ಬರುವ ಸರಕಾರಕ್ಕೆ ಕಾಡಲಿದೆ ಬರದ ಸವಾಲು

ಈ ವರ್ಷ ದೇಶಕ್ಕೆ ಎಲ್‌ನಿನೋ ತಂದೊಡ್ಡಲಿರುವ ಭೀಕರ ಬರವನ್ನು, ಅದರ..
ಬರುವ ಸರಕಾರಕ್ಕೆ ಕಾಡಲಿದೆ ಬರದ ಸವಾಲು
Updated on: 

ಲೋಕಸಭೆ ಚುನಾವಣೆಯ ಕಾವಿನಲ್ಲಿ ಎಷ್ಟೆಷ್ಟೋ ನೀರು ಆವಿಯಾಗಿ ಹೋಗಿದೆ. ದೇಶಾದ್ಯಂತ ನರೇಂದ್ರ ಮೋದಿ ಅಲೆ, ರಾಹುಲ್ ಪ್ರಚಾರದ ಅಬ್ಬರ, ತೃತೀಯ ರಂಗದ ಕನಸು ಹೀಗೆ ರಾಜಕೀಯ ಮೇಲಾಟ, ಲೆಕ್ಕಾಚಾರ ನಡೆಯುತ್ತಲೇ ಇದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ನಿರೀಕ್ಷೆಯೊಂದಿಗೇ ಷೇರುಪೇಟೆ ಸೂಚ್ಯಂಕ ಏರಿಕೆ, ರುಪಾಯಿ ಮೌಲ್ಯ ವರ್ಧನೆ ಆಗಿದೆಯಂತೆ. ಎಲ್ಲವೂ ನಿಜವಿರಬಹುದು. ಆದರೆ ನಿಜವಾಗಿ ದೇಶದಲ್ಲಿ ಏರುತ್ತಿರುವುದು ಇವೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಲಿರುವ ಎಲ್‌ನಿನೋ ಕಾವು, ಬರದ ಬಾವು. ಚುನಾವಣೆ ಬಳಿಕ ಯಾವುದೇ ಸರಕಾರ ಅಧಿಕಾರಕ್ಕೇರಲಿ, ಅದು ಮೊದಲು ಎದುರಿಸಬೇಕಿರುವುದು ಭಯೋತ್ಪಾದನೆ, ನೆರೆಯ ದಾಳಿ, ಆಂತರಿಕ ಸಂಘರ್ಷ ಅಥವಾ ಆರ್ಥಿಕ ಸಂಕಷ್ಟವನ್ನಲ್ಲವೇ ಅಲ್ಲ. ಬದಲಾಗಿ ಈ ವರ್ಷ ದೇಶಕ್ಕೆ ಎಲ್‌ನಿನೋ ತಂದೊಡ್ಡಲಿರುವ ಭೀಕರ ಬರವನ್ನು, ಅದರ ಪರಿಣಾಮವನ್ನು.
ನಿಜ, ಅತ್ಯಂತ ಹೀನಾಯ ಸ್ಥಿತಿ ತಲುಪಿರುವ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವುದು ಸುಲಭದ ಮಾತಲ್ಲ. ಮುಂದೆ ಕೇಂದ್ರದ ಚುಕ್ಕಾಣಿ ಹಿಡಿಯಲಿರುವ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದೆಲ್ಲಕ್ಕಿಂತ ಪ್ರಮುಖ ಮತ್ತು ಅವೆಲ್ಲ ಸವಾಲುಗಳಿಗೂ ಕಾರಣೀ'ಭೂತ ಸವಾಲು' ಎಂದರೆ ಎಲ್‌ನಿನೋ ಒಡ್ಡಿರುವುದು.
ಸರ್ಕಾರ ಯಾವುದಾದರೇನು? ಎಲ್‌ನಿನೋ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗುವುದನ್ನು ತಡೆಯಲು ಸಾಧ್ಯವೇ? ಇಲ್ಲ. ದೇಶದ ಕೃಷಿ ಕ್ಷೇತ್ರಕ್ಕೆ ಎಲ್ ನಿನೋ ದೊಡ್ಡ ಹೊಡೆತ ಉಂಟುಮಾಡುತ್ತದೆ. ಪರಿಣಾಮ ಗ್ರಾಹಕ ಹಣದುಬ್ಬರ ಏರಿಕೆಯಾಗುತ್ತದೆ. ಹಣದುಬ್ಬರ ಇಳಿಕೆ ಮಾಡಲೆಂದು ಆರ್‌ಬಿಐ ಪ್ರಯತ್ನಿಸುತ್ತದೆ. ಹೀಗಾಗಿ ಬಡ್ಡಿ ದರ ಏರಿಕೆಯಾಗುತ್ತದೆ. ಒಂದಕ್ಕೊಂದು ಸಂಬಂಧ ಹೊಂದಿರುವ ಈ ಸಮಸ್ಯೆಗಳನ್ನು ನಿಭಾಯಿಸುವುದಾದರೂ ಹೇಗೆ?
ಬರ ಅಂದರೆ ಇಲ್ಲದ್ದು. ಮಳೆಯೇ ಇಲ್ಲದ, ನೀರೇ ಇಲ್ಲದ ಸ್ಥಿತಿಯನ್ನು ನಾವು ಬರ ಎಂದು ಗುರುತಿಸುತ್ತೇವೆ. ಇಂಥ ಬರವನ್ನು ಮೂರು ರೀತಿಯಲ್ಲಿ ಗುರುತಿಸಲಾಗುತ್ತದೆ. ಮೊದಲನೆಯದು ಹವಾಮಾನ ಸಂಬಂಧಿ ಬರ, ಎರಡನೆಯದು ಜಲ ಬರ. ಕೊನೆಯದು ಕೃಷಿ ಬರ. ಇವು ಮೂರೂ ದೇಶಕ್ಕೆರಗಲಿದೆ ಈ ಬಾರಿ ಎನ್ನುತ್ತಾರೆ ಹವಾಮಾನ ತಜ್ಞರು.
ಹವಾಮಾನ ಸಂಬಂಧಿ ಬರ ಸ್ಥಿತಿ ನಿರ್ಮಾಣವಾಗಲು ಹತ್ತಾರು ಕಾರಣಗಳಿವೆ. ಮುಖ್ಯವಾಗಿ ಆ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿ ನೀರಿನ ಕೊರತೆ ತಲೆದೋರುತ್ತದೆ. ಇಡೀ ರಾಷ್ಟ್ರ ಬಹುತೇಕ ಒಂದು ರೀತಿಯ ಮಾನ್ಸೂನ್ ಧರ್ಮವನ್ನು ಹೊಂದಿರುತ್ತದೆ. ಹಾಗಿದ್ದೂ ಪ್ರದೇಶದಿಂದ ಪ್ರದೇಶಕ್ಕೆ ಅದರಲ್ಲೂ ಒಂದಷ್ಟು ವ್ಯತ್ಯಸ್ತವಾಗುವುದನ್ನು ಕಾಣುತ್ತೇವೆ. ಅದನ್ನು ಆಧರಿಸಿ ನೋಡಿದಾಗ ಕೆಲ ವರ್ಷಗಳಲ್ಲಿ ಸಾಮಾನ್ಯ ಮಳೆಯ ಪ್ರಮಾಣಕ್ಕಿಂತಲೂ ಕಡಿಮೆ ಲಭ್ಯತೆ ಕಂಡುಬರುತ್ತದೆ. ಹೀಗೆ ಹೆಚ್ಚೂಕಡಿಮೆಯಾಗುವುದನ್ನು ವಾಡಿಕೆಗಿಂತ ಕಡಿಮೆ, ವಾಡಿಕೆಗಿಂತ ಹೆಚ್ಚು, ವಾಡಿಕೆಗಿಂತ ತೀರಾ ಕಡಿಮೆ, ಕೊರತೆ-ಇತ್ಯಾದಿ ಹಂತಗಳಲ್ಲಿ ಗುರುತಿಸುತ್ತೇವೆ. ವಾಡಿಕೆ ಮಳೆಯಲ್ಲಿ ಕೊರತೆ ಕಂಡು ಬಂದರೆ ಆಗ ಬರಸ್ಥಿತಿಯನ್ನು ಘೋಷಿಸಲಾಗುತ್ತದೆ.
ಜಲ ಬರ ಎಂದರೆ ಮೇಲ್ಜಲದಲ್ಲಿನ ತೀವ್ರ ಕುಸಿತ. ಕೆರೆ, ಹಳ್ಳ-ಕೊಳ್ಳ ಎಲ್ಲವೂ ಒಣಗಿ ಹೋಗಿರುತ್ತದೆ. ಇದರಿಂದಾಗಿ ಭೂಮಿಯ ಮೇಲ್ಭಾಗದ ನೀರಿನ ಪಸೆ ಸಂಪೂರ್ಣ ಬತ್ತಿ ಹೋಗಿ, ಎಲ್ಲೆಡೆ ಗಾರುಗಾರು ಕಾಣಿಸುತ್ತದೆ. ನದಿ ಪಾತ್ರಗಳಲ್ಲಿ ಮರಳುರಾಶಿ, ಕಲ್ಲುಗಳು ಮಾತ್ರವೇ ಇಣುಕುತ್ತಿರುತ್ತವೆ. ಇನ್ನು ಕೃಷಿ ಬರ. ಮಣ್ಣಿನಲ್ಲಿರುವ ತೇವಾಂಶವೂ ಬತ್ತಿ ಹೋಗಿ ನೆಲ ಬಿರುಕು ಬಿಡಲಾರಂಭಿಸುತ್ತದೆ. ಇದರ ಪರಿಣಾಮ ಕೃಷಿ ಹಿನ್ನಡೆ ಅನುಭವಿಸುತ್ತದೆ. ಉತ್ಪಾದನೆ ಕುಸಿಯುತ್ತದೆ. ಆಹಾರದ ಕೊರತೆ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ 1987, 1979, 1972ರಲ್ಲಿ ಇಂಥ ಬರ ಕಾಣಿಸಿಕೊಂಡಿತ್ತು. 2009ರಲ್ಲಿ ಪುನಃ ದೇಶದಲ್ಲಿ ಬರದ ಘೋಷಣೆಯಾಗಿತ್ತು. ಶೇ.10ರಷ್ಟು ಪ್ರದೇಶದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿತ್ತು. ಆಗ ಶೇ.19ರಷ್ಟು ಪ್ರದೇಶದಲ್ಲಿ ಪರಿವರ್ತಿತ ಬರವನ್ನು ಗುರುತಿಸಲಾಗಿತ್ತು. ದೇಶದ ಶೇ.20ಕ್ಕೂ ಹೆಚ್ಚು ಪ್ರದೇಶದಲ್ಲಿ ಬರ ಕಾಣಿಸಿಕೊಂಡರೆ ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುತ್ತದೆ. ಮತ್ತೆ ಈ ಬಾರಿ(2014) ಅಂಥದ್ದೇ ಸ್ಥಿತಿಯನ್ನು ಘೋಷಿಸಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ಎಲ್‌ನಿನೋ ಪರಿಣಾಮದ ಫಲವಿದು ಎಂಬ ನಿರ್ಧಾರಕ್ಕೆ ತಜ್ಞರು ಬಂದಿದ್ದಾರೆ.
ಈ ನಡುವೆ, ಆಯಾತ ಹಾಗೂ ನಿರ್ಯಾತದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಮತ್ತೊಂದು ಸವಾಲಿನ ಸಂಗತಿ ಎನ್ನುತ್ತಾರೆ ತಜ್ಞರು. ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಚಿನ್ನ ಆಮದು ಸುಂಕವನ್ನು ಪರಿಷ್ಕರಿಸುವುದಾಗಿ ಬಿಜೆಪಿ ಹೇಳಿದೆ. ಆದರೆ, ಈ ಕ್ರಮದಿಂದ ಚಿನ್ನ ಖರೀದಿಸುವವರು ಸಂತುಷ್ಟರಾಗುತ್ತಾರೆಯೇ ವಿನಾ ಹೂಡಿಕೆದಾರರಲ್ಲ. ಏಕೆಂದರೆ ಆಯಾತ-ನಿರ್ಯಾತ ಅಂತರವು ಕಳೆದ ಆಗಸ್ಟ್‌ನಲ್ಲಿ ರುಪಾಯಿ ಮೌಲ್ಯವನ್ನು ದಾಖಲೆಯ ಮಟ್ಟಕ್ಕೆ ಕುಸಿಯುವಂತೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಅಂತರ ಕುಗ್ಗಿಸುವ ಬಯಕೆ ಈಡೇರಲು ಇನ್ನೂ ಹಲವು ವರ್ಷಗಳೇ ಬೇಕು.
ಗುಜರಾತ್‌ನಲ್ಲಿ ಹೂಡಿಕೆಯನ್ನು ಆಕರ್ಷಿಸಿದ್ದ ನರೇಂದ್ರ ಮೋದಿ ಬಗ್ಗೆ ಮಾರುಕಟ್ಟೆಯಲ್ಲಿ ಉತ್ತಮ ನಿರೀಕ್ಷೆಯಿದೆ. ಆದರೆ, ಹೊಸ ಯೋಜನೆಗಳಿಗೆ ಅನುಮತಿ ನೀಡಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಕೇಂದ್ರ ಸರ್ಕಾರದಲ್ಲಿದ್ದುಕೊಂಡು ಇದು ಮಾಡಲು ಸಾಧ್ಯವಿಲ್ಲ. ಅಲ್ಲದೇ, ರಾಜ್ಯದ ಸೌಲಭ್ಯಗಳನ್ನು ಬಳಸಿಕೊಳ್ಳಲು ಕೇಂದ್ರಕ್ಕೆ ಹೆಚ್ಚಿನ ಆಯ್ಕೆಗಳು ಇರುವುದಿಲ್ಲ. ರಾಜ್ಯ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕಾರಣ ಕಲ್ಲಿದ್ದಲು ಪೂರೈಕೆಯ ಸಮಸ್ಯೆಯೂ ತಲೆದೋರುತ್ತದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮರುಪಾವತಿಯಾಗದೇ ಉಳಿದಿರುವ ಸಾಲ ಸುಮಾರು 6 ಲಕ್ಷ ಕೋಟಿಯಷ್ಟಿದೆ. ಮಧ್ಯಂತರ ಬಜೆಟ್‌ನಲ್ಲಿ ಇಂತಹ ಬ್ಯಾಂಕುಗಳ ನೆರವಿಗೆಂದು 11,200 ಕೋಟಿ ಮೀಸಲಿಡಲಾಗಿದೆ. ಆದರೆ ಈ ಮೊತ್ತ ಬ್ಯಾಂಕುಗಳಿಗೆ ಸಾಲುವುದಿಲ್ಲ. ಹಾಗಾಗಿ ಹೊಸ ಸರ್ಕಾರಕ್ಕೆ ಇದೊಂದು ಸಮಸ್ಯೆಯಾಗಿ ಪರಿಣಮಿಸಲಿದೆ. ಇಂತಹ ಸಂದರ್ಭದಲ್ಲಿ ಮೋದಿ ಸರ್ಕಾರವು, ಸರ್ಕಾರಿ ಷೇರುಗಳನ್ನು ಮಾರಾಟ ಮಾಡಿ, ಖಾಸಗೀಕರಣದತ್ತ ವಾಲಲೇಬೇಕಾಗುತ್ತದೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಎಲ್‌ನಿನೋ ದಕ್ಷಿಣ ಕಂಪನದ ಕಾರಣದಿಂದ ದೇಶಾದ್ಯಂತ ಮಳೆಯಲ್ಲಿ ಏರು ಪೇರಾಗಿದ್ದು, 70ಕ್ಕೂ ಹೆಚ್ಚು ಪ್ರಮುಖ ಜಲಾನಯನ ಪ್ರದೇಶ ಒಣಗಿ ನಿಂತಿದೆ. ಇದರಿಂದ ಅಂತರ್ಜಲದ
ಮಟ್ಟದಲ್ಲೂ ತೀವ್ರ ಕುಸಿತ ಕಂಡು ಬಂದಿದೆ.
ಅಷ್ಟಕ್ಕೂ ಇದ್ಯಾವುದು ಎಲ್‌ನಿನೊ? ಇಲ್ಲಿನ ನೀರಿಗೂ ಎಲ್ಲಿಯದೋ ಎಲ್‌ನಿನೋಗೂ ಏನು ಸಂಬಂಧ ? ಪ್ರಶ್ನೆ ಸಹಜವಾದದ್ದೇ. ಎಲ್‌ನಿನೋ- ದಕ್ಷಿಣ ಕಂಪನ (ಇಎನ್‌ಎಸ್‌ಒ) ಎಂದರೆ ಪೆಸಿಫಿಕ್ ಸಮುದ್ರ ಹಾಗೂ ವಾತಾವರಣದಲ್ಲಿ ಕಾಲಮಾನಕ್ಕನುಸರಿಸಿ ಉಂಟಾಗುವ ಪಲ್ಲಟ. ಇದರಲ್ಲೇ ಎರಡು ಬಗೆ- ಎಲ್‌ನಿನೋ ಹಾಗೂ ಲಾ ನಿನಾ. ಮೊದಲನೆಯದರಲ್ಲಿ ವಾತಾವರಣ ಬೆಚ್ಚಗಾದರೆ, ಎರಡನೆಯದರಲ್ಲಿ ವಾತಾವರಣ ತಣ್ಣಗಾಗುತ್ತದೆ. ಇದು ಮೂರರಿಂದ ಎಂಟು ವರ್ಷಕ್ಕೊಮ್ಮೆ ನಡೆಯುವ ಸಹಜ ವಿದ್ಯಮಾನ. ಸ್ಪಾನಿಶ್ ಭಾಷೆಯಲ್ಲಿ ಎಲ್‌ನಿನೋ ಅಂದರೆ 'ಗಂಡು ಮಗು', ಲಾ ನಿನಾ ಅಂದರೆ 'ಹೆಣ್ಣು ಮಗು'.
ಪ್ರತಿ ಎಲ್‌ನಿನೋಗೂ ಅದರದೇ ಆದ ಪರಿಣಾಮಗಳಿರುತ್ತವೆ. ಈ ಅವಧಿಯಲ್ಲಿ ಜಗತ್ತಿನ ಹಲವಾರು ಕಡೆ ನೆರೆ, ಪ್ರವಾಹ, ಬರ ಮತ್ತಿತರ ಪರಿಸರ ವೈಪರೀತ್ಯಗಳು ಸಂಭವಿಸುತ್ತವೆ. ಪೆಸಿಫಿಕ್ ಸಾಗರಕ್ಕೆ ಸಮೀಪವಾಗಿರುವ ದೇಶಗಳು ಇದರ ಭಾರಿ ಪರಿಣಾಮಕ್ಕೆ ತುತ್ತಾಗುತ್ತವೆ. ಅದರಲ್ಲೂ ಕೃಷಿ, ಮೀನುಗಾರಿಕೆಗಳ ಮೇಲೆ ಅವಲಂಬಿಸಿದ ಅಭಿವೃದ್ಧಿಶೀಲ ದೇಶಗಳ ಮೇಲಾಗುವ ಪರಿಣಾಮ ಗಮನಾರ್ಹ.
ಎಲ್‌ನಿನೋವನ್ನು ಅಳೆಯುವುದು ಹೇಗೆ? ಅದಕ್ಕೂ ಕ್ರಮವಿದೆ. ಆಸ್ಟ್ರೇಲಿಯಾದ ತಾಹಿತಿ ಮತ್ತು ಡಾವರ್‌ನ್ಪ್ರ್‌ದೇಶಗಳ ವಾತಾವರಣದ ಒತ್ತಡದ ವ್ಯತ್ಯಾಸ, ಅಥವಾ ಪೆಸಿಫಿಕ್ ಧ್ರುವ ಕೇಂದ್ರ ಮತ್ತು ಪೂರ್ವ ಪೆಸಿಫಿಕ್‌ನ ಮೇಲ್ಮೈ ಜಲಗಳ ಉಷ್ಣತೆಯ ವ್ಯತ್ಯಾಸವೇ ಇದರ ಅಳತೆ. ಮೂರರಿಂದ ಎಂಟು ವರ್ಷಕ್ಕೊಮ್ಮೆ ಯಾವಾಗ ಬೇಕಾದರೂ ಸಂಭವಿಸುವ ಈ ಎಲ್‌ನಿನೋದ ಮೂಲ ಕಾರಣಗಳನ್ನು ಕಂಡು ಹಿಡಿಯಲು ಪ್ರಯತ್ನ ನಡೆದೇ ಇದೆ.
ಹಿಂದೂ ಸಾಗರ, ಇಂಡೊನೇಷ್ಯಾ, ಆಸ್ಟ್ರೇಲಿಯಾದ ಮೇಲ್ಮೈ ಒತ್ತಡದಲ್ಲಿ ಹೆಚ್ಚಳ, ಕೇಂದ್ರ ಮತ್ತು ಪೂರ್ವ ಪೆಸಿಫಿಕ್ ಸಮುದ್ರದ ವಾಯುಭಾರದಲ್ಲಿ ಕುಸಿತ, ದಕ್ಷಿಣ ಪೆಸಿಫಿಕ್ ವಾಣಿಜ್ಯ ಮಾರುತಗಳು ದುರ್ಭಲಗೊಳ್ಳುವುದು ಅಥವಾ ಪೂರ್ವದತ್ತ ಚಲಿಸುವುದು, ಪೆರುವಿನ ಬಳಿ ಬೆಚ್ಚಗಿನ ಮಾರುತ, ಉತ್ತರ ಪೆರುವಿನ ಮರುಭೂಮಿಯಲ್ಲಿ ಮಳೆ, ಹಿಂದೂ ಸಾಗರ ಮತ್ತು ಪಶ್ಚಿಮ ಪೆಸಿಫಿಕ್‌ನಿಂದ ಪೂರ್ವ ಪೆಸಿಫಿಕ್‌ನತ್ತ ಬಿಸಿನೀರಿನ ಪ್ರವಾಹದ ಹರಿವು- ಇವೆಲ್ಲ ಎಲ್‌ನಿನೋದ ಪ್ರಾಥಮಿಕ ಲಕ್ಷಣಗಳು.
ಇಂಥ ಎಲ್ಲ ಪರಿಸ್ಥಿತಿಯಲ್ಲಿ ಉದ್ಭವಿಸುವ ಆಹಾರದ ಕೊರತೆಯಲ್ಲಿ ತಿನ್ನಲೂ ಗತಿಯಿಲ್ಲದೆ ಜೀವಗಳು ಹಸಿವಿಗೆ ಆಹುತಿಯಾಗುತ್ತಿದ್ದರೆ, ಮನುಷ್ಯರು ಹಸಿದ ಹೊಟ್ಟೆಯಲ್ಲೇ ಪ್ರಾಣ ಬಿಡುವ ಸಂದರ್ಭ ಎದುರಾದರೆ ಅದನ್ನು ಕ್ಷಾಮ ಎಂದು ಕರೆಯಲಾಗುತ್ತದೆ. ಈವರೆಗೆ ದೇಶದಲ್ಲಿ ಐದು ಬಾರಿ ಭೀಕರ ಕ್ಷಾಮ ತಲೆದೋರಿದೆ. 1630-32ರಲ್ಲಿ ಗುಜರಾತ್ ಹಾಗೂ ದಖನ್ ಪ್ರದೇಶವನ್ನು ಮೊದಲ ಬಾರಿಗೆ ಅತ್ಯಂತ ಕರಾಳ ಕ್ಷಾಮ ಕಾಡಿತ್ತು. 1770ರಲ್ಲಿನ ಬಂಗಾಲದ ಕ್ಷಾಮವೂ ವಿಶ್ವಾದ್ಯಂತ ಸುದ್ದಿ ಮಾಡಿತ್ತು. 1783-84ರ ಅವಧಿಯಲ್ಲಿ ದೇಶವನ್ನು ಮತ್ತೊಂದು ಕ್ಷಾಮ ನಲುಗಿಸಿತು. ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಾದ ಈಗಿನ ದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಹಸಿವಿನಿಂದ ನೂರಾರು ಮಂದಿ ಆಗ ಅಸುನೀಗಿದ್ದರು. 1791-92ರಲ್ಲಿ ಕಾಣಿಸಿಕೊಂಡ ಕ್ಷಾಮವನ್ನು 'ದೋಜಿಬರ' ಎಂದೇ ಕರೆಯಲಾಯಿತು. ಹೆಸರೇ ಅದರ ಭೀಕರತೆಗೆ ಸಾಕ್ಷಿ. ಹಸಿವಿನಿಂದ ಪ್ರಾಣ ಕಳೆದುಕೊಂಡ ಜೀವಿಗಳ ತಲೆಬುರುಡೆ ಆಗಿನ ಎಲ್ಲೆಡೆಯ ಸಾಮಾನ್ಯ ದೃಶ್ಯವಾಗಿತ್ತಂತೆ. ಹೈದರಾಬಾದ್ ಹಾಗೂ ದಕ್ಷಿಣ ಪ್ರಾಂತ್ಯಗಳಲ್ಲಿ ತೀವ್ರ ಜೀವಹಾನಿ ಸಂಭವಿಸಿತ್ತೆಂಬುದು ದಾಖಲಾಗಿದೆ. ತೀರಾ ಇತ್ತೀಚೆಗೆ ದಾಖಲಾದದ್ದು 1943ರ ಬಂಗಾಳದ ಕ್ಷಾಮ.
ಇವೆಲ್ಲವೂ ವಿತ್ತೀಯ ಪರಿಸ್ಥಿತಿಯ ಮೇಲೇ ಖಂಡಿತಾ ಪರಿಣಾಮ ಬೀರಲಿದೆ. ಇದನ್ನು ಸರಿಪಡಿಸಲು ಹೊಸ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎನ್ನುವುದರ ಮೇಲೆ ದೇಶದ ಆರ್ಥಿಕತೆ ನಿಂತಿದೆ. ಅತ್ಯಂತ ವಿಪತ್ಕಾರಕ ಸ್ಥಿತಿಯಲ್ಲಿರುವ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವುದೇ ಹೊಸ ಸರ್ಕಾರದ ಮುಂದಿನ ಮುಖ್ಯ ಸವಾಲು. ಆದರೆ, ಇದಕ್ಕೆ ಸಮಸ್ಯೆ ಸೇರ್ಪಡೆಗೊಳಿಸುವುದೇ ಎಲ್‌ನಿನೋ. ಮಾರ್ಚ್ ಅಂತ್ಯದ ವೇಳೆಗೆ ಪರಿಷ್ಕೃತ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.6ಕ್ಕೆ ತಲುಪಿಸುವ ಗುರಿ ಸಾಧಿಸಲೆಂದು ಕಾಂಗ್ರೆಸ್ ಉದ್ದೇಶಿಸಿತ್ತು. ಇದಕ್ಕಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ 78 ಸಾವಿರ ಕೋಟಿಯಷ್ಟು ವೆಚ್ಚ ಕಡಿತ ಮಾಡಿತು. ಅದರ ಜತೆಗೇ ಹೊಸ ವರ್ಷಕ್ಕೆ ಮತ್ತೆ ಸಬ್ಸಿಡಿ ವೆಚ್ಚದ ರೂಪದಲ್ಲಿ 96 ಸಾವಿರ ಕೋಟಿಯ ಹೊರೆ ಸೃಷ್ಟಿಸಿತು. ಇದು ಮುಂದಿನ ವರ್ಷದಲ್ಲಿ ಇನ್ನಷ್ಟು ಆರ್ಥಿಕ ದುಃಸ್ಥಿತಿಗೆ ನಾಂದಿ ಹಾಡಲಿದೆ.
'ಎಲ್ ನೀನು?' ಎನ್ನುವ ಬರಕ್ಕೆ 'ಇಲ್ಲಿ ನಾನು' ಎಂದು ಉತ್ತರಿಸುವ ಗಟ್ಟಿ ನಾಯಕತ್ವ ಇದ್ದರೆ ಮಾತ್ರ ಅದನ್ನು ಎದುರಿಸಲು ಸಾಧ್ಯ. ಅಂಥ ನಾಯಕತ್ವವನ್ನು ನಾವು ನಿರೀಕ್ಷಿಸಬೇಕಷ್ಟೆ.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com