ರೈತರಿಗೆ ವೈಜ್ಞಾನಿಕ ಬೆಂಬಲ ನೀಡಿದ ಇಕ್ರಿಸಾಟ್

ಹೋದ ವಾರ ನಾನು ರೈತರ ಉತ್ಪನ್ನಗಳಿಗಾಗಿ ಇ-ಮಾರ್ಕೆಟ್(ಜಪಾನ್ ಮಾದರಿಯಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸಿದುದರ) ಬಗ್ಗೆ ನಿಮಗೆ ತಿಳಿಸಿದೆ. ರೈತರು ತಮ್ಮ ಬೆಳೆಗಳಿಗೆ ಉತ್ತಮ ದರವನ್ನು ಪಡೆದಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದರ ಜೊತೆಗೆ ಅವರ ಉತ್ಪಾದನೆಯ ಇಳುವರಿಯನ್ನು ಹೆಚ್ಚಿಸಿದರೆ ಅವರಿಗೆ ಇನ್ನಷ್ಟು ಲಾಭವಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕೃಷಿ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದೆವು. ಆಗ ನಮ್ಮ ಪಕ್ಕದ ರಾಜ್ಯಗಳ ಬೆಳೆಗಳ ಇಳುವರಿ ಬಗ್ಗೆ ವಿವರಗಳನ್ನು ಪಡೆದೆವು. ತೊಗರಿ ಬೆಳೆ ಖಣಜವೆಂದೇ ಪ್ರಸಿದ್ಧವಾದ ಗುಲ್ಬರ್ಗಾ ಜಿಲ್ಲೆಯ ಇಳುವರಿ ನೆರೆಯ ಆಂಧ್ರ ಪ್ರದೇಶಕ್ಕಿಂತ ಕಡಿಮೆಯಾಗಿತ್ತು. ಅದೇ ರೀತಿ ಇನ್ನು ಇತರೆ ಬೆಳೆಗಳಾದ ಕಡಲೆ, ಅಲಸಂದಿ, ಹೆಸರು, ಉದ್ದು, ಮುಂತಾದ ದ್ವಿದಳ ಧಾನ್ಯಗಳ ಇಳುವರಿ ಸಹ ಬೇರೆ ಮಳೆ ಆಶ್ರಿತ ಪ್ರದೇಶಗಳಿಗಿಂತ ಕಡಿಮೆ ಇರುವುದು ಕಂಡು ಬೇಸರವಾಯಿತು. ಹಾಗಾಗಿ, ಯಾವ ರೀತಿ ಬೇರೆ ಪ್ರದೇಶಗಳು ತಮ್ಮ ಇಳುವರಿಯನ್ನು ಹೆಚ್ಚಿಸಿವೆ ಎಂಬ ಬಗ್ಗೆ ವಿಶ್ಲೇಷಣೆ ಮಾಡಿದಾಗ ಗುಲ್ಬರ್ಗಾ ಮತ್ತು ಹೈದರಾಬಾದ್ ಗಡಿಯಲ್ಲಿ ಇದ್ದ ಅಂತಾರಾಷ್ಟ್ರೀಯ ಅರೆಶುಷ್ಕ ಬೆಳೆಗಳ ಸಂಶೋಧನಾ ಸಂಸ್ಥೆಯು (ಇಕ್ರಿಸಾಟ್) (International Crops Research Institute for the Semi-Arid Tropics) ಮಣ್ಣು ಪರೀಕ್ಷೆ ಆಧಾರದ ಮೇಲೆ ಭೂಮಿಯಲ್ಲಿರುವ ಸೂಕ್ಷ್ಮ ಜೀವಾಣುಗಳ ಕೊರತೆಯನ್ನು ಪರೀಕ್ಷಿಸಿ ಅದಕ್ಕೆ ಪೂರಕವಾಗಿ ಬೇಕಾಗಿರುವ ಸೂಕ್ಷ್ಮ ಜೀವಾಂಶಗಳನ್ನು ಸೇರಿಸಿದುದರಿಂದ ಇಳುವರಿಯಲ್ಲಿ ಒಂದು ಬೃಹತ್ ಪ್ರಮಾಣದ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಯಿತು ಎಂಬ ಅಂಶ ನಮ್ಮ ಗಮನಕ್ಕೆ ಬಂದಿತು. ಈ ತಾಂತ್ರಿಕ ಹಾಗೂ ಆಧುನಿಕ ಬೆಳವಣಿಗೆ ನಮ್ಮ ಪ್ರದೇಶದಲ್ಲಿ ಏಕೆ ಅಳವಡಿಸಬಾರದೆಂದು ಇದನ್ನು ಒಂದು ಸವಾಲಾಗಿ ಸ್ವೀಕರಿಸಿದೆವು.
ಮುಂದಿನ ಸಭೆಯಲ್ಲಿ ಇಕ್ರಿಸಾಟ್ ಸಂಸ್ಥೆಗೆ ಪತ್ರವನ್ನು ಬರೆದು ಅಲ್ಲಿನ ವಿಜ್ಞಾನಿಯಾದ ಅಶೋಕ್ ಆಲೂರ್ ಅವರನ್ನು ಆಹ್ವಾನಿಸಲಾಯಿತು. ಅವರು ತಮ್ಮ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ಕೃಷಿ ಸಂಶೋಧನೆಯ ಬಗ್ಗೆ ವಿವರಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೂಕ್ತವಾದ ವಿವಿಧ ತಂತ್ರಜ್ಞಾನಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿ ಒಂದು ಪ್ರಸ್ತಾವನೆ ಮಂಡಿಸಿದರು. ಅದರಲ್ಲಿನ ಪ್ರಮುಖ ಅಂಶಗಳೆಂದರೆ ನಮ್ಮ ಪ್ರದೇಶಗಳಲ್ಲಿ ರೈತರು ಅನುಸರಿಸುತ್ತಿರುವ ಪದ್ಧತಿಗಳನ್ನು ಅಧ್ಯಯನ ಮಾಡಿ ಅದಕ್ಕೆ ಪೂರಕವಾಗುವಂತೆ ಕಡಿಮೆ ಖರ್ಚಿನ ಉತ್ತಮ ತಂತ್ರಜ್ಞಾನಗಳ ಆಯ್ಕೆ ಮತ್ತು ಅಳವಡಿಕೆ. ಹೊಸ ವೈಜ್ಞಾನಿಕ ಪದ್ಧತಿಗಳು ಹಾಗೂ ಉಪಕರಣಗಳ ಬಳಕೆ, ವಿವಿಧ ಪೂರಕ ಸಂಘ ಸಂಸ್ಥೆಗಳೊಂದಿಗೆ ಸೂಕ್ತ ಸಂಬಂಧವರ್ಧನೆ ಹಾಗೂ ರೈತರ ಸಾಮರ್ಥ್ಯವರ್ಧನೆ ಮಾಡುವ ಮೂಲಕ ಬೆಳೆ ಆಧಾರಿತ ರೈತರ ಗುಂಪುಗಳನ್ನು ರಚಿಸುವುದು ಇತ್ಯಾದಿ. ಇದರೊಂದಿಗೆ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆ ಭಾಗದ ರೈತರಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಯೋಜನೆಗಳು ಹಾಗೂ ಆಯಾಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ರೈತರಿಗೆ ಹೊಸ ತಂತ್ರಜ್ಞಾನಗಳನ್ನು ನೀಡುವಲ್ಲಿ ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ತಾಂತ್ರಿಕ ತರಬೇತಿ ನೀಡುವುದು ಕೂಡಾ ಸೇರಿತ್ತು.
ಅದರಂತೆ, ನಮ್ಮ ವಿಭಾಗದಲ್ಲಿ 322 ಹಳ್ಳಿಗಳನ್ನು ಒಂದು ವಿನೂತನ ಯೋಜನೆಗಾಗಿ ಆಯ್ಕೆ ಮಾಡಿದೆವು. ಪ್ರತಿ ರೈತ ಸಂಪರ್ಕ ಕೇಂದ್ರದ ಕಾರ್ಯವ್ಯಾಪ್ತಿಯಲ್ಲಿ ಎರಡು ಹಳ್ಳಿಗನ್ನು ಆಯ್ಕೆ ಮಾಡಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದೆವು. ಈ ಹಳ್ಳಿಗಳ ಆಯ್ಕೆಗೆ ಆಧಾರವೇನೆಂದರೆ:
ಇವು ಮಳೆ ಆಧಾರಿತವಾಗಿರಬೇಕು (ನೀರಾವರಿ ಸೌಲಭ್ಯರಹಿತ) ಮತ್ತು ಅಲ್ಲಿನ ಕೆಲವು ಪ್ರಗತಿಪರ ರೈತರು ಈ ವಿನೂತನ ಯೋಜನೆಯನ್ನು ರೈತ ಬಂಧುಗಳೊಡನೆ ಹಂಚಿಕೊಳ್ಳಲು ಹಾಗೂ ಅವರನ್ನು ಸಂಘಟಿಸಲು ಸಿದ್ಧರಿರಬೇಕು.
ಜೊತೆಗೆ, ಆಯ್ಕೆಯಾದ ಹಳ್ಳಿಯಲ್ಲಿ ಉತ್ಪಾದಿಸಿದ ಬೆಳೆಗಳಲ್ಲಿ, ರೈತರು ಇಳುವರಿ ಸಂಗ್ರಹಿಸಿ ಇಕ್ರಿಸಾಟ್ ಸಂಸ್ಥೆಗೆ ಒಂದು ವಾರದೊಳಗಾಗಿ ಕಳುಹಿಸಲು ಸೂಚಿಸಿದೆವು. ಇಕ್ರಿಸಾಟ್ ವಿಜ್ಞಾನಿಗಳು ತಮ್ಮ ಮಣ್ಣು ಪ್ರಯೋಗ ಶಾಲೆಯಲ್ಲಿ ರೈತರ ಭೂಮಿಯಲ್ಲಿನ ಪೋಶಕಾಂಶಗಳ ಬಗ್ಗೆ ಒಂದು ತಿಂಗಳೊಳಗಾಗಿ ಪರೀಕ್ಷೆ ನಡೆಸಬೇಕೆಂದು ಕೋರಿದೆವು. ಅದರಂತೆ, ಭೂಮಿಯಲ್ಲಿ ಇರುವಂಥ ಕೊರತೆಗೆ ಅನುಗುಣವಾಗಿ ಬೇಕಾಗಿರುವ ಪೌಷ್ಟಿಕಾಂಶಗಳ ಬಗ್ಗೆ ಕೃಷಿ ಇಲಾಖಾ ಅಧಿಕಾರಿಗಳಿಗೆ ತಿಳಿಸುವುದೆಂದು ನಿಶ್ಚಯಿಸಲಾಯಿತು. ಈ ಮಾಹಿತಿಯನ್ನು ಸರಳವಾಗಿ ರೈತರಿಗೆ ತಿಳಿಸಲು ಇಲಾಖಾಧಿಕಾರಿ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯ್ತಿ ಮತ್ತು ರೈತ ಸಂಸ್ಥೆಗಳ ಸಹಯೋಗದಿಂದ ಶಿಬಿರಗಳನ್ನು ಏರ್ಪಡಿಸುವುದೆಂದು ತೀರ್ಮಾನಿಸಲಾಯಿತು. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ ಪ್ರಮುಖ ಹಾಗೂ ಲಘು ಪೋಷಕಾಂಶಗಳನ್ನು ಒದಗಿಸಲು ಅದು ಪೂರಕ ಯೋಜನೆಯಾಗಿತ್ತು.
ಸದರಿ ಭೂಮಿ ಪರೀಕ್ಷೆ ಆಧಾರದ ಮೇಲೆ ರೈತರಿಗೆ ಆ ಭೂಮಿಯ ಫಲವತ್ತತೆಯ ಆಧಾರದ ಮೇಲೆ ಯಾವ ಬೆಳೆಯನ್ನು ಬೆಳೆದರೆ ಅತಿ ಹೆಚ್ಚು ಇಳುವರಿ ಸಿಗಬಹುದು ಎಂಬ ಬಗ್ಗೆಯೂ ತಿಳಿವಳಿಕೆ ಹಾಗೂ ವರದಿಯನ್ನು ನೀಡಲು ಇಕ್ರಿಸಾಟ್ಗೆ ಕೋರಿದೆವು. ಅಲ್ಲದೆ, ವೈಜ್ಞಾನಿಕವಾಗಿ ಸ್ಥಳೀಯ ಭೂಮಿಗೆ ಸೂಕ್ತವಾದಂತಹ ಬೀಜ ಬ್ಯಾಂಕ್ ಮಾದರಿಯನ್ನು ಸಹ ಆಯ್ಕೆ ಮಾಡಲು ಕೋರಲಾಯಿತು. ಅದರಂತೆ, ನಮ್ಮ ಕರ್ನಾಟಕ ರಾಜ್ಯ ಬೀಜ ನಿಗಮದ ಅಧಿಕಾರಿಗಳನ್ನು ಈ ಚಟುವಟಿಕೆಯಲ್ಲಿ ಸೇರಿಸಿಕೊಂಡೆವು. ಏಕೆಂದರೆ, ಮುಂಬರುವ ಬಿತ್ತನೆ ಸಮಯದಲ್ಲಿ ಪ್ರತಿಯೊಂದು ಹಳ್ಳಿ ಹಾಗೂ ರೈತ ಸಮೂಹದ ಬೇಡಿಕೆಗೆ ಅನುಕೂಲವಾದಂತಹ ವಿವಿಧ ಬೀಜಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ವ್ಯವಸ್ಥೆ ಆಗಬೇಕಾಗಿತ್ತು. ಮಾತ್ರವಲ್ಲ, ಕೃಷಿ ವಿಜ್ಞಾನ ಕೇಂದ್ರಗಳ ಪ್ರಯೋಗಗಳನ್ನು ಉಪಯೋಗಿಸಿ ಮುಂದಿನ ದಿನಗಳಲ್ಲಿ ರೈತರ ಪಾಲ್ಗೊಳ್ಳುವಿಕೆಯೊಂದಿಗೆ ಸ್ಥಳೀಯವಾಗಿ ಸೂಕ್ತವಾದ ಅತಿ ಉತ್ತಮ ಇಳುವರಿಯನ್ನು ಹೊಂದಿರುವ ಬೀಜಗಳನ್ನು ರೈತರ ಹೊಲದಲ್ಲಿಯೇ ಬೆಳೆಯಲು ಕ್ರಿಯಾ ಯೋಜನೆಯನ್ನು ತಯಾರು ಮಾಡಿದೆವು. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಇಳುವರಿ ಇರುವಂಥ ಹಾಗೂ ರೋಗ ನಿರೋಧಕ ಬೀಜಗಳ ಲಭ್ಯತೆ ಸಾಧ್ಯವಾಗುತ್ತಿತ್ತು.
ಉತ್ತಮ ಬೀಜಗಳನ್ನು ಉಪಯೋಗಿಸಿ ಹಾಗೂ ಉತ್ತಮ ತಾಂತ್ರಿಕ ಕೃಷಿ ಪದ್ಧತಿಯನ್ನು ಅಳವಡಿಸಿ ರೈತರು ಅತಿ ಉತ್ತಮ ಗುಣಮಟ್ಟದ ಉತ್ಪಾದನೆಯನ್ನು ಪಡೆಯುತ್ತಾರೆಂದು ನಾವು ನಿರೀಕ್ಷಿಸಿದೆವು. ಅದಕ್ಕೆ ಸರಿಯಾಗಿ ಮಾರುಕಟ್ಟೆ ವ್ಯವಸ್ಥೆ ಹಾಗೂ ದರವನ್ನು ದೊರಕಿಸಲು ಕೆಲವು ಒಳ್ಳೆಯ ಖರೀದಿದಾರರೊಂದಿಗೆ ಒಪ್ಪಂದವನ್ನು ಮುಂಚಿತವಾಗಿಯೇ ಮಾಡಬೇಕಾಗಿತ್ತು. ಉದಾಹರಣೆಗೆ, ಟಾಟಾ ಸಂಸ್ಥೆಯು ಇಂತಹ ಉತ್ಪಾದನೆಗಳಿಗಾಗಿ ಉತ್ತಮ ಬೆಲೆಯನ್ನು ನೀಡಲು ಮುಂದೆ ಬಂದಿತ್ತು. ರೈತರು ತಮ್ಮ ಉತ್ಪಾದನೆಗೆ ತಕ್ಕಂತೆ ಉತ್ತಮ ದರವನ್ನು ಪಡೆಯಲು ಇಂತಹ ಒಪ್ಪಂದಗಳನ್ನು ಮುಂಚಿತವಾಗಿ ಹಾಗೂ ನೇರವಾಗಿ ಮಾಡಿಕೊಳ್ಳಲು ಸಾಧ್ಯವಾಯಿತು.
ಕೆಲವೊಂದು ರೈತರಿಗೆ ತಮ್ಮ ಭೂಮಿಯನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವಿನ ಕೊರತೆ ಇತ್ತು. ಅಂತಹವರ ಪಟ್ಟಿಯನ್ನು ತಯಾರಿಸಿ ಮುಂಚಿತವಾಗಿ ಸಂಬಂಧಪಟ್ಟ ಗ್ರಾಮೀಣ ಬ್ಯಾಂಕ್ಗಳೊಂದಿಗೆ ಸಂಪರ್ಕ ಕಲ್ಪಿಸಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಕ್ರಮ ಜರುಗಿಸಿದೆವು.
ಪ್ರಗತಿಪರ ರೈತರು ತಮ್ಮ ಬೆಳೆಗಳನ್ನು ರೋಗ ಹಾಗೂ ಕೀಟಬಾಧೆಗಳಿಂದ ತಡೆಗಟ್ಟಲು ಸಮಗ್ರ ಕೀಟ ನಿರೋಧಕ ನಿರ್ವಹಣೆ ಯೋಜನೆಯ ಪ್ರಯೋಜನವನ್ನು ಸಹ ಪಡೆಯಲು ಮುಂದೆ ಬಂದರು. ಈಗಾಗಲೇ ಕೆಲವು ಅಕ್ಕಪಕ್ಕದ ರೈತರು ಉತ್ತಮ ಬೆಳೆ ನಿರ್ವಹಣಾ ಪದ್ಧತಿಯನ್ನು ಅಳವಡಿಸಿದ್ದು ಅವುಗಳನ್ನು ವೀಕ್ಷಿಸಲು ಇಚ್ಛಿಸಿದರು. ಆಗ ಕೃಷಿ ಇಲಾಖೆಯ ವತಿಯಿಂದ ರೈತರ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡೆವು. ಅಲ್ಲದೆ, ಕೆಲವು ರೈತರನ್ನು ಇಕ್ರಿಸಾಟ್ ಸಂಸ್ಥೆಗೆ ಕಳುಹಿಸಿ ಅಲ್ಲಿ ಎಲ್ಲಾ ರೀತಿಯ ಸಂಶೋಧನೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೋಡಿ ಕಲಿತು, ತಮ್ಮ ಹಳ್ಳಿಯಲ್ಲಿ ಅಳವಡಿಸಲು ಅನುಕೂಲ ಮಾಡಿಕೊಟ್ಟೆವು.
ಮುಂಬರುವ ದಿನಗಳಲ್ಲಿ ಸದರಿ 322 ಹಳ್ಳಿಗಳು ಕೃಷಿ ಬೆಳವಣಿಗೆಯಲ್ಲಿ ಮಾದರಿಯಾಗಬೇಕೆಂಬುದು ನಮ್ಮ ಬಯಕೆಯಾಗಿತ್ತು. ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಯೋಜನೆಗಳನ್ನು ಕ್ರೋಢೀಕರಿಸಿ ಉತ್ತಮ ಫಲಿತಾಂಶವನ್ನು ಒದಗಿಸುವುದು ನಮ್ಮ ಶ್ರಮವಾಗಿತ್ತು. ನಮ್ಮ ದೇಶದ ಕೃಷಿ ಕಸಬು ಲಾಭದಾಯಕವಲ್ಲವೆಂಬುದು ಬಹುತೇಕರ ಅಭಿಪ್ರಾಯ. ಅಲ್ಲದೆ, ಉತ್ತಮ ಇಳುವರಿಯನ್ನು ಪಡೆಯಬೇಕಾದರೆ ರಸಗೊಬ್ಬರ, ಕೀಟನಾಶಕ, ಬೀಜ, ನೀರಾವರಿ, ಇತ್ಯಾದಿಗಳಿಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಎಂಬುದು ಎಲ್ಲರ ಅನುಭವ. ತದನಂತರ ಸರಿಯಾದ ಮಾರುಕಟ್ಟೆ ದರ ಸಿಕ್ಕರೆ ಮಾತ್ರ ಮಾಡಿದ ಖರ್ಚು ಸರಿದೂಗಿಸಲು ಸಾಧ್ಯ ಎಂಬುದು ನಮ್ಮ ರೈತರ ಅನಿಸಿಕೆ. ಶೇಕಡ 60ಕ್ಕಿಂತ ಹೆಚ್ಚು ಜನಸಂಖ್ಯೆ ಕೃಷಿ ಆಧಾರದಿಂದ ಬದುಕುತ್ತಿದ್ದು, ಅವರ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದರೆ ನಮ್ಮ ದೇಶದ ಭವಿಷ್ಯವೂ ಸಹ ಅವರ ಮೇಲೆ ತಾನೇ ಅವಲಂಬಿಸುವುದು? ನಕಾರಾತ್ಮಕ ಯೋಚನೆಯಿಂದ ಹೊರಬಂದು ಸುತ್ತಮುತ್ತಲಿನ ಆಧುನಿಕ, ತಾಂತ್ರಿಕ ಬೆಳವಣಿಗೆಗಳನ್ನು ಪರಿಶೀಲಿಸಿ ಅತಿ ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಲಾಭವನ್ನು ಪಡೆಯುವಂತಹ ಪದ್ಧತಿಗಳನ್ನು ನಮ್ಮ ರೈತರಿಗೆ ಕಲಿಸಿಕೊಡುವುದು ನಮ್ಮ ಜವಾಬ್ದಾರಿಯಲ್ಲವೆ? ವೈಜ್ಞಾನಿಕ ಪದ್ಧತಿಗಳ ಸಾಧಕ-ಬಾಧಕಗಳ ವಿವರಗಳನ್ನು ನಮ್ಮ ರೈತರ ಮುಂದೆ ಸುಲಭ ಹಾಗೂ ಸರಳ ರೀತಿಯಲ್ಲಿ ಮಂಡಿಸಿದರೆ ಅವರ ಅನುಭವದ ಆಧಾರದ ಮೇಲೆ ಅಂತಿಮ ತೀರ್ಮಾನವನ್ನು ಅವರು ತೆಗೆದುಕೊಂಡಲ್ಲಿ ಉತ್ತಮ ಪರಿಣಾಮಗಳು ಶತಸ್ಸಿದ್ಧ. ಯಾವುದೇ ಪರಿಣಾಮಕಾರಿ ಬದಲಾವಣೆಯಾಗಬೇಕಾದರೆ ರೈತ ಸಮುದಾಯ ಸಾಮೂಹಿಕವಾಗಿ ಭಾಗವಹಿಸಿದರೆ ಮಾತ್ರ ಸಾಧ್ಯ. ಸರ್ಕಾರದ ಸಂಸ್ಥೆಗಳು ಸಹ ರೈತರ ಬೇಡಿಕೆಗಳನ್ನು ಅರ್ಥಮಾಡಿಕೊಂಡು ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಿದರೆ ಮಾತ್ರ ರೈತರು ಅದರ ಫಲವನ್ನು ಪಡೆದು ಸಮಾಜಕ್ಕೆ ಸುಮಾರು ಪಟ್ಟು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯನ್ನು ಕೊಡುತ್ತಾರೆ. ಆಗ ರಾಜ್ಯದ ಆದಾಯವನ್ನು ಹೆಚ್ಚಿಸಬಹುದಾಗಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಇಲಾಖೆಯಿಂದ 'ಭೂಚೇತನ' ಎಂಬ ಯೋಜನೆ ಪ್ರಾರಂಭವಾಯಿತು.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


