ನರೇಗಾ: ಕಾಯಕಲ್ಪವಿಲ್ಲದಿದ್ದರೆ ಯೋಜನೆ ವ್ಯರ್ಥ

ಇನ್ನೇನು ಕೆಲದಿನಗಳಲ್ಲಿ ಹೊಸ ಸರ್ಕಾರ ಬರಲಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಈ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿತ್ತು. ಯಾವುದೇ ಸರ್ಕಾರ ಬಂದರೂ ಏಕಾಏಕಿ ತೆಗೆದುಹಾಕಲಾಗದ 'ಜನಪ್ರಿಯ' ಯೋಜನೆ ಇದು. ಇದರ ಉದ್ದೇಶವೂ ಉದಾತ್ತವೇ. ಆದರೆ ಉದ್ಯೋಗವಷ್ಟೇ ಖಾತ್ರಿಯಾಗದೇ ಕೆಲಸವೂ ಖಾತ್ರಿಯಾಗಿಸಬೇಕಿದ್ದ ಹಂತದಲ್ಲಿ ಹಲವೆಡೆಗಳಲ್ಲಿ ಯೋಜನೆ ಮುಗ್ಗರಿಸಿದೆ. ಅದರ ಕಾಯಕಲ್ಪದ ಬಗ್ಗೆ ಇಲ್ಲಿನ ಎರಡು ಲೇಖನಗಳು ಗಮನ ಸೆಳೆದಿವೆ.
ದೇಶದ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆ ಜಾರಿಯಲ್ಲಿ ಲೋಪವಾಗಿರುವ ಸುದ್ದಿಯಿಂದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈಗ ಸಂಕಷ್ಟದಲ್ಲಿದೆ. ಇದಕ್ಕೆ ನಿಕಟಪೂರ್ವ ಸರ್ಕಾರವೇ ಹೊಣೆ ಎಂದು ಅರ್ಥೈಸಲಾಗಿದೆ. ಪತ್ರಿಕೆಗಳಲ್ಲಿ ನರೇಗಾದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ಇಲಾಖೆ ಬೀದಿಗೆ ಬಿದ್ದಿದೆ. ಇದಕ್ಕೆ ಸಚಿವರು ಎಷ್ಟೇ ಸಮಜಾಯಿಷಿ ಕೊಟ್ಟರೂ ಆಗಿರುವ ನಷ್ಟವನ್ನು ಸರಿಪಡಿಸಲಾಗುವುದಿಲ್ಲ. ಇದನ್ನೇ ಛಾಲೆಂಜ್ ಆಗಿ ಧೈರ್ಯದಿಂದ ಸ್ವೀಕರಿಸಿ, ತಮ್ಮ ಆಡಳಿತಾವಧಿಯಲ್ಲಿ ಆಗಿರುವ ಲೋಪವನ್ನು ಮರುಕಳಿಸದಂತೆ ಕಾರ್ಯ ಕೈಗೊಳ್ಳುವುದು ಸಮಯೋಚಿತ ಕೆಲಸವಾಗುತ್ತದೆ. ನರೇಗಾದ ಸುದ್ದಿ ಪ್ರಕಟಿಸಿದ ಪತ್ರಿಕೆಯೇ ಅಭಿವೃದ್ಧಿ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುವಂತೆ ಮಾಡುವುದೇ ಸರಿಯಾದ ಮಾರ್ಗ.
ಆಗಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿಸುವುದು, ಅದಕ್ಕೊಂದು ಸಮಿತಿ ಮಾಡಿಸುವುದು ಇಲ್ಲವೇ ಸಿ.ಓ.ಡಿಗೆ ವಹಿಸುವುದು ಎಲ್ಲ ವಿಳಂಬ ಗತಿಯ ಕ್ರಮಗಳಾಗಿರುತ್ತವೆ. ಬದಲಾಗಿ ಭ್ರಷ್ಟಚಾರದ ಮೂಲ ಎಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಯಾವ ಹಂತದಲ್ಲಿ ಭ್ರಷ್ಟಾಚಾರ ಉದ್ಭವಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಇದನ್ನು ಕಡಿಮೆ ಮಾಡುವ ಕಾರ್ಯ ಯೋಜನೆಯನ್ನು ಹಮ್ಮಿಕೊಳ್ಳಬೇಕೇ ಹೊರತು ಹುಳುಕುಗಳನ್ನು ಹುಡುಕುತ್ತಾ ಹೋಗುವುದು ಸಲ್ಲದು. ಇದರ ಬದಲಿಗೆ ಈಗಿನ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ತನ್ನ ಕಾರ್ಯವನ್ನು ಮುಂದುವರಿಸಿಕೊಂಡು ಸಫಲತೆಯತ್ತ ಸಾಗುವುದೇ ಮುಖ್ಯವಾಗಬೇಕು.
ಭ್ರಷ್ಟಾಚಾರದ ಬೇರುಗಳಿರುವುದು ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವಿನ ಅಪವಿತ್ರ ಮೈತ್ರಿಯಲ್ಲಿ. ಜಿಲ್ಲಾ ಹಂತದಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಮಟ್ಟದ ಕಾರ್ಯನಿರ್ವಾಹಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ಭೀಡೆಯಿಂದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಡೆತಡೆಗಳಿರಬಾರದು. ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿಯಲ್ಲಿ ಸಮಿತಿಯ ಸದಸ್ಯರುಗಳು ಕಾರ್ಯಕ್ರಮ ಜಾರಿಯಲ್ಲಿ ದಬ್ಬಾಳಿಕೆಯಿಂದ ನಡೆದುಕೊಳ್ಳುವುದೂ ಸೇರಿದೆ. ಗುತ್ತಿಗೆದಾರರೇ ಭ್ರಷ್ಟಾಚಾರದ ಸರದಾರರು. ಇವರಿಗೆ ದುಡ್ಡು ಹೊಡೆಯುವುದೇ ಮೂಲಮಂತ್ರವಾಗಿರುತ್ತದೆ. ಯಾವನೇ ಒಬ್ಬ ಗುತ್ತಿಗೆದಾರನಿಗೆ ಕಾಮಗಾರಿಯನ್ನು ಸರಿಯಾಗಿಯೇ ನಿರ್ವಹಿಸಬೇಕೆಂಬ ಮನಸ್ಥಿತಿಯಿದ್ದರೂ ಅಧಿಕಾರಶಾಹಿ ಅವನನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಮುಗಿಸಿದ ಕಾಮಗಾರಿಗೆ ನೇರವಾಗಿ ಅವನಿಗೆ ಪಾವತಿ ಮಾಡುವುದಿಲ್ಲ. ಇಲ್ಲಸಲ್ಲದ ನೆಪಗಳನ್ನು ಹೇಳಿ ಅವನಿಂದ ಅಧಿಕಾರಿಗಳು ಹಣ ಪಡೆಯುತ್ತಾರೆ.
ಕಾಮಗಾರಿ ಅವಧಿಯಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದೂ ಇದಕ್ಕೆಲ್ಲ ಕಾರಣವಾಗಿದೆ. ಭ್ರಷ್ಟಾಚಾರದಲ್ಲಿ ಆಡಳಿತಶಾಹಿಯೇ ಪ್ರಧಾನ ಪಾತ್ರ ವಹಿಸಿರುತ್ತದೆ. ನಿಕಟಪೂರ್ವ ಸರ್ಕಾರದಲ್ಲಿದ್ದವರೇ ಇಂದಿಗೂ ತಂತಮ್ಮ ಸ್ಥಳಗಳಲ್ಲಿ ಕುಳಿತು ಈಗಲೂ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ. ನರೇಗಾ ಯೋಜನೆಯನ್ನು ಕರ್ನಾಟಕ ಮಾತ್ರವಲ್ಲ, ಹಲವು ರಾಜ್ಯಗಳೂ ದುರುಪಯೋಗ ಪಡಿಸಿಕೊಂಡಿವೆ. ನರೇಗಾವನ್ನು ಹಿಂದಿನ ಸರ್ಕಾರಗಳು ಸರಿಯಾಗಿ ಬಳಸಿಕೊಂಡಿದ್ದರೆ ಗ್ರಾಮೀಣ ಕರ್ನಾಟಕದ ಚಿತ್ರಣ ಸ್ವಲ್ಪ ಮಟ್ಟಿಗೆ ಬದಲಾಗುತ್ತಿತ್ತು. ದುರದೃಷ್ಟದ ಸಂಗತಿ ಎಂದರೆ ಈ ಯೋಜನೆಯ ದುರುಪಯೋಗವೇ ಹೆಚ್ಚಾಗಿದೆ. ಇವೆಲ್ಲಾ ನಾವೇ ಸೃಷ್ಟಿಸಿಕೊಂಡ ಅವಾಂತರಗಳು. ಇವನ್ನು ನಿಯಂತ್ರಿಸಲು ಸಚಿವರು ಮನಸ್ಸು ಮಾಡಬೇಕಷ್ಟೆ. ಕೆಳಹಂತದ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಸಿಬ್ಬಂದಿ ಶಾಮೀಲಾಗಿ ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರುಪಾಯಿಗಳನ್ನು ದೋಚಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ರಮಗಳ ಬಗ್ಗೆ ತನಿಖೆ ಆಗಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಈ ಯೋಜನೆ ಅನುಷ್ಠಾನದಲ್ಲೇ ಲೋಪಗಳಿವೆ. ಸಚಿವರು, ತಪ್ಪು ದಾರಿಗೆ ಎಳೆಯುವ ಅಧಿಕಾರಶಾಹಿಯನ್ನು, ಸದಾ ಸುತ್ತುವರಿದಿರುವ ವಂದಿಮಾಗಧರನ್ನು ಪಕ್ಕಕ್ಕಿಟ್ಟು ಮುಂದುವರಿಯಬೇಕು. ಯಾವುದೇ ಅಧಿಕಾರಿಯನ್ನು ಯಾರ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ಸಂಪರ್ಕಿಸಬೇಕು. ಮಾಹಿತಿ ಪಡೆಯಬೇಕು ಅಂತೆಯೇ ತಪ್ಪು ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಶಿಸ್ತುಕ್ರಮಕ್ಕೆ ಮುಂದಾಗಬೇಕು. ಇಲಾಖೆ ಸಿಬ್ಬಂದಿಗಳಲ್ಲಿ ತಮ್ಮ ಕಾರ್ಯವಿಧಾನಗಳನ್ನು ನೇರವಾಗಿ ಸಚಿವರು ಗಮನಿಸುತ್ತಿದ್ದಾರೆ ಎಂಬ ವಾತಾವರಣ ಉಂಟು ಮಾಡಬೇಕು ಇದರಿಂದ ಎಲ್ಲರೂ ಜಾಗೃತರಾಗುತ್ತಾರೆ.
ಬೆಳಗೆದ್ದು ಒಂದು ಗಂಟೆ ಪತ್ರಿಕೆಗಳನ್ನು ಖುದ್ದಾಗಿ ಓದಬೇಕು. ಲೋಪ ಕಂಡು ಬಂದರೆ ಶಿಸ್ತುಕ್ರಮಕ್ಕೆ ಮುಂದಾಗಬೇಕು. ಪತ್ರಿಕೆಗಳು ಸಚಿವರಿಗೆ ಎಲ್ಲ ವಿಷಯಗಳಲ್ಲಿಯೂ ಸಹ ನೆರವಾಗುತ್ತವೆ. ಅಭಿವೃದ್ಧಿಯೇ ಆಗಲಿ, ಲೋಪ ದೋಷಗಳೇ ಆಗಲಿ, ಅಧಿಕಾರಿಗಳ ಅಟ್ಟಹಾಸಗಳೇ ಇರಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಪತ್ರಿಕೆಯಲ್ಲಿ ಒಬ್ಬ ಪಿ.ಡಿ.ಓ. ಅಕ್ರಮ ಎಸಗಿದ್ದಾನೆಂಬ ಸುದ್ದಿ ಪ್ರಕಟವಾದ ಕೂಡಲೇ ಅಮಾನತುಗೊಳಿಸಿದ ಆದೇಶ ಅವನನ್ನು ತಲುಪಬೇಕು. ಸಚಿವರು ಯಾವುದಕ್ಕೂ ಅಧಿಕಾರಿಗಳನ್ನು ಅವಲಂಬಿಸಬಾರದು. ಅವರು ಎಲ್ಲದಕ್ಕೂ ಅಡ್ಡಗಾಲು ಹಾಕುವವರೇ ಮತ್ತು ನಿಯಮಗಳ ಜಾಲದಲ್ಲಿ ಸಚಿವರುಗಳನ್ನೂ ಬಂಧಿಸುವವರೇ ಆಗಿರುತ್ತಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ನಿಯಮಗಳೂ ಅಧಿಕಾರಶಾಹಿ ಹಾಗೂ ಸಿಬ್ಬಂದಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ನೆರವಾಗುತ್ತವೆ. ಅವುಗಳ ಕಠಿಣ ಪಾಲನೆಯಲ್ಲಿ ಯಾರೂ ನಿಷ್ಠರಾಗುವುದಿಲ್ಲ. ಪತ್ರಿಕೆಗಳೂ ಅಷ್ಟೇ. ಎಲ್ಲದಕ್ಕೂ ಸಚಿವರನ್ನೇ ಗುರಿ ಮಾಡುತ್ತಾ ಬಂದಿವೆ. ಅಧಿಕಾರಿಗಳ ಸಾರ್ವಕಾಲಿಕ ಮನಸ್ಥಿತಿ ತಪ್ಪಾದರೆ ಸುತ್ತೋಲೆಗಳನ್ನು ಹೊರಡಿಸುವುದು ಅಷ್ಟೇ. ಆದರೆ ಸುತ್ತೋಲೆ ಹೊರಡಿಸಿದ ಮಾತ್ರಕ್ಕೆ ಕೆಲಸ ಆಗುತ್ತದೆ ಎನ್ನುವ ನಿಯಮವೇನಿಲ್ಲ.
ನರೇಗಾ ಯೋಜನೆ ಕಾಮಗಾರಿಗೆ ಯಂತ್ರೋಪಕರಣ ಬಳಸುವುದಕ್ಕೆ ನಿರ್ಬಂಧವಿದ್ದರೂ, ರಾತ್ರೋರಾತ್ರಿ ಯಂತ್ರೋಪಕರಣ ಬಳಸಿ ಕೆಲಸ ಮಾಡಿದ ಪ್ರಕರಣಗಳು ಸೇರಿದಂತೆ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ, ಅಲ್ಲದೆ 188 ಗ್ರಾಪಂಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ದೂರಿನ ಬಗ್ಗೆ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಪ್ರತ್ಯೇಕ ತನಿಖೆ ನಡೆಸಿ ವರದಿ ನೀಡಿದರೂ ಸರ್ಕಾರ ಕ್ರಮಕೈಗೊಳ್ಳುವ ಗೋಜಿಗೆ ಹೋಗಿಲ್ಲ. ಇದೇ ಧೋರಣೆ ಜಿಲ್ಲಾ ಮಟ್ಟದಲ್ಲೂ ಮುಂದುವರಿದಿದೆ. ಅನುಷ್ಠಾನದಲ್ಲೂ ರಾಜ್ಯ ಹಿಂದೆ ಉಳಿದಿದೆ. ಉದ್ಯೋಗ ಖಾತ್ರಿ ಯೋಜನೆ ಹಿಂದಿನ ವರ್ಷ ಕಳೆದ ವರ್ಷ 2300 ಕೋಟಿ, ಅದಕ್ಕೂ ಹಿಂದಿನ ವರ್ಷಕ್ಕೆ 1450 ಕೋಟಿ, ಈ ವರ್ಷ 2600 ಕೋಟಿ ಅನುದಾನ ಲಭ್ಯವಾಗಿದೆ.
ಸಚಿವರಿಗೆ ಇರುವ ಅಗಾಧವಾದ ಅಧಿಕಾರದಿಂದ ಇಲಾಖೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕೆ ಅಗತ್ಯವಾಗಿ ಬೇಕಾಗಿರುವುದು ಬದ್ಧತೆ, ಅಧಿಕಾರಿಗಳನ್ನು ಆಶ್ರಯಿಸದಿರುವುದು, ನೇರವಾಗಿ ಅಧಿಕಾರಿ, ಸಿಬ್ಬಂದಿಗಳೊಡನೆ ಸಂಪರ್ಕ ಹೊಂದಿ ಮುಂದುವರಿಯುವ ಮನಸ್ಥಿತಿ. ತಪ್ಪು ಮಾಡಿದವರನ್ನು ಕಠಿಣವಾಗಿ ಮುಲಾಜಿಲ್ಲದೆ ಶಿಕ್ಷಿಸುವುದು, ಗ್ರಾಮೀಣಾಭಿವೃದ್ಧಿ ಇಲಾಖೆ ನಿಯೋಜನೆ ಮೇಲೆ ಬರುವ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಚಿವರು ಮುಂದಾಗಬೇಕು. ಯಾವ ಶಾಸಕರು ಮತ್ತು ಸಚಿವರುಗಳ ಪ್ರಭಾವಕ್ಕೆ ಒಳಗಾಗದಿರುವುದೇ ಮುಂತಾದ ಕಠಿಣ ಕ್ರಮಗಳಿಂದ ಆಡಳಿತವನ್ನು ಸುಧಾರಿಸಲು ಸಾಧ್ಯವಿದೆ. ವರ್ಗಾವಣೆಯ ವಿಷಯದಲ್ಲಿ ನಿಷ್ಠುರವಾಗಿ ವರ್ತಿಸಬೇಕು. ಹಾಗಾದಲ್ಲಿ ಮಾತ್ರವೇ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಮನಸ್ಸಿದ್ದಲ್ಲಿ ಮಾರ್ಗವಿದೆ.
-ಎಸ್. ದಕ್ಷಿಣಾಮೂರ್ತಿಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


