ಅಂಕಣಗಳು

ಹಿಟ್ಲರ್ ನೆರಳು ನಿಜಕ್ಕೂ ಯಾರಲ್ಲಿ ಕಾಣುವುದು ಗೊತ್ತೇ ರಾಹುಲ್‌ಜಿ?

ಹಿಟ್ಲರ್ ನೆರಳು ನಿಜಕ್ಕೂ ಯಾರಲ್ಲಿ ಕಾಣುವುದು ಗೊತ್ತೇ ರಾಹುಲ್‌ಜಿ?
Published On :

ಗುಜರಾತ್‌ನಲ್ಲಿ ಪ್ರಚಾರಾಂದೋಲನದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಭಾಷಣದ ಮುಖ್ಯಾಂಶಗಳನ್ನು ಕೇಳಿಸಿಕೊಂಡೆ. ಅವರು ನರೇಂದ್ರ ಮೋದಿಯವರನ್ನು ಹಿಟ್ಲರ್‌ಗೆ ಹೋಲಿಸಿದ್ದಾರೆ. ಅವರ ಅಜ್ಜಿ ಇಂದಿರಾ ಗಾಂಧಿಯವರು 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ರಾಹುಲ್ ಮಗುವಾಗಿದ್ದರಷ್ಟೆ. ತುರ್ತು ಪರಿಸ್ಥಿತಿಯ ಆ 19 ತಿಂಗಳಲ್ಲಿ ಏನೆಲ್ಲ ನಡೆಯಿತು ಎಂಬುದು ಅವರಿಗೆ ಗೊತ್ತಿರಲಿಕ್ಕೆ ಸಾಕು. ನಾನಾಗ ಕಾಲೇಜು ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿ ಒಕ್ಕೂಟದ ನಾಯಕನಾಗಿ, ಜೆಪಿ ಚಳವಳಿಯ ಕಾರ್ಯಕರ್ತನಾಗಿ ನಾನು 19 ತಿಂಗಳು ಜೈಲುವಾಸ ಅನುಭವಿಸಿದ್ದೆ. ಆಗ ತುರ್ತು ಪರಿಸ್ಥಿತಿ ವಿರೋಧಿಸಿ ರಹಸ್ಯವಾಗಿ ಪ್ರಸಾರವಾಗುತ್ತಿದ್ದ ಸಾಹಿತ್ಯ ಸರಕುಗಳಿದ್ದವು. 'ಎರಡು ತುರ್ತು ಪರಿಸ್ಥಿತಿಗಳ ಕತೆ' ಎಂಬ ಶೀರ್ಷಿಕೆಯ ಬರಹವೊಂದು ಬಹಳ ಹರಿದಾಡಿತ್ತು. ಅದನ್ನು ಬರೆದವರು ಎಲ್. ಕೆ. ಆಡ್ವಾಣಿಯವರು ಎಂಬುದು ನಂತರದಲ್ಲಿ ನನಗೆ ತಿಳಿಯಿತು. ಆಡ್ವಾಣಿಜೀ ಅವರ ಜೈಲುವಾಸದ ಅನುಭವದ ಪುಸ್ತಕ, 'ಅ ಪ್ರಿಸನರ್ಸ್ ಸ್ಕ್ರ್ಯಾಪ್‌ಬುಕ್‌'ನಲ್ಲೂ ಈ ಬರಹ ಅಡಕವಾಗಿದೆ.  
ನಾಜಿ ಜರ್ಮನಿಯ ಇತಿಹಾಸದ ಕುರಿತು ವಿಲಿಯಮ್ ಶಿರರ್ ಬರೆದ 'ದ ರೈಸ್ ಆ್ಯಂಡ್ ಫಾಲ್ ಆಫ್ ಥರ್ಡ್ ರೈಚ್‌' ಎಂಬ ಪುಸ್ತಕವನ್ನು ಆಧರಿಸಿ ಆ ಬರಹ ರೂಪುಗೊಂಡಿತ್ತು. ಜೈಲಿನಲ್ಲಿರುವಾಗಲೇ ಆ ಪುಸ್ತಕದ ಪ್ರತಿಯೊಂದನ್ನು ಪಡೆದು ಕೆಲ ವಾರಗಳನ್ನೇ ಅದರ ಓದಿಗೆ ಮೀಸಲಿರಿಸಿದ್ದೆ. ಈ ಪುಸ್ತಕ ಓದಿದ ನಂತರ ತಿಳಿದ ಆಘಾತಕಾರಿ ಸಂಗತಿ ಎಂದರೆ- ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಡಾಲ್ಫ್ ಹಿಟ್ಲರ್ ಅವರಿಂದ ಸ್ಫೂರ್ತಿ ಪಡೆದಿದ್ದ ರಾಜಕಾರಣಿ ಎಂದರೆ ಇಂದಿರಾ ಗಾಂಧಿ! ಇಂದಿರಾ ಮತ್ತು ಹಿಟ್ಲರ್ ನಡುವಿನ ಸ್ವಾಮ್ಯ ಭಯ ಹುಟ್ಟಿಸುವಂತಿದೆ.
1933ರಲ್ಲಿ ಜರ್ಮನಿಯ ಛಾನ್ಸಲರ್ ಆದ ಹಿಟ್ಲರ್, ಅದಾಗಿ ತಿಂಗಳಲ್ಲೇ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾನೆ. 'ಜನರು ಮತ್ತು ದೇಶವನ್ನು ರಕ್ಷಿಸುವುದಕ್ಕಾಗಿ' ಇಂಥ ತುರ್ತು ಅಧಿಕಾರವನ್ನು ತಾನು ಪಡೆದುಕೊಂಡಿರುವುದಾಗಿ ಹಿಟ್ಲರ್‌ನ ಸಮರ್ಥನೆ ಇತ್ತು. ವೈಯಕ್ತಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳು ಎಲ್ಲವಕ್ಕೂ ನಿರ್ಭಂದ. ಜರ್ಮನಿಯಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೆ ನೀಡಿದ ಕಾರಣ, ಕಮ್ಯುನಿಸ್ಟರು ಸರ್ಕಾರಿ ಕಟ್ಟಡಗಳನ್ನು ಸುಡುವುದಕ್ಕೆ ಸಂಚು ಮಾಡಿದ್ದಾರೆ ಎಂಬ ಪ್ರತಿಪಾದನೆ. ರೈಚ್ ಸ್ಟಾಗ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನೇ ಇದಕ್ಕೆ ಪುರಾವೆಯನ್ನಾಗಿ ನೀಡಲಾಯಿತು. ನಂತರ ತಿಳಿದುಬಂದಿದ್ದೇನೆಂದರೆ ತುರ್ತು ಪರಿಸ್ಥಿತಿ ಜಾರಿಗೆ ತರಲೆಂದೇ ನಾಜಿ ಆಡಳಿತ ಕಟ್ಟಿದ್ದ ಆಟವಾಗಿತ್ತದು. ಇಂದಿರಾ ಗಾಂಧಿ ಅವರೂ 1975ರ ಜೂನ್ 26ರಂದು ತುರ್ತು ಪರಿಸ್ಥಿತಿ ಹೇರಿದಾಗ ಹಲವು ಕಾರಣಗಳನ್ನು ಮುಂದಿಟ್ಟಿದ್ದರು. ಜಯಪ್ರಕಾಶ ನಾರಾಯಣರು ಬಂಡಾಯವೊಂದನ್ನು ಮುನ್ನಡೆಸುತ್ತಿದ್ದು, ಸೇನಾಪಡೆಗೆ ಅಕ್ರಮ ಆದೇಶಗಳನ್ನು ಧಿಕ್ಕರಿಸುವ ಆಜ್ಞೆ ಆಗಿದೆಯಾದ್ದರಿಂದ ನಾಗರಿಕರ ಮೂಲಭೂತ ಹಕ್ಕುಗಳನ್ನು ತಾನು ಕಸಿಯುತ್ತಿರುವುದಾಗಿ ಅವರು ಹೇಳಿದರು. ಇಂದಿರಾ ಅವರು ಪತ್ರಿಕೆಗಳ ಮೇಲೆ ಸೆನ್ಸಾರ್ ವಿಧಿಸಿದರು, ನ್ಯಾಯಾಂಗದ ಸ್ವಾತಂತ್ರ್ಯವನ್ನೂ ಕಸಿದರು. ಜನರಿಗೆ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕೇ ಇಲ್ಲವಾಗಿರುವುದರಿಂದ ಜೈಲಿನಲ್ಲಿ ಯಾವ ವ್ಯಕ್ತಿಯಾದರೂ ಕೊಲೆಯಾದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಇಂದಿರಾ ಸರ್ಕಾರದ ಅಟಾರ್ನಿ ಜನರಲ್ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದರು ಮತ್ತು ಅಧಿಕಾರ ಮೊಟಕುಗೊಂಡಿದ್ದರಿಂದ ನ್ಯಾಯಾಲಯ ಈ ವಾದವನ್ನು ಒಪ್ಪಿಕೊಳ್ಳಬೇಕಾಯಿತು. ಇಪ್ಪತ್ತಂಶಗಳ ಆರ್ಥಿಕ ಕಾರ್ಯಕ್ರಮ ಮಾಡಿದ ಇಂದಿರಾ, ಶಿಸ್ತು ಮತ್ತು ಬೆಳವಣಿಗೆಗೆ ತುರ್ತು ಪರಿಸ್ಥಿತಿ ಅಗತ್ಯ ಎಂದರು. ಹಿಟ್ಲರ್ ಸಹ ಇಪ್ಪತ್ತೈದು ಅಂಶಗಳ ಕಾರ್ಯಕ್ರಮ ರೂಪಿಸಿದ್ದ. ಜರ್ಮನಿ ಸಂಸತ್ತಿನಲ್ಲಿ ಹಿಟ್ಲರ್‌ಗೆ ಬಹುಮತ ಇರಲಿಲ್ಲವಾದ್ದರಿಂದ ಸದನದ ಮತದಾನ ಬಲ ಕುಗ್ಗಿಸಿ ತನಗೆ ಸರ್ವಾಧಿಕಾರ ಒಲಿಯುವಂತೆ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಪ್ರತಿಪಕ್ಷದ 91 ಸಂಸದರನ್ನು ಬಂಧಿಸಿದ. ಇಂದಿರಾ ಅವರೂ ತುರ್ತು ಪರಿಸ್ಥಿತಿ ಹೇರುವುದಕ್ಕೆ ಅನುವಾಗುವಂತೆ ತಿದ್ದುಪಡಿ ತರಲು ಪ್ರತಿಪಕ್ಷದ ಸಂಸದರನ್ನು ಭಾರಿ ಸಂಖ್ಯೆಯಲ್ಲಿ ಬಂಧಿಸಿದರು. ಇನ್ನೂ ಮುಂದುವರಿದು ಸಂಸತ್ತಿನ ಕಲಾಪಗಳ ದಾಖಲೀಕರಣವನ್ನೇ ರದ್ದು ಮಾಡಿದರು. ಸಂಸತ್ತಿನ ಕಲಾಪಗಳನ್ನು ವರದಿ ಮಾಡುವುದಕ್ಕೆ ಮಾಧ್ಯಮಕ್ಕಿದ್ದ ಅವಕಾಶವನ್ನೂ ರದ್ದುಗೊಳಿಸಲಾಯಿತು. ಕುತೂಹಲಕರ ಸಂಗತಿ ಎಂದರೆ ಮಾಧ್ಯಮಗಳಿಗೆ ವರದಿಯನ್ನು ಅನುವು ಮಾಡಿಕೊಡುವ ಈ ಕಾಯ್ದೆಯನ್ನು ರಾಹುಲ್ ಗಾಂಧಿ ಅವರ ಅಜ್ಜ, ದಿವಂಗತ ಫಿರೋಜ್ ಗಾಂಧಿಯವರೇ ಪ್ರಸ್ತಾವಿಸಿದ್ದರು.
ಜರ್ಮನಿ ಮತ್ತು ಭಾರತಗಳ ತುರ್ತು ಪರಿಸ್ಥಿತಿ ಆಡಳಿತ ಜಾಯಮಾನ ಒಂದೇ ನಮೂನೆಯದಾಗಿತ್ತು. ಹಿಟ್ಲರ್‌ನ ಪ್ರಚಾರ ಮಂತ್ರಿ ಗಾಬ್ಬೆಲ್ಸ್, 'ಜರ್ಮನಿ ಕ್ರಾಂತಿ ಆರಂಭವಾಗಿದೆ' ಎಂದು ಘೋಷಿಸಿದರು. ಭಾರತದಲ್ಲಿ ಪತ್ರಿಕೆಗಳ ಮೇಲೆ ಸೆನ್ಸಾರ್‌ಶಿಪ್. ಗಾಂಧಿ ಕುಟುಂಬದ ಒಡೆತನದ 'ನ್ಯಾಷನಲ್ ಹೆರಾಲ್ಡ್‌' ಭಾರತದಲ್ಲಿ ಏಕಪಕ್ಷ ಪದ್ಧತಿಯೇ ಸೂಕ್ತ ಎಂದು ಪ್ರತಿಪಾದಿಸಿತು. ಪ್ರತಿಪಕ್ಷದ ಕಾರ್ಯಕರ್ತರನ್ನೆಲ್ಲ ಸೆರೆಮನೆಗೆ ಅಟ್ಟಲಾಗಿತ್ತು. ಭಾರತದ ರಕ್ಷಣೆಗಾಗಿ ಇರುವ ಗಂಭೀರ ಕಾಯ್ದೆಯನ್ನು ಪ್ರತಿಪಕ್ಷ ಕಾರ್ಯಕರ್ತರ ಮೇಲೆ ಹೇರಿ ಎಫ್‌ಐಆರ್ ತಿರುಚುವಂತೆ ಪೊಲೀಸರಿಗೆ ಆದೇಶವಾಗಿತ್ತು. ಆಂತರಿಕ ಭದ್ರತೆಯ ರಕ್ಷಣೆ ಕಾಯ್ದೆ ಅಡಿ ಸಾವಿರಾರು ಜನರನ್ನು ಬಂಧಿಸಲಾಯಿತು. ಇವನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿದ್ದ ಹೇಬಿಯಸ್ ಕಾರ್ಪಸ್ ಕಾಯ್ದೆಯನ್ನು ರದ್ದುಗೊಳಿಸಲಾಗಿತ್ತು.
ಸಂವಿಧಾನಕ್ಕೆ 39ನೇ ತಿದ್ದುಪಡಿ ತಂದು ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮಗಳೂ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಸಲಾಯಿತು. ಇದಕ್ಕೂ ಸ್ಫೂರ್ತಿ ಹಿಟ್ಲರನ ನಾಜಿ ಆಡಳಿತದಿಂದಲೇ ಬಂದಿದ್ದಿರಬೇಕು. ಕಾಂಗ್ರೆಸ್ ಅಧ್ಯಕ್ಷ ದೇವ್‌ಕಾಂತ್ ಬರುವಾ, 'ಇಂದಿರೆಯೇ ಇಂಡಿಯಾ, ಇಂಡಿಯಾವೇ ಇಂದಿರೆ' ಅಂದರು. ಹಿಟ್ಲರ್‌ನ ನ್ಯಾಯ ಆಯುಕ್ತ ಡಾ. ಹಾನ್ಸ್ ಫ್ರಾಂಕ್ ಕೂಡ ಇದೇ ರೀತಿ ಮಾತನಾಡುತ್ತಾ, 'ಜರ್ಮನಿಯಲ್ಲಿ ಇವತ್ತಿರುವುದು ಒಂದೇ ಅಧಿಕಾರ. ಅದುವೇ ನಾಯಕ (ಹಿಟ್ಲರ್)ನದ್ದು' ಎಂದಿದ್ದ. ಹಿಟ್ಲರ್‌ನು ಗೆಸ್ಟಪೊ ಹೆಸರಿನ ರಹಸ್ಯ ಪೊಲೀಸ್ ವ್ಯವಸ್ಥೆ ಸೃಷ್ಟಿಸಿದ್ದು ಹಾಗೂ ಇಂದಿರಾ ಆಡಳಿತ ಅನೇಕರನ್ನು ಜೈಲಿಗೆ ತಳ್ಳಿದ ಘಟನೆಗಳಲ್ಲಿ ಸಾಮ್ಯತೆ ಇದೆ.  ಹಿಟ್ಲರ್‌ನ ದಮನಕಾರಿ ನೀತಿಗಳೆಲ್ಲವೂ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಣಿಸಿಕೊಂಡಿವೆ. ಆದರೂ ಇವರಿಬ್ಬರಿಗೆ ಒಂದು ವ್ಯತ್ಯಾಸವಿದೆ. ಹಿಟ್ಲರ್ ತನ್ನ ವಂಶಸ್ಥರನ್ನು ಅಧಿಕಾರದಲ್ಲಿ ಬೆಳೆಸಲಿಲ್ಲ, ಆತನಿಗೆ ಸಂತಾನವಿರಲಿಲ್ಲ.


- ಅರುಣ್ ಜೇಟ್ಲಿ
ರಾಜ್ಯಸಭೆ ಪ್ರತಿಪಕ್ಷ ನಾಯಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.