ದೇಶದ ಜನತೆಗೆ ಮಾಧ್ಯಮಗಳು ಪ್ರೇರಣೆಯ ಮೂಲವಾಗಲಿ

ದಿ. 23,03.2014ರ ಕನ್ನಡಪ್ರಭ ಪತ್ರಿಕೆಯಲ್ಲಿ ಅಚ್ಚಾಗಿರುವ ಟಿ.ಜೆ.ಎಸ್. ಜಾರ್ಜ್ ಅವರ ಲೇಖನವನ್ನು(ಬಾಗಿಲು ಬಡಿಯುತ್ತಿರುವ ಅವಕಾಶವನ್ನು ಅಪ್ಪಿಕೊಳ್ಳುವರೇ ನಮ್ಮವರು) ಓದಿ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಾಗಲೀ, ಮುದ್ರಣ ಮಾಧ್ಯಮವಾಗಲೀ ನಮಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುವುದು ಅಥವಾ ವಿಚಾರಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿಲ್ಲ. ಇದಕ್ಕೆ ಮೂಲ ಕಾರಣ ಇವೆರಡೂ ಮಾಧ್ಯಮಗಳಲ್ಲಿ ಸಾರ್ವಜನಿಕ ಹಿತ ಅಥವಾ ವಾಸ್ತವಾಂಶ ಗಳನ್ನು ಪ್ರತಿಬಿಂಬಿಸುವ ಗುಣ ಕಡಿಮೆಯಾಗುತ್ತಿರುವುದು, ಜ್ಞಾನಾರ್ಜನೆಗೆ ಅವಕಾಶ ಇಲ್ಲದಿರುವುದೇ ಆಗಿದೆ. ಅಪರೂಪಕ್ಕೆ ಆಗೊಮ್ಮೆ ಈಗೊಮ್ಮೆ ಕನ್ನಡಪ್ರಭದಲ್ಲಿ ಪ್ರಕಟವಾಗುವ ಜಾರ್ಜ್ ಅವರ ಬರವಣಿಗೆಗಳು ನನ್ನಲ್ಲಿ ಒಂದು ರೀತಿಯ ಹೊಸ ಚೈತನ್ಯವನ್ನು ಮೂಡಿಸುತ್ತಿವೆ.
ಇತಿಹಾಸ, ಅರ್ಥಶಾಸ್ತ್ರ ಹಾಗೂ ಸಮಕಾಲೀನ ಜಗತ್ತಿನ ಆಗು ಹೋಗುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದವರು ನಮ್ಮನ್ನು ಆಳುತ್ತಿರುವವರು ಹಾಗೂ ಆಳುವವರು. ಕ್ರಿಮಿಯಾದ ಜನರ ಅಪೇಕ್ಷೆಗೆ ಆಕ್ಷೇಪಣೆ ಮಾಡಲು ಅಮೆರಿಕದವರ ದೊಡ್ಡಸ್ತಿಕೆ ಏನು? ಪ್ರಪಂಚದ 2ನೇ ಮಹಾಯುದ್ಧ, ಹಿರೋಷಿಮಾ, ನಾಗಸಾಕಿಗಳ ಮೇಲೆ ಬಿಸಾಡಿದ ಅಣುಬಾಂಬಿನಿಂದ ಹಿಡಿದು, ವಿಯಟ್ನಾಂ ಮೇಲೆ ನಡೆದ ಸಮರ, ಇರಾಕ್ ಮೇಲೆ ನಡೆಸಿದ ದೌರ್ಜನ್ಯ, ಭಾರತದ ಸಮಗ್ರತೆಯನ್ನು ಸರ್ವನಾಶ ಮಾಡಲು ಪಾಕಿಸ್ತಾನದ ಉಗ್ರಗಾಮಿಗಳಿಗೆ ಮತ್ತು ಖಲಿಸ್ತಾನ್ ವಾದಿಗಳಿಗೆ ನೀಡಿದ ನಿರ್ಲಜ್ಜಿತ ಬೆಂಬಲ ಎಲ್ಲವೂ ಅಮೆರಿಕನ್ನರ ಧೂರ್ತ ನಡವಳಿಕೆಯನ್ನು ಜಗತ್ತಿಗೆ ಪರಿಚಯ ಮಾಡಿಸಿವೆ. ಒಸಾಮ ಬಿನ್ ಲಾಡೆನ್ ಅಮೆರಿಕನ್ನರ ಮೇಲೆ ನಡೆಸಿದ ದಾಳಿ ಅತ್ಯಂತ ಕ್ರೂರವಾದುದು. ಅದಕ್ಕೆ ಅಮೆರಿಕ 'ಪ್ರತೀಕಾರ'ದ ಉತ್ತರ ನೀಡಿತು. ವಿಶ್ವಕ್ಕೆ ಶಾಂತಿ ಸಂದೇಶವನ್ನು ನೀಡುವವರೂ ಇವರೆ, ಎಲ್ಲಾ ದೇಶಗಳಿಗೂ ಶಸ್ತಾಸ್ತ್ರಗಳನ್ನು ಸರಬರಾಜು ಮಾಡುವವರೂ ಇವರೇ, ವಿಶ್ವದಾದ್ಯಂತ ಅಭಿವೃದ್ಧಿಯ ಪಥದಲ್ಲಿರುವ ದೇಶಗಳನ್ನು ವಿಶ್ವಬ್ಯಾಂಕಿನ ಸಾಲದ ಸುಳಿಯಲ್ಲಿ ಸಿಕ್ಕಿಸುವವರೂ ಇವರೇ, ಪ್ರಪಂಚದ ಮೂಲೆ ಮೂಲೆಗಳಲ್ಲಿ ನಡೆಯುವ ಎಲ್ಲಾ ಪ್ರಗತಿಪರ ಚಳವಳಿಗಳನ್ನು ಹತ್ತಿಕ್ಕುವವರೂ ಇವರೇ! ಅಲ್ಲದೆ ಎಲ್ಲಾ ಕ್ರಾಂತಿಕಾರಿ ನಾಯಕರನ್ನು ಕುಟಿಲೋಪಾಯಗಳಿಂದ ಮುಗಿಸುವವರು ಅಮೆರಿಕನ್ನರೆ. ಚಿಲಿ ದೇಶದ ಅಲೆನ್ಡೆ ಅವರನ್ನು ಅಂತ್ಯಗೊಳಿಸಿದ್ದು, ಫಿಲಿಫೈನ್ಸ್ನ ಆಕ್ವಿನೋ ಅವರನ್ನು ಮುಗಿಸಿದ್ದು ಅಮೆರಿಕಾನೇ ಅಲ್ಲವೇ? ಮಾರ್ಟಿನ್ ಲೂಥರ್ಕಿಂಗ್ ಅವರು ಬಲಿಯಾದದ್ದು ಅಮೆರಿಕದ ಗುಂಡಿಗೆ. ಸದ್ಯಕ್ಕೆ ನೆನಪಿಗೆ ಬಂದದ್ದು ಇಷ್ಟು. ಇನ್ನು ಇತಿಹಾಸದಲ್ಲಿ ಅಡಗಿ ಹೋದದ್ದು ಮತ್ತೆಷ್ಟೋ?
ನಮ್ಮ ಪ್ರಧಾನಿ ಮನಮೋಹನಸಿಂಗ್ ಅವರಿಗೆ "ಈ ದೇಶಕ್ಕೆ ಗೊತ್ತಿಲ್ಲದ ಕಾರಣ"ಗಳಿಗಾಗಿ ಅಮೆರಿಕ ದೇಶದೊಂದಿಗೆ ಬಾಂಧವ್ಯ ಬೆಳೆಸ ಬೇಕೆಂಬ ಬಯಕೆ ಆಯಿತು. ನೆಹರೂ ಕಾಲದಿಂದ ತಟಸ್ಥ ನೀತಿ ಅನುಸರಿಸಿದ ದೇಶಕ್ಕೆ ಕ್ರಮೇಣ ಇಂದಿರಾಗಾಂಧಿ ಅವರ ಕಾಲದಲ್ಲಿ ಸೋವಿಯತ್ ಪರ ಒಲವಿನ ಪ್ರದರ್ಶನ ನಡೆಯಿತು. ಇದರಿಂದ ನಮಗಾದ ನಷ್ಟ ಏನೂ ಇಲ್ಲ. ಖಂಡಿತವಾಗಿಯೂ ಒಬ್ಬ ಪ್ರಾಮಾಣಿಕ ಬೆಂಬಲಿಗ ದೇಶವಾದರೂ ನಮ್ಮೊಡನೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ಕಾರಣಗಳಿಂದಾಗಿ ಸೋವಿಯತ್ ಯೂನಿಯನ್ ವಿಘಟಿತಗೊಂಡ ಮೇಲೆ, ಭಾರತ ತನಗೆ ಅರಿವಿಲ್ಲದಂತೆ ಅಮೆರಿಕದ ಕಡೆ ವಾಲುತ್ತಿದ್ದಂತೆ ಕಾಣುತ್ತದೆ. ಪಾರ್ಲಿಮೆಂಟ್ ಚುನಾವಣೆಗಳು ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸಲಿವೆ. ಇಲ್ಲಿಯವರೆಗೆ ಯಾವುದೇ ರಾಷ್ಟ್ರೀಯ ಪಕ್ಷಗಳೂ ಭಾರತ ದೇಶದ ಆರ್ಥಿಕ ನೀತಿಯನ್ನು, ಉದ್ಯೋಗ ನೀತಿಯನ್ನು, ಸಾಂಸ್ಕೃತಿಕ ನೀತಿಯನ್ನು, ವಿದೇಶಾಂಗ ನೀತಿಯನ್ನು, ರಕ್ಷಣಾ ನೀತಿಯನ್ನು ಘೋಷಿಸಿರುವುದಿಲ್ಲ. ಭಾರತದ ಉದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ಕಲಾವಿದರು ವಿದೇಶಿ ಬ್ಯಾಂಕ್ಗಳಲ್ಲಿ ಅಕ್ರಮವಾಗಿ ಬಚ್ಚಿಟ್ಟಿರುವ ಭಾರತ ದೇಶದ ಅಪಾರ ಸಂಪತ್ತನ್ನು ಹಿಂತರುವ ಯಾವುದೇ ಮಾತನ್ನು ಆಡುತ್ತಿಲ್ಲ. ಬಹುಶಃ ಮುಕೇಶ್ ಅಂಬಾನಿಯವರ ಅಖೈರು ಆದೇಶದ ನಂತರ ಇವರು ತಮ್ಮ ಪ್ರಣಾಳಿಕೆಗಳನ್ನು ಸಿದ್ಧಪಡಿಸಬಹುದು! ಯಾವುದೇ ಪ್ರಣಾಳಿಕೆಯೂ ಪ್ರಕಟವಾಗದೆ, ನೀತಿಯ ಘೋಷಣೆ ಆಗದೆ, ನಮ್ಮ ಮಾಧ್ಯಮಗಳು ಸಮೀಕ್ಷೆಗಳನ್ನು ನಡೆಸಿ ಪೂರೈಸಿದವು. ಭಾವಿ ಪ್ರಧಾನ ಮಂತ್ರಿಗಳನ್ನು ಘೋಷಿಸಲಾಯಿತು. ಯಾವ ಪುರುಷಾರ್ಥಕ್ಕಾಗಿ ಅನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳು ತಮ್ಮ ವ್ಯಾಪಾರದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕ ಅಭಿಪ್ರಾಯಗಳೆಂದು ದೇಶದ ಜನತೆಯ ಮೇಲೆ ಹೇರಲು ಹೊರಟಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಟಿ.ಜೆ.ಎಸ್. ಜಾರ್ಜ್ ಅವರ ಬರವಣಿಗೆಗಳು ನಿರ್ಭೀತ ಮನಸ್ಸಿನಿಂದ, ಯಾರು ಎಷ್ಟು ದೊಡ್ಡವರೆಂದು ಲೆಕ್ಕಿಸದೆ, ಯಾರ ಹಂಗಿಗೂ ಒಳಗಾಗದೆ ಬರುತ್ತವೆ. ಇದಕ್ಕೆ ದೇಶದ ಸಾಮಾನ್ಯ ಜನರ ಮನ್ನಣೆ, ಗೌರವ ಎಂದೂ ಇರುತ್ತದೆ. ಈ ದೇಶದ ಸಾಮಾನ್ಯ ಜನ ದೇಶಭಕ್ತಿಯ ಮೇಲೆ ಸಂಘಟಿತರಾಗಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿರುತ್ತಾರೆ. ಅವರಿಗೆ, ಶ್ರೀಮತಿ ಇಂದಿರಾಗಾಂಧಿ ಅಂತಹವರನ್ನು ಗೆಲ್ಲಿಸುವುದು, ಸೋಲಿಸುವುದು ಎರಡೂ ಗೊತ್ತು. ಅವರಿಗೆ ಬೇಕಾಗಿರುವುದು ಕೇವಲ ಪ್ರೇರಣೆಯಷ್ಟೇ. ಇಂತಹ ಪ್ರೇರಣೆ, ಸದುದ್ದೇಶಗಳಿಂದ ಕೂಡಿದ ಮೂಲಗಳಿಂದ ಮಾತ್ರ ಬರಬೇಕು. ಜಾರ್ಜ್ ಅವರು ಅಂತಹ ಒಂದು ಅಮೂಲ್ಯವಾದ ಮೂಲ. ಕತ್ತಿ ಝಳಪಿಸುತ್ತಿರುವವರು. ಲೇಖನಿಯ ಮುಂದೆ ಶರಣಾಗತರಾಗಲೇಬೇಕು. ಕಡೆಯದಾಗಿ, ಅವರಿಗೆ ನಮ್ಮಂತಹ ಸಮಾನ ಮನಸ್ಕರ ಮನೋವೇದನೆಯನ್ನು ಮುಟ್ಟಿಸಿ ದೇಶ ಎದುರಿಸುತ್ತಿರುವ ಈ ಪರೀಕ್ಷಾ ಸಮಯದಲ್ಲಿ ಹೆಚ್ಚು ಲೇಖನಗಳನ್ನು ಬರೆಯಬೇಕೆಂಬುದೇ ಈ ಲೇಖನದ ಉದ್ದೇಶ.
-ಕೆ. ಆರ್ . ರಮೇಶ ಕುಮಾರ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


