ಸಿಂಡ್ರೆಲಾಳ ಕಥೆಯನ್ನು ಓದಿದವರಿಗೆ, ಡಾ. ರಾಜ್‌ಕುಮಾರ್ -ಸರಿತಾ ಅಭಿನಯದ 'ಹೊಸ ಬೆಳಕು' ಸಿನಿಮಾ ನೋಡಿದವರಿಗೆ ಒಂದು ವಿಷಯ ಚೆನ್ನಾಗಿ ನೆನಪಿರುತ್ತದೆ. ಏನೆಂದರೆ- ಮಲತಾಯಿ ಅಂದರೆ ದುಷ್ಟೆ. ಮಲತಾಯಿ ಅಂದರೆ ಕ್ರೂರಿ. ಆಕೆ, ಮೊದಲ ಹೆಂಡತಿಯ ಮಕ್ಕಳನ್ನು ವಿನಾಕಾರಣ ಹಿಂಸಿಸುವ ಖಳನಾಯಕಿ. ಮಲತಾಯಿ ಎಂದರೆ-ಕರುಣೆ ಎಂಬ ಪದದ ಪರಿಚಯವೇ ಇಲ್ಲದ ಹೆಣ್ಣು ಜೀವ!
ಮಲತಾಯಿ ಅಂದುಕೊಂಡಾಗಲೆಲ್ಲ ನನಗೆ ಶಾರದ ನೆನಪಾಗುತ್ತಾಳೆ. ಆಕೆ ನಮ್ಮೂರಿನ ಹುಡುಗಿ. ಶಾರದೆಗೆ ನಾಲ್ಕು ವರ್ಷ ತುಂಬಿದ್ದಾಗಲೇ ಎರಡನೇ ಹೆರಿಗೆಯ ಸಂದರ್ಭದಲ್ಲಿ ಆಕೆಯ ತಾಯಿ ತೀರಿ ಹೋದಳು. ಮನೆಯಲ್ಲಿ, ಸಾವಿನ ಸೂತಕ ಅಮರಿಕೊಂಡು ನಾಲ್ಕು ತಿಂಗಳು ಕಳೆಯುವ ಮೊದಲೇ ಶಾರದೆಯ ತಂದೆ ಮತ್ತೊಂದು ಮದುವೆಯಾಗಿದ್ದ. ಕೇಳಿದವರಿಗೆ- 'ಸಣ್ಣ ಮಗುವನ್ನು ನೋಡಿಕೊಳ್ಳಲು ಹೆಂಗಸೊಬ್ಬಳು ಬೇಕು ಅನ್ನಿಸ್ತು. ಅದಕ್ಕೇ ಮದುವೆಯಾದೆ' ಎಂದು ಉತ್ತರಿಸಿದ್ದ. ಆನಂತರದಲ್ಲಿ ಶಾಂತಿಯ ಬದುಕಲ್ಲಿ ಒಂದು ಆಕಸ್ಮಿಕ ತಿರುವು ಸಿಕ್ಕಿಬಿಟ್ಟಿತು. ಬೆಂಗಳೂರಲ್ಲಿ ನೌಕರಿಯಲ್ಲಿದ್ದ ಆಕೆಯ ಸೋದರ ಮಾವ- 'ಈ ಮಗುವನ್ನು ನಾನು ಸಾಕ್ತೇನೆ. ನೀವು ಈಗಷ್ಟೇ ಮದುವೆಯಾಗಿದ್ದೀರಿ. ಆರಾಂ ಆಗಿರಿ' ಎಂದು ಶಾರದೆಯ ತಂದೆಗೆ ಹೇಳಿ, ಪುಟ್ಟ ಹುಡುಗಿಯೊಂದಿಗೆ ಬೆಂಗಳೂರಿನ ಬಸ್ ಹತ್ತಿ ಬಿಟ್ಟ. ಆನಂತರದಲ್ಲಿ ನಾವು ಶಾರದೆಯನ್ನು ನೋಡುತ್ತಿದ್ದುದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ. ಆಕೆ ಹಬ್ಬಗಳಿಗೆ ತಪ್ಪದೇ ಬರುತ್ತಿದ್ದಳು ಸೋದರಮಾವನೊಂದಿಗೆ! ಶಾರದೆಯನ್ನು ಆತ ಮಹಾರಾಣಿಯಂತೆ ಬೆಳೆಸಿದ್ದ. ಆಕೆ ಪ್ರತಿ ಬಾರಿ ಹಬ್ಬಕ್ಕೆ ಬಂದಾಗಲೂ ಹೊಸ ಬಟ್ಟೆಯನ್ನೇ ಹಾಕಿರುತ್ತಿದ್ದಳು. ಆಕೆ ಶಾಲೆಗೆ ಸೇರಿದ್ದಾಳೆ, ವಿಪರೀತ ಜಾಣೆಯಾಗಿದ್ದಾಳೆ ಎಂಬುದಕ್ಕೆ ಆಕೆಯ ಮಾತುಗಳಲ್ಲಿ ಸಾಕ್ಷಿ ಸಿಗುತ್ತಿತ್ತು. ಮುಂದಿನ ನಾಲ್ಕು ವರ್ಷ ಕಳೆಯುವಷ್ಟರಲ್ಲಿ, ಶಾರದೆ ನಮ್ಮ ಊರಿನ ಎಲ್ಲರನ್ನೂ ಓದಿನಲ್ಲಿ ಹಿಂದಿಕ್ಕಿಬಿಟ್ಟಳು. ಆ ವರ್ಷದಲ್ಲಿ ಯುಗಾದಿಗೆಂದು ಬಂದಿದ್ದ ಆಕೆಯ ಸೋದರಮಾವ, ಊರಿನ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಶಾರದೆ, ಸ್ಕೂಲ್‌ಗೇ ಫಸ್ಟ್ ಬಂದಳೆಂದೂ, ಅದನ್ನು ಕಂಡ ಶಾಲಾ ಆಡಳಿತ ಮಂಡಳಿ, ಆಕೆಗೆ ಒಂದು ತರಗತಿಗೆ ಮುಂಬಡ್ತಿ ಕೊಟ್ಟಿದ್ದಾರೆಂದೂ, ಮುಂದೆ ಅವಳನ್ನು ಎಂಬಿಬಿಎಸ್ ಓದಿಸಿ ಡಾಕ್ಟರ್ ಮಾಡಬೇಕೆಂದು ತನಗೆ ಆಸೆ ಇರುವುದಾಗಿಯೂ ಹೇಳಿಕೊಂಡರು.
ಅವತ್ತಿನ ತನಕ ಶಾರದೆಯ ಬದುಕಲ್ಲಿ ಎಲ್ಲವೂ ಚೆನ್ನಾಗಿತ್ತು. ಊರಲ್ಲಿದ್ದ ಆಕೆಯ ಮಲತಾಯಿಗೆ, ಐದು ವರ್ಷದ ಅಂತರದಲ್ಲಿ ಮೂರು ಮಕ್ಕಳಾಗಿದ್ದವು. ಬದುಕಿಗೆ ಗಂಡನ ಕೃಷಿ ದುಡಿಮೆಯೇ ಆಧಾರವಾಗಿದ್ದರಿಂದ ಬಡತನದ ಜೊತೆಯಲ್ಲೇ ಬದುಕು ಸಾಗುತ್ತಿತ್ತು. ತಾನು ಹಾಗೂ ತನ್ನ ಮಕ್ಕಳು ಕಷ್ಟದ ಮಧ್ಯೆ ಬದುಕಿರುವಾಗ ಹಿರೀ ಹೆಂಡತಿಯ ಮಗಳು ಬೆಂಗಳೂರಿನಲ್ಲಿ ಮಹಾರಾಣಿಯಂತೆ ಬದುಕುವುದು ಎಂದರೇನು ಎಂದು ಯೋಚಿಸಿದ ಈ ಮಲತಾಯಿ, ಯಾವ್ಯಾವುದೋ ವಿಧದಲ್ಲಿ ಗಂಡನ ತಲೆಕೆಡಿಸಿ, ಮುಂದಿನ ಆರೇ ತಿಂಗಳಲ್ಲಿ ಶಾರದಳನ್ನು ಹಳ್ಳಿಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದಳು. 'ಹೇಳಿ ಕೇಳಿ ಹೆಣ್ಣು ಮಗು. ಆಕೆ ದೊಡ್ಡವಳಾಗುವ ಸಮಯವೂ ಹತ್ತಿರ ಬರ್ತಾ ಇದೆ. ಇಂಥ ಟೈಮಲ್ಲಿ ನಮ್ಮ ಮಕ್ಕಳು ನಮ್ಮ ಜೊತೆ ಇರಬೇಕು ತಾನೆ ಎಂಬ ವಾದಕ್ಕೆ ನಿಂತಳು. ಪರಿಣಾಮವಾಗಿ, ಶಾರದಳ ಅಭಿಪ್ರಾಯ ಕೇಳುವ ಗೋಜಿಗೇ ಹೋಗದೆ ಅವಳನ್ನು ಊರಿಗೆ ವಾಪಸ್ ಕರೆತಂದೇ ಬಿಟ್ಟರು.
ಆನಂತರದಲ್ಲಿ ಶಾರದೆಯ ಬದುಕು ಅಕ್ಷರಶಃ ನರಕವಾಯಿತು. ಮಲತಾಯಿ ಎಂಬಾಕೆ ಈ ಪುಟ್ಟ ಹುಡುಗಿಯನ್ನು ರಾಕ್ಷಸಿಂತೆ ಕಾಡಿಬಿಟ್ಟಳು. ಈ ಹುಡುಗಿ ನಿಂತರೂ ತಪ್ಪು, ಕೂತರೂ ತಪ್ಪು ಹುಡುಕುತ್ತಿದ್ದಳು. ಚಿಕ್ಕ ಹುಡುಗಿ ಎಂದು ಗೊತ್ತಿದ್ದರೂ ವಿಪರೀತ ಕೆಲಸ ಹೇಳುತ್ತಿದ್ದಳು. ಹಲವು ಬಾರಿ ಸರಿಯಾಗಿ ಊಟವನ್ನು ಹಾಕುತ್ತಿರಲಿಲ್ಲ. ಮೊದಲೇ ಶಾಂತ ಮನೋಭಾವ ಹಾಗೂ ಸಂಕೋಚ ಸ್ವಭಾವದವಳಾಗಿದ್ದ ಶಾರದಾ ತನ್ನ ಸಂಕಟವನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಆಕೆಯ ತಂದೆ, ಹೆಂಡತಿಗೆ ಹೆದರಿಕೊಂಡು ಬದುಕುತ್ತಿದ್ದರಿಂದ ಅವನಿಂದ ಯಾವುದೇ ಸಹಾಯವನ್ನು ನಿರೀಕ್ಷಿಸುವಂತೆಯೇ ಇರಲಿಲ್ಲ. ಮನೆಯೊಳಗಿನ ಕಿರಿಕಿರಿಯ ಪರಿಣಾಮ, ಶಾರದೆಯ ಓದಿನ ಮೇಲೆ ಬಿತ್ತು. ಬೆಂಗಳೂರಿನಲ್ಲಿದ್ದಾಗ ತರಗತಿಗೇ ಮೊದಲಿಗಳಾಗಿದ್ದ ಹುಡುಗಿ, ಊರಿಗೆ ಬಂದಮೇಲೆ ಜಸ್ಟ್ ಪಾಸು ಆಗುವಲ್ಲಿಗೆ ಬಂದು ನಿಂತಳು. ಈ ಮಧ್ಯೆಯೇ, ಅವಳ ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆಯೇ, ಬಂಧುಗಳಿಗೆ ಸಣ್ಣದೊಂದು ಸುಳಿವನ್ನು ಕೊಡದ ಆಕೆಯ ಮಲತಾಯಿ, ಒಂದು ದೇವಸ್ಥಾನದಲ್ಲಿ ಶಾರದಳ ಮದುವೆ ಮಾಡಿಬಿಟ್ಟಳು. ಗೊಂಬೆಯಂಥ ಹುಡುಗಿ ಶಾರದೆಯ ಕೈ ಹಿಡಿದವನು ಕುಡಿಯುವುದೂ ಸೇರಿದಂತೆ ಹಲವು ದುಶ್ಚಟಗಳ ದಾಸನಾಗಿದ್ದಾನೆ ಎಂದು ಕೆಲವೇ ದಿನಗಳಲ್ಲಿ ತಿಳಿದಾಗ, ಶಾರದೆಯ ಸೋದರಮಾವ ಬೆಂಗಳೂರಿನಿಂದ ಬಂದು ಗಲಾಟೆ ಮಾಡಿದನಾದರೂ, ಮದುವೆ ಮುಗಿದು ಹೋಗಿದ್ದರಿಂದ ಏನೂ ಮಾಡುವಂತಿರಲಿಲ್ಲ. ಆತ ಬಹಳ ಯಾತನೆಯಿಂದ ಬೆಂಗಳೂರಿಗೆ ವಾಪಸ್ ಹೋಗಿ ಬಿಟ್ಟ.
ಆನಂತರದಲ್ಲಿ ಕುಡುಕ ಗಂಡನನ್ನು ಸಾಕುವ ಹೊಣೆ ಆಕೆಯ ಹೆಗಲೇರಿತು. ಆತನ ಸಿಟ್ಟಿಗೂ ಆಕೆ ಮೈ ಒಡ್ಡಬೇಕಾಯಿತು. 3 ವರ್ಷ ಇಂಥ ಕಿರುಕುಳವನ್ನು ಅನುಭವಿಸಿದ ಶಾರದಾ, ಕಡೆಗೊಂದು ದಿನ ತನಗೆ ಪರಿಚಯವಾಗಿದ್ದ ಮತ್ತೊಬ್ಬನನ್ನು ಮದುವೆಯಾಗಿ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿ ಬಿಟ್ಟಳು. ಈ ಸಂಬಂಧವಾಗಿ ಜನ ಒಂದೆರಡು ತಿಂಗಳು ಬಾಯಿಗೆ ಬಂದಂತೆ ಮಾತಾಡಿಕೊಂಡರು. ಆನಂತರದಲ್ಲಿ ಎಲ್ಲವನ್ನೂ ಮರೆತು ಸುಮ್ಮನಾದರು.
ಶಾರದೆ ಈಗ ಬೆಂಗಳೂರಿನಲ್ಲಿದ್ದಾಳೆ. ಚೆನ್ನಾಗಿದ್ದಾಳೆ. ಆಕೆಗೆ ಎರಡು ಮಕ್ಕಳಿವೆ. ಅವಳ ಅದೃಷ್ಟಕ್ಕೆ ಸಂಗಾತಿಯೂ ಒಳ್ಳೆಯವನೇ ಸಿಕ್ಕಿದ್ದಾನೆ. (ಹುಡುಕಿದರೆ, ಪ್ರತಿಯೊಂದು ಹಳ್ಳಿಯಲ್ಲಿ ಶಾರದೆಯಂಥವರು ಸಿಗುತ್ತಾರೆ) ತೀರಾ ಆಕಸ್ಮಿಕವಾಗಿ ಸಿಕ್ಕಾಗಲೆಲ್ಲ ಸಡಗರದಿಂದ ಮಾತಾಡುತ್ತಾ, ಅಗಲಿದ ತಾಯಿಯನ್ನೂ, ತನ್ನ ಸಂಕಟದ ಬದುಕು ನೆನಪಿಸಿಕೊಂಡು ಕಣ್ಣೀರಿಡುವ ಶಾರದಾ, ಎದ್ದು ಹೋಗುವ ಮುನ್ನ-'ಮಲತಾಯಿ ಎಂಬ ಹೆಂಗಸೇಕೆ ಅಷ್ಟೊಂದು ಕೆಟ್ಟವಳಾಗಿರ್ತಾಳೆ?' ಎಂದು ಪ್ರಶ್ನಿಸುತ್ತಾಳೆ.
ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರ ಇದ್ರೆ ತಿಳಿಸ್ತೀರಾ?
- ನಾನು ಪ್ರಣತಿ