ಕುಟುಂಬ ನೋಡಿ ಕುರ್ಚಿ ಹಾಕುವ ಪಕ್ಷ ನಮ್ಮದಲ್ಲ

ಉತ್ತರಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಹೊತ್ತು, ತಮಗೆ ದೊರೆತ ಕೆಲವೇ ಸಮಯದಲ್ಲಿ ನೂರಾರು ರ್ಯಾಲಿಗಳನ್ನು ಯಶಸ್ವಿಯಾಗಿ ಆಯೋಜಿಸಿ ಈಗ ಮತ್ತೆ ಗುಜರಾತ್ ಸೇರಿದ್ದಾರೆ ಅಮಿತ್ ಷಾ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದರೆ ಅವರ ನಂತರ ಎರಡನೆಯ ಬಲಿಷ್ಠ ನಾಯಕರಾಗಿ ಅಮಿತ್ ಹೊರಹೊಮ್ಮಲಿದ್ದಾರೆ ಎನ್ನುವ ಮಾತಿದೆ. ಆದರೆ ಅದನ್ನೆಲ್ಲ ಅಲ್ಲಗಳೆಯುತ್ತಾ ಅವರು ಹಲವು ಪತ್ರಿಕೆಗಳಿಗೆ ನೀಡಿದ ಸಂದರ್ಶನಗಳ ಆಯ್ದ ಭಾಗ ಇಲ್ಲಿದೆ...
ಅಭಿವೃದ್ಧಿಯೇ ನಮ್ಮ ಚುನಾವಣಾ ಪ್ರಚಾರದ ಕೇಂದ್ರ ವಸ್ತುವಾಗಿದೆ. ಆದರೂ ಅಲ್ಲಲ್ಲಿ ಕೆಲವೊಂದು ಘಟನೆಗಳು ವೈಯಕ್ತಿಕ ದಾಳಿಗೆ ಸೀಮಿತವಾಗಿರುವುದು ಕಂಡುಬಂದಿದ್ದು ನಿಜ. ಮಾಧ್ಯಮಗಳು ಅವನ್ನೇ ಎತ್ತಿತೋರಿಸಿ, ಚುನಾವಣಾ ಪ್ರಚಾರ ಹಳಿ ತಪ್ಪಿದೆ ಎಂದು ಬಿಂಬಿಸುತ್ತಿವೆ. ನಾನು ಎಲ್ಲಾ ರಾಜಕೀಯ ನಾಯಕರ ಭಾಷಣಗಳನ್ನು ಗಮನಕೊಟ್ಟು ಕೇಳುತ್ತೇನೆ. ಅವರ ಭಾಷಣದಲ್ಲಿ ಬರೀ ವೈಯಕ್ತಿಕ ದಾಳಿಯೇ ತುಂಬಿರುತ್ತದೆ ಎಂದು ನನಗನಿಸಿಲ್ಲ.
ಈ ಚುನಾವಣೆ ಮೋದಿ ಗಡ ಉಳಿದವರು ಎನ್ನುವುದು ಸತ್ಯ. ಆದರೆ ಇಂಥ ಸನ್ನಿವೇಶ ಅವರು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದಲೇ ನಿರ್ಮಾಣವಾಗಿದೆ.
ಉತ್ತರಪ್ರದೇಶದ ಉಸ್ತುವಾರಿ ನೋಡಿಕೊಳ್ಳಲು ನನ್ನನ್ನು ನೇಮಿಸಿದ್ದು ಮೋದಿಯಲ್ಲ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು. ನಾನು ಮತ್ತು ಮೋದಿ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಪಕ್ಷದ ನಿರ್ಣಯವನ್ನು ಪಾಲಿಸುವವರಷ್ಟೆ. ಮೋದಿ ಪ್ರಧಾನಿಯಾದರೆ ನಾನು ಕೇಂದ್ರದಲ್ಲಿ ಎರಡನೆಯ ಬಲಿಷ್ಠ ನಾಯಕನಾಗಲಿದ್ದೇನೆ ಎನ್ನುವುದು ಸುಳ್ಳು. ನಿಜಕ್ಕೂ ಇಂಥ ಮಾತುಗಳಿಂದ ನನಗೆ ಮುಜುಗರವಾಗುತ್ತದೆ. ಬಿಜೆಪಿಯಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ. ಎರಡನೆಯ ಸ್ಥಾನ ಬಿಡಿ, ಅಂಥ ನಾಯಕರ ಪಟ್ಟಿಯ ಹತ್ತಿರವೂ ಸುಳಿಯಲಾರೆ.
ಸ್ಥಳೀಯ ಪಕ್ಷಗಳೊಂದಿಗೆ ಮುಂದೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಎದುರಾಗಬಹುದೆಂಬ ಉದ್ದೇಶದಿಂದ ಅವುಗಳ ಮೇಲೆ ಮೃದು ಧೋರಣೆ ತೋರಿ, ಬರೀ ಯುಪಿಎ ಸರ್ಕಾರದ ಮೇಲೆಯೇ ಬಿಜೆಪಿ ಹೆಚ್ಚು ದಾಳಿ ಮಾಡುತ್ತಿದೆ ಎನ್ನುವುದು ಸುಳ್ಳು. ಹಾಗಿದ್ದರೆ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷವನ್ನು ತೆಗಳುತ್ತಿಲ್ಲವೇ? ಪಶ್ಚಿಮ ಬಂಗಾಳದಲ್ಲಿ ಮಮತಾ ವೈಫಲ್ಯದ ವಿರುದ್ಧ ಹರಿಹಾಯುತ್ತಿಲ್ಲವೇ?
ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದಲ್ಲಿ ನಮ್ಮ ಸಾಂಸ್ಥಿಕ ಶಕ್ತಿ ದುರ್ಬಲವಾಗಿದೆ. ಆದರೆ ಈ ಬಾರಿ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದಿಂದ ಉತ್ತಮ ಫಲಿತಾಂಶ ಬರಲಿದೆ ಎನ್ನುವ ನಂಬಿಕೆಯಿದೆ. ನಾನು ಆ ಭಾಗಗಳಲ್ಲಿ ಕೆಲಸ ಮಾಡಿಲ್ಲವಾದ್ದರಿಂದ ಇಷ್ಟಿಷ್ಟು ಸ್ಥಾನ ಬರಬಹುದು ಎಂದು ಹೇಳಲಾರೆ. ಆದರೆ ಒಂದಂತೂ ನಿಜ, ಈ ಬಾರಿ ಕರ್ನಾಟಕದಿಂದ ಹಿಡಿದು ಉಳಿದ ದಕ್ಷಿಣ ರಾಜ್ಯಗಳಲ್ಲೂ ಕಾಂಗ್ರೆಸ್ 10ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಾರದು. ಇನ್ನು ಅಸ್ಸಾಂನಲ್ಲಿ ಕೇವಲ 14 ಲೋಕಸಭಾ ಸ್ಥಾನಗಳಿವೆ. ಆದರೆ ಅಲ್ಲಿಯೂ ಕಾಂಗ್ರೆಸ್ ವಿರೋಧಿ ಅಲೆ ಇದೆ.
ಬಿಜೆಪಿಯ ಪ್ರಣಾಳಿಕೆ ತುಸು ಮುಂಚಿತವಾಗಿಯೇ ಪ್ರಕಟವಾಗಬೇಕಿತ್ತು ಎಂದು ನನಗೂ ಅನ್ನಿಸುತ್ತದೆ. ಆದರೆ ನಮ್ಮದು ಕುಟುಂಬ ಕೇಂದ್ರಿತ ರಾಜಕಾರಣವಲ್ಲ. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಣಾಳಿಕೆ ತಯಾರಿಸಿದ್ದರಿಂದ ತಡವಾಯಿತು. ಇನ್ನು ರಾಮಮಂದಿರ ವಿಚಾರವನ್ನು ಪ್ರಣಾಳಿಕೆಯ ಕೊನೆಯಲ್ಲಿ ಸೇರಿಸಲಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಅದರಲ್ಲಿ ತಪ್ಪೇನು? ಅದರಲ್ಲಿನ ಎಲ್ಲಾ ಅಂಶಗಳೂ ಅಷ್ಟೇ ಪ್ರಮುಖವೆಂದು ನಾವು ಭಾವಿಸುತ್ತೇವೆ. ಒಂದು ವೇಳೆ ಆ ವಿಚಾರವನ್ನು ಮೊದಲ ಪುಟದಲ್ಲಿ ಪ್ರಕಟಿಸಿದ್ದರೆ, ಅದನ್ನೇ ದೊಡ್ಡ ವಿವಾದ ಮಾಡಿ ಗದ್ದಲವೆಬ್ಬಿಸಲಾಗುತ್ತಿತ್ತಲ್ಲವೇ?
ಆರ್ಎಸ್ಎಸ್ ಮತ್ತು ಎಬಿವಿಪಿ ಕಾರ್ಯಕರ್ತನಾಗಿ ದುಡಿದ ನಾನು ಈ ಬೇರುಗಳಿಂದ ಸ್ಫೂರ್ತಿ ಪಡೆಯುತ್ತೇನೆ. ನನ್ನ ಕಾರ್ಯವಿಧಾನ ಮತ್ತು ಇಡೀ ಜೀವನವನ್ನು ಈ ಸಂಸ್ಥೆಗಳು ಬದಲಿಸಿವೆ. ನಾನು ನನ್ನ ಜೀವನದಲ್ಲಿ ಯಾರನ್ನೂ ಮೆಚ್ಚಿಸಲು ದುಡಿದವನಲ್ಲ. ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ. ಉತ್ತರ ಪ್ರದೇಶಕ್ಕೆ ಮೊದಲ ಬಾರಿ ಬಂದಿದ್ದರೂ ಯಾವುದೇ ತೊಂದರೆ ಆಗಲಿಲ್ಲ. ನಿಜ ಹೇಳಬೇಕೆಂದರೆ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಸ್ವಾಗತ ಯುಪಿಯಲ್ಲಿ ದೊರಕಿದೆ. ಅಲ್ಲಿ ನಡೆದ ಮೋದಿಯವರ ರ್ಯಾಲಿಗಳೇ ಸಾಕು ಜನರ ಒಲವು ಯಾರತ್ತ ಇದೆ ಎನ್ನುವುದನ್ನು ತಿಳಿಯಲು.
ಉತ್ತರಪ್ರದೇಶದಕ್ಕೆ ಕಾಲಿಟ್ಟತಕ್ಷಣ ನಾವು ಮಾಡಿದ ಮೊದಲ ಕೆಲಸವೆಂದರೆ ಬೂತ್ ಮಟ್ಟದ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು. ಬೂತ್ ಮಟ್ಟದಲ್ಲಿನ ನಮ್ಮ ಕೆಲಸ, ಮೋದಿ ಅಲೆಯನ್ನು ಮತಗಳಾಗಿ ಪರಿವರ್ತಿಸಲು ಸಹಾಯಕಾರಿಯಾಗುತ್ತದೆಂಬ ನಂಬಿಕೆಯಿತ್ತು. ಈ ಕಾರಣಕ್ಕಾಗಿ 76 ಪ್ರತಿಶತ ಬೂತ್ಗಳಲ್ಲಿ ನಿರ್ವಹಣಾ ತಂಡಗಳನ್ನು ನೇಮಿಸಿದೆವು. ರಾಜ್ಯದ ಎಲ್ಲ ಮಾಜಿ ಶಾಸಕರು ಮತ್ತು ಮಾಜಿ ಸಚಿವರಿಗೆ ಕೆಲಸ ಹಂಚಲಾಯಿತು(ಜವಾಬ್ದಾರಿ ವಹಿಸಲಾಯಿತು). ನಮ್ಮ ತಂಡಗಳು ಸುಮಾರು 13,000 ಕಾಲೇಜುಗಳಿಗೆ ಭೇಟಿ ನೀಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಉತ್ತರಪ್ರದೇಶದಲ್ಲಿ ಗ್ರಾಮ ಪ್ರಧಾನ್ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಆದರೆ ಈ ಬಾರಿ ನಾವು ಎಲ್ಲಾ ಸ್ತರಗಳಲ್ಲೂ ಸ್ಪರ್ಧಿಸಬೇಕೆಂದು ನಿರ್ಧರಿಸಿದೆವು. ಏಕೆಂದರೆ ಚುನಾವಣೆಯಲ್ಲಿ ಗ್ರಾಮ ಪ್ರಧಾನ್(ಮುಖ್ಯಸ್ಥ) ನಿರ್ಣಾಯಕ ಪಾತ್ರ ವಹಿಸುತ್ತಾನೆ.
ಮುಝಫ್ಫರ್ ನಗರದ ಬಗ್ಗೆ ಹತ್ತಾರು ಬಾರಿ ಯೋಚಿಸಿಯೇ ನಂತರ ಮಾತನಾಡಿದೆ. ಆದರೂ ಚುನಾವಣಾ ಆಯೋಗ ನನ್ನ ಭಾಷಣದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿದ್ದವು ಎಂದು ಹೇಳಿದೆ. ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು ಎಂದೂ ಅದು ಎಚ್ಚರಿಕೆ ಕೊಟ್ಟಿದೆ. ನನಗೆ ಅನ್ನಿಸಿದ ಮಟ್ಟಿಗೆ ನಾನು ಹೇಳಿದ್ದು ಸರಿಯಾಗೇ ಇದೆ. ಆದರೂ ಚುನಾವಣಾ ಆಯೋಗದ ಮಾತಿಗೆ ಬೆಲೆಕೊಡುತ್ತೇನೆ. ಇನ್ನು ಕೆಲವರು ನನ್ನ ಹೇಳಿಕೆಗೆ ತಪ್ಪು ಅರ್ಥ ಕಲ್ಪಿಸಿ ನನ್ನ ಇಮೇಜ್ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಿಧಾನವಾಗಿ ಸನ್ನಿವೇಶ ಬದಲಾಗುತ್ತಿದೆ. ಜನರು ಈಗ ನನ್ನನ್ನು ಅರ್ಥಮಾಡಿಕೊಳ್ಳತೊಡಗಿದ್ದಾರೆ.
ಮುಝಫ್ಫರ್ನಗರದಲ್ಲಿ ಗಲಭೆ ನಡೆಯುವುದಕ್ಕೆ ಕಾರಣ ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ. ಕಾನೂನು ಮುರಿದವರ ವಿರುದ್ಧ ಅಖಿಲೇಶ್ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲು ಮುಂದಾಗಲಿಲ್ಲ. ಒಂದು ವೇಳೆ ತ್ವರಿತ ಕ್ರಮ ಕೈಗೊಂಡಿದ್ದೇ ಆಗಿದ್ದರೆ ಗಲಭೆಯೇ ಸಂಭವಿಸುತ್ತಿರಲಿಲ್ಲ.
ಮೋದಿ ಬಿಜೆಪಿಗಿಂತ ದೊಡ್ಡ ಹೆಸರು ಎಂದೇನೂ ಭಾವಿಸಬೇಕಿಲ್ಲ. ಬಿಜೆಪಿ ಬೇರೆಯಲ್ಲ, ಮೋದಿ ಬೇರೆಯಲ್ಲ. ನಮ್ಮ ಪಕ್ಷ ಉತ್ತಮ ಪತಿಪಕ್ಷವಾಗಿ ಕಳೆದೊಂದು ದಶಕದಿಂದ ಕಾರ್ಯನಿರ್ವಹಿಸಿದೆ. ಇನ್ನೊಂದೆಡೆ ಮೋದಿಯವರು ಗುಜರಾತ್ನಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಇದರಿಂದಾಗಿ ಅವರ ಸುತ್ತಲೂ ಒಂದು ಪ್ರಭಾವಳಿ ನಿರ್ಮಾಣವಾಗಿದೆ.
ನಾವು ಈ ಬಾರಿ ಸ್ವಂತ ಬಲದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಆದರೂ ಬಿಜೆಪಿಯ ಕೋರ್ ಟೀಂಗೆ ಈ ಬಾರಿ ಮತದಾರನ ಮಮತೆ ಬಿಜೆಪಿ ಪರವಾಗಿ ಹರಿಯಲಿದೆ ಎಂದು ಮೊದಲಿನಿಂದಲೂ ಅನ್ನಿಸುತ್ತಿತ್ತು. ಆದರೆ ಆ ನಂಬಿಕೆ ಚುನಾವಣಾ ಪ್ರಚಾರದ ವೇಳೆ ಬಲಿಷ್ಠವಾಗುತ್ತಾ ಸಾಗಿತು. ದೇಶದ ಮೂಲೆ ಮೂಲೆಯಲ್ಲೂ ಇಂದು ಮೋದಿ ಮತ್ತು ಬಿಜೆಪಿಯದ್ದೇ ಚರ್ಚೆ. ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳೂ ಕೂಡ ನಮ್ಮ ಭಾವನೆಯನ್ನೇ ವ್ಯಕ್ತಪಡಿಸುತ್ತಿವೆ.
ಪಕ್ಷದಲ್ಲಿ ಅದಾಗಲೇ ಸಂಪುಟ ರೂಪುರೇಷೆಯ ಚರ್ಚೆಗಳು ನಡೆದಿವೆ ಎನ್ನುವ ಮಾತಲ್ಲಿ ಸತ್ಯವಿಲ್ಲ. ನಮ್ಮ ಮೊದಲ ಆದ್ಯತೆಯೇನಿದ್ದರೂ ಬಹುಮತ ಪಡೆಯುವುದು. ಇನ್ನು ಮೋದಿ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಮಾಧ್ಯಮಗಳು ಹೇಳುವಂತೆ ಯಾವ ತೊಂದರೆಗಳೂ ಎದುರಾಗಲಿಲ್ಲ. ಒಂದು ಪ್ರಜಾಪ್ರಭುತ್ವವಾದಿ ಪಕ್ಷದಲ್ಲಿ ಹಲವಾರು ದೃಷ್ಟಿಕೋನಗಳಿರುತ್ತವೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಬಿಜೆಪಿಯಲ್ಲಿ ಕಾಂಗ್ರೆಸ್ಸಿನಂತೆ ಕುಟುಂಬ ನೋಡಿ ಕುರ್ಚಿ ಹಾಕುವ ಸಂಪ್ರದಾಯವಿಲ್ಲ. ಇನ್ನು ನಮ್ಮ ಚುನಾವಣಾ ಪ್ರಚಾರವೂ ಜನತೆಯ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೆ ಸೀಮಿತವಾಗಿತ್ತೇ ಹೊರತು, ಕಾಂಗ್ರೆಸ್ಸಿನಂತೆ ಬರೀ ಒಂದು ಕುಟುಂಬದ ಬಗ್ಗೆಯಲ್ಲ.
ನಾವು ಈ ಬಾರಿ 272ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆಯಲು ಪ್ರಯತ್ನಿಸಿದ್ದೇವೆ. ನಮ್ಮ ಮಿತ್ರಪಕ್ಷಗಳೊಂದಿಗೆ ಸೇರಿ ಆ ಅಂಕಿಯನ್ನು ತಲುಪುತ್ತೇವೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ 272ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ನಾವು ಗಳಿಸಿದರೂ, ರಾಷ್ಟ್ರದ ಅಭಿವೃದ್ಧಿಗೆ ಎಲ್ಲಾ ಪಕ್ಷಗಳ ಬೆಂಬಲವೂ ಅಗತ್ಯವಾಗಿರುತ್ತದೆ.
ಬಿಜೆಪಿ ಅಧಿಕಾರಕ್ಕೆ ಬಂದರೆ, ಪ್ರಧಾನಿ ಹುದ್ದೆಗೆ ಅದರ ಹಿಂದಿನ ಗೌರವವನ್ನು, ಹಿರಿಮೆಯನ್ನು ತಂದು ಕೊಡಲಿದೆ. ಸಚಿವರು ತಮ್ಮ ಸಚಿವಾಲಯಗಳನ್ನು ಖಾಸಗಿ ಕೋಠರಿಗಳನ್ನಾಗಿಸಿಕೊಳ್ಳಲು ನಾವು ಬಿಡುವುದಿಲ್ಲ.
ಬಿಜೆಪಿ, ಸೋನಿಯಾ ಗಾಂಧಿಯವರ ಅಳಿಯನ ಮೇಲೆ ವೈಯಕ್ತಿಕ ದಾಳಿಯನ್ನಂತೂ ಮಾಡುತ್ತಿಲ್ಲ. ಅವರನ್ನು ಸುತ್ತುವರಿದಿರುವ ಭೂಹಗರಣದ ಆರೋಪದ ಬಗ್ಗೆ ಪ್ರಶ್ನಿಸುತ್ತಿದೆಯಷ್ಟೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಸೂಕ್ತಸಾಕ್ಷ್ಯಾಧಾರಗಳು ದೊರೆತರೆ, ಆಗ ಏನು ಮಾಡಬೇಕೆನ್ನುವುದನ್ನು ಯೋಚಿಸಲಾಗುತ್ತದೆ.
ನಾನು ಉತ್ತರಪ್ರದೇಶದಲ್ಲಿ ಮತಗಳ ಧ್ರುವೀಕರಣ ಮಾಡಲು ಪ್ರಯತ್ನಿಸಿದೆ ಎಂದು ಸಮಾಜವಾದಿ, ಬಹುಜನ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಆರೋಪ ಮಾಡಿವೆ. ಆದರೆ ನಿಜಕ್ಕೂ ಓಲೈಕೆ ರಾಜಕೀಯ ಮಾಡುತ್ತಿರುವುದು ಅವೇ ಪಕ್ಷಗಳು. ಅದರಲ್ಲೂ ಕಾಂಗ್ರೆಸ್ ಅಂತೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ಧಾರ್ಮಿಕ ಆಧಾರದ ಮೇಲೆ ಓಲೈಕೆಗೆ ಮುಂದಾಗುತ್ತದೆ. ಒಂದು ಅಪರಾಧವನ್ನೂ ಕೂಡ ವೋಟ್ ಬ್ಯಾಂಕ್ನ ಕನ್ನಡಕ ಧರಿಸಿ ನೋಡಬೇಕೇ? ಬಿಜೆಪಿಯವರಿಗೆ ಮತ ನೀಡಬೇಡಿ ಎಂದು ಕೆಲವು ಪಕ್ಷಗಳು ಅಲ್ಪಸಂಖ್ಯಾತರನ್ನು ಕೇಳಿಕೊಳ್ಳುತ್ತಿವೆ. ಅದು ಸಹಜವೇ ಬಿಡಿ. ಅವಕ್ಕೆ ತಮ್ಮ ಜೋಳಿಗೆಯಿಂದ ಮತಗಳು ಜಾರಿಹೋಗಬಾರದು ಎನ್ನುವ ಭಯವಿದ್ದೇ ಇರುತ್ತದೆ. ಇದು ಅವುಗಳಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


