ಅಸ್ತಿತ್ವದ ಹೋರಾಟದಲ್ಲಿ ಅಸಹನೆಯ ಆಗರವಾದ ಅಸ್ಸಾಂ

ಅಸ್ಸಾಂ ಮತ್ತೊಮ್ಮೆ ಹೊತ್ತುರಿಯುತ್ತಿದೆ. ಸ್ಥಳೀಯ ಬೋಡೋ ಜನಾಂಗ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರ ನಡುವಿನ ತಿಕ್ಕಾಟಗಳು ಆಗಾಗ ತೀವ್ರಸ್ವರೂಪ ಪಡೆದು ದೇಶವನ್ನು ಬೆಚ್ಚಿಬೀಳಿಸುತ್ತಲೇ ಇವೆ. 2012ರಲ್ಲೂ ಕೂಡ ಸ್ಥಳೀಯ ಬೋಡೋಗಳು ಮತ್ತು ಬಾಂಗ್ಲಾದೇಶಿ ಮುಸಲ್ಮಾನರ ನಡುವೆ ನಡೆದ ಘರ್ಷಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ, 5 ಲಕ್ಷಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದರು.
ಜನಾಂಗೀಯ ಸಂಘರ್ಷದ ದೀರ್ಘ ಇತಿಹಾಸವನ್ನು ಹೊಂದಿರುವ ಅಸ್ಸಾಂನಲ್ಲಿ, ಕಳೆದ ವಾರ ಬೋಡೋ ಬಂಡುಕೋರರು ಕೋಕ್ರಾಝಾರ್, ಬಾಲಾಪರಾ ಮತ್ತು ಬಕ್ಸಾ ಜಿಲ್ಲೆಗಳಲ್ಲಿ 32 ಮುಸಲ್ಮಾನರನ್ನು ಕೊಂದುಹಾಕಿದ್ದಾರೆ. ಸತ್ತವರಲ್ಲಿ ಮಕ್ಕಳೂ ಮಹಿಳೆಯರೂ ಇದ್ದಾರೆ. ಈ ನಿಟ್ಟಿನಲ್ಲಿ ಹಲವು ಪತ್ರಿಕೆಗಳು ಮಾಡಿರುವ ವಿಶ್ಲೇಷಣೆ ಇಲ್ಲಿದೆ...
***
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಈ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿ ಮಾಡಿದ ಭಾಷಣವೇ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ! ಯುಪಿಎ ಮತ್ತು ತರುಣ್ ಗೊಗೊಯ್ ಸರ್ಕಾರ ಕೂಡ ಪ್ರತಿಪಕ್ಷವನ್ನು ದೂರುತ್ತಾ, ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿವೆ. ಆದರೆ ನಿಜಕ್ಕೂ ಅಲ್ಲಿ ನಡೆಯುತ್ತಿರುವುದೇನು, ಅಸ್ಸಾಂ ಏಕೆ ಅಸಹನೆಯ ಕೂಪವಾಗಿ ಬದಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಬೇಕಾದರೆ ದಶಕಗಳ ಹಿಂದೆ ಓಡಬೇಕಾಗುತ್ತದೆ.
ಸ್ವತಂತ್ರ ಪೂರ್ವದಲ್ಲಿ ಆ ಭಾಗದಲ್ಲಿ ಹಿಂದು(ಸ್ಥಳೀಯ ಬೋಡೋಗಳು) ಮತ್ತು ಮುಸಲ್ಮಾನರು ಒಂದಾಗೇ ಬಾಳುತ್ತಿದ್ದರು. ಆದರೆ 1950ರ ನಂತರ ಯಾವಾಗ ಬಾಂಗ್ಲಾದೇಶಿ ನುಸುಳುಕೋರರ ಹರಿವು ಹೆಚ್ಚಾಗತೊಡಗಿತೋ ಆಗಲೇ ಅಸ್ಸಾಂನಲ್ಲಿ ಸಮಸ್ಯೆಯ ಹೂರಣ ಸಿದ್ಧವಾಗತೊಡಗಿತು. ಗತಿಯಿಲ್ಲದೇ ಭಾರತಕ್ಕೆ ಬಂದ ಬಾಂಗ್ಲಾದೇಶಿ ನುಸುಳುಕೋರರ ಸ್ಥಿತಿ ಕ್ರಮೇಣ ಬದಲಾದಂತೆಲ್ಲ ಸ್ಥಳೀಯ ಬೋಡೋಗಳು ಬಡವಾಗುತ್ತಾ ಸಾಗಿದರು. ಅಲ್ಲದೆ ಆ ಭಾಗದಲ್ಲಿನ ವ್ಯಾಪಾರ, ಕೃಷಿ, ಅರಣ್ಯ ಪ್ರದೇಶಕ್ಕೆ ಸೇರಿದ ಜಾಗಗಳೆಲ್ಲ ಮುಸಲ್ಮಾನರ ಹಿಡಿತಕ್ಕೇ ಬಂದುಬಿಟ್ಟವು. ಈ ಸಂಗತಿಗಳೆಲ್ಲ ಬೋಡೋಗಳ ಮನಶ್ಶಾಂತಿ ಕದಡಲು ಕಾರಣವಾದವಾದರೂ, ಅವರ ಅಸಹನೆಗೆ ಇನ್ನಷ್ಟು ತಪ್ಪು ಹೊಯ್ದದ್ದು ಸ್ಥಳೀಯ ಮುಸಲ್ಮಾನರು. ಅಸ್ಸಾಂನ ಮುಸಲ್ಮಾನರು ಬಾಂಗ್ಲಾದೇಶದಿಂದ ಬಂದವರಿಗೆ ನೆಲೆಯೊದಗಿಸತೊಡಗಿದ್ದು, ಕ್ರಮೇಣ ಮುಸಲ್ಮಾನರದ್ದೇ ಪ್ರತ್ಯೇಕ ಹಳ್ಳಿಗಳು ಸೃಷ್ಟಿಯಾಗತೊಡಗಿದ್ದು ಬೋಡೋಗಳ ಭಯವನ್ನು ಹೆಚ್ಚಿಸಿತು. ಹೊರಗಿನಿಂದ ಬಂದವರು ಸ್ಥಳೀಯರೊಂದಿಗೆ ಬೆರೆಯದೇ, ಅವರ ಹಕ್ಕನ್ನು ಕಸಿದಿಕೊಳ್ಳತೊಡಗಿದ್ದಂತೂ ನಿಜ. ಈ ಸಂಗತಿಗಳೆಲ್ಲದರಿಂದಾಗಿ ಬೋಡೋಗಳು ತಮ್ಮ ನೆಲದಲ್ಲೇ ಪರಕೀಯರಂತೆ ಬದುಕುವ ಸ್ಥಿತಿ ನಿರ್ಮಾಣವಾಯಿತು.
ಇನ್ನು 1990ರ ದಶಕದ ಮೊದಲಾರ್ಧದಲ್ಲಂತೂ ಲಕ್ಷಾಂತರ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿದ್ದರಿಂದ ಅವರಿಗೆ ಪ್ರತಿಯಾಗಿ ಬೋಡೋ ಬಂಡುಕೋರರೂ ಹುಟ್ಟಿಕೊಂಡು, ಅವರ ಸಂಖ್ಯೆಯೂ ಹೆಚ್ಚುತ್ತಾ ಸಾಗಿತು.ಅಸ್ತಿತ್ವಕ್ಕಾಗಿನ ಹೊಡೆದಾಟಗಳು ವೇಗ ಪಡೆಯತೊಡಗಿದವು. ಈ ತಿಕ್ಕಾಟವನ್ನು ಕೊನೆಗಾಣಿಸಲು ಶಾಂತಿ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿತ್ತಾದರೂ, 90ರ ದಶಕದ ದ್ವಿತೀಯಾರ್ಧದಲ್ಲಿ ಜನಾಂಗೀಯ ಸಂಘರ್ಷ ಹೆಚ್ಚುತ್ತಲೇ ಸಾಗಿ ಬೋಡೋಗಳಿಗಾಗಿಯೇ ಪ್ರತ್ಯೇಕ ಬೋಡೋಲ್ಯಾಂಡ್ ಬೇಕು ಎಂಬ ಕೂಗು ಎದ್ದಿತು. ಪ್ರತ್ಯೇಕ ಬೋಡೋಲ್ಯಾಂಡ್ನ ಬೇಡಿಕೆ ತೀವ್ರವಾದಾಗ 2003ರಲ್ಲಿ ಕೇಂದ್ರದ ಅಂದಿನ ಎನ್ಡಿಎ ಸರ್ಕಾರ ಬೊಡೋ ಲಿಬರೇಷನ್ ಟೈಗರ್ಸ್(ಬಿಎಲ್ಟಿ)ನ ಶರಣಾಗತ ಬಂಡುಕೋರರೊಂದಿಗೆ ಶಾಂತಿ ಸ್ಥಾಪನೆಗಾಗಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಆ ಒಪ್ಪಂದ ಬೋಡೋಲ್ಯಾಂಡ್ ಸ್ವಾಯತ್ತ ಪ್ರಾದೇಶಿಕ ಕೌನ್ಸಿಲ್ನ(ಕೋಕ್ರಾಝಾರ್, ಬಾಲಪಾರಾ, ಬಕ್ಸಾ, ಚಿರಾಂಗ್ ಪ್ರದೇಶಗಳನ್ನು ಒಳಗೊಂಡ) ಜನನಕ್ಕೆ ಕಾರಣವಾಯಿತು. ಹೀಗೆ ಶರಣಾಗತರಾದ ಬಿಎಲ್ಟಿಯ ಕಾರ್ಯಕರ್ತರೊಂದಿಗೆ ಹಗಾರಾಮ್ ಮೊಹಿಲಾರಿ ಎಂಬ ಬೋಡೋ ನಾಯಕ ಬೋಡೋ ಪೀಪಲ್ಸ್ ಫ್ರಂಟ್(ಬಿಪಿಎಫ್) ಎನ್ನುವ ರಾಜಕೀಯ ಚಹರೆಯನ್ನು ಹುಟ್ಟುಹಾಕಿದ.
2001ರಿಂದ ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ತರುಣ್ ಗೊಗೋಯ್ ಅವರ ಪಕ್ಷ, 2006ರಲ್ಲಿ ಬಿಪಿಎಫ್ನೊಂದಿಗೆ ಮೈತ್ರಿ ಮಾಡಿಕೊಂಡು, ಬಿಟಿಸಿಯಡಿ ಬರುವ ಪ್ರದೇಶಗಳ ನಿಯಂತ್ರಣವನ್ನು ಬೋಡೋ ಪೀಪಲ್ಸ್ ಫ್ರಂಟ್ಗೆ ಬಿಟ್ಟುಕೊಟ್ಟಿತು.
ಬಿಟಿಸಿಯ ಸ್ಥಾಪನೆಯಿಂದಾಗಿ ಕೋಕ್ರಾಝಾರ್, ಚಿರಾಂಗ್, ಬಕ್ಸಾ ಮತ್ತು ಉದಲ್ಗುರಿ ಪ್ರದೇಶಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳೂ ಹುಟ್ಟಿಕೊಂಡವು. ಪುನರ್ವಿಂಡನೆಯ ಪ್ರಕ್ರಿಯೆಯಲ್ಲಿ ಯಾವ ಹಳ್ಳಿಗಳನ್ನೂ ಸ್ಥಳಾಂತರಿಸಲಾಗಿರಲಿಲ್ಲ. ಈ ಪ್ರದೇಶಗಳಲ್ಲಿ ಬೋಡೋಗಳಷ್ಟೇ ಅಲ್ಲದೆ, ಮುಸಲ್ಮಾನರು, ಇತರೆ ಹಿಂದುಳಿದ ವರ್ಗಗಳ ಜನರೂ ಜಾಗ ಹಂಚಿಕೊಳ್ಳಬೇಕಾಯಿತು. ಬೋಡೋಯೇತರ ಹಿಂದುಗಳು ಮತ್ತು ಬಾಂಗ್ಲಾದೇಶಿ ಅಕ್ರಮ ವಲಸಿಗರು ಬೋಡೋಗಳ ನಿಯಂತ್ರಣಕ್ಕೆ ಸಿಲುಕಿಬಿಟ್ಟರು. ಇದನ್ನೇ ಬಂಡವಾಳವಾಗಿಸಿಕೊಂಡ ಎಐಎಡಿಯುಎಫ್ನ ಮೌಲಾನಾ ಬದ್ರುದ್ದೀನ ಅಕ್ರಮ ವಲಗಿಸರ ಬೆನ್ನಿಗೆ ನಿಂತು ಅವರನ್ನು ತನ್ನ ಪ್ರಬಲ ಓಟ್ ಬ್ಯಾಂಕ್ ಮಾಡಿಕೊಂಡಿತು. ಇತ್ತ ಮುಸಲ್ಮಾನರ ಮತಗಳು ದೂರವಾದ್ದರಿಂದ ಕಾಂಗ್ರೆಸ್ ಅಧಿಕಾರದ ಅನಿವಾರ್ಯಕ್ಕಾಗಿ ಬಿಪಿಎಫ್ ಅನ್ನು ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡಿತು.
ಈ ಮೂಲಕ ಶಾಂತಿ ಸ್ಥಾಪನೆಗಾಗಿ, ಬೋಡೋಗಳಿಗೆ ಹೆಚ್ಚಿನ ಅಧಿಕಾರ ನೀಡುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿದ್ದ ಬೋಡೋಲ್ಯಾಂಡ್ ಒಪ್ಪಂದ ಅಶಾಂತಿಗೆ ದಾರಿಯಾಯಿತು. ಕಳೆದ ಕೆಲವು ವರ್ಷಗಳಿಂದ ಬಿಪಿಎಫ್ ತನ್ನ ಹಿಡಿತವನ್ನು ಈ ಭಾಗಗಳಲ್ಲಿ ಬಿಗಿ ಮಾಡುತ್ತಲೇ ಇದೆ. ಆ ಭಾಗದಲ್ಲಿ ಬೋಡೋಗಳು ಅಲ್ಪಸಂಖ್ಯಾತರಾಗುತ್ತಾರೆ ಎನ್ನುವ ಭಯದಲ್ಲಿ ಅದು ಹಿಂಸೆಗೆ ಇಳಿಯುತ್ತಿದೆ ಎನ್ನಲಾಗುತ್ತದೆ. ಆದರೆ ಅದಷ್ಟೇ ಹಲವಾರು ಬಂಡುಕೋರ ಗುಂಪುಗಳೂ ಆ ಭಾಗದಲ್ಲಿ ಹುಟ್ಟಿಕೊಂಡಿವೆ. ಬಿಪಿಎಫ್ನ ಪರ ಮತ್ತು ಬಿಪಿಎಫ್ನ ವಿರೋಧ ಎಂಬ ಪ್ರತ್ಯೆಕತೆ ಖುದ್ದು ಬೋಡೋಗಳಲ್ಲೇ ಶುರುವಾಗಿದೆ. ಇದೇ ವೇಳೆಯಲ್ಲೇ ತರುಣ್ ಗೊಗೊಯ್ ಸರ್ಕಾರ ಕೈಜಾರಿದ ಮುಸಲ್ಮಾನರ ಮತಗಳನ್ನು ಮತ್ತೆ ಪಡೆಯಲು ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಹರಿದುಬರುತ್ತಿದ್ದರೂ ಕಣ್ಣುಮುಚ್ಚಿಕೊಂಡು ಕುಳಿತಿದೆ! ಕಳೆದ 30 ವರ್ಷಗಳಲ್ಲಿ ಕೇವಲ 1,700 ಅಕ್ರಮ ವಲಸಿಗರನ್ನು ವಾಪಸ್ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದರೆ ಅಲ್ಲಿನ ಸಮಸ್ಯೆ ಮತ್ತು ಅಧಿಕಾರ ದಾಹದ ವ್ಯಾಪ್ತಿ ಯಾವ ಮಟ್ಟಕ್ಕೆ ಮುಟ್ಟಿದೆ ಎನ್ನುವುದನ್ನು ಲೆಕ್ಕಹಾಕಬಹುದು.
ತರುಣ್ ಗೊಗೊಯ್ ಈಗ ಎನ್ಐಎ ಬಂದು ತಮ್ಮ ರಾಜ್ಯದಲ್ಲಿ ತನಿಖೆ ಮಾಡಬೇಕು ಎಂದು ಹೇಳುತ್ತಿದ್ದಾರಾದರೂ, ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. 1980ರಲ್ಲಿ ಸಾವಿರಗಳ ಸಂಖ್ಯೆಯಲ್ಲಿದ್ದ ಅಕ್ರಮ ವಲಸಿಗರು ಈಗ ಲಕ್ಷಾಂತರ ಸಂಖ್ಯೆಯಲ್ಲಿ ಅಸ್ಸಾಂನಲ್ಲಿ ಜಮೆಯಾಗಿ ಒಂದು ರಾಜಕೀಯ ಶಕ್ತಿಯಾಗಿ ಬದಲಾಗುತ್ತಿದ್ದಾರೆ. ಅಸಹನೆಯ ಆಗರವಾಗಿರುವ ಬೋಡೋಗಳು ಸರ್ಕಾರದ ನಿರ್ಲಕ್ಷ್ಯವನ್ನು ಕಂಡು ಶಸ್ತ್ರಾಸ್ತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ರಾಜಕೀಯದಾಟದಲ್ಲಿ,ಅಸ್ತಿತ್ವದ ಹೋರಾಟದಲ್ಲಿ ಸಾವಿಗೀಡಾಗುತ್ತಿರುವವರು ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅಸ್ಸಾಂನಲ್ಲಿ ಅಶಾಂತಿ ಅಷ್ಟು ಸುಲಭವಾಗಿ ದೂರವಾಗುವಂತೆ ಕಾಣಿಸುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


