ಕ್ರಿಸ್ತೀಕರಣ ಭರತನಾಟ್ಯಕ್ಕೆ ಮಾತ್ರವೇ ಸೀಮಿತವಲ್ಲ
ಪ್ರತಾಪ ಸಿಂಹ ಅವರ ಕ್ರಿಸ್ತೀಕರಣ ಕುರಿತ ಲೇಖನ ಓದಿ ಸುಮಾರು ಮೂರು ವರ್ಷಗಳ ಹಿಂದೆ ಆಗಿದ್ದ ಅನುಭವವೊಂದು ನೆನಪಿಗೆ ಬಂತು.
ಜರ್ಮನಿಯ ಸ್ಟುಟ್ಗಾರ್ಟ್ ನಗರಕ್ಕೆ ಎರಡು ವಾರಗಳ ಮಟ್ಟಿಗೆ ಕೆಲಸದ ನಿಮಿತ್ತ ಹೋಗಿದ್ದೆ. ಪ್ರತೀ ಬಾರಿ ಅಲ್ಲಿಗೆ ಹೋದಾಗಲೂ ಅಲ್ಲಿನ ಕ್ಯೋನಿಕ್ ಸ್ಟ್ರಾಸೆ (ರಾಜ ಬೀದಿ) ಯಲ್ಲಿ ಒಂದು ಸಂಜೆಯಾದರೂ ಸುತ್ತಾಡಲು ಹೋಗುವುದು ನನ್ನ ಅಭ್ಯಾಸ. ಸ್ಟುಟ್ಗಾರ್ಟ್ನ ಕೇಂದ್ರ ಭಾಗದಲ್ಲಿರುವ ಸುಮಾರು ಎರಡು ಕಿಲೋಮೀಟರ್ ಉದ್ದದ ಆ ರಸ್ತೆ ಅಲ್ಲಿನ ಮುಖ್ಯ ಶಾಪಿಂಗ್ ಹಾಗೂ ಹ್ಯಾಪನಿಂಗ್ ಸ್ಥಳವೂ ಹೌದು. ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದಿರುವುದರಿಂದ ಪ್ರಶಾಂತವಾಗಿ ಸಂಜೆಯ ಹೊತ್ತಿಗೆ ಸುತ್ತಾಡಲು ಹೇಳಿ ಮಾಡಿಸಿದ ಸ್ಥಳವದು.
ಸಂಜೆ ಸುಮಾರು 7.30- 8ಗಂಟೆ. ಮೇ ತಿಂಗಳ ಕೊನೆ. ಇನ್ನೂ ಕತ್ತಲಾಗಿರಲಿಲ್ಲ, ಮುಸ್ಸಂಜೆಯ ಬೆಳಕು. ಹೋಟೆಲ್ಗೆ ಹಿಂತಿರುಗಿ ಹೋಗಲು ರೈಲು ಹಿಡಿಯಲು ಹೊರಟಿದ್ದೆ. ಸುಮಾರು 50ರ ಪ್ರಾಯದ ಹೆಂಗಸೊಬ್ಬಳು ನನ್ನನ್ನು ಕರೆದು ನಿನ್ನಲ್ಲಿ ಒಂದೆರಡು ನಿಮಿಷ ಮಾತನಾಡಬಹುದಾ ಅಂತ ಕೇಳಿದಳು. ಜರ್ಮನಿಯ ಮಟ್ಟಿಗೆ ಇದು ತೀರಾ ವಿಚಿತ್ರ ಅನುಭವವೇ. ಜರ್ಮನರು ಪರಿಚಯವಿಲ್ಲದೆ ಮಾತನಾಡಿಸುವುದಿಲ್ಲ. ಬೆಳಗಿನ ಜಾವವಾದರೆ ಒಂದು ಮುಗುಳ್ನಕ್ಕು ಮೋರ್ಗನ್ (ಜರ್ಮನ್ನಲ್ಲಿ ಗುಡ್ ಮಾರ್ನಿಂಗ್ ಅಂತ) ಹೇಳಬಹುದು (ಅದೇ ಹೆಚ್ಚು). ಅದರ ಹೊರತಾಗಿ ಅವರು ಇನ್ನೊಬ್ಬರ ತಂಟೆಗೆ ಬರುವುದಿಲ್ಲ. ಪಕ್ಕದ ಫ್ರಾನ್ಸ್ನಲ್ಲಾದರೆ ವಿದೇಶಿಯರನ್ನು ಮಾತನಾಡಿಸಿ, ಮಂಕು ಬೂದಿ ಎರಚಿ, ಚಳ್ಳೇ ಹಣ್ಣು ತಿನ್ನಿಸಿ ಟೋಪಿ ಹಾಕುವ ಕೆಲವರಾದರೂ ಇದ್ದಾರೆ ಆದರೆ ಜರ್ಮನಿಯಲ್ಲಿ ಅಂತಹ ಸಾಧ್ಯತೆ ತೀರಾ ಕಡಿಮೆ.
ಹಾಗಾಗಿ ಈಕೆ ತೀರಾ ಅನಿವಾರ್ಯವಾದ ಯಾವುದೋ ಕಾರಣದಿಂದ ನನ್ನನ್ನು ನಿಲ್ಲಿಸಿರಬೇಕು ಅಂದುಕೊಂಡು ಸರಿ ತೊಂದರೆಯಿಲ್ಲ ಅಂದೆ.
ಆಕೆ ನೇರವಾಗಿ ನೀನು ಏನು ಕೆಲಸ ಮಾಡುತ್ತೀಯ ಸಾಫ್ಟ್ವೇರಾ ಅಂತ ಕೇಳಿದಳು. ಇದ್ಯಾವುದೋ ಬೆಂಗಳೂರಿನ ಮಹಿಳೆ ಕೇಳುವ ಪ್ರಶ್ನೆಯಂತಿದೆಯಲ್ಲಾ ಅಂತ ಮನಸ್ಸಿನಲ್ಲೇ ಅಂದುಕೊಂಡೆ. ನಾನು ಸಾಫ್ಟ್ವೇರ್ ಅಲ್ಲ, ನಾನು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತಂದೆ. ಅದಕ್ಕವಳು 'ನೀನು ಇಂಡಿಯನ್ ತಾನೆ? ಸಾಮಾನ್ಯವಾಗಿ ನಾನು ಇಲ್ಲಿ ಭೇಟಿಯಾದ ಇಂಡಿಯನ್ನರು ಸಾಫ್ಟ್ವೇರ್ ಕೆಲಸ ಮಾಡುತ್ತಾರೆ. ಅವರಿಗೆಲ್ಲಾ ತುಂಬಾ ಕೆಲಸದ ಒತ್ತಡ ಇರುತ್ತೆ. ತುಂಬಾ ಸ್ಟ್ರೆಸ್ ಆಗಿ ವೀಕ್ ಆಗಿರುತ್ತಾರೆ. ಈಗಿನ ಯುವಜನಾಂಗಕ್ಕೆ ಸ್ಟ್ರೆಸ್ ಒಂದು ದೊಡ್ಡ ತೊಂದರೆಯಾಗಿಬಿಟ್ಟಿದೆ. ನಿನಗೂ ತುಂಬಾ ಸ್ಟ್ರೆಸ್ ಇರಬಹುದಲ್ಲಾ' ಅಂತ ಮಾತು ಮುಂದುವರಿಸಿದಳು. ನನಗ್ಯಾಕೋ ಇದು ಹಾದಿ ತಪ್ಪುತ್ತಿದೆ ಅನ್ನಿಸಿತು. ನಮ್ಮ ದೇಶದಲ್ಲಿ ಇಂತಹ ಪ್ರಶ್ನೆಗಳು ಸಾಮಾನ್ಯ. ಆದರೆ ಜರ್ಮನರು ಸಾಮಾನ್ಯವಾಗಿ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದಿಲ್ಲ. ಅದೂ ಅಪರಿಚಿತರಲ್ಲಿ ಅಲ್ಲಿ ಹೊಸತಾಗಿ ಪರಿಚಯವಾದವರಲ್ಲಿ, ಮೊದಲ ಭೇಟಿಯಲ್ಲಿ ವೈಯಕ್ತಿಕ ಪ್ರಶ್ನೆಗಳು ಕೇಳುವ ಸಾಧ್ಯತೆಯೇ ಇಲ್ಲ. ಹಾಗಾಗಿ ನನಗೆ ಈ ಸಂಭಾಷಣೆ ಅಹಿತವೂ ಅನುಮಾನಾಸ್ಪದವೂ ಆಗಿ ತೋರಿತು. ನನಗೆ ತಡವಾಗುತ್ತದೆ ನಾನು ಹೊರಡಬೇಕು ಎಂದೆ. ಆಕೆ ಎರಡೇ ನಿಮಿಷ ಅಂತಂದು ಮಾತು ಮುಂದುವರಿಸಿದಳು. ನನ್ನ ಉತ್ತರಕ್ಕೂ ಕಾಯದೆ ನಿನಗೆ ಸ್ಟ್ರೆಸ್ ಆಗುತ್ತದೆ, ನಿನ್ನನ್ನು ನೋಡಿದಾಗ ನನಗೆ ಗೊತ್ತಾಗುತ್ತದೆ. ನಾವು ಸ್ಟ್ರೆಸ್ ರಿಲೀಫ್ಗೋಸ್ಕರ ಕೋರ್ಸ್ ಮಾಡ್ತೇವೆ. ವಾರಕ್ಕೆರಡು ಕ್ಲಾಸ್. ಮೊದಲಿಗೆ ಮೆಡಿಟೇಷನ್, ಯೋಗ ಮುಂತಾದ ಬೈಬಲ್ನಲ್ಲಿ ಹೇಳಿದ ಟೆಕ್ನಿಕ್ಗಳನ್ನು ಹೇಳಿಕೊಡುತ್ತೇವೆ. ಆಮೇಲೆ ಬೈಬಲ್ನಲ್ಲಿ ಹೇಳಿದ ಇತರ ಹಲವಾರು ಜೀವನ ಪಾಠಗಳನ್ನು ಹೇಳಿಕೊಡುತ್ತೇವೆ ಅಂತ ಹೇಳಿ ಅಡ್ರೆಸ್ ಕೊಟ್ಟಳು. ನಾನು ನೋಡೋಣ ಎಂದೆ. ಆಕೆ ಬರಲೇ ಬೇಕು ಇಲ್ಲದಿದ್ದರೆ ತುಂಬಾ ಕಳೆದುಕೊಳ್ಳುತ್ತಿ ಇತ್ಯಾದಿ ಪ್ರಾರಂಭಿಸಿದಳು. ನಾನು ಅಲ್ಲಿಂದ ಕಾಲ್ಕಿತ್ತೆ!
ಯೋಗಕ್ಕೂ ಬೈಬಲ್ಲಿಗೂ ಎಲ್ಲಿನ ಸಂಬಂಧವೆಂದು ಚರ್ಚಿಸಬೇಕೆಂದು ಅನಿಸಿದರೂ ಅಲ್ಲಿ ಆ ಸಂದರ್ಭದಲ್ಲಿ ಚರ್ಚಿಸುವ ಮನಸ್ಸಾಗಲಿಲ್ಲ. ಒಂದು ಬಾರಿ ಅವರ ತರಗತಿ ನಡೆಯುವಲ್ಲಿ ಹೋಗೋಣ ಅಂದುಕೊಂಡಿದ್ದೆ. ಆದರೆ ಎರಡು ದಿನದಲ್ಲೇ ಹಿಂತಿರುಗಿ ಬರಲಿದ್ದುದರಿಂದ ಅದನ್ನೂ ಮಾಡಲಾಗಲಿಲ್ಲ. ಅವಳಲ್ಲಿ ನನ್ನನ್ನು ಹೇಗಾದರೂ ಒಪ್ಪಿಸಬೇಕೆಂಬ ಹಠವಿತ್ತು. ಬೈಬಲ್ ಅನ್ನು ಪ್ರಚಾರ ಮಾಡುವ ತುಡಿತ ಸ್ಪಷ್ಟವಾಗಿ ಕಾಣುತ್ತಿತ್ತು. ಅದಕ್ಕೋಸ್ಕರ ಅವಳು ಯೋಗವನ್ನೂ ಬೈಬಲ್ಗೆ ಸೇರಿಸಿದ್ದಳು.
ಹಾಗಾಗಿ ಕ್ರಿಸ್ತೀಕರಣ ಭರತನಾಟ್ಯಕ್ಕೆ ಸೀಮಿತವಾಗಿಲ್ಲ. ಭಾರತೀಯ ಯುವಜನಾಂಗವನ್ನು ಕ್ರಿಸ್ತೀಕರಣಗೊಳಿಸಲಿಕ್ಕೆ ಧ್ಯಾನ ಹಾಗೂ ಯೋಗವೂ ಕ್ರಿಸ್ತೀಕರಣವಾಗುತ್ತಿವೆ! ಇದನ್ನು ಬಾಯ್ಬಿಟ್ಟು ಹೇಳಿದರೆ ಎಲ್ಲಿ ಕೇಸರಿ ಎಂಬ ಹಣೆಪಟ್ಟಿ ಸಿಕ್ಕಿಬಿಡುತ್ತದೋ ಎಂಬ ಭಯದಲ್ಲಿ ಹಲವರು, ಎಲ್ಲಿ ನಮ್ಮ ಬುದ್ಧಿಜೀವಿ ಹಣೆಪಟ್ಟಿ ಕಳೆದು ಹೋಗುವುದೋ ಎಂದು ಕೆಲವರು, ಇನ್ನು ಎಲ್ಲಿ ವೋಟು ಕಳೆದು ಹೋಗುವುದೋ ಎಂದು ರಾಜಕೀಯ ಪ್ರಬಲರು, ಹೀಗೆ ಎಲ್ಲರೂ ಮೌನಕ್ಕೆ ಶರಣಾಗುತ್ತಿರುವುದು ಖೇದಕರ.
-ಸಮೀರ ದಾಮ್ಲೆ, ಬ್ಯಾಂಕಾಕ್
sameera.damle@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

