ಸಿಎಂ ಸಿದ್ದುಗೆ ಆಂತರಿಕ ಅಹಿಂದ ತತ್ವವೇ ಚುನಾವಣೆ ಸವಾಲು

ಸಿಎಂ ಸಿದ್ದುಗೆ ಆಂತರಿಕ ಅಹಿಂದ ತತ್ವವೇ ಚುನಾವಣೆ ಸವಾಲು...
ಸಿಎಂ ಸಿದ್ದುಗೆ ಆಂತರಿಕ ಅಹಿಂದ ತತ್ವವೇ ಚುನಾವಣೆ ಸವಾಲು
Updated on: 

ಅದು ಯಾವುದೇ ಚುನಾವಣೆ ಇರಲಿ, ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಗೊಂದಲ, ಬಂಡಾಯ ಎದುರಿಸುವುದು ಸಾಮಾನ್ಯ. ಅದು ರಾಷ್ಟ್ರೀಯ ಪಕ್ಷ ಇರಲಿ, ಪ್ರಾದೇಶಿಕ ಪಕ್ಷ ಇರಲಿ ಇಂಥದ್ದೊಂದು ಅಡ್ಡಗೋಡೆಯನ್ನು ದಾಟಲೇಬೇಕಾಗುತ್ತದೆ. ಹಾಗೆ ದಾಟುವಾಗ ಎದುರಾಗುವ ಸಮಸ್ಯೆಗಳೇ ಕೆಲವೊಮ್ಮೆ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಡುತ್ತದೆ.
ಈಗ ಲೋಕಸಭೆ ಚುನಾವಣೆ ಬಂದಿದೆ. ರಾಜ್ಯದ ಪ್ರಮುಖ ಪಕ್ಷಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧ ತೀವ್ರ ಬಂಡಾಯ ಎದುರಿಸುತ್ತಿವೆ. ಕೆಲವರಂತೂ ಪಕ್ಷ ತೊರೆಯುವ ಬೆದರಿಕೆಯನ್ನೂ ಹಾಕಿದ್ದಾರೆ. ನರೇಂದ್ರ ಮೋದಿ ಅಲೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಬಲವಾಗಿ ನಂಬಿರುವ ಬಿಜೆಪಿ ಬಂಡಾಯ ಶಮನಕ್ಕೆ ಇನ್ನಿಲ್ಲದಂತೆ ಹೋರಾಟ ನಡೆಸಿದೆ. ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಕೊಡಮಾಡಬೇಕು ಎಂಬುದು ಅದರ ಉಮೇದಿ. ಬಿಜೆಪಿಯಾದರೆ ಪ್ರತಿಪಕ್ಷ. ಆದರೆ ಆಡಳಿತಾರೂಢ ಕಾಂಗ್ರೆಸ್ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಗಲ ಮೇಲಿನ ಹೊರೆ ಸಿಕ್ಕಾಪಟ್ಟೆ ಜಾಸ್ತಿ. ಏಕೆಂದರೆ ಅವರು ಬರೀ ಟಿಕೆಟ್ ವಂಚಿತರ ಬಂಡಾಯವನ್ನು ಮಾತ್ರ ಎದುರಿಸುತ್ತಿಲ್ಲ. ಜತೆಗೆ ಪಕ್ಷದ ಆಂತರಿಕ ಅನಪೇಕ್ಷಿತ ಬೆಳವಣಿಗೆಗಳ ಸವಾಲೂ ಎದುರಾಗಿದೆ. ಒಂದೆಡೆ ಕೇಂದ್ರದಲ್ಲಿದ್ದ ಯುಪಿಎ ಸರಕಾರದ ಆಡಳಿತವಿರೋಧಿ ಅಲೆ. ಇನ್ನೊಂದೆಡೆ ಪಕ್ಷದೊಳಗಣ ತಮ್ಮ ವಿರೋಧಿ ನಾಯಕರ ಒಳ ರಾಜಕೀಯ ಏಟು. ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ಆ ಮೂರು ಸವಾಲುಗಳನ್ನೂ ಸಮರ್ಥವಾಗಿ ನಿಭಾಯಿಸಲೇಬೇಕಾದ ಅನಿವಾರ್ಯತೆ. ಏಕೆಂದರೆ ಈ ಸವಾಲುಗಳು ಅವರ ನಾಯಕತ್ವದ ಜತೆಜತೆಗೆ ಥಳಕು ಹಾಕಿಕೊಂಡಿವೆ. ಹೀಗಾಗಿ ಈಗಿನ ಚುನಾವಣೆ ಸಿದ್ದರಾಮಯ್ಯ ಪಾಲಿಗೆ ನಿಜಕ್ಕೂ ಅಗ್ನಿಪರೀಕ್ಷೆ.
ಹಿಂದಿನಿಂದಲೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ವೋಟ್‌ಬ್ಯಾಂಕ್. ಆದರೆ ರಾಜ್ಯ ಕಾಂಗ್ರೆಸ್‌ನಲ್ಲಾಗಿರುವ ಒಂದಷ್ಟು ಬೆಳವಣಿಗೆಗಳು ಆ ಮಾತನ್ನು ಪುರಸ್ಕರಿಸಲು ಇಂಬುಗೊಡುತ್ತಿಲ್ಲ. ಬೆಂಗಳೂರು ಸೆಂಟ್ರಲ್‌ನಿಂದ ಟಿಕೆಟ್ ವಂಚಿತರಾದ ಹಿರಿಯ ನಾಯಕ ಜಾಫರ್ ಷರೀಫ್ ತೀವ್ರ ಕೋಪಗೊಂಡಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ಖಚಿತವಾಗಿರುವುದು ಅಲ್ಪಸಂಖ್ಯಾತರ ಮುನಿಸಿಗೆ ಕಾರಣವಾಗಿದೆ. ಇಲ್ಲಿ ತೀವ್ರ ಆಕಾಂಕ್ಷಿಗಳಾಗಿದ್ದ ಐ.ಜಿ. ಸನದಿ ಇರಬಹುದು, ಎ.ಎಂ. ಹಿಂಡಸಗೇರಿ ಇರಬಹುದು, ಅಜ್ಜಂಪೀರ್ ಖಾದ್ರಿ ಇರಬಹುದು. ಅವರೆಲ್ಲರೂ ಇದೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೇ ಸೇರಿದವರು ಎಂಬುದು ಇಲ್ಲಿ ಗಮನಿಸಿಬೇಕಾದ ಅಂಶ. ಅದೇ ರೀತಿ ಹಾವೇರಿಯಲ್ಲಿ ಟಿಕೆಟ್ ಆಕಾಂಕ್ಷಿ ಸಲೀಂ ಆಹಮದ್ ಕೂಡ ಇದೇ ಸಮುದಾಯದವರು. ಅಲ್ಲಿನ್ನೂ ಟಿಕೆಟ್ ಪ್ರಕಟವಾಗಿಲ್ಲ.
ಜಾಫರ್ ಷರೀಫ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಳೆಯದಿಂದಲೇ ಹೊರಬಿದ್ದಿದೆ. ಇದನ್ನು ನಂಬಿ ಷರೀಫ್ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೋ ಇಲ್ಲ ಅನ್ಯಪಕ್ಷಕ್ಕೆ ವಲಸೆ ಹೋಗುತ್ತಾರೋ ಅದು ಬೇರೆ ಮಾತು. ಆದರೆ ಹಿರಿಯ ನಾಯಕರಾದ ಷರೀಫ್ ಅವರಿಗೆ ಟಿಕೆಟ್ ತಪ್ಪಿಸಿದ್ದು ಹಾಗೂ ಕೆಲ ತಿಂಗಳುಗಳಿಂದ ಅವರನ್ನು ನಡೆಸಿಕೊಂಡ ರೀತಿ ಸಮುದಾಯದ ನೋವಿಗೆ ಕಾರಣವಾಗಿದೆ. ಅವರು ಪಕ್ಷದಲ್ಲೇ ಉಳಿದರೂ ಅನಾಹುತ ಪ್ರಮಾಣ ಸ್ವಲ್ಪ ತಗ್ಗಬಹುದೇ ಹೊರತು ಪೂರ್ಣ ನಿವಾರಣೆ ಅಸಾಧ್ಯ. ಅದೇ ರೀತಿ ಬೇರೆ- ಬೇರೆ ಕಡೆಯೂ ಟಿಕೆಟ್ ವಂಚಿತ ಮುಸ್ಲಿಂ ಅಭ್ಯರ್ಥಿಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್ ಆ ಸಮುದಾಯದಿಂದ ದೂರ ಸರಿಯುತ್ತಿದೆ ಎಂಬ ಸಂದೇಶ ರವಾನಿಸಿದೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಾದ ಮುಸ್ಲಿಂ ಅಭ್ಯರ್ಥಿಗಳಿಗೆ ಜೆಡಿಎಸ್ ಗಾಳ ಹಾಕಿದೆ. ಆ ಮೂಲಕ ಆ ಸಮುದಾಯದ ಮತಬ್ಯಾಂಕ್‌ಗೇ ಕೈಯಿಟ್ಟಿದೆ. ಹಾಗೆಂದು ಸಮುದಾಯದ ಎಲ್ಲ ಮತಗಳೂ ಜೆಡಿಎಸ್‌ಗೆ ಹೋಗುತ್ತದೆ ಎಂದು ಹೇಳಲಾಗದು. ಕಾಂಗ್ರೆಸ್ ಕಡೆಗಣನೆಯ ಮುಸ್ಲಿಂ ಸಮುದಾಯದ ಮತಗಳಿಂದ ಜೆಡಿಎಸ್‌ಗೆ ಎಷ್ಟು ಲಾಭ ಆಗುತ್ತದೋ, ಬಿಡುತ್ತದೋ ಗೊತ್ತಿಲ್ಲ. ಕೆಲವು ಕಡೆ ನೇರ ಹಣಾಹಣಿಗೆ ಇಂಬುಗೊಡಬಹುದು. ಕೆಲವು ಕಡೆ ಗೆಲವಿಗೆ ಸಹಕರಿಸಬಹುದು. ಆದರೆ ಒಂದು ಮಾತಂತೂ ಸತ್ಯ. ಮುಸ್ಲಿಂ ಸಮುದಾಯದ ಮತ ವಿಭಜನೆಯಿಂದ ಸರಾಸರಿ ತುಲನೆಯಲ್ಲಿ ಬಿಜೆಪಿಗೆ ಆಗುವ ಲಾಭವೇ ಹೆಚ್ಚು. ಕಾಂಗ್ರೆಸ್‌ನ ಮತಗಳನ್ನು ಜೆಡಿಎಸ್ ಕಿತ್ತಷ್ಟೂ ಬಿಜೆಪಿಗೇ ಲಾಭ. ನಷ್ಟ ಮಾತ್ರ ಕಾಂಗ್ರೆಸ್‌ಗೇ..!
ಅಲ್ಪಸಂಖ್ಯಾತರ ಪೈಕಿ ಇನ್ನು ಕ್ರೈಸ್ತರ ಸರದಿ. ಮೂವತ್ತೆರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕ್ರೈಸ್ತ ಸಮುದಾಯದ ಒಬ್ಬನೇ ಒಬ್ಬನಿಗೂ ಟಿಕೆಟ್ ಕೊಟ್ಟಿಲ್ಲ. ಕ್ರೈಸ್ತರು ದೊಡ್ಡ ಪ್ರಮಾಣದ ವೋಟ್‌ಬ್ಯಾಂಕ್ ಅಲ್ಲದಿದ್ದರೂ ಕಡಿಮೆ ಅಂತರದ ಗೆಲವುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ಸುಳ್ಳಲ್ಲ. ಹತ್ತು ಸಾವಿರದವರೆಗಿನ ಮತಗಳ ಅಂತರದ ಗೆಲವುಗಳಲ್ಲಿ ಅವರ ಕೊಡುಗೆ ಇದ್ದೇ ಇದೆ. ಆದರೆ ಈ ಬಾರಿ ಒಬ್ಬರಿಗೂ ಟಿಕೆಟ್ ಕೊಡದಿರುವುದು ಅವರ ಅಸಮಾಧಾನಕ್ಕೂ ಕಾರಣವಾಗಿದೆ. ಇದರಿಂದ ಸಮುದಾಯದ ಬಹುತೇಕ ಮತಗಳು ಚಲಾವಣೆಯೇ ಆಗದಿರಬಹುದು. ಮತದಾನಕ್ಕೆ ಮನಸ್ಸು ಮಾಡಿದವರು ಜೆಡಿಎಸ್ ಹಾಗೂ ನಗರ ಪ್ರದೇಶಗಳಲ್ಲಿ ಕಣ್ಣು ಬಿಡುತ್ತಿರುವ ಆಮ್ ಆದ್ಮಿ ಕಡೆ ತಿರುಗಿ ನೋಡಬಹುದು. ಇಲ್ಲೂ ಕೂಡ ನಷ್ಟ ಕಾಂಗ್ರೆಸ್‌ಗೇ..!
ಇನ್ನು ಶಿವಮೊಗ್ಗದಲ್ಲಿ ಟಿಕೆಟ್ ಸಿಗದ ಕುಮಾರ ಬಂಗಾರಪ್ಪ ತಿರುಗಿ ಬಿದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವರ ಇರಾದೆ ಮಣಿಸುವ ಯತ್ನ ನಡೆಯುತ್ತಿದೆ. ಆದರೆ ಆಂತರ್ಯದಲ್ಲಿ ಮಡುಗಟ್ಟಿರುವ ಅಸಮಾಧಾನ ಶಮನ ಸಾಧ್ಯವೇ..? ಅವರನ್ನು ಈಗಾಗಲೇ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪರ್ಕಿಸಿದ್ದಾರೆ, ಎತ್ತಿಕಟ್ಟಿದ್ದಾರೆ. ಕ್ಷೇತ್ರದಲ್ಲಿನ ಪ್ರಬಲ ಈಡಿಗ ಸಮುದಾಯದ ಮತಗಳನ್ನು ವಿಭಜನೆ ಮಾಡುವ ಗುರಿ ಅವರದು. ಕುಮಾರ ಬಂಗಾರಪ್ಪ ಸಹೋದರಿ ಗೀತಾ ಶಿವರಾಜ್‌ಕುಮಾರ್ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಈಡಿಗ ಮತಗಳು ಸಾರಾಸಗಟಾಗಿ ಅವರಿಗೆ ಹೋಗುವುದನ್ನು ತಡೆಯಲು ಯಡಿಯೂರಪ್ಪ ಅವರಿಗೆ ಕುಮಾರ್ ಬಂಗಾರಪ್ಪ ಸಹಕಾರ ಬೇಕು. ಇನ್ನೊಂದೆಡೆ ಆ ಮೂಲಕ ಕಾಂಗ್ರೆಸ್ ಮತಗಳನ್ನೂ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂಬುದು  ಯಡಿಯೂರಪ್ಪ ಹವಣಿಕೆ. ಇದು ಸಾಧ್ಯವಾದರೆ ಇಲ್ಲೂ ಕಾಂಗ್ರೆಸ್‌ಗೇ ನಷ್ಟ.
ಇಂಥ ಉದಾಹರಣೆಗಳನ್ನು ಕಾಂಗ್ರೆಸ್‌ನಲ್ಲಿನ ಸಿದ್ದರಾಮಯ್ಯ ವಿರೋಧಿ ನಾಯಕರು ಕ್ರೋಡೀಕರಿಸಿಕೊಂಡು, ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತಿದ್ದಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಅವರಿಗೆ ತೊಂದರೆ ಆಗುತ್ತದೆ ಎಂಬ ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ 'ಒಂದು ಮುಷ್ಟಿ'ಯಾಗಿ ಕೆಲಸ ಮಾಡಿದ್ದರು. ಅದೇ ಚಿತ್ರಣ ಈಗಿದೆ ಎಂದು ಹೇಳುವಂತಿಲ್ಲ. ಹಾಗೆ ನೋಡಿದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅವರು ಎದುರಿಸುತ್ತಿರುವ ಮೊದಲ ಪೂರ್ಣಪ್ರಮಾಣದ ಚುನಾವಣೆ ಇದು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಮರು ಚುನಾವಣೆಯಲ್ಲಿನ ಗೆಲವು ಅವರ ಕಿರೀಟದಲ್ಲಿದೆ. ಆದರೆ ಈಗಿನಂತೆ ಗೊಂದಲ, ಅಲ್ಪಸಂಖ್ಯಾತರ ವಿರೋಧ ಆಗಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಅವರೇ ಚುನಾವಣೆ ಮಾಡಿಕೊಳ್ಳಲಿ ಎಂಬ ಅಸಹಕಾರ ಭಾವನೆ ಅಧಿಕಾರವಂಚಿತ ಕಾಂಗ್ರೆಸ್ಸಿಗರದು. ಹೀಗಾಗಿಯೇ ಸಹಜವಾಗಿ ಚುನಾವಣೆ ಹೊಣೆ ಸಿದ್ದರಾಮಯ್ಯ ಹೆಗಲಿಗೆ ಬಿದ್ದಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 'ಅಹಿಂದ' ಮತಗಳು ಕಾಂಗ್ರೆಸ್ ಪರ ಕೆಲಸ ಮಾಡಿರುವುದು ಸುಳ್ಳಲ್ಲ. ಆದರೆ ಈಗ ಅಹಿಂದ ಪೈಕಿ ಅಲ್ಪಸಂಖ್ಯಾತರು, ಹಲವು ಭಾಗಗಳ ದಲಿತ ನಾಯಕರು ಪ್ರಜ್ಞಾಪೂರ್ವಕವಾಗಿ ಜವಾಬ್ದಾರಿಯಿಂತ ಕಳಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾರಣ ಲೋಕಸಭೆ ಚುನಾವಣೆ ಅಧಿಸೂಚನೆ ಪೂರ್ವದಲ್ಲಿ ಸಿದ್ದರಾಮಯ್ಯನವರ ನಡೆ. ಆಗೆಲ್ಲ ಅವರು ಹಿಂದುಳಿದ ವರ್ಗಗಳ ಪೈಕಿ ಮುಂದುವರಿದ ಕುರುಬರು, ಈಡಿಗರು, ಉಪ್ಪಾರರ ಸಮಾವೇಶಗಳನ್ನು ಮಾಡಿದರು. ಹಿಂದುಳಿದ ವರ್ಗಗಳ ರಾಜಕೀಯ ಶಕ್ತಿ ಕೇಂದ್ರ ಈ ಸಮುದಾಯಗಳಲ್ಲಿ ಕೇಂದ್ರೀಕೃತವಾಗಿದೆ. ಇದು ಸಹಜವಾಗಿಯೇ ಇತರೆ ಹಿಂದುಳಿಗ ವರ್ಗಗಳ ಅಸಮಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮೂಲತಃ ಅಹಿಂದ ತತ್ವ ಇಟ್ಟುಕೊಂಡಿದೆ. ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಒಂದುಗೂಡಿಸಿ 'ಒಂದು ವರ್ಗ' (ಕ್ಲಾಸ್) ಮಾಡಿದೆ. ಆದರೆ ಸಿದ್ದರಾಮಯ್ಯ ಆ ವರ್ಗವನ್ನು (ಕ್ಲಾಸ್) ಮತ್ತೆ ಜಾತಿ (ಕ್ಯಾಸ್ಟ್) ಆಗಿ ಪರಿವರ್ತಿಸುತ್ತಿದ್ದಾರೆ. ಈ ವಿಭಜನೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಅವರಂತಹ ಧುರೀಣರಿಗೆ ಸಹ್ಯ ಆಗುತ್ತಿಲ್ಲ. ಆದರೆ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂಬ ಕಾರಣಕ್ಕೆ ಬಹಿರಂಗವಾಗಿ ಮಾತಾಡುತ್ತಿಲ್ಲ. ಆದರೆ ಲಾವಾರಸದಂತೆ ಒಳಗೊಳಗೇ ಹರಿಯುತ್ತಿರುವ ಅಸಮಾಧಾನ ಚುನಾವಣೆ ವೇಳೆಯಲ್ಲಿ ಹೇಗೆ ಕೆಲಸ ಮಾಡುತ್ತದೋ ಹೇಳಲಾಗದು.
ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಕಲ್ಪನೆ ಮೂಲ ಕಾಂಗ್ರೆಸ್ಸಿಗರ ಪರಿಕಲ್ಪನೆಗೆ ವಿರುದ್ಧವಾದುದಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಲ್ಲೂ ಹಿಂದುಳಿದ ವರ್ಗದವರನ್ನೇ ಅಭ್ಯರ್ಥಿಗಳನ್ನಾಗಿ ಮಾಡುವ ಮೂಲಕ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಇಲ್ಲೆಲ್ಲ ಸಿದ್ದರಾಮಯ್ಯನವರ ವಿವೇಕಕ್ಕಿಂತ ಹಠವೇ ಪ್ರಧಾನವಾಗಿ ಕೆಲಸ ಮಾಡಿದೆ. ಜನಾರ್ದನ ಪೂಜಾರಿಯಂಥ ಜಾತ್ಯತೀತವಾದಿ ಮುಖಂಡ ಕೂಡ ಸಿದ್ದರಾಮಯ್ಯನವರ 'ಶಾದಿಭಾಗ್ಯ'ದಂಥ ಯೋಜನೆಯನ್ನು ಒಪ್ಪಿಕೊಳ್ಳಲ್ಲಿಲ್ಲ. ಈ ಎಲ್ಲ ಕಾರಣಗಳಿಗಾಗಿ ಚುನಾವಣೆ ಗೆಲವಿನ ಹೊಣೆಯನ್ನು ತಾವು ಹಾಗೂ ತಮ್ಮ ಬಣದ ಹಣೆಗೆ ಕಟ್ಟಿಕೊಂಡಿದ್ದಾರೆ ಸಿದ್ದರಾಮಯ್ಯ. ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನ ಪರೀಕ್ಷೆ ಆಗದು. ಬದಲಿಗೆ ಸಿದ್ದರಾಮಯ್ಯನವರ ಪರೀಕ್ಷೆ ಆಗುತ್ತದೆ.
ಚುನಾವಣೆಪೂರ್ವ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ 12 ರಿಂದ 14 ಸ್ಥಾನಗಳನ್ನು ಗೆಲ್ಲುತ್ತದೆ ಎಂದೇ ಬಿಂಬಿಸಿವೆ. ಆದರೆ ಪಕ್ಷದ ನಾಯಕರು, ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಒಳವಿರೋಧಿಗಳು 18 ರಿಂದ 21 ಸೀಟುಗಳನ್ನು ಗೆಲ್ಲುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಇದರ ಹಿಂದಿರುವ ತಂತ್ರ ಏನೆಂದರೆ, ಒಂದೊಮ್ಮೆ ಕಡಿಮೆ ಬಂದರೆ ಅದನ್ನು ಸಿದ್ದರಾಮಯ್ಯನವರ ತಲೆಗೆ ಕಟ್ಟುವುದು. ವಾಸ್ತವವಾಗಿ ಹೆಚ್ಚು ಸೀಟು ಬರಬೇಕಿತ್ತು. ಸಿದ್ದರಾಮಯ್ಯನವರ ನಡೆನುಡಿಯಿಂದಾಗಿ ಕಡಿಮೆ ಬಂತು ಎಂದು ಬಿಂಬಿಸುವುದು. ಇದು ಮನೆಹಾಳು ತಂತ್ರಗಾರಿಕೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೆಚ್ಚು ಸೀಟುಗಳನ್ನು ಗೆದ್ದು ಯುಪಿಎ ಕೈ ಬಲಪಡಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 6 ತಿಂಗಳ ಹಿಂದೆಯೇ ಸಂದೇಶ ರವಾನಿಸಿದ್ದರು. ಆ ಸಂದೇಶದ ಜಾರಿ ಜವಾಬ್ದಾರಿ ಸಿದ್ದರಾಮಯ್ಯ ಅವರದ್ದೇ. ಹೀಗಾಗಿ ಅವರು ಹಿಂದುಳಿದ ವರ್ಗಗಳ ಪ್ರಬಲ ಜಾತಿ ಸಮಾವೇಶಗಳಲ್ಲಿ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ಹೇಳಿಸುತ್ತಿದ್ದರು. ಆದರೆ ಇತರೆ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ಸಂಘಟಿಸದ, ಅಲ್ಪಸಂಖ್ಯಾತರ ಬಗೆಗಿನ ತಮ್ಮ ತಾತ್ಸಾರ ಭಾವನೆ ಭವಿಷ್ಯದಲ್ಲಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು, ಅಂದರೆ ಈಗಿನ ಬೆಳವಣಿಗೆಗಳನ್ನು ಆಗಲೇ ಅವರು ಊಹಿಸಿದ್ದರು ಎಂಬುದು ಇದರ ಅರ್ಥ ಅಲ್ಲವೇ?
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ವರಿಷ್ಠರು ಇಲ್ಲಿ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಾಗುತ್ತಿರುವ ಬೆಳವಣಿಗೆಗಳು ಅಪ್ಯಾಯಮಾನ ಎಂದೆನಿಸುತ್ತಿಲ್ಲ. ಅಧಿಕಾರ ವಂಚಿತ ಆಕಾಂಕ್ಷಿಗಳು ಸದಾ ಸಲ್ಲದ ಬೆಳವಣಿಗೆಗಳ ನಿರೀಕ್ಷೆಯಲ್ಲಿರುತ್ತಾರೆ. ಇವರಲ್ಲಿ ಪಕ್ಷನಿಷ್ಠರೂ ಇದ್ದಾರೆ, ಅದೇ ರೀತಿ ಅಧಿಕಾರ ಲಾಲಸಿಗಳೂ ಇದ್ದಾರೆ. ಈಗಂತೂ ಲೋಕಸಭೆ ಚುನಾವಣೆ ಎಲ್ಲ ರೀತಿಯಲ್ಲೂ ಸಿದ್ದರಾಮಯ್ಯನವರಿಗೆ ನಿಜಕ್ಕೂ ಒಂದು ಸವಾಲೇ ಸರಿ. ಅದನ್ನು ಅವರೀಗ ಯಾವ ರೀತಿ ದಾಟುತ್ತಾರೆ ಎಂಬುದಷ್ಟೇ ಕುತೂಹಲದ ಸಂಗತಿ.
ಲಗೋರಿ: ಕೆಲವೊಮ್ಮೆ ಅತಿ ಬುದ್ಧಿವಂತಿಕೆಯೂ ಅರಿವಿಗೆ ಮಂಕು ಕವಿಸುತ್ತದೆ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com