃತ್ಯಗಳು ಜರುಗಿರುತ್ತವೆ. ಹೀಗೆ ಮಹಿಳೆಯರ ಮೇಲಾದ ಅತ್ಯಾಚಾರ, ದೌರ್ಜನ್ಯಗಳು, ಆಸಿಡ್ ದಾಳಿ, ಮತ್ತಿತರೆ ಕಿರುಕುಳಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಅಭಯ ನೀಡಿ ಮರೆತುಬಿಡುತ್ತೀರಿ.
ರಾಜ್ಯದಲ್ಲಿ ಮಹಿಳಾ ಆಯೋಗ ಕಳೆದ 1 ವರ್ಷದಿಂದ ಖಾಲಿ ಹೊಡೆಯುತ್ತಿದೆ. ನನ್ನ ಅಸ್ತಿತ್ವ ಇದ್ದು ಇಲ್ಲದಂತೆ ಎನ್ನುವ ವಿಪರ್ಯಾಸಕ್ಕೆ ಸಿಲುಕಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದ ಸಾವಿರರು ಮಹಿಳೆಯರು ಸಹಾಯಕ್ಕಾಗಿ ನನ್ನನ್ನು ಹುಡುಕಿಕೊಂಡು ಪ್ರತಿದಿನ ನನ್ನ ಕಚೇರಿಯ ಬಾಗಿಲಿಗೆ ಎಡತಾಕುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಿ.ಮಂಜುಳಾ ಅವರನ್ನು ನನ್ನನ್ನು ಅಲಂಕರಿಸಲು ನೇಮಿಸಲಾಗಿತ್ತು. ಇನ್ನೂ ದುರಂತ ಎಂದರೆ ಅವರು ಅಧಿಕಾರದಲ್ಲಿದ್ದಾಗ ಮಹಿಳೆಯರ ಕಣ್ಣೀರು ಒರೆಸುವುದಕ್ಕಿಂತ ಮಾಧ್ಯಮಗಳಲ್ಲಿ ರಾರಾಜಿಸಿದ್ದೇ ಹೆಚ್ಚು. ಅಂತಿಮವಾಗಿ ನನ್ನನ್ನು ಅಲಂಕರಿಸುದರಲ್ಲಿ ಯಾವುದೇ ಲಾಭವಿಲ್ಲ ಎನ್ನುವುದನ್ನು ಅರಿತು ರಾಜಿನಾಮೆ ಪತ್ರ ನೀಡಿ ಆಯೋಗಕ್ಕೆ ಕೊನೆಯ ನಮಸ್ಕಾರ ಹೇಳಿದರು. ಅಂದು ಖಾಲಿಯಾದ ನನ್ನ ಸ್ಥಾನ ಇಂದಿಗೂ ಅಧ್ಯಕ್ಷರಿಲ್ಲದೇ ಖಾಲಿ ಹೊಡೆಯುತ್ತಿದೆ.
ನನ್ನ ಸ್ಥಾನ ಅಧ್ಯಕ್ಷರಿಲ್ಲದೇ ಕಳೆದ ಒಂದು ವರ್ಷದಿಂದ ಖಾಲಿಯಿದೆ ಎನ್ನುವ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ರಾಜ್ಯದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಸಂಖ್ಯೆಗೆ ಕಡಿವಾಣ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ 2013-14 ರ ಸಾಲಿನಲ್ಲಿ 1591 ದೂರುಗಳು ದಾಖಲಾಗಿವೆ. ಆದರೆ, ಇತ್ಯರ್ಥ್ಯಗೊಂಡಿರುವ ಪ್ರಕರಣಗಳ ಸಂಖ್ಯೆ ಬೆರೆಳೆಣಿಕೆಯಷ್ಟು ಮಾತ್ರ.
ಪ್ರಸ್ತುತ ಅಧಿಕಾರದ ಗದ್ದುಗೆ ಏರಿರುವ ನಿಮ್ಮ ಕಾಂಗ್ರೆಸ್ ಸರ್ಕಾರ ಕೂಡ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸುವಲ್ಲಿ ಬಿಜೆಪಿ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಹಿಂದಿಕ್ಕಿದೆ. ಮಹಿಳಾಪರ ಸರ್ಕಾರ ಎನ್ನುತ್ತಲೇ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಲು ಮೀನಾಮೇಷ ಎಣಿಸುತ್ತಿದೆ. ಇನ್ನೂ ನಿಮ್ಮ ಪಕ್ಷದ ಯುವರಾಜ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಮಂತ್ರಿ ಗದ್ದುಗೆ ಏರಲು ಮಹಿಳೆಯರನ್ನು ಓಲೈಸುವಲ್ಲಿ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಮಹಿಳಾ ಸಮಾವೇಶಗಳಲ್ಲಿ ಭಾಗವಹಿಸಿ ಮಹಿಳೆಯರ ಸುರಕ್ಷತೆ ಬಗ್ಗೆ ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ನಾನು ಅಧ್ಯಕ್ಷರಿಲ್ಲದೇ ಕೊಳೆಯುತ್ತಿದ್ದೇನೆ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲದಂತಿದೆ.
ಇನ್ನೂ ನನ್ನ ಅಧಿಕಾರದ ಮಿತಿಯ ಬಗ್ಗೆ ಹೇಳುವುದಾದರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹೆಸರಿಗೇನೋ ಮಹಿಳಾ ಆಯೋಗ ಎಂದು ನಾಮಕರಣ ಮಾಡಿದ್ದೀರಿ. ನೆಲೆಯೂರಲು ಕಾವೇರಿ ಭವನದಲ್ಲಿ ಸೂರನ್ನೂ ಕಲ್ಪಿಸಿಕೊಟ್ಟಿದ್ದೀರಿ, ನನ್ನ ಸರಾಗ ಕ್ರಮಿಸುವಿಕೆಗಾಗಿ ಕಚೇರಿಯಲ್ಲಿ ಸಹಾಯಕರನ್ನೂ ನೇಮಿಸಿದ್ದೀರಿ, ಆದರೆ ಅಧಿಕಾರದ ಮಾತು ಬಂದಾಗ ಎಲ್ಲವೂ ಇದ್ದರೂ ಏನು ಇಲ್ಲ ಎನ್ನುವಂತಾಗಿದೆ. ಅಪರಾಧಗಳನ್ನು ದಾಖಲು ಮಾಡಿಕೊಂಡು ಅವರಿಗೊಂದು ಸಂಖ್ಯೆ ಕೊಟ್ಟು ಮುಂದೆ ಹೋಗಿ ಎನ್ನುವ ಕಾರ್ಯಕ್ಕೆ ನನ್ನನ್ನು ಕಟ್ಟಿಹಾಕಿದ್ದೀರಿ. ತಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಅಧಿಕಾರವನ್ನೆಲ್ಲ ಕಿತ್ತುಕೊಂಡಿದ್ದೀರಿ. ಪರಿಸ್ಥಿತಿ ಹೀಗಿರುವಾಗ ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ರೀತಿಯ ದೌರ್ಜನ್ಯಗಳಿಗೆ ತುತ್ತಾಗಿ ನ್ಯಾಯವನ್ನು ಅರಸಿಕೊಂಡು ಬರುವವರಿಗೆ ನಾನು ಉತ್ತರ ನೀಡುವುದಾದರೂ ಏನನ್ನು?
ಸರ್ಕಾರ ಸರ್ವಾಧಿಕಾರ ಕೊಟ್ಟಿಲ್ಲ ಎಂದು ನಿಮ್ಮತ್ತ ಬೊಟ್ಟು ಮಾಡಿ ತೋರಿಸಬೇಕೋ ಅಥವಾ ನಿಮ್ಮ ಕಷ್ಟಗಳಿಗೆ ನೀವೇ ಹೊಣೆ ಎಂದು ನ್ಯಾಯ ಅರಸಿ ಬರುವವರನ್ನು ತಿರಸ್ಕರಿಸಬೇಕೋ ಎಂದು ತಿಳಿಯುತ್ತಿಲ್ಲ.
ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಮಹಿಳೆಯರಿಂದಲೇ ನನ್ನ ಲಭ್ಯತೆಯ ಅಗತ್ಯ ರಾಜ್ಯದಲ್ಲಿಲ್ಲ ಎನ್ನುವ ಕೂಗು ಕೇಳಿ ಬಂದರೆ ಆಶ್ಚರ್ಯಪಡಬೇಕಿಲ್ಲ. ಆಗ ನನ್ನ ಪರಿಸ್ಥಿತಿ ಶವದ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಈಗಲಾದರೂ ಎಚ್ಚೆತ್ತು ರಾಜ್ಯದ ಮಹಿಳೆಯರ ನೋವಿನ ಕೂಗಿಗೆ ಸ್ಪಂದಿಸುತ್ತೀರಿ ಎನ್ನುವ ಆಶಾಭಾವದೊಂದಿಗೆ ನನ್ನ ಅಸಹಾಯಕತೆಯ ಸಾಲುಗಳಿಗೆ ಅಂತ್ಯ ಹಾಡುತ್ತಿದ್ದೇನೆ.
ಇಂತಿ ನಿಮ್ಮ,
ಕರ್ನಾಟಕ ರಾಜ್ಯ ಮಹಿಳಾ ಆಯೋಗ
- ರವಿಕುಮಾರ್ ಭದ್ರಾವತಿ
ravikumarpkumar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


