ಮೋದಿ ನಡೆಯೀಗ ಸೆಕ್ಯುಲರ್ಗಳ ಗದ್ದಲ ಸೀಳಿದೆ
ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನರೇಂದ್ರ ಮೋದಿಯವರು ನವಾಜ್ ಷರೀಫ್ ಮತ್ತು ಹಮೀದ್ ಕರ್ಜಾಯಿ ಸಹಿತ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಮೂಲಕ ತಮ್ಮ ವಿರೋಧಿಗಳನ್ನು ಅವಾಕ್ಕಾಗಿಸಿದ್ದಾರೆ. ಏಕೆಂದರೆ ಈ ವಿರೋಧಿಗಳೆಲ್ಲ ನರೇಂದ್ರ ಮೋದಿಯವರಿಗೆ 'ಪಾಕಿಸ್ತಾನ ಮತ್ತು ಮುಸ್ಲಿಂ ವಿರೋಧಿ' ಎಂಬ ರೂಪಕೊಟ್ಟುಬಿಟ್ಟಿದ್ದರು. ಇಂಥ ವ್ಯಕ್ತಿಯ ಈ ನಡೆಯೀಗ ಸಿಡಿಲಿನಂತೆ ಆರ್ಭಟಿಸುತ್ತಾ ಸೆಕ್ಯುಲರ್ಗಳ ಗದ್ದಲವನ್ನು ಸೀಳಿಹಾಕಿದೆ. ಈ ಹೆಜ್ಜೆ ಈಗ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಿದೆ.
ವಾಸ್ತವದಲ್ಲಿ ಮೋದಿ ಸರ್ಕಾರದ ಪ್ರಮುಖ ಗುರಿ ಅರ್ಥವ್ಯವಸ್ಥೆ ಮತ್ತು ವಿದೇಶಾಂಗ ನೀತಿಯ ಸುಧಾರಣೆಯೇ ಆಗಿರಲಿದೆ. ಈ ವ್ಯಕ್ತಿಯ ಆಗಮನಮಾತ್ರದಿಂದಲೇ ರುಪಾಯಿಯ ಮೌಲ್ಯ ಮಜಬೂತ್ ಆಯಿತು. ಇನ್ನು ಜಪಾನ್, ಚೀನ, ಕೊರಿಯಾ ಮತ್ತು ಇನ್ನಿತರ ಪೂರ್ವ ಏಶಿಯಾ ರಾಷ್ಟ್ರಗಳಲ್ಲೂ ಹೊಸ ಉತ್ಸಾಹ ಹಾಗೂ ಆಸೆಯ ಸಂಚಾರವಾಗುತ್ತಿದೆ. ವಿಶ್ವದ ವರ್ತಮಾನ ಭೂದೃಶ್ಯದಲ್ಲಿ ಜಪಾನ್ ರಾಷ್ಟ್ರವನ್ನು ಭಾರತದ ಸರ್ವೋತ್ತಮ ಮಿತ್ರ ಎಂದು ಕರೆಯಬಹುದು. ಜಪಾನ್ನ ಪ್ರಧಾನಮಂತ್ರಿ ಶಂಜೋ ಅಬೆ ಎಲ್ಲರಿಗಿಂತಲೂ ಮೊದಲು ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅಭಿನಂದಿಸಿ, ತಮ್ಮ ರಾಷ್ಟ್ರಕ್ಕೆ ಭೇಟಿ ಕೊಡಲು ಆಹ್ವಾನ ನೀಡಿದ್ದಾರೆ. ಮೋದಿಯವರು ಜುಲೈ ತಿಂಗಳಲ್ಲಿ ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ಗೆ ಹೊರಡಲಿದ್ದಾರೆ. ಅವರು ಆ ರಾಷ್ಟ್ರಕ್ಕೆ ಹೋಗುವ ಮಾರ್ಗವನ್ನು ಜಪಾನ್ನ ಮೂಲಕ ಆರಿಸಿಕೊಳ್ಳಬಹುದು. ಈ ರೀತಿಯಲ್ಲಿ ಅವರ ಮೊದಲ ವಿದೇಶ ಯಾತ್ರೆ ಜಪಾನ್ನಿಂದಲೇ ಶುರುವಾಗಲಿದೆ.
ವೇಗವಾಗಿ ಬದಲಾಗುತ್ತಿರುವ ರಕ್ಷಣಾ ಸಮೀಕರಣದಿಂದಾಗಿ ಸಾಗರ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿರುವುದು ಖರೆ. ಹಿಂದು ಮಹಾಸಾಗರ, ದಕ್ಷಿಣ ಚೀನಾ ಮತ್ತು ಪ್ರಶಾಂತ ಮಹಾಸಾಗರ ಭವಿಷ್ಯದ ಯುದ್ಧ ನೀತಿಯ ಮುಖ್ಯ ಆಧಾರವಾಗಲಿವೆ. ಇವು ಭಾರತವನ್ನೂ ಒಳಗೊಂಡಂತೆ, ಪೂರ್ವ ದೇಶಗಳ ಅರ್ಥವ್ಯವಸ್ಥೆಯ ಮೇಲೂ ಪ್ರಭಾವ ಬೀರಲಿವೆ.
ಈ ಕಾರಣಕ್ಕಾಗೇ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡು ರಚಿತವಾದ ಬ್ರಿಕ್ಸ್ ಸಂಘಟನೆ ಈಗ ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿಯಂಥ ಬ್ರಿಟನ್ವುಡ್ ಸಂಸ್ಥಾನಗಳಿಗಿಂತಲೂ ಎಷ್ಟೋ ಪಟ್ಟು ಅಧಿಕ ಮಹತ್ವಪೂರ್ಣವಾಗಿದೆ. ಹಾಗಾಗೇ ಮೋದಿ ಸರ್ಕಾರ ತನ್ನ ಧ್ಯಾನವನ್ನು ಏಶಿಯನ್ ರಾಷ್ಟ್ರಗಳತ್ತಲೇ ಹೆಚ್ಚು ಕೇಂದ್ರೀಕರಿಸಬೇಕು.
ಅರುಣಾಚಲ ಪ್ರದೇಶಕ್ಕೆ ತೆರಳಿ ಚೀನಾದ ವಿಸ್ತರಣವಾದಿ ಗುಣಕ್ಕೆ ಬಹಿರಂಗವಾಗೇ ಸವಾಲು ಹಾಕಿದ ಭಾರತದ ಮೊದಲ ನಾಯಕ ನರೇಂದ್ರ ಮೋದಿ ಎಂದರೆ ತಪ್ಪಾಗಲಿಕ್ಕಿಲ್ಲ. ಇದುವರೆಗೂ ಯಾವೊಬ್ಬ ನಾಯಕನೂ ಕೂಡ ಈ ರೀತಿಯಲ್ಲಿ ಸ್ಪಷ್ಟ ಎಚ್ಚರಿಕೆಯನ್ನು, ಭಾಷಾಪ್ರಯೋಗವನ್ನು ಚೀನಾದ ವಿರುದ್ಧ ಮಾಡಿರಲಿಲ್ಲ. ಪಾಕಿಸ್ತಾನದ ಗ್ವಾದಾರ್ ಬಂದರಿನಲ್ಲಿ ಭಾರೀ ಸಂಖ್ಯೆಯಲ್ಲಿ ಚೀನಿಯರ ಉಪಸ್ಥಿತಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿತ್ ಕ್ಷೇತ್ರದಲ್ಲಿ ಚೀನಿ ಸೈನಿಕರು ಸಕ್ರೀಯರಾಗಿರುವುದು ಭಾರತಕ್ಕೆ ಎಷ್ಟು ಕಳವಳಕಾರಿ ಸಂಗತಿಯೋ, ಅಂತೆಯೇ ಬಾಂಗ್ಲಾದೇಶ ಮತ್ತು ಶ್ರೀಲಂಕಾದೊಂದಿಗೆ ಹೆಚ್ಚುತ್ತಿರುವ ಚೀನಾದ ನಂಟೂ ನಮಗೆ ಚಿಂತೆಯ ವಿಷಯವಾಗಿದೆ. ಇನ್ನು ಪಾಕಿಸ್ತಾನಕ್ಕೆ ಸೈನಿಕ ಸಹಾಯವನ್ನೂ ಕೊಡುತ್ತಿದೆ ಚೀನಾ. ಇಂಥ ಪರಿಸ್ಥಿತಿಯಲ್ಲಿ ಚೀನಾದ ಪ್ರತಿಯಾಗಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತು ಪೂರ್ವದ ಲೋಕತಾಂತ್ರಿಕ ರಾಷ್ಟ್ರಗಳೊಂದಿಗೆ ತನ್ನ ಸ್ನೇಹವನ್ನು ಬಲಿಷ್ಠಗೊಳಿಸುವ ಅವಶ್ಯಕತೆಯಂತೂ ಭಾರತಕ್ಕೆ ಇದೆ.
ಚೀನಾ ಕೂಡ ಭಾರತದೊಂದಿಗಿನ ದೋಸ್ತಿ ಬೆಳೆಸುವ ಇರಾದೆಯನ್ನು ವ್ಯಕ್ತಪಡಿಸುತ್ತಿದೆ ಮತ್ತು ಮೋದಿ ಅಧಿಕಾರಕ್ಕೆ ಬರುವುದನ್ನು ಚೀನಾದಲ್ಲಿ ಪ್ರಸನ್ನವಾಗಿ ನೋಡಲಾಗುತ್ತಿದೆ. ಇದೇ ಕಾರಣಕ್ಕಾಗೇ ಚೀನಾ ಮೋದಿಯವರ ಮಾತನ್ನು ನಕಾರಾತ್ಮಕವಾಗಿ ಪರಿಗಣಿಸಲಿಲ್ಲ. ಮೋದಿಯವರ ವಿಕಾಸ ದೃಷ್ಟಿ ಮತ್ತು ಜೀವನದ ಮೇಲೆ ನಾನು ಬರೆದ ಮೊದಲ ಪುಸ್ತಕ ಈಗ ಚೀನಿ ಭಾಷೆಯಲ್ಲೂ ಬರುತ್ತಿದೆ.
ಭಾರತದೊಂದಿಗೆ ಮೊದಲಿನಿಂದಲೂ ಉತ್ತಮ ಸಂಬಂಧ ಹೊಂದಿರುವ ಇನ್ನೆರಡು ಬಲಿಷ್ಠ, ನಿಷ್ಠಾವಂತ ಮಿತ್ರ ರಾಷ್ಟ್ರಗಳೆಂದರೆ ರಷ್ಯಾ ಮತ್ತು ಇಸ್ರೇಲ್. ಆದರೆ ಕಳೆದ ಹತ್ತು ವರ್ಷಗಳಲ್ಲಿ ಮುಸ್ಲಿಂ ವೋಟ್ ಬ್ಯಾಂಕ್ನ ಭಯದಿಂದಾಗಿ ಮನಮೋಹನ್ ಸಿಂಗ್ ಅವರ ಸರ್ಕಾರ ಇಸ್ರೇಲ್ನ ಯಾವೊಬ್ಬ ಹಿರಿಯ ನಾಯಕನಿಗೂ ಆಮಂತ್ರಣ ಕೊಡಲಿಲ್ಲ. ಒಂದು ವೇಳೆ ಮೋದಿ ಏನಾದರೂ ಇಸ್ರೇಲ್ನ ವರಿಷ್ಟ ನೇತಾರರೊಬ್ಬರಿಗೆ ಭಾರತ ಯಾತ್ರೆಗಾಗಿ ಆಹ್ವಾನ ನೀಡಿದರೆಂದರೆ ಅದೊಂದು ಉತ್ತಮ ಹೆಜ್ಜೆಯೆಂದೇ ಪ್ರಶಂಸೆ ಪಡೆಯುತ್ತದೆ.
ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಭಾರತದ ಅತ್ಯುತ್ತಮ ಸ್ನೇಹಿತ. ಇಂದಿಗೂ ಭಾರತದ 80 ಪ್ರತಿಶತಕ್ಕೂ ಅಧಿಕ ರಕ್ಷಣಾ ಸಾಮಗ್ರಿಗಳು: ಯುದ್ಧ ವಿಮಾನ, ಜಲಾಂತರ್ಗಾಮಿ, ಶಸ್ತ್ರಾಸ್ತ್ರ ಮತ್ತು ಯುದ್ಧನೌಕೆಗಳು ರಷ್ಯಾದಿಂದಲೇ ಆಮದಾಗುತ್ತಿವೆ. ಮೋದಿ ಕೂಡ ವ್ಲಾದಿಮೀರ್ ಪುಟಿನ್ರಂಥ ಶಕ್ತಿಶಾಲಿ ನಾಯಕನಾಗಬೇಕೆಂಬ ಇಚ್ಛೆ ಭಾರತೀಯರಿಗೂ ಇದೆ. ಯುಪಿಎ ಸರ್ಕಾರ ಅಮೆರಿಕದೆಡೆಗೆ ತೋರಿಸಿದ ಸೌಜನ್ಯವನ್ನು ಪುಟಿನ್ರೆಡೆಗೆ ತೋರಿಸಲು ವಿಫಲವಾಯಿತು. ಈ ಅಸಮತೋಲನವನ್ನು ಸರಿಮಾಡುವ ಅವಶ್ಯಕತೆ ಇದೆ.
ಇನ್ನು ಅಮೆರಿಕ ಮತ್ತು ಯುರೋಪ್ನ ಪ್ರಶ್ನೆ. ಈ ರಾಷ್ಟ್ರಗಳೊಂದಿಗೆ ಪರಂಪರಾಗತ ಮೈತ್ರಿಯನ್ನು ಮುಂದುವರಿಸಲಾಗುತ್ತದೆ, ಆದರೆ ಮನಮೋಹನ್ ಅವರಂತೆ ತಗ್ಗಿಬಗ್ಗಿ ನಡೆಯುವುದರ ಮೂಲಕವಲ್ಲ.
ಒಂದು ವೇಳೆ ಮೋದಿ ಸರ್ಕಾರ ಅಮೆರಿಕದೊಡನೆ ಯಾವುದೇ ಪೂರ್ವಗ್ರಹವಿಲ್ಲದೆ ಭವಿಷ್ಯದ ರಕ್ಷಣಾ ಸಹಯೋಗವನ್ನು ಬಯಸುತ್ತದೆಂದರೆ, ಅತ್ತ ಅಮೆರಿಕದ ಮೇಲೂ ವಿಶ್ವವ್ಯವಸ್ಥೆಯಲ್ಲಿನ ತನ್ನ ದಾದಾಗಿರಿಯ ನೀತಿಯನ್ನು ಬಿಡಬೇಕಾದ ಜವಾಬ್ದಾರಿಯಿರುತ್ತದೆ.
-ತರುಣ್ ವಿಜಯ್
tarunvijay55555@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

