ಅಂಕಣಗಳು

ಲೋಕೋಪಯೋಗಿ ಸಚಿವರಿಗೊಂದು ಆತ್ಮೀಯ ಪತ್ರ

ಲೋಕೋಪಯೋಗಿ ಸಚಿವರಿಗೊಂದು ಆತ್ಮೀಯ ಪತ್ರ
Published On :

ಕರ್ನಾಟಕ ಸರ್ಕಾರದ ಮಾನ್ಯ ಲೋಕೋಪಯೋಗಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪನವರೇ, ತಾವು ಇತ್ತೀಚೆಗೆ ಸುದ್ದಿಯಲ್ಲಿ ಇದ್ದೀರಿ ಅಥವಾ ನಿಮ್ಮ ಕುರಿತು ಸಾಕಷ್ಟು ಸುದ್ದಿ ಬಂದಿದೆ. ಆದರೆ ಈ ಸುದ್ದಿ ಯಾರೂ ಸಂತೋಷಪಡುವಂತಹುದಲ್ಲ. ನಿಮ್ಮ ಅಧಿಕೃತ ಸರ್ಕಾರಿ ನಿವಾಸದ ನವೀಕರಣಕ್ಕಾಗಿ 2 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂಬುದೇ ಆ ಸುದ್ದಿಗೆ ಕಾರಣ. ಇದು ನಿಮಗೂ ಸಂತೋಷ ತಂದಿರಲಿಕ್ಕಿಲ್ಲವೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟಗೊಂಡಾಗ ತಮಗೆ ತೀವ್ರ ಮುಜುಗರ ಉಂಟಾಗಿರಬಹುದು. ಅಥವಾ ಈ ರೀತಿಯ ಸುದ್ದಿಗಳು ಮಾಧ್ಯಮಗಳಲ್ಲಿ ಬರುವುದು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅತ್ಯಂತ ಮಾಮೂಲು ಎಂದೂ ಸಹ ತಾವು ಪರಿಗಣಿಸಿರಬಹುದು.
ಮಹದೇವಪ್ಪನವರೇ, ನೀವು ಸಿಕ್ಕಾಗಲೆಲ್ಲಾ ನಾನೊಂದು ಪ್ರಶ್ನೆಯನ್ನು ಕೇಳುತ್ತಾ ಬಂದಿದ್ದೇನೆ. ಅದೊಂದು ಕುಚೋದ್ಯದ ಪ್ರಶ್ನೆಯೆಂದು ತಾವು ಭಾವಿಸಿರಬಹುದು. ಎಷ್ಟೇ ಆದರೂ ನಾನು ವಿರೋಧ ಪಕ್ಷಕ್ಕೆ ಸೇರಿದವನಲ್ಲವೇ? ಆದರೂ ಅದೇ ಪ್ರಶ್ನೆಯನ್ನು ಇಂದು ಮತ್ತೊಮ್ಮೆ ಕೇಳ ಬಯಸುತ್ತೇನೆ. ನಿಮ್ಮ ಇಲಾಖೆಯನ್ನು ಮಾತ್ರ 'ಲೋಕೋಪಯೋಗಿ' ಇಲಾಖೆ ಎಂದು ಕರೆಯಲಾಗುತ್ತದೆ ಇದಕ್ಕೆ ಕಾರಣವೇನು? ರಾಜ್ಯದಲ್ಲಿ ಸುಮಾರು 35 ಇಲಾಖೆಗಳಿವೆ. ಬಹಳ ಹಿಂದೆ ಮಹಾರಾಜರ ಕಾಲದಲ್ಲಿ ಬೆಂಗಳೂರಿನ ಅಠಾರಾ ಕಚೇರಿಯ ಮೂಲಕ ಆಡಳಿತ ನಡೆಯುತ್ತಿದ್ದಾಗ 18 ಇಲಾಖೆಗಳು ಇದ್ದವಂತೆ. ಸರ್ಕಾರಗಳ ಕಾರ್ಯಬಾಹುಳ್ಯ ಹೆಚ್ಚಾಗಿರುವುದರಿಂದ ಇಂದು ಆ ಸಂಖ್ಯೆ 35 ನ್ನು ತಲುಪಿದೆ. ಅಂದರೆ ಉಳಿದ ಇಲಾಖೆಗಳೆಲ್ಲ ಲೋಕಕ್ಕೆ ಅಪಕಾರಿ ಇಲಾಖೆಗಳಾಗಿವೆಯೇ? ಬೇರೆ ರಾಜ್ಯಗಳಲ್ಲಿ ಈ ಇಲಾಖೆಯನ್ನು ರಸ್ತೆ ನಿರ್ಮಾಣದ ಇಲಾಖೆ, ಸಾರ್ವಜನಿಕ ಕಾಮಗಾರಿ ಇಲಾಖೆ, ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಇಲಾಖೆ ಎಂದು ಕರೆಯಲಾಗುತ್ತದೆ. ನಮ್ಮ ಸರ್ಕಾರದ ಅತ್ಯಂತ ಶ್ರೀಮಂತ ಇಲಾಖೆಗಳಲ್ಲಿ ಲೋಕೋಪಯೋಗಿ ಮುಂಚೂಣಿಯಲ್ಲಿದೆ. ಸೋರುವಿಕೆಯಲ್ಲಿಯೂ ಮುಂಚೂಣಿಯಲ್ಲಿರುವುದು ಅತ್ಯಂತ ಸಹಜ ತಾನೇ? ಇಂತಹ ಇಲಾಖೆಗಳನ್ನು ಗಮನಿಸಿಯೇ 1966 ನೇ ಇಸವಿಯಲ್ಲಿ ಅಂದಿನ ಪ್ರಧಾನಿ        ರಾಜೀವ್ ಗಾಂಧಿಯವರು 'ಪ್ರತಿ ಯೋಜನೆಗೆ ನೀಡಲಾಗುವ ನೂರು ರೂಪಾಯಿ ಹಣದಲ್ಲಿ ಆ ಯೋಜನೆಗೆ ತಲುಪುವುದು ಕೇವಲ 15 ರೂಪಾಯಿ ಮಾತ್ರ ಉಳಿದ 85 ರೂಪಾಯಿ ಸೋರಿಕೆಯಾಗುತ್ತದೆ. ಇಲ್ಲವೇ ಲೆಕ್ಕಕ್ಕೇ ಸಿಗುವುದಿಲ್ಲ' ಎಂಬ ಕಟು ಸತ್ಯವನ್ನು ಹೊರಹಾಕಿದ್ದು. ಇಲಾಖೆ ಕುರಿತಂತೆ ಈ ಮೇಲೆ ವಿವರಿಸಿದ ದೃಷ್ಟಿಕೋನವನ್ನು ನೀವೂ ಒಪ್ಪುತ್ತೀರೆಂದುಕೊಂಡಿರುವೆ.  
ನಾನೂ ಸಹ 2008-2013 ರ ಅವಧಿಯ ಸರ್ಕಾರದಲ್ಲಿ ಭಾಗಿಯಾಗಿದ್ದೆ. ಆಗ ಪ್ರಾರಂಭದ ಮೂರುವರೆ ವರ್ಷಗಳ ಕಾಲ ಸರ್ಕಾರಿ ಅಧಿಕೃತ ನಿವಾಸದಲ್ಲಿದ್ದೆ. ನಾನು ನನ್ನ ಕುಟುಂಬದೊಂದಿಗೆ ಆ ನಿವಾಸಕ್ಕೆ ಹೋಗಿ ಸೇರಿಕೊಳ್ಳುವಾಗ ಅಗತ್ಯ ಕಾಮಗಾರಿಗಳನ್ನು ಪೂರೈಸಲಾಗಿತ್ತು. ಆಗ ನಾನೂ ಸಹ ನಿಮಗೆ ಈಗ ಆಗಿರಬಹುದಾದ ಮುಜುಗರವನ್ನು ಎದುರಿಸಿದ್ದೆ. ದಿನಾಂಕ 30-04-2009 ರ ವೃತ್ತ ಪತ್ರಿಕೆಗಳಲ್ಲಿ ನನ್ನ ಆ ಅಧಿಕೃತ ನಿವಾಸದ ನವೀಕರಣ ಹಾಗೂ ಪೀಠೋಪಕರಣಗಳ ಖರೀದಿಗೆ ಸಂಬಂದಿಸಿದಂತೆ ರು16.26 ಲಕ್ಷಗಳನ್ನು ಖರ್ಚು ಮಾಡಲಾಗಿದೆ ಎಂಬ ಸುದ್ದಿ ಪ್ರಕಟವಾಯಿತು. ಮುಂಜಾನೆ 6 ಗಂಟೆಗೆ ಪತ್ರಿಕೆಗಳಲ್ಲಿ ಸುದ್ದಿ ನೋಡಿ ಆಘಾತವಾದ ನಾನು ತಕ್ಷಣ ಅಂದೇ ಒಂದು ಅಧಿಕೃತ ಪತ್ರವನ್ನು ಅಂದಿನ ಮುಖ್ಯಕಾರ್ಯದರ್ಶಿಗಳಿಗೆ ಬರೆದು ಒಂದು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದೆ. ಆ ಪತ್ರದಲ್ಲಿ ತಿಳಿಸಿದಂತೆ ಆ ಅಧಿಕೃತ ನಿವಾಸದಲ್ಲಿ ಯಾವುದೇ ಹೊಸದಾಗಿ ನಿರ್ಮಾಣ ಅಥವಾ ನವೀಕರಣ ಕಾರ್ಯವನ್ನು  ಕೈಗೊಂಡಿರಲಿಲ್ಲ. ಕೆಲವು ಅವ್ಯವಸ್ಥೆಗಳು ಇರುವ ಕಡೆ ಅವಶ್ಯ ರಿಪೇರಿ ಕೆಲಸಗಳನ್ನು ಮಾತ್ರ ಕೈಗೊಳ್ಳಲಾಗಿತ್ತು. ಉದಾಹರಣೆಗೆ ಕಟ್ಟಡದ ಆವರಣದಲ್ಲಿ ಕುಸಿದು ಬಿದ್ದಿದ್ದ ನೀರಿನ ಸಂಪಿನ ಪುನರ್ ನಿರ್ಮಾಣ, ಸೋರುತ್ತಿದ್ದ ಮಾಳಿಗೆ ದುರಸ್ತಿ, ಬಚ್ಚಲು ಮನೆಗಳಲ್ಲಿ ತೀರಾ ಹದಗೆಟ್ಟಿದ್ದ ಟೈಲ್ಸ್‌ಗಳ ಬದಲಾವಣೆ... ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಿವಿಲ್ ಕಾಮಗಾರಿ ಕೈಗೊಂಡಿರಲಿಲ್ಲ. ಮುಖ್ಯವಾಗಿ ಆ ಮನೆಗೆ ಮತ್ತು ಗೃಹ ಕಚೇರಿಗೆ ಯಾವುದೇ ಹೊಸ ಸೋಫಾಗಳನ್ನಾಗಲಿ ಇತರೆ ಐಷಾರಾಮಿ ವಸ್ತುಗಳನ್ನಾಗಲಿ ಕೊಂಡಿರಲಿಲ್ಲ. ನಾನು ಮುಖ್ಯ ಕಾರ್ಯದರ್ಶಿಗಳಿಗೆ ಆ ಪತ್ರದಲ್ಲಿ ತಿಳಿಸಿದಂತೆ ವಾಸ್ತವಿಕ ಅಂಶಗಳನ್ನು ಅರಿಯಲು ಯಾವುದೇ ಗಹನ ತನಿಖೆ ಮಾಡುವ ಅಗತ್ಯವೂ ಇರಲಿಲ್ಲ. ಬದಲಿಗೆ ಆ ಮನೆಗೆ ಅಥವಾ ಗೃಹ ಕಚೇರಿಗೆ ಅಧಿಕಾರಿಗಳು ಭೇಟಿ ಕೊಟ್ಟಿದ್ದರೆ ಖುದ್ದಾಗಿ ನೋಡಬಹುದಿತ್ತು. ಆದರೂ ಲೋಕೋಪಯೋಗಿ ಇಲಾಖೆಯಿಂದ ಕೂಲಂಕಷ ವರದಿಯನ್ನು ತರಿಸಿಕೊಂಡು ತನಿಖೆಗೆ ಆದೇಶಿಸುವುದು ಸೂಕ್ತವೆಂದು, ಈ ಮೂಲಕ ಇಲಾಖೆ ಇಂತಹ ಸಂದರ್ಭಗಳಲ್ಲಿ ನವೀಕರಣಕ್ಕೆ ಮತ್ತು ವಸ್ತುಗಳ ಖರೀದಿಗೆ ಯಾವ ಪ್ರಕ್ರಿಯೆಯನ್ನು ಅನುಸರಿಸುತ್ತಿವೆ ಮತ್ತು ಎಷ್ಟರಮಟ್ಟಿಗೆ ಪಾರದರ್ಶಕತೆ ಇದೆ ಎಂಬುದು ಬೆಳಕಿಗೆ ಬರಬೇಕೆಂದು ಆಗ್ರಹಿಸಿದೆ. ನನ್ನ ಪತ್ರ ಸರ್ಕಾರಕ್ಕೆ ತಲುಪಿದ ಮರುಕ್ಷಣದಲ್ಲಿಯೇ ನಿಮ್ಮ ಇಲಾಖೆ ಎಚ್ಚರಗೊಂಡಿತು. ಅಂದೇ ಸಂಜೆ ನಿಮ್ಮ ಇಲಾಖೆಯ ಕಾರ್ಯದರ್ಶಿಗಳು ಭೇಟಿ ಮಾಡಿ ಈ ಒಟ್ಟು ಪ್ರಕರಣದ ಬಗ್ಗೆ ವಿಚಾರಣೆ ಮಾಡುವುದಾಗಿ ತಿಳಿಸಿದರು. ಆದರೆ ನಾನು ಅಲ್ಲಿಗೆ ಸುಮ್ಮನಾಗದೇ ನಮ್ಮ ಆ ನಿವಾಸದ ನವೀಕರಣದ ಪಟ್ಟಿ ಹಾಗೂ ಸಾಮಗ್ರಿಗಳನ್ನು ಕೊಂಡುಕೊಂಡಿರುವ ವಿವರಗಳನ್ನು ಪಡೆದುಕೊಂಡು ಅಧ್ಯಯನ ಮಾಡಿದೆ. ಉದಾಹರಣೆಗೆ ಮನೆಗೆ ಹಾಗೂ ಕಚೇರಿಗೆ ಹಾಕಿದ ಗಡಿಯಾರದ ನಮೂನೆಯಲ್ಲಿಯೇ ಮತ್ತೊಂದು ಗಡಿಯಾರ ಮಾರುಕಟ್ಟೆಯಲ್ಲಿ ಕೊಂಡಾಗ ನನಗೆ ಲೋಕೋಪಯೋಗಿ ಇಲಾಖೆಯ ದಿವ್ಯ ದರ್ಶನವಾಯಿತು. ನಾನು ಕೊಂಡುಕೊಂಡ ಗಡಿಯಾರದ ಬೆಲೆ ರು. 175, ನಿಮ್ಮ ಇಲಾಖೆ ಪಟ್ಟಿಯಲ್ಲಿ ಕೊಂಡುಕೊಂಡ ದರ ರು. 1450. ಮಾಮೂಲಿ ಕುಡಿಯುವ ನೀರಿನ ಜಗ್ಗೊಂದಕ್ಕೆ ಮಾರುಕಟ್ಟೆಯ ದರ ರು 210. ಆದರೆ ನಿಮ್ಮ ಇಲಾಖೆಯ ಪಟ್ಟಿಯಲ್ಲಿ ತೋರಿಸಿದ ದರ ರು 1165. ನೀರಿನ ಫಿಲ್ಟರ್ ಮಾರುಕಟ್ಟೆ ದರ ರು. 1250. ಆದರೆ ಲೋಕೋಪಯೋಗಿ ಇಲಾಖೆಯ ದರ ರು 3500. ವಿಶೇಷವೆಂದರೆ ಈ ಎಲ್ಲಾ ವಸ್ತುಗಳನ್ನು ಒಂದೇ ಸಂಸ್ಥೆಯಿಂದ ಖರೀದಿಸಲಾಗಿತ್ತು. ಇನ್ನೂ ಹೆಚ್ಚಿನ ವಿವರಗಳನ್ನು ಹೇಳಿದರೆ ನಿಮಗೆ ಮಾತ್ರವಲ್ಲ, ನಿಮ್ಮ ಇಲಾಖೆಯ ಅಧಿಕಾರಿಗಳಿಗೂ ಮುಜುಗರವಾದೀತು.
ಅಂದ ಹಾಗೆ ಸಚಿವರ ನಿವಾಸಗಳು ಇರುವ ಒಟ್ಟು ಆ ಪ್ರದೇಶದ ವ್ಯಾಪ್ತಿ ಹೊಂದಿರುವ ವಿಭಾಗಕ್ಕೆ ಬರಲು ಪೋಸ್ಟಿಂಗ್ ಮಾಡಿಸಿಕೊಳ್ಳಲು- ನಿಮ್ಮ ಇಲಾಖೆಯಲ್ಲಿ ಭಾರಿ ಸ್ಪರ್ಧೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ಒಂದು ರೀತಿಯಿಂದ ಬಹಳ ಆಕರ್ಷಣೀಯ ಪೋಸ್ಟಿಂಗ್ ಎಂದರೆ ತಪ್ಪಾಗಲಾರದು. ಪ್ರತಿ ಬಾರಿ ಸರ್ಕಾರ ಬದಲಾದಾಗ ಅಥವಾ ಹೊಸ ಮಂತ್ರಿಗಳು ಬರುವಾಗ ಈ ಅಧಿಕೃತ ನಿವಾಸಗಳಿಗೆ ಆಗುವ ಖರ್ಚು ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುವುದು ಸರ್ವೇಸಾಮಾನ್ಯ. ಪ್ರತಿ ವರ್ಷ ನಿವಾಸಗಳ ನವೀಕರಣಕ್ಕೆ ಹಾಗೂ ಪೀಠೋಪಕರಣಗಳ ಖರೀದಿ ಕುರಿತು ಖರ್ಚಾಗುವ ಹಣದ ವಿವರ ಪ್ರಕಟವಾಗುವುದು ಯಾರಿಗಾದರೂ ಕಣ್ಣು ಕುಕ್ಕಿಸುವುದು ದಿಟ. ವಿಶೇಷವಾಗಿ ನೀವು ಈಗ ಇರುವ ಮನೆಯನ್ನೇ ತೆಗೆದುಕೊಳ್ಳಿ. ನಿಮ್ಮ ಹಿಂದೆ ಆ ಮನೆಯಲ್ಲಿ ಇದ್ದದ್ದು, ಇಂದಿನ ಮುಖ್ಯಮಂತ್ರಿಯಾಗಿರುವ, ಹಿಂದಿನ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು. ಅದಕ್ಕೂ ಮುನ್ನ ಇದೇ ನಿವಾಸದಲ್ಲಿ ಇಬ್ಬರೂ ಪ್ರಭಾವಿ ಸಚಿವರೇ ಇದ್ದಿದ್ದು. ಪ್ರತಿ ಸರ್ಕಾರ ಮತ್ತು ಸಚಿವರು ಬದಲಾದಾಗ ಈ ಮಟ್ಟದ ಖರ್ಚು ಯಾಕಾಗುತ್ತದೆ ಎಂಬುದರ ಬಗ್ಗೆಯೂ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.  
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ. ಸಿ. ನಾಣಯ್ಯನವರು ಖಾಸಗೀ ವಿಧೇಯಕ ತಂದು ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಸರ್ಕಾರಿ ಅಧಿಕೃತ ನಿವಾಸಕ್ಕೆ ಯಥೇಚ್ಚವಾಗಿ ಹಣ ಖರ್ಚಾಗುವಾಗ ಸುಮ್ಮನಿರುವ ನಾವು ನಮ್ಮ ಸ್ವಂತ ಮನೆಗೆ ಖರ್ಚು ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಲೆಕ್ಕಾಚಾರ ಹಾಕುವುದು ಏತಕ್ಕೆ? ವಿಧಾನ ಸೌಧದ ಮುಂಭಾಗದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಎಲ್ಲರಿಗೂ ಕಾಣುವಂತೆ ಬರೆದಿದ್ದರೂ ಅದು ಹೇಗೆ ನಮಗೆ ಕಾಣಿಸುವುದಿಲ್ಲವೋ, ಅದೇ ರೀತಿ ಸರ್ಕಾರದ ದುಡ್ಡು ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ಹಣ ಎಂಬುದು ನಮಗೆ ಅನಿಸುವುದಿಲ್ಲ.
ಈ ದೃಷ್ಟಿಯಿಂದ ಲೋಕೋಪಯೋಗಿ ಸಚಿವರಾಗಿ ನಿಮ್ಮ ಮುಂದೆ ಎರಡು ಮಾರ್ಗಗಳಿವೆ. ಮೊದಲನೆಯದು ಇಂತಹ ಅನೇಕ ವಿಚಾರಗಳು ಮಾಧ್ಯಮಗಳಲ್ಲಿ ಬರುತ್ತಿರುತ್ತವೆ, ಮಾಧ್ಯಮಗಳಿಗೆ ಬೇರೆ ಕೆಲಸವಿಲ್ಲ, ಇಂದಿನ ನ್ಯೂಸ್ ಪೇಪರ್ ನಾಳೆಗೆ ವೇಸ್ಟ್ ಪೇಪರ್ ಆಗುವಂತೆ ಮೊದಲು ಈ ವಿಚಾರಗಳ ಬಗ್ಗೆ ಗದ್ದಲವೇಳುತ್ತದೆ. ನಂತರ ಆ ಧೂಳು ಕಡಿಮೆಯಾದಂತೆ ಮಾಧ್ಯಮಗಳ ಜೊತೆ ಜನರೂ ಮರೆತುಬಿಡುತ್ತಾರೆ ಎಂದು ಅಂದುಕೊಂಡು ಕೈತೊಳೆದು ಬಿಡುವುದು. ಎರಡನೇ ಮಾರ್ಗವೆಂದರೆ ಸರ್ಕಾರ, ಜನತೆಯ ಕಸ್ಟೋಡಿಯನ್ ಎಂದು ತಿಳಿದು ನಾನು ಯಾವುದೇ ಕಾರಣಕ್ಕೆ ಜನತೆಯ ಹಣವನ್ನು ಅಪವ್ಯಯವಾಗಲು ಬಿಡುವುದಿಲ್ಲವೆಂದು ನಿರ್ಧರಿಸಿ ಈ ಕುರಿತು ತನಿಖೆಮಾಡಿಸಿ ಈ ರೀತಿ ದುಂದುವೆಚ್ಚದ ಅಸಹ್ಯ ಪ್ರಹಸನಗಳಿಗೆ ಇತಿಶ್ರೀ ಹಾಡುವುದು. ಆಗ ನಾವು ಸಾರ್ವಜನಿಕ ಮೌಲ್ಯಗಳ ಕುರಿತು ಭಾಷಣ ಮಾಡಿದರೂ ಜನ ಸ್ವಲ್ಪ ನಂಬುತ್ತಾರೆ.  
ಅಂದ ಹಾಗೆ ನಾನು ತನಿಖೆಗೆ ಆಗ್ರಹ ಮಾಡಿ ಎಲ್ಲಾ ವಿವರಗಳನ್ನು ಮುಂದಿಟ್ಟ ಮೇಲೆ ಇಲಾಖೆಯ ಅಧಿಕಾರಿಗಳು ಆಗಿರುವ ಲೋಪದೋಷಗಳನ್ನು ಅಂದಿನ ಲೋಕೋಪಯೋಗಿ ಸಚಿವರ ಮುಂದೆ ಅಷ್ಟು ಖರ್ಚು ಆಗಿಲ್ಲವೆಂಬುದನ್ನು ಒಪ್ಪಿಕೊಂಡರು. ಇದರ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅದೇ ಸಮಯದಲ್ಲಿ ಮತ್ತೊಬ್ಬ ಸಚಿವರಾಗಿದ್ದ ಮುಮ್ತಾಜ್ ಅಲಿಖಾನ್ ಅವರ ಖಾಸಗಿ ನಿವಾಸಕ್ಕೆ ಪೀಠೋಪಕರಣ ಒದಗಿಸಿದಾಗ ಇದೇ ರೀತಿಯ ಅವ್ಯವಹಾರ ನಡೆದಿರುವುದನ್ನು ಗಮನಿಸಿ ಅವರೂ ಸಹ ತನಿಖೆಗೆ ಆಗ್ರಹಿಸಿದರು. ಇದು ನಿಮ್ಮ ಇಲಾಖೆಯ ಬಹುಸಾಹಸಗಳ ಪೈಕಿ ಒಂದು ಸಾಹಸದ ಪರಿಚಯ. ಈ ಕುರಿತು ತಾವು ಏನು ಮಾಡುತ್ತೀರೋ ಎಂದು ಎದುರು ನೋಡುತ್ತಿದ್ದೇನೆ. (ಇತ್ತೀಚೆಗೆ ನಿಮ್ಮ ನಿವಾಸದ ನವೀಕರಣಕ್ಕೆ ಹಾಗೂ ಆಧುನೀಕರಣಕ್ಕೆ ತಗಲಿರುವ ವೆಚ್ಚ 46 ಲಕ್ಷ ರು.ಗಳೆಂದು ಪ್ರಕಟವಾಗಿದೆ. ಇದೂ ಸಹ ನಿಮ್ಮ ಇಲಾಖೆ ತೋರಿಸುತ್ತಿರುವ ಲೆಕ್ಕವೋ ಅಥವಾ ನಿಜವಾದ ಖರ್ಚೋ ನನಗೆ ತಿಳಿಯುತ್ತಿಲ್ಲ)  

ನಿಮ್ಮ ಸ್ನೇಹಿತ
ಎಸ್. ಸುರೇಶ್ ಕುಮಾರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.