ಮೋದಿ ವಿರುದ್ಧ ಕೇಜ್ರಿ ಪ್ರಸ್ತುತವೇ?

ನರೇಂದ್ರ ಮೋದಿ ಅವರು ವಾರಾಣಸಿಯಿಂದ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿರುವುದಕ್ಕೆ ಮಹತ್ತ್ವವೇನಿದೆ? ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲರು ನಿಜಕ್ಕೂ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆಯೇ? ಸ್ಪರ್ಧಿಸಿದರೆ ಒಡ್ಡುವಂಥ ಸವಾಲಾದರೂ ಎಂಥಾದ್ದು? ಎಲ್ಲಕ್ಕಿಂತ ಮೊದಲು ವಾರಾಣಸಿ ಎಂಬುದು ಬಿಜೆಪಿ ಪಾಲಿಗೆ ಬಹಳ ಸುರಕ್ಷಿತ ಕ್ಷೇತ್ರವೋ ಅಥವಾ ಸೆಣೆಸಿ ಗೆಲ್ಲಬಹುದಾಗಿರುವಂಥದ್ದೋ?
2009ರಲ್ಲಿ ವಾರಾಣಸಿ ಬಿಜೆಪಿ ಪಾಲಿಗೆ ಸುಲಭದ ತುತ್ತಾಗಿ ಕಾಣುತ್ತಿರಲಿಲ್ಲ ಎಂಬುದಂತೂ ಸತ್ಯ. ಮುರಳಿ ಮನೋಹರ ಜೋಶಿ ಅವರು 17 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಾದರೆ ಭಾರಿ ಪ್ರಯಾಸವನ್ನೇ ಪಡಬೇಕಾಯಿತು. ಮತದಾನದ ದ್ವಿತೀಯಾರ್ಧದಲ್ಲಿ ಹಿಂದು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದು ಮತ ಚಲಾಯಿಸದಿದ್ದರೆ ಅವರ ಗೆಲವು ಕಷ್ಟವಾಗುತ್ತಿತ್ತು. ನಂತರ ಇದನ್ನು 'ಹಿಂದು ಮತಗಳ ಧ್ರುವೀಕರಣ' ಎಂದು ವಿವರಿಸಲಾಯಿತು. ಹಾಗೊಂದು ಅಪರೂಪದ ವಿದ್ಯಮಾನಕ್ಕೆ ಸಣ್ಣಮಟ್ಟದಲ್ಲಿ ಆ ಪದಪುಂಜ ಬಳಕೆ ಸೂಕ್ತವಾದುದ್ದೇ ಆಗಿತ್ತು. ಏಕೆಂದರೆ ಈ ವಿದ್ಯಮಾನ ಘಟಿಸಿದ್ದೇ ಪ್ರತಿಕ್ರಿಯಾತ್ಮಕವಾಗಿ. ಬೆಳಗಿನ ಸಮಯದ ಮತದಾನದಲ್ಲಿ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಒಳ್ಳೆಯ ಮತದಾನವಾಯಿತು. ಹೀಗಾಗಿ, ಆಗಿನ ಬಿಎಸ್ಪಿ ಅಭ್ಯರ್ಥಿ ಮುಕ್ತಾರ್ ಅನ್ಸಾರಿಯೇ ಗೆದ್ದು ಬಿಡಬಹುದೇನೋ ಎಂಬ ವಾತಾವರಣ ನಿರ್ಮಾಣವಾಯಿತು.
ಅನ್ಸಾರಿ ಕುಪ್ರಸಿದ್ಧ ವ್ಯಕ್ತಿ. ಅವರ ಬೆನ್ನಿಗೆ ಬಹಳ ದೊಡ್ಡ ಅಪರಾಧ ಹಿನ್ನೆಲೆಯೇ ಇದೆ. ಮಾಯಾವತಿಯ ಬೆಂಬಲ ಇದ್ದಿದ್ದರಿಂದ ದಲಿತರ ಮತಗಳೂ ಅವರತ್ತಲೇ ಹರಿದಿದ್ದವು. ಹೀಗಾಗಿ 2009ರಲ್ಲಿ ಸಂಭಾವ್ಯ ಗೆಲವಿನ ಅಭ್ಯರ್ಥಿ ಅವರೇ ಎಂಬ ತೀರ್ಮಾನಗಳು ಆಗಿಹೋಗಿದ್ದವು. ಮಾಯಾವತಿ ಮುಸ್ಲಿಂ ಅಭ್ಯರ್ಥಿಯನ್ನೇನೋ ಆರಿಸಿದ್ದರು. ಆದರೆ ಸ್ವಲ್ಪ ಪ್ರತಿಷ್ಠಿತ ವ್ಯಕ್ತಿಯನ್ನೇನಾದರೂ ಆಯ್ದುಕೊಂಡಿದ್ದರೆ ಮುರಳಿ ಮನೋಹರ ಜೋಶಿಯವರ ಸೋಲು ನಿಶ್ಚಿತ ಎಂದಾಗಿಬಿಡುತ್ತಿತ್ತು. ಈ ನಿಟ್ಟಿನಲ್ಲಿ ಅವತ್ತು ಮುಸ್ಲಿಂ ಸಮುದಾಯ ಮತದಾನದಲ್ಲಿ ಉಮೇದಿಯಿಂದ ಭಾಗವಹಿಸಿದೆ ಎಂದು ಗೊತ್ತಾಗುತ್ತಲೇ ಉತ್ತರಾರ್ಧದಲ್ಲಿ 'ಹಿಂದು ಮತಗಳ ಧ್ರುವೀಕರಣ'ವಾಗಿದ್ದು ಆ ಕ್ಷಣಕ್ಕೆ ಸೀಮಿತವಾದ ಪ್ರತಿಕ್ರಿಯೆ ಆಗಿತ್ತಷ್ಟೆ. ಅನ್ಸಾರಿಯಂಥ ಅಪರಾಧ ಹಿನ್ನೆಲೆಯವರು ಆರಿಸಿಬಂದುಬಿಟ್ಟರೇನು ಗತಿ ಎಂಬ ಆತಂಕ ಅಲ್ಲಿ ಕೆಲಸ ಮಾಡಿತ್ತು.
2014ರಲ್ಲಿ ವಾರಾಣಸಿ ಬಿಜೆಪಿಗೆ 2009ಕ್ಕಿಂತಲೂ ಸುರಕ್ಷಿತವಾಗಿ ಮಾರ್ಪಟ್ಟಿದೆ. ಇದು ಮೋದಿಯವರಿಗೆ ಸೇಫ್. ಜೋಶಿ ಅಥವಾ ಇನ್ಯಾವ ಬಿಜೆಪಿ ಅಭ್ಯರ್ಥಿ ನಿಂತಿದ್ದರೂ ತುಲನಾತ್ಮಕವಾಗಿ ಅದು ಸೇಫ್ ಆಗಿಯೇ ಇರುತ್ತಿತ್ತು. ಏಕೆಂದರೆ 2009ರಲ್ಲಿ ಇಲ್ಲದ ಒಟ್ಟಾರೆ ಉತ್ತರ ಪ್ರದೇಶದಾದ್ಯಂತದ ಬಿಜೆಪಿ ಬೆಂಬಲ ಮನಸ್ಥಿತಿಯ ಹೆಚ್ಚಳ ಈಗಿದೆ. ಅದಕ್ಕೆ ಕಾರಣಗಳು ಹಲವು. ಮೇಲ್ಜಾತಿ ಹಾಗೂ ನಗರದವರ ಶಿಫ್ಟ್ ಬಿಜೆಪಿಯತ್ತ 2009ರಲ್ಲಿದ್ದದ್ದಕ್ಕಿಂತ ವ್ಯಾಪಕವಾಗಿ ಆಗಿದೆ. ಒಬಿಸಿಯ ಒಳಪಂಗಡಗಳಲ್ಲಿ ಹಾಗೂ ಎಲ್ಲ ಜಾತಿಗಳ ಯುವಕರಲ್ಲಿ ಬಿಜೆಪಿ ಒಲವು ರಾಜ್ಯಾದ್ಯಂತ ಗಮನೀಯವಾಗಿ ಕಾಣಿಸಿಕೊಳ್ಳುತ್ತಿದೆ. ಇವೆಲ್ಲಕ್ಕೂ ಕಳಶವಿಟ್ಟಂತೆ 2009ರಲ್ಲಿ ನಾಸ್ತಿಯಾಗಿದ್ದ, ಈಗ ಪ್ರಬಲವಾಗಿರುವ ಅಂಶ ಎಂದರೆ ಮೋದಿ ಅಲೆ.
ಅಂದಮೇಲೆ ಮೋದಿ ವಾರಾಣಸಿಯಲ್ಲಿ ಸೇಫ್ಸೀಟ್ ಆಯ್ದುಕೊಂಡಂತಾಗಿದೆಯಲ್ಲವೇ? ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮ ಉಪಸ್ಥಿತಿಯಿಂದ ಈ ಸುರಕ್ಷತೆಯನ್ನು ಮೋದಿ ಸೃಷ್ಟಿಸಿದ್ದಾರೆ. ಈ ಸಮೀಕರಣದಿಂದ ಮೋದಿ ಅವರನ್ನು ತೆಗೆದಿರಿಸಿ ನೋಡಿದರೆ ಏನಾಗುತ್ತದೆ? ಅವರ ಅನುಪಸ್ಥಿತಿಯಲ್ಲಿ ಮುರಳಿ ಮನೋಹರ ಜೋಶಿಯವರೇ ವಾರಾಣಸಿಯಲ್ಲಿ ಮರುಆಯ್ಕೆ ಬಯಸಿದ್ದರೂ ಅದು ಸುಲಭವಿತ್ತೇ?
ವಾರಾಣಸಿ ಜಗತ್ತಿನ ಹಳೆಯ ನಗರಗಳಲ್ಲೊಂದು ಹಾಗೂ ಹಿಂದುತ್ವದ ಚಹರೆ ಎಂಬ ಪ್ರತಿಮಾತ್ಮಕ ಗುಣಗಳಿಗಾಗಿ ಮಾತ್ರವೇ ಅದನ್ನು ಮೋದಿ ಆಯ್ದುಕೊಂಡಿಲ್ಲ. ಹಾಗೆ ನೋಡಿದರೆ ಅಲಹಾಬಾದ್ನಿಂದ ಮೀರತ್ವರೆಗೆ ಹಲವು ಮತಕ್ಷೇತ್ರಗಳು ಇಂಥ ಪಾರಂಪರಿಕ, ಐತಿಹಾಸಿಕ ಮಹತ್ತ್ವ ಹೊಂದಿದ್ದವು. ಆ ಕ್ಷಣದ ರಾಜಕೀಯ ಲಾಭಗಳನ್ನು ಅಲ್ಲಿಂದಲೂ ಪಡೆಯಬಹುದಿತ್ತು. ಆದರೆ ವಾರಾಣಸಿಯನ್ನೇ ಆಯ್ದುಕೊಳ್ಳುವ ಮೂಲಕ ಮೋದಿ ಉತ್ತರ ಪ್ರದೇಶದ ಪೂರ್ವಭಾಗದಿಂದ ಬಿಹಾರದವರೆಗಿನ ಸನಿಹದ 25-30 ಸ್ಥಾನಗಳಲ್ಲಿ ಪ್ರಭಾವ ಹುಟ್ಟುಹಾಕಿದ್ದಾರೆ. ಪೂರ್ವಾಂಚಲವೆಂದು ಕರೆಯಲಾಗುವ ಈ ಭಾಗ ಬಿಜೆಪಿಯ ವಿಜಯಕ್ಕೆ ಪ್ರಮುಖ ಅಡ್ಡಗಾಲು. 2009ರಲ್ಲಿ ಜೋಶಿ ಎದುರಿಸಿದ ಸವಾಲನ್ನೇ ಇವು ಧ್ವನಿಸುತ್ತವೆ. ಬಿಎಸ್ಪಿಗಾಗಿ ಮುಸ್ಲಿಂ- ದಲಿತರು ಒಂದುಗೂಡಿರುವುದು. ಇದಕ್ಕೆ ಪ್ರತಿಯಾದ ಚಿತ್ರಕತೆಯೊಂದನ್ನು ಸಿದ್ಧಪಡಿಸಲೆಂದೇ ವಾರಾಣಸಿಯಲ್ಲಿ ಮೋದಿಯ ಉಮೇದುವಾರಿಕೆ.
ಈ ಎಲ್ಲ ಆಟಗಳಲ್ಲಿ ಕೇಜ್ರಿವಾಲರ ಸ್ಥಾನ ಎಲ್ಲಿ? ಅವರೆದುರು ಭಾರೀ ಸವಾಲೇ ಇದೆ. ಅವರು ಮುಸ್ಲಿಂ ಮತಗಳನ್ನು ಸೆಳೆದುಕೊಳ್ಳುವುದಕ್ಕೆ ಆದ್ಯತೆ ನೀಡಿದರೆ ಅದು ಬಿಎಸ್ಪಿಗೆ ಹೊಡೆತ ನೀಡುತ್ತದೆ. ಬಿಎಸ್ಪಿಗೆ ಬೀಳುವ ಹೊಡೆತ ಬಿಜೆಪಿ ಪಾಲಿಗೆ ಪ್ಲಸ್! ಅವರು ವಾರಾಣಸಿಯ ನಗರೀಕೃತ ಮಧ್ಯಮವರ್ಗವನ್ನು ಸೆಳೆಯುತ್ತಾರೆ ಎಂದಾದರೆ ಮೋದಿಗೆ ಪರ್ಯಾಯವಾಗಿ ಎತ್ತಬಹುದಾದ ಯಾವ ಗಟ್ಟಿ ಅಂಶ ಅವರಲ್ಲಿದೆ? ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಆಡಳಿತದ ಬಗ್ಗೆ ಹಾಗೂ ಕೇಂದ್ರದ ಕಾಂಗ್ರೆಸ್ ಆಡಳಿತದ ಬಗ್ಗೆ ಬೇಸತ್ತಿರುವವರು ಬಹಳ ಮಂದಿ ಇದ್ದಾರೆ. ಆದರೆ 'ಗುಜರಾತ್ ಮಾದರಿ'ಯನ್ನು ಪ್ರಶ್ನಿಸುವ ತನ್ನ ಅಭಿಯಾನದಿಂದ ಆಪ್ ಇವರೆಲ್ಲರನ್ನೂ ಕಳೆದುಕೊಳ್ಳುತ್ತದೆ.
ಕೇಜ್ರಿವಾಲ್ಗೆ ಸಾಧ್ಯವಿರುವ ಒಂದೇ ಕೆಲಸ ಎಂದರೆ ಈ ನೆಪದಲ್ಲಿ ಮಾಧ್ಯಮಗಳಲ್ಲಿ ಭರ್ಜರಿಯಾಗಿ ಮಿಂಚುವುದು. ಚುನಾವಣೆಯಲ್ಲಿ ಅತ್ಯದ್ಭುತವಾದ ಸಂದರ್ಶನಗಳನ್ನು ಬಹುಶಃ ಕೇಜ್ರಿವಾಲರೇ ಕೊಡಲಿದ್ದಾರೆ, ಆದರೆ ಜಯ ಮೋದಿ ಪಾಲಿಗೇ ಒಲಿದೀತು!
-ಅಶೋಕ್ ಮಲಿಕ್
ಅಂಕಣಕಾರ, ವಿಶ್ಲೇಷಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


