ಭಾರತದ ಮೇಲೇಕೆ ಹಳಿ ತಪ್ಪಿರುವ ಆರೋಪ?
ಮೋದಿ ಎಂಬ ಬಿರುಗಾಳಿಯೋ ತ್ಸುನಾಮಿಯೋ ಅಪ್ಪಳಿಸಿದ್ದಕ್ಕೆ ಉರಿಯುವ 'ಬೆಂಕಿ'ಯೂ ತಣ್ಣಗಾಯಿತೇ? ಇರಬಹುದು ಎನ್ನುತ್ತದೆ 23ನೆಯ ತಾರೀಖು ಶುಕ್ರವಾರದ ಮಧ್ಯಪುಟದ ಒಂದು ಲೇಖನ. ಈ ಲೇಖನ ಬುದ್ಧಿಜೀವಿಗಳ ಬಗೆಗಿನ ಹಲವಾರು ಸತ್ಯಗಳನ್ನು ಹೊರಹಾಕಿರುವುದು ಸಂತಸದ ಸಂಗತಿ. ಈ ಸತ್ಯಗಳು ಎಲ್ಲರಿಗೂ ಇದಕ್ಕೂ ಮೊದಲೇ ಚೆನ್ನಾಗಿ ಗೊತ್ತಿತ್ತು ಎಂಬುದು ತಮಾಷೆಯ ಸಂಗತಿ. ಆದರೆ ತನ್ನಿಂದಲೇ ಲೋಕಕ್ಕೆ ಬೆಳಕು ಎಂಬ ಧೋರಣೆ ಕೆಲ ಲೇಖಕ ಮಹಾಶಯರಿಗೆ ಇರುತ್ತದಲ್ಲ, ಈ ರೋಗಕ್ಕೆ ಔಷಧಿಯಿಲ್ಲ. ತನ್ನ ನಿಲುವು ಸ್ವಲ್ಪವಾದರೂ ಬದಲಾಗಿದೆ ಅಥವಾ ಹಾಗೆಂದು ನಾವು ಭ್ರಮಿಸಲು ಸಹಕಾರಿ ಲೇಖನ.
ಈ ಹಿಂದೆ ಮೋದಿ ಮತ್ತು ಬಿಜೆಪಿಯ ಬಗ್ಗೆ, ಎಡಪಂಥೀಯರಲ್ಲದವರ ಬಗ್ಗೆ ಅವರು ಬರೆದ ಮಾತುಗಳೊಂದಿಗೆ ಇದನ್ನು ತಾಳೆ ನೋಡಿ. ಅಂದು ಅದೇ ಸತ್ಯ. ಇಂದು ಇದೇ ಸತ್ಯ. (ಅನಂತಮೂರ್ತಿಯವರು ಹೇಳುವ ಹಾಗೆ) ಅಂದರೆ ತಾನು ಹೇಳುವುದೇ ಸರಿ ಎಂದು ಪಾಪದ ಓದುಗರು ಒಪ್ಪಿಕೊಳ್ಳಬೇಕು. ಇಂದು ಹಲವಾರು ಪ್ರಗತಿಪರರಿಗೆ (ಹಾಗೆಂದು ತಿಳಿದಿರುವವರಿಗೆ) ಮೋದಿಯೆಂಬ ಮಾತ್ರೆ ಗಂಟಲಲ್ಲಿ ಸಿಕ್ಕಿಕೊಂಡಿದೆ. ನುಂಗಲು ಬಿಗುಮಾನ. ಜೀರ್ಣಿಸಿಕೊಳ್ಳುವಷ್ಟು ವೈಶಾಲ್ಯವಿಲ್ಲ. ಉಗುಳಿದರೆ ಉಗಿಸಿಕೊಳ್ಳಲೂಬೇಕಾದೀತು. ಅಡ್ಡಗೋಡೆಯ ಮೇಲೆ ದೀಪವೊಂದಿಟ್ಟು ನೋಡೋಣ, ಅದನ್ನೇ ಸೂರ್ಯನೆಂದು ಜನ (ಎರಡೂ ಕಡೆಯಿರುವವರು) ನಂಬಿಕೊಂಡಾರು! ದೇಶದ ಜನರು ಇವರಷ್ಟು ಬುದ್ಧಿವಂತರಲ್ಲದಿರಬಹುದು, ಆದರೆ ಯಾರಾದರೂ ಒಬ್ಬನನ್ನು ನಂಬಲೇಬೇಕಲ್ಲ. ಮೋದಿಯ ಮೇಲೆ ಅಪಾರನಂಬಿಕೆಯಿಟ್ಟು ಅಲ್ಪಸ್ವಲ್ಪ ಬುದ್ಧಿಯನ್ನೂ ಉಪಯೋಗಿಸಿ ಅವರನ್ನು ಈ ಪರಿ ಆಯ್ಕೆ ಮಾಡಿರುವಾಗ ತನ್ನದೇನೂ ನಡೆಯುವುದಿಲ್ಲವೆಂದು ಅರಿವಾಗಿರಬೇಕು. ನಿಜವಾಗಿಯೂ ಬದಲಾಗಿದ್ದರೆ ಸ್ವಾಗತ. ಲೇಖನದಲ್ಲಿ ಆತ್ಮಾವಲೋಕನದ (ಪುನರವಲೋಕನ) ಹೊಳಹೂ ಕೂಡ ಅಲ್ಲಲ್ಲಿ ಕಾಣುತ್ತದೆ.
ಬಲಪಂಥೀಯರಾರಿಗೂ ಮುಸ್ಲಿಮರನ್ನು ದ್ವೇಷಿಸಲು ಕಾರಣವೇ ಇಲ್ಲ ಸ್ವಾಮಿ. ಆಕ್ರೋಶವೇನಿದ್ದರೂ ಅವರಿಗೆ ಅನವಶ್ಯಕವಾಗಿ ವಿಶೇಷಸವಲತ್ತುಗಳನ್ನು ಕೊಟ್ಟು ಓಟಿಗಾಗಿ ಓಲೈಕೆ ಮಾಡುತ್ತಿರುವ ಮತ್ತು ಭಯೋತ್ಪಾದನೆಯ ವಿರುದ್ಧ ನಿಖರವಾದ ಹೆಜ್ಜೆಯನ್ನು ಇಡದಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳ ಮೇಲೆ. 'ಅಲ್ಪಸಂಖ್ಯಾತರು' ಎಂಬ ಪದಕ್ಕೆ ಯಾವುದಾದರೂ ರೀತಿಯಲ್ಲಿ ಅರ್ಥವಿದ್ದರೆ ದಯವಿಟ್ಟು ತಿಳಿಸಬೇಕು. ಈ ಓಲೈಕೆಯಿಂದ ಬೇಸತ್ತ ಕೆಲ 'ಸಾಮಾನ್ಯಜನ'ರು ಬಾಯಿ ಮಾತಿಗೆ ಆಗಾಗ 'ಓಡಿಸಬೇಕು ಕೊಂದುಬಿಡಬೇಕು' ಎನ್ನಬಹುದೇ ವಿನಾ ಆ ರೀತಿಯ ಬಯಕೆ ಖಂಡಿತ ಯಾರಿಗೂ ಇದ್ದದ್ದಿಲ್ಲ ಎಂದು ಆಣೆ ಮಾಡಿ ಹೇಳಬಹುದು. ಸ್ವಾತಂತ್ರ್ಯಪೂರ್ವದಿಂದಲೂ ಕಾಂಗ್ರೆಸ್ನಿಂದ ಬಳಕೆಯಲ್ಲಿರುವ ಈ ಓಲೈಕೆ ಪದ್ಧತಿ ಇಲ್ಲದಿರುತ್ತಿದ್ದರೆ ರಾಮಜನ್ಮಭೂಮಿಯಂತಹ ವಿಷಯಗಳು ತಾವಾಗಿಯೇ ಮಹತ್ವವನ್ನು ಕಳೆದುಕೊಳ್ಳುತ್ತಿದ್ದವು. ನಿಸಾರ್ ಅಹಮದ್, ಅಬ್ದುಲ್ ಕಲಾಮರಂತಹವರನ್ನೂ ಆರಾಧಿಸುವ ಜನ ನಾವು. ಯಾವ ಪ್ರಗತಿಪರ-ಲೇಖನಗಳಿಂದಲೂ ಪ್ರಭಾವಿತರಾಗಿ ನಾವು ಸಾಮಾನ್ಯಜನರು ಈ ಕೆಲಸ ಮಾಡುತ್ತಿಲ್ಲ. ಇಂತಹ ಲೇಖನಗಳಿಂದಾಗಿ ಆಯಾ ಲೇಖಕರಿಗೆ ಸ್ವಲ್ಪವಾದರೂ ಬುದ್ಧಿಬಂದಿದೆ ಎಂಬುದು ಮಾತ್ರ ತಿಳಿಯುತ್ತದೆ. ವಿಪರ್ಯಾಸವೆಂದರೆ ಇಂತಹ ಪ್ರಗತಿಪರ ಲೇಖಕರಿಗಿಂತ ಮೊದಲೇ (ಅವರಿಂದ ಯಾವ ಪಾಠವನ್ನೂ ಹೇಳಿಸಿಕೊಳ್ಳದೆಯೇ) ನಮ್ಮ ದೇಶದ ಮುಸ್ಲಿಮರಿಗೆ ಕೂಡ ಮೋದಿಯ ಬಗ್ಗೆ ಬಹಳ ಚೆನ್ನಾಗಿ ಅರಿವಾಗಿದ್ದು. ಈ ಲೇಖನವನ್ನು ಓದುವ ಮೊದಲೇ ಸೋಗಲಾಡಿ ಬುದ್ಧಿಜೀವಿಗಳ ಬಗ್ಗೆ ಜನರಿಗೆ ಸ್ಪಷ್ಟ ಅರಿವಿತ್ತು ಮತ್ತು ಮುಸ್ಲಿಮರೂ ಸೇರಿದಂತೆಯೇ ಬಹುಭಾರತೀಯರು ಮೋದಿಯನ್ನು ಆರಿಸಿಯಾಗಿತ್ತು. ಮುಸ್ಲಿಮರಿಗೇ ಇಲ್ಲದ ಆತಂಕ ಇವರಿಗೇಕೆ? ಅಕಸ್ಮಾತ್ ಮೋದಿಯವರೇನಾದರೂ ಸೋತಿದ್ದರೆ ಇವರ ಲೇಖನ ಹೀಗೇ ಇರುತ್ತಿತ್ತೆ ಅಥವಾ ಮೋದಿಯೇನಾದರೂ ಬ್ರಾಹ್ಮಣನಾಗಿದ್ದರೆ ಹೇಗಿದ್ದಿರಬಹುದೆಂದು ಯಾರಾದರೂ ಊಹಿಸಬಹುದು.
ಅನಂತಮೂರ್ತಿಯವರನ್ನು ಬಿಡಿ ಸ್ವಾಮಿ ಪಾಪ retire ಆದವರನ್ನು re-tire ಮಾಡಬೇಡಿ. ಅವರು ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ. ಎಲ್ಲದಕ್ಕೂ ಎಸ್. ಎಲ್ ಭೈರಪ್ಪನವರನ್ನು ಏಕೆ ಕರೆತರುತ್ತಾರೋ ಗೊತ್ತಿಲ್ಲ, ಐಟಂ ಸಾಂಗಿನ ಹಾಗೆ. (ಬಹುಶಃ ಚಲನಚಿತ್ರರಂಗದಲ್ಲೂ ಕೈಯಾಡಿಸಿರುವುದರಿಂದ ಇರಬಹುದು). ಕಿರಿದಾದ ರಸ್ತೆ ಮತ್ತು ಹೆದ್ದಾರಿಯ (ಕೊನೆಯ ಕಾಲಂ 2ನೆಯ ಪ್ಯಾರಾ) ವಿಶ್ಲೇಷಣೆ ಸೂಕ್ತವಾಗಿದೆ. ಪ್ರಗತಿಪರರೆನ್ನಿಸಿಕೊಳ್ಳುವವರಿಗೆ ಸ್ಯಾಡಿಸ್ಟ್ ಮನೋಭಾವ ಏಕಿರುತ್ತದೆಯೋ ಗೊತ್ತಿಲ್ಲ! ಮತ್ತೆ ನಿರಾಶಾವಾದದೊಂದಿಗೇ ಲೇಖನಕ್ಕೆ ಉಪಸಂಹಾರವಿಡುತ್ತಾರೆ. ಯಾವುದರಲ್ಲೂ ಹುಳುಕು ಹುಡುಕುವುದು ಮತ್ತು ತನ್ನದೇ ಸರಿಯೆಂಬ ಮೊಂಡುವಾದವನ್ನು ಮಂಡಿಸುವುದು. ಮೋದಿಯ ಬಳಿ ಮಂತ್ರದಂಡವಿಲ್ಲವೆಂದು ನಮಗೂ ಗೊತ್ತಿದೆ. ಆತ ಅಷ್ಟೇ ಪ್ರಾಮಾಣಿಕನೆಂಬುದೂ -ಯಾರು ಒಪ್ಪಿಕೊಳ್ಳಲಿ ಬಿಡಲಿ- ಗೊತ್ತಿದೆ. ಒಂದೈದು ವರ್ಷ ಅವಕಾಶ ಕೊಡದೆ ನಾವೇನೇ ಹೇಳಿದರೂ -ಪರವೋ ವಿರೋಧವೋ- ಅದಕ್ಕೆ ಅರ್ಥವಿಲ್ಲ. ಕಾದು ನೋಡೋಣ. ಲೇಖನದ ತಲೆನಾಮ ಲೇಖಕರದ್ದೋ ಪತ್ರಿಕೆಯದೋ ಗೊತ್ತಾಗಲಿಲ್ಲ. ಅಲ್ಲೂ ಗೊಂದಲದ ಸೃಷ್ಟಿ.
ಈ ಲೇಖನ ಓದಿದ ಕೂಡಲೇ 'ಬೆಂಕಿ ಆರಿತೇ' ಎಂದು ಮಿತ್ರನಿಗೆ ಸಂದೇಶ ರವಾನಿಸಿದೆ. ಅಲ್ಲಿಂದ ಬಂದ ಪ್ರತಿಕ್ರಿಯೆ ಇದು, ಆತನೇ ಅನುವಾದ ಮಾಡಿದ ಶ್ಲೋಕವೊಂದರ ಸಾಲು - 'ಕೆಂಡವ ಹಿಡಿದರೆ ಸುಡುವುದು ಅಂಗೈ, ಇದ್ದಿಲದೋ ಮಸಿ ಬಳಿಯುವುದು'.
-ಶ್ರೀನಿವಾಸನ್ ಎಸ್ ಎನ್.
ಉಪನ್ಯಾಸಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

