ಮುಂದೆ ಬೆಟ್ಟವಾಗಬಲ್ಲವು ಈ ಪುಟ್ಟ ವಿಚಾರಗಳು

ಅದೊಂದು ಪುಟ್ಟ ಊರು. ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಪ್ರದೇಶ. ಅಲ್ಲಿಂದ ಅನೇಕ ಮಹಿಳೆಯರು ಸ್ವಲ್ಪ ದೂರದ ಪೇಟೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಾರೆ. ಒಂದು ದಿನ ದೂರದಿಂದ ಓಡಿ ಬಂದ ಮಹಿಳೆ ಏದುಸಿರು ಬಿಡುತ್ತಾ ಬಸ್ಸು ಹತ್ತಿದರು. ಸುತ್ತ ಮುತ್ತ ನೋಡಿದರೆ ಎಲ್ಲ ಸೀಟ್‌ಗಳೂ ಭರ್ತಿಯಾಗಿದ್ದವು. ಆಕೆಗೆ ಗಂಡಸೊಬ್ಬರು ಮಹಿಳೆಯರಿಗಾಗಿ ಮೀಸಲಿರುವ ಸೀಟಿನಲ್ಲಿ ಕುಳಿತದ್ದು ಕಾಣಿಸಿತು. ನಿರ್ವಾಹಕರಲ್ಲಿ, ಅವರನ್ನು ಎಬ್ಬಿಸಿ ಕೊಡುವಂತೆ ಕೇಳಿದರು. "ನೀವೇ ಕೇಳಿ" ಎಂದಾತ ನುಣಚಿಕೊಂಡು ಮುಂದೆ ಹೋಗಿ ನಿಂತ. ಆ ವ್ಯಕ್ತಿಗೆ ತನ್ನ ಎದುರೇ ನಿರ್ವಾಹಕ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಎದ್ದು ಹೋದದ್ದು ಕುಮ್ಮಕ್ಕು ಕೊಟ್ಟಿತು. "ನಾನು ಪ್ರಾರಂಭದಿಂದಲೇ ಕುಳಿತಿದ್ದೇನೆ, ಏಳಲ್ಲ" ಎಂದರು. ಅವರಿಗೆ ತುಸು ವಯಸ್ಸೂ ಆಗಿತ್ತು. "ವಯಸ್ಸಾದವರನ್ನು ಏಳು ಅಂತ ಹೇಳೋಕೆ ನಾಚಿಕೆ ಆಗಲ್ವಾ?" ಅಂತ ಯಾರೋ ಗಂಡಸರು ಹಿಂದಿನಿಂದ ಹೇಳಿದರು. ಈ ಮಹಿಳೆಗೂ ಆಗ ಸಿಟ್ಟು ಬಂತು. "ವಯಸ್ಸಾಗಿದ್ರೆ ಹಿರಿಯ ನಾಗರಿಕರ ಸೀಟು ಇದೆ, ಅಲ್ಲಿ ಕುಳಿತುಕೊಳ್ಳಿ" ಎಂದರು. ಆ ಸೀಟಿನಲ್ಲಿ ಇಬ್ಬರು ಯುವಕರು ಕುಳಿತಿದ್ದರು. ಬಸ್ಸಿನಲ್ಲಿದ್ದ ಕೆಲವು ಪುರುಷರು ಆ ವ್ಯಕ್ತಿಯ ಪರ ಮಾತಾಡಿದರು. ಮಾತಿಗೆ ಮಾತು ಬೆಳೆಯಿತು. ನಿರ್ವಾಹಕನೊಂದಿಗೆ ಚಾಲಕನೂ ಸೇರಿಕೊಂಡು ಆ ಮಹಿಳೆಗೆ ಹೊಡೆಯಲು ಬಂದರು. ಆ ಬಸ್ಸಿನಲ್ಲಿ ಅನೇಕ ಮಹಿಳೆಯರೂ ಇದ್ದರು. ಅಷ್ಟೆಲ್ಲ ಆದರೂ ಒಬ್ಬೇ ಒಬ್ಬರು ಕೂಡ ಆ ಮಹಿಳೆಯ ಪರ ಧ್ವನಿ ಎತ್ತಲಿಲ್ಲ. ಅಷ್ಟು ಹೊತ್ತಿಗಾಗಲೇ ಒಬ್ಬರು ಆ ಮಹಿಳೆಯನ್ನು ಎಲ್ಲರೂ ಸೇರಿ ಹೊಡೆದು ಹಾಕಿಯಾರೆಂದು ಹೆದರಿ ಕೂಡಲೇ ಹತ್ತಿರದ ಪೋಲಿಸ್ ಸ್ಟೇಷನ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಮುಂದಿನದು ಎಲ್ಲರಿಗೂ ಗೊತ್ತಿರುವದ್ದೆ... ಬಸ್ಸನ್ನು ಸ್ಟೇಷನ್‌ಗೆ ಕೊಂಡೊಯ್ದರು. ಆಗ ಅಲ್ಲಿದ್ದ ಮಹಿಳೆಯರಿಗೆ ಗಂಟಲಲ್ಲಿ ಸ್ವರ ಬಂತು. "ಅಯ್ಯೋ ಇವಳಿಂದಾಗಿ ನಮಗೆ ಆಫೀಸ್‌ಗೆ ತಡ ಆಗುತ್ತದೆ" ಅಂತ ಬಯ್ಯಲು ಆರಂಭಿಸಿದರು. ಮುಂದೆ ಆ ನಿರ್ವಾಹಕ, ಚಾಲಕ ಮತ್ತು ಕುಳಿತಿದ್ದ ಪುರುಷನ ಮೇಲೆ ದೂರು ದಾಖಲಾಯಿತು. ಇಷ್ಟಕ್ಕೂ ಆದದ್ದೇನು? ಆ ಮಹಿಳೆ ನ್ಯಾಯವಾದದ್ದನ್ನೇ ಕೇಳಿದ್ದಳಲ್ಲವೇ? ಆಗ ನಿರ್ವಾಹಕ ಹಿರಿಯ ನಾಗರಿಕರ ಸೀಟಿನಲ್ಲಿ ಕುಳಿತಿದ್ದ ಯುವಕರನ್ನು ಎಬ್ಬಿಸಿ, ಅದನ್ನು ಮಹಿಳೆಯರ ಸೀಟಿನಲ್ಲಿ ಕುಳಿತಿದ್ದವರಿಗೆ ಕೊಡಿಸಿ, ಆ ಸೀಟನ್ನು ಮಹಿಳೆಗೆ ಕೊಟ್ಟಿದ್ದರೆ ಯಾವ ಸಮಸ್ಯೆಯೇ ಆಗುತ್ತಿರಲಿಲ್ಲ.
ಹೀಗೊಂದು ಪುಟ್ಟ ಸಂಸ್ಥೆ. ಇಪ್ಪತ್ತೈದು ಮೂವತ್ತು ಮಂದಿ ಕೆಲಸ ಮಾಡುತ್ತಾರೆ. ಹತ್ತು ಹನ್ನೆರಡು ಮಂದಿ ಮಹಿಳೆಯರೂ ಇದ್ದಾರೆ. ಎರಡು ಶೌಚಾಲಯಗಳಿವೆ. ನಮಗೆ ಬೇರೆ ಟಾಯ್ಲೆಟ್ ಬೇಕು ಎಂಬ ಅಹವಾಲು ಮಹಿಳೆಯರದ್ದು. ಬಾಹ್ಯವಾಗಿ ಹೇಳಲು ಯಾರೂ ತಯಾರಿಲ್ಲ. ಅಂತು ಇಂತೂ ಒಂದು ಮೀಟಿಂಗ್‌ನಲ್ಲಿ ಒಬ್ಬರು ಈ ಬಗ್ಗೆ ಪ್ರಸ್ತಾಪ ಮಾಡಿದರು. ಕೂಡಲೇ ಬೇರೆ ಒಂದು ವ್ಯವಸ್ಥೆ ಮಾಡಲು ಫಂಡ್ ಇಲ್ಲ ಅನ್ನುವ ಸಿದ್ಧ ಉತ್ತರ ಎದುರಾಯಿತು. "ಐವತ್ತು ವರ್ಷದಿಂದ ಈ ಸಂಸ್ಥೆ ನಡೆಯುತ್ತಾ ಬಂದಿದೆ, ಇಷ್ಟರ ತನಕ ಯಾರಿಗೂ ಏನೂ ತೊಂದರೆ ಆದ ಬಗ್ಗೆ ಯಾರೂ ಹೇಳಿಲ್ಲ, ಈಗೇನು ತಕರಾರು? ಇಷ್ಟೂ ಇಲ್ಲದ ಸಂಸ್ಥೆಗಳು ಎಷ್ಟಿಲ್ಲ?" ಇತ್ಯಾದಿಯಾಗಿ ತಲೆಗೊಂದರಂತೆ ಮಾತಾಡಿದರು ಅಲ್ಲಿನ ಪುರುಷ ಸಹೋದ್ಯೋಗಿಗಳು. ನಿತ್ಯ ಕಿರಿ ಕಿರಿ ಅನುಭವಿಸುವ ಮಹಿಳೆಯರು ತುಟಿ ಪಿಟಕ್ಕೆನ್ನಲಿಲ್ಲ. ಮತ್ತೆ ಎಂದಿನಂತೆ ದಿನಗಳು ಉರುಳಿದವು. ಅಲ್ಲಿ ಬಹಳ ಸುಲಭದ ಪರಿಹಾರೋಪಾಯ ಇತ್ತು. ಎರಡರಲ್ಲಿ ಒಂದನ್ನು ಮಹಿಳೆಯರು, ಇನ್ನೊಂದನ್ನು ಪುರುಷರು ಬಳಸಿದ್ದರಾಗುತ್ತಿತ್ತು. ಆದರೆ ಅಷ್ಟರ ಮಟ್ಟಿಗಿನ ಉದಾರತೆಯೂ ಅಲ್ಲಿರಲಿಲ್ಲ. ಆ ವಿಷಯ ಪ್ರಸ್ತಾಪಿಸಿದ ಮಹಿಳೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
----
ಒಂದು ಶಾಲೆ. ಅಲ್ಲೋರ್ವ ಬಡ ವಿದ್ಯಾರ್ಥಿನಿ ಓದುತ್ತಿರುತ್ತಾಳೆ. ಶಿಕ್ಷಕನೊಬ್ಬ ಆಕೆಗೆ ಮೈ ಕೈ ಮುಟ್ಟಿ ಕಿರುಕುಳ ಕೊಡ್ತಾನೆ. ಬೇರೆ ದಾರಿ ಇಲ್ಲದಾದಾಗ ಅವಳು ತನ್ನ ತಂದೆ ತಾಯಿಯಲ್ಲಿ ಹೇಳುತ್ತಾಳೆ. ಅವರು ಆತನ ವಿರುದ್ಧ ದೂರು ನೀಡುತ್ತಾರೆ. ಆತ "ಅವಳು ಓದಿ ಬರೆದು ಮಾಡದ್ದಕ್ಕೆ ಜೋರು ಮಾಡಿದೆ. ಅದಕ್ಕಾಗೇ ಹಾಗೆ ಹೇಳುತ್ತಿದ್ದಾಳೆ" ಅಂತ ಹೇಳುತ್ತಾನೆ. ಮುಗಿಯಿತು, ಅಲ್ಲಿಗೆ ಆತ ಹೇಳಿದ್ದೇ ಸರಿ! ಪರಿಣಾಮ ಆ ಬಡ ಹುಡುಗಿಯ ವಿದ್ಯಾಭ್ಯಾಸ ಅಲ್ಲಿಗೇ ನಿಂತು ಹೋಯಿತು. ಅವಳದ್ದು ಮಾತ್ರ ಅಲ್ಲ ಅದೇ ಶಾಲೆಯಲ್ಲಿ ಓದುತ್ತಿದ್ದ ಅವಳ ತಮ್ಮ ತಂಗಿಯರದು ಕೂಡಾ! ಯಾರೊಬ್ಬರೂ ಅವಳು ಹೇಳಿದ್ದೇಕೆ ಸತ್ಯವಾಗಿರಬಾರದೆಂದು ಒಂದು ಕ್ಷಣವೂ ಯೋಚಿಸಲಿಲ್ಲ. ಏಕೆಂದರೆ ಅವಳು ಹೆಣ್ಣು, ಆತ ಗಂಡು!
ಗಂಡ, ಹೆಂಡತಿ, ಒಂದು ಮಗು ಇರುವ ಪುಟ್ಟ ಸಂಸಾರ ಅವರದ್ದು. ಅವರಿಗೊಂದು ಮನೆ ಮತ್ತು ಸ್ವಲ್ಪ ಜಾಗ ಇತ್ತು. ಬದುಕುವುದಕ್ಕೊಂದು ಉದ್ಯೋಗವೂ ಇತ್ತು. ಅವರ ಮನೆ ರಸ್ತೆಗೆ ಹೊಂದಿಕೊಂಡಂತಿತ್ತು. ಈ ಜಾಗದ ಮೇಲೆ ಒಬ್ಬ ಮರಿ ಪುಡಾರಿಯ ಕಣ್ಣು ಬಿತ್ತು. ಅದರ ಪಕ್ಕದ ಜಾಗವನ್ನಾತ ಖರೀದಿಸಿದ್ದ. ಈ ಮನೆ ಜಾಗವನ್ನು ನಂಗೆ ಕೊಡಿ ಖರೀದಿಸುತ್ತೇನೆ ಎಂದು ಹೇಳಿದ. ಅವರು ಮಾರಲು ಒಪ್ಪಲಿಲ್ಲ. ಆಗ ಆತ ಆ ಮನೆ ಇರುವ ಜಾಗ ತನ್ನದು ಅಂತ ಸುಮ್ಮನೇ ಕೇಸು ಹಾಕಿ ಸತಾಯಿಸಲು ಆರಂಭಿಸಿದ. ಅದಕ್ಕೂ ಅವರು ಕ್ಯಾರೆ ಅನ್ನಲಿಲ್ಲ. ಒಳ್ಳೆಯ ವಕೀಲರನ್ನು ಗೊತ್ತು ಮಾಡಿ ಹೋರಾಟ ಮಾಡಿದರು. ಇವರು ಸುಲಭಕ್ಕೆ ಬಗ್ಗುವವರಲ್ಲ ಅಂತ ಬೇರೆ ರೀತಿಯ ಕಿತಾಪತಿ ಶುರು ಮಾಡ ಹತ್ತಿದ. ಆ ಮಹಿಳೆ ಮನೆಯಿಂದ ಹೊರ ಕಾಲಿಟ್ಟ ತಕ್ಷಣ ಮೈ ಕೈ ಸವರಿಕೊಂಡು ಹೋಗುವುದು. ಅವಳಿಗೂ ತನಗೂ ಸಂಬಂಧ ಇದೆ ಎಂದು ಹೇಳುವುದು ಮಾಡತೊಡಗಿದ. ಈ ಬಗ್ಗೆ ಆಕೆ ದೂರು ನೀಡಿದಳು. ಆದರೆ ಆತ, "ಜಾಗದ ವಿಷಯದಲ್ಲಿ ಅವರ ಮೇಲೆ ಕೇಸ್ ಹಾಕಿದ್ದೇನೆ, ಅದಕ್ಕೇ ಹಾಗೆ ದೂರು ನೀಡಿದ್ದಾರೆ" ಎಂದ. ಜನ ಆತನನ್ನೇ ನಂಬಿದರು. ಬೆಂಬಲಿಸಿದವರಲ್ಲಿ ಕೆಲವರಿಗೆ ಸತ್ಯ ಗೊತ್ತಿದ್ದರೂ "ನಮಗೇಕೆ ಇಲ್ಲದ ಉಸಾಬರಿ" ಅಂತ ಸುಮ್ಮನಾದರು. ಪರಿಣಾಮ ಘೋರವಾದುದು- ಆ ಸಾತ್ವಿಕ ದಂಪತಿಗಳು ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡರು! ಅವರ ಮಗು ಅನಾಥವಾಯಿತು. ಒಂದು ಕ್ಷಣ ಆ ಮಹಿಳೆ ಹೇಳುವುದೂ ಸತ್ಯವಿರಬಹುದೆಂದು ಯೋಚಿಸಿದ್ದರೆ, ಆತ ಕೇಸ್ ಹಾಕಿರುವುದೂ ಸತಾಯಿಸುವ ಸಲುವಾಗಿಯೇ ಎಂದು ಗೊತ್ತಾಗುತ್ತಿತ್ತಲ್ಲವೇ? ಒಂದಿನಿತು ಬೆಂಬಲ ಸಿಕ್ಕಿದ್ದರೆ ಅವರು ಚೆನ್ನಾಗಿ ಬದುಕಿ ಬಾಳುತ್ತಿದ್ದರಲ್ಲವೇ?
ಇಂತಹ ಅನೇಕ ಸುದ್ದಿಗಳನ್ನು ನಾವು ದಿನ ನಿತ್ಯ ಕೇಳುತ್ತೇವೆ, ನೋಡುತ್ತೇವೆ, ನೋಡಿಯೂ ಸುಮ್ಮನಾಗುತ್ತೇವೆ. ಇವೆಲ್ಲ ಬೇರೆಯವರಿಗೆ ಸಣ್ಣ ಪುಟ್ಟ ವಿಷಯಗಳು. ಆದರೆ ಲಿಂಗ ತಾರತಮ್ಯ ಎದುರಿಸಿ ಅವಹೇಳನಕ್ಕೆ ಒಳಗಾದವರ ಪಾಲಿಗೆ ಇವು ಬದುಕನ್ನೇ ನುಂಗುವಷ್ಟು ಬಲವಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿ ಅದಕ್ಕೂ ಮೊದಲು ಬೇರೆಯವರ ಮೇಲೆಯೂ ಇದೇ ರೀತಿಯ ದೌರ್ಜನ್ಯ ಎಸಗಿರುವುದು, ಕಿರುಕುಳ ನೀಡಿರುವುದು ತಿಳಿದುಬರುತ್ತದೆ. ಅಲ್ಲೇ ಅವರಿಗೆ ಸರಿಯಾದ ಶಿಕ್ಷೆ ಆಗುತ್ತಿದ್ದರೆ ಅವರು ಅಷ್ಟು ಮುಂದುವರಿಯುತ್ತಿರಲಿಲ್ಲ ಎಂಬುದು ಗಮನಾರ್ಹವಾದದ್ದು. ಹಾಡಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಕುವವರೆಗೂ ಯಾರೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಚಕಾರ ಎತ್ತುವುದಿಲ್ಲ. ಆ ಬಗ್ಗೆ ಮಹಿಳೆ ದೂರು ಏನಾದರೂ ಕೊಟ್ಟರೆ ಅವಳನ್ನೇ ಸಂಶಯದ ದೃಷ್ಟಿಯಿಂದ ನೋಡುತ್ತಾರೆ. ಒಂದಿನಿತಾದರೂ ಅನುಕಂಪ ಒಳ್ಳೆಯ ಮಾತುಗಳು ಬರಬೇಕಾದರೆ ಅವಳು ಸಾಯಲೇಬೇಕು ಎನ್ನುವುದು ನಮ್ಮ ಸಮಾಜದ ದುರಂತ!
ಎಷ್ಟೋ ಹೆಂಗಸರು ಇಂಥ ಕಿರುಕುಳಗಳ ಬಗ್ಗೆ ಮಾತನಾಡುವುದೇ ತಮ್ಮ ಘನತೆಗೆ ಕುಂದು ಬರುವ ವಿಚಾರ ಎಂದು ಭಾವಿಸುವುದನ್ನು ನಾವು ಅನೇಕ ಬಾರಿ ಗಮನಿಸುತ್ತೇವೆ. ಲೈಂಗಿಕ ದೌರ್ಜನ್ಯವಾದರೆ ಅದಕ್ಕೆ ಹೆಣ್ಣು ಮಕ್ಕಳ ವೇಷ ಭೂಷಣ, ಹೊರಗೆ ಓಡಾಡುವುದೇ ಕಾರಣ ಎಂಬಂತೆ ಮಾತನಾಡಲಾಗುತ್ತದೆ. ಹಾಗಿರುವಾಗ ಹೆಣ್ಣು ಮಕ್ಕಳನ್ನು ಕಾಡುವ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರಿದ್ದಾರೆ? ಆದರೆ ಯಾರೂ ಇಂಥ ವಿಚಾರಗಳ ಬಗ್ಗೆ ಅನ್ಯಾಯಗಳ ಬಗ್ಗೆ ಪ್ರಶ್ನಿಸದೇ ಇರುವುದರಿಂದ ಇಂಥವೇ ಸಣ್ಣ ಪುಟ್ಟ ಸಂಗತಿಗಳೇ ಮುಂದೆ ಬೆಟ್ಟದಂತೆ ಬೆಳೆದು ಅನೇಕ ಹೆಣ್ಣು ಮಕ್ಕಳ ಬದುಕನ್ನು ನುಂಗಿ ಹಾಕುತ್ತವೆ. ಆ ಹೆಣ್ಣು ನಮ್ಮ ಮಗಳು, ತಾಯಿ, ಹೆಂಡತಿ, ಅಕ್ಕ, ತಂಗಿ ಯಾರು ಬೇಕಾದರೂ ಆಗಿರಬಹುದು ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ.
ಡಾ.ಲಕ್ಷ್ಮಿ, ಜಿ. ಪ್ರಸಾದ್‌ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿಪೂರ್ವ
ಕಾಲೇಜು, ಬೆಳ್ಳಾರೆ
samagramahithi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


