ಎಲ್ಲ ಕದನಗಳಲ್ಲೂ ನಂದು ಬತ್ತದ ಉತ್ಸಾಹ!
ತೊಂಬತ್ತರ ಪ್ರಾಯಕ್ಕೆ ಹತ್ತಿರವಾಗುತ್ತಿರುವ ನಾನು ಏನನ್ನೋ ಹೇಳಲು ಹೊರಟಿದ್ದೇನೆಂದರೆ ನೀವೆಲ್ಲ ತುಸು ಪುರಸೊತ್ತು ಮಾಡಿಕೊಳ್ಳಲೇಬೇಕು. ವಯಸ್ಸಿಗೆ ಬೆಲೆ ಕೊಡಬೇಕಾಗುತ್ತದೆ ನೋಡಿ. ಕಿರಿಯರಾದ ನಿಮಗೆಲ್ಲ ನಾನು ಬದುಕಿನ ಬಗ್ಗೆ ಹೇಳಬೇಕೆಂದುಕೊಂಡಿದ್ದೇನೆ. ಖಂಡಿತ ಉಪಯೋಗಕ್ಕೆ ಬಂದೀತು.
ಆನಂದದಿಂದ ಬದುಕುವುದು ಹೇಗೆ ಎಂಬ ಬಗ್ಗೆ ನಿಮಗೆ ಹಲವರು ಪಾಠ ಮಾಡಿದ್ದಿರಬಹುದು. ಈ ಬಗ್ಗೆ ಬೇರೆ ಬೇರೆ ಕಡೆಗಳಲ್ಲಿ ಓದಿ- ಕೇಳಿ ನೀವೆಲ್ಲ ಆನಂದನ್ನು ಪಡೆಯುವುದರ ಬಗ್ಗೆ ಪ್ರಯತ್ನಶೀಲರೂ ಆಗಿದ್ದಿರಬಹುದು. ಆದರೆ ಆನಂದಕ್ಕೆ ಮೀರಿದ ಫಾರ್ಮ್ಯಲಾ ಒಂದನ್ನು ನಾನು ಕಂಡುಕೊಂಡಿದ್ದೇನೆ. 'ನಿರ್ಲಜ್ಜವಾಗಿ ಬದುಕುವುದು ಹೇಗೆ' ಎಂಬುದನ್ನು ನೀವು ಅರಿತುಕೊಂಡಿದ್ದೇ ಆದಲ್ಲಿ ನಿಮ್ಮ ಜೀವನಕ್ಕೆ ಪರಮಾನಂದ ಮತ್ತು ಮೋಕ್ಷ ಸಿಕ್ಕಿದಂತೆಯೇ. ಅದು ಎಲ್ಲ ಪ್ರಶ್ನೆಗಳನ್ನು ಮೀರಿದ ಹಂತ. ಈ ಕಲೆಗೆ ನೀವು ನನ್ನ ಬದುಕನ್ನೇ ಮಾದರಿಯಾಗಿ ತೆಗೆದುಕೊಳ್ಳಬಹುದು.
ನಾನು ಉತ್ತರ ಪ್ರದೇಶ, ಉತ್ತರಾಖಾಂಡಗಳ ಮುಖ್ಯಮಂತ್ರಿ ಆಗಿದ್ದ ಮನುಷ್ಯ. ರಾಜೀವ್ ಗಾಂಧಿ ಸಂಪುಟದಲ್ಲಿ ವಿದೇಶ ವ್ಯವಹಾರಗಳ ಮಂತ್ರಿಯೂ ಆಗಿದ್ದೆ. ನಂತರ ಆಂಧ್ರ ಪ್ರದೇಶದ ರಾಜ್ಯಪಾಲನೂ ಆದೆ. ಇಷ್ಟೆಲ್ಲ ಪವರ್‌ಫುಲ್ ಆಗಿರುವ ವ್ಯಕ್ತಿ ಆಮಿಷ- ಚಪಲಗಳನ್ನು ಇಟ್ಟುಕೊಳ್ಳುವುದು ಸಹಜ ಅಂತ ನನ್ನ ಪೂರ್ತಿ ಕತೆ ಗೊತ್ತಿಲ್ಲದ ನೀವು ನಿರ್ಧಾರಕ್ಕೆ ಬಂದುಬಿಡಬೇಡಿ. ನಾನೆಂಥ ಐನಾತಿ ಎಂದರೆ ರಾಜ ಭವನದಂಥ ಪವಿತ್ರ ಸೌಧಕ್ಕೇ ಕರೆವೆಣ್ಣುಗಳನ್ನು ತರಿಸಿಕೊಂಡವನು. ಹಾಗೆ ಇಬ್ಬರು ಹುಡುಗಿಯರ ಜತೆ ಚಕ್ಕಂದದಲ್ಲಿದ್ದಾಗಲೇ ಟಿವಿ ವಾಹಿನಿಯೊಂದು ಆ ದೃಶ್ಯಗಳನ್ನು ಸೆರೆಹಿಡಿದು ಬಿತ್ತರಿಸಿದಾಗ, 2009ರಲ್ಲಿ ನಾನು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು.
ಅದಕ್ಕೂ ವರ್ಷ ಮೊದಲೇ ಈ ರೋಹಿತ್ ಶೇಖರ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ನನ್ನನ್ನು ಅಪ್ಪ ಎಂದು ಒಪ್ಪಿಕೊಳ್ಳುವಂತೆ ಬೇಡಿಕೆ ಇಟ್ಟ. ಅವನನ್ನೇನೋ ಮಗ ಅಂತ ಆ ಕ್ಷಣಕ್ಕೆ ಒಪ್ಪಿಬಿಡಬಹುದಿತ್ತೇನೋ. ಆದರೆ ಅಷ್ಟು ಬಡಪೆಟ್ಟಿಗೆ ಒಪ್ಪಿಕೊಂಡರೆ ನನ್ನ ಕತೆಯೇನಾಗುತ್ತಿತ್ತು ಅಂತ ಬಲ್ಲಿರಾ? ಈ ಹಿಂದೆ ರಾಜಭವನಕ್ಕೆ ಬಂದುಹೋದವರೆಲ್ಲ, 'ನಿನ್ನಿಂದ ನನಗೊಂದು ಮಗುವಾಗಿದೆ' ಅಂತ ಬಂದುಬಿಟ್ಟರೇನು ಗತಿ ಅಂತ ದಿಗಿಲಾಗಿತ್ತು! ನ್ಯಾಯಾಲಯ ಸಹ ಇವನ್ನೆಲ್ಲ ಗಂಭೀರವಾಗಿ ಪರಿಗಣಿಸಲಿಕ್ಕಿಲ್ಲ ಅಂದುಕೊಂಡರೆ, ವಂಶವಾಹಿ ಟೆಸ್ಟ್ ಆಗಬೇಕೆಂಬ ಬೇಡಿಕೆಗೆ ಅದೂ ಸೈ ಎಂದುಬಿಡೋದಾ? ಕೊನೆಪಕ್ಷ ಆ ಪರೀಕ್ಷೆಯ ಫಲಿತಾಂಶವನ್ನು ಗೌಪ್ಯವಾಗಿಡಿ ಅಂತ ಕೇಳಿಕೊಂಡರೆ ಅದಕ್ಕೂ ಒಲ್ಲೆ ಅಂತು. ರೋಹಿತ್ ಬೇರೆ ಒಳ್ಳೇ ಛಲಗಾರನಂತೆ ಪಟ್ಟುಬಿಡದೇ ನಿಂತಿದ್ದ. ಕೊನೆಗೆ ಹಾಳಾಗಿ ಹೋಗ್ಲಿ ಅಂತ ಈ ತಿಂಗಳಾರಂಭದಲ್ಲಷ್ಟೇ ಆತ ನನ್ನ ಸಂತಾನ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡೆ. ನನ್ನನ್ನು ಒಪ್ಪಿಸುವುದಕ್ಕೆ ಇಷ್ಟೆಲ್ಲ ಹೋರಾಡಬೇಕಾಗುತ್ತೆ ಅಂತಲೋ ಏನೋ ಮತ್ಯಾರೂ ಕೇಸ್ ಹಾಕಿಲ್ಲ ಸಧ್ಯ.
ಈಗ ಇದನ್ನೆಲ್ಲ ಏಕೆ ನೆನಪಿಸಿಕೊಳ್ತಿದೇನೆ ಅಂದ್ರೆ, ಲೋಕಸಭೆ ಚುನಾವಣೆ ಘೋಷಣೆಯಾಗಿದೆ ನೋಡಿ... ನನ್ನಂಥ ದಣಿವರಿಯದ 'ಉಮೇದು'ವಾರ ಈ ಸಂದರ್ಭದಲ್ಲಿ ಸುಮ್ಮನಿರುವುದಾದರೂ ಹೇಗೆ? ನೈನಿತಾಲ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಂತ ತೀರ್ಮಾನಿಸಿ ಅಲ್ಲೆಲ್ಲ ಮಗ ರೋಹಿತ್ ಶೇಖರನೊಂದಿಗೆ ಅಡ್ಡಾಡಿ ಬಂದಿದ್ದೇನೆ. ನಾನಲ್ಲದಿದ್ದರೆ ಮಗನನ್ನಾದರೂ ನಿಲ್ಲಿಸಬೇಕೆಂಬ ಸಂಕಲ್ಪದಿಂದ 'ಇವನಿಗೂ ನಿಮ್ಮ ಆಶೀರ್ವಾದ ಇರಲಿ' ಅಂತ ಅಲ್ಲಿನ ಜನಗಳಲ್ಲಿ ಕೇಳುತ್ತಿದ್ದೇನೆ. ಆದರೆ ಕಾಂಗ್ರೆಸ್‌ನ ಟಿಕೆಟ್ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನಂತೂ ಭೇಟಿ ಮಾಡಿ ಬಂದಿದ್ದೇನೆ. ಸ್ವತಂತ್ರವಾಗಿಯಾದರೂ ಸ್ಪರ್ಧಿಸಿಯೇ ಸೈ. 1999ರಲ್ಲಿ ನಾನು ಸ್ಪರ್ಧಿಸಿ ಗೆದ್ದ ಕ್ಷೇತ್ರ ಅದು.
ಮೊದಲೂ ಮಗನೆಂದು ಒಪ್ಪಿಕೊಳ್ಳುವುದಕ್ಕೇ ನಖರಾ ಮಾಡಿ, ಈಗ ಮತ ಕೇಳುವವರೆಗೆ ನಾಚಿಕೆ ಇಲ್ಲದ ಮಾರ್ಗ ಎಂದು ನೀವು ಬಯ್ಯುತ್ತೀರೇನೋ? ಈ ಮುದುಕನಿಗೆ ಮರ್ಯಾದೆ ಅನ್ನೋದಿದೆಯಾ ಅಂತಲೂ ಕೇಳುತ್ತೀರಿ. ಆದರೆ ಒಳಗೊಳಗೇ ನನ್ನ ಕಲ್ಯಾಣಗುಣಗಳ ಬಗ್ಗೆ ಪುಳಕಗೊಂಡಿರುತ್ತೀರಿ. ಹೀಗಾಗಿಯೇ ಬದುಕಿನ ರಹಸ್ಯವನ್ನು ಪ್ರಾರಂಭದಲ್ಲಿಯೇ ಹೇಳಿದ್ದೇನೆ.
-ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

