

ಚುನಾವಣೆ ಎಂದಾಕ್ಷಣ ಎರಡು ರೀತಿಯ ಹೋರಾಟ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಮೊದಲನೆಯದು ಪಕ್ಷ-ಪಕ್ಷಗಳ ನಡುವಣ ಹೋರಾಟ. ಇದು ನೇರಾ-ನೇರ ಮತ್ತು ಬಹಿರಂಗ. ಎರಡನೆಯದು ಅಂತರ್ಯುದ್ಧ. ಮೇಲೊಂದು-ಒಳಗೊಂದು. ಇಲ್ಲಿ ಬರೀ ಕುತಂತ್ರಗಳಿಗಷ್ಟೇ ಜಾಗ. ಈ ಹೋರಾಟದಲ್ಲಿ ಯಾವುದೇ ನೇಮ-ನಿಷ್ಠೆ ಎಂಬುದು ಇರುವುದಿಲ್ಲ.
ಮೊದಲ ರೀತಿಯ ಖಡಾಖಡಿಯಲ್ಲಿ ಎಲ್ಲವೂ ಖುಲ್ಲಂಖುಲ್ಲ, ಮುಖಾಮುಖಿ ಹೋರಾಟ. ಇಲ್ಲಿ ವಾದ-ವಾಗ್ವಾದ, ತಂತ್ರ, ಪ್ರತಿ ತಂತ್ರಕ್ಕಷ್ಟೇ ಆಸ್ಪದ. ಬಹಿರಂಗವಾಗಿಯೇ ಸವಾಲುಗಳನ್ನು ಎಸೆಯಲಾಗುತ್ತದೆ. ಆ ಸವಾಲಿಗೆ ಬಹಿರಂಗವಾಗಿಯೇ ಪ್ರತಿಕ್ರಿಯೆಯೂ ಬರುತ್ತದೆ. ಈ ಸವಾಲು-ಪ್ರತಿಸವಾಲು ಸೌಮ್ಯ ಸ್ವರೂಪದ ಮಾತಾಗಿರಬಹುದು, ಪ್ರಶ್ನೋತ್ತರ ಆಗಿಬಹುದು, ತರ್ಕಬದ್ಧ ವಾದ-ಪ್ರತಿವಾದ ಮಂಡನೆ ಆಗಿರಬಹುದು, ಆವೇಶಭರಿತ ವಾಗ್ಯುದ್ಧದಿಂದ ಕೂಡಿರಬಹುದು. ಈ ಸೇರಿಗೆ ಸವ್ವಾಸೇರು ನೀತಿ ತೆರೆಯ ಮೇಲೆ ಸುಸ್ಪಷ್ಟವಾಗಿ ರಾರಾಜಿಸುತ್ತಿರುತ್ತದೆ.
ಇನ್ನು ಎರಡನೆಯದು ಒಳರಾಜಕೀಯ. ಈ ಎರಡನೆ ಬಗೆಯ ರಾಜಕೀಯದಲ್ಲೂ ಎರಡು ಬಗೆ ಇದೆ. ಒಂದು ಪಕ್ಷದ ಒಳಗೇ ನಡೆಯುವಂಥದ್ದು, ಅಂದರೆ ಪಕ್ಷದೊಳಗೇ ಒಬ್ಬರು ಮತ್ತೊಬ್ಬರನ್ನು ಹಣಿಯುವಂಥದ್ದು. ಇದು ಬಹಿರಂಗವೂ ಆಗಿರಬಹುದು ಅಥವಾ ಇಲ್ಲೂ ಕೂಡ ಒಳಗೊಳಗೇ ನಡೆಯಬಹುದು. ಇನ್ನೊಂದು, ಒಂದು ಪಕ್ಷದವರು ಪಕ್ಷದೊಳಗಿನ ಮತ್ತೊಬ್ಬರನ್ನು ಹಣಿಯಲು ಮತ್ತೊಂದು ಪಕ್ಷದವರ ನೆರವು ಪಡೆಯುವುದು. ಈ ಅಪಾಯಕಾರಿ ಕುತಂತ್ರ ರಾಜಕೀಯ ಆಯಾ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನೂ ಬದಲಿಸುತ್ತಾ ಹೋಗುತ್ತದೆ. ಥೇಟು ಗೋಸುಂಬೆಯಂತೆ ಸನ್ನಿವೇಶಕ್ಕೆ ಬೇಕಾದ ಹಾಗೆ ಬಣ್ಣ ಬದಲಿಸುತ್ತಿರುತ್ತದೆ.
ಇಷ್ಟೆಲ್ಲ ಪೀಠಿಕೆಗೆ ಆಸ್ಪದ ಕೊಟ್ಟಿರುವುದು ಈಗ ಎದುರಾಗಿರುವ ಲೋಕಸಭೆ ಚುನಾವಣೆ ಹಾಗೂ ಆ ಚುನಾವಣೆ ಆನಾವರಣಗೊಳಿಸಿರುವ ವಿದ್ಯಮಾನಗಳು. ಚುನಾವಣೆಗೆ ಮೊದಲು ಒಬ್ಬರಿಗೆ ಮತ್ತೊಬ್ಬರು ಟಿಕೆಟ್ ತಪ್ಪಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಕಣಕ್ಕೆ ಇಳಿದ ಮೇಲೆ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಅದರ ಬದಲು ಟಿಕೆಟ್ ಹಂತದಲ್ಲಿಯೇ ಹಣಿದುಬಿಟ್ಟರೆ ಸುಲಭ ಆಗುತ್ತದೆ ಎಂದು. ಇಂಥ ಬೆಳವಣಿಗೆಗಳು ಎಲ್ಲ ಪಕ್ಷಗಳಲ್ಲೂ ನಡೆದಿವೆ. ಕೆಲವರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರಿಗೆ ಅದು ಸಾಧ್ಯವಾಗಿಲ್ಲ. ಅಂತಹವರು ಚುನಾವಣೆಯಲ್ಲಿ ನೋಡಿಕೊಳ್ಳೋಣ ಎಂದು ಸುಮ್ಮನಿದ್ದರು. ಆದರೆ ಅವರೇ ಈಗ ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಹಗಲು-ರಾತ್ರಿಯೆನ್ನದೇ ಬೆವರು ಹರಿಸುತ್ತಿದ್ದಾರೆ. ನಿಜ ಅರ್ಥದಲ್ಲಿ ಹೇಳಬೇಕೆಂದರೆ ಬೆವರು ಒರೆಸಿಕೊಳ್ಳಲು ಪುರುಸೊತ್ತು ಇಲ್ಲ. ಹೀಗಾಗಿ, ಇನ್ನೊಬ್ಬರನ್ನು ರಾಜಕೀಯವಾಗಿ ಹಾಳು ಮಾಡುವುದಿರಲಿ, ತಮ್ಮನ್ನು ಉಳಿಸಿಕೊಂಡರೇ ಸಾಕು ಎನ್ನುವ ಸ್ಥಿತಿ. ಹೀಗಾಗಿ ತಮ್ಮೆಲ್ಲ 'ಪರಹಿತ ಅಸಹಿಷ್ಣುತೆ' ಕಾರ್ಯತಂತ್ರಗಳನ್ನು ಪಕ್ಕಕ್ಕಿಡಲೇಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ತನ್ನ ಒಂದು ಕಣ್ಣು ಹೋದರೂ ಚಿಂತೆ ಇಲ್ಲ, ತನ್ನ 'ಶತ್ರು'ವಿನ ಎರಡೂ ಕಣ್ಣು ಹೋಗಲಿ ಎಂಬ ಕುತರ್ಕದಿಂದ ಹಿಂದೆ ಸರಿದಿದ್ದಾರೆ. ತಮ್ಮ ಆ ಒಂದು ಕಣ್ಣನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ.
ಹೌದು, ಚುನಾವಣೆ ಅಧಿಸೂಚನೆಗೆ ಮೊದಲಿನ ರಾಜಕೀಯ 'ತಾಲೀಮು'ಗಳನ್ನು ನೋಡಿದಾಗ ಕರ್ನಾಟಕದಲ್ಲಿ ಈ ಬಾರಿ ಒಳರಾಜಕೀಯಗಳೇ ಗರಿಗೆದರಿ, ಬಾನಿನೆತ್ತರಕ್ಕೆ ಹಾರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಇದಕ್ಕೆ ಬಿಜೆಪಿ ಇರಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೂ ಹೊರತಾಗಿರಲಿಲ್ಲ. ಪಕ್ಷದ ಒಳಗಿನ ಮತ್ತು ಹೊರಗಿನ ಶತ್ರುಗಳೆಲ್ಲ ಪರಸ್ಪರರನ್ನು ಕಂಡಾಗ ಅಥವಾ ನೆನೆಸಿಕೊಂಡಾಗ 'ಲೋಕಸಭೆ ಚುನಾವಣೆ ಬರಲಿ, ತಮ್ಮ ತಾಕತ್ತು ಏನೆಂದು ತೋರಿಸುತ್ತೇವೆ' ಎಂದು ಗುಟುರು ಹಾಕಿದ್ದರು, ಹಾಕುತ್ತಿದ್ದರು. ಹೀಗಾಗಿ ಈ ಬಾರಿಯ ಚುನಾವಣೆ ರಾಜಕೀಯ 'ಸ್ಫೋಟಕ'ವೇ ಸರಿ ಎಂದು ಭಾವಿಸಲಾಗಿತ್ತು. ಹಿಂದಿನ ಹಾಗೂ ಈಗಿನ ಸರಕಾರದ ಅವಧಿಯಲ್ಲಿ ತಾರಕ ಕಂಡಿದ್ದ ಕುಮಾರಸ್ವಾಮಿ-ಯಡಿಯೂರಪ್ಪ ಅನಂತಕುಮಾರ್-ಯಡಿಯೂರಪ್ಪ, ಯಡಿಯೂರಪ್ಪ-ಸದಾನಂದಗೌಡ, ದೇವೇಗೌಡ-ಸಿದ್ದರಾಮಯ್ಯ, ಕುಮಾರಸ್ವಾಮಿ-ಸಿದ್ದರಾಮಯ್ಯ, ಕುಮಾರಸ್ವಾಮಿ-ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ-ಸಿದ್ದರಾಮಯ್ಯ ...ಹೀಗೆ ತರಹೇವಾರಿ ಕಾಂಬಿನೇಷನ್ಗಳ ದ್ವೇಷಾಸೂಯೆ ಕಾರ್ಯಸೂಚಿ ರಾಜಕೀಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 'ಉಲ್ಕಾಪಾತ'ದ ಎಲ್ಲ ಲಕ್ಷಣಗಳನ್ನು ಬಿಂಬಿಸಿದ್ದವು.
ಆದರೆ ಈಗ ಆಗಿರುವುದೇ ಬೇರೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಒಬ್ಬರಿಗೆ ಇನ್ನೊಬ್ಬರ ವಿರುದ್ಧ ಕತ್ತಿ ಮಸೆಯಲು ಅವಕಾಶ ಸಿಗುತ್ತಿಲ್ಲ. ತಮ್ಮ-ತಮ್ಮ ತಲೆಗಳನ್ನು ಕಾಯ್ದುಕೊಳ್ಳಲು ಅವರೆಲ್ಲರೂ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವುದರಿಂದ ಚುನಾವಣೆ 'ಸಹಜ' ಸ್ಥಿತಿ ಉಳಿಸಿಕೊಳ್ಳುವತ್ತ ಸಾಗಿದೆ.
ಕಳೆದ ವಿಧಾನ ಸಭೆ ಚುನಾವಣೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ, ಸಂಪುಟ ರಚನೆ ಹಾಗೂ ವಿಸ್ತರಣೆ ಸಂದರ್ಭ ಸಿದ್ದರಾಮಯ್ಯ ಸಾಕಷ್ಟು ತಿಕ್ಕಾಟಗಳನ್ನು ಎದುರಿಸಿದ್ದರು. ಒಂದೊಂದು ಸಂದರ್ಭವೂ ಅವರಿಗೆ ಕಬ್ಬಿಣದ ಕಡಲೆಯೇ. ಈ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದ ಅಥವಾ ಹಾಗೆಂದು ಭಾವಿಸಿದ್ದ ಸಿದ್ದರಾಮಯ್ಯನವರಿಗೆ ಲೋಕಸಭೆ ಚುನಾವಣೆ 'ಅಗ್ನಿಪರೀಕ್ಷೆ' ಆಗುತ್ತದೆಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿತ್ತು. ಏಕೆಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಜತೆ ಪೈಪೋಟಿಗೆ ಇಳಿದಿದ್ದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ನಂತರ ಅಸಮಾಧಾನ ಮಡಿಲಲ್ಲೆ ಇಟ್ಟುಕೊಂಡೇ ಸುಮ್ಮನಾದರು. ನಂತರ ಡಿ.ಕೆ. ಶಿವಕುಮಾರ್, ರೋಷನ್ಬೇಗ್ ಸಂಪುಟ ಸೇರಲು ಇನ್ನಿಲ್ಲದಂತೆ ತಿಣುಕಾಡಿದರು. ಪರಮೇಶ್ವರ್, ರಮೇಶ್ಕುಮಾರ್, ಮಾಲೀಕಯ್ಯ ಗುತ್ತೇದಾರ್, ಕೆ.ಬಿ. ಕೋಳಿವಾಡ ಇನ್ನೂ ಸೈಕಲ್ ತುಳಿಯುತ್ತಲೇ ಇದ್ದಾರೆ. ಇಂಥ ಅವಕಾಶವಂಚಿತರ ಅಸಮಾಧಾನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ಫೋಟವಾಗುತ್ತದೆ. ಅವರೆಲ್ಲರೂ ಸೇರಿ ಸಿದ್ದರಾಮಯ್ಯ ಅವರಿಗೆ ಒಂದು 'ಕೈ' ತೋರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾಪಲ್ಟಾ.
ಸಿದ್ದರಾಮಯ್ಯ ಅವರ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದವರೆಲ್ಲ ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡೋಣ. ಮೊದಲಿಗೆ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾ ಕ್ಷೇತ್ರ ಉಳಿಸಿಕೊಳ್ಳಲು ಶ್ರಮನಿರತರಾಗಿದ್ದಾರೆ. ಅವರು ಗುಲ್ಬರ್ಗಾ ವಿಭಾಗಕ್ಕೆ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದರೂ ಒಂದೆಡೆ ಅವರು ಪ್ರತಿನಿಧಿಸಿದ್ದ ಕೇಂದ್ರ ಸರಕಾರದ ದುರಾಡಳಿತ ಹಾಗೂ ಇನ್ನೊಂದೆಡೆ ನರೇಂದ್ರ ಮೋದಿ ಅವರ ಅಲೆ ಖರ್ಗೆ ಕ್ಷೇತ್ರ ಬಿಟ್ಟು ಅಲ್ಲಾಡದಂತೆ ಮಾಡಿದೆ. ಹೀಗಾಗಿ ಬೇರೆ ಕ್ಷೇತ್ರಗಳನ್ನು ಅಲ್ಲಾಡಿಸಿ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಸಿದ್ದರಾಮಯ್ಯನವರೂ ಕೂಡ ಖರ್ಗೆ ಪಲ್ಲಟಕ್ಕೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಸದ್ಯ ಖರ್ಗೆ ಗೆದ್ದು ಸಂಸತ್ಗೆ ಹೋದರೆ ರಾಜ್ಯದಲ್ಲಿ ತಾವು ನಿರಾಳವಾಗಿರಬಹುದು ಎಂಬ ದೂರಾಲೋಚನೆ.
ಇನ್ನು ಪರಮೇಶ್ವರ್. ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ತುಮಕೂರಿನಲ್ಲಿ ತಾವೇ ಟಿಕೆಟ್ ಕೊಡಿಸಿರುವ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ. ಜತೆಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವುದರಿಂದ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಪ್ರವಾಸದ ಭರಾಟೆ. ಎಲ್ಲಕ್ಕಿಂತ ಮಿಗಿಲಾಗಿ ಚುನಾವಣೆ ನಂತರವಾದರೂ ಉಪಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ಆಸೆಯಿರುವ ಪರಮೇಶ್ವರ್ ಮುಖ್ಯಮಂತ್ರಿ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದಾರೆ. ಹೋದಲ್ಲಿ, ಬಂದಲ್ಲೆಲ್ಲ ಸಿದ್ದರಾಮಯ್ಯ ಸರಕಾರದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಅಧಿಕಾರದ ಆಸೆಗೆ ಇರುವ ಪವರ್ರೇ ಅಂಥದ್ದು.
ಅದೇ ರೀತಿ ಇಂಧನ ಸಚಿವ ಡಿ.ಕೆ. ಶಿವಕುಮಾರ್. ಮೊದಲಿಗೆ ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದ ಶಿವಕುಮಾರ್ ಸಂಪುಟ ಸೇರ್ಪಡೆ ನಂತರ 'ಜೋಡಿ ಜೀವ' ಆಗಿದ್ದಾರೆ. ಒಂದೆಡೆ ಅಧಿಕಾರ ಸಿಕ್ಕದ್ದು, ಮತ್ತೊಂದೆಡೆ ಸಮಾನ ರಾಜಕೀಯ ವೈರಿ ದೇವೇಗೌಡರ ಕುಟುಂಬದ ವಿರುದ್ಧ ಸಮಾನ 'ಅಭಿರುಚಿ' ಬೆಳೆಸಿಕೊಂಡಿರುವುದು. ದೇವೇಗೌಡರನ್ನು ಒಟ್ಟೊಟ್ಟಿಗೆ ದ್ವೇಷಿಸುತ್ತಾ ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ. ಜತೆಗೆ ಡಿ.ಕೆ. ಶಿವಕುಮಾರ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಳ್ಳಬೇಕಾದ ಜವಾಬ್ದಾರಿ ಇರುವುದರಿಂದ ಸಿದ್ದರಾಮಯ್ಯ ಜತೆಗಿನ ವೈಷಮ್ಯಕ್ಕೆ ತಿಲಾಂಜಲಿ ನೀಡಿದ್ದಾರೆ.
ಇನ್ನು ವೀರಪ್ಪ ಮೊಯ್ಲಿ ಅವರು. ಕೇಂದ್ರ ಸರಕಾರದ ಹಗರಣಗಳಲ್ಲಿ ಒಂದಾದ ಪೆಟ್ರೋಲಿಯಂ ವಿವಾದದಲ್ಲಿ ಹೆಸರು ಕೇಳಿಬಂದ ಮೊಯ್ಲಿ ಅವರು ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಬಚ್ಚೇಗೌಡ ನಡುವೆ ಬಚಾವಾಗುವ ಬಗೆ ಹೇಗೆಂದು ತಲೆಕೆಡಿಸಿಕೊಂಡಿದ್ದಾರೆ. ಅವರನ್ನು ಎತ್ತಿನಹೊಳೆ ವಿವಾದವೂ ಸಾಕಷ್ಟು ಹೈರಣಾಗಿಸಿದೆ. ಕೇಂದ್ರದಲ್ಲಿ ಮತ್ತೆ ಅಧಿಕಾರ ಮರೀಚಿಕೆ ಆಗಿರುವ ಸಂದರ್ಭದಲ್ಲಿ ಸಂಸತ್ ಸದಸ್ಯ ಸ್ಥಾನವನ್ನಾದರೂ ಉಳಿಸಿಕೊಳ್ಳಲು ಎತ್ತಿನಹೊಳೆಗೆ ಮೊದಲು ಸಾಕಷ್ಟು ಬೆವರು ಹರಿಸಬೇಕಿದೆ. ಹೀಗಾಗಿ ಮೊಯ್ಲಿ ಅವರ ಪಾಲಿಗೂ ಸಿದ್ದರಾಮಯ್ಯ ನೆಮ್ಮದಿ ಭಂಗ ಕಾರ್ಯಾಚರಣೆ ನಾಸ್ತಿಯೇ ಸರಿ. ಹೀಗೆ ಸಿದ್ದರಾಮಯ್ಯ ಅವರ ಪಕ್ಷದೊಳಗಿನ ರಾಜಕೀಯ ವಿರೋಧಿಗಳು ಒಂದೋ ಹುರಿಯಾಳುಗಳಾಗಿರುವುದರಿಂದ ಅಥವಾ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾದ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ. ಇದು ಕೊಂಚಮಟ್ಟಿಗೆ ಸಿದ್ದರಾಮಯ್ಯನವರು ಉಸಿರಾಡುವಂತೆ ಮಾಡಿದೆ.
ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರು ಮತ್ತೊಂದು ಗಿಮಿಕ್ ಮಾಡಿದ್ದಾರೆ. ಮಂತ್ರಿಗಳೆಲ್ಲರೂ ತಮ್ಮ-ತಮ್ಮ ಜಿಲ್ಲೆಗಳ ವ್ಯಾಪ್ತಿಯ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಅದರ ಪರಿಣಾಮ ಮಂತ್ರಿಸ್ಥಾನದ ಮುಂದುವರಿಕೆ ಜತೆ ಮಿಲಾಕತ್ ಆಗುತ್ತದೆ ಎಂದು 'ಒತ್ತಡ ತಂತ್ರ' ಹೇರಿ, ಪರಮೇಶ್ವರ್ ಜತೆ ರಾಜ್ಯಾದ್ಯಂತ ಟೂರ್ ಮಾಡುತ್ತಿದ್ದಾರೆ.
ಇನ್ನು ಬಿಜೆಪಿ ಕಥೆ. ಚುನಾವಣೆಗೆ ಮೊದಲು ಪರಸ್ಪರ ಕತ್ತಿ ಮಸೆಯುತ್ತಿದ್ದ ಪ್ರಮುಖ ನಾಯಕರು ಈಗ ಅಭ್ಯರ್ಥಿಗಳು. ಕೇಂದ್ರದ ಮಾಜಿ ಸಚಿವ ಅನಂತಕುಮಾರ್, ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಸದಾನಂದಗೌಡ ಇದೀಗ 'ತ್ರಿಕೋನ ದ್ವೇಷಿ'ಗಳಾಗಿ ಪರಿವರ್ತಿತರಾದವರು. ಅನಂತಕುಮಾರ್ ಜತೆಗಿರುವ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹಾಗೂ ಯಡಿಯೂರಪ್ಪ ಆತ್ಮೀಯರೆಂಬ ಕಾರಣಕ್ಕೆ ಶೋಭಾ ಕರಂದ್ಲಾಜೆ ಕೂಡ ಉಳಿದವರಿಗೆ ಅಪಥ್ಯರು. ಮೇಲು ನೋಟಕ್ಕೆ ಎಲ್ಲರೂ ಪರಸ್ಪರ ನಗುಮೊಗದಿಂದಲೇ ಕಂಡರೂ ಆಂತರ್ಯದಲ್ಲಿ ಅಸಮಾಧಾನದ ಮೊಟ್ಟೆಗೆ ಕಾವು ಕೊಡುತ್ತಿರುವವರೇ. ಆದರೆ ಈ ಎಲ್ಲರೂ ಹುರಿಯಾಳುಗಳಾಗಿ ಕಣದಲ್ಲಿರುವುದರಿಂದ ಆ ಅಸೂಯೆಯನ್ನು ಇದ್ದಲ್ಲಿಗೇ ಬಿಟ್ಟು ತಮ್ಮ-ತಮ್ಮ ಗೆಲುವಿಗಷ್ಟೇ ತಲೆ ಕೆಡಿಸಿಕೊಂಡಿದ್ದಾರೆ.
ಈಗ ನರೇಂದ್ರ ಮೋದಿ ಅಲೆ ಕಾರಣಕ್ಕೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಗ ಕಣದಲ್ಲಿ ಇರುವ ಪ್ರಮುಖ ನಾಯಕರೆಲ್ಲರೂ ಕೇಂದ್ರದಲ್ಲಿ ಮಂತ್ರಿ ಆಗಬೇಕೆಂಬ ಅತೀವ ಅಭೀಷ್ಟೆ ಹೊಂದಿರುವವರು. ಒಂದೊಮ್ಮೆ ಕೇಂದ್ರದಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದರೂ ಕರ್ನಾಟಕಕ್ಕೆ ಎರಡು ಮಂತ್ರಿ ಸ್ಥಾನ ಸಿಗಬಹುದು ಹೀಗಾಗಿ ಈಗ ಕಣದಲ್ಲಿರುವ ಪ್ರಮುಖರಿಗೆ ಚುನಾವಣೆಯಲ್ಲೇ ತಮ್ಮ ಮಂತ್ರಿ ಸ್ಥಾನದ ಸ್ಪರ್ಧಿಗಳನ್ನು ನಿವಾರಿಸಿಕೊಳ್ಳಬೇಕು ಎಂಬ ತವಕ ಇದೆಯಾದರೂ ಅದಕ್ಕೆ ಸಂದರ್ಭ ಹಾಗೂ ಒತ್ತಡ ಅವಕಾಶ ಕೊಡುತ್ತಿಲ್ಲ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಒತ್ತಡಕ್ಕೆ ಸಿಕ್ಕಿದ್ದಾರೆ. ಅದಕ್ಕೆ ಕಾರಣ ಪ್ರಬಲ ಎದುರಾಳಿಗಳು. ತಾವು ಪಕ್ಷದಲ್ಲಿ ಇರುವ ಎದುರಾಳಿಗಳ ಕಾಲು ಎಳೆಯಲು ಹೋದರೆ ಕಣದಲ್ಲಿ ಇರುವ ವಿರೋಧಿ ಪಕ್ಷದ ಅಭ್ಯರ್ಥಿಗಳು ತಮ್ಮನ್ನು ಮುಳುಗಿಸಿ ಮುಂದಕ್ಕೆ ಹೋಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಅನಂತಕುಮಾರ್, ಯಡಿಯೂರಪ್ಪ ಹಾಗೂ ಸದಾನಂದಗೌಡರು ಪರಸ್ಪರ ಶಸ್ತ್ರತ್ಯಾಗ ಮಾಡಿ ಚುನಾವಣೆ ಗೆಲುವಿಗಷ್ಟೇ ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ಗೆದ್ದರೆ ಅಲ್ಲವೇ ಕೇಂದ್ರದಲ್ಲಿ ಮಂತ್ರಿ ಮತ್ತೊಂದು ಸ್ಥಾನದ ಮಾತು. ಹೀಗಾಗಿ ಉಮೇದುವಾರಿಕೆಯೇ ಅವರ ನಡುವಣ ದ್ವೇಷಕ್ಕೆ ಕಡಿವಾಣ ಹಾಕಿದ್ದು, ಬಿಜೆಪಿ ಕೂಡ ಅಷ್ಟರಮಟ್ಟಿಗೆ ರಾಜಕೀಯ ಒಳೇಟು ಸಾಧ್ಯತೆಗಳಿಂದ ಸಧ್ಯಕ್ಕೆ ಮುಕ್ತವಾಗಿದೆ.
ಇನ್ನು ಜೆಡಿಎಸ್ಗೆ ಅಭ್ಯರ್ಥಿಗಳ ಕೊರತೆಯೇ ದೊಡ್ಡೇಟು. ಮಂಗಳೂರು, ಕೊಪ್ಪಳದಲ್ಲಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರಲಿಲ್ಲ. ಕಾರವಾರದ ಅಭ್ಯರ್ಥಿ ಶಿವಾನಂದ ನಾಯ್ಕ ನಾಮಪತ್ರ ವಾಪಸ್ ತೆಗೆದುಕೊಂಡು ಓಡಿಹೊಗಿದ್ದಾರೆ. ಏಳೆಂಟು ಕಡೆ ನಾಮಕೇ ವಾಸ್ತೆಗಾಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಬಲ ಕೇಂದ್ರೀಕರಿಸಿರುವ ಜೆಡಿಎಸ್ಗೆ ಅನ್ಯಪಕ್ಷಗಳಂತೆ ಒಳರಾಜಕೀಯ ಲೇಪದ ಭಯವೂ ಇಲ್ಲ. ಹೀಗಾಗಿ ಇಲ್ಲಿ ಅಂತರ್ಯುದ್ಧದ ಪ್ರಶ್ನೆಯೇ ಇಲ್ಲ.
ಒಟ್ಟಾರೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ಅಥವಾ ಜೆಡಿಎಸ್ ಆಗಲಿ ಈ ಚುನಾವಣೆಯಲ್ಲಿ 'ಕುತಂತ್ರ ರಾಜಕೀಯ'ದ ವ್ಯಾಪ್ತಿಯನ್ನು ದಾಟಿವೆ. ಅದಕ್ಕೆ ವೈಯುಕ್ತಿಕ ಒತ್ತಡ ಹಾಗೂ ಗೆಲುವಿನ ಗುರಿ ಕಾರಣ. ಆದರೆ ಇದೇ ಮಾತನ್ನು ಟಿಕೆಟ್ ವಂಚಿತರಾದವರ ಬಗ್ಗೆ ಹೇಳುವಂತಿಲ್ಲ. ಅವರೆಲ್ಲರೂ ಬಹಿರಂಗ ಹಾಗೂ ಆಂತರ್ಯ ಎರಡೂ ರೀತಿಯಲ್ಲಿ ಬಂಡಾಯ ಒಳೇಟು ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಪಿಡುಗು ಪ್ರಮುಖವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಕಾಡುತ್ತಿದೆ. ಇದರ ನಿವಾರಣೆ ಆಯಾ ಪಕ್ಷದ ಮುಖಂಡರ ತಾಕತ್ತಿನ ಮೇಲೆ ಅವಲಂಬಿತವಾಗಿದೆ.
ಲಗೋರಿ: ಕೆಲವೊಮ್ಮೆ ಕಳ್ಳನ ಮನೆಗೂ ಮತ್ತೊಬ್ಬ ಕಳ್ಳ ಕನ್ನಹಾಕಬಹುದು.
- ಪಿ. ತ್ಯಾಗರಾಜ್
thyagarjun@gmail.com