ಅಂಕಣಗಳು

ಭಾಷಣದಲ್ಲಿದ್ದಷ್ಟು ಉಗ್ರತೆ ಮೋದಿಯವರಲ್ಲಿಲ್ಲ

ಭಾಷಣದಲ್ಲಿದ್ದಷ್ಟು ಉಗ್ರತೆ ಮೋದಿಯವರಲ್ಲಿಲ್ಲ
Published On :

ಅಂತೂ ಸಾರ್ವತ್ರಿಕ ಚುನಾವಣೆ ಮುಗಿದಿದೆ. ನಿರೀಕ್ಷಿಸಿದಂತೆಯೇ ಬಿಜೆಪಿ ಸರ್ಕಾರ ಆಯ್ಕೆಯಾಗಿದೆ.
ಇದು ಮೋದಿ ಅಲೆಯೋ, ಇಲ್ಲ ಜನ ಹೊಸದನ್ನು ನಿರೀಕ್ಷಿಸಿದ್ದರೋ ಅಂತೂ ಈಗ ಬಂದಿರುವ ಫಲಿತಾಂಶವನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಪ್ರಜಾ ಪ್ರಭುತ್ವದಲ್ಲಿ ಬಹುಮತವನ್ನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ.  
ಆದುದರಿಂದ ಇದರ ಬಗ್ಗೆ ಯಾವುದೇ ಅಪಸ್ವರವನ್ನು ಎತ್ತಬೇಕಾಗಿಲ್ಲ.
ಹಾಗೆಯೇ ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವಿದೆ. ಮೋದಿಯವರು ಚುನಾವಣಾ ಭಾಷಣ ಮಾಡುವಾಗ ಎಷ್ಟೊಂದು ಉಗ್ರರಾಗಿದ್ದರೋ ಆ ಉಗ್ರತೆ ಈಗ ಅವರಲ್ಲಿ ಉಳಿದಿಲ್ಲ. ಕಾವಲಿಯ ಮುಂದೆ ಕುಳಿತುಕೊಂಡಾಗ ಮಾತನಾಡುವುದು ಬೇರೆ ಯಾಗುತ್ತೆ. ಕಾವಲಿಯ ಮೇಲೆ ಕುಳಿತಾಗ ಹೇಳುವುದು ಬೇರೆ ಆಗುತ್ತದೆ. ಈಗ  ಮೋದಿಯವರು ವಸ್ತು ಸ್ಥಿತಿಯನ್ನು ಅರಿಯತೊಡಗಿದ್ದಾರೆ. ದೇಶದ ನಿಜವಾದ ಸಮಸ್ಯೆಗಳು ಅವರ ಮುಂದೆ ತೆರೆದು ಕೊಳ್ಳುತ್ತಿವೆ. ವಿದೇಶೀ ಸಮಸ್ಯೆಗಳ ಅರಿವೂ ಅವರಿಗೆ ಉಂಟಾಗಿದೆ. ದೇಶದ ಹಲವಾರು ಜೀವಂತ ಸಮಸ್ಯೆಗಳು ಭೂತಾಕಾರದಲ್ಲಿ ನಿಂತಿವೆ.
ಅಷ್ಟೆಲ್ಲ ಮಾತನಾಡಿದ ತಾನು ಕೆಲಸ ಮಾಡಿ ತೋರಿಸಲೇಬೇಕಾದ ತುರ್ತು ಮೋದಿಯವರ ಮುಂದಿದೆ. ಈಗಿನ ಅವರ ವರ್ತನೆ ಇದಕ್ಕೊಂದು ನಿದರ್ಶನ ಎಂದು ನಾನಂದುಕೊಂಡಿದ್ದೇನೆ.
ಮೋದಿಯವರು ಆಯ್ಕೆಯಾಗಿ ಬರಲೇಬಾರದು ಎಂದು ಬಯಸಿದವರೆಲ್ಲ ಮೋದಿಯವರಲ್ಲಿ ಆಗುತ್ತಿರುವ ಈ ಬದಲಾವಣೆಗಳನ್ನು ಸ್ವಾಗತಿಸುತ್ತಾರೆ ಎಂದು ನಾನು ನಂಬಿದ್ದೇನೆ. ಇದರ ಜೊತೆಗೆ ಮೋದಿಯವರು ಏನು 'ರಾಷ್ಟ್ರೀಯ ಉಗ್ರ ವಾದವನ್ನು' ತಮ್ಮ ಭಾಷಣಗಳ ಮೂಲಕ ಪ್ರತಿಪಾದಿಸಿ ಕೊಂಡು ಬಂದಿದ್ದರು ಅದು ತುಸು ತಿಳಿಯಾಗಬೇಕು ಎಂದು ಜನ ಬಯಸುತ್ತಿದ್ದಾರೆ. ಜನರ ನಂಬಿಕೆ ವಿಚಾರಗಳನ್ನು ಗೌರವಿಸುತ್ತಲೇ ಅವರನ್ನು ನಮ್ಮ ಕಡೆ ತಿರುಗಿಸಿಕೊಳ್ಳಬೇಕಲ್ಲದೆ, ಯಾವುದೇ
ಉಗ್ರವಾದ ಜನರಿಗೆ ನೀಡಬೇಕಾದ ಶಾಂತಿ ಸಮಾಧಾನವನ್ನು ನೀಡಲಾರದು ಅನ್ನುವುದು ನನ್ನ ನಂಬಿಕೆ.  ಚುನಾವಣೆ ಮುನ್ನ ಮೋದಿ ಒಂದು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಅದನ್ನು ನೋಡಿದ ಕೂಡಲೇ ಮೋದಿಯವರು ಮೈಮರೆತರು.
'ಈ ಕೇಸರಿ ಕಡಲು ಭಾರತದಾದ್ಯಂತ ತನ್ನ ಮಹಾನ್ ಅಲೆಗಳನ್ನು ಉರುಳಿಸಬೇಕು' ಎಂದು ರೋಮಾಂಚಿತರಾಗಿ ಮೋದಿ ನುಡಿದರು. ಜನ ಸಿಳ್ಳೆ ಹಾಕಿ ಚಪ್ಪಾಳೆ ಹೊಡೆದರು. ಮೋದಿಯವರು ಹೇಳಿದ ಕೇಸರಿ ಕಡಲು ಶತಮಾನಗಳಿಂದ ಈ ದೇಶದ ಮೂಲೆ ಮೂಲೆಯಲ್ಲಿ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ಇಲ್ಲಿ ಬದುಕುವವನು ಯಾರೇ ಇರಲಿ ಅವನು ಒಂದಲ್ಲಾ ಒಂದು ರೀತಿಯಲ್ಲಿ ಭಾರತೀಯ ಸಂಸ್ಕೃತಿ, ಆಚರಣೆಗಳಿಗೆ ಬಧ್ದನಾಗಿಯೇ ಇರುತ್ತಾನೆ. ಶತಮಾನಗಳಿಂದ ಈ ದೇಶವನ್ನು ಆಳುತ್ತಿರುವ ಭಾರತೀಯ ಸಂಸ್ಕೃತಿಯ ಉತ್ತಮ ಅಂಶಗಳು ಇಲ್ಲಿಯ ಎಲ್ಲ ಜನರ ಬದುಕನ್ನು, ವಿಚಾರಗಳನ್ನು ರೂಪಿಸಿಕೊಂಡು ಬಂದಿವೆ. ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಈ ಅಂಶವನ್ನು   ಅದರ ಪಾಡಿಗೆ ಬಿಡುವುದೇ ಕ್ಷೇಮ ಎಂದು ನಾನು ತಿಳಿದಿದ್ದೇನೆ. ಈ ರೀತಿಯಲ್ಲಿ ಮಾತನಾಡುವುದು ವಿನಾಕಾರಣ ಇನ್ನೊಬ್ಬರನ್ನು ಕೆರಳಿಸಿದಂತೆ ಆಗದೆ ನಾವು ವಿಚಾರಿಸಬೇಕು.
ಶತಮಾನದಿಂದ ಇಲ್ಲಿಯ ಜನ ಇಲ್ಲಿಯ ಪುರಾಣಗಳನ್ನು, ಶ್ರೀರಾಮ ಕೃಷ್ಣರನ್ನು, ಅವರ ಬದುಕನ್ನು ಒಪ್ಪಿಕೊಂಡು ಜೀವಿಸುತ್ತಿದ್ದಾರೆ. ನೂರಾರು ಜಾತಿ ಧರ್ಮ ಭಾಷೆ ಆಚರಣೆ ನಂಬಿಕೆಗಳು ಇಲ್ಲಿಯ ಜನರ ಬದುಕಿನಲ್ಲಿ ಬಿರುಕನ್ನು ಉಂಟು ಮಾಡಿಲ್ಲ. ಒಂದು ಕಂದಕ ಸೃಷ್ಟಿಸಿಲ್ಲ. ಇಂತಹ ಒಂದು ಭವ್ಯ ಜೀವನವನ್ನು ಒಡೆಯುವುದು ಬೇಡ. ಆಳುವವರಿಗೆ ಮೊದಲು ಈ ಪ್ರಜ್ಞೆ ಇರಬೇಕು. ಶತಮಾನಗಳಿಂದ ಈ ದೇಶ ಹೇಗೆ ಸಣ್ಣ ಪುಟ್ಟ ಅಭಿಪ್ರಾಯ ಭೇದಗಳನ್ನು ಇರಿಸಿಕೊಂಡೂ ಆಖಂಡವಾಗಿತ್ತೋ ಹಾಗೆಯೇ
ಇರಬೇಕು ಅನ್ನುವುದು ಇಲ್ಲಿಯ ಸಾಮಾನ್ಯರ ನಂಬಿಕೆ. ಮೋದಿ ಇದನ್ನು ದಯವಿಟ್ಟು ಗಮನಿಸಬೇಕು.ಹಿಂದಿನ ಸರಕಾರಗಳು ಒಳಿತನ್ನೇ ಮಾಡಿವೆ ಎಂದು ನಾನು ಹೇಳುವುದಿಲ್ಲ. ಆದರೆ ಒಳಿತನ್ನು ಮಾಡುವ ಹಲವು ಅವಕಾಶಗಳನ್ನು ಅವು ಕಳೆದುಕೊಂಡಿವೆ. ವಿದೇಶೀ ಕಂಪನಿಗಳಿಗೆ ಅತಿ ಹೆಚ್ಚು ಅವಕಾಶ ಮಾಡಿಕೊಡುವುದರ ಮೂಲಕ ನಮ್ಮವರ ಶಕ್ತಿ ಕುಂದಿದೆ. ನಾವು ಎಲ್ಲ ವಿಷಯಗಳಲ್ಲಿ ಅಮೆರಿಕಾದ ಗುಲಾಮರಾಗಿದ್ದೇವೆ. ವಾಲ್ಮಾರ್ಟಗಳು, ಫುಡ್ ವರ್ಲ್ಡ್‌ಗಳು ನಮ್ಮ ಬದುಕನ್ನೇ ಅಲ್ಲಾಡಿಸುತ್ತಿವೆ. ಶಿಕ್ಷಣ, ಜೀವವಿಮೆ, ಕುಡಿಯುವ ನೀರಿನ ಸರಬರಾಜು, ಆರೋಗ್ಯ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಅಮೆರಿಕ ತನ್ನ ಮೂಗನ್ನು ತೂರಿಸಿ, ಭಾರತವನ್ನು ಹಲವು ಉಪಾಯಗಳ ಮೂಲಕ ತನ್ನ ಮಾರುಕಟ್ಟೆಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದೆ. ಇದರ ಬಗ್ಗೆಮೋದಿಯವರು ಕಟ್ಟೆಚ್ಚರ ಇರಿಸಿಕೊಳ್ಳಬೇಕು.
ಪರಿಸರದ ಮೂಲ ಭೂತ ಗುಣಗಳನ್ನ ಧಿಕ್ಕರಿಸಿ ಅಭಿವೃದ್ಧಿಯನ್ನು ಸಾಧಿಸುವ ವಿಷಯದಲ್ಲಿ ಎಚ್ಚರಿಕೆ ಇರಬೇಕು. ಉದಾಹರಣೆಗೆ ನದಿ ತಿರುವು ಯೋಜನೆಗಳು ತಕ್ಷಣ ಫಲಕಾರಿ ಅನಿಸಬಹುದು.  ಆದರೆ ಅವು ದೀರ್ಘಾವಧಿಯಲ್ಲಿ ಅಪಾಯಕಾರಿ ಅನ್ನುವುದನ್ನ ಹೊರದೇಶಗಳು ಕಂಡುಕೊಂಡಿವೆ.
ಈ ಹಗಲ ಬಾವಿಗೆ ನಾವು ಬೀಳುವುದು ಬೇಡ. ಪರಿಸರ ಸದಾ ಮಾತೃ ಸ್ಥಾನದಲ್ಲಿ ಇರುವಂತಹದು. ಅದರ ಶೋಷಣೆ ಅಂದರೆ ನಮ್ಮ ಕಾಲ ಮೇಲೆ ನಾವೇ ಕೊಡಲಿ ಹೊಡೆದುಕೊಂಡಂತೆ ಅನ್ನುವುದನ್ನು ನಮ್ಮ
ಸರ್ಕಾರಗಳು ಅರಿಯಬೇಕು. ವಿದೇಶೀ ಸಂಸ್ಕೃತಿ ಪರಿಸರವನ್ನು ಆರಾಧಿಸುವುದಿಲ್ಲ. ಅದು ಪರಿಸರವನ್ನು ಸುಲಿಗೆ ಮಾಡುತ್ತದೆ. ಆದರೆ ನಮ್ಮ ಸಂಸ್ಕೃತಿ ಪರಿಸರವನ್ನು ಗೌರವಿಸುತ್ತದೆ. ಈ ಅರಿವು ನಮಗಿರಲಿ.
ನಮ್ಮ ಸರ್ಕಾರಿ ಯಂತ್ರ ಬ್ರಿಟಿಷರ ಕಾಲದಲ್ಲಿ ತಕ್ಕ ಮಟ್ಟಿಗಿತ್ತು. ನಮಗೆ ಸ್ವಾತಂತ್ರ್ಯ ಸಿಕ್ಕಾಗ ಕೂಡ ಅದು ಸರಿಯಾಗಿತ್ತು. ನಂತರದ ದಿನಗಳಲ್ಲಿ ನಮ್ಮವರೇ ದೊರೆಗಳಾಗಿ ಬಂದ ನಂತರ ಅದು ಕುಲಗೆಟ್ಟು ಹೋಗಿದೆ. ಇದನ್ನ ಸರಿ ಮಾಡಲು ಆಗುವುದೇ ಇಲ್ಲ ಎಂಬ ನಿರ್ಧಾರಕ್ಕೆ ನಮ್ಮ ಜನ ಬಂದಿದ್ದಾರೆ.
ಮೋದಿಯವರೇ ಜನರ ಈ ನಂಬಿಕೆಯನ್ನ ದಯವಿಟ್ಟು ಸುಳ್ಳು ಮಾಡಿ. ಸಾಂಪ್ರದಾಯಿಕವಾಗಿ ನಾವು ಸ್ತ್ರೀಯರಿಗೆ ತುಂಬಾ ಗೌರವಕೊಟ್ಟವರು. ಆದರೆ ಇಂದು ಸ್ತ್ರೀಯರ ಗತಿ ನೋಡಿ. ಕಾಡಿನಲ್ಲಿ ಸಸ್ಯಾಹಾರಿ ಪ್ರಾಣಿಗಳು ಸಣ್ಣ ಸದ್ದಾದರೂ ಸಾಕು ಹೆದರಿ ಕಂಗಾಲಾಗುವಂತಹ ಸ್ಥಿತಿ ಇಂದು ನಮ್ಮ ಸ್ತ್ರೀಯರದು ಅಂದರೆ ಎಲ್ಲರೂ ಒಪ್ಪುತ್ತಾರೆ ಅಂದು ಕೊಂಡಿದ್ದೇನೆ. ಈ ಬಗ್ಗೆ ಯೋಚಿಸಿ. ಇಲ್ಲಿಯೇ ಹೇಳಿ ಬಿಡುತ್ತೇನೆ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ನಡೆದಾಗ ಶ್ರೀ ಕಾಮರಾಜರು ಸ್ವಾತಂತ್ರ್ಯ ಸಿಗಲಿ ಮದುವೆ ಆಗುತ್ತೇನೆ ಎಂದರಂತೆ, ಆದರೆ ಸ್ವಾತಂತ್ರ್ಯ ಸಿಕ್ಕಾಗ ನನಗೆ ಮದುವೆ ಆವಶ್ಯಕತೆ ಇಲ್ಲ ಎಂದು ಭ್ರಹ್ಮಚಾರಿಗಳಾಗಿ ಉಳಿದರಂತೆ. ಇಂತಹದ್ದೇ ಒಂದು ಕಾರಣಕ್ಕೆ ನೀವು ಕೈಹಿಡಿದಾಕೆಯಿಂದ ದೂರವಾದಿರಿ. ಆ ತಾಯಿ ಕಾಯುತ್ತಿದ್ದಾಳೆ. ಮನಸ್ಸು ಮಾಡಿ.
ಸಾಮಾನ್ಯವಾಗಿ ನಾವು ಗಾಂಧೀಜಿಯವರನ್ನ ರಾಜಕಾರಿಣಿ ಎಂದು ಕರೆಯುವುದಿಲ್ಲ. ಏಕೆಂದರೆ ಅವರ ನಡೆಗೂ ನುಡಿಗೂ ಅಂತರವಿರಲಿಲ್ಲ. ಇತಿಹಾಸದಲ್ಲಿ ನೀವೂ ಓರ್ವ ರಾಜಕಾರಿಣಿ ಅನಿಸಿಕೊಳ್ಳ ಬೇಡಿ. ಹೇಳುವುದು ಬೇಕಷ್ಟು ಇದ್ದರೂ ಸದ್ಯಕ್ಕೆ ಇಷ್ಟು ಸಾಕು. ಟಿ

-ಡಾ. ನಾ. ಡಿಸೋಜ,ಸಾಹಿತಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.