ರಾಜಕೀಯ ಅಖಾಡದಲ್ಲಿ ಖಾಸಗಿ ಬದುಕೂ ಹೊರಳಾಡಬೇಕೆ?

ಚುನಾವಣೆ ಸಂದರ್ಭದಲ್ಲಿ ರಾಜಕೀಯದೊಳಗೆ ನುಸುಳದಿರುವ ವಿಷಯಗಳೇ ಇಲ್ಲ...
Updated on: 

ಚುನಾವಣೆ ಸಂದರ್ಭದಲ್ಲಿ ರಾಜಕೀಯದೊಳಗೆ ನುಸುಳದಿರುವ ವಿಷಯಗಳೇ ಇಲ್ಲ. ಒಬ್ಬ ರಾಜಕಾರಣಿ ಹಾಕುವ ಟೋಪಿಯಿಂದ (ಎರಡು ವಿಧದಲ್ಲಿ) ಹಿಡಿದು ಅವನ ಹೆಂಡತಿ, ಮಕ್ಕಳು, ಮೊಮ್ಮಕ್ಕಳವರೆಗೂ ಎಲ್ಲ ವಿಚಾರಗಳೂ ಪ್ರಚಾರದಲ್ಲಿ ಕುಣಿದಾಡುತ್ತವೆ. ಒಂದೊಮ್ಮೆ ಅವನ ಖಾಸಗಿ ಬದುಕು ಕೊಂಚ ಕಲರ್‌ಫುಲ್ ಆಗಿತ್ತೆಂದರೆ ಮುಗಿದೇಹೋಯಿತು. ಅವ ಎಲ್ಲಿ ಹೋದ, ಎಲ್ಲಿ ಬಂದ, ಏನು ಮಾಡಿದ ಎಂಬುದನ್ನು ಆ ಬಗ್ಗೆ ಮಾತಾಡುವವನ ಕತೆ ಒತ್ತಟ್ಟಿಗಿರಲಿ, ಅದನ್ನು ಬಿತ್ತರ ಮಾಡುವವರ ನಡುವೆ ಪೈಪೋಟಿಯೇ ಏರ್ಪಾಡಾಗಿ ಹೋಗುತ್ತದೆ. ಒಮ್ಮೊಮ್ಮೆ ಆ ಸುದ್ದಿಯ ಕೇಂದ್ರಬಿಂದುವಿನ ಉಸಿರು ನಿಲ್ಲುವತನಕ ಈ ಪೈಪೋಟಿ ನಿಲ್ಲುವುದಿಲ್ಲ. ಒಂದೊಮ್ಮೆ ಅವ ಬದುಕಿದ್ದ ಅಂತೆಂದರೆ ಅವನು ಬದುಕಿಯೂ ಸತ್ತಂತೆ ಎಂಬುದಾಗಿ ಮಾಡಿಟ್ಟಿರುತ್ತಾರೆ.
ಒಬ್ಬ ವ್ಯಕ್ತಿಯ ತೇಜೋವಧೆಗೆ, ಆತನನ್ನು ಅಧೀರನಾಗಿ ಮಾಡಲು ಬೇರಾವ ಸಂಗತಿಗಳು ಸಿಗಲಿಲ್ಲ ಎಂದರೆ ಅಥವಾ ಸಿಕ್ಕ ವಿಷಯಗಳು ಆತನನ್ನು ಸದೆಬಡಿಯಲು ಸಾಕಾಗಲಿಲ್ಲ ಎಂತಾದರೆ ಆತನ ಖಾಸಗಿ ಬದುಕಿನ ಬಗ್ಗೆ ಜಾಲಾಡಲು ಎದುರಾಳಿ ಶುರುಮಾಡುತ್ತಾನೆ. ಅವನನ್ನು ನೈತಿಕವಾಗಿ ಕುಗ್ಗಿಸಲು ಈ ವಿಚಾರವನ್ನು ಬಹುದೊಡ್ಡ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಾನೆ. ಇಂದು ಪ್ರಯೋಗಿಸಿದ ಅಸ್ತ್ರ ಇಂದಲ್ಲ ನಾಳೆ ತನ್ನ ಬುಡಕ್ಕೂ ಬರಬಹುದು ಎಂಬುದನ್ನು ಲವಲೇಷವೂ ಚಿಂತಿಸದೆ ಬಾಯಿಯನ್ನೇ ಉಡಾವಣಾ ಯಂತ್ರ ಮಾಡಿಕೊಂಡು, ನಿಂದನೆಗಳನ್ನು ಕ್ಷಿಪಣಿಯೋಪಾದಿಯಲ್ಲಿ ಹಾರಿಬಿಡುತ್ತಾನೆ. ಆರೋಪ-ಪ್ರತ್ಯಾರೋಪ ಎಲ್ಲವೂ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಚಾಲ್ತಿಯಲ್ಲಿರುತ್ತದೆ. ಚುನಾವಣೆ ಮುಗಿಯಿತೋ ಮಾತು ಮೌನದ ಮೊರೆ ಹೋಗುತ್ತದೆ. ಕೆಲವೊಮ್ಮೆ ಮೌನ ಕುದಿಮೌನವಾಗಿ, ಒಳಗೊಳಗೆ ರೋಷಾಗ್ನಿ ಜ್ವಲಿಸುತ್ತಿರುತ್ತದೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ಪ್ರಸಕ್ತ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನಾಮಪತ್ರದಲ್ಲಿ ಪತ್ನಿ ಜಶೋಧಾ ಬೆನ್ ಹೆಸರು ಸೇರಿಸಿದ್ದು, ಕಾಂಗ್ರೆಸ್ ಮುಖಂಡ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಟಿವಿ ನಿರೂಪಕಿ ಅಮೃತಾರಾಯ್ ಜತೆ ಸಂಬಂಧ ಇಟ್ಟುಕೊಂಡಿರುವುದು ಎಬ್ಬಿಸಿದ, ಎಬ್ಬಿಸಿರುವ ಸದ್ದುಗದ್ದಲ ಜಗದಗಲ ಹಬ್ಬಿದೆ. ನರೇಂದ್ರ ಮೋದಿ ಹಿಂದಿನ ಚುನಾವಣೆ ಸಂದರ್ಭ ನಾಮಪತ್ರದಲ್ಲಿ ಪತ್ನಿ ಹೆಸರು ಸೇರಿಸಿರಲಿಲ್ಲ, ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೆಸರು ಸೇರಿಸಿದ್ದಾರೆ, ಈ ಮೂಲಕ ಚುನಾವಣೆ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ, ಅವರಿಗೆ ಹೆಂಡತಿ ಇದ್ದರೂ ವಿಷಯ ಮುಚ್ಚಿಟ್ಟಿದ್ದೇಕೆ, ವಿಚ್ಛೇದನೆ ನೀಡದಿದ್ದರೂ ಪತ್ನಿಯೇಕೆ ಜತೆಯಲ್ಲಿಲ್ಲ, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೇಕೆ, ಹೆಂಡತಿಯನ್ನು ರಕ್ಷಣೆ ಮಾಡದ ಮೋದಿ ದೇಶವನ್ನು ರಕ್ಷಣೆ ಮಾಡಿಯಾರೆ ಎಂಬುದು ಕಾಂಗ್ರೆಸ್ ಮತ್ತಿತರ ಪಕ್ಷಗಳ ಅಪಪ್ರಚಾರ.
ಇನ್ನು ದಿಗ್ವಿಜಯ್ ಸಿಂಗ್ ವಿಚಾರ. ಗಂಡನಿಂದ ವಿಚ್ಛೇದನ ಪಡೆಯದ ಅಮೃತಾ ರಾಯ್ ಜತೆ ದಿಗ್ವಿಜಯ್ ಸಿಂಗ್ ಸಂಬಂಧ ಇಟ್ಟುಕೊಂಡಿದ್ದಾರೆ, ಇದಕ್ಕೆ ಅವರ ಮಕ್ಕಳ ವಿರೋಧವಿದೆ ಎಂಬುದು ಪ್ರತಿಪ್ರಚಾರ.
ಇಲ್ಲಿ ಒಂದು ವಿಷಯ ಅರ್ಥವಾಗುತ್ತಿಲ್ಲ. ನರೇಂದ್ರ ಮೋದಿ ಅವರದಾಯಿತು, ದಿಗ್ವಿಜಯ್ ಸಿಂಗ್ ಅವರದಾಯಿತು ಅಥವಾ ಬೇರೆ ಇನ್ಯಾರದ್ದೇ ಆಗಿರಲಿ, ಅವರುಗಳ ವೈಯಕ್ತಿಕ ವಿಚಾರ ಚುನಾವಣೆ ಪ್ರಚಾರಕ್ಕೆ ಅಸ್ತ್ರವಾಗುವಷ್ಟರ ಮಟ್ಟಿಗೆ ರಾಜಕೀಯ ಪಕ್ಷಗಳ ತರ್ಕ, ತತ್ವ ಸಿದ್ಧಾಂತ ಬರಿದಾಗಿಬಿಟ್ಟಿದೆಯೇ?
ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಹಾಗೂ ಆ ಪಕ್ಷಗಳ ಪ್ರತಿನಿಧಿಗಳ ಪಾತ್ರ, ಕರ್ತವ್ಯ, ಜವಾಬ್ದಾರಿ, ಅವರಾಳುವ ನಾಡಿನ ಸಾಮಾಜಿಕ ಆರ್ಥಿಕ ಪ್ರಗತಿಯ ಸುತ್ತ ಕೇಂದ್ರೀಕೃತವಾಗಿರುತ್ತದೆ.
ಹೀಗಾಗಿಯೇ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಅದರಲ್ಲಿ ಆಯಾ ಪಕ್ಷಗಳ ನೀತಿ, ತತ್ವ ಸಿದ್ಧಾಂತ, ದೂರದರ್ಶಿತ್ವ ಬಿಂಬಿತವಾಗಿರುತ್ತವೆ. ಎದುರಾಳಿ ಪಕ್ಷಗಳ ಲೋಪದೋಷಗಳನ್ನು ಎತ್ತಿತೋರಿಸುವುದರ ಜೊತೆಗೆ ತಮ್ಮ ಪಕ್ಷದ ದೂರದೃಷ್ಟಿ ಚಿಂತನೆಗಳನ್ನುಅಲ್ಲಿ ಪ್ರತಿಪಾದಿಸುತ್ತವೆ. ಚುನಾವಣಾ ಪ್ರಚಾರ ಸಾಗಬೇಕಿರುವುದೇ ಹೀಗೆ. ಅಲ್ಲಿ ಯಾವಾಗಲೂ ಸದ್‌ಚಿಂತನೆ, ಸದುದ್ದೇಶ, ಸದಭಿಪ್ರಾಯ ಹಾಗೂ ಆರೋಗ್ಯಕರ ಪೈಪೋಟಿ, ಟೀಕೆ ಟಿಪ್ಪಣಿಗಳು ಮೆರೆಯಬೇಕು. ಆದರೆ ಈಗ ಆಗುತ್ತಿರುವುದಾದರೂ ಏನು?
ಈಗ ನರೇಂದ್ರ ಮೋದಿಯವರ ವಿಚಾರವನ್ನೇ ತೆಗೆದುಕೊಳ್ಳೋಣ. ಮೋದಿಯವರು ಆರ್‌ಎಸ್‌ಎಸ್ ಸೇರುವ ಮೂಲಕ ಸಮಾಜಸೇವೆಗೆ ಧುಮುಕಿದಾಗ, ಪತ್ನಿಯಿಂದ ಪ್ರತ್ಯೇಕವಾಗಿ ಬಂದರು. ಇದಾಗಿ 4 ದಶಕಗಳೇ ಕಳೆದಿವೆ. ಕೌಟುಂಬಿಕ ಕಲಹದಿಂದ ಅಥವಾ ಬೇರಾವುದೇ ದುರುದ್ದೇಶಗಳಿಂದ ಅವರು ಬೇರ್ಪಟ್ಟಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ಅವರವರ ಪಾಡಿಗೆ ಅವರವರು ಜೀವನ ನಡೆಸುತ್ತಿದ್ದಾರೆ. ನರೇಂದ್ರ ಮೋದಿಯವರು ತಮಗೆ ಮೋಸ ಮಾಡಿದರು ಎಂದು ಜಶೋಧಾ ಬೆನ್ ಎಲ್ಲೂ ಹೇಳಿಲ್ಲ. ಅದೇ ರೀತಿ ಮೋದಿಯವರೂ ಪತ್ನಿಯ ಬಗ್ಗೆ ಏನೂ ಮಾತಾಡಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಜಶೋಧಾ ಬೆನ್ ಅವರಿಗೆ ಮೋಸವಾಗಿದೆ, ಅನ್ಯಾಯವಾಗಿದೆ ಎಂದು ರಾಜಕೀಯ ಪಕ್ಷಗಳಾಗಲೀ, ಇತರರಾಗಲೀ ಹೇಗೆ ಹೇಳುತ್ತಾರೆ? ಇವರಿಗೆಲ್ಲ ಈ ಅಧಿಕಾರ ಕೊಟ್ಟವರು ಯಾರು? ಮೋದಿಯವರ ಕುಟುಂಬದ ವಿಚಾರಗಳಿಂದ ಈ ದೇಶಕ್ಕೆ ಆಗಿರುವ ಅನ್ಯಾಯವಾದರೂ ಏನು? ಈ ಸಮಾಜಕ್ಕಾಗಿರುವ ತೊಂದರೆ ಏನು? ಪ್ರತಿಪಕ್ಷಗಳಿಗೆ ಬಂದಿರುವ ಸಂಕಟವಾದರೂ ಏನು?
ಮೋದಿಯವರು ಬಿಜೆಪಿಯ ರಾಷ್ಟ್ರೀಯ ಮುಖಂಡರು. ಪ್ರಧಾನಿ ಅಭ್ಯರ್ಥಿ. ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯೂ ಆಗಿದ್ದವರು. ಅವರ ಆಳ್ವಿಕೆಯಲ್ಲಿ ಲೋಪದೋಷಗಳು, ಅನಾಹುತಗಳ ಬಗ್ಗೆ ಯಾರಾದರೂ ಮಾತಾಡಬಹುದು. ಗೋಧ್ರೋತ್ತರ ಗಲಭೆ, ಗುಜರಾತ್ ಪ್ರಗತಿ, ಭೂ ಹಗರಣ ಮತ್ತಿತರ ವಿಚಾರಗಳ ಬಗ್ಗೆ ಮಾತಾಡಬಹುದು. ಯಾರೂ ಬೇಡವೆನ್ನುವುದಿಲ್ಲ. ಒಬ್ಬರು ಆರೋಪ ಮಾಡುತ್ತಾರೆ, ಮತ್ತೊಬ್ಬರು ಸಮರ್ಥನೆ ಮಾಡುತ್ತಾರೆ. ಅಂತಿಮವಾಗಿ ಈ ಬಗ್ಗೆ ತೀರ್ಮಾನ ಮಾಡುವವರು ಜನ. ಮೋದಿಯವರು ಯಾರು ಏನು ಎಂಬುದು ಮತದಾನದಲ್ಲಿ ನಿರ್ಣಯವಾಗುತ್ತದೆ. ಹೀಗಿರುವಾಗ ಅವರ ಸಂಸಾರದ ವಿಷಯ ಇಟ್ಟುಕೊಂಡು ಹಗ್ಗ ಜಗ್ಗಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಇನ್ನು ದಿಗ್ವಿಜಯ್ ಸಿಂಗ್ ವಿಚಾರಕ್ಕೆ ಬರೋಣ. ದಿಗ್ವಿಜಯ್ ಸಿಂಗ್ ವಿಧುರ. ಅಮೃತಾರಾಯ್, ಅವರು ಪತಿಯಿಂದ ಬೇರ್ಪಟ್ಟಿದ್ದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಅದರ ಇತ್ಯರ್ಥ ಆಗಬೇಕಿದೆ ಅಷ್ಟೆ. ಒಂದೊಮ್ಮೆ ದಿಗ್ವಿಜಯ್ ಅವರ ಕಾರಣದಿಂದ ತಮ್ಮ ದಾಂಪತ್ಯ ಮುರಿಯಿತು, ಅವರಿಂದಾಗಿಯೇ ನಮ್ಮ ಸಂಸಾರ ಒಡೆಯಿತು, ತಮ್ಮ ಕುಟುಂಬದಲ್ಲಿ ಅನಪೇಕ್ಷಿತ ಬೆಳವಣಿಗೆ ಉಂಟಾಯಿತು ಎಂದು ಅಮೃತಾ ರಾಯ್ ಅವರ ಪತಿ ದೂರಿದ್ದರೆ ಆಗ ಆ ಪ್ರಕರಣದಲ್ಲಿ ಮನೆಮುರುಕ ತನ ಕಾರಣವೆನ್ನಬಹುದಿತ್ತು. ಆದರೆ ಅಮೃತಾ ರಾಯ್ ಮತ್ತು ಅವರ ಪತಿ ಕೆಲ ವರ್ಷಗಳಿಂದ ಪ್ರತ್ಯೇಕವಾಗಿಯೇ ಇದ್ದು, ಪರಸ್ಪರ ಒಪ್ಪಿಯೇ ವಿಚ್ಛೇದನ ಅರ್ಜಿ ಹಾಕಿಕೊಂಡಿದ್ದಾರೆ. ಅಲ್ಲದೆ ಇದೆಲ್ಲವನ್ನೂ ದಿಗ್ವಿಜಯ್ ಸಿಂಗ್ ಮತ್ತು ಅಮೃತಾ ರಾಯ್ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಈ ಪ್ರಕರಣದಲ್ಲಿ ಅದ್ಯಾವ ದೇಶದ್ರೋಹ, ಸಮಾಜದ್ರೋಹದ ಸಂಗತಿ ಅಡಗಿದೆ ಎಂಬುದನ್ನು ಅಪಪ್ರಚಾರಕರು ಪ್ರಚುರಪಡಿಸಬೇಕು.
ಇಲ್ಲಿ ದಿಗ್ವಿಜಯ್ ಸಿಂಗ್ ಅವರಿಂದ ಒಂದು ಪ್ರಮಾದವಾಗಿರುವುದು ನಿಜ. ಅದೇನೆಂದರೆ ಮೋದಿ ಮತ್ತು ಅವರ ಪತ್ನಿ ವಿಚಾರವನ್ನು ಚುನಾವಣಾ ಪ್ರಚಾರಕ್ಕೆ ಮೊಟ್ಟಮೊದಲು ಎಳೆದುತಂದವರೇ ದಿಗ್ವಿಜಯ್ ಸಿಂಗ್. ಹೋದಲ್ಲಿ ಬಂದಲ್ಲೆಲ್ಲ ಇದೇ ವಿಚಾರವನ್ನೇ ಪ್ರಧಾನವಾಗಿ ಪ್ರಸಾರ ಮಾಡುತ್ತಿದ್ದರು. ತನ್ನ ಎಲೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ, ಮತ್ತೊಬ್ಬರ ಎಲೆಯ ನೊಣವನ್ನು ಎತ್ತಿ ತೋರಿಸುವ ರೀತಿ ವರ್ತಿಸಿದರು. ಈಗ ಅವರ ಮತ್ತು ಅಮೃತಾ ರಾಯ್ ವಿಚಾರ ಹೊರಬರುತ್ತಿದ್ದಂತೆ ಮೋದಿ ಸಂಸಾರದ ವಿಚಾರದಲ್ಲಿ ತೂರಿಸಿದ್ದ ತಮ್ಮ ಮೂಗನ್ನು ಅವರೇ ಕತ್ತರಿಸಿಕೊಂಡಿದ್ದಾರೆ. ಮೋದಿಯವರ ಬಗ್ಗೆ ಮಾತನಾಡಲು ಈಗ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ.
ನಿಜ. ದೇಶವಾಸಿಗಳು ಶಾಂತಿ, ನೆಮ್ಮದಿ ಹಾಗೂ ನೈತಿಕ ಜೀವನ ನಡೆಸಬೇಕು. ಎಲ್ಲಾ ಕುಟುಂಬಗಳೂ ಕಲಹರಹಿತವಾಗಿರಬೇಕು, ಸಮೃದ್ಧಿಯಿಂದ ಕೂಡಿರಬೇಕು. ಇದು ಆದರ್ಶವೂ ಹೌದು, ಅನುಕರಣೀಯವೂ ಹೌದು. ಆದರೆ "Every rule has an exception" ಎಂಬಂತೆ ಕೆಲ ವಿಚಾರಗಳಿಗೆ ಎರಡು ಮುಖಗಳಿರುತ್ತವೆ. ಸಮಯ, ಸಂದರ್ಭ, ಒತ್ತಡ, ಅಭಿಪ್ರಾಯಭೇದ ಮುಂತಾದವುಗಳು, ನಿಗದಿತ ನೀತಿ ನಿಯಮಗಳನ್ನು ಪಲ್ಲಟಗೊಳಿಸುತ್ತವೆ. ಮತ್ತು ವಿವಿಧ ರೂಪಗಳಲ್ಲಿ ವಿಚಾರ ಭೇದಗಳು ಹೊರಹೊಮ್ಮುತ್ತವೆ. ಸಂಬಂಧಪಟ್ಟವರು ಈ ಗೋಜಲುಗಳನ್ನು ಹೇಗೋ ನಿಭಾಯಿಸಿಕೊಂಡು, ನಿರ್ವಹಿಸಿಕೊಂಡು ಹೋಗುತ್ತಿರುತ್ತಾರೆ. ಆದರೆ ಅವರ ಕೌಟುಂಬಿಕ ಹಾಗೂ ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು, ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?
ವಾಸ್ತವವಾಗಿ ಮೋದಿ ಹಾಗೂ ದಿಗ್ವಿಜಯ್ ಸಿಂಗ್ ಕೌಟುಂಬಿಕ ವಿಚಾರಗಳು ಚರ್ಚೆಗೆ ಅರ್ಹವಾದ ಸಂಗತಿಗಳೇ ಅಲ್ಲ. ಈ ವಿಚಾರಗಳ ಚರ್ಚೆಯಿಂದ ಸಮಾಜಕ್ಕೆ ಯಾವುದೇ ಲಾಭವಾಗಲಿ, ನಷ್ಟವಾಗಲಿ ಇಲ್ಲ. ಏಕೆಂದರೆ ಅವರ ವೈಯಕ್ತಿಕ ಬದುಕಿನ ವಿಚಾರಗಳು ಅಪರಾಧದ, ಅಪರಾಧ ಪ್ರಕರಣಗಳ ವ್ಯಾಪ್ತಿಯನ್ನು ದಾಟಿರುವುದು, ಅವರ ವಿರುದ್ಧ ಯಾವುದೇ ಮೊಕದ್ದಮೆಗಳು ದಾಖಲಾಗದಿರುವುದು, ಸಂಬಂಧಪಟ್ಟವರು ಯಾವುದೇ ಆರೋಪ ಪ್ರತ್ಯಾರೋಪ ಮಾಡದಿರುವುದು ಕೂಡ ಇಲ್ಲಿ ಗಮನಾರ್ಹ ಪ್ರಧಾನ ಅಂಶ.
ನರೇಂದ್ರ ಮೋದಿ ಹಾಗೂ ಜಶೋಧಾ ಬೆನ್ ಅವರ ವಿಚಾರವನ್ನು ದಿಗ್ವಿಜಯ್ ಸಿಂಗ್ ಸಹೋದರ, ಕಾಂಗ್ರೆಸ್ ನೇತಾರ ಲಕ್ಷ್ಮಣ್ ಸಿಂಗ್ ಬಳಿ ಮಾಧ್ಯಮದವರು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಏನಿತ್ತು ಗೊತ್ತೆ?
"ಅದು ಮೋದಿಯವರ ವೈಯಕ್ತಿಕ ವಿಚಾರ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು! ಅದೇ ರೀತಿ ದಿಗ್ವಿಜಯ್ ಸಿಂಗ್ ವಿಚಾರವನ್ನು ಅವರ ಪುತ್ರನ ಬಳಿ ಪ್ರಸ್ತಾಪಿಸಿದಾಗ ಬಂದದ್ದೂ ಇದೇ ರೀತಿಯ ಉತ್ತರ- "ಅದು ನನ್ನ ಅಪ್ಪನ ವೈಯಕ್ತಿಕ ವಿಚಾರ.  ಪ್ರತಿಯೊಬ್ಬರಿಗೂ ಅವರದೇ ಆದ ಖಾಸಗಿ ಬದುಕಿದೆ".
ಇರಲಿ, ಈ ಎರಡೂ ಕುಟುಂಬಗಳ ಆಂತರ್ಯದಲ್ಲಿ ಸಣ್ಣಪುಟ್ಟ ವೈಮನಸ್ಯಗಳು, ಒಳ ಒಪ್ಪಂದಗಳು, ವಾದ-ವಿವಾದಗಳು ಇದ್ದಿರಲೂಬಹುದು. ಎಲ್ಲವನ್ನೂ ಬಹಿರಂಗಗೊಳಿಸಲು ಕುಟುಂಬದ ಮರ್ಯಾದೆ ಅಥವಾ ವೈಯಕ್ತಿಕ ಗೌರವ ಅಡ್ಡಿಬಂದಿರಲೂಬಹುದು. ಆಯಾ ಕುಟುಂಬದ ಸದಸ್ಯರು "ಕಾಪಾಡಿಕೊಳ್ಳಬೇಕು" ಎಂದು ಆಶಿಸುವ "ರಾಜಕೀಯ ಪಕ್ಷಗಳು" ಟಿವಿಯಲ್ಲಿ ನಿಂತು ಹರಾಜು ಹಾಕುವುದು ಸರಿಯೇ?
ಹಾಗೆಂದು ಒಬ್ಬರು ಮಾಡುವ ಅನಾಚಾರವನ್ನು, ವ್ಯಭಿಚಾರವನ್ನು, ಅನೈತಿಕ ವ್ಯವಹಾರವನ್ನು ಪ್ರಶ್ನೆ ಮಾಡಬಾರದು ಎಂದೇನೂ ಇಲ್ಲ. ಆದರೆ ಈ ಸಂಗತಿಗಳ ಪರಿಮಿತಿಗೆ ಬಾರದ ವಿಚಾರಗಳನ್ನು ಅನಗತ್ಯವಾಗಿ ಎಳೆದು ತಂದು ಅತಿ ರಂಜಿತವಾಗಿ ಬಿಂಬಿಸುವುದು ಎಷ್ಟರಮಟ್ಟಿಗೆ ಸರಿ?
ಇಂಥ ಅತಿರಂಜಿತ ಪ್ರಚಾರದಿಂದಾಗಿಯೇ, ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ  ಮಾಡಿಕೊಂಡರು. ರಘುಪತಿ ಭಟ್ ಸಂಸಾರದ ವಿಚಾರವನ್ನು ಪೈಪೋಟಿಗೆ ಬಿದ್ದಂತೆ ಪ್ರಚಾರ ಮಾಡಿದವರು ಕೊಂಚ ಸಂಯಮ ಮೆರೆದಿದ್ದರೂ ಪದ್ಮಪ್ರಿಯಾ ಬದುಕುಳಿಯುತ್ತಿದ್ದರು. ಇಂಥ ಸಂಗತಿಗಳಿಂದಾಗಿ ಪದ್ಮಪ್ರಿಯ ಅವರಂತೆ ಜೀವ ಕಳೆದುಕೊಂಡ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.
ಇತ್ತೀಚೆಗೆ ಕೌಟುಂಬಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಹಣಿಯುವ, ಬೇರೆ ಯಾವುದೇ ಕಾರಣ ಸಿಗದಿದ್ದಾಗ, "ವೈಯಕ್ತಿಕ ವಿಚಾರಗಳನ್ನು" ದುರ್ಬಳಕೆ ಮಾಡಿಕೊಳ್ಳುವ ಪರಿಪಾಠ ಬೆಳೆದು ಬರುತ್ತಿದೆ.
ನಟಿ ರಮ್ಯಾಳ ತಂದೆ ಯಾರು? ರಾಹುಲ್ ಗಾಂಧಿ ಜೊತೆ ಕೇರಳದ ರೆಸಾರ್ಟ್‌ನಲ್ಲಿ ಇದ್ದಾಕೆ ಯಾರು? ಯಡಿಯೂರಪ್ಪ, ಕುಮಾರಸ್ವಾಮಿಯವರ ಮನೆಯಲ್ಲಿ ಏನಾಗಿದೆ? ಇಂತಹ ವಿಚಾರಗಳೇ ರಾಜಕೀಯ ಸಮರದ ಅಸ್ತ್ರಗಳಾಗುತ್ತಿವೆ. ವಾಸ್ತವವಾಗಿ ಇಂತಹ ಸಂಗತಿಗಳನ್ನು ಕಟ್ಟಿಕೊಂಡು ಮತದಾರನಿಗೆ ಏನಾಗಬೇಕಿದೆ? ಜನಸಾಮಾನ್ಯನ ಶ್ರೇಯೋಭಿವೃದ್ಧಿಯಲ್ಲಿ ಇವುಗಳ ಪಾತ್ರವಾದರೂ ಏನು?
"ನಾನು ಅವಿವಾಹಿತ, ಆದರೆ ಬ್ರಹ್ಮಚಾರಿಯಲ್ಲ" ಎಂದ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಕೆಟ್ಟ ಕಣ್ಣುಗಳಿಂದ ನೋಡಲು ಸಾಧ್ಯವೇ?
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ.ಆರ್ ಹಾಗೂ ಹಾಲಿ ಮುಖ್ಯಮಂತ್ರಿ "ಕುಮಾರಿ" ಜಯಲಲಿತಾ ಅವರ ಸಂಬಂಧದ ಬಗ್ಗೆ ತಮಿಳುನಾಡಿನ ಮತದಾರ ತಲೆಕೆಡಿಸಿಕೊಂಡನೆ? ಆಂಧ್ರ ಮುಖ್ಯಮಂತ್ರಿಯಾಗಿದ್ದ ಮೇರು ನಟ ದಿ. ಎನ್.ಟಿ. ಆರ್ ಅವರ ಪತ್ನಿ ಬಗ್ಗೆ ಅಥವಾ ವೇದಿಕೆಯಲ್ಲಿ ಹಾರ ಹಾಕಿದ ಲಕ್ಷ್ಮಿ ಪಾರ್ವತಿಯವರ ಬಗ್ಗೆ ಮತದಾರ ಯೋಚಿಸಿ ಮತ ನೀಡಿದನೆ?
ಹಾಗೆಂದು, ಈ ನಾಯಕರು ಮಾಡಿದ್ದೆಲ್ಲ ಸರಿ ಎಂದು ಅರ್ಥವಲ್ಲ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಅಷ್ಟು ಕೊಡಬೇಕು. ಯಾವುದೇ ವ್ಯಕ್ತಿಯೊಬ್ಬನಿಗೆ ಒಂದು 'ಖಠಛ್ಛಜ' ಇರುತ್ತದೆ. ಸಾರ್ವಜನಿಕ ವ್ಯಕ್ತಿಯೊಬ್ಬನಿಗೆ "ಖಾಸಗಿ" ಬದುಕೂ ಇರುತ್ತದೆ. ಆದರೆ ಅದನ್ನು ಬಂಡವಾಳ ಮಾಡಿ, ಲೇವಡಿ ಮಾಡಿ, ಕಡ್ಡಿಗುಡ್ಡವಾಗಿಸುವ ಅಥವಾ ಸಲ್ಲದ ಸಂಗತಿಯನ್ನು ಎಳೆದು ವಿಮರ್ಶಿಸಿ ವಿಕೃತಾನಂದ ಪಡೆಯುವ ಅಗತ್ಯ ಯಾರಿಗೆ ಎಂಬುದನ್ನು ಪರಾಮರ್ಶೆ ಮಾಡಿ ನೋಡಬೇಕಿದೆ.
ಲಗೋರಿ: ಮೂಗು ಉದ್ದವಿದೆಯೆಂಬ ಕಾರಣಕ್ಕೆ ಅದನ್ನು ಬೇರೆಯವರ ಬದುಕಿನಲ್ಲಿ ತೂರಿಸಬಾರದು.


- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com