ನಮ್ಮ ಇತಿಹಾಸ ಪ್ರಜ್ಞೆಯನ್ನು ಪ್ರಶ್ನಿಸುತ್ತಿದೆ ಇಂದ್ರಪ್ರಸ್ಥ!

ಪ್ರಾಚೀನ ಭಾರತ ಎಂಬುದು ಪುರಾಣದ ಕಂತೆ ಬಿಡಿ ಅಂತ ಲೇವಡಿ ಮಾಡುವವರಿಗೆ ಬರವಿಲ್ಲ. ಆದರೀಗ ಉತ್ಖನನದಲ್ಲಿ ಧೂಳು ಜಾಡಿಸಿ ಮೇಲೆದ್ದಿರುವ ಇಂದ್ರಪ್ರಸ್ಥ ನಮ್ಮ ಪ್ರಾಚೀನ ಪರಂಪರೆ ಬಗ್ಗೆ ಮಹಾಪುಳಕವೊಂದನ್ನು ಕಟ್ಟಿಕೊಟ್ಟಿದೆ
ಭಾರತೀಯ ಪುರಾತತ್ವ ಇಲಾಖೆ ದೆಹಲಿಯ ಪುರಾನಾ ಕಿಲ್ಲಾದಲ್ಲಿ ಉತ್ಖನನ ನಡೆಸಿದೆ. ಅದರ ಶೋಧವೇನಾದರೂ ಯಶಸ್ವಿಯಾದರೆ 'ಇಂದ್ರಪ್ರಸ್ಥ' ಮತ್ತೆ ಸದ್ದು ಮಾಡಲಿದೆ. ನಮ್ಮ ಪುರಾಣದಲ್ಲಿ ಉಲ್ಲೇಖವಾಗಿರುವ ಅನೇಕ ಪ್ರಸಿದ್ಧ ಸ್ಥಳಗಳಲ್ಲಿ ಪಾಂಡವರ ರಾಜಧಾನಿಯಾಗಿದ್ದ ಇಂದ್ರಪ್ರಸ್ಥವೂ ಒಂದು. ದ್ವಾರಕೆಗಿಂತಲೂ ಆ ನಗರ ವೈಭವೋಪೇತವಾಗಿತ್ತು ಎಂದು ಹೇಳಲಾಗುತ್ತದೆ. ಇಂದ್ರನೂ ಹೊಟ್ಟೆಕಿಚ್ಚು ಪಡುವಂಥ ನಗರವಾಗಿತ್ತಂತೆ ಆ ಇಂದ್ರಪ್ರಸ್ಥ...
---
ಕುರು ವಂಶದ ಪುರಾತನ ರಾಜಧಾನಿಯಾಗಿದ್ದ ಖಾಂಡವಪ್ರಸ್ಥ ಅರಣ್ಯವಾಗಿ(ಖಾಂಡವ) ಬದಲಾಗಿತ್ತು. ಅಲ್ಲಿ ಹೊಸ ಊರನ್ನು ಸ್ಥಾಪಿಸುವುದು ಅಸಾಧ್ಯವೆನಿಸಿದರೂ, ಹಸ್ತಿನಾಪುರದಲ್ಲಿರಲಾಗದೇ ಪಾಂಡವರು ಖಾಂಡವಪ್ರಸ್ಥದಲ್ಲೇ ತಮ್ಮ ಹೊಸ ರಾಜಧಾನಿ ನಿರ್ಮಾಣವಾಗಬೇಕೆಂದು ನಿಶ್ಚಯ ಮಾಡಿದರು. ಅವರ ಈ ನಿರ್ಧಾರದಿಂದ ಮುಸಿ ಮುಸಿ ನಕ್ಕವರು ದುರ್ಯೋಧನ ಮತ್ತು ಶಕುನಿ. ಏಕೆಂದರೆ ಕಾಡಿನಿಂದ ಸುತ್ತುವರಿದಿದ್ದ ಖಾಂಡವಪ್ರಸ್ಥ ಇಂದ್ರನಿಂದ ಶಾಪಗ್ರಸ್ಥವಾಗಿ ಬಂಜರು ಭೂಮಿಯಾಗಿ ಬದಲಾಗಿತ್ತು. ಜೊತೆಗೆ ಆ ಪ್ರದೇಶ ಕ್ರೂರಿಗಳಾದ ಅಸುರ, ರಾಕ್ಷಸ ಮತ್ತು ನಾಗಾ ಪಂಗಡದ ನೆಲೆಯಾಗಿತ್ತು!
ಆದರೂ ಪಾಂಡವರು ಮನಸ್ಸು ಬದಲಿಸದೆ, ಈ ವಿಷಯವನ್ನು ಕೃಷ್ಣನೊಂದಿಗೆ ಚರ್ಚಿಸಿದರು. ಕೂಡಲೇ ಕೃಷ್ಣ, ಅಲ್ಲೊಂದು ಮಹಾನ್ ನಗರ ನಿರ್ಮಾಣಮಾಡಬೇಕು ಎಂದು ದೇವಶಿಲ್ಪಿ ವಿಶ್ವಕರ್ಮರಿಗೆ ಕೇಳಿಕೊಂಡ.
ಬೃಹತ್ ಕಾಡಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಅಲ್ಲಿದ್ದ ಅಸುರ ಮತ್ತು ನಾಗಾ ಪಂಗಡದವರಲ್ಲಿ ಕೆಲವರು ಸುಟ್ಟು ಕರಕಲಾದರೆ, ಬದುಕುಳಿದವರಲ್ಲಿ ಕೆಲವರು ಸಾಲ್ವಾ ಪ್ರದೇಶಕ್ಕೆ, ಮತ್ತೂ ಕೆಲವರು ಗಾಂಧಾರಕ್ಕೆ ಓಡಿಹೋದರು.
ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಾಗ, ಅದರಲ್ಲಿ ಸಿಕ್ಕಿಬಿದ್ದಿದ್ದ 'ಮಾಯಾ' ಎನ್ನುವ ಅಸುರ ಪಂಗಡದ ವಾಸ್ತುಶಿಲ್ಪಿಯನ್ನು ಕೃಷ್ಣ ಮತ್ತು ಪಾಂಡವರು ಕಾಪಾಡಿದ್ದರು. ತನ್ನ ಜೀವ ಉಳಿಸಿದರು ಎನ್ನುವ ಕಾರಣಕ್ಕೆ ಗೌರವಸೂಚಕವಾಗಿ ಮಾಯಾ, ಯುಧಿಷ್ಟಿರನಿಗಾಗಿ ಅತ್ಯದ್ಭುತ ವಾಸ್ತುಶಿಲ್ಪದ, ಭ್ರಾಮಕ ಪರಿಣಾಮಗಳನ್ನುಂಟುಮಾಡುತ್ತಿದ್ದ 'ಮಾಯಾ ಸಂಭಾಗಣ'ವನ್ನು ನಿರ್ಮಿಸಿಕೊಟ್ಟ.
ಅಲ್ಲದೆ ದೇವಶಿಲ್ಪಿ ವಿಶ್ವಕರ್ಮರ ಕೈಚಳಕದಲ್ಲಿ ಆ ಪ್ರದೇಶದಲ್ಲಿ ಮಹೋನ್ನತ ಅರಮನೆ, ಬೃಹತ್ ರಸ್ತೆಗಳು, ಬಲಿಷ್ಠ ಕೋಟೆ, ಹಸಿರುಕ್ಕಿಸುವ ಉದ್ಯಾನಗಳೊಂದಿಗೆ ಎದ್ದು ನಿಂತಿತು 'ಇಂದ್ರಪ್ರಸ್ಥ'! ಇಂದ್ರನ ಅಮರಾವತಿಯನ್ನೇ ನಾಚಿಸುವಂಥ ಸೌಂದರ್ಯವನ್ನು ಹೊತ್ತು ನಿಂತಿತ್ತು ಪಾಂಡವರ ಹೊಸ ರಾಜಧಾನಿ.
ಕಾಲಾನಂತರ ಆ ಪ್ರದೇಶವನ್ನು ಆಳಿದ ರಾಜಾ ಧಿಲ್ಲು ತನ್ನ ಹೆಸರನ್ನೇ ಆ ನಗರಕ್ಕೆ ಇಟ್ಟ('ದಿಲ್ಲಿ'). ನಂತರ ಸುತ್ತ ಮುತ್ತಲಿನ ಹಳ್ಳಿಗಳೆಲ್ಲ ಆ ನಗರದ ಭಾಗವಾಗಿ ಆ ಊರು ಬೆಳೆಯುತ್ತಾ ಹೋಯಿತು. ಈಗಲೂ ಪಂಜಾಬ್ ಪ್ರಾಂತ್ಯದ ಜಾಟ್ ಜನಾಂಗದಲ್ಲಿರುವ ಧಲ್, ಧಲಿವಾಲ್, ಧಿಲ್ ಮತ್ತು ಧಿಲ್ಲೋನ್ ಅಡ್ಡಹೆಸರಿನ ಜನರೆಲ್ಲ ಧಿಲ್ಲು ರಾಜನ ವಂಶಜರೆಂದೇ ಹೇಳಲಾಗುತ್ತದೆ.
---
"ಹೇಳಲಾಗುತ್ತದೆ ನಿಜ. ಆದರೆ ಅದೆಲ್ಲ ಸತ್ಯವೆನ್ನಲು ಪುರಾವೆಯೇನಿದೆ?"
ಆಧುನಿಕರೆನಿಸಿಕೊಂಡ ನಮಗೆ ಎಲ್ಲದಕ್ಕೂ ಪುರಾವೆ ಬೇಕು. ಕೃಷ್ಣ, ರಾಮ, ಅರ್ಜುನ, ಇಂಧ್ರಪ್ರಸ್ಥ, ಹಸ್ತಿನಾಪುರಗಳೆಲ್ಲವೂ ಯಾವುದೋ ಅದ್ಭುತ ಕೃತಿಕಾರನೊಬ್ಬನ ಕಪೋಲಕಲ್ಪಿತ ಚಿತ್ರಣಗಳಾಗಿಯಷ್ಟೇ ನಮ್ಮೆದುರಿಗೆ ಬರುತ್ತವೆ.
"ಕೃಷ್ಣನ ಹೆಜ್ಜೆ ಗುರುತುಗಳನ್ನು ಹೊತ್ತ ಸುಂದರ ದ್ವಾರಕಾ, ಸಾಗರದಲ್ಲಿ ಒಂದಾಯಿತು" ಎನ್ನುತ್ತದೆ ಪುರಾಣ.
"ಭಾರತ-ಶ್ರೀಲಂಕಾದ ಮಧ್ಯೆ ರಾಮಸೇತುವಂತೆ, ಕಾಲ್ಪನಿಕ ಕೃಷ್ಣನಿಗೊಂದು ದ್ವಾರಕಾ ನಗರವಂತೆ... ಹೀಗೆ ಅಂತೆ ಕಂತೆಗಳನ್ನೇ ಇತಿಹಾಸವೆನ್ನಲು ಸಾಧ್ಯವೇ? ಪುರಾವೆ ಎಲ್ಲಿದೆ ಸ್ವಾಮಿ?" ಎಂದು ಪ್ರಶ್ನಿಸುತ್ತೇವೆ ನಾವು.
ಹಾಗಾಗೇ ಪುರಾಣವನ್ನು ನಂಬದ ಜನರಿಗೆ ಪುರಾವೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ ನಮ್ಮ ಪುರಾತತ್ವ ಶಾಸ್ತ್ರಜ್ಞರು. 1980ರ ಸಮಯದಲ್ಲಿ ಭಾರತದ ಖ್ಯಾತ ಪುರಾತತ್ವಜ್ಞರಾದ ಡಾ. ಎಸ್. ಆರ್. ರಾವ್ ನೇತೃತ್ವದ ತಂಡ ಗುಜರಾತ್ನ ಸಮುದ್ರ ತಟದಲ್ಲಿರುವ ಆಧುನಿಕ ದ್ವಾರಕಾಕ್ಕೆ ತೆರಳಿ, ಸಮುದ್ರದ ಆಳಕ್ಕಿಳಿದು ಹುಡುಕಾಟ ಶುರುಮಾಡಿತು. 1983-1990ರ ವರೆಗೆ ನಡೆದ ಈ ಶೋಧದಲ್ಲಿ ಪುರಾಣದಲ್ಲಿ ಉಲ್ಲೇಖಿಸಲಾದ ಹಲವಾರು ಸಾಕ್ಷ್ಯಗಳು(ಕೆತ್ತನೆಗಳು, ಮೂರ್ತಿಗಳು, ಸ್ತಂಭಗಳು) ಇಂದಿನ ದ್ವಾರಕಾ ಮತ್ತು ಬೆಟ್ ದ್ವಾರಕಾ ದ್ವೀಪದ ಬಳಿ ದೊರೆತವು. ದ್ವಾರಕೆಯೆಂಬುದೊಂದಿತ್ತು ಎನ್ನುವುದನ್ನು ರಾವ್ ಪ್ರಪಂಚದ ಮುಂದೆ ಎದೆಯುಬ್ಬಿಸಿ ಸಾಬೀತು ಮಾಡಿದರು! ಈ ಸಾಧನೆಗಾಗಿ ಅವರಿಗೆ World Ship Trust Award ಕೂಡ ದೊರೆಯಿತು. ಅದೇ ರೀತಿಯಲ್ಲೇ "ನಾನಿಲ್ಲೇ ಇದ್ದೇನೆ" ಎಂದು ರಾಮಸೇತು ವರ್ಷಗಳ ಹಿಂದೆ ನಮಗೆ ದರ್ಶನ ನೀಡಿ, ತನ್ನ ಅಸ್ತಿತ್ವವನ್ನು ರುಜುವಾತು ಮಾಡಿತು.
ಈಗ ಇಂದ್ರಪ್ರಸ್ಥದ ಸರದಿಯೇ?
ಪ್ರಸಿದ್ಧ ಪುರಾತತ್ವ ಶಾಸ್ತ್ರಜ್ಞ ಬಿ.ಬಿ. ಲಾಲ್ ನೇತೃತ್ವದಲ್ಲಿ 1954ರಲ್ಲಿ ದೆಹಲಿಯ ಪುರಾನಾ ಕಿಲ್ಲಾದ ಬಳಿ ಮೊದಲ ಬಾರಿಗೆ ಉತ್ಖನನ ನಡೆದಿತ್ತು. ಆ ಶೋಧದಲ್ಲಿ ಕೆಲವು ಪಿಂಗಾಣಿ ಪಾತ್ರೆಗಳು ಸಿಕ್ಕಿದ್ದವು. ಮಹಾಭಾರತದ ಪ್ರದೇಶಗಳಾದ ಹಸ್ತಿನಾಪುರ, ಮಥುರಾ, ಕುರುಕ್ಷೇತ್ರ, ಕಂಪಿಲ್ಯಾಗಳ ಕುಂಬಾರರು ತಯಾರಿಸುತ್ತಿದ್ದರೆನ್ನಲಾದ ಪಾತ್ರೆಗಳಂತೆಯೇ ಅಂದು ದೊರೆತ ಸಾಮಗ್ರಿಗಳಿವೆ. ಪುರಾನಾ ಕಿಲ್ಲಾ ಮತ್ತು ಅದರ ದಕ್ಷಿಣದ ನೆರೆಹೊರೆಯ ಪ್ರದೇಶಗಳು ಮಹಾಭಾರತದ ಸಮಯದ ಇಂದ್ರಪ್ರಸ್ಥವನ್ನು ಪ್ರತಿನಿಧಿಸುತ್ತವೆ. ವಾಸ್ತವವಾಗಿ, 1947ರ ವರೆಗೆ ಪುರಾನಾ ಕಿಲ್ಲಾದಲ್ಲಿ 'ಇಂದ್ರಪತ್' ಹೆಸರಿನ ಹಳ್ಳಿಯೂ ಇತ್ತು" ಎನ್ನುತ್ತಾರೆ ಲಾಲ್.
ಆದರೆ ಅವು ಬೇರೆ ಬೇರೆ ಸ್ತರಗಳಲ್ಲಿ ಸಿಕ್ಕಿಲ್ಲ. ವಿಂಗಡಣೆಯಲ್ಲಿ (ಪದರ ಪದರಗಳಲ್ಲಿ) ಅವು ಸಿಕ್ಕವೆಂದರೆ, ಅವನ್ನು ಮಹಾಭಾರತದ ಅವಧಿಯ ಕುರುಹುಗಳು ಎಂದು ಬೆಂಬಲಿಸಬಹುದು ಎನ್ನುವುದು ಹಲವರ ವಾದ. ಈ ಕಾರಣಕ್ಕಾಗಿಯೇ ದೆಹಲಿಯ ಪ್ರಸಕ್ತ ಎಎಸ್ಐನ ಪುರಾತತ್ವ ಶಾಸ್ತ್ರಜ್ಞ ವಸಂತ್ ಸ್ವರ್ಣಾಕರ್ ಅವರ ಮೇಲ್ವಿಚಾರಣೆಯಲ್ಲೀಗ ಸುಮಾರು 60 ಕೆಲಸಗಾರರು ವಾರಗಳಿಂದ ಉತ್ಖನನದಲ್ಲಿ ನಿರತರಾಗಿದ್ದಾರೆ.
ಇದು ನಿಜಕ್ಕೂ ಭಾರತೀಯರೆಲ್ಲರೂ ಸಂಭ್ರಮಪಡುವಂಥ ಸಂಗತಿ. ಭಾರತದ ಇತಿಹಾಸವನ್ನು ಕೇವಲ ಮೊಘಲರ ಆಕ್ರಮಣ, ಬ್ರಿಟಿಷರ ಆಗಮನಕ್ಕಷ್ಟೇ ಮೀಸಲಾಗಿಟ್ಟಿರುವ ನಮಗೆ, ಅದರಾಚೆಗಿನದ್ದೆಲ್ಲಾ ಕಪೋಲಕಲ್ಪಿತ ಕಥೆಗಳಾಗಿ ಗೋಚರಿಸುತ್ತವೆ. ಆದರೆ ನಮ್ಮನ್ನಾಳಿದ ಪಾಶ್ಚಾತ್ಯರ ಊಹೆಗೂ ನಿಲುಕದಷ್ಟು ಪುರಾತನ ಸಂಸ್ಕೃತಿ ನಮ್ಮದು ಎನ್ನುವುದನ್ನು ಈ ಸಂಶೋಧನೆಗಳು ರುಜುವಾತು ಮಾಡಿ, ನಮ್ಮ ಇತಿಹಾಸ ಪ್ರಜ್ಞೆಯ ವ್ಯಾಪ್ತಿಯನ್ನು ಪ್ರಶ್ನಿಸುತ್ತಿರುವುದಂತೂ ನಿಜ!
-ರಾಘವೇಂದ್ರ ಆಚಾರ್ಯ
raghu.bioastra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


