ನೆನಪ ನೌಕೆಯಲ್ಲಿ ನಗುತ್ತಾ ನಿಂತ ಕ್ಯಾಪ್ಟನ್

ಇಡೀ ದೇಶಕ್ಕೆ ದೇಶವೇ ಲೋಕಸಭೆ ಚುನಾವಣೆ ಎಂಬ ಮಹಾಸಮರದಲ್ಲಿ ...
ನೆನಪ ನೌಕೆಯಲ್ಲಿ ನಗುತ್ತಾ ನಿಂತ ಕ್ಯಾಪ್ಟನ್
Updated on: 

ಎಲ್ಲರ ಜೀವನದಲ್ಲೂ ಅವೆಷ್ಟೋ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಕೆಲವೇ ಕೆಲವರು ಚಿರಸ್ಥಾಯಿಯಾಗಿ ನಿಲ್ಲುತ್ತಾರೆ. ಹೆಜ್ಜೆ ಹೆಜ್ಜೆಗೆ ಗುರುವಿನಂತೆ, ಸ್ನೇಹಿತನಂತೆ, ಕೊರಳ ಗೆಳೆಯನಂತೆ ಸಾಥಿಯಾಗುತ್ತಾರೆ. ಅಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಡುತ್ತಾರೆ. ಅವರಿಂದ ಪಡೆದ ಪ್ರೇರಣೆ ನಮ್ಮನ್ನು ಮುನ್ನಡೆಸುತ್ತಿರುತ್ತದೆ, ನಮಗೆ ಅರಿವಿಲ್ಲದಂತೆ.


ಇಡೀ ದೇಶಕ್ಕೆ ದೇಶವೇ ಲೋಕಸಭೆ ಚುನಾವಣೆ ಎಂಬ ಮಹಾಸಮರದಲ್ಲಿ ತಲ್ಲೀನವಾಗಿರುವ ಸಂದರ್ಭದಲ್ಲಿ ಸಾಯಬಾರದು. ನಿಧನರಾದ ವ್ಯಕ್ತಿ ರಾಜಕಾರಣಕ್ಕೆ ಸಂಬಂಧಿಸಿರದಿದ್ದರೆ, ಅವರು ಅದೆಷ್ಟೇ ಗಣ್ಯರಾಗಿದ್ದರೂ ಅವರ ಸಾವು ಪತ್ರಿಕೆಗಳ ಒಳಪುಟಗಳಲ್ಲಿ ಚಿಕ್ಕದಾಗಿ ಹಾಗೂ ಟಿವಿಯಲ್ಲಿ ಸ್ಕ್ರಾಲಿಂಗ್ (ಟಿ.ವಿ. ಪರದೆ ಮೇಲೆ ಕೆಳಗೆ ಸರಿದು ಹೋಗುವ ಸಾಲು ಸುದ್ದಿ) ನ್ಯೂಸ್ ಆಗಿ ವರದಿಯಾಗುತ್ತದೆ. ಟಿವಿಯಲ್ಲಿ ದಿನವಿಡಿ ನೆನೆಯುವ ವ್ಯಕ್ತಿಗಳು ಕೆಲಕಾಲವಷ್ಟೇ ಗಮನ ಸೆಳೆಯುತ್ತಾರೆ.
ಲೋಕಸಭಾ ಚುನಾವಣೆ ಕಾವು ಪಡೆದುಕೊಂಡ ಸಂದರ್ಭದಲ್ಲಿ, ಇಡೀ ದೇಶ ನರೇಂದ್ರ ಮೋದಿಯವರ ಮೋಡಿಗೆ ಸಿಲುಕಿದಾಗ ಮತ್ತೊಬ್ಬ ಮೋದಿ-ರುಸ್ಸಿ ಮೋದಿ -ನಿಧನರಾಗಿದ್ದು ಗಮನ ಸೆಳೆಯುವ ಸುದ್ದಿಯಾಗಲಿಲ್ಲ. ಇಂಗ್ಲಿಷ್ ನ್ಯೂಸ್ ಚಾನೆಲ್‌ಗಳಿಗೆ ರುಸ್ಸಿ ಮೋದಿ ನಿಧನ 'ಸರಿದು ಹೋಗುವ ಸಾಲು ಸುದ್ದಿ'ಯಾಯಿತು. ಟಾಟಾ ಕುಟುಂಬದ ಅತ್ಯಂತ ನಿಕಟವರ್ತಿಗಳಲ್ಲೊಬ್ಬರಾದ ಮೋದಿ, ಟಾಟಾ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ದೇಶದಲ್ಲಿ ಸ್ಟೀಲ್ ಉದ್ಯಮದ ಬೆಳವಣಿಗೆಗೆ ಅವರು ನೀಡಿದ ಯೋಗದಾನ ಅನುಪಮವಾದುದು. ಮೂಲತಃ ಕನಸುಗಾರರಾಗಿದ್ದ ಮೋದಿ, ಕಂಪನಿಯನ್ನು ಬೆಳೆಸಿದ ರೀತಿ ಅಸಾಧಾರಣವಾದುದು. ದೇಶದುದ್ದಗಲಕ್ಕೂ ಅವರಿಗೆ ಅಸಂಖ್ಯ ಸ್ನೇಹಿತರಿದ್ದರು. ಅಧಿಕಾರದಲ್ಲಿದ್ದವರ ಜತೆ ಅವರಿಗೆ ಗೆಳೆತನವಿತ್ತು. ಬಹುಮುಖ ಹಾಗೂ ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದ ರುಸ್ಸಿ ಮೋದಿಯವರು ತಮ್ಮ ನಿಧನದಲ್ಲಿ ಕನಿಷ್ಠ ಒಂದು ಪುಟದ (ಇಂಗ್ಲಿಷ್ ಪತ್ರಿಕೆಗಳಿಗೆ, ಅದರಲ್ಲೂ ವಿಶೇಷವಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ) ಸುದ್ದಿಗೆ ಅರ್ಹರಾಗಿದ್ದರು. ಆದರೆ ನರೇಂದ್ರ ಮೋದಿ ಕೇಂದ್ರಿತ ಲೋಕಸಭೆ ಚುನಾವಣೆಯಲ್ಲಿ ದೇಶ ಮುಳುಗಿದ್ದರಿಂದ ರುಸ್ಸಿ ಮೋದಿಯವರ ನಿಧನ ದೊಡ್ಡ ಸುದ್ದಿಯಾಗಲೇ ಇಲ್ಲ.
ಇದೇ ರೀತಿ ಮತ್ತೊಬ್ಬ ಗಣ್ಯ ಸಾಧಕನ ನಿಧನವೂ ಸುದ್ದಿಯಾಗಲಿಲ್ಲ. ಅವರ ಹೆಸರು ಕ್ಯಾಪ್ಟನ್ ಸಿ.ಪಿ. ಕೃಷ್ಣನ್ ನಾಯರ್. ಇವರು ಕ್ಯಾಪ್ಟನ್ ನಾಯರ್ ಎಂದೇ ಜನಪ್ರಿಯ. ಲೀಲಾ ಗ್ರುಪ್ ಆಫ್ ಹೋಟೆಲ್‌ನ ಮಾಲೀಕರು. ನಮ್ಮ ದೇಶದ ಪಂಚತಾರಾ ಹೋಟೆಲ್‌ಗಳ ಪೈಕಿ ಲೀಲಾ ಹೋಟೆಲ್‌ಗೆ ಅಗ್ರಸ್ಥಾನ. ಐಟಿಸಿ ಹೋಟೆಲ್‌ಗೆ ಗುಣಮಟ್ಟ ಹಾಗೂ ಶ್ರೇಷ್ಠತೆಯಲ್ಲಿ ಪೈಪೋಟಿ ನೀಡುವ ಹೋಟೆಲ್ ಸ್ಥಾಪಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಇದರಲ್ಲಿ ಅವರು ಯಶಸ್ವಿಯಾಗಿದ್ದು ಅವರ ಹೋರಾಟದ ಫಲ. ಹಾಗೆ ನೋಡಿದರೆ, ಅವರು ಮೂಲತಃ ಹೋಟೆಲ್ ಉದ್ಯಮಿಯಾಗಿರಲಿಲ್ಲ. ಅವರು ಈ ರಂಗಕ್ಕೆ ಕಾಲಿಟ್ಟಿದ್ದು ಅವರಿಗೆ ಅರವತ್ತೈದು ವರ್ಷ ತುಂಬಿದ ಬಳಿಕ. ಎಲ್ಲರೂ ಸಾಮಾನ್ಯವಾಗಿ ನಿವೃತ್ತರಾಗುವ ವಯಸ್ಸಿನಲ್ಲಿ ಅವರು ಹೊಸ ಸಾಹಸಕ್ಕೆ ಧುಮುಕಿದ್ದರು. ತಮ್ಮ ಪತ್ನಿ ಹೆಸರಿನಲ್ಲಿ ಆರಂಭಿಸಿದ ಐಷಾರಾಮಿ ಪಂಚತಾರಾ ಹೋಟೆಲ್‌ಗಳು, ಅವುಗಳ ವೈಭವ, ಆತಿಥ್ಯಗಳಿಂದ ಬಹುಬೇಗ ಹೆಸರುವಾಸಿಯಾಯಿತು.
ಕೇರಳದ ತ್ರಿಸೂರ್‌ನ ಕುಗ್ರಾಮವೊಂದರ ಬಡಕುಟುಂಬದಲ್ಲಿ ಹುಟ್ಟಿದ ಕ್ಯಾಪ್ಟನ್ ನಾಯರ್, ಮಿಲಿಟರಿ ಸೇರಿ ಆನಂತರ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೊದಲ ಬಾರಿಗೆ ನಾನು ಅವರನ್ನು 2001ರಲ್ಲಿ ಗೋವಾದ ಅವರ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದೆ. ಸುಮಾರು ಎರಡು ಗಂಟೆ ಕಾಲ ಅವರ ಜೀವನ, ಅನುಭವಗಳನ್ನು ಹಂಚಿಕೊಂಡಿದ್ದರು. ಮರುದಿನ ಬೆಂಗಳೂರಿಗೆ ವಾಪಸ್ಸಾಗಿ ಮನೆ ಸೇರುವ ಮೊದಲೇ ಹೂಗುಚ್ಛದೊಂದಿಗೆ ಪತ್ರ ನನ್ನ ಎದುರು ನೋಡುತ್ತಿತ್ತು. ಅದಾದ ಬಳಿಕ ಈ ಹದಿಮೂರು ವರ್ಷಗಳಲ್ಲಿ ನಾನು ಏನಿಲ್ಲವೆಂದರೂ ಅವರನ್ನು ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಭೇಟಿ ಮಾಡಿರಬಹುದು. ಪ್ರತಿಸಲ ಭೇಟಿ ಮಾಡಿದಾಗಲೂ ಎರಡೆರಡು ಗಂಟೆಗಳ ಕಾಲ ನಗು, ಮಾತು, ಪುಷ್ಕಳ ಭೋಜನ, ಆತ್ಮೀಯತೆ, ಅಗಾಧ ಮಮತೆ, ಪ್ರೀತಿಯನ್ನು ಮೊಗೆದು ಕೊಡುತ್ತಿದ್ದರು. ನನ್ನಿಂದ ಅವರಿಗೆ ದಮಡಿ ಪ್ರಯೋಜನವೂ ಆಗಬೇಕಿರಲಿಲ್ಲ.
ಪ್ರಾಯಶಃ ನಮ್ಮಿಬ್ಬರನ್ನು ಹಿಡಿದಿಟ್ಟ ವೈಶಿಷ್ಟ್ಯವೂ ಅದೇ ಆಗಿದ್ದಿರಬಹುದು. ಬೆಂಗಳೂರಿಗೆ ಬಂದಾಗ ಸವುಡು ಸಿಕ್ಕರೆ ಫೋನ್ ಮಾಡುತ್ತಿದ್ದರು ಅಥವಾ ಅವರ ಕಾರ್ಯದರ್ಶಿಯಿಂದ ಇ-ಮೇಲ್ ಬರುತ್ತಿತ್ತು. ಊಟಕ್ಕೆ ಬರುವಂತೆ ಹೇಳುತ್ತಿದ್ದರು. ಹೋಟೆಲ್ ತಲುಪುವ ವೇಳೆಗೆ ಅವರೇ ಸ್ವಾಗತಕ್ಕೆ ನಿಂತಿರುತ್ತಿದ್ದರು. ನನಗೆ ತೀವ್ರ ಮುಜುಗರವಾಗುತ್ತಿತ್ತು. ಅವರು ಪ್ರೀತಿ, ಆತ್ಮೀಯತೆಯಲ್ಲಿ ತೋಯಿಸುತ್ತಿದ್ದರು. ಊಟದ ಟೇಬಲ್‌ನಲ್ಲಿ ಅವರೇ ಬಡಿಸುತ್ತಿದ್ದರು. ಈ ಖಾದ್ಯವನ್ನು ಹೇಗೆ ಸೇವಿಸಬೇಕು, ಅದನ್ನು ಮಾಡಿದ ವಿಧಾನವೇನು, ಎಂಬುದನ್ನೆಲ್ಲ ವಿವರಿಸುತ್ತಾ ಅತ್ಯಂತ ಸಮಾಧಾನದಿಂದ, ಮನಬಿಚ್ಚಿ ಮಾತಾಡುತ್ತಿದ್ದರು.
'ಕ್ಯಾಪ್ಟನ್ ನಾಯರ್, ಜೀವನದಲ್ಲಿ ನಿಮ್ಮಂತೆ ಆಗಬೇಕೆಂದರೆ ಏನು ಮಾಡಬೇಕು?' ಎಂದು ಕೇಳಿದರೆ, 'ನಿಮಗೆ ಅರವತ್ತೈದು ವರ್ಷ ತುಂಬಿದ ಬಳಿಕ ಹೇಳುತ್ತೇನೆ' ಎಂದು ಜೋರಾಗಿ ನಗುತ್ತಿದ್ದರು. 'ಹೇಳಿ ಪ್ಲೀಸ್‌' ಎಂದು ಒತ್ತಾಯಿಸಿದರೆ, 'ಬಹಳ ಸುಲಭ. ನೀವು ಮಾಡುವ ಕೆಲಸವನ್ನು, ನಿಮ್ಮ ಸುತ್ತಲಿನ ಜನರನ್ನು ಪ್ರೀತಿಸಿ. ನಮ್ಮಲ್ಲಿ ಒಳ್ಳೆಯತನವನ್ನು ತುಂಬಿಕೊಳ್ಳದೇ ನಾವು ಒಳ್ಳೆಯವರಾಗಲು ಸಾಧ್ಯವಿಲ್ಲ' ಎಂದು ಹೇಳುತ್ತಿದ್ದರು. ಅವರ ಈ ಮಾತು ನನ್ನಲ್ಲಿ ಇಂದಿಗೂ ಪ್ರತಿಧ್ವನಿಯಾಗುತ್ತಿರುತ್ತದೆ. ಸ್ನೇಹ, ಸಂಬಂಧದ ಮಹತ್ವ ಹಾಗೂ ವೈಶಿಷ್ಟ್ಯವನ್ನು ತಮ್ಮ ಸಾಂಗತ್ಯದಿಂದಲೇ ನನಗೆ ಬೋಧಿಸಿದ ಕ್ಯಾಪ್ಟನ್ ನಾಯರ್, ನನ್ನಂಥ ಅಸಂಖ್ಯ ಜನರ ಕಣ್ಣುಗಳಲ್ಲಿ ಎತ್ತರಕ್ಕೆ ನಿಂತಿದ್ದರೆ ಅದಕ್ಕೆ ಕಾರಣ ಇವೇ ಹೊರತು, ಅವರ ಪಂಚತಾರಾ ಹೋಟೆಲ್‌ಗಳಲ್ಲ. ಮಾತು ಮಾತಿಗೆ ನಗುವ, ನಗಿಸುವ ಅವರ ಜತೆ ಕೆಲ ಕಾಲ  ಕಳೆದರೆ ಅಪರಿಮಿತ ಲವಲವಿಕೆ, ಪ್ರೇರಣೆ, ಸ್ಫೂರ್ತಿ, ಜೀವನ ಪ್ರೀತಿಯನ್ನು ಮೊಗೆದುಕೊಳ್ಳಬಹುದಿತ್ತು. ಅಲ್ಲದೇ ನಾವು ಹೇಳುವ ಕತೆಗಳನ್ನು ಅಷ್ಟೇ ಆಸಕ್ತರಾಗಿ ಕೇಳಿ, ಎಷ್ಟೋ ದಿನಗಳ ನಂತರ ಸಿಕ್ಕಾಗ ಅವುಗಳನ್ನು ನೆನಪಿಸುತ್ತಾ, ಮೆಲುಕು ಹಾಕುತ್ತಾ ನಮಗೇ ಅಚ್ಚರಿ ಮೂಡಿಸುತ್ತಿದ್ದರು.
'ನಿಮ್ಮ ಜೀವನದಲ್ಲಿ ನಾನು ನೆಲೆಸದಿದ್ದರೆ, ನನ್ನ ಜೀವನದಲ್ಲಿ ನೀವು ನೆಲೆಸಬೇಕೆಂದು ನಾನು ಬಯಸಬಾರದು' ಎಂದು ಹೇಳುತ್ತಿದ್ದ ಕ್ಯಾಪ್ಟನ್ ನಾಯರ್, ನಗುವಿನ ನಡುವೆಯೇ ಜೀವನ ಸಂದೇಶಗಳನ್ನು ಉದುರಿಸುತ್ತಾ ಹೋಗುತ್ತಿದ್ದರು. 'ನಿಮ್ಮ ಸಾಧನೆಗೆ ತೃಪ್ತಿಯಾದ ದಿನವೇ ನಿಮಗೆ ವಯಸ್ಸಾಯಿತು ಎಂದರ್ಥ. ನೋಡಿ ನನಗೆ ತೊಂಬತ್ತಾಯಿತು. ನಾನು ಸಾಧಿಸುವುದು ಇನ್ನೂ ಬಹಳಷ್ಟಿವೆ. ಉದಾಹರಣೆ ನಿಮ್ಮ ಜತೆ ಇಡೀ ದಿನ ಕಳೆಯಬೇಕಿದೆ' ಎಂದು ಎರಡು ವರ್ಷಗಳ ಹಿಂದೆ ಹೇಳಿದ ಮಾತು ನನ್ನ ಡೈರಿಯಲ್ಲಿ ಅವರ ನೆನಪಿನಂತೆ ಅಚ್ಚುಳಿದಿದೆ. ಮೊನ್ನೆ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆ ಪುಟಗಳನ್ನು ತಿರುವಿ ಹಾಕಿದರೆ ಒತ್ತರಿಸಿ ಬಂದ ಕ್ಯಾಪ್ಟನ್ ನಾಯರ್ ನೆನಪು ಕಂಬನಿಯಾಗಿ ಕಪಾಳಕ್ಕಿಳಿದಿತ್ತು.
ಎಲ್ಲರ ಜೀವನದಲ್ಲೂ ಅವೆಷ್ಟೋ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಕೆಲವೇ ಕೆಲವರು ಚಿರಸ್ಥಾಯಿಯಾಗಿ ನಿಲ್ಲುತ್ತಾರೆ. ಹೆಜ್ಜೆ ಹೆಜ್ಜೆಗೆ ಗುರುವಿನಂತೆ, ಸ್ನೇಹಿತನಂತೆ, ಕೊರಳ ಗೆಳೆಯನಂತೆ ಸಾಥಿಯಾಗುತ್ತಾರೆ. ಅಷ್ಟೇ ಅಲ್ಲ, ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಡುತ್ತಾರೆ. ಅವರಿಂದ ಪಡೆದ ಪ್ರೇರಣೆ ನಮ್ಮನ್ನು ಮುನ್ನಡೆಸುತ್ತಿರುತ್ತದೆ, ನಮಗೆ ಅರಿವಿಲ್ಲದಂತೆ.
ನನ್ನ ಬದುಕಿನಲ್ಲಿ ಬಂದು, ಶಾಶ್ವತ ನಿಂತ ಧೀಮಂತ ವ್ಯಕ್ತಿ ಈ ಕ್ಯಾಪ್ಟನ್ ನಾಯರ್. ಅವರ ಸಮಕ್ಷಮಕ್ಕೆ ಬಂದ ಎಲ್ಲರ ಅನುಭವವೂ ಇದೇ ಆಗಿದ್ದೀತು. ಒಂದು ಭೇಟಿ, ಪರಿಚಯ, ಸ್ನೇಹದ ಚಾದರ ಹೊದ್ದರೆ ಸಂಬಂಧ ಅದೆಷ್ಟು ಬೆಚ್ಚಗಿದ್ದೀತು ಎಂಬುದಕ್ಕೆ ಅವರೊಂದಿಗಿನ ನನ್ನ ಒಡನಾಟವೇ ನಿದರ್ಶನ. ಮನೆಗೆ ಅಥವಾ ಹೋಟೆಲ್‌ಗೆ ಆಹ್ವಾನಿಸಿದ ಅತಿಥಿಗಳನ್ನು ಅವರು ಕಾರು ಹತ್ತಿಸುವ ತನಕ ಬಂದು ಉಪಚರಿಸುತ್ತಿದ್ದ ಪರಿಯೇ ವಿಶಿಷ್ಟವಾಗಿತ್ತು. ಅವರಂಥ ವ್ಯಕ್ತಿ ಜತೆಗಿನ ಸಂಬಂಧ ಸ್ನೇಹಕ್ಕಾಗಿ ನಮ್ಮ ಬಗ್ಗೆ ನಮಗೇ ಅಭಿಮಾನ, ಹೆಮ್ಮೆಯೂ ಆಗುತ್ತಿತ್ತು.
'ನಾವು ಬೇರೆಯವರ ಜೀವನದಲ್ಲಿ ನೆಲೆಸುವುದೆಂದರೆ ಇದೇ' ಎಂದು ಕ್ಯಾಪ್ಟನ್ ನಾಯರ್ ಹಲವಾರು ಬಾರಿ ಹೇಳಿದ ಮಾತು ಅವರ ಅನುಪಸ್ಥಿತಿಯಲ್ಲೂ ನನಗೆ ಪದೇ ಪದೆ ಕೇಳಿಸುತ್ತಿದ್ದರೆ ಅದಕ್ಕೆ ಕಾರಣ ಅವರು ನನ್ನ ಜೀವನದಲ್ಲೂ ನೆಲೆಸಿರುವುದರಿಂದ. ಅವರದೇ ಆದ ರೀತಿಯಲ್ಲಿ ನನ್ನ ಜೀವನವನ್ನೂ ಮುನ್ನಡೆಸಿದ ಕ್ಯಾಪ್ಟನ್ ಅವರು, ನನ್ನಂಥ ಅವೆಷ್ಟೋ ಜನರನ್ನು 'ಲೀಲಾ'ಜಾಲವಾಗಿ ತಮ್ಮ ವ್ಯಕ್ತಿತ್ವದಿಂದ ಅರಳಿಸಿದವರು.
ಕ್ಯಾಪ್ಟನ್ ನಾಯರ್, ನೀವು ನಿಧನರಾಗಿಲ್ಲ. ನಿಮ್ಮ ನಗು ಇನ್ನೂ ಕೇಳಿಸುತ್ತಿದ್ದೆ. ನಿಮ್ಮ ವ್ಯಕ್ತಿತ್ವ ನಮ್ಮನ್ನು ಈಗಲೂ ಪ್ರೇರೇಪಿಸುತ್ತಿದೆ. ನೀವು ಚಿರಾಯು.'
ಒಂದು ಪತ್ರ ಹಾಗೂ ಸಂದೇಶ
ಕೆಲ ದಿನಗಳ ಹಿಂದೆ ಬ್ರಿಟನ್‌ನ ಗ್ರೀನ್‌ಪಾರ್ಟಿಯ ನಾಯಕಿ ಕೆರೊಲಿನ್ ಲೂಕಾಸ್ ಅವರಿಗೆ ಒಂದು ಪತ್ರವನ್ನು ಬರೆದಿದ್ದೆ. ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಗ್ರೀನ್ ಪಾರ್ಟಿ ಬಹಳ ಕ್ರಿಯಾಶೀಲವಾಗಿದೆ. ಲೂಕಾಸ್ ಆ ಪಕ್ಷದ ನಾಯಕಿ. ಆಕೆ ಎರಡು ಅವಧಿಗೆ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯೆಯಾಗಿದ್ದಳು. ಅಲ್ಲದೇ ಬ್ರಿಟಿಷ್ ಪಾರ್ಲಿಮೆಂಟ್‌ಗೂ ಆಯ್ಕೆಯಾಗಿದ್ದಳು. ಬ್ರಿಟನ್‌ನ ಪ್ರಪ್ರಥಮ 'ಗ್ರೀನ್ ಎಂಪಿ' ಎಂಬ ಅಗ್ಗಳಿಕೆಗೂ ಪಾತ್ರಳಾದವಳು.
ಹತ್ತು ದಿನಗಳೊಳಗೆ ಅವಳಿಂದ ಉತ್ತರವೂ ಬಂತು. ನಮ್ಮ ಪತ್ರದ ಸಾರಾಂಶ ಇಲ್ಲಿ ಅಪ್ರಸ್ತುತ. ಆಕೆಯ ಲೆಟರ್‌ಹೆಡ್ ಹಿಂಬದಿಯಲ್ಲಿ ನಾಲ್ಕು ಸಾಲುಗಳಿದ್ದವು. ಅಮೆರಿಕದ ಖ್ಯಾತ ವೈದ್ಯಕೀಯ ಸಂಶೋಧಕ ಜೋನಾರ್ ಬರೆದ ವಾಕ್ಯಗಳಿದ್ದವು- 'ಜಗತ್ತಿನಲ್ಲಿರುವ ಎಲ್ಲ ಕ್ರಿಮಿ-ಕೀಟಗಳು, ಹುಳು ಹಪ್ಪಟೆಗಳು ಕಣ್ಮರೆಯಾದರೆ, ಐವತ್ತು ವರ್ಷಗಳೊಳಗೆ ಭೂಮಿಯ ಮೇಲಿನ ಎಲ್ಲ ಜೀವಿಗಳೂ ಕಣ್ಮರೆಯಾಗುವುದು ದಿಟ. ಅದೇ ಈ ಭೂಮಿ ಮೇಲಿರುವ ಎಲ್ಲ ಮನುಷ್ಯರೇನಾದರೂ ಕಣ್ಮರೆಯಾದರೆ, ಸಕಲ ಜೀವಿಗಳು ಸಮೃದ್ಧವಾಗಿ ಬೆಳೆಯುತ್ತವೆ.'


-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com