ಗುಲ್ಬರ್ಗದ ಹಿರಿಮೆಯನ್ನು ಹೆಚ್ಚಿಸಿದ ಶರಣಬಸವೇಶ್ವರ ಕೆರೆ

ಉರ್ದು ಭಾಷೆಯಲ್ಲಿ ಗುಲ್ಬರ್ಗ ಎಂಬುದರ ಅರ್ಥ 'ಹೂ ಮತ್ತು ಎಲೆಗಳ ಪ್ರದೇಶ"(ಅಂದರೆ ಒಂದು ತೋಟ). ಆದರೆ ಒಂದು ತೋಟ ಕಾಣುವುದೂ ಅಲ್ಲಿ ದುಸ್ತರವಾಗಿತ್ತು. ಆಗ ನಾನು ಮತ್ತು ರಜನೀಶ್ ಅವರು ಗುಲ್ಬರ್ಗದ ಹಳೆ ಗರಿಮೆಯನ್ನು ಪುನರುಜ್ಜೀವಗೊಳಿಸಲು ನಿರ್ಧರಿಸಿದ್ದೆವು.
ಕಳೆದ ವಾರ ಗುಲ್ಬರ್ಗದ ಶರಣಬಸವೇಶ್ವರ ಕೆರೆಯ ಪುನಃಶ್ಚೇತನದ ಯೋಜನೆಯ ಬಗ್ಗೆ ನಿಮಗೆ ತಿಳಿಸಿದ್ದೆ. ಗುಲ್ಬರ್ಗದ ಪ್ರಾದೇಶಿಕ ಆಯುಕ್ತರಾಗಿದ್ದ ಡಾ. ರಜನೀಶ್ ಗೋಯಲ್ರ ಆಸಕ್ತಿ ಮತ್ತು ಅವಿರತ ಶ್ರಮದಿಂದಾಗಿ ಶರಣಬಸವೇಶ್ವರ ಕೆರೆ ಇಂದು ಆ ನಗರದಲ್ಲಿ ಹಸಿರು ಓಯಾಸಿಸ್ ಆಗಿ, ಜನತೆಯ ಅಚ್ಚುಮೆಚ್ಚಿನ ತಾಣವಾಗಿ ಹಾಗೂ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಇಂತಹ ಒಂದು ಸುಂದರ ಸ್ಥಳವನ್ನು ಸೃಷ್ಟಿಸಿದ ನಮ್ಮ ಕಂದಾಯ ಅಧಿಕಾರಿಗಳ ಕಾರ್ಯ ಪ್ರಶಂಸನೀಯ. ಅವರ ಮನೋಬಲವನ್ನು ಹೆಚ್ಚಿಸಲು ನಾವು ದಿನವೂ ಬೆಳಿಗ್ಗೆ ಮತ್ತು ಸಂಜೆ ಮೆಲ್ವಿಚಾರಣೆ ಮಾಡಲು ಹೋಗುತಿದ್ದೆವು.
ಗುಲ್ಬರ್ಗದ ಭರತ ಭೂಷಣ ಎಂಬ ಕೃತಿ ವಿನ್ಯಾಸಗಾರರು ಈ ಕೆರೆಯ ಅಭಿವೃದ್ಧಿಗಾಗಿ ನೀಲ ನಕ್ಷೆಯನ್ನು ತಯಾರಿಸಿರುತ್ತಾರೆ. ಕೆರೆಯ ಹೂಳನ್ನು ಉಪಯೋಗಿಸಿ ಅಭಿವೃದ್ಧಿಪಡಿಸಲಾದ ಉದ್ಯಾನವನದಲ್ಲಿ ಗಿಡಮರಗಳನ್ನು ನೆಟ್ಟು ಹೂದೋಟವನ್ನು ಅಭಿವೃದ್ಧಿಪಡಿಸಲಾಗಿದೆ. ಎಪ್ಪತ್ತೈದು ಸಾವಿರ ಚದರ ಅಡಿ ವಿಸ್ತೀರ್ಣದ ಮೆತ್ತನೆ ಹುಲ್ಲುಹಾಸು, ಕೆಂಪು ನೆಲಹಾಸು, ಹಾಗೆಯೇ ಕೆರೆಯ ಒಳ ಆವರಣದಲ್ಲಿ ಸರಾಸರಿ ಹತ್ತು ಅಡಿ ಅಗಲದ ಕಾಲುದಾರಿಯನ್ನು ಶಹಾಬಾದ ಕಲ್ಲು ಹಾಗೂ ಹುಲ್ಲನ್ನು ಬಳಸಿ ಅಭಿವೃದ್ಧಿ ಪಡಿಸಲಾಗಿದೆ.
ಶರಣಬಸವೇಶ್ವರ ಕೆರೆಗೆ ಮಳೆ ನೀರಿನ ಸಂಗ್ರಹದ ಜೊತೆಗೆ ಗುಲ್ಬರ್ಗ ನಗರದ ನೀರು ಶುದ್ಧೀಕರಣ ಘಟಕದಿಂದ ಹೊರಬಿಡಲಾಗುತ್ತಿರುವ ನೀರನ್ನು ಬಳಸಿಕೊಂಡು, ಕೆರೆಯ ನೀರಿನ ಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ನೀರಿನ ಜೊತೆ ಬರುವ ಮಣ್ಣನ್ನು ತಡೆಯಲು ಖ್ಝಟಡಿ ಡ್ಠಿಛಠ ಡಿಛಟ್ಞಿ ಅನ್ನು ಶೋರ ಗುಂಬಜ್ ಹತ್ತಿರ ನಿರ್ಮಿಸಲಾಗಿದೆ ಹಾಗೂ ಆವರಣದಲ್ಲಿ ನಿರ್ಮಿಸಲಾಗಿರುವ ಬಾವಿಗೂ ಸಂಪರ್ಕ ಒದಗಿಸಿದ್ದು ಗಣೇಶ ವಿಸರ್ಜನೆಯಿಂದ ಕೆರೆಯಲ್ಲಿ ಆಗುತ್ತಿದ್ದ ರಾಸಾಯನಿಕ ಕಲ್ಮಷವನ್ನು ತಡೆಯಲಾಗಿದೆ. ಅಲ್ಲದೆ, ಕೆರೆಗೆ ಬರುತ್ತಿದ್ದ ಕಲುಷಿತ ಚರಂಡಿ ನೀರನ್ನು ಧೋಬಿಘಾಟ್ ಮೂಲಕ ನಗರದ ಮುಖ್ಯ ಕಾಲುವೆಗೆ ಸೇರಿಸಲಾಗಿದೆ. ಇದರಿಂದ ಕೆರೆಗೆ ಹರಿದು ಬರುತ್ತಿದ್ದ ಚರಂಡಿ ನೀರಿನಿಂದ ಸಂರಕ್ಷಿಸಲಾಗಿದೆ. ಕೆರೆಯ ಮೂಲಭೂತ ಸೌಕರ್ಯ ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ಬೆಳಗಾವಿ ಮಾದರಿಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ನೀಡಿದ ಮಾರ್ಗಸೂಚಿಯಂತೆ ಗುತ್ತಿಗೆ ನೀಡಲಾಯಿತು.
ಸುಸಜ್ಜಿತ ಬೋಟುಗಳ ನಿಲುಗಡೆ ತಾಣ ಕೆರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ. ಯಾಂತ್ರೀಕೃತ ದೋಣಿ ಹಾಗೂ ವಿವಿಧ ವಿನ್ಯಾಸದ ಪೆಡಲ್ ಬೋಟುಗಳನ್ನೊಳಗೊಂಡ ದೋಣಿ ವಿಹಾರವು ಸಾರ್ವಜನಿಕರಿಗೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಅಲ್ಲದೆ ಹೊಸ ಆಕರ್ಷಣೆಯಾಗಿ ನಲವತ್ತು ಜನರನ್ನು ಹೊತ್ತೊಯ್ಯುವ ವಿಹಾರ ದೋಣಿಯನ್ನು ತರಲಾಗಿದೆ. ಕೆರೆಯಲ್ಲಿ ಎರಡು ಬಣ್ಣದ ಕಾರಂಜಿಗಳನ್ನು ಅಳವಡಿಸಲಾಗಿದ್ದು ವಿವಿಧ ಬಣ್ಣಗಳಿಂದ ಅಲಂಕೃತ ಈ ಕಾರಂಜಿಗಳು ಕೆರೆಯ ಅಂದವನ್ನು ಹೆಚ್ಚಿಸಿ ರಾತ್ರಿವೇಳೆ ತನ್ನ ಅದ್ಭುತ ನೋಟದಿಂದ ಸಾರ್ವಜನಿಕರ ಭಾರಿ ಪ್ರಶಂಸೆಗೆ ಪಾತ್ರವಾಗಿವೆ. ಅಲ್ಲದೆ ನಿಂತ ನೀರಿನಲ್ಲಿ ಕಾರಂಜಿಗಳನ್ನು ಅಳವಡಿಸಲಾಗಿದೆ. ಇದರಿಂದ ಅದು ಪಕ್ಷಿಗಳ ತಾಣವಾಗಿದೆ. ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲೂ ನೀರು ತುಂಬಿಕೊಂಡಿದೆ.
ಕೆರೆಯ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು/ ವಿರಮಿಸಲು ಆಕರ್ಷಕ ಆಸನಗಳನ್ನು ಅಳವಡಿಸಲಾಗಿದೆ. ಕೆರೆಯ ಉದ್ಯಾನವನದಲ್ಲಿ ನಿರ್ಮಿಸಲಾದ ಬಯಲು ರಂಗ ಮಂದಿರ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ, ಕಲಾ ರಸಿಕರಿಗೆ ಹೇಳಿ ಮಾಡಿಸಿದಂತಿದೆ. ಉದ್ಯಾನವನದಲ್ಲಿ ಸಂಗೀತವನ್ನು ಆಲಿಸುವ ವ್ಯವಸ್ಥೆ ಇದ್ದು ಪ್ರತಿದಿನ ಸಂಜೆ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಚಿಣ್ಣರ ನೃತ್ಯವು ಮನಮೋಹಕವಾಗಿರುತ್ತದೆ. ಅಲ್ಲದೆ, ಜೋಕಾಲಿ, ಜಾರುಬಂಡಿ, ವಿದ್ಯುತ್ ಚಾಲಿತ ಆಟಿಕೆಗಳು ಅವರನ್ನು ನಿತ್ಯ ಕೆರೆಗೆ ಭೇಟಿ ನೀಡಲು ಆಕರ್ಷಿಸುತ್ತಿವೆ.
ಕೆರೆಯ ಉದ್ಯಾನವನದಲ್ಲಿ ನಿರ್ಮಿಸಲಾದ ಸುಸಜ್ಜಿತ ಆಹಾರ ಮಳಿಗೆಯು ಕೆರೆಗೆ ಆಗಮಿಸುವ ಜನರಿಗೆ ವಿಶೇಷ ತಿನಿಸುಗಳನ್ನು ಒದಗಿಸುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆಧುನಿಕ ಮಾದರಿಯ ಶೌಚಾಲಯವು ಕೆರೆಯ ಪರಿಸರಕ್ಕೆ ಹೇಳಿ ಮಾಡಿಸಿದಂತಿದೆ. ಆದರಲ್ಲಿ ಸ್ವಚ್ಛತೆಯೊಂದಿಗೆ ಪರಿಸರ ಕಾಳಜಿಯ ಬಗ್ಗೆ ಪ್ರಜ್ಞೆಯನ್ನು ಮೂಡಿಸಲು ಶೌಚಾಲಯದ ಹೊರಗೋಡೆಯ ಮೇಲಿರುವ ಉಬ್ಬು ಚಿತ್ರಗಳು ಪರಿಸರ ಸಂರಕ್ಷಣೆಗೆ ಜನರ ಜವಾಬ್ದಾರಿಯನ್ನು ಬೋಧಿಸುತ್ತದೆ. ನಾನು ಸ್ವತಃ ಒಬ್ಬ ಕಲಾವಿದರೊಂದಿಗೆ ಕುಳಿತಕೊಂಡು ಇದನ್ನು ಮಾಡಿಸಿದೆ.
ಕೆರೆಯ ಸುಂದರ ನೋಟಕ್ಕೆ ಧಕ್ಕೆಯಾಗದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಜಲ ಮತ್ತು ಪರಿಸರ ಸಂರಕ್ಷಣೆ ಮಾಡಲಾಗಿದೆ. ಈ ಎಲ್ಲ ಅನುಕೂಲಗಳನ್ನು ಹಾಗೂ ಅದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಗುಲ್ಬರ್ಗ ಕಂದಾಯ ಅಧಿಕಾರಿಗಳು ತಮ್ಮ ದಿನನಿತ್ಯದ ಕಚೇರಿ ಕೆಲಸದ ನಂತರ ಸಂಜೆ ಅವಧಿಯಲ್ಲಿ ಹೆಚ್ಚುವರಿಯಾಗಿ ಕೆಲಸಮಾಡಿ ತಮ್ಮ ಪರಿಸರ ಕಾಳಜಿಯನ್ನು ಮೆರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವಂತೆ ಆಧುನಿಕ ಜನ ಜೀವನದಿಂದ ಮಾನವನ ದಿನನಿತ್ಯದ ಕೆಲಸಗಳು ಸಂಪೂರ್ಣ ಯಾಂತ್ರಿಕವಾಗಿದೆ. ಇದರಿಂದಾಗಿ ಬಹುಜನರು ಅತಿಯಾದ ತೂಕ, ದಿನದ ಕೆಲಸಗಳಲ್ಲಿ ನಿರುತ್ಸಾಹ, ಏಕಾಗ್ರತೆಯ ಕೊರತೆ, ಮಾನಸಿಕ ಒತ್ತಡ ಮುಂತಾದ ಹಲವು ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ. ಹಾಗಾಗಿ, ಗುಲ್ಬರ್ಗ ನಗರದಲ್ಲಿ ಮಾದರಿ ಪರಿಸರವಾಗಿ ಅಭಿವೃದ್ಧಿಗೊಂಡಿರುವ ಶರಣಬಸವೇಶ್ವರ ಕೆರೆ ಆವರಣದಲ್ಲಿ ಗುಲ್ಬರ್ಗ ಜನತೆಯ ಮನೋರಂಜನೆಯೊಂದಿಗೆ ಸ್ವಾಸ್ಥ್ಯ ಮತ್ತು ಸದೃಢತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಂಜಾನೆಯ ವಾಯುವಿಹಾರ ಹಾಗೂ ಯೋಗಾಭ್ಯಾಸಕ್ಕೆ ಅವಕಾಶ ನೀಡಿ, ಸಾರ್ವಜನಿಕರಿಗೆ ಮಾದರಿ ಜೀವನ ಶೈಲಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಅದು ಈ ಕೆಳಗಿನ ಚಟುವಟಿಕೆಗಳನ್ನು ಒಳಗೊಂಡಿದೆ.
- ಪ್ರತಿದಿನ ಮುಂಜಾನೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ವಾಯುವಿಹಾರ ಹಾಗೂ ಲಘು ವ್ಯಾಯಾಮ.
- ಧ್ಯಾನ ಹಾಗೂ ಯೋಗ ಶಿಬಿರಗಳ ಆಯೋಜನೆ.
- ತಾಜಾ ಹಣ್ಣಿನ ಹಾಗೂ ಆಯುರ್ವೇದಿಕ್ ಗಿಡ ಮೂಲಿಕೆಗಳ ರಸ ಸೇವನೆ.
- ಪ್ರತಿ ಭಾನುವಾರ ವ್ಯಕ್ತಿತ್ವ ವಿಕಸನ, ಜೀವನ ಮೌಲ್ಯ ಹಾಗೂ ಆರೋಗ್ಯ ಸಂಬಂಧಿತ ವಿಷಯಗಳ ಮೇಲೆ ಉಪನ್ಯಾಸಗಳು
- ನಗೆಹಬ್ಬ
- ಮಕ್ಕಳಿಗೆ ಪ್ರಕೃತಿಯಡೆಗೆ ಕೊಂಡೊಯ್ಯಲು ವಾರಾಂತ್ಯದ ಅವಧಿಯಲ್ಲಿ ಪರಿಸರ ಚಿತ್ರಗಳ ಪ್ರದರ್ಶನ, ವೈವಿಧ್ಯಮಯ ಜೀವ ಸಂಕುಲಗಳ ಪರಿಚಯ.
- ಮದ್ಯಾಹ್ನದ ಅವಧಿಯಲ್ಲಿ ಮಹಿಳೆಯರಿಗಾಗಿ ಒಳಾಂಗಣ ಅಲಂಕಾರ ತರಬೇತಿ, ಅಡುಗೆ ತಯಾರಿಕೆ.
- ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರೊಂದಿಗೆ ಸಂವಾದ ಕಾರ್ಯಕ್ರಮಗಳ ಆಯೋಜನೆ.
- ಕೌಟುಂಬಿಕ ಸಲಹೆಗಳು.
ಕೆರೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸುತ್ತಿರುವ ಗಣ್ಯರು, ನಾಗರಿಕರು ಅಭಿನಂದನೀಯ ಮಾತುಗಳನ್ನು ಹೇಳುತ್ತಿರುವುದು ಪ್ರೋತ್ಸಾಹದಾಯಕವಾಗಿರುತ್ತದೆ. ಶರಣಬಸವೇಶ್ವರ ಕೆರೆಯು ಗುಲಬರ್ಗ ನಗರದ ಜನತೆಗೆ ಕಡಿಮೆ ಖರ್ಚಿನಲ್ಲಿ ಭರ್ಜರಿ ಮನೋರಂಜನೆ ಒದಗಿಸುತ್ತಿರುವ ತಾಣವಾಗಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿಎಂಬಂತೆ ಮೇ-2009 ರಿಂದ ಜುಲೈ 2010 ರ ವರೆಗೆ ಸುಮಾರು 5 ಲಕ್ಷ ಜನರು ಅಲ್ಲಿಗೆ ಭೇಟಿ ನೀಡಿದ್ದು, ಪ್ರವೇಶ ಮತ್ತು ದೋಣಿ ವಿಹಾರ ಶುಲ್ಕದಿಂದ ಹಾಗೂ ಇತರೆ ಮೂಲಗಳಿಂದ ಒಟ್ಟು ರು. ಐವತ್ತೈದು ಲಕ್ಷಕ್ಕೂ ಮೇಲ್ಪಟ್ಟು ಹಣ ಸಂಗ್ರಹವಾಗಿದೆ.
ಈ ಮಧ್ಯೆ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಕೆರೆಯಲ್ಲಿ ಬಣ್ಣದ ಕಾರಂಜಿ ಮತ್ತು ದೋಣಿ ಪಯಣ ಪ್ರವಾಸಿಗಳಿಗೆ ಅತ್ಯಾಕರ್ಷಕ ಸಂಗತಿಗಳು. ಆದರೆ ಒಂದು ದಿನ ಕೆರೆಯಲ್ಲಿ ಇದ್ದಕ್ಕಿದ್ದಂತೆ ಒಂದು ಮೊಸಳೆ ಪ್ರತ್ಯಕ್ಷವಾಯಿತು. ಹಾಗಾಗಿ ಅಂದಿನಿಂದ ದೋಣಿ ವಿಹಾರವನ್ನು ರದ್ದುಪಡಿಸಲಾಯಿತು. ಆ ಮೊಸಳೆಯನ್ನು ಹಿಡಿಯಲು ಗುಲ್ಬರ್ಗದ ಅರಣ್ಯ ಇಲಾಖೆಯವರು ಶತಪ್ರಯತ್ನ ಮಾಡಿದರೂ ಸಫಲರಾಗಲಿಲ್ಲ. ನಂತರ ಬೆಂಗಳೂರಿನಿಂದ ಪರಿಣತರನ್ನು ಕರೆತರಬೇಕಾಯಿತು. ಅವರು ಆ ಮೊಸಳೆಯನ್ನು ಒಂದು ವಾರದಲ್ಲಿ ಕ್ಷೇಮವಾಗಿ ಹಿಡಿದು, ನದಿಗೆ ಬಿಟ್ಟರು. ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅಲ್ಲಿನ ಕೆಲ ಜನರು ಜಗಜ್ಯೋತಿ ಬಸವೇಶ್ವರರೇ ಮೊಸಳೆಯ ರೂಪದಲ್ಲಿ ತಾವು ಕಟ್ಟಿಸಿದ ಕೆರೆಯನ್ನು ನೋಡಲು ಬಂದಿದ್ದರು. ತಮ್ಮ ಕೆರೆ ಇಷ್ಟು ಅದ್ಭುತ ರೀತಿಯಲ್ಲಿ ಪುನಃಶ್ಚೇತನಗೊಂಡಿರುವುದನ್ನು ಕಂಡು ಸಂತಸ ಪಟ್ಟು ಹಿಂದಿರುಗಿದರು ಎಂಬ ಮಾತುಗಳನ್ನು ಆಡಿದರು. ಆ ಕೆರೆಯಲ್ಲಿ ಮೊಸಳೆ ಬಂದಿರುವುದು ಮೊದಲೇ ಕಂಡದ್ದರಿಂದ ಯಾರಿಗೂ ಯಾವ ವಿಧವಾದ ತೊಂದರೆಯೂ ಆಗಲಿಲ್ಲ ಎನ್ನುವುದು ಸಮಾಧಾನದ ಸಂಗತಿ. ಇಂದು ಶರಣಬಸವೇಶ್ವರ ಕೆರೆ ಮಾದರಿ ಕೆರೆ ಆಗಿ ಗುಲ್ಬರ್ಗ ನಗರದ ಹಿರಿಮೆಯನ್ನು ಹೆಚ್ಚಿಸಿದೆ. ನಮ್ಮ ರಾಜ್ಯದ ಎಲ್ಲ ಕೆರೆಗಳು ಈ ರೀತಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣಗಳಾಗಲಿ.
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


