ರಾಜಕೀಯ ಅಪರಾಧಿಕರಣ ತಡೆಯುವ ಮೊದಲ ಮೆಟ್ಟಿಲು ಬಿ-ಫಾರಂ
ಅಪರಾಧಿಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರವನ್ನು ಶುದ್ಧೀಕರಿಸಲು ಸುಪ್ರೀಂ ಕೋರ್ಟ್ ಕಳೆದ ವರ್ಷದ ಜುಲೈ 10ರಂದು ಆದೇಶವೊಂದನ್ನು ಹೊರಡಿಸಿತ್ತು. ಆ ಆದೇಶ ಹೀಗಿದೆ: ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿಯೆಂದು ಯಾವುದೇ ನ್ಯಾಯಾಲಯದಲ್ಲಿ ಸಾಬೀತಾದ ದಿನದಿಂದಲೇ ಆ ಜನಪ್ರತಿನಿಧಿ ತನ್ನ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ ಹಾಗೂ ಅಪರಾಧ ಪ್ರಕರಣವನ್ನು ಹೊಂದಿರುವವರು ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಇದು ಹಣಬಲ-ತೋಳ್ಬಲಕ್ಕೆ ಮಣೆ ಹಾಕುತ್ತಿದ್ದ ರಾಜಕೀಯ ಪಕ್ಷಗಳಿಗೂ, ಜನಪ್ರತಿನಿಧಿಯ ಮುಖವಾಡ ಧರಿಸಿ ತಮ್ಮ ಅಪರಾಧಗಳನ್ನು ಮುಚ್ಚಿ ಹಾಕಿಕೊಳ್ಳುತ್ತಿದ್ದವರಿಗೂ ನುಂಗಲಾರದ ತುತ್ತಾಗಿದ್ದಂತೂ ನಿಜ.
ಆನಂತರದಲ್ಲಿ ಕೇಂದ್ರ ಸರ್ಕಾರ 'ಸುಗ್ರೀವಾಜ್ಞೆ'ಯ ಮೂಲಕ ಸುಪ್ರೀಂ ಕೋರ್ಟ್ನ ಆದೇಶದ ಮೇಲೆ ಸವಾರಿ ಮಾಡಲು ಹೊರಟಿದ್ದು, ಪ್ರತಿಭಾ ಪಾಟೀಲ್ ಅವರಂತೆ ಎಲ್ಲದಕ್ಕೂ ತಲೆಯಾಡಿಸುವವನಲ್ಲ ಎಂಬುದನ್ನು ಸಾಬೀತು ಪಡಿಸುವವರಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಲು ನಿರಾಕರಿಸಿದ್ದು, ಆದದ್ದೆಲ್ಲಾ ಒಳ್ಳೆಯದಕ್ಕೆ ಎಂಬಂತಿದ್ದ ವಿರೋಧ ಪಕ್ಷಗಳು ರಾಷ್ಟ್ರಪತಿ ತಿರಸ್ಕಾರದ ನಂತರ ವಿರೋಧ ವ್ಯಕ್ತಪಡಿಸಿದ್ದು, ಆಡಳಿತಾರೂಢ ಪಕ್ಷದ ಉಪಾಧ್ಯಕ್ಷರೇ ಸುಗ್ರೀವಾಜ್ಞೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯಿರಿ ಎಂದಿದ್ದು ಹೀಗೆ ರಾಜಕೀಯ ಹೈಡ್ರಾಮಾಗಳು ನಡೆದು ಹೋದುವು. ಈ ನಡುವೆ ಆದೇಶದ ನಂತರ ಜೈಲು ಸೇರಿದ ಮೊದಲಿಗನಾಗಿ ಲಾಲು ಪ್ರಸಾದ್ ಯಾದವ್ ಸುದ್ದಿಯಾದರೆ, ದೇಶಾದ್ಯಂತ ರಾಜಕೀಯ ಅಪರಾಧಿಕರಣಕ್ಕೆ ಬಿಸಿ ತಟ್ಟಲು ಆರಂಭವಾಯಿತು.
'ಆರೋಪವಿದೆಯಷ್ಟೇ, ಇನ್ನೂ ಸಾಬೀತಾಗಿಲ್ಲ' ಎಂದು ಹಲವರು ಮುಂದಿನ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದರೆ, ಇದೇ ನೆಪವೊಡ್ಡಿ ರಾಜಕೀಯ ಪಕ್ಷಗಳೂ ಬಿ-ಫಾರಂ ನೀಡಲು ಮುಂದಾಗಿವೆ. ಟಿಕೆಟ್ಗಾಗಿನ ಜಟಾಪಟಿಯ ನಡುವೆ ವರ್ಷದ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರೆತಂತಿದ್ದ ರಾಜಕೀಯ ಪಕ್ಷಗಳಿಗೂ, ಟಿಕೆಟ್ ಆಕಾಂಕ್ಷಿಗಳಿಗೂ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ. "ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಳಂಕಿತ ಸಂಸದರು, ಶಾಸಕರ ವಿರುದ್ಧದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಳಿಸಿ" ಎಂದು ಕೆಳ ನ್ಯಾಯಾಲಯಗಳಿಗೆ ಗಡುವು ವಿಧಿಸುವ ಮೂಲಕ ಬಿ-ಫಾರಂ ನೀಡುವಾಗ ಎಚ್ಚರಿಕೆ ಎಂಬ ಸಂದೇಶವನ್ನೂ ನೀಡಿದೆ. ಬಹುತೇಕ ರಾಜಕೀಯ ಪಕ್ಷಗಳು ನಿಷ್ಠಾವಂತ ಕಾರ್ಯಕರ್ತರನ್ನು, ಪ್ರಾಮಾಣಿಕರನ್ನು ಕಡೆಗಣಿಸಿ ಧರ್ಮ, ಜಾತಿಯ ಜೊತೆಗೆ ಹಣಬಲ-ತೋಳ್ಬಲಕ್ಕೆ ಪ್ರಾಶಸ್ತ್ಯ ನೀಡಿ ಬಿ-ಫಾರಂ ನೀಡುತ್ತಿದ್ದುದರಿಂದ ಕ್ರಿಮಿನಲ್ ಹಿನ್ನೆಲೆಯುಳ್ಳವರೂ ರಾಜಕೀಯ ರಂಗ ಪ್ರವೇಶಿಸುವುದು ಸಾಮಾನ್ಯವಾಗಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳ ಕೆಲವು ನಿದರ್ಶನಗಳು ಇಲ್ಲಿವೆ ನೋಡಿ:
-ಫೂಲನ್ ದೇವಿ. ರಕ್ತಸಿಕ್ತ ಚಂಬಲ್ ಕಣಿಣಿವೆಯಲ್ಲಿ ನಟೋರಿಯಸ್ ಆಗಿ ಬೆಳೆದ ಡಕಾಯಿತ ರಾಣಿ. 1981ರಲ್ಲಿ ಬೆಹ್ಮಾಯ್ನಲ್ಲಿ ನಡೆಸಿದ ಇಪತ್ತೆರಡು ಜನರ ಸಾಮೂಹಿಕ ಹತ್ಯೆಯೇ ಸಾಕು ಈಕೆ ಮೆರೆದ ಪರಿಗೆ. ಇಂತಹ ಫೂಲನ್ ದೇವಿಗೂ ರಾಜಕೀಯ ಕೈ ಬೀಸಿ ಕರೆಯಿತು. ಹೀಗಾಗಿಯೇ ಪೊಲೀಸರ ಮುಂದೆ ಶರಣಾಗಿ, ಹನ್ನೊಂದು ವರ್ಷ ಜೈಲಲ್ಲಿ ಕಳೆದಳು. ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ಈಕೆಯ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಬಿ-ಫಾರಂ ನೀಡಿತು. 1996, 1999ರಲ್ಲಿ ಜನರಿಂದ ನೇರವಾಗಿ ಲೋಕಸಭೆಗೆ ಆಯ್ಕೆಯಾದ ಫೂಲನ್, 2001ರಲ್ಲಿ ಕೊಲೆಯಾದಾಗಲೂ ಲೋಕಸಭಾ ಸದಸ್ಯೆಯೇ ಆಗಿದ್ದಳು.
-ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್. ಶಾಸಕರೊಬ್ಬರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವನು. ಇದರಿಂದಾಗಿಯೇ 2009ರ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗ ಅವಕಾಶ ಮಾಡಿಕೊಡಲಿಲ್ಲ. 1991ರಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗುತ್ತಿದ್ದ ಪಪ್ಪು ಯಾದವ್ಗೆ ರಾಜಕಾರಣದಿಂದ ಹೊರಗಿರುವುದು ಇಷ್ಟವಿರಲಿಲ್ಲ. ಹೀಗಾಗಿಯೇ ತಾನು ಸ್ಪರ್ಧಿಸುತ್ತಿದ್ದ ಬಿಹಾರದ ಪೂರ್ಣಿಯಾ ಕ್ಷೇತ್ರದಿಂದ ತನ್ನ ತಾಯಿ ಶಾಂತಿಪ್ರಿಯ ಅವರನ್ನು ಚುನಾವಣಾ ಕಣಕ್ಕಿಳಿಸಿದ್ದ.
-ಜೈಲಿನಿಂದ ಕ್ಯಾಬಿನೆಟ್ಗೆ ಬಂದ ಹೆಗ್ಗಳಿಕೆ ರಾಜು ಭಯ್ಯಾನದ್ದು. 2002ರಲ್ಲಿ ಮಾಯಾವತಿ ಸರ್ಕಾರ ಭಯೋತ್ಪಾದಕ ಎಂದು ಆರೋಪಿಸಿ ಪೋಟಾ (ಭಯೋತ್ಪಾದನೆ ತಡೆ ಕಾಯ್ದೆ) ಕಾಯ್ದೆಯಡಿ ಜೈಲಿಗೆ ಕಳುಹಿಸಿತ್ತು. ಮಾಯಾವತಿಯವರ ನಂತರ ಮುಲಾಯಂ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಗಾದಿಗೇರಿದರು. ಅಧಿಕಾರ ಹಿಡಿದ ಒಂದು ತಾಸಿನೊಳಗೆ ರಾಜುಭಯ್ಯಾ ಅಲಿಯಾಸ್ ರಘುರಾಜ್ ಪ್ರತಾಪ್ಸಿಂಗ್ನನ್ನು ಬಿಡುಗಡೆಗೊಳಿಸಿದರು. ನಂತರ ಸಚಿವ ಸ್ಥಾನದ ಜೊತೆಗೆ 'ಜಡ್' ಸೆಕ್ಯುರಿಟಿ ಸಹ ನೀಡಿದರು. ಇದೇ ರಾಜುಭಯ್ಯಾ ಮನೆ ಮೇಲೆ ದಾಳಿ ನಡೆಸಿದ್ದ ಆರ್.ಎಸ್.ಪಾಂಡೆ ಎಂಬ ಪೊಲೀಸ್ ಅಧಿಕಾರಿ ರಸ್ತೆ ಅಪಘಾತದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹತರಾದರು. ಪಾಂಡೆ ಸಾವಿನ ಪ್ರಕರಣದ ಜೊತೆಗೆ ಡಿ.ಎಸ್.ಪಿ.ಯಾಗಿದ್ದ ಜ್ಹಿಯಾ ಉಲ್ ಹಕ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇವೆರಡೂ ರಾಜುಭಯ್ಯಾ ಸುತ್ತ ಗಿರಗಿಟ್ಟಲೆ ಹೊಡೆಯುತ್ತಿವೆ.
ಮಹಮ್ಮದ್ ಶಹಬುದ್ದೀನ್, ಶಿಬು ಸೊರೇನ್, ಸಾಧುಶೆಟ್ಟಿ... ಹೀಗೆ ಭಾರತದ ರಾಜಕಾರಣದಲ್ಲಿ ಕ್ರಿಮಿನಲ್ ಪ್ರಕರಣ ಹೊಂದಿರುವವರು ಅಧಿಕಾರದ ಗದ್ದುಗೆಯ ಬಳಿ ಸುಳಿದಿರುವ ಹಲವಾರು ನಿದರ್ಶನಗಳಿವೆ. ದಶಕಗಳ ಹಿಂದೆ ರಾಜಕಾರಣಿಗಳ ಎಡಗೈ, ಬಲಗೈಯಂತಿದ್ದವರು ಇಂದು ನೇರ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ನೂರಿಪ್ಪತ್ತೊಂದು ಕೋಟಿ ಭಾರತೀಯರನ್ನು ಪ್ರತಿನಿಧಿಸುವುದು ಐದು ಸಾವಿರಕ್ಕಿಂತ ತುಸು ಹೆಚ್ಚಿನ ಜನರಷ್ಟೇ(ಸ್ಥಳೀಯ ಸಂಸ್ಥೆಗಳನ್ನು ಹೊರಗಿಟ್ಟು). ದೇಶದ ಆಗು-ಹೋಗುಗಳನ್ನು ನಿರ್ಧರಿಸುವ ಇಷ್ಟೇ ಜನರಲ್ಲಿ ಅಪರಾಧಿಗಳು ಹೆಚ್ಚುತ್ತಿರುವುದು ಈಗಿನ ಆತಂಕದ ವಿಚಾರ. ದೇಶದ ಸಾಕ್ಷರತಾ ಪ್ರಮಾಣ ಶೇ.74.04ರಷ್ಟು ಇದ್ದರೇನು ಪ್ರಯೋಜನ? ಒಟ್ಟಾರೆ ಜನಪ್ರತಿನಿಧಿಗಳಲ್ಲಿ ಶೇ.30ರಷ್ಟು ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದವರೇ ಇದ್ದಾರೆ. ಆಡಳಿತದಲ್ಲಿ, ಮುಖ್ಯವಾಗಿ ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಬೀರುವಲ್ಲಿ ಇವರದ್ದು ಎತ್ತಿದ ಕೈ. ಅಪರಾಧ ಹಿನ್ನೆಲೆಯನ್ನು ಯಾರೇ ಪ್ರಶ್ನಿಸಿದರೂ ನಮಗೆ ಜನಾದೇಶವಿದೆ ಎಂಬ ಸಮರ್ಥನೆಯನ್ನು ಕೊಡುತ್ತಾರೆ.
ಕಳೆದ ರಾಷ್ಟ್ರಪತಿ ಚುನಾವಣೆಯನ್ನೊಮ್ಮೆ ಗಮನಿಸಿ. ಆಗ ಮತ ಚಲಾಯಿಸಿದವರಲ್ಲಿ 1,448 ಮಂದಿ ಅಪರಾಧ ಪ್ರಕರಣಗಳನ್ನು ಹೊಂದಿದ್ದರು. ಲೋಕಸಭೆ ಮತ್ತು ವಿಧಾನಸಭೆಗಳು ಸೇರಿ ಒಟ್ಟು ಮತ ಚಲಾಯಿಸಿದವರು 4,896 ಸದಸ್ಯರಷ್ಟೇ. ಇದರಲ್ಲಿ 641 ಮಂದಿಯ ಮೇಲೆ ಅಪಹರಣ, ಸುಲಿಗೆ, ಕೊಲೆ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಇದೇ ರಾಜಕೀಯ ಅಪರಾಧೀಕರಣಗೊಳ್ಳುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ.
ಹೀಗೆ ಕ್ಯಾನ್ಸರ್ನಂತೆ ದೇಶಾದ್ಯಂತ ಹಬ್ಬುತ್ತಿರುವ ರಾಜಕೀಯ ಅಪರಾಧಿಕರಣವನ್ನು ಬೇರು ಸಹಿತ ಕಿತ್ತು ಹಾಕುವ ಸಲುವಾಗಿ ಸುಪ್ರೀಂ ಕೋರ್ಟ್ ದಿಟ್ಟ ಆದೇಶವನ್ನು ಹೊರಡಿಸಿದೆ. ರಾಜಕೀಯ ಪಕ್ಷಗಳೂ ಬಿ-ಫಾರಂ ನೀಡುವಾಗ ಕಳಂಕಿತರನ್ನು ದೂರವಿಡುವ ನಿರ್ಧಾರ ಕೈಗೊಂಡರೆ ಸವೋಚ್ಚ ನ್ಯಾಯಾಲಯದ ಆಶಯಕ್ಕೂ ಗೌರವ ನೀಡಿದಂತಾಗುತ್ತದೆ. ಆದರೆ ರಾಜಕೀಯ ಪಕ್ಷಗಳು ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಮಣೆ ಹಾಕುತ್ತಿರುವುದು ಹಾಗೂ ಟಿಕೆಟ್ಗಾಗಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿರುವ ಆಕಾಂಕ್ಷಿಗಳ ಚಟುವಟಿಕೆಗಳನ್ನು ಗಮನಿಸಿದರೆ ಕಳೆದ ವರ್ಷದ ಸುಪ್ರೀಂ ಕೋರ್ಟ್ನ ಆದೇಶವನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ. "ಆರೋಪ ಸಾಬೀತಾಗಿಲ್ಲ" ಎಂಬ ನೆಪವೊಡ್ಡಿ ರಾಜಕೀಯ ಚಟುವಟಿಕೆಯಲ್ಲಿ ನಿರತರಾಗಿದ್ದವರಿಗೆ ಸೋಮವಾರ ನ್ಯಾಯಾಲಯ ನೀಡಿರುವ ಆದೇಶ ಬಿಸಿತುಪ್ಪವೇ ಆಗಿದೆ.
ಕಳಂಕಿತರಿಗೆ, ಅಪರಾಧ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಒಂದು ವರ್ಷದೊಳಗೆ ವಿಚಾರಣೆ ನಡೆದು ಆರೋಪ ಸಾಬೀತಾದಲ್ಲಿ ಸದಸ್ಯತ್ವ ಕಳೆದುಕೊಳ್ಳುವ ಸಂಭವವಿರುತ್ತದೆ. ಪುನಃ ಉಪಚುನಾವಣೆಗಳ ಭರಾಟೆ ಆರಂಭ, ನೀತಿ ಸಂಹಿತೆಯಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗುವುದು, ಸಾಮಾನ್ಯ ಜನರ ಮೇಲೆ ಹೊರೆ...ಇವೆಲ್ಲವೂ ತಪ್ಪಬೇಕಿದ್ದರೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇಲೆ ಗೌರವವಿದ್ದರೆ ಎಲ್ಲಾ ರಾಜಕೀಯ ಪಕ್ಷಗಳು ಬಿ-ಫಾರಂ ನೀಡುವ ಮುನ್ನ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಆ ಮೂಲಕ ರಾಜಕೀಯ ಅಪರಾಧಿಕರಣವನ್ನು ಬುಡಸಮೇತ ಕಿತ್ತೊಗೆಯಬಹುದು.
- ಗೋಪಾಲಕೃಷ್ಣ
gkckm@yahoo.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

