ಅಂಕಣಗಳು

ಮಗನ ಭರವಸೆ ಮಾತಿಗೆ ಗಂಗಾಮಾತೆ ದನಿಗೂಡಿಸಿದಾಗ...

ಮಗನ ಭರವಸೆ ಮಾತಿಗೆ ಗಂಗಾಮಾತೆ ದನಿಗೂಡಿಸಿದಾಗ...
Published On :

ಉಸಿರುಗಟ್ಟಿ ಸಾಯುವಂತಿದ್ದ ನನ್ನ ಕಣ್ಣೆದುರು ಕನಸೊಂದು ಕುಣಿದಿದೆ ಹಾಗೂ ಅದನ್ನು ಈ ಬಾರಿ ಬಾಚಬಲ್ಲೆ ಎಂಬ ಭರವಸೆಯೂ ಜತೆಯಾಗುತ್ತಿದೆ! ಏಕೆಂದರೆ ಈಗ ನನ್ನ ಆರೈಕೆಗೆ ಬಂದವನು ಅಂಕಿ-ಅಂಶಗಳ ನೆರಳಿನಲ್ಲಿ, ಪಾರಿಭಾಷಿಕ ಪದಗಳ ಮೆರುಗಿನಲ್ಲಿ, ಇದೋ ಇಷ್ಟು ಹಣ ಎತ್ತಿಟ್ಟಿರುವೆ ಎಂಬ ಹಮ್ಮಿನಲ್ಲಿ ಮಾತಾಡುತ್ತಿಲ್ಲ. ಆತ ನಾನು ನಿನ್ನ ಮಗ ಹಾಗೂ ನಿನ್ನನ್ನು ಉದ್ಧರಿಸುವುದು ನನ್ನ ಕರ್ತವ್ಯ ಎಂದು ಉತ್ಕಟವಾಗಿ ಹೇಳಿದ್ದಾನೆ. ಹಾಗೆಂದೇ ಅವನ ಮಾತುಗಳು ಹೊಸ ಆಸೆ ಹುಟ್ಟಿಸುತ್ತಿವೆ.
ಅಂದಹಾಗೆ, ನರಳುತ್ತಿರುವ ನನ್ನ ಹೆಸರು ಗಂಗೆ. ಮಗನೆಂದು ಬಳಿಸಾರಿ ಬಂದಿರುವಾತ ಅಪೂರ್ವ ಜನಾದೇಶದೊಂದಿಗೆ ಪ್ರಧಾನಿ ಗದ್ದುಗೆಗೆ ಏರುತ್ತಿರುವ ನರೇಂದ್ರ ಮೋದಿ. ಇಲ್ಲ, ಈತನ ಮಾತೂ ಹುಸಿಯಾಗುವುದಾದರೆ ನನ್ನನ್ನು ಬದುಕಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಕ್ಷಮಿಸಿ, ನನ್ನನ್ನು ಸ್ವಚ್ಛ ಮಾಡುವುದಾಗಿ ಹೇಳಿ ಕೋಟಿಗಳ ಲೆಕ್ಕದಲ್ಲಿ ಮಾತನಾಡಿದ ಈ ಹಿಂದಿನ ಕೆಲಸಕ್ಕೆ ಬಾರದವರೆಲ್ಲ ನನ್ನಲ್ಲಿ ಅಂಥದೊಂದು ನಿರಾಸೆ ಹುಟ್ಟಿಸಿಬಿಟ್ಟಿದ್ದಾರೆ.
ನನ್ನನ್ನು ಸ್ವಚ್ಛಗೊಳಿಸಲು 1985ರಲ್ಲಿ ರಾಜೀವ್ ಗಾಂಧಿಯವರು ಗಂಗಾ ಆ್ಯಕ್ಷನ್ ಪ್ಲಾನ್(ಜಿಎಪಿ) ಜಾರಿಗೆ ತಂದರಾದರೂ, ಆದಾದ 15 ವರ್ಷಗಳ ನಂತರ, ಅಂದರೆ 31 ಮಾರ್ಚ್ 2000ದ ವೇಳೆಗೆ 901.71 ಕೋಟಿ ರುಪಾಯಿ ಖರ್ಚಾಯಿತಷ್ಟೇ ಹೊರತು, ಕೊಳಚೆ ಕಡಿಮೆಯಾಗಲಿಲ್ಲ. ಇಲ್ಲಿಯವರೆಗೂ ಜಿಎಪಿಯ ಪ್ರಯತ್ನಗಳು ವಿಫಲವಾಗುತ್ತಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ನೀರನ್ನು ತೆಳುವಾಗಿಸಲು(ಅನ್ಯ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಿ) ಮತ್ತು ಕಸ ವಿಲೇವಾರಿ ಪ್ರಕ್ರಿಯೆ ಕೈಗೊಳ್ಳಲು ಮತ್ತು ಎರಡನೆಯದಾಗಿ, ಉದ್ಯಮಗಳು ರಾಸಾಯನಿಕಗಳನ್ನು ನದಿಯಲ್ಲಿ ವಿಸರ್ಜಿಸದಂತೆ ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರದೇ ಇರುವುದು. ಈ ಎರಡೂ ಕೆಲಸ ಮಾಡಲು ರಾಜೀವ್ ಗಾಂಧಿಯಿಂದ ಹಿಡಿದು ಮುರಳಿ ಮನೋಹರ್ ಜೋಶಿಯವರೆಗೂ ಎಲ್ಲರೂ ವಿಫಲರಾಗಿದ್ದಾರೆ.  ಗಂಗಾನದಿ ಜಲಾನಯನ ಪ್ರಾಧಿಕಾರ (ಃಎಖಇಆ)ರದ ಯೋಜನೆಯಡಿಯಲ್ಲಿ ಈಗ 2589 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆಯಾದರೂ  ಈ ಹಣವೂ ಪೋಲಾಗಲಿದೆ ಎನ್ನುವ ಅನುಮಾನವೂ ಇಲ್ಲದಿಲ್ಲ. ಒಟ್ಟಿನಲ್ಲಿ ಒಳರಾಜಕೀಯದಲ್ಲಿ, ಅಧಿಕಾರದಾಟದಲ್ಲೇ ಹೆಚ್ಚು ಬ್ಯುಸಿಯಾಗಿರುವ ಗಂಗಾನದಿ ಜಲಾನಯನ ಪ್ರಾಧಿಕಾರ (ಃಎಖಇಆ), ಜಲ ಸಂಪನ್ಮೂಲ ಸಚಿವಾಲಯದ ಬೆಂಬಲವಿಲ್ಲದೇ ಬಾಡಿಹೋಗಿರುವ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (ಃಖಈಕಿ)ಯಿಂದಾಗಿ ನಾನು ಮಲಿನವಾಗುತ್ತಲೇ ಇದ್ದೇನೆ.
ಪಾಟ್ನಾ, ಕನೌಜ್, ಕಾರಾ, ಕಾಶಿ, ಅಲಹಾಬಾದ್, ಮುರ್ಶಿದಾಬಾದ್ ಮುಂಗರ್, ಬಹರಂಪುರ್ ಮತ್ತು ಕೋಲ್ಕತ್ತಾದ ಲಕ್ಷಾಂತರ ಜನರ ಬದುಕಿಗೆ ಆಸರೆಯಾದವಳು ನಾನು. ಕೋಟ್ಯಂತರ ಹಿಂದುಗಳ ರಕ್ತದಲ್ಲಿ ಒಂದಾಗಿದ್ದೇನೆ. ನಾನಿಲ್ಲದ ಭಾರತವನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿದೆಯೇ?
ಆದರೂ 400 ಮಿಲಿಯನ್ ಜನರ ಬದುಕಿಗೆ ಆಧಾರವಾಗಿರುವ ನನ್ನನ್ನು ಈವರೆಗೆ ಈ ದೇಶ ನೋಡಿಕೊಂಡಿದ್ದಾರೂ ಹೇಗೆ? ಅರೆಬೆಂದ ಶವಗಳ, ಕಾರ್ಖಾನೆಗಳ ವಿಷಕಾರೀ ರಾಸಾಯನಿಕಗಳ ಆಗರವನ್ನಾಗಿಸಿದರು. ನನ್ನ ಕುರಿತು ಜೋಕು ಹುಟ್ಟಿಕೊಂಡಿದೆ: "ಸಾವಿನಂಚಿನಲ್ಲಿರುವವನ ಬಾಯಿಗೆ ಗಂಗಾ ಜಲವನ್ನು ಹಾಕುವುದಕ್ಕೆ ಕಾರಣ ಆತ ಸ್ವರ್ಗ ತಲುಪಲಿ ಎಂದಲ್ಲ, ಬೇಗ ಸಾಯಲಿ ಎಂದು!"
 ಆದರೆ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಸಾಂಕ್ರಾಮಿಕ ರೋಗಗಳಾದ ಅತಿಸಾರ ಮತ್ತು ಕಾಲರಾಕ್ಕೆ ಕಾರಣವಾಗಿದ್ದ ನೀರುವಾಹಿ ಬ್ಯಾಕ್ಟೀರಿಯಾಗಳು ನನ್ನನ್ನು ಸೇರುತ್ತಿದ್ದಂತೆಯೇ ಸತ್ತು ಹೋಗುತ್ತಿದ್ದವು! ನನ್ನ ಈ ಖಊಔಋ ಕ್ಖಿಖಐಋಐಈಆಖಿಐಕಃ ಕ್ಷಮತೆಯನ್ನು ನೋಡಿ ವೈಜ್ಞಾನಿಕ ವಲಯ ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ನನ್ನಲ್ಲಿನ ಆಮ್ಲಜನಕದ ಪ್ರಮಾಣ ಬೇರೆ ನದಿಗಳಿಗೆ ಹೋಲಿಸಿದರೆ ಬಹಳ ಹೆಚ್ಚಿರುವುದು ಇದಕ್ಕೆ ಕಾರಣ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿತ್ತು.
ಆದರೆ 2007ರ ವೇಳೆಗೆ ಪ್ರಪಂಚದ 5 ಅತಿ ಕಲುಷಿತ ನದಿಗಳಲ್ಲಿ ಸ್ಥಾನ ಪಡೆಯುವ ವೇಳೆಗಾಗಲೇ ನನ್ನ ಶಕ್ತಿಯೇ ಉಡುಗಿಹೋಗಿತ್ತು. ಇದಕ್ಕೆ ಕಾರಣ- ಉತ್ತರ ಪ್ರದೇಶದ ಉತ್ತರ ಸಮತಟ್ಟು ಭಾಗ ಬಹುತೇಕ ಕೃಷಿಯನ್ನು ಅವಲಂಬಿಸಿದೆ. ಅಲ್ಲಿ ಬಳಸಲಾಗುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಕೊನೆಗೆ ಸೇರುವುದು ನನ್ನೊಡಲನ್ನೇ. ಇನ್ನು ಪ್ರತಿ ವರ್ಷ ನನ್ನ ತಟದಲ್ಲಿ ಸುಮಾರು 32,000 ದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತದೆ. ಇದರಿಂದ ಉದ್ಭವವಾಗುವ ಅಸ್ಥಿಯ ಪ್ರಾಮಾಣ 300 ಟನ್‌ಗಳಷ್ಟಿದೆ. ಇದು ಸಾಲದೆಂಬಂತೆ, 200 ಟನ್‌ಗಳಷ್ಟು ಅರೆಬೆಂದ ದೇಹದ ಅಂಗಾಂಗಗಳು ಸೇರುತ್ತಿವೆ. ಇತ್ತೀಚಿನ ಸಮೀಕ್ಷೆಯೊಂದು ಸುಮಾರು 3,000 ದೇಹಗಳು ಗಂಗೆಯಲ್ಲಿ ತೇಲುತ್ತಿರುವುದನ್ನು ಪತ್ತೆ ಹಚ್ಚಿತ್ತು!
ವಾರಾಣಸಿಯಲ್ಲೇ ವಾರ್ಷಿಕ 300-350 ಮಿಲಿಯನ್ ಲೀಟರ್ ಕೊಳಚೆ ನೀರು ನನ್ನ ಕರುಳು ಕೊರೆಯುತ್ತಿದೆ. ಅಲ್ಲಿನ ಕೊಳಚೆ ಶುದ್ಧೀಕರಣ ಘಟಕಕ್ಕೆ 100 ಮಿಲಿಯನ್ ಲೀಟರ್ ಕೊಳಚೆ ನೀರನ್ನಷ್ಟೇ ಶುದ್ಧಗೊಳಿಸುವ ಸಾಮರ್ಥ್ಯವಿದೆ. ಆ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಇವೆಲ್ಲದರಿಂದಾಗಿ ರುದ್ರಪ್ರಯಾಗ, ದೇವಪ್ರಯಾಗ ಮತ್ತು ವಾರಾಣಸಿಗಳಲ್ಲಿ ಬಯೋಲಾಜಿಕಲ್ ಆಕ್ಸಿಜನ್ ಡಿಮಾಂಡ್(ಬಿಓಡಿ) ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಪರಿಣಾಮವಾಗಿ ಜನರಿಗಷ್ಟೇ ಅಲ್ಲದೆ, ಆ ನನ್ನೊಡಲಲ್ಲಿರುವ 'ಗ್ಯಾಂಗಸ್ ಫಿಶ್‌' ಎಂದೇ ಪ್ರಖ್ಯಾತವಾದ ಡಾಲ್ಫಿನ್ ಮತ್ತು ಸುಮಾರು 140 ಪ್ರಬೇಧದ ಮೀನುಗಳು ಅಪಾಯ ಎದುರಿಸುತ್ತಿವೆ. ನನ್ನ ತಟದ ಉದ್ದಕ್ಕೂ ಇರುವ ರಾಸಾಯನಿಕ ಕೈಗಾರಿಕೆಗಳು, ಪ್ರಾಣಿವಧೆಯ ಕೇಂದ್ರಗಳು, ಆಸ್ಪತ್ರೆಗಳು ಮುಲಾಜಿಲ್ಲದೇ ತ್ಯಾಜ್ಯಗಳನ್ನೆಲ್ಲ ನನ್ನತ್ತ ಹರಿಸುತ್ತವೆ.
ಇಂಥ ಭೀಕರ ಸ್ಥಿತಿಯಲ್ಲಿರುವ ನಾನು 'ಗಂಗಾ ಮಾ' ಅಂತ ಬಳಿ ಸಾರಿರುವ ಮೋದಿಯನ್ನು ಆಸೆಗಣ್ಣಿನಿಂದ ನೋಡಿದ್ದೇನೆ. ಹಾಗೆಂದು ಈ ಮಗನ ಬಗ್ಗೆಯೂ ನನಗೆ ಅನುಮಾನಗಳಿವೆ. ಕೈಗಾರಿಕೆಗಳ ಲಾಬಿಗಳನ್ನೆಲ್ಲ ಮೀರಿ ನಿಜಕ್ಕೂ ನನ್ನನ್ನು ಸ್ವಚ್ಛಗೊಳಿಸಿಯಾನಾ? ಹೆಣ ತೇಲಿಸುವ ಕೆಲಸ ಬಿಡಿ ಎಂದು ಈತ ಆದೇಶ ಹೊರಡಿಸಿದರೆ ಇವನನ್ನು ಬೆಂಬಲಿಸಿದವರೇ ಸಂಪ್ರದಾಯದ ಹೆಸರಲ್ಲಿ ಮುನಿಸಿಕೊಂಡಾರಾ ಎಂಬೆಲ್ಲ ಪ್ರಶ್ನೆಗಳಿವೆ. ಆದರೆ ಈ ಹಿಂದಿನ ರಾಜಕಾರಣಿಗಳಲ್ಲಿಲ್ಲದ ಭರವಸೆಯ ಅಂಶಗಳು ಈತನಲ್ಲಿವೆ. ನದಿ ಜೋಡಣೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಉತ್ತಮ ಉದಾಹರಣೆ ಗುಜರಾತ್‌ನಲ್ಲಿದೆ. ಸಾಬರಮತಿ ನದಿ ಕಲುಷಿತಗೊಂಡು ಬತ್ತಿಹೋಗುತ್ತಿರುವ ಸಮಯದಲ್ಲೇ, ನರ್ಮದಾ ನದಿಯಿಂದ ನೀರು ಹರಿಸಿ ಅದರ ಪುನಶ್ಚೇತನವನ್ನು ಮೋದಿ ಸರ್ಕಾರ ಮಾಡಿತು. ಈಗ ಸಾಬರಮತಿ ದೊಡ್ಡ ಪ್ರವಾಸಿ ಸ್ಥಾನವಾಗಿ ಬದಲಾಗಿದೆ. ಇನ್ನು ರಸ್ತೆ ಅಗಲೀಕರಣ ಮತ್ತು ಮೂಲಸೌಕರ್ಯ ಅನುಷ್ಠಾನದ ವೇಳೆ, ಅಕ್ರಮವಾಗಿ ತಲೆ ಎತ್ತಿದ್ದ ಅನೇಕ ಮಂದಿರಗಳನ್ನೂ ಮೋದಿ ಸರ್ಕಾರ ಮುಲಾಜಿಲ್ಲದೇ ತೆಗಿಸಿ ಹಾಕಿತ್ತು. ಆಗಲೂ ಸಾಂಪ್ರದಾಯಿಕ ಹಿಂದುಗಳು ಮುನಿಸಿಕೊಂಡರೂ ಮೋದಿ ತಮ್ಮ ಮತಬ್ಯಾಂಕ್‌ಗೆ ಹೆದರಿ ಸುಮ್ಮನಾಗಲಿಲ್ಲ. ಆದ್ದರಿಂದಲೇ ಈಗ ವಾರಾಣಸಿಯಲ್ಲಿ ಭಕ್ತಾದಿಗಳು ಮಾಡುವ ಮಾಲಿನ್ಯವನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಆತ ಹಿಂದೇಟು ಹಾಕಲಾರ ಎಂದೆನಿಸುತ್ತದೆ. ಮೋದಿ ಮಾತ್ರ ನನ್ನನ್ನು ತಾಯಿ ಎಂದುಕೊಂಡರೆ ಯೋಜನೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗದು. ಸಾಮಾನ್ಯರೂ ಆತನಂತೆ ಯೋಚಿಸಿ ಆತನ ಪ್ರಯತ್ನಗಳಿಗೆ ಕೈಜೋಡಿಸಬೇಕು.
ನನ್ನನ್ನು ಸಾಯಲು ಬಿಡುವುದೆಂದರೆ ನಿಮ್ಮ ಹಿಂದುತ್ವ, ನಾಗರೀಕತೆ, ಮಾನವತೆ ಎಲ್ಲವನ್ನೂ ಸಾಯಲುಬಿಟ್ಟಂತೆ. ನನ್ನ ಮಡಿಲಲ್ಲಿ ಮಗನಾಗಿ ನಿಂತಿರುವ ಮೋದಿ ಈ ಮಾತುಗಳನ್ನೆಲ್ಲ ನಿಮಗೆ ಅರ್ಥ ಮಾಡಿಸುತ್ತಾನೆಂದು ನಾನಾದರೂ ಕಾತರದಿಂದ ಕಾದಿದ್ದೇನೆ.


-ರಾಘವೇಂದ್ರ ಆಚಾರ್ಯ ಕನ್ನಡಪ್ರಭ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.