ಒಂದು ಅಂತರದಿಂದ ನನ್ನನ್ನೇ ನಾನು ನೋಡಿಕೊಂಡಾಗ

ಅಕ್ಷರಗಳಲ್ಲೇ ಬದುಕು ಕಟ್ಟಿಕೊಂಡ ನನಗೆ ಸಹಜವಾಗಿಯೇ ಅಕ್ಷರಲೋಕವು ನನ್ನ ಸಾವಿಗೆ ಹೇಗೆಲ್ಲ ಮಿಡಿದಿರಬಹುದು ಎಂಬ ಕುತೂಹಲವಿತ್ತು. ಬಹುತೇಕ ಎಲ್ಲರೂ ಪೇಜುಗಟ್ಟಲೇ ಶ್ರದ್ಧಾಂಜಲಿ-ಸ್ಮರಣೆಗಳನ್ನು ಪ್ರಕಟಿಸಿದ್ದಾರೆ. ಖುಷಿಯಾಯಿತು. ಸುಮಾರಾಗಿ ಅದಾಗಲೇ ಲೋಕಸಭೆ ಚುನಾವಣೆ ಕಾವು ಹತ್ತಿಕೊಂಡಿದೆಯಾದ್ದರಿಂದ ಸುದ್ದಿಗಳ ಪ್ರವಾಹ ಸಾಕಷ್ಟಿದೆ. ಇಲ್ಲದಿದ್ದರೆ ಹೆಚ್ಚಿನ ಪತ್ರಿಕೆಗಳೆಲ್ಲ ಇನ್ನೊಂದು ಪುಟವನ್ನು ನನಗಾಗಿ ಎತ್ತಿಡುತ್ತಿದ್ದವೇನೋ.
ಈಗ ನಾನು ಪರಲೋಕದಲ್ಲಿರುವುದರಿಂದ ನನ್ನನ್ನು ನಾನು (?) ಒಂದು ಅಂತರದಿಂದ ನೋಡುವುದಕ್ಕೆ ಸಾಧ್ಯವಾಗುತ್ತಿದೆ. ಆದ್ದರಿಂದ ನನಗನ್ನಿಸುತ್ತಿರುವುದಿಷ್ಟು. ಲೋಕದಲ್ಲಿ ಜನರನ್ನು ಮೆಚ್ಚಿಸುವುದಕ್ಕೆ ನಿಮಗೆ ವೈಭವೀಕರಣದ, ಹೊಂದಾಣಿಕೆಗಳ ಕಲೆ ಗೊತ್ತಿದ್ದರೆ ಸಾಕು. ಬದ್ಧತೆ, ನಿರ್ಭೀತಿ, ಅಧ್ಯಯನಶೀಲತೆ ಇವೆಲ್ಲ ಇದ್ದಿರಲೇಬೇಕು ಅಂತೇನಿಲ್ಲ. ಈ ನಮ್ಮ ಸಮಾಜ ಆಗಾಗ ಅಲವತ್ತುಕೊಂಡಿರುತ್ತದೆ, 'ಅಯ್ಯೋ ನಮಗೆ ಆದರ್ಶ ಪುರುಷರೇ ಕಾಣುತ್ತಿಲ್ಲ' ಅಂತ. ವಾಸ್ತವ ಏನೆಂದರೆ ಈ ಸಮಾಜಕ್ಕೆ ಆದರ್ಶಗಳು ಬೇಕಿಲ್ಲ. ಅಂಥ ವ್ಯಕ್ತಿತ್ವಗಳನ್ನು ಅದು ನೆನಪಿಸಿಕೊಳ್ಳುವುದೂ ಇಲ್ಲ. ನೆನಪಿಸಿಕೊಂಡರೂ ಅಂಥ ವಿಶೇಷ ವ್ಯಕ್ತಿಗಳನ್ನು ಎಲ್ಲರ ಸಾಲಿನಲ್ಲಿಟ್ಟು ತನ್ನ ಕೃತಘ್ನತೆ ಮೆರೆಯುತ್ತದೆ.
ಮೊನ್ನೆ ನಾನು ತೀರಿಕೊಂಡಾಗ 'ನಿರ್ಭೀತ ಪತ್ರಕರ್ತ' ಅಂತೆಲ್ಲ ಪದಪುಂಜಗಳನ್ನು ಬಳಸಿ ಪುನೀತರಾದರು. ಜನರನ್ನು ಮರಳು ಮಾಡುವುದು ಎಷ್ಟು ಸುಲಭ ನೋಡಿ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ 'ಬಾಗಲು ಹೇಳಿದಾಗ ಸಾಷ್ಟಾಂಗ ನಮಸ್ಕಾರ' ಮಾಡಿದವರಲ್ಲಿ ನಾನೂ ಒಬ್ಬ.
ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಬೆತ್ತಲೆ ಚಿತ್ರ ಹಾಕಿ ಮೆರೆದಿದ್ದೇ ನನ್ನ ನಿರ್ಭೀತಿಯಾಗುತ್ತದೆಯೇ? ಮಹಿಳೆಯರ ಸಹವಾಸ ಹೇಗೆಲ್ಲ ಖುಷಿ ಕೊಡುತ್ತದೆ ಅಂತ ನರಗಳನ್ನು ಉತ್ತೇಜಿಸುವಂತೆ ಬರೆದಿದ್ದು, ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಕೊಡುಗೆಯಾಗುತ್ತದೆಯೇ? ನಿಯಮಿತವಾಗಿ ಗುಂಡು ಸೇವಿಸುತ್ತ ರಾತ್ರಿ ಒಂಬತ್ತಕ್ಕೆಲ್ಲ ಪ್ರಧಾನಿ ಬರುವುದಿದ್ದರೂ ಕಾಯದೇ ಹಾಸಿಗೆಗೆ ಹೋಗುತ್ತಿದ್ದೆ ಎಂಬುದು ಮಜ ನೀಡುವ ಖಯಾಲಿಯಾಗಬಹುದೇ ಹೊರತು ಅದರಾಚೆಗೆ ಏನಿಲ್ಲ. ಹೆಂಡ ಕುಡಿವ ನನ್ನ ಸ್ಟೈಲನ್ನೂ, ಹುಡುಗಿಯರಿಂದ ಸುತ್ತುವರೆದುಕೊಂಡಿದ್ದ ನನ್ನ ಇಮೇಜನ್ನು ಸರ್ವಶ್ರೇಷ್ಠ ಸಾಧನೆ ಎಂಬಂತೆ ಶ್ರದ್ಧಾಂಜಲಿ ಲೇಖನ ಬರೆಯುತ್ತಿರುವವರ ಕುರಿತು ಖುದ್ದು ನನಗೇ ಒಳಗೊಳಗೆ ಅನುಕಂಪವಿದೆ.
ನಾನೊಬ್ಬ ಸರಸ ಗದ್ಯದ ಬರಹಗಾರ ಮಾತ್ರ. ನಿಮಗೆ ಆದರ್ಶ ಬೇಕಿದ್ದರೆ ಗೋಯೆಂಕಾಗೆ ಸಮರ್ಥ ಸಾಥ್ ಕೊಟ್ಟು, ಅಂತುಳೆ ಸರ್ಕಾರದ ಹಗರಣಗಳನ್ನು ಬಯಲಿಗೆಳೆದ ಅರುಣ್ ಶೌರಿಯವರನ್ನು ಓದಿಕೊಳ್ಳಿ. ಟೈಮ್ಸ್ ಆಫ್ ಇಂಡಿಯಾದಂಥ ಪತ್ರಿಕೆಯಲ್ಲಿ ಸೋನಿಯಾ ಗಾಂಧಿಯಂಥ ಪ್ರಭಾವಿ ವ್ಯಕ್ತಿಯ ವಿರುದ್ಧ ನಿರ್ಭೀತವಾಗಿ ಬರೆದ ಮಾಧವ ನಳಪತ್‌ರನ್ನು ಓದಿಕೊಳ್ಳಿ.
ಅವೆಲ್ಲ ಶ್ರಮ ಯಾರಿಗೆ ಬೇಕು? ಸೆಕ್ಸ್- -ಖಯಾಲಿ-ಮದ್ಯಗಳೇ ಬದುಕಿಗೆ ಆಕರ್ಷಣೆ ಎಂದಾದರೆ ನಾನು ನಿಮ್ಮ ಆದರ್ಶವಾಗಲು ಸಿದ್ಧ. You deserve this. Society deserves this only!
-ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


