ಚುನಾವಣೆಯ ನಂತರ ಗಮನಾರ್ಹ ವಿದ್ಯಮಾನಗಳು ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಾ ಸಾಗುತ್ತಿವೆ. ನರೇಂದ್ರ ಮೋದಿ ಬಹಳ ಎಚ್ಚರಿಕೆಯಿಂದ, ಲೆಕ್ಕಾಚಾರ ಮಾಡಿ ಪ್ರಧಾನಿ ಹುದ್ದೆಗೆ ಹತ್ತಿರವಾಗುತ್ತಾ ಸಾಗುತ್ತಿದ್ದಾರೆ. ಈ ವೇಳೆಯಲ್ಲೇ ಅಷ್ಟೇ ಜಾಗರೂಕತೆಯಿಂದ ಸರಿಯಾದ ಪದಗಳನ್ನು ಬಳಸಿ, ಸರಿಯಾದ ಇಮೇಜನ್ನು ನಮ್ಮ ಮುಂದಿರಿಸುತ್ತಿದ್ದಾರೆ. ಅವರ ಸುತ್ತಲೂ ಹಬ್ಬಿರುವ ಜನಪ್ರಿಯ ನಿರೀಕ್ಷೆಗಳಲ್ಲಿ ಎಷ್ಟನ್ನು ಈಡೇರಿಸುವಲ್ಲಿ ಅವರಿಗೆ ಸಾಧ್ಯವಾಗಲಿದೆ ಎನ್ನುವುದನ್ನು ಈ ಕ್ಷಣದಲ್ಲಂತೂ ಅಳೆಯಲು ಸಾಧ್ಯವಿಲ್ಲ. ಆದರೆ ಅವರ ಮೊದಲ ಹೆಜ್ಜೆಯಂತೂ ಭರವಸೆ ಹುಟ್ಟಿಸುವಂತಿದೆ.
ಇನ್ನೊಂದೆಡೆ ಕುಸಿದು ಕುಳಿತ ಪಕ್ಷಗಳು ಬೇರೆಯದ್ದೇ ಕಥೆ ಹೇಳುತ್ತಿವೆ. ಕಾಂಗ್ರೆಸ್ ಅಂತೂ, ಹಿರಿ ತಲೆಗಳ ರಾಜಿನಾಮೆಯ ಅಧ್ಯಾಯ ರಚಿಸಿ ನಂತರ ಜನತೆಯ 'ಆಗ್ರಹದ ಮೇರೆಗೆ' ಆ ಕೆಲಸವನ್ನು ತಡೆಹಿಡಿದ ನಾಟಕವಾಡಿ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಳ್ಳುತ್ತಿದೆ. ತನ್ನ ತಲೆಗೆ ಏನು ಬಂದು ಅಪ್ಪಳಿಸಿತು ಎನ್ನುವುದು ಆ ಪಕ್ಷಕ್ಕೆ ಅರ್ಥವಾಗುತ್ತಿಲ್ಲ ಅಥವಾ ಅರ್ಥವಾಗಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗೇ, ಭಟ್ಟಂಗಿಗಳೆಲ್ಲರೂ ನಾಯಕತ್ವ ಬದಲಾಗಬೇಕು ಎಂದು ಕೂಗಾಡುತ್ತಿದ್ದಾರೆ. ಆದರೆ ಗಾಂಧಿಯ ಬದಲು ಮತ್ತೊಬ್ಬ ಗಾಂಧಿಯೇ ಬರಬೇಕು ಎನ್ನುವುದು ಅವರ ಆಗ್ರಹ. ರಾಹುಲ್ ಬದಲು ಬೇರೆ ಯಾರು ಬರಬೇಕು ಎನ್ನುವ ಉತ್ತರಕ್ಕೆ ಅವರಿಗೆ ಪ್ರಿಯಾಂಕಾ ಹೆಸರಿನ ಬಳಿಯಷ್ಟೇ ಕ್ರಮಿಸಲು ಸಾಧ್ಯವಾಯಿತು. ಪ್ರಜಾಪ್ರಭುತ್ವವನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ಎದುರಿಸದಿದ್ದರೆ ಈ ಹಳೆಯ ಪಾರ್ಟಿಗೆ ಭವಿಷ್ಯವಂತೂ ಇಲ್ಲ. ಇದು ಅಬ್ದುಲ್ಲಾಗಳಿಂದ ಹಿಡಿದು ಬಾದಲ್ಗಳವರೆಗೆ, ಯಾದವರಿಂದ ಹಿಡಿದು ಪವಾರ್ಗಳವರೆಗೆ, ಕುಟುಂಬ ರಾಜಕಾರಣವನ್ನು ಪೋಷಿಸುವ ಎಲ್ಲಾ ದುಷ್ಕರ್ಮಿಗಳಿಗೂ ಅನ್ವಯವಾಗುತ್ತದೆ. ಒಂದು ಕಾಲನ್ನು ಬಿಜೆಪಿಯ ದೋಣಿಯಲ್ಲಿ, ಇನ್ನೊಂದನ್ನು ಕಾಂಗ್ರೆಸ್ನ ದೋಣಿಯಲ್ಲಿ ಇಟ್ಟು, ಇದರೊಟ್ಟಿಗೆ ಮಹಾರಾಜ-ಮಹಾರಾಣಿ ಎಂಬ ತತ್ವದ ಮೇಲೆ ನಿಂತಿರುವ ಸಿಂಧಿಯಾಗಳೂ ಇದೇ ಪಟ್ಟಿಯಲ್ಲಿ ಬರುತ್ತಾರೆ.
ಸೋತು ಸುಣ್ಣುವಾದ ಇನ್ನುಳಿದ ಪಕ್ಷಗಳೂ ಕೂಡ ಕಾಂಗ್ರೆಸ್ನಂತೆಯೇ ತಮ್ಮ 'ಅಹಂ'ಗಾದ ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇದಕ್ಕೆ ಉತ್ತರಪ್ರದೇಶದ ಪ್ರಾದೇಶಿಕ ಪಕ್ಷಗಳು ಉತ್ತಮ ಉದಾಹರಣೆ. 80 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಸೋತರೂ ಆಡಳಿತ ಸಮಾಜವಾದಿ ಪಕ್ಷ ಹಿರಿಯ ನಾಯಕತ್ವದತ್ತ ಬೆರಳು ತೋರಿಸಲು ಸಿದ್ಧವಿಲ್ಲ. ಪಕ್ಷದ ಕಳಪೆ ಸ್ಥಾನಕ್ಕೆ ನೀವೇ ಕಾರಣ ಎನ್ನುತ್ತಾ ತನ್ನ 36 ಸಚಿವರಿಂದ ಅಧಿಕಾರ ಕಸಿದುಕೊಂಡಿದೆ. ಇವರೆಲ್ಲ ಪಕ್ಷವನ್ನು ನಗೆಪಾಟಲಿಗೀಡುಮಾಡಿದ್ದಾರೆ ಎನ್ನುವುದು ಸಮಾಜವಾದಿ ಪಕ್ಷದ ಅಸಮಾಧಾನ. ಪಾಪ, ಇವರದ್ದಾದರೂ ಏನು ತಪ್ಪು? ವರ್ಗಾವಣೆ ಮಾಡುವುದು ಮತ್ತು ನೇಮಕಾತಿ ಮಾಡುವುದಷ್ಟೇ ಈ ಸಚಿವರ ಕೆಲಸವಾಗಿತ್ತು. ಆ ಪಕ್ಷ ಕುಖ್ಯಾತಿ ಪಡೆಯುವುದಕ್ಕೆ ಹಿರಿಯ ನಾಯಕತ್ವದ ಅಡ್ಡಾದಿಡ್ಡಿ ಕೆಲಸಗಳೇ ಕಾರಣ. ಆದರೆ ಅವರನ್ಯಾರೂ ಮುಟ್ಟಲಿಲ್ಲ.
ಇನ್ನು ಡಕ್ ಔಟ್ ಆದ ನಂತರ ಬಹುಜನ ಸಮಾಜವಾದಿ ಪಕ್ಷ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಒಂದೊಮ್ಮೆ ಈ ಪಕ್ಷದಲ್ಲಿ ಬೇರೂರಿದ್ದ ಜಾತೀಯತೆ ಅಭಿವೃದ್ಧಿಗೆ ಅಡ್ಡಿಯಾಗಿ ಪರಿಣಮಿಸಿತ್ತು, ಅದರಲ್ಲೂ ಮುಖ್ಯವಾಗಿ, ಅಭಿವೃದ್ಧಿಯನ್ನು ಅಹಂಕಾರದ ಪ್ರತೀಕಗಳಾದ ಸ್ಮಾರಕಗಳನ್ನು, ಮೂರ್ತಿಗಳನ್ನು ಸ್ಥಾಪಿಸುವುದು ಎಂದು ವ್ಯಾಖ್ಯಾನಿಸಿದ್ದಾಗ. ಈ ಬಾರಿ ಮತ್ತೆ ಜಾತಿ ಸಿದ್ಧಾಂತವನ್ನು ತಲೆಗೇರಿಸಿಕೊಂಡು 21 ಬ್ರಾಹ್ಮಣರಿಗೆ(ಮಾಯಾವತಿಯವರ ಬ್ರಾಹ್ಮಣ ಸಲಹೆಗಾರನ ಸಲಹೆಯ ಮೇರೆಗೆ) ಮತ್ತು 19 ಮುಸಲ್ಮಾನರಿಗೆ(ಮುಸಲ್ಮಾನ ಸಲಹೆಗಾರನ ಸಲಹೆ) ಟಿಕೆಟ್ ಕೊಡಲಾಗಿತ್ತು. ಇನ್ನೆಷ್ಟು ಕೆಳಮಟ್ಟಕ್ಕೆ ಭಾರತೀಯ ರಾಜಕೀಯ ಇಳಿಯಬಲ್ಲದು ನೋಡಿ?: ಮಾಯಾವತಿ ತಮ್ಮ ಆಪ್ತರ ಸೋಲಿನ ಹೊಣೆಯನ್ನು ವಲಯ ಸಂಯೋಜಕರು ಮತ್ತು ಪಕ್ಷದ ಸಮಿತಿಗಳ ಮೇಲೆ ಹಾಕಿಬಿಟ್ಟರು. ಅಂಬೇಡ್ಕರ್ ಮಾಯಾವತಿಯವರ ಆರಾಧ್ಯವ್ಯಕ್ತಿಯಂತೆ! ಆದರೆ ಅಂಬೇಡ್ಕರ್ ಅವರು ಮಾಯಾವತಿಯಂಥವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಮ್ಮೆ ಹೇಳಿದ್ದರು: "ಪ್ರಜಾಪ್ರಭುತ್ವವೆನ್ನುವುದು ಅಲೋಕತಾಂತ್ರಿಕವಾದ ಭಾರತದ ಮಣ್ಣ ಮೇಲಿನ ಹೊದಿಕೆಯಷ್ಟೆ!"
ಅಂಬೇಡ್ಕರ್ ಮತ್ತು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ರಂಥ ಸಾಂವಿಧಾನಿಕ ವಿದ್ವಾಂಸರು ಈ ನೆಲದಲ್ಲಿ ಉನ್ನತ ತತ್ವಗಳನ್ನು ಪ್ರತಿಪಾದಿಸಿದ್ದರೂ, ಜವಾಹರ್ ಲಾಲ್ ನೆಹರೂ ಹಾಗೂ ವಲ್ಲಭಭಾಯ್ ಪಟೇಲ್ರಂಥ ನಾಯಕರು ಮೇರುಮಟ್ಟದ ಉದಾಹರಣೆಗಳನ್ನು ನೀಡಿಹೋಗಿದ್ದರೂ, ಭಾರತವಿಂದು ತಮ್ಮ ಕುಟುಂಬ ಮತ್ತು ತಾವು ಕೊಬ್ಬಿ ಬೆಳೆಯುವುದನ್ನೇ ಉದ್ದೇಶವಾಗಿಸಿಕೊಂಡಿರುವ ನಾಯಕರ ಹಿಡಿತಕ್ಕೆ ಸಿಲುಕಿರುವುದು ದುರದೃಷ್ಟಕರ. ಮಿ. ಕ್ಲೀನ್ ಎಂದು ಕರೆಸಿಕೊಂಡ ವ್ಯಕ್ತಿಯೊಬ್ಬ ತನ್ನ ಸರ್ಕಾರದಡಿಯಲ್ಲಿ ದೇಶವನ್ನು ಬೆಚ್ಚಿಬೀಳಿಸುವಂಥ ಭ್ರಷ್ಟಾಚಾರ ನಡೆದರೂ ತುಟಿಪಿಟಕ್ ಅನ್ನಲಿಲ್ಲ. ಈ ಕಾರಣಕ್ಕಾಗಿಯೇ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಭಾರತೀಯರೆಲ್ಲ ಸೇರಿ ಮತದಾನ ಮಾಡಿ, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮತದಾರರು ಯಾವ ಪರಿಯ ಬದಲಾವಣೆ ತಂದಿದ್ದಾರೋ ನೋಡಿ. ಸೋನಿಯಾಗಾಂಧಿಯಿಂದ ನರೇಂದ್ರ ಮೋದಿ! ಈ ಸರ್ಕಾರಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಕುಸಿದುಬಿದ್ದ ಘನತೆಯನ್ನು ಮತ್ತೆ ಎತ್ತಿ ನಿಲ್ಲಿಸುವ ಶಕ್ತಿಯಿದೆ ಎನ್ನಲಾಗುತ್ತಿದೆ. ಇದು ಸಾಧ್ಯವಾಗಲಿದೆಯೇ ಎನ್ನುವ ಪ್ರಶ್ನೆಗೆ, ಮೋದಿ ಈಗ ನಡೆಯುತ್ತಿರುವ ಹಾದಿಯಲ್ಲೇ ನಡೆಯುವರೇ ಅಥವಾ ಅಗೋಚರ ಶಕ್ತಿಗಳು ಆಟ ಶುರುವಾಗುತ್ತದೆಯೇ ಎನ್ನುವುದರಲ್ಲಿ ಉತ್ತರ ಅಡಗಿದೆ. ಎಲ್ಲಾ ರೀತಿಯಿಂದಲೂ ನಾವು ಇತಿಹಾಸದ ಪ್ರಮುಖ ತಿರುವಿನಲ್ಲಿ ನಿಂತಿದ್ದೇವೆ.
ಟಿ.ಜೆ.ಎಸ್ ಜಾರ್ಜ್