ಮೋದಿ ಜಾಗದಲ್ಲಿ ಆನಂದಿ

ನರೇಂದ್ರ ಮೋದಿ ತೆರವು ಮಾಡಿದ ಗುಜರಾತ್ ಮುಖ್ಯಮಂತ್ರಿ ಹುದ್ದೆಯನ್ನು ತುಂಬಿದ್ದಾರೆ ಆನಂದಿಬೆನ್. ಗುಜರಾತ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಶ್ರೇಯಸ್ಸಿಗೆ ಭಾಜನರಾಗಿರುವವರು ಇವರು. 'ಗುಜರಾತ್ ಮಾದರಿ'ಯನ್ನು ಬ್ರಾಂಡ್ ಮಾಡಿದ ವ್ಯಕ್ತಿಯ ಜಾಗವನ್ನು ಇನ್ನೊಬ್ಬರು ತುಂಬುವುದು ಎಂಬುದು ಜನಪ್ರಿಯತೆ ಮಾನದಂಡದಲ್ಲಿ ಕಷ್ಟದ ವಿಚಾರವಾಗಿದ್ದಿರಬಹುದು. ಆದರೆ, ಆನಂದಿಬೆನ್ ವ್ಯಕ್ತಿತ್ವವೂ ತನ್ನದೇ ಆದ ಹಲವು ಆಕರ್ಷಕ ಆಯಾಮಗಳನ್ನು ಹೊಂದಿದೆ. ಅದು ಗುಜರಾತ್ನ ಯಶೋಗಾಥೆಯ ನಿರಂತರತೆಗೆ ಒಂದು ಭರವಸೆಯನ್ನು ಕಟ್ಟಿಕೊಡುತ್ತಿದೆ. ನಾನಾ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಚುರಗೊಂಡಿರುವ ಆನಂದಿಬೆನ್ ಕುರಿತ ಬರಹ- ಮಾಹಿತಿಗಳನ್ನು ಸೋಸುತ್ತಿದ್ದಂತೆ ಅವರ ವ್ಯಕ್ತಿಚಿತ್ರ ಹೀಗೆಲ್ಲ ತೆರೆದುಕೊಳ್ಳುತ್ತ ಹೋಗುತ್ತದೆ.
----
1941ರ ನವೆಂಬರ್ 21ರಂದು ಮೆಹ್ಸನಾದ ಖರೋದ್ ಎಂಬ ಹಳ್ಳಿಯಲ್ಲಿ ಹುಟ್ಟಿದವರು ಆನಂದಿ. ಅವತ್ತಿನ ಕಾಲಮಾನದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದೆಂದರೆ ತ್ರಾಸದ ಕೆಲಸವೇ ಆಗಿತ್ತು. ಅದೃಷ್ಟವಷಾತ್ ಆನಂದಿ ಅವರ ತಂದೆ-ತಾಯಿ ಈ ವಿಷಯದಲ್ಲಿ ಸ್ಪಷ್ಟತೆ ಹೊಂದಿದ್ದರು. ಆನಂದಿಗೆ ಉತ್ತಮ ಶಿಕ್ಷಣ ಒದಗಿಸುವುದು ಅವರ ಆದ್ಯತೆಯಾಗಿತ್ತು. ಆನಂದಿ ಐದನೇ ತರಗತಿಗೆ ಸಮೀಪದ ಶಾಲೆ ಸೇರಿಕೊಂಡಾಗ ಅಲ್ಲಿ ಇವರೊಬ್ಬರೇ ವಿದ್ಯಾರ್ಥಿನಿ. ಉಳಿದಂತೆ 700 ವಿದ್ಯಾರ್ಥಿಗಳಿದ್ದರು. ಹುಡುಗರ ಶಾಲಾ ಸಾಮ್ರಾಜ್ಯದಲ್ಲಿ ಏಕಮಾತ್ರ ಬಾಲಿಕೆ ಆನಂದಿ! ಆದರೆ ಆ ವಾತಾವರಣವೇನೂ ಆನಂದಿಯವರ ಧೈರ್ಯ ಕಸಿಯಲಿಲ್ಲ. ಮುಂದೆ ಸಹ ಕಲಿಕೆಯುದ್ದಕ್ಕೂ ಆಟೋಟ ಮತ್ತು ಪಾಠಗಳನ್ನು ಸರಿದೂಗಿಸಿಕೊಂಡುಹೋದ ವಿದ್ಯಾರ್ಥಿನಿ ಎಂಬ ಶ್ರೇಯಸ್ಸನ್ನೇ ಅವರು ಪಡೆದುಕೊಂಡರು. ಅಥ್ಲೆಟಿಕ್ಸ್ನಲ್ಲಿ 'ವೀರಬಾಲಾ' ಪ್ರಶಸ್ತಿ ಬಾಚಿಕೊಂಡ ಹೆಗ್ಗಳಿಕೆ ಅವರದ್ದಾಗಿತ್ತು. 1960ರಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಗೆ ಬಿಲ್ವಾಯಿ ಕಾಲೇಜು ಸೇರಿಕೊಂಡಾಗಲೂ ಹುಡುಗಿಯರ ಬೆಂಚಿನಲ್ಲಿ ಆನಂದಿಬೆನ್ ಏಕಾಂಗಿ. 1965ರಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿಕ್ಷಕಿಯಾಗುವ ಕನಸನ್ನು ಬೆನ್ನುಹತ್ತಿ ಮಾಸ್ಟರ್ಸ್ ಇನ್ ಎಜ್ಯುಕೇಶನ್ ಪದವಿ ಪಡೆದರು. ಸ್ನಾತಕೋತ್ತರ ಪದವಿ ಓದುವ ವೇಳೆಗೆಲ್ಲ ಮಫತ್ ಪಟೇಲ್ ಅವರೊಂದಿಗೆ ವಿವಾಹವಾಗಿತ್ತು. ಶಿಕ್ಷಣದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸುವ ವೇಳೆಗೆಲ್ಲ ಸಂಜಯ್ ಮತ್ತು ಅನಾರ್ ಎಂಬ ಅವರಿಬ್ಬರು ಮಕ್ಕಳ ಪೋಷಣೆಯ ಜವಾಬ್ದಾರಿಯೂ ಇತ್ತು. ಅವೆಲ್ಲದರ ನಡುವೆಯೂ ವಿಸ್ನಗರ್ ಮಹಿಳಾ ವಿಕಾಸಗೃಹದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿಧವೆಯರಿಗೆ ಕೌಶಲ ತರಬೇತಿ ನೀಡುತ್ತಿದ್ದರು ಎಂಬ ಮಾಹಿತಿಯನ್ನು ಗಮನಿಸಿದಾಗ ಆ ವೇಳೆಗಾಗಲೇ ಆನಂದಿಬೆನ್ರಲ್ಲಿ ಸಂಘಟನಾ ಸಾಮರ್ಥ್ಯ ಒಡಮೂಡಿತ್ತು ಎಂಬುದು ನಿಖರವಾಗುತ್ತದೆ.
ಇವೆಲ್ಲ ಸಾಧ್ಯವಾಗುವುದರಲ್ಲಿ ಪತಿ ಮಫತ್ ಪಟೇಲ್ ಸಹಕಾರವೂ ಒದಗಿದ್ದಿರಬೇಕು. ಕಳೆದ ದಶಕದಿಂದ ಆನಂದಿಬೆನ್ ಗುಜರಾತ್ ಸರ್ಕಾರದಲ್ಲಿ ಮೋದಿ ನಂತರದ ಸ್ಥಾನದಲ್ಲಿ ಎಂಬಂತೆ ತೊಡಗಿಸಿಕೊಂಡಿದ್ದರಿಂದಲೋ ಏನೋ, ಪತಿ-ಪತ್ನಿ ಬೇರೆ ಬೇರೆ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ಹಾಗಂತ ದಾಂಪತ್ಯದಲ್ಲಿ ತೊಂದರೆ ಎಂದೇನಲ್ಲ. ನರೇಂದ್ರ ಮೋದಿ ತಮ್ಮ ಸಂಬಂಧಿಕರು- ಕುಟುಂಬದವರೆಲ್ಲರಿಂದ ಒಂದು ಅಂತರದಲ್ಲೇ ಇದ್ದು ಹೇಗೆ ಆಡಳಿತದಲ್ಲಿ ವ್ಯಸ್ತರಾದರೋ ಅದೇ ಹಾದಿಯಲ್ಲಿ ಆನಂದಿಬೆನ್ ಕೂಡ ಇದ್ದರು ಎಂದು ಅರ್ಥೈಸಬಹುದು. ಬಹುಶಃ ಮೋದಿಯವರಿಗೆ ಪರಮಾಪ್ತರಾಗಲು ಈ ಅಂಶವೂ ಕಾರಣ ಇದ್ದಿರಬಹುದು. ಅದಿರಲಿ, ಇತ್ತೀಚೆಗೆ ಮೋದಿ ಪ್ರಧಾನಿ ಹುದ್ದೆ ಪಕ್ಕಾ ಆಗುತ್ತಲೇ ಗುಜರಾತ್ಗೆ ಆನಂದಿಬೆನ್ ಎಂಬುದೂ ಸ್ಪಷ್ಟವಾಗಿತ್ತು. ಆ ಸಂದರ್ಭದಲ್ಲಿ ಆನಂದಿಬೆನ್ ಪತಿ ಮಫತ್ ಪಟೇಲ್ ಕೂಡ ಸುದ್ದಿಯಾಗಿದ್ದರು. ಅವರ ಧ್ವನಿ ಅನುಸರಿಸಿದರೆ ಆನಂದಿಬೆನ್ರ ದಾಂಪತ್ಯಗೀತೆಯ ಸ್ವರಗಳನ್ನೂ ಆಯ್ದುಕೊಳ್ಳಬಹುದು. ಹೀಗಾಗಿ ಮಫತ್ ಪಟೇಲರನ್ನು ಸ್ವಲ್ಪ ವಿಚಾರಿಸಿಕೊಳ್ಳೋಣ.
----
ಈ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮಫತ್ ಪಟೇಲ್ ಬಿಜೆಪಿಗೆ ಮುಜುಗರವೊಂದನ್ನು ಸೃಷ್ಟಿಸಿದ್ದರು. ದೇಶವನ್ನು ಭ್ರಷ್ಟಾಚಾರಮುಕ್ತಗೊಳಿಸುವ ಶಕ್ತಿ ಆಮ್ಆದ್ಮಿ ಪಕ್ಷವೊಂದಕ್ಕೇ ಇದ್ದಂತಿದೆಯಾದ್ದರಿಂದ ತಾವು ಆ ಪಕ್ಷ ಸೇರುವ ಯೋಚನೆ ಮಾಡಿರುವುದಾಗಿ ಹೇಳಿದರು. ನಂತರ, ತಮ್ಮ ನಿರ್ಧಾರ ಹಿಂತೆಗೆದುಕೊಂಡರು. 'ನರೇಂದ್ರ ಮೋದಿ ಪ್ರಧಾನಿಯಾದರೆ ನಿಮ್ಮ ಪತ್ನಿಯೇ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ನೀವು ಹುಚ್ಚು ನಿರ್ಧಾರ ತೆಗೆದುಕೊಂಡರೆ ಆನಂದಿಬೆನ್ ಅದೃಷ್ಟದ ಮೇಲೆ ಅದು ಪ್ರತಿಕೂಲ ಬೀರೀತು' ಅಂತ ಕುಟುಂಬದವರೇ ಎಚ್ಚರಿಸಿದರಂತೆ. ಬಹುಶಃ ಫಲಿತಾಂಶ ಬಂದಿರುವ ಈ ಹೊತ್ತಿನಲ್ಲಿ ತಾನೆಷ್ಟು ದಡ್ಡನಂತೆ ಯೋಚಿಸಿದ್ದೆ ಅಂತ ಮಫತ್ ಪಟೇಲರಿಗೆ ಅನ್ನಿಸಿದ್ದಿರಬಹುದು. ಹಾಗಂತ ಮಫತ್ ಪಟೇಲರ ಬಿಜೆಪಿ ಸಖ್ಯ ಆಳಬೇರು ಹೊಂದಿರುವಂಥದ್ದು. ಮನೋವಿಜ್ಞಾನದ ಪ್ರೊಫೆಸರ್ ಆಗಿ ನಿವೃತ್ತರಾಗಿರುವ 77ರ ಹರೆಯದ ಮಫತ್ ಪಟೇಲರು ಜನಸಂಘದ ದಿನಗಳಿಂದಲೂ ಕೇಸರಿ ಪಡೆಯೊಂದಿಗೇ ಇದ್ದರು. ನರೇಂದ್ರ ಮೋದಿಯವರನ್ನು ಅವರ 37ನೇ ವಯಸ್ಸಿನ ಸುಮಾರಿಗೆ ಆರೆಸ್ಸೆಸ್, ಬಿಜೆಪಿಯ ಕೆಲಸಕ್ಕೆ ನಿಯುಕ್ತಿ ಮಾಡಿತ್ತು. ಆಗಲೇ ಮಫತ್- ಮೋದಿ- ಆನಂದಿಬೆನ್ ಕಾರ್ಯಕ್ಷೇತ್ರದಲ್ಲಿ ಒಟ್ಟಾಗಿದ್ದರು. ಆನಂದಿಯವರ ಕಾರ್ಯಕ್ಷಮತೆ ನೋಡಿದ ಬಿಜೆಪಿ, ವಿಶೇಷವಾಗಿ ಮೋದಿಯವರೇ ಅವರು ರಾಜಕೀಯಕ್ಕೆ ಬರುವಂತೆ ಒತ್ತಾಯ ತಂದರು ಎನ್ನಲಾಗುತ್ತದೆ. ಆಗ ಆನಂದಿಬೆನ್ ಹಿಂದೇಟು ಹಾಕಿದಾಗ ಮಫತ್ ಪಟೇಲರೇ ಮಡದಿಯನ್ನು ಆ ಆಹ್ವಾನ ಒಪ್ಪಿಕೊಳ್ಳುವಂತೆ ಪ್ರೇರೇಪಿಸಿದ್ದು. ನಂತರದ ದಿನಗಳಲ್ಲಿ ಆನಂದಿಬೆನ್ ರಾಜಕೀಯದಲ್ಲಿ ಅತ್ಯಂತ ಪ್ರಭಾವಿಯಾಗುತ್ತ ಹೋದಂತೆ ಪತಿ ಮಫತ್ ಪಟೇಲರಿಗೆ ಐಡೆಂಟಿಟಿ ಕ್ರೈಸಿಸ್ ಕಾಡಿದಂತಾಗಿ ಅದನ್ನು ಆಪ್ನಲ್ಲಿ ಹುಡುಕಿಕೊಳ್ಳುವ ಮನಸ್ಸು ಮಾಡಿದ್ದರೇ? ಅದೇನೆ ಇರಲಿ ಮಫತ್ ಹೇಳುವ ಆನಂದಿಬೆನ್ ಜತೆಗಿನ ತಮ್ಮ ಮದುವೆ ಕತೆ ಸ್ವಾರಸ್ಯಕರವಾಗಿದೆ.
ಮೇಲ್ವರ್ಗದ ಇವರಿಬ್ಬರೂ ಮದುವೆ ನಿರ್ಧಾರ ತೆಗೆದುಕೊಂಡಾಗ ಉಭಯ ಕುಟುಂಬದವರೂ ಅದ್ಧೂರಿ ಮದುವೆಗೆ ಯೋಜಿಸಿದ್ದರಂತೆ. ಆದರೆ ಮಫತ್ ಪಟೇಲರು ತಮ್ಮ ಮದುವೆ ಬಜೆಟ್ ನೂರು ರುಪಾಯಿಗಳು ಮಾತ್ರ ಎಂದು ಹೇಳಿದಾಗ ಎಲ್ಲರಿಗೂ ಸಿಟ್ಟು. ಹಳೆ ಚಪ್ಪಲಿ ಸಿಕ್ಕಿಸಿಕೊಂಡು 13 ಕಿ.ಮೀ. ನಡೆದು ಮದುವೆ ಮಂಟಪ ಮುಟ್ಟಿದಾಗ, ಮೈಮೇಲೆ 18 ತೊಲೆ ಬಂಗಾರ ಹಾಕಿಕೊಂಡ ನವವಧು ಆನಂದಿ. ಅಂಥ ಅಬ್ಬರಗಳಿದ್ದರೆ ಮದುವೆಯೇ ಬೇಡ ಎಂದಾಗ ಆನಂದಿಬೆನ್ ಅವೆಲ್ಲವನ್ನೂ ತ್ಯಜಿಸಿದರಂತೆ. ಆದರೆ ಬಂಧುವರ್ಗ ಈ ವರ್ತನೆಗೆ ಸಿಟ್ಟಾಗಿ ಇವರಿಗೆ ಮೀಸಲಾಗಿದ್ದ ಟಾಂಗಾವನ್ನೂ ಕೊಡದಿದ್ದಾಗ ಮತ್ತೆ 13 ಕಿ.ಮೀ. ಆನಂದಿಬೆನ್ರನ್ನು ನಡೆಸಿಕೊಂಡು ಮನೆ ಸೇರಿದ ಕತೆಯನ್ನು ಇತ್ತೀಚೆಗೆ ಮಾಧ್ಯಮದ ಮುಂದೆ ಹೇಳಿದ್ದಾರೆ ಮಫತ್. ಇದರಲ್ಲಿ ಆನಂದಿಬೆನ್ರ ದಾಂಪತ್ಯದ ಮಿಡಿತವಿದೆಯೋ ಮಫತ್ರ ಐಡೆಂಟಿಟಿ ತೊಳಲಾಟವೋ ನಮ್ಮ ಭಾವಕ್ಕೆ ದಕ್ಕುವುದನ್ನು ಎತ್ತಿಕೊಳ್ಳಬಹುದೆನಿಸುತ್ತದೆ.
----
1968ರಲ್ಲಿ ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿದ ಅವರು, ನಂತರ 11 ವರ್ಷ ಪ್ರಾಂಶುಪಾಲೆಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಪ್ರವಾಸಕ್ಕೆ ಹೋಗಿದ್ದಾಗ ತಮ್ಮಿಬ್ಬರು ವಿದ್ಯಾರ್ಥಿನಿಯರು ನರ್ಮದಾ ಸೆಳವಿಗೆ ಬಿದ್ದಾಗ ಇವರು ಧೈರ್ಯದಿಂದ ರಕ್ಷಿಸಿದರು. ಇದಕ್ಕೆ ಶೌರ್ಯ ಪ್ರಶಸ್ತಿ ಸಿಕ್ಕಿತು. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಬ್ಬರಿಂದಲೂ 'ಶ್ರೇಷ್ಠ ಶಿಕ್ಷಕಿ' ಪ್ರಶಸ್ತಿ ಪಡೆದಿದ್ದಾರೆ.
-----
ಗುಜರಾತ್ನಲ್ಲಿ 'ಸಾಹೆಬ್' ಎಂಬ ಪದ ಮೋದಿಯವರನ್ನು ಸೂಚಿಸುವಂತೆ, 'ಬೆನ್' ಎಂದರೆ ಅದು ಆನಂದಿಬೆನ್ ಎಂಬ ಮಾತಿದೆ. ಗುಜರಾತ್ ರಾಜಕೀಯದಲ್ಲಿ ಆನಂದಿಬೆನ್ ಎಷ್ಟರಮಟ್ಟಿಗೆ ಪ್ರಭಾವಿ ಎಂಬುದನ್ನು ಮಿಡ್ಡೇ ಸಂಪಾದಕ ಸಚಿನ್ ಕಾಲಭಾಗ್ ಅವರ ಟ್ವೀಟ್ ಒಂದು ಸೊಗಸಾಗಿ ವರ್ಣಿಸುತ್ತದೆ. 'ಆನಂದಿಬೆನ್ ಎಷ್ಟು ಗಟ್ಟಿಗರು ಎಂಬುದನ್ನು ಅರಿತುಕೊಳ್ಳಬೇಕಾದರೆ, ಗುಜರಾತ್ ರಾಜಕೀಯದಲ್ಲಿ ಪಕ್ಷದೊಳಗಿನ ಅವರ ಎದುರಾಳಿ ಮತ್ಯಾರೂ ಅಲ್ಲ, ಅಮಿತ್ ಶಾ ಎಂಬುದನ್ನು ಗಮನಕ್ಕೆ ತಂದುಕೊಳ್ಳಬೇಕು'!
ನರೇಂದ್ರ ಮೋದಿಯವರಿಗೆ ಜನಸಮುದಾಯದ ನಡುವೆ ಇರುವಂಥ ಚುಂಬಕ ಶಕ್ತಿಯ ಚಿಕ್ಕ ಪಾಲೂ ಆನಂದಿಬೆನ್ರಲ್ಲಿ ಇಲ್ಲ. ಆದರೆ ಅವರೊಬ್ಬರು ಕಠಿಣ ನಿರ್ದೇಶಕಿ. ವೃತ್ತಿಯಲ್ಲಿ ಶಾಲಾ ಶಿಕ್ಷಕಿ ಆಗಿದ್ದರಿಂದಲೋ ಏನೋ ಅವರಲ್ಲಿ ವ್ಯವಸ್ಥೆಯನ್ನು ನಿಯಂತ್ರಿಸುವ ಮುಖ್ಯೋಪಾಧ್ಯಾಯ ಲಕ್ಷಣ ಢಾಳಾಗಿದೆ. ಮೋದಿಯವರನ್ನು ಬಿಟ್ಟರೆ ಗುಜರಾತ್ನ ಅಧಿಕಾರಿ ವಲಯವನ್ನು ಉತ್ತಮ ಹಿಡಿತದಲ್ಲಿ ಇಟ್ಟುಕೊಂಡಿದ್ದವರೆಂದರೆ ಆನಂದಿಬೆನ್ ಅವರೇ. ಯಾವುದೇ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ಮಾತು ಕೇಳಿಸುವ ಗತ್ತು ಅವರದ್ದು ಅಂತಾರೆ ಬಲ್ಲವರು. ಹಿಡಿದ ಕೆಲಸವನ್ನು ಮುಗಿಸಿಯೇ ತೀರಬೇಕೆಂಬ ಪರಿಶ್ರಮಿ. ಬೆಳಗ್ಗೆ 5.30ಕ್ಕೆ ಯೋಗದೊಂದಿಗೆ ಪ್ರಾರಂಭವಾಗುವ ಅವರ ದಿನಚರಿಯೂ ಮೋದಿ ಅಭ್ಯಾಸವನ್ನೇ ಹೋಲುತ್ತದೆ. ಬಹುಶಃ ತಮ್ಮ ಗುಣದೊಂದಿಗೆ ಬಹುವಾಗಿ ಹೋಲುತ್ತಿದ್ದ ಆನಂದಿಬೆನ್ ಅವರ ಈ ಗುಣಗಳೇ ಮೋದಿಯವರಿಗೆ ಮೆಚ್ಚುಗೆಯಾಗಿ ಅವರನ್ನು ಪ್ರೋತ್ಸಾಹಿಸುವುದಕ್ಕೆ ಕಾರಣವಾಯಿತೆನ್ನಿಸುತ್ತದೆ.
ಬಿಜೆಪಿಯನ್ನು ಸೇರಿ ಗುಜರಾತ್ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದು 1987ರಲ್ಲಿ. 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ನಂತರ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಶಿಕ್ಷಣ ಸಚಿವಾಲಯವನ್ನು ಅಷ್ಟೇನೂ ತೃಪ್ತಿಕರವಾಗಿ ನಿಭಾಯಿಸಿಲ್ಲ ಎಂಬ ಸಣ್ಣ ಅಸಮಾಧಾನವೊಂದು ಅವರ ಕುರಿತಾಗಿ ಇರುವುದು ಹೌದು. ಆದಾಗ್ಯೂ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಜತೆಗಿದ್ದ ಖಾತೆಗಳನ್ನು ಬಿಟ್ಟರೆ, ಉಳಿದಂತೆ ಅತಿಹೆಚ್ಚು ಖಾತೆಗಳಿದ್ದದ್ದು ಆನಂದಿಬೆನ್ ಬಳಿಯೇ ಆಗಿತ್ತು.
ಇಷ್ಟು ವರ್ಷದ ನಿಷ್ಠೆ- ಪರಿಶ್ರಮಗಳ ಫಲವಾಗಿ ಮೋದಿ ತೆರವುಗೊಳಿಸಿದ ಜಾಗದಲ್ಲಿ ವಿರಾಜಮಾನರಾಗಿದ್ದಾರೆ ಆನಂದಿ.
ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


