ನರೇಗಾ: ಕಾಯಕಲ್ಪವಿಲ್ಲದಿದ್ದರೆ ಯೋಜನೆ ವ್ಯರ್ಥ

ಇನ್ನೇನು ಕೆಲದಿನಗಳಲ್ಲಿ ಹೊಸ ಸರ್ಕಾರ ಬರಲಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಈ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿತ್ತು. ಯಾವುದೇ ಸರ್ಕಾರ ಬಂದರೂ ಏಕಾಏಕಿ ತೆಗೆದುಹಾಕಲಾಗದ 'ಜನಪ್ರಿಯ' ಯೋಜನೆ ಇದು. ಇದರ ಉದ್ದೇಶವೂ ಉದಾತ್ತವೇ. ಆದರೆ ಉದ್ಯೋಗವಷ್ಟೇ ಖಾತ್ರಿಯಾಗದೇ ಕೆಲಸವೂ ಖಾತ್ರಿಯಾಗಿಸಬೇಕಿದ್ದ ಹಂತದಲ್ಲಿ ಹಲವೆಡೆಗಳಲ್ಲಿ ಯೋಜನೆ ಮುಗ್ಗರಿಸಿದೆ. ಅದರ ಕಾಯಕಲ್ಪದ ಬಗ್ಗೆ ಇಲ್ಲಿನ ಎರಡು ಲೇಖನಗಳು ಗಮನ ಸೆಳೆದಿವೆ.
ಕೇಂದ್ರದ "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ" ಯಶಸ್ವಿಯಾಯಿತೆಂದರೆ ಗಾಂಧೀಜಿಯವರ 'ಗ್ರಾಮ ರಾಜ್ಯವನ್ನು ರಾಮರಾಜ್ಯವನ್ನಾಗಿಸುವ ಕನಸು' ನನಸಾಗಬಲ್ಲದು. ಇನ್ನು ಗ್ರಾಮೀಣ ಅಭಿವೃದ್ಧಿ ಸರ್ವಾಂಗೀಣವಾಗುವುದರಲ್ಲೂ ಯಾವುದೇ ಸಂದೇಹ ಇಲ್ಲ. ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹೇರಳ ಹಣವನ್ನು ಪ್ರತೀ ರಾಜ್ಯಗಳಿಗೂ ಪ್ರತೀ ವರ್ಷವೂ ನೀಡುತ್ತದೆ. ಗ್ರಾಮೀಣ ಬಡ ಜನರಿಗಾಗಿ, ವಿಶೇಷವಾಗಿ ನಿರುದ್ಯೋಗಿಗಳಿಗೆ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಅನೇಕ ಅಧಿಕಾರಿಗಳು ಆಸಕ್ತಿ ವಹಿಸದೇ ಇರುವುದು ಹಾಗೂ ಅಕ್ರಮಗಳನ್ನು ತಡೆಗಟ್ಟಲು ವಿಫಲವಾಗುತ್ತಿರುವುದು ಅಥವಾ ಅದರಲ್ಲಿ ಶಾಮೀಲಾಗುತ್ತಿರುವ ವಿಷಯ ಆಗಾಗ ಮಾಧ್ಯಮದ ಮೂಲಕ ಹೊರಬೀಳುತ್ತಿದೆ. ಯಾರನ್ನೂ ಕೆಲಸಕ್ಕೆ ನೇಮಿಸಿಕೊಳ್ಳದೆ, ಬರೀ ಖೊಟ್ಟಿ ಹೆಸರುಗಳನ್ನು ಬರೆದು ಜೆ.ಸಿ.ಬಿ. ಯಂತ್ರದಿಂದ ತುಸು ಕೆಲಸ ಮಾಡಿ ಸಿಕ್ಕಾಪಟ್ಟೆ ಖರ್ಚು ತೋರಿಸಿ ಸಿಕ್ಕಿಬಿದ್ದ ಸುದ್ದಿಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಅನೇಕ ಇಂಜಿನಿಯರುಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನೊಳಗೊಂಡು ಅನೇಕರು ನರೇಗಾ ಮತ್ತು ಇತರೆ ಯೋಜನೆಯಲ್ಲಿ ಅಕ್ರಮ ಎಸಗಿದ ಆರೋಪಗಳು ಕೇಳಿಬಂದಿವೆ. ಇಷ್ಟೆಲ್ಲ ಆದರೂ ಈ ಯೋಜನೆಗಳಲ್ಲಿ ಅವ್ಯವಹಾರಗಳ ಸರಮಾಲೆ ಮುಂದುವರಿದಿರುವುದು ಗ್ರಾಮೀಣ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸಿದೆ. ನರೇಗಾ ಯೋಜನೆಯಲ್ಲಿ ರಾಜ್ಯದ ಪಂಚಾಯಿತಿಯೊಂದರಲ್ಲಿ 3,55,217 ರುಪಾಯಿ ಅವ್ಯವಹಾರವಾಗಿರುವ ಬಗ್ಗೆ ಹಾಗೂ ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿ ಪಿ.ಡಿ.ಓ (94,318 ರುಪಾಯಿ), ತಾಂತ್ರಿಕ ಅಧಿಕಾರಿ(92,894 ರುಪಾಯಿ), ಸಹಾಯಕ ಕೃಷಿ ಅಧಿಕಾರಿ(1,68,065 ರುಪಾಯಿ) ಭಾಗಿಯಾಗಿದ್ದಾರೆಂದೂ, ತಪ್ಪಿತಸ್ಥರ ಮೇಲೆ ಇನ್ನಷ್ಟು ತನಿಖೆ ನಡೆಸಲು ಒಂಬಡ್ಸ್ಮನ್ರವರು ಆದೇಶ ನೀಡಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆದರೂ ನರೇಗಾ ಯೋಜನೆಯಲ್ಲಿನ ಕಳ್ಳರನ್ನೆಲ್ಲ ಕಟ್ಟಿಹಾಕಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗದೆ ಇರುವುದರಿಂದಲೇ ದಿನನಿತ್ಯ ಅಕ್ರಮಗಳು ನಡೆಯುತ್ತಲೇ ಇವೆ. ನರೇಗಾ ಯೋಜನೆಯ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಬೇಕು. ಯಾವುದೇ ಅಕ್ರಮ ನಡೆಯಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿಯೊಂದು ಗ್ರಾಮ ಸಭೆಯಲ್ಲಿ 9 ಜನರನ್ನೊಳಗೊಂಡ ಜಾಗೃತ ಸಮಿತಿ (ವಿ.ಎಂ.ಸಿ) ನೇಮಕ ಮಾಡಬೇಕೆಂದಿದ್ದರೂ ರಾಜ್ಯಾದ್ಯಂತ ಬಹುತೇಕ ಗ್ರಾಮ ಸಭೆಗಳಲ್ಲಿ 9 ಜನರ ನೇಮಕವೂ ಸರಿಯಾಗಿ ಆಗಿಲ್ಲ. ಸರಿಯಾಗಿ ನೇಮಕಾತಿಗಳಾದರೆ ಅಕ್ರಮಗಳು ಬೆಳಕಿಗೆ ಬರುತ್ತವೆಯೆಂಬ ಭಯದಿಂದ ಗ್ರಾಮಮಟ್ಟದಿಂದ ರಾಜ್ಯಮಟ್ಟದ ಎಲ್ಲಾ ಹಂತದ ಅಧಿಕಾರಿಗಳು 'ಜಾಗೃತ ಸಮಿತಿ'ಯನ್ನು ನೇಮಿಸಲು ಮುಂದಾಗುತ್ತಿಲ್ಲ.
2013-14ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 30 ಜಿಲ್ಲೆಗಳಿಗೆ ನರೇಗಾ ಯೋಜನೆಯಲ್ಲಿ ಲಭ್ಯವಿದ್ದ ಹಣ 2154.88 ಕೋಟಿ ರುಪಾಯಿ. ಇದರಲ್ಲಿ 2091.22 ರು. ಬಳಕೆಯಾಗಿದೆ. ಆದರೆ ಈ ಹಣದಲ್ಲಿ ಅದೆಷ್ಟು ಅವ್ಯವಹಾರ ನಡೆದಿದೆಯೋ ಎನ್ನುವುದು ಆ ದೇವರಿಗೇ ಗೊತ್ತು. ಜಿಲ್ಲೆಗಳಿಗೆ ಲಭ್ಯವಾದ ಹಣದಲ್ಲೂ ಪಕ್ಷಪಾತದಿಂದಾಗಿ ವಿತರಣೆಯಲ್ಲಿ ಲೋಪದೋಷವಾಗಿದೆ. 3ನೇ ಹಂತದಲ್ಲಿ ಉಡುಪಿ ಜಿಲ್ಲೆಗೆ ಕೇವಲ 6.60 ಕೋಟಿ ಲಭ್ಯವಾಗಿ, ಅದರಲ್ಲಿ 4.41 ಕೋಟಿ ರುಪಾಯಿ ಬಳಸಲಾಗಿದೆ. ತುಮಕೂರು ಜಿಲ್ಲೆಗೆ 171.61 ಕೋಟಿ ಲಭ್ಯವಿದ್ದು ಇದರಲ್ಲಿ 171.41 ಕೋಟಿ ವೆಚ್ಚವಾಗಿದೆ. 2ನೇ ಹಂತದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಲಭ್ಯವಿದ್ದ 31.05 ಕೋಟಿಯಲ್ಲಿ, 30.14 ಕೋಟಿ ವೆಚ್ಚವಾಗಿದೆ. ಬೆಳಗಾವಿ ಜಿಲ್ಲೆಗೆ ಲಭ್ಯವಿದ್ದ 91.32 ಕೋಟಿಯಲ್ಲಿ 61.50 ಕೋಟಿ ವೆಚ್ಚವಾಗಿದೆ. ದಾವಣಗೆರೆ ಜಿಲ್ಲೆಗೆ ಲಭ್ಯವಿದ್ದ 199.03 ಕೋಟಿಯಲ್ಲಿ 197.58 ಕೋಟಿ ರುಪಾಯಿ ವೆಚ್ಚವಾಗಿದೆ.
2013-14ರಲ್ಲಿ ಹಾವೇರಿ ಜಿಲ್ಲೆಗೆ ಲಭ್ಯವಿದ್ದ ಹಣ 75.11 ಕೋಟಿ ರು. ಅದರಲ್ಲಿ 71.82 ಕೋಟಿ ವೆಚ್ಚವಾಗಿದೆ, ಹಾವೇರಿ ಜಿಲ್ಲೆಗೆ ಲಭ್ಯವಿದ್ದ 69.83 ಕೋಟಿ ಹಣದಲ್ಲಿ 1)ಶಿಗ್ಗಾವಿ ತಾಲೂಕು- 1.46 ಕೋಟಿ 2) ಸವಣೂರ ತಾಲೂಕು- 3.45 ಕೋಟಿ 3)ಹಾನಗಲ್ಲ ತಾಲೂಕು- 4.87 ಕೋಟಿ 4) ಬ್ಯಾಡಗಿ ತಾಲೂಕು- 5.72 ಕೋಟಿ 5) ರಾಣೆಬೆನ್ನೂರ ತಾಲೂಕು- 10.14 ಕೋಟಿ 6) ಹಾವೇರಿ ತಾಲೂಕು- 14.11 ಕೋಟಿ 7) ಹಿರೇಕೆರೂರ ತಾಲೂಕು- 30.08 ಕೋಟಿ ರುಪಾಯಿ ವೆಚ್ಚವಾಗಿದೆ.
ಹಿರೇಕೆರೂರು ತಾಲೂಕಿಗೆ ಲಭ್ಯವಿದ್ದ 30.08 ಕೋಟಿಯಲ್ಲಿ 37 ಗ್ರಾಮ ಪಂಚಾಯತಿಗಳಿಂದ 30.02 ಕೋಟಿ ವೆಚ್ಚವಾಗಿದೆ. 4910 ಜನಸಂಖ್ಯೆಯ ನೆಸ್ವಿ ಗ್ರಾಮ ಪಂಚಾಯ್ತಿಗೆ ಲಭ್ಯವಿದ್ದ 21.73 ಲಕ್ಷದಲ್ಲಿ 20.47 ಲಕ್ಷ ವೆಚ್ಚವಾಗಿದೆ. 4788 ಜನಸಂಖ್ಯೆಯ ಅಣಜಿ ಗ್ರಾಮ ಪಂಚಾಯಿತಿಗೆ ಲಭ್ಯವಿದ್ದ ಹಣದಲ್ಲಿ 19.85 ಲಕ್ಷ ವೆಚ್ಚವಾಗಿದೆ. 2991 ಜನಸಂಖ್ಯೆಯ ಸಾತೇನಹಳ್ಳಿ ಪಂಚಾಯತಿಗೆ ಲಭ್ಯವಿದ್ದ ಹಣದಲ್ಲಿ 28.85 ಲಕ್ಷ ವೆಚ್ಚವಾಗಿದೆ. 9157 ಜನಸಂಖ್ಯೆಯ ಚಿಕ್ಕೇರೂರ ಪಂಚಾಯತಿಗೆ ಲಭ್ಯವಿದ್ದ ಹಣದಲ್ಲಿ 80.33 ಲಕ್ಷ ವೆಚ್ಚವಾಗಿದೆ. 9281 ಜನಸಂಖ್ಯೆಯ ಮಾಸೂರ ಪಂಚಾಯತಿಗೆ ಲಭ್ಯವಿದ್ದ 1.66 ಕೋಟಿಯಲ್ಲಿ 1.66 ಕೋಟಿ ರುಪಾಯಿ ವೆಚ್ಚವಾಗಿದೆ. 4453 ಜನಸಂಖ್ಯೆಯ ತಾವರಗಿ ಗ್ರಾಮಪಂಚಾಯತಿಗೆ ಲಭ್ಯವಿದ್ದ 1.63 ಕೋಟಿಯಲ್ಲಿ 1.63 ಕೋಟಿ ವೆಚ್ಚವಾಗಿದೆ. ಆದರೆ ನರೇಗಾ ಕಾಮಗಾರಿಗಳಲ್ಲಿ 3.55 ಲಕ್ಷ ರುಪಾಯಿ ಅವ್ಯವಹಾರವಾಗಿದೆ ಎಂಬ ಬಗ್ಗೆಯೂ ತನಿಖೆ ನಡೆದಿದೆ. ಇದು ರಾಜ್ಯಾದ್ಯಂತ ನಡೆದಿರುವ ನರೇಗಾ ಯೋಜನೆಯ ಕಥೆ ಹಾಗೂ ವ್ಯಥೆ. ಇನ್ನಾದರೂ ಸರ್ಕಾರ ಹದಗೆಟ್ಟ ಪರಿಸ್ಥಿತಿಯನ್ನು ಸುಧಾರಿಸುವುದು ಒಳಿತು.
-ಬಿ.ಜಿ. ಬಣಕಾರ, ಮಾಜಿ ವಿಧಾನಸಭಾಧ್ಯಕ್ಷರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


