ಮಹಿಳಾ ದಿನಾಚರಣೆ ಆತ್ಮಾವಲೋಕನದ ದಿನವಾಗಲಿ

ನಾವು ಕುಟುಂಬ ಪ್ರಭೋಧನ ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿಯೊಬ್ಬರಿಗೂ ಅವಿಭಕ್ತ ಕುಟುಂಬ ವ್ಯವಸ್ಥೆಯ ಮಹತ್ವದ ಅರಿವು ತಲುಪುವಂತೆ ಮಾಡಬೇಕಾಗಿದೆ. ಈಗ ಮಹಿಳಾ ದಿನವನ್ನುಆಚರಿಸುತ್ತಿರುವಂತೆಯೇ ಮುಂದೆ ಪುರುಷ ದಿನಾಚರಣೆಯ ಬಗ್ಗೆ ಮಾತನಾಡುವ ಹಂತ ಬರಕೂಡದು. ಈ ಬಗ್ಗೆ ಚಿಂತನೆ ಆಗಬೇಕಿದೆ.
'ಸ್ತ್ರೀ ದೈವಸೃಷ್ಟಿಯಲ್ಲ, ಒಂದು ಅಸಂಗತ ಪವಾಡ' ಎಂದು ಯಾರೋ ಕವಿ ಹೇಳಿದ್ದ ಮಾತನ್ನೇ ಪುನರುಚ್ಚರಿಸುವುದು, ಮತ್ತೊಂದು ಕಡೆ ಆಕೆ ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುವುದು, ಪುಟಗಟ್ಟಲೇ ಬರೆಯುವುದು ಪ್ರತಿ ಮಹಿಳಾ ದಿನಾಚರಣೆಯಂದು ನಾವು ಮಾಡುತ್ತಲೇ ಬಂದಿದ್ದೇವೆ.
ಆದರೆ ಸ್ತ್ರೀ ದೌರ್ಜನ್ಯವನ್ನು ಸಂಪೂರ್ಣವಾಗಿ ತಡೆಯಬೇಕೆಂಬ ಪ್ರಯತ್ನದಲ್ಲಿ ನಾವೆಲ್ಲಿ ಎಡವಿದ್ದೇವೆ ಮತ್ತು ಅದನ್ನು ಹೇಗೆ ಸರಿಮಾಡಿಕೊಳ್ಳಬೇಕು ಎನ್ನುವುದು ಈ ಬಾರಿಯ ಮುಖ್ಯ ಚಿಂತನೆಯಾಗಬೇಕು. ಮತ್ತು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟು ಮುಂದಕ್ಕೆ ಸಾಗಬೇಕು. ಪ್ರತಿ ವರುಷದಂತೆ ಈ ವರುಷವೂ ಮಾರ್ಚ್ 8ರ ಮಹಿಳಾ ದಿನಾಚರಣೆ 'ಜೈ' ಎಂದು ಆಚರಿಸಿ ಒಂದೇ ದಿನಕ್ಕೆ ಮುಗಿಸುವ ಪರಿಪಾಠವಾಗದೇ, ಪ್ರತಿಯೊಬ್ಬರೂ ಆತ್ಮ ವಿಮರ್ಶೆ ಮಾಡಿಕೊಳ್ಳುವ ದಿನವಾಗಬೇಕು.
ಮಹಿಳೆ ಎನ್ನುವ ಪದವೇ ಈಗ 'ದೌರ್ಜನ್ಯಕ್ಕೊಳಗಾಗುವವರು' ಎನ್ನುವ ಅರ್ಥ ಪಡೆದಿದೆ. ಇಲ್ಲೊಂದು ಉದಾಹರಣೆ ಕೊಡಬೇಕೆನಿಸುತ್ತಿದೆ.
ಹಿಮಾಲಯದ ತಪ್ಪಲ ತಪೋಭೂಮಿಯಲ್ಲಿ ಪಾರ್ವತಿ ತಪಸ್ಸು ಮಾಡಿದ ಸ್ಥಳವೊಂದಿದೆ. ಅಲ್ಲಿ ಹೋದಾಗ, ಅದರ ಸ್ಥಳ ಮಹಾತ್ಮೆಯ ಬಗ್ಗೆ ಅಲ್ಲಿನವರೇ ಹೇಳುವಂತೆ, "ಶಿವ ಪಾರ್ವತಿಯನ್ನು ಸಂಸಾರದಲ್ಲಿ ನೋಯಿಸಿದ ಕಾರಣಕ್ಕೆ", ಆಕೆ ಅಲ್ಲಿ ಬಂದು ತಪಸ್ಸನ್ನಾಚರಿಸಿದಳಂತೆ. ಅಲ್ಲಿ ಅನೇಕ ಕಡೆ ಬಿಸಿ ನೀರಿನ ಬುಗ್ಗೆಗಳಿವೆ. ಪಾರ್ವತಿ ಸ್ನಾನ ಮಾಡಿ ತಲೆಯೊರೆಸಿಕೊಳ್ಳುವಾಗ ಎಲ್ಲೆಲ್ಲಿ ನೀರು ಬಿದ್ದಿದೆಯೋ ಅಲ್ಲೆಲ್ಲ ಬಿಸಿ ನೀರಿನ ಬುಗ್ಗೆಗಳು ಉದ್ಭವವಾಗಿವೆ. (ಅಥವಾ ಆಕೆ ಸುರಿಸುತ್ತಿದ್ದ ಕಣ್ಣಿರೋ ಗೊತ್ತಿಲ್ಲ). ಅಂದರೆ ಎಲ್ಲ ಕಡೆ ಮಹಿಳೆ ಅನ್ನೋ ಪದ ಬಂದರೆ ಸಾಕು ಅಲ್ಲಿ 'ನೋವು' ಅನ್ನೋದು ಇದ್ದೇ ಇದೆ. ಆಮೇಲೆ ಶಿವ ಬಂದು ಆಕೆಯನ್ನು ಅಲ್ಲಿಂದ ಕರೆದುಕೊಂಡ ಹೋದ ಎನ್ನುವುದು ಬೇರೇ ಮಾತು. ಆದರೆ ಈಗ ಅಂದಿನ ತರಹ ಮುನಿಸುಕೊಂಡು ತವರು ಮನೆಗೆ ಬರೋದು, ಗಂಡ ಬಂದು ವಾಪಾಸ್ಸು ಕರೆದುಕೊಂಡು ಹೋಗೋದು ಇಲ್ಲವೇ ಇಲ್ಲ.
ಅದು ಪರ್ಯಾವಸಾನವಾಗುವುದು ಒಂದು ಕೋರ್ಟ್ನಲ್ಲಿ ಕೇಸ್ ರೂಪದಲ್ಲೋ, ಅಥವಾ ಕೌನ್ಸಿಲಿಂಗ್ ಕೇಂದ್ರದಲ್ಲೋ! ಮೊನ್ನೆ ಪ್ರೇಮಿಗಳ ದಿನಾಚರಣೆಯ ದಿನವೇ ಕುಟುಂಬ ನ್ಯಾಯಾಲಯದಲ್ಲಿ ಸುಮಾರು 30 ಕೇಸುಗಳು 'ದೌರ್ಜನ್ಯ'ದ ವಿರುದ್ಧ ಮತ್ತು ಇನ್ನೊಂದು 30 ಅರ್ಜಿಗಳು ವಿಚ್ಛೇದನ ಕೇಳಿ ದಾಖಲಾಗಿರುವ ಮಾಹಿತಿಯಿದೆ.
ಈ ಕಾರಣಕ್ಕಾಗಿಯೇ ಈ ಇಡೀ ವರ್ಷ ಮಹಿಳೆಯರ ರಕ್ಷಣೆಗಾಗಿ ಆಂದೋಲನದ ರೀತಿಯಲ್ಲಿ ಯೋಜನೆ ರೂಪಿಸಬೇಕಾಗಿದೆ. ಎಲ್ಲ ಕಡೆ ಕಾರ್ಯಕ್ರಮಗಳಾಗಬೇಕಾಗಿದೆ. ಮಹಿಳೆಯರ ಜೊತೆ ಜೊತೆಗೆ ಪುರುಷರಿಗೂ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಅರಿವು ತುಂಬಬೇಕಿದೆ. ಇತ್ತೀಚೆಗಂತೂ ಐಟಿ, ಬಿಟಿ ಉದ್ಯೋಗಿಗಳಲ್ಲಿ, ಮಧ್ಯಮ ಮತ್ತು ಕೆಳಮಧ್ಯಮ ವರ್ಗದಲ್ಲಿ ಹೆಚ್ಚು ಕಂಡು ಬರುತ್ತಿರುವ ದೌರ್ಜನ್ಯಗಳನ್ನು ಕಡಿಮೆ ಮಾಡುವ ನಿಟ್ಟಿನತ್ತ ನಾವಿವತ್ತು ಹೆಜ್ಜೆ ಇಡಬೇಕಾಗಿದೆ. ಮಾಧ್ಯಮಗಳು ಇಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಬೇಕು. ಸಕಾರಾತ್ಮಕ ರೀತಿಯಲ್ಲಿ ಯೋಚಿಸುವಂಥ, ಚಿಂತನೆಗೆ ಹಚ್ಚುವಂಥ ಉತ್ತಮ ಕಾರ್ಯಕ್ರಮಗಳನ್ನು ಮಾಧ್ಯಮಗಳು ರೂಪಿಸಬೇಕು. ಸಮಾಜಕ್ಕೆ ಅರೋಗ್ಯಪೂರ್ಣ ಸಂದೇಶ ಹೋಗುವ ರೀತಿಯಲ್ಲಿ ಗುಂಪು- ಚರ್ಚೆಗಳಾಗಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಿಳಾ ವರ್ಗ ಮತ್ತೊಮ್ಮ ಪರಿತಪಿಸುವ ದಿನ ಬರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈ ಬಾರಿ ನಮ್ಮ ಪತ್ರಿಕೆಯು, ಮಹಿಳಾ ದೌರ್ಜನ್ಯ ತಡೆಯ ಬಗ್ಗೆ ಅನೇಕರನ್ನು ಮಾತನಾಡಿಸಿದಾಗ, ಅಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಆಗಿತ್ತು. ಇಂದಿನ ಸಮಾಜದಲ್ಲಿ ಸಂಸ್ಕಾರದ ಕೊರತೆ ಇದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರಲ್ಲಿ ಪೋಷಕರು, ಶಿಕ್ಷಕರು ಎಡವುತ್ತಿದ್ದಾರೆ. ಇದಕ್ಕೆ ಇಂದಿನ ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವವೂ ಕಾರಣವಿರಬಹುದು.
ಇನ್ನು ಭಾರತೀಯ ಸಂಸ್ಕೃತಿ ಗಟ್ಟಿಯಾಗುಳಿಯುವುದು ಒಟ್ಟು ಕುಟುಂಬಗಳಿಂದಲೇ ಹೊರತು ಒಡೆದ ಕುಟುಂಬಗಳಲ್ಲಲ್ಲ. ಮಕ್ಕಳು ದಾರಿ ತಪ್ಪುವುದೇ ಅಲ್ಲಿ. ಈ ಕಾರಣಕ್ಕಾಗಿ ನಾವು ಕುಟುಂಬ ಪ್ರಭೋಧನ ಕಾರ್ಯಕ್ರಮಗಳನ್ನು ರೂಪಿಸಿ ಪ್ರತಿಯೊಬ್ಬರಿಗೂ ಅವಿಭಕ್ತ ಕುಟುಂಬ ವ್ಯವಸ್ಥೆಯ ಮಹತ್ವದ ಅರಿವು ತಲುಪುವಂತೆ ಮಾಡಬೇಕಾಗಿದೆ. ಇಲ್ಲಿ ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕೆಗಳು ಸಹ ತಮ್ಮ ಜವಾಬ್ದಾರಿ ಮೆರೆಯಬಾಕಾಗಿದೆ.
ಬಹುತೇಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಹುಟ್ಟಿದಾಗಿನಿಂದ ಸಾಯುವವರೆಗೂ ಒಂದಲ್ಲಾ ಒಂದು ಸಂಕಷ್ಟ, ನೋವಿಗೆ ಒಳಗಾಗುತ್ತಿದ್ದಾರೆ. ಹೆಣ್ಣು ಭ್ರೂಣ ಹತ್ಯೆ, ಅಪ್ರಾಪ್ತ ಬಾಲಕಿಯರ ಹಿಂಸಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಉದ್ಯೋಗಸ್ಥ ಮಹಿಳೆಯರ ದುರ್ಬಳಕೆ, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸ್ತ್ರೀ ಶೋಷಣೆಗೆ ಒಳಗಾಗುತ್ತಿದ್ದಾಳೆ. ಸ್ತ್ರೀ ಎಂದರೆ "ಮಾತೃ ಸ್ವರೂಪಿ' ಎಂದು ತೋರಿಕೆಯ ಮಾತನಾಡುವ ಜನಗಳೇ ಇಂದು ಹೆಚ್ಚಾಗಿ ಸ್ತ್ರೀ ಶೋಷಣೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುತ್ತಿರುವುದು ನಮ್ಮ ದೇಶದ ಅತಿ ದೊಡ್ಡ ದುರಂತವಾಗಿದೆ.
ಶತಮಾನದ ಹಿಂದೆ ತಮಗಾದ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಮಹಿಳೆಯರು ತಮ್ಮ ಹೋರಾಟದ ದಿನವನ್ನಾಗಿ ಮಾರ್ಚ್-8 ಮಹಿಳಾ ದಿನಾಚರಣೆಯಾಗಿ ಆರಂಭಿಸಿದರು. ಆದರೂ ಮಹಿಳೆಯರ ನೋವು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಈ ಸಮಸ್ಯೆ ಬೇರು ಮಟ್ಟದಿಂದ ನಿರ್ಮೂಲನೆಯಾಗಬೇಕೆಂದರೆ ಎಲ್ಲರೂ ಈ ಕೆಲಸದಲ್ಲಿ ಕೈಜೋಡಿಸಿ ಭೇದಭಾವ ತೊಡೆಯಲು ಪ್ರಯತ್ನಿಸಬೇಕು.
- ಶೋಭಾ ಹೆಚ್.ಜಿ
ಸಂಪಾದಕರು,
ಸ್ತ್ರೀ ಜಾಗೃತಿ ಮಾಸಪತ್ರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


