ಅಂಕಣಗಳು

ಪ್ರಧಾನಿಯಾಗಿ ಮೋದಿ ಹೇಗಿರಬೇಕು?

Published On :

ಆಗಲೇ ಮಿಂಚುತ್ತಿದೆ ಉಪದೇಶಗಳ ಝಲಕು!
ಭಾರತದ ರಾಜಕಾರಣಕ್ಕೆ ಎಂಥ ರಂಗಿದೆಯೋ ಅಂಥದೇ ಬಹುವರ್ಣ ರಾಜಕೀಯ ವಿಶ್ಲೇಷಣೆ, ಅಭಿಮತಗಳಲ್ಲೂ ಇದೆ. ಪತ್ರಕರ್ತರು, ರಾಜಕೀಯ ಅಂಕಣಕಾರರು, ವಿಷಯ ತಜ್ಞರು ಇವರ ಆಡುಂಬೊಲವನ್ನು ಗಮನಿಸುವುದೇ ಸೊಗಸು. ಅದರಲ್ಲೂ ಚುನಾವಣೆಯ ಬಿರುಸಿನ ಸಮಯದಲ್ಲಿ ನಾನಾ ಪತ್ರಿಕೆ, ಇತರೇ ಮಾಧ್ಯಮ ವೇದಿಕೆಗಳ ಅಂಕಣಕಾರರು ಯಾವ ಯೋಚನೆಗಳನ್ನು ಹರವಿಡುತ್ತಿದ್ದಾರೆ ಎಂಬುದರ ಸಾರಾಂಶ ಆಸಕ್ತಿಕರವಾಗಿರುತ್ತದೆ.
--------
ಔಟ್‌ಲುಕ್ ಸಮೂಹದ ವಿನೋದ್ ಮೆಹ್ತಾ ಪ್ರಾರಂಭದಿಂದಲೂ ನರೇಂದ್ರ ಮೋದಿಯ ಪ್ರಖರ ಟೀಕಾಕಾರರೇ. ತಿಂಗಳ ಹಿಂದೆ ತಮ್ಮ ಅಂಕಣವೊಂದರಲ್ಲಿ, 'ಮೋದಿ ಅಧಿಕಾರಕ್ಕೆ ಬಂದರೆ ಇಂಗ್ಲಿಷ್ ಮೀಡಿಯಾವನ್ನು ಸುಮ್ಮನೇ ಬಿಡಲಿಕ್ಕಿಲ್ಲ. ಅವರ ಆಕ್ರೋಶದಿಂದ ಪಾರಾಗಬಹುದಾದ ಸಂಪಾದಕ ಎಂದರೆ 'ಪಯೊನೀರ್‌'ನ ಚಂದನ್ ಮಿತ್ರ ಮಾತ್ರವಾದ್ದರಿಂದ ನಾನು ಚಂದನ್‌ಗೆ ಷಿವಾಸ್ ರೀಗಲ್ ಮದ್ಯದ ಬಾಟಲಿ ಕಳುಹಿಸಿ ನನ್ನ ಬಗ್ಗೆ ಸಂಭಾವ್ಯ ಅಧಿಕಾರಸ್ಥರ ಕಿವಿಗೆ ಒಳ್ಳೆಯ ಮಾತು ಬೀಳುವಂತೆ ನೋಡಿಕೊಳ್ಳುತ್ತೇನೆ' ಎಂದೆಲ್ಲ ತಮ್ಮನ್ನೇ ಲಘುವಾಗಿ ತಮಾಷೆ ಮಾಡಿಕೊಂಡಿದ್ದರು.
ಭಾನುವಾರ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ಬರೆದ ಅಂಕಣದಲ್ಲೂ ಅವರು ಮೋದಿಯನ್ನು ಈ ಹಿಂದಿನಂತೆಯೇ ತೆಗಳಿದ್ದಾರಾದರೂ ಮೋದಿ ವಿರೋಧಿಗಳ ಅನಿವಾರ್ಯತೆಯನ್ನೂ ಹೊರಹಾಕಿದ್ದಾರೆ. 'ಮೋದಿ ವಿರೋಧಿಗಳಲ್ಲಿ ಒಬ್ಬನಾಗಿರುವ ನಾನು ಅನಂತಮೂರ್ತಿ ಅವರಂತೆ ಮೋದಿ ಪ್ರಧಾನಿಯಾದರೆ ದೇಶ ತೊರೆಯುವೆ ಎನ್ನಲಾರೆ. ಆದರೆ ಅಮರ್ತ್ಯ ಸೇನ್ ಅವರಂತೆ- ಭಾರತೀಯನಾಗಿ ಮೋದಿ ನನ್ನ ಪ್ರಧಾನಿಯಾಗುವುದನ್ನು ಸಹಿಸಲಾರೆ. ಏಕೆಂದರೆ ಅಲ್ಪಸಂಖ್ಯಾತರಲ್ಲಿ ಸುರಕ್ಷತಾಭಾವ ಮೂಡಿಸುವ ನಿಟ್ಟಿನಲ್ಲಿ ಅವರು ಯೋಗ್ಯ ಕೆಲಸ ಮಾಡಿಲ್ಲ.- ಎನ್ನುವ ನಿಲವಿಗೆ ಅಂಟಿಕೊಂಡಿರುತ್ತೇನೆ.
ಆದರೇನು ಮಾಡೋಣ ಹೇಳಿ, ವಾಸ್ತವ ತೂಗಾಡುತ್ತಿದೆ. ಗೋಡೆಮೇಲೆ ದಪ್ಪಕ್ಷರಗಳಲ್ಲಿ ಬರೆದಿರುವುದು ನನಗೆ ಸ್ಪಷ್ಟವಾಗಿ ಕಾಣುತ್ತಿದೆ: ಮೇ 16ರ ಎನ್‌ಡಿಎ ಸರ್ಕಾರ ಮೋದಿ ನೇತೃತ್ವದಲ್ಲೇ. ದೈವಿಕ ಬಲವೊಂದೇ ಇದನ್ನು ತಡೆಯಬಲ್ಲದಷ್ಟೆ.'
ಮೋದಿ ವಿಭಜಕ ಶಕ್ತಿ ಎಂಬ ಅಭಿಪ್ರಾಯಕ್ಕೇ ಅಂಟಿಕೊಂಡಿರುವ ಮೆಹ್ತ ಅವರು, ನ್ಯೂಯಾರ್ಕ್ ಟೈಮ್ಸ್‌ನ ವಿಶ್ಲೇಷಣೆಯೊಂದನ್ನು ಉದಾಹರಿಸುತ್ತ, ವೈವಿಧ್ಯಗಳ ಆಗರವಾಗಿರುವ ಭಾರತದಲ್ಲಿ ಹಲವು ಸಮುದಾಯಗಳಲ್ಲಿ ಭಯ ಹುಟ್ಟಿದರೆ ತಾನು ದೀರ್ಘಾವಧಿಗೆ ಆಳಲಾಗದು ಎಂಬ ಅರಿವು ಅವರಿಗೆ ವಾಜಪೇಯಿ ಮಾದರಿಯನ್ನು ಅನುಸರಿಸುವುದಕ್ಕೇ ಪ್ರೇರೇಪಿಸೀತು ಎಂದು ಸಮಾಧಾನಿಸಿಕೊಳ್ಳುತ್ತಾರೆ!
----------
ನರೇಂದ್ರ ಮೋದಿ ಅವರಿಗೆ 'ವಾಜಪೇಯಿ ಇಮೇಜ್‌' ಅಪ್ಪಿಕೊಳ್ಳಬೇಕಾದ ಅಗತ್ಯದ ಬಗ್ಗೆ ಮತ್ತೊಬ್ಬ ವಿವಾದಾತ್ಮಕ ಪತ್ರಕರ್ತೆ, ಎನ್‌ಡಿಟಿವಿ ಸಮೂಹ ಸಂಪಾದಕಿ ಬರ್ಖಾದತ್ ಸಹ 'ಹಿಂದೂಸ್ತಾನ್ ಟೈಮ್ಸ್‌'ನ ತಮ್ಮ ಲೇಖನದಲ್ಲಿ ಉಪದೇಶಿಸಿದ್ದಾರೆ. ಅವರೂ ಮುಂದಿನ ಸರ್ಕಾರವನ್ನು ನರೇಂದ್ರ ಮೋದಿಯೇ ಮುನ್ನಡೆಸಲಿದ್ದಾರೆ ಎಂಬುದನ್ನು ಹೆಚ್ಚು ಕಡಿಮೆ ಒಪ್ಪಿಕೊಂಡಂತಿದೆ. 'ಅನಿರೀಕ್ಷಿತ ಹಾಗೂ ಇದುವರೆಗೆ ಪತ್ತೆಯಾಗಿರದ ಗುಪ್ತಗಾಮಿನಿಯೊಂದು ಅಡ್ಡ ಬರದಿದ್ದ ಪಕ್ಷದಲ್ಲಿ ಎಲ್ಲರೂ ನಿರೀಕ್ಷಿಸಿರುವಂತೆ ಮೋದಿ ಅಲೆ ತೀರಕ್ಕೆ ಬಡಿಯುವುದು ಖಚಿತ' ಎಂಬ ಅಭಿಮತ ಅವರದ್ದು.
ನರೇಂದ್ರ ಮೋದಿಯವರು ಮುಂಬರುವ ದಿನಗಳಲ್ಲಿ ವಾಜಪೇಯಿ ಇಮೇಜ್ ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಪೂರ್ವಭಾವಿ ಪೀಠಿಕೆಯಲ್ಲಿ ಅವರು ಹೇಳುವುದಿಷ್ಟು: ನರೇಂದ್ರ ಮೋದಿ ಪ್ರಧಾನಿಯಾಗಿರುವ ಅವಕಾಶವನ್ನು ವೃದ್ಧಿಸಿಕೊಂಡಿರುವುದು ಪುರುಷ ಸ್ವಭಾವಕ್ಕೆ ಆರೋಪಿಸಬಹುದಾದ 'ಗಡಸುತನ'ದ ಇಮೇಜ್ ಮೂಲಕ. ಈಗಿನ ಸರ್ಕಾರವನ್ನು ಮುನ್ನಡೆಸಿದವರ ನಾಮ್‌ಕೆವಾಸ್ತೆತನವೇ ಈ ಚುನಾವಣೆಯಲ್ಲಿ 'ಬಲಿಷ್ಠ ಕೇಂದ್ರ ನಾಯಕತ್ವ'ವೇ ಪ್ರಮುಖವಾಗುವುದಕ್ಕೆ ಕಾರಣವಾಗಿದೆ. ರಾಹುಲ್ ಮೆದುತನವೂ ಇದಕ್ಕೆ ಕೊಡುಗೆ ನೀಡಿದೆ. ಆದರೆ ಪ್ರಚಾರ ಸಮಯದಲ್ಲಿ ಮೋದಿ ಹೇಳುತ್ತಿರುವ '56 ಇಂಚಿನ ಎದೆ'ಯ ಪರಾಕ್ರಮವೆಲ್ಲ ಟಿವಿ ಸುದ್ದಿಗೆ ರಂಜನೆ ಕೊಡಬಹುದಷ್ಟೇ. ಅವರೇಕೆ ತಮ್ಮ ಮೃದುಮುಖವನ್ನು ತೋರಿಸಬಾರದು? ಈ ಹಿಂದಿನ ಆಡಳಿತದಲ್ಲಿ ಬಿಜೆಪಿ ಎರಡು ಬಗೆಯ ಪರಿಕಲ್ಪನೆಗಳೊಂದಿಗೆ ಸಮತೋಲನ ಸಾಧಿಸಿತ್ತು. ವಿಕಾಸ ಪುರುಷರಾಗಿ ವಾಜಪೇಯಿ ಹಾಗೂ ಲೋಹ ಪುರುಷರಾಗಿ ಆಡ್ವಾಣಿ ಜೋಡಿ ಹಸನಾಗಿತ್ತು. ಇದೇ ಹಾದಿಯಲ್ಲಿ ಮೋದಿ ನಡೆದರೆ ಮಾತ್ರ ಈ ವೈವಿಧ್ಯದ ದೇಶವನ್ನು ಆಳಲು ಸಾಧ್ಯವಾಗುತ್ತದೆ. ಹೇಗೆಂದರೂ ಮೈತ್ರಿಯುಗದಲ್ಲಿ ಸಮ್ಮತಿ ರೂಪಿಸುವ ಸಹನೆಯ ಅಗತ್ಯ ಇರುವುದರಿಂದ ಈಗಲೇ ಆ ಮೃದುತ್ವ ರೂಢಿಸಿಕೊಳ್ಳುವುದು ಒಳ್ಳೆಯದು- ಇದು ಬರ್ಖಾ ಅಭಿಪ್ರಾಯದ ಸಾರಸಂಗ್ರಹ.
-----------
ಖ್ಯಾತ ಪತ್ರಕರ್ತ ಎಂ. ಜೆ. ಅಕ್ಬರ್ ಅವರು ಮೋದಿಯ ಕಟ್ಟರ್ ಟೀಕಾಕಾರರೇನಲ್ಲ. ಭಾರೀ ಪ್ರಶಂಸಕರೂ ಅಲ್ಲ. ಮೋದಿ ಪ್ರಧಾನಿಯಾಗುವ ಸಾಧ್ಯತೆ ದೃಢೀಕರಿಸುತ್ತಿರುವವರಲ್ಲಿ ಅವರೂ ಒಬ್ಬರು. 'ಪರಿಪೂರ್ಣವೇನಲ್ಲ, ಆದರೆ ಆಯ್ಕೆ ಬೇರಿಲ್ಲ' ಎಂಬುದು ಅವರ ಇತ್ತೀಚಿನ ಅಂಕಣ ಬರಹದ ಶೀರ್ಷಿಕೆ. ಇನ್ನು, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಸ್ಪರ್ಧೆಗೆ ಒಲ್ಲೆ ಎನ್ನುತ್ತಿರುವುದೇ ಯುಪಿಎ ಸೋಲಿನ ಸೂಚನೆ ಎಂಬುದವರ ವ್ಯಾಖ್ಯಾನ.
--------
ಕೊನೆಗುಳಿವ ಪ್ರಶ್ನೆ: ಮೋದಿ ಟೀಕಾಕಾರರಾಗಿದ್ದ ಪತ್ರಕರ್ತರೆಲ್ಲ ಅವರು ಮೃದುವಾಗಲಿ ಸಾಕು ಎನ್ನುತ್ತಿರುವುದು ದೇಶದ ಕಾಳಜಿಗೋ, ಸ್ವಹಿತಾಸಕ್ತಿಗೋ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.