

ಅದು ಯಾವುದೇ ಪಕ್ಷ ಇರಲಿ, ಚುನಾವಣೆ ಸಂದರ್ಭದಲ್ಲಿ ಬಂಡಾಯ ಕಟ್ಟಿಟ್ಟ ಬುತ್ತಿ. ಟಕೆಟ್ ಸಿಗದ ಆಕಾಂಕ್ಷಿಗಳು ಆಕಾಶ-ಭೂಮಿ ಒಂದು ಮಾಡಿ ಹಾರಾಡುವುದು ಸಹಜ. ಹಾಗೆ ನೋಡಿದರೆ ಚುನಾವಣೆ ಹಾಗೂ ಬಂಡಾಯ ಒಟ್ಟೊಟ್ಟಿಗೇ ಬರುತ್ತವೆ. ಅಕಸ್ಮಾತ್ ಬಂಡಾಯ ಕಾಣಿಸಿಕೊಳ್ಳಲಿಲ್ಲ ಎಂದಿಟ್ಟುಕೊಳ್ಳಿ, ಆ ಪಕ್ಷಕ್ಕೆ ಅಷ್ಟರ ಮಟ್ಟಿಗೆ ಕಿಮ್ಮತ್ತು ಇಲ್ಲ ಎಂದೇ ಅರ್ಥ. ಆ ಪಾರ್ಟಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ ಎಂಬುದು ಹೊಸ ರಾಜಕೀಯ ವ್ಯಾಖ್ಯಾನ.
ಈಗ ಲೋಕಸಭೆ ಚುನಾವಣೆ ಬಂದಿದೆ. ಒಂದಷ್ಟು ಜನಕ್ಕೆ ಟಿಕೆಟ್ ಸಿಕ್ಕಿದೆ. ಇನ್ನೊಂದಷ್ಟು ಮಂದಿಗೆ ತಪ್ಪಿದೆ. ಮತ್ತೊಂದಷ್ಟು ಮಂದಿ ಕಾಯುತ್ತಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎರಡೂ ಕಡೆ ಟಿಕೆಟ್ ಸಿಗದವರು ಹಾಗೂ ಟಿಕೆಟ್ ತಪ್ಪಿಸಿದವರ ನಡುವೆ ಗಲಾಟೆ ಶುರುವಾಗಿದೆ. ಟಿಕೆಟ್ ತಪ್ಪಿದ ಕೆಲವರು ಪಕ್ಷದ ನಾಯಕತ್ವದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಈ ರೀತಿಯ ಆಸಮಾಧಾನ ಕಾಣಿಸಿಕೊಂಡಿದ್ದರೆ, ಹೀಗೆ ಅನ್ಯಪಕ್ಷಗಳಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿರುವವರನ್ನು ಪಕ್ಷಕ್ಕೆ ಕರೆದೊಯ್ದು ಮಣೆ ಹಾಕಿ, ಟಿಕೆಟ್ ಕೊಡಲು ಜೆಡಿಎಸ್ ಕಾಯುತ್ತಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ಟಿಕೆಟ್ ತಪ್ಪಿದಕ್ಕಾಗಿ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿರುವ ಹಿರಿಯ ಕಾಂಗ್ರೆಸ್ಸಿಗ ಸಿ.ಕೆ. ಜಾಫರ್ ಷರೀಫ್ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದ ಗಮನ ಸೆಳೆದಿದ್ದಾರೆ. ಐದು ದಶಕಗಳಿಗೂ ಅಧಿಕ ಕಾಲ ಪಕ್ಷದಲ್ಲಿ ಜೀವ ತೇಯ್ದಿದ್ದ ಷರೀಫ್ ಸಾಹೇಬರ ಬಂಡಾಯ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ ಅವರೀಗ ಜೆಡಿಎಸ್ ಪಾಳೆಯದಲ್ಲಿ ಠಳಾಯಿಸುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟು ಮಾಡಿದೆ.
ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿದ್ದ, ಆ ಕಾರಣದಿಂದಲೇ ರೈಲ್ವೆ ಸಚಿವ ಸ್ಥಾನ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಷರೀಫರು ಈಗ ಇದ್ದಕ್ಕಿದ್ದಂತೆ ಪಕ್ಷದಲ್ಲಿ ನೇಪಥ್ಯಕ್ಕೆ ಸರಿಸಲ್ಪಿಟ್ಟಿರುವುದರ ಹಿಂದೆ ನಾನಾ ಕಾರಣಗಳು ಅಡಗಿವೆ. ಪ್ರತಿತಂತ್ರ, ಕುತಂತ್ರ, ಪ್ರತೀಕಾರ ಎಲ್ಲವೂ ಅಡಗಿವೆ. ಅಲ್ಪಸಂಖ್ಯಾತ ಸಮುದಾಯದವರೇ ನಿರ್ವಹಿಸುತ್ತಿದ್ದ, ಕೇಂದ್ರದ ಮಾಜಿ ಸಚಿವ ರೆಹಮಾನಖಾನ್ ಪಾರುಪತ್ಯವಿದ್ದ ಅಮಾನತ್ ಕೋ-ಅಪರೇಟಿವ್ ಬ್ಯಾಂಕ್ನ ಅವ್ಯವಹಾರಗಳ ವಿರುದ್ಧ ನಡೆಸಿದ ಹೋರಾಟದಿಂದ ಹಿಡಿದು ಮಾಜಿ ಪ್ರಧಾನಿ ದೇವೇಗೌಡರ ಜತೆಗಿನ ಸಖ್ಯದವರೆಗಿನ ಹಲ ವಿಚಾರಗಳು ಷರೀಫರ ಟಿಕೆಟ್ ನುಂಗಿ, ಇದೀಗ ಅವರನ್ನು ಬಂಡಾಯ ನಾಯಕರನ್ನಾಗಿ ಪರಿವರ್ತಿಸಿದೆ.
ಹೌದು, ಕಾಂಗ್ರೆಸ್ನಲ್ಲಿ ಕಡೆಗಣಿತರಾಗಿದ್ದರಿಂದ ಷರೀಫರು ದೇವೇಗೌಡರ ಸಖ್ಯ ಬೆಳೆಸಿದರೋ, ದೇವೇಗೌಡರ ಸಖ್ಯ ಬೆಳೆಸಿದ್ದರಿಂದ ಕಾಂಗ್ರೆಸ್ನಲ್ಲಿ ಕಡೆಗಣಿತರಾದರೋ ಎಂಬುದು ಚರ್ಚೆಗೆ ಒಳಗಾಗಿರುವ ವಿಷಯ. ಇದರ ಮಧ್ಯೆ ದ್ವೇಷಾಸೂಯೆ, ಸೇಡಿನ ರಾಜಕಾರಣ ಕೂಡ ನುಸುಳಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ಗೆ ಬಂದ ದಿನದಿಂದಲೂ ಅವರು ಮತ್ತು ಷರೀಫರ ನಡುವೆ ಒಂದು ಹಂತದ ಅಂತರ ಇದ್ದೇ ಇತ್ತು. ಬಹುಶಃ ದೇವೇಗೌಡರು ಮತ್ತು ಷರೀಫರ ನಡುವೆ ಮೊದಲಿಂದಲೂ ಇದ್ದ ರಾಜಕೀಯೇತರ ಬಾಂಧವ್ಯ ಇದಕ್ಕೆ ಕಾರಣ ಇರಬಹುದು. ಏಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ನೀಡದ ಗೌಡರ ಕುಟುಂಬ ರಾಜಕೀಯಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ಗೆ ಬಂದಿದ್ದರು. ತಾವು ತಿರಸ್ಕರಿಸಿ ಬಂದವರ ಜತೆ ಷರೀಫರ ಸಖ್ಯ ಸಹಜವಾಗಿಯೇ ಸಿದ್ದರಾಮಯ್ಯನವರಿಗೆ ಅಪಥ್ಯವಾಗಿತ್ತು.
ಹೀಗಿರುವಾಗ ಆರು ತಿಂಗಳ ಹಿಂದೆ ತಾವು ಆಸ್ಥೆ ವಹಿಸಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶಕ್ಕೆ ಸಿದ್ದರಾಮಯ್ಯ ಬಾರದೇ ಹೋದದ್ದು ಷರೀಫರನ್ನು ಕೆಂಡಾಮಂಡಲರನ್ನಾಗಿಸಿತ್ತು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದದ್ದು 'ಅಹಿಂದ' ಬೆಂಬಲದ ಹಿನ್ನೆಲೆಯಲ್ಲಿ ಜನಜನಿತವಾದ ವಿಷಯ. ಅಂಥ ಅಹಿಂದ ಅಂಗವಾದ ಅಲ್ಪಸಂಖ್ಯಾತರ ಸಮಾವೇಶಕ್ಕೆ ಸಿದ್ದರಾಮಯ್ಯ ಗೈರು ಷರೀಫರಲ್ಲಿ ಆಕ್ರೋಶದ ನುಡಿಗಳನ್ನು ಹೊರಹೊಮ್ಮಿಸಿತ್ತು. ಸಿದ್ದರಾಮಯ್ಯ ಈ ಸಮಾವೇಶಕ್ಕೆ ಬರಬೇಕಿತ್ತು. ಅವರು ಬಾರದೇ ಹೋದದ್ದು ಸರಿಯಲ್ಲ ಎಂದು ನೇರವಾಗಿಯೇ ಹೇಳಿದ್ದರು. ಜತೆಗೆ ಆಗಲೇ ಷರೀಫರು ಮತ್ತೊಂದು ಮಾತು ಹೇಳಿದ್ದರು. ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಸರಿ. ಆದರೆ ನಾಳೆ ಸಂಸತ್ತಿನಲ್ಲಿ ಆಡ್ವಾಣಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಅವರಂಥ ನಾಯಕರಿಗೆ ಅನನುಭವಿಗಳು ಉತ್ತರ ನೀಡಲು ಸಾಧ್ಯವೇ? ಹೀಗಾಗಿ ಹಿರಿತನಕ್ಕೆ ಗೌರವ ಸಲ್ಲಲೇಬೇಕು ಎಂದಿದ್ದರು. ಅಂದರೆ ಸಂಸತ್ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸಲು ಮಸಲತ್ತು ನಡೆದಿದೆ ಎಂಬ ಸುಳಿವು ಆಗಲೇ ಷರೀಫರಿಗೆ ಸಿಕ್ಕಿತ್ತು ಎಂಬುದು ಇದರ ಅರ್ಥ.
ಇದಾದ ನಂತರ ಷರೀಫರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಸಂಸತ್ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು. ಅವರು ಹಿರಿಯ ನಾಯಕ. ಜತೆಗೆ ಮಾಜಿ ಪ್ರಧಾನಿ. ಹೀಗಾಗಿ ಪಕ್ಷ ತಮ್ಮ ಸಲಹೆ ಪರಿಗಣಿಸಬೇಕು ಎಂದು ಅವರು ಪತ್ರದಲ್ಲಿ ಹೇಳಿದ್ದುದು ಸಿದ್ದರಾಮಯ್ಯನವರನ್ನು ಇನ್ನಷ್ಟು ಕೆರಳಿಸಿತ್ತು. ತಮ್ಮನ್ನು ಕೆಣಕಲೆಂದೇ ಷರೀಫರು ಇಂಥ ದುಸ್ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು.
ಏತನ್ಮಧ್ಯೆ, ಷರೀಫರ ಈ ನಡೆಯನ್ನು ರೆಹಮಾನ್ಖಾನ್ ವ್ಯಕ್ತಿಗತ ಸೇಡು ತೀರಿಸಿಕೊಳ್ಳಲು ಬಳಸಿಕೊಂಡರು. ಅಮಾನತ್ ಕೋ-ಅಪರೇಟಿವ್ ಬ್ಯಾಂಕ್ ಅವ್ಯವಹಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಹಠ ಹಿಡಿದಿದ್ದ ಷರೀಫರಿಗೆ ಟಿಕೆಟ್ ತಪ್ಪಿಸುವಲ್ಲಿ ಅವರೂ ಕೂಡ ಕೈಜೋಡಿಸಿದ್ದಾರೆ. ಹೀಗಾಗಿ ಷರೀಫರು ಟಿಕೆಟ್ ಬಯಸಿದ್ದ ಬೆಂಗಳೂರು ಸೆಂಟ್ರಲ್ಗೆ ಅವರದೇ ಸಮುದಾಯದ, ಅವರ ಮೊಮ್ಮಗನ ವಯಸ್ಸಿನ, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅಭ್ಯರ್ಥಿಯಾಗಿದ್ದಾರೆ.
ಇಳಿವಯಸ್ಸಿನಲ್ಲಿ ಕಾಂಗ್ರೆಸ್ ಅಂಗಳದ ಮೂಲೆ ಸೇರಿರುವ ಷರೀಫರ ರಾಜಕೀಯ ನಡೆ ಈಗ ಕುತೂಹಲ ಕೆರಳಿಸಿದೆ. ಬಹಿರಂಗವಾಗಿಯೇ ದೇವೇಗೌಡ ಮತ್ತು ನರೇಂದ್ರ ಮೋದಿ ಪರ ಅವರು ಮಾತಾಡುತ್ತಿರುವುದನ್ನು ಕಾಂಗ್ರೆಸ್ಗೆ, ಅದರಲ್ಲೂ ಈ ಚುನಾವಣೆ ಸಂದರ್ಭದಲ್ಲಿ ಆರಗಿಸಿಕೊಳ್ಳಲು ಆಗುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದ ಮೇಲೆ ಒಂದು ಹಂತಕ್ಕೆ ಹಿಡಿತ ಸಾಧಿಸಿರುವ ಷರೀಫರ ಮುಂದಿನ ಹೆಜ್ಜೆಯನ್ನು ಎಲ್ಲರೂ ಕಾತುರದಿಂದ ನೋಡುತ್ತಿದ್ದಾರೆ. ಮಾತೃಪಕ್ಷದಲ್ಲೇ ಇರಬೇಕೋ, 'ಪಿತಸುತ'ರ ಪಕ್ಷ (ಜೆಡಿಎಸ್) ಸೇರಬೇಕೋ, ಅತಿಥಿಗಳ (ಬಿಜೆಪಿ) ಕರೆಗೆ ಓಗೊಡಬೇಕೋ ಅಥವಾ ರಾಜಕೀಯ ಸಹವಾಸವೇ ಬೇಡ ಎಂದು ವಿಶ್ರಾಂತ ಜೀವನ ನಡೆಸಬೇಕೋ ಎಂಬ ಗೊಂದಲಗಳಲ್ಲಿ ಮುಳುಗಿರುವ ಷರೀಫ್, ಪರಿಹಾರಕ್ಕೆ ದೇವರ ಮೊರೆ ಹೋಗಿದ್ದಾರೆ.
ಒಂದೊಮ್ಮೆ ಷರೀಫರು ಕಾಂಗ್ರೆಸ್ ತೊರೆದು ಕಣಕ್ಕೆ ಇಳಿಯಬಯಸಿದರೆ ಏನಾಗಬಹುದು? ರಾಜಕೀಯ ಒಳ ಮತ್ತು ಹೊರಗಿನ ಲೆಕ್ಕಾಚಾರಗಳನ್ನು ಅವಲೋಕಿಸಿದಾಗ ಷರೀಫರು ಜೆಡಿಎಸ್ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ಬೆಂಗಳೂರು ಸೆಂಟ್ರಲ್ ಅಥವಾ ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಇವೆ. ಅದರೆ ಈ ಸುದ್ದಿಯನ್ನು ಗಾಳಿಯಲ್ಲಿ ಹರಿಸುತ್ತಾ, ಅಂತಿಮವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ನಿರೀಕ್ಷಿಸಲಾಗಿದೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲ ಇಷ್ಟಕ್ಕೇ ನಿಂತಿಲ್ಲ. ಸಲೀಂ ಅಹಮದ್ ಕಣಕ್ಕೆ ಇಳಿಯ ಬಯಸಿರುವ ಹಾವೇರಿಯಲ್ಲಿ ತಮ್ಮ ಸಹೋದರ ಡಿ.ಆರ್. ಪಾಟೀಲ್ ಅವರನ್ನು ಇಳಿಸಲು ಸಚಿವ ಎಚ್.ಕೆ. ಪಾಟೀಲ್ ಇಚ್ಛಿಸಿದ್ದಾರೆ. ಹುಬ್ಭಳ್ಳಿ-ಧಾರವಾಡದಲ್ಲಿ ಐ.ಜಿ. ಸನದಿ ಜತೆ ಅಜ್ಜಂಪೀರ್ ಖಾದ್ರಿ ಪೈಪೋಟಿಗೆ ಬಿದ್ದಿದ್ದಾರೆ. ಬೆಂಗಳೂರು ಸೆಂಟ್ರಲ್, ಹಾವೇರಿ, ಹುಬ್ಬಳ್ಳಿ-ಧಾರವಾಡ ಮೂರು ಕಡೆ ಅಥವಾ ಎರಡು ಕಡೆ ಮುಸ್ಲಿಂ ಸಮುದಾಯಕ್ಕೆ ಕೊಟ್ಟರೆ ಇನ್ನು ಕ್ರಿಶ್ಚಿಯನ್ ಕೋಟಾ ಏನಾಗಬೇಕು. ಒಬ್ಬರಿಗಾದರೂ ಕೊಡದೇ ಇರಲು ಆದೀತೇ? ಈ ಸಮುದಾಯಕ್ಕೆ ಸೇರಿದ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿರುವ ಉತ್ತರ ಕನ್ನಡದಲ್ಲಿ ರಾಜ್ಯ ಸಚಿವ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಅಕಾಂಕ್ಷಿಗಳಾಗಿದ್ದಾರೆ. ಮೂರೂ ಜನಕ್ಕೆ ಟಿಕೆಟ್ ಸಿಗಲು ಅಸಾಧ್ಯವಾದ್ದರಿಂದ ಅಸಮಾಧಾನಕ್ಕೆ ಆಸ್ಪದವಿದೆ.
ಟಿಕೆಟ್ ಸಿಗದವರ ಕತೆ ಇದಾದರೆ ಟಿಕೆಟ್ ಸಿಕ್ಕರೂ ಬೇಡ-ಬೇಡ ಎಂದು ಪರಾರಿಯಾದವರ ಕತೆ ಮತ್ತೊಂದು. ಸಚಿವ ಆಂಜನೇಯ ದಿಲ್ಲಿ ಮುಖಂಡರ ಬಾಗಿಲು ಅಲೆದು ಚಿತ್ರದುರ್ಗದ ಟಿಕೆಟ್ ತಪ್ಪಿಸಿಕೊಂಡಿದ್ದಾರೆ. ಮತ್ತೊಬ್ಬ ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರೂ ಯಶಸ್ವಿಯಾಗದೇ ಸಿಕ್ಕಿಹಾಕಿಕೊಂಡಿದ್ದಾರೆ. ಕೇಂದ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಹೀಗಿರುವಾಗ ಸಚಿವ ಸ್ಥಾನ ತ್ಯಾಗ ಮಾಡಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು (ಅದೂ ಗೆದ್ದರೆ) ಏಕೆ ಹೋಗಬೇಕು ಎಂಬುದು ಇವರಿಬ್ಬರ 'ನೈಜ' ಕಾಳಜಿ. ಆದರೆ ಆಂಜನೇಯ ಅವರಿಗೆ ಸಿಕ್ಕ ಲಕ್ ಹುಕ್ಕೇರಿ ಅವರಿಗೆ ಕೈ ಕೊಟ್ಟಿದೆ. ಅಸಮಾಧಾನದ ಜತೆಜತೆಗೆ. ಇದೇ ರೀತಿಯ ಗೊಂದಲ, ಅಸಮಾಧಾನ ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ಗುಲ್ಬರ್ಗಾದಲ್ಲೂ ಕಾಣಿಸಿಕೊಂಡಿದ್ದು, ಕಾಂಗ್ರೆಸ್ನ ನಿದ್ದೆಗೆಡಿಸಿದೆ. ಆಡಳಿತ ಪಕ್ಷ ಆಗಿರುವ ಕಾರಣ ನಿದ್ರಾಹೀನತೆ ಕೊಂಚ ಹೆಚ್ಚಾಗಿಯೇ ಇದೆ.
ಇನ್ನು ಬಿಜೆಪಿಯ ಕತೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಠ ಸಾಕಷ್ಟು ಅಸಮಾಧಾನ ಸೃಷ್ಟಿಸಿದೆ. ಚಿಕ್ಕಮಗಳೂರು-ಉಡುಪಿ, ತುಮಕೂರು, ಕೊಪ್ಪಳದಲ್ಲಿ ಬಂಡಾಯಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ಪಡೆದಿರುವುದು ಶಾಸಕರಾದ ಸಿ.ಟಿ. ರವಿ, ಸುನೀಲ್ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ಕೊಡಿಸಬೇಕು ಎಂಬುದು ಅವರ ಇರಾದೆಯಾಗಿತ್ತು. ಯಡಿಯೂರಪ್ಪ ಜತೆ ಸೇರಿಕೊಂಡು ಹಿಂದೆ ಬಿಜೆಪಿ ಮುಖಂಡರನ್ನು ಬಾಯಿಗೆ ಬಂದಂತೆ ನಿಂದಿಸಿದ್ದ ಬಸವರಾಜ್ ತುಮಕೂರು ಅಭ್ಯರ್ಥಿ ಆದದ್ದು ಮತ್ತೊಬ್ಬ ಆಕಾಂಕ್ಷಿ ಸೊಗಡು ಶಿವಣ್ಣ ಅವರು ಸೇರಿದಂತೆ ಬಿಜೆಪಿ ಮುಖಂಡರನ್ನು ರೊಚ್ಚಿಗೆಬ್ಬಿಸಿದೆ. ಅವರೆಲ್ಲರೂ ಬಸವರಾಜ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಕೊಪ್ಪಳದಲ್ಲಿ ಬಿಜೆಪಿ ಮಾಜಿ ಸಂಸದ ಶಿವರಾಮಗೌಡರ ಬದಲು ಯಡಿಯೂರಪ್ಪ ಬೆಂಬಲಿಗ ಕರಡಿ ಸಂಗಣ್ಣ ಅಭ್ಯರ್ಥಿಯಾಗಿದ್ದಾರೆ. ಸಹಜವಾಗಿಯೇ ಶಿವರಾಮಗೌಡ ಬೆಂಬಲಿಗರು ಮುನಿದಿದ್ದಾರೆ. ಹಠಸಾಧನೆ ಮೂಲಕ ಬಿಜೆಪಿಯಲ್ಲಿ ತಾವೀಗಲೂ ಪ್ರಭಾವಿ ಎಂಬುದನ್ನು ಯಡಿಯೂರಪ್ಪ ಸಾಬೀತುಪಡಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಮೈಸೂರಿನ ಟಿಕೆಟ್ ಕೊಟ್ಟದ್ದು, ಇನ್ನೊಬ್ಬ ಆಕಾಂಕ್ಷಿ ವಿಜಯ ಶಂಕರ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತಾದರೂ ಇದೀಗ ನಿವಾರಣೆಯಾಗಿದೆ. ಸ್ಥಳೀಯರಿಗೇ ಟಿಕೆಟ್ ಕೊಡಬೇಕು ಎಂಬ ವಾದವನ್ನು ವಿಜಯ ಶಂಕರ್ ಬೆಂಬಲಿಗರು ಮುಂದಿಟ್ಟಿದ್ದರು. ಆದರೆ ಚಿಕ್ಕಮಗಳೂರಿನ ಡಿ.ಬಿ. ಚಂದ್ರೇಗೌಡ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದೇ ರೀತಿ ಇದೀಗ ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು-ಉಡುಪಿ ಅಭ್ಯರ್ಥಿ. ಎಲ್ಲಕ್ಕಿಂತ ಮಿಗಿಲಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ವಂತ ರಾಜ್ಯ ಗುಜರಾತ್ ಬಿಟ್ಟು ಉತ್ತರ ಪ್ರದೇಶದ ವಾರಾಣಸಿ ಅಭ್ಯರ್ಥಿ ಆಗಿ ಹೊರಹೊಮ್ಮಿದ್ದಾರೆ. ಹೀಗಿರುವಾಗ 'ಸ್ಥಳೀಯ ವಾದ' ಮೂಲೆ ಸೇರಿದೆ.
ಇದು ಕಾಂಗ್ರೆಸ್ ಮತ್ತು ಬಿಜೆಪಿ ಕತೆಯಾದರೆ ಜೆಡಿಎಸ್ ನೆರೆಹೊರೆ ಪಕ್ಷಗಳ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಂಚಿತರಿಗೆ ಗಾಳ ಹಾಕಬಯಸಿರುವ ಜೆಡಿಎಸ್ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಅದರ ಕಾಯ್ದು ನೋಡುವ ತಂತ್ರದ ಮೇಲೆ ಈ ಪಟ್ಟಿ ಅವಲಂಬಿತವಾಗಿದೆ. ಉಳಿದೆರಡು ಪಕ್ಷಗಳಿಗೆ ಹೋಲಿಸಿದಲ್ಲಿ ಜೆಡಿಎಸ್ನಲ್ಲಿ ಅಸಮಾಧಾನದ ತೀವ್ರತೆ ಕಡಿಮೆ ಇರಬಹುದಾದರೂ, ಬಂಡಾಯದ ಬಿಸಿ ಅದನ್ನೂ ಕಾಡದೇ ಬಿಡುವುದಿಲ್ಲ ಎಂಬುದು ಸತ್ಯ.
ಲಗೋರಿ: ಬಂಡಾಯ ತರ್ಕಬದ್ದವಾಗಿರಬೇಕು. ಆದರೆ ಮುಳುವಾಗಬಾರದು.
- ಪಿ. ತ್ಯಾಗರಾಜ್
thyagarjun@gmail.com