ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!

ಚೀನಾದ ಆರ್ಥಿಕ ವ್ಯವಸ್ಥೆ ಕುಸಿದಿರುವುದು ಅತ್ಯಂತ ಸ್ಪಷ್ಟ. ಚೀನಾ ಅನಾದಿ ಕಾಲದಿಂದ ತನ್ನ ಯಾವುದೇ ಆಂತರಿಕ ವಿಷಯವನ್ನ ಹೊರ ಜಗತ್ತಿಗೆ ಅಷ್ಟು ಬೇಗ ಬಿಟ್ಟು ಕೊಡುವ ಜಾಯಮಾನದ್ದಲ್ಲ.
ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!
ವಿತ್ತ ಪ್ರಪಂಚದ ನರಳಾಟ; ಯಾರಿಗೂ ಸುಖವಿಲ್ಲದ ವಾಣಿಜ್ಯ ಕಾದಾಟ!
ನಮ್ಮ ಜಗತ್ತು ಎತ್ತ ಸಾಗುತ್ತಿದೆ? ಇಂತಹ ಒಂದು ಪ್ರಶ್ನೆ ಯಾರಾದರೂ ಹಾಕಿದರೆ ಅದಕ್ಕೆ ಉತ್ತರ ಈ ಜಗತ್ತಿನಲ್ಲಿ ವಾಸಿಸುತ್ತಿರುವ ಏಳು ನೂರಕ್ಕೂ ಹೆಚ್ಚು ಕೋಟಿ ಜನ ಗೊತ್ತಿಲ್ಲ ಎನ್ನುವಂತೆ ತಲೆಯಾಡಿಸಿಯಾರು! ಏಕೆಂದರೆ ಜಗತ್ತನ್ನ ಇಂದು ಹಿಡಿತದಲ್ಲಿಡಲು ಸಾಧ್ಯವಿರುವುದು ಕೇವಲ ಹಣಕಾಸು ವ್ಯವಸ್ಥೆಯಿಂದ ಮಾತ್ರ ಸಾಧ್ಯ. 
ಆದರೆ ಇಂದೇನಾಗಿದೆ? ಅಮೆರಿಕಾದಂತಹ ದೈತ್ಯ ರಾಷ್ಟ್ರಕ್ಕೆ ಸಿಕ್ಕಿರುವ ನಾಯಕ ಹಠಕ್ಕೆ ಬಿದ್ದವರಂತೆ ಚೀನಾ ಎನ್ನುವ ಇನ್ನೊಂದು ದೈತ್ಯ ದೇಶದೊಂದಿಗೆ ಸೆಣಸಾಟಕ್ಕೆ ಬಿದ್ದಿದ್ದಾರೆ. ಜೊತೆಗೆ ಶತಾಯಗತಾಯ ಈ ಯುದ್ಧವನ್ನ ಗೆದ್ದೇ ತಿರುತ್ತೇನೆ ಎನ್ನುವ ಛಲದಲ್ಲಿ ಅವರು ತೆಗೆದುಕೊಳ್ಳುತ್ತಿರುವ ಆರ್ಥಿಕ ನಿರ್ಧಾರಗಳು ಮುಂಬರುವ ದಿನಗಳಲ್ಲಿ ಜಗತ್ತಿಗೆ ಮತ್ತಷ್ಟು ಸಂಕಷ್ಟ ನೀಡಲಿವೆ. ಇವರಿಬ್ಬರ ಟ್ರೇಡ್ ವಾರ್ ನಲ್ಲಿ ಜಗತ್ತಿನ ಬಹಳಷ್ಟು ದೇಶಗಳ ಹಣ ಮೌಲ್ಯವನ್ನ ಕಳೆದುಕೊಳ್ಳುತ್ತಿವೆ. ಭಾರತೀಯ ರೂಪಾಯಿ ಡಾಲರ್ ಮುಂದೆ ಇಲ್ಲಿಯವರೆಗೆ ಹದಿನೈದು ಪ್ರತಿಶತ ಕುಸಿದಿದೆ. ರಷ್ಯಾದ ರೂಬಲ್, ಟರ್ಕಿಯ ಲಿರಾ, ಯೂರೋಪಿನ ಯುರೋ  ಹೀಗೆ ಹಲವಾರು ದೇಶಗಳ ಹಣ ಡಾಲರ್ ಮುಂದೆ ಕುಸಿತ ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ಏನು? ಉತ್ತರ ಕೆಲವು ಸಾಲುಗಳಲ್ಲಿ ಬರೆದುಬಿಡಬಹದು ಆದರೆ ಅಲ್ಲಿರುವ ಹೋರಾಟ, ಜಿದ್ದಿನ ಮನೋಭಾವ ಜಗತ್ತಿನ ಜನರ ಬದುಕನ್ನ ಯಾವ ಮಟ್ಟಕ್ಕೆ ಇಳಿಸಬಹದು? ಎನ್ನುವುದು ಪ್ರಶ್ನೆ. 
ನಮಗೆಲ್ಲ ಗೊತ್ತಿರುವಂತೆ ಚೀನಾ ದೇಶ ವಿಶ್ವದ ದೊಡ್ಡಣ್ಣನಾಗಲು ಅಮೇರಿಕಾ ದೇಶದೊಂದಿಗೆ ಸೆಣಸಾಡುತ್ತಾ ಬಂದಿದೆ. ರಷ್ಯಾ ದೇಶದೊಂದಿಗೆ ನಡೆದ ಶೀತಲ ಸಮರದ ನಂತರ ವಿಶ್ವದ ದೊಡ್ಡಣ್ಣನ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿಯುತ್ತಿದ್ದ ಅಮೇರಿಕಾ ದೇಶಕ್ಕೆ ಹತ್ತಿರ ಬರುವ ಯಾವ ದೇಶವೂ ಇರಲಿಲ್ಲ. 
ವಿಶ್ವದ ತಯಾರಿಕಾ ಘಟಕ ಎನ್ನುವಂತೆ ಹಗಲು ರಾತ್ರಿ ತನ್ನ ಜನರನ್ನ ಗುಲಾಮರಂತೆ ದುಡಿಸಿ ಚೀನಾ ಜಗತ್ತಿಗೆಲ್ಲಾ ತನ್ನ ಉತ್ಪನ್ನಗಳನ್ನ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಲು ಶುರು ಮಾಡಿತು. ಆರಂಭದಲ್ಲಿ ಕಡಿಮೆ ಬೆಲೆಗೆ ಸಿಕ್ಕ ವಸ್ತುಗಳನ್ನ ಅತ್ಯಂತ ಖುಷಿಯಿಂದ ಕೊಂಡ ಜಗತ್ತು ನಂತರದ ದಿನಗಲ್ಲಿ ಅದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿಕೊಂಡು ಬಿಟ್ಟಿದೆ ಎಂದರೆ ಚೀನಾ ಆಕಸ್ಮಾತ್ ತನ್ನ ತಯಾರಿಕೆಯನ್ನ ನಿಲ್ಲಿಸಿ ಬಿಟ್ಟರೆ ಒಂದು ಹಂತದ ಪ್ಯಾನಿಕ್ ಶುರುವಾಗುವಷ್ಟು. ತನ್ನ ವಸ್ತುಗಳ ತಾನೇ ತಯಾರಿಸಿಕೊಳ್ಳುತ್ತಿದ್ದ ಯೂರೋಪು ಇಂದು ಪೂರ್ಣವಾಗಿ ಕಡಿಮೆ ಬೆಲೆಗೆ ಸಿಗುವ ಚೀನಾ ವಸ್ತುಗಳ ದಾಸನಾಗಿದೆ. ಅಮೇರಿಕಾ ಮಾರುಕಟ್ಟೆಯನ್ನೂ ಕೂಡ ಚೀನಾ ವಸ್ತುಗಳು ಇನ್ನಿಲ್ಲದಂತೆ ಕಾಡುತ್ತಿವೆ. ಈ ಜಟಾಪಟಿಯ ನಡುವೆ ಅಮೇರಿಕಾ 250 ಬಿಲಿಯನ್ ಡಾಲರ್ ಮೌಲ್ಯದ ಚೀನಾದ ಉತ್ಪನ್ನಗಳ ಮೇಲೆ ಬೆಲೆ ಏರಿಸಿದೆ. ಇದು ಚೀನಾದ ಆರ್ಥಿಕತೆ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿದೆ. 
ವಿಶ್ವದ ಜನ ಚೀನಾದ ಉತ್ಪನ್ನಗಳನ್ನ ಕೊಳ್ಳಬೇಕು, ಅವರು ಮತ್ತೆ ಉತ್ಪಾದಿಸಬೇಕು, ಹೀಗೆ ಇದೊಂದು ಸುತ್ತುವಿಕೆ. ಈ ಸುತ್ತುವಿಕೆ ನಿಲ್ಲುವ ಮಾತು ಹಾಗಿರಲಿ ಅದರ ವೇಗದಲ್ಲಿ ಸ್ವಲ್ಪ ಬದಲಾವಣೆಯಾದರೂ ಸಮಾಜದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಅಮೇರಿಕಾ ಚೀನಾದ ಸಾವಿರಾರು ಉತ್ಪನ್ನಗಳ ಮೇಲೆ ತೆರಿಗೆ ಏರಿಸಿದೆ ಈ ಕಾರಣದಿಂದ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಏರುತ್ತದೆ. ಜನರ ಕೊಳ್ಳುವ ಶಕ್ತಿ ಅಮೇರಿಕಾ ದೇಶದಲ್ಲಿ ದಶಕದಿಂದ ನಿಂತಲ್ಲೇ ನಿಂತಿದೆ. ಪರಿಸ್ಥಿತಿ ಹೀಗಿರುವಾಗ ಅವರು ಎರಡು ಕೊಳ್ಳುವ ಜಾಗದಲ್ಲಿ ಒಂದು ಕೊಳ್ಳುತ್ತಾರೆ. ಚೀನಾದ ಉತ್ಪಾದನೆ -ಮಾರುವಿಕೆ -ಮರು ಉತ್ಪಾದನೆ ಎನ್ನುವ ಚಕ್ರದ ವೇಗ ತುಸು ಕಡಿಮೆಯಾಗುತ್ತದೆ. ಅಷ್ಟು ಸಾಕು ಚೀನಾದ ಮಾರುಕಟ್ಟೆ ಕುಸಿಯಲು. ಈಗ ಚೀನಾದಲ್ಲಿ ಆಗಿರುವುದು ಇದೆ. 
ಚೀನಾದ ಆರ್ಥಿಕ ವ್ಯವಸ್ಥೆ ಕುಸಿದಿರುವುದು ಅತ್ಯಂತ ಸ್ಪಷ್ಟ. ಚೀನಾ ಅನಾದಿ ಕಾಲದಿಂದ ತನ್ನ ಯಾವುದೇ ಆಂತರಿಕ ವಿಷಯವನ್ನ ಹೊರ ಜಗತ್ತಿಗೆ ಅಷ್ಟು ಬೇಗ ಬಿಟ್ಟು ಕೊಡುವ ಜಾಯಮಾನದ್ದಲ್ಲ. ಆದರೇನು ಇಂದಿನ ವ್ಯಾಪಾರಿ ಯುಗದಲ್ಲಿ ಹೇಳದಿದ್ದರೂ ಬಹಳಷ್ಟು ವಿಷಯಗಳು ಜಗಜ್ಜಾಹೀರಾಗುತ್ತವೆ. ಹೀಗೆ ತನ್ನ ಉತ್ಪನ್ನ ಚಕ್ರದಲ್ಲಿ ವಿಳಂಬವಾಗಿರುವುದು ಸಮಾಜ ಆರ್ಥಿಕವಾಗಿ ಕೆಂಗೆಟ್ಟಿರುವುದು ಮನಗಂಡ ಚೀನಾದ ಸೆಂಟ್ರಲ್ ಬ್ಯಾಂಕ್ ಹತ್ತಿರತ್ತಿರ ನೂರಾ ಹತ್ತು ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನ ಮಾರುಕಟ್ಟೆಗೆ ಬಿಡಲು ಸಿದ್ಧತೆ ಮಾಡಿದೆ. ತನ್ನ ಬ್ಯಾಂಕ್ಗಳು ಇಡಬೇಕಾದ ರಿಸರ್ವ್ ಹಣವನ್ನ ಕೂಡ ಕಡಿತ ಮಾಡಿದೆ. ಸಾಲದಕ್ಕೆ ಜನರ ಕೈಲಿ ಹಣದ ಹರಿವು ಹೆಚ್ಚಿಸಲು ರಸ್ತೆ ಕಾಮಗಾರಿಯಂತ ಹಲವು ಕಾಮಗಾರಿ ಕೆಲಸವನ್ನ ಶುರುಮಾಡಿದೆ. ಸರಕಾರ ಯಾವಾಗ ಸಾರ್ವಜನಿಕ ಮೂಲಭೂತ ವ್ಯವಸ್ಥೆಯ ಮೇಲೆ ಹೆಚ್ಚು ಖರ್ಚು ಮಾಡಲು ಶುರುಮಾಡುತ್ತದೆಯೂ ಅದು ಆ ದೇಶ ಆರ್ಥಿಕವಾಗಿ ಸಶಕ್ತವಲ್ಲ ಎನ್ನುವುದರ ಒಂದು ಲಕ್ಷಣ. ಇರಲಿ. 
ಚೀನಾ ಮತ್ತು ಅಮೆರಿಕಾದ ನೇರ ಹಣಾಹಣಿಯಲ್ಲಿ ಗೆಲುವು ಯಾರದೇ ಆಗಲಿ ಅಥವಾ ಯಾರೇ ಸೋಲಲಿ ಫಲಿತಾಂಶ ಬೇಗ ಬರಲಿ ಎನ್ನುವುದು ಜಗತ್ತಿನ ಆರ್ಥಿಕ ತಜ್ಞರ ಪ್ರಾಥನೆ. ಈ ಪ್ರಕ್ರಿಯೆ ವಿಳಂಬವಾದಷ್ಟು ತನ್ನದಲ್ಲದ ಕಾರಣಕ್ಕೆ ಅನೇಕ ಚಿಕ್ಕ ಪುಟ್ಟ ದೇಶಗಳ, ಜನರ ಬದುಕು ಬರ್ಬರವಾಗುತ್ತದೆ. 
ಇನ್ನು ಭಾರತದ ಕತೆಯೇನು? ಈ ಪ್ರಶ್ನೆಗೆ ಉತ್ತರ ಕೂಡ ಸಲೀಸಾಗಿ ಹೇಳಿಬಿಡಬಹದು. ಆದರೆ ಸಮಸ್ಯೆ ನಾವಂದುಕೊಂಡಿರುವುದಕ್ಕಿಂತ ಹೆಚ್ಚು ಜಟಿಲವಾಗಿದೆ. ಗಮನಿಸಿ ಇತ್ತೀಚಿಗೆ ಭಾರತ ಮತ್ತು ರಷ್ಯಾ ಡಿಫೆನ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೇರಿಕಾ ದೇಶ ಇಂತಹ ಒಂದು ಒಪ್ಪಂದದ ವಿರುದ್ಧವಾಗಿತ್ತು. ಭಾರತವೇನಾದರೂ ಈ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತದ ಉತ್ಪನ್ನಗಳ ಮೇಲೆ ನಿರ್ಬಂಧ ಹೇರುವುದು ಅಥವಾ ಚೀನಾದ ಉತ್ಪನ್ನಗಳ ಮೇಲೆ ಬೆಲೆ ಏರಿಸಿದಂತೆ ಬೆಲೆ ಏರಿಸುವುದು ಅಮೆರಿಕಾದ ಉದ್ದೇಶವಾಗಿತ್ತು. ಮತ್ತು ಅದು ಅದನ್ನ ಯಾವ ಮುಚ್ಚುಮರೆಯಿಲ್ಲದೆ ಭಾರತಕ್ಕೆ ಎಚ್ಚರಿಕೆಯ ರೀತಿಯಲ್ಲಿ ಹೇಳಿತ್ತು ಕೂಡ. ಭಾರತ ಸರಕಾರ ಇದ್ಯಾವುದನ್ನೂ ಪರಿಗಣಿಸದೆ ತನ್ನ ಹಳೆಯ ಮಿತ್ರ ರಷ್ಯಾ ಜೊತೆ ಬಹಳ ಧೈರ್ಯದಿಂದ ಒಪ್ಪಂದಕ್ಕೆ ಸಹಿ ಹಾಕಿದೆ. 
ಮಿತ್ರ ದೇಶವಾದ ಭಾರತ ಮೇಲೆ ನಿರ್ಬಂಧ ಏರಲು ಸಾಧ್ಯವಿಲ್ಲ ಎನ್ನುವ ಕಾರಣ ಕೊಟ್ಟು ಅಮೇರಿಕಾ ಭಾರತದ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ಈ ಎಲ್ಲಾ ಘಟನೆ ನೆಡೆಯುವುದಕ್ಕೆ ಕೇವಲ ವಾರ ಮುಂಚೆ ಅಮೇರಿಕಾ ಅಧ್ಯಕ್ಷ ಭಾರತ ತನ್ನ ತಾಳಕ್ಕೆ ಕುಣಿಯದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಿರ್ಬಂಧ ಹೇರುವುದಾಗಿ ಹೇಳಿದ್ದರು. ಇದೀಗ ಭಾರತದ ಬಗ್ಗೆ ದಿಢೀರ್ ಪ್ರೀತಿ ಬರಲು ಕಾರಣ ಚೀನಾ ಎನ್ನುವ ದೇಶ. ಅಮೇರಿಕಾ ಒಟ್ಟೊಟ್ಟಿಗೆ ಚೀನಾ ಮತ್ತು ಭಾರತವನ್ನ ಎದುರಿಸುವ ತಾಕತ್ತು ಹೊಂದಿಲ್ಲ. ಹೀಗಾಗಿ ಇಲ್ಲಿ ಅಮೇರಿಕಾ ಒಂದು ಕಲ್ಲಿನಲ್ಲಿ ಎರಡು ಹಣ್ಣು ಹೊಡೆಯುವ ಹುನ್ನಾರ ನೆಡೆಸಿದೆ. ಮೊದಲಿಗೆ ಭಾರತದ ಮೇಲೆ ನಿರ್ಬಂಧ ಹೇರದೆ ಅದು ತನ್ನ ಮಿತ್ರ ರಾಷ್ಟ್ರ ಎಂದರೆ ಚೀನಾದ ಗಾಯದ ಮೇಲೆ ಒಂದಷ್ಟು ಉಪ್ಪು ಸುರಿದಂತೆ, ಎರಡು ಮುಂಬರುವ ದಿನಗಳಲ್ಲಿ ದೈತ್ಯ ಚೀನಾವನ್ನ ಹಿಡಿದಿಡಲು ಭಾರತವನ್ನ ಅಸ್ತ್ರವಾಗಿ ಬಳಸುವುದು. ಇದೇನೇ ಇರಲಿ ಸದ್ಯದ ಮಟ್ಟಿಗೆ ಭಾರತ ಈ ವಿಷಯದಲ್ಲಿ ಸುರಕ್ಷಿತ. ಹಾಗಾದರೆ ಎಲ್ಲಾ ಸರಿಯಿದೆಯೇ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಎಂದು ಹೇಳಬೇಕಾಗುತ್ತದೆ. ಪರಿಸ್ಥಿಯನ್ನ ಹತೋಟಿಗೆ ತರದೇ ಹೋದರೆ ಮುಂಬರುವ ದಿನಗಳಲ್ಲಿ ಭಾರತ ಆರ್ಥಿಕ ಸಂಕಷ್ಟ ಅಥವಾ ರಿಸೆಶನ್ ಗೆ ತುತ್ತಾಗುವ ಭೀತಿಯಿದೆ. 
ಈ ರೀತಿಯ ರಿಸೆಶನ್ ಭಯಕ್ಕೆ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹದು. 
  1. ಬೆಲೆಯೇರಿಕೆ, ಹಣದುಬ್ಬರ: ಸಮಾಜದಲ್ಲಿ ಏರುತ್ತಿರುವ ಸೇವೆ ಮತ್ತು ಸರಕಿನ ಬೆಲೆ ಜನ ಸಾಮಾನ್ಯರ ಜೀವನವನ್ನ ಸಂಕಷ್ಟಕ್ಕೆ ದೂಡಿವೆ. 
  2. ಒಂದೇ ಸಮನೆ ಏರುತ್ತಿರುವ ತೈಲ ಬೆಲೆ: ಎಲ್ಲಾ ಸಮಸ್ಯೆಗಳ ಮೂಲ ಇದು. ಇಂದು ಸಮಾಜದಲ್ಲಿ ಎಲ್ಲಾ ವಸ್ತು ಅಥವಾ ಸೇವೆಯ ಬೆಲೆ ಹೆಚ್ಚಲು ಅಪರೋಕ್ಷವಾಗಿ ಇದೆ ಕಾರಣ. ತೈಲ ಬೆಲೆಯನ್ನ ಡಾಲರ್ ನಲ್ಲಿ ನಿಗದಿ ಮಾಡುವುದು, ಡಾಲರ್ ಅನ್ನು ವರ್ಲ್ಡ್ ಕರೆನ್ಸಿ ಎಂದು ನಾವೆಲ್ಲಾ ಒಪ್ಪಿಕೊಂಡಿರುವುದು ಇದಕ್ಕೆ ಕಾರಣ. 
  3. ಏರುತ್ತಿರುವ ಡಾಲರ್ ಬೆಲೆ ಅಥವಾ ಕುಸಿಯುತ್ತಿರುವ ರೂಪಾಯಿ: ಇದೊಂದು ದೊಡ್ಡ ತಲೆನೋವು. ಡಾಲರ್ ನ ಬೇಡಿಕೆ ಎಷ್ಟಿದೆ ಎಂದರೆ ಜಗತ್ತಿನಲ್ಲಿ ಯಾವುದೇ ವಹಿವಾಟಾಗಲಿ ಇದನ್ನ ಮಾಧ್ಯವನ್ನಾಗಿ ಬಳಸುತ್ತಾರೆ, ಜೊತೆಗೆ ಚೀನಾದ ಫಾರಿನ್ ಕರೆನ್ಸಿ ರಿಸರ್ವ್ ಹೆಸರಲ್ಲಿ ಸಾಕಷ್ಟು ಅಮೆರಿಕನ್ ಡಾಲರ್ ಅನ್ನು ಹಿಡಿದಿಟ್ಟಿದೆ, ಅಮೇರಿಕಾ ತನ್ನ ಫೆಡರಲ್ ಬಡ್ಡಿ ದರವನ್ನ ಈ ವರ್ಷದಲ್ಲಿ ಎರಡು ಬಾರಿ ಏರಿಸಿದೆ. ಇನ್ನೆರೆಡು ಬಾರಿ ಏರಿಸುತ್ತದೆ ಎನ್ನುವ ಊಹಾಪೋಹ ಮಾರುಕಟ್ಟೆಯಲ್ಲಿ ಹರಡಿದೆ. ಇಷ್ಟು ಸಾಕು ಹೂಡಿಕೆದಾರರು ಡಾಲರ್ ಗೆ ಮುಗಿ ಬೀಳಲು. ಸ್ಥಳೀಯ ಹೂಡಿಕೆದಾರರು ಕೂಡ ಕುಸಿಯುತ್ತಿರುವ ರೂಪಾಯಿ ಕಂಡು ಡಾಲರ್ನಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಡಾಲರ್ ಬಲಿಷ್ಟವಾಗುತ್ತದೆ. ರೂಪಾಯಿ ಸೊರಗುತ್ತದೆ. 
  4. ಅಮೇರಿಕಾ ಸದ್ಯಕ್ಕೆ ಭಾರತದ ಮೇಲೆ ತೋರಿರುವ ಮೃದು ಧೋರಣೆ ಮುಂದುವರಿಯುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸದ್ಯದ ಮಟ್ಟಿಗೆ ಅದು ತನ್ನ ಅತ್ಯಂತ ಪ್ರಭಲ ವೈರಿ ಚೀನಾವನ್ನ ಮಟ್ಟ ಹಾಕುವುದರಲ್ಲಿ ಮಗ್ನವಾಗಿದೆ. ಅದರಲ್ಲಿ ಅದರ ಕೈ ಒಂದು ಸುತ್ತು ಮೇಲಾದರೂ ಸಾಕು ಅದರ ಗಮನ ಭಾರತದತ್ತ ಬರುತ್ತದೆ. 
  5. ಇನ್ನೊಂದು ವರ್ಷದಲ್ಲಿ ಬರಲಿರುವ ಚುನಾವಣೆ ಗೆಲ್ಲಲು ಈಗಿನ ಕೇಂದ್ರ ಸರಕಾರ ಪ್ರಯತ್ನಿಸುವುದು ಸಹಜ. ಏರುತ್ತಿರುವ ಬೆಲೆ, ಜನಸಾಮಾನ್ಯನ ಬಿಸಿಯುಸಿರು ಗೆಲುವಿಗೆ ಇರುವ ಪ್ರಮುಖ ಅಡ್ಡಿ. ಕೇಂದ್ರ ಸರಕಾರ ಚುನಾವಣೆ ಸಮಯಕ್ಕೆ ಇವುಗಳನ್ನ ಒಂದು ತಹಬದಿಗೆ ತರಲು ಹರಸಾಹಸ ಪಡುವುದು ಗ್ಯಾರಂಟಿ. ಗೆಲ್ಲಲೇ ಬೇಕು ಎಂದು ಕೇಂದ್ರ ಸರಕಾರ ಸಬ್ಸಿಡಿ ಮೊರೆ ಹೋದರೆ ಕೇಂದ್ರದ ಖಜಾನೆ ಖಾಲಿಯಾಗುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. 
  6. ಇವೆಲ್ಲಾ ಬದಿಗಿಟ್ಟು ಅಂಕಿ ಅಂಶ ನೋಡಿದರೆ ಮೊದಲ ತ್ರೈಮಾಸಿಕ ಫಲಿತಾಂಶ ನೋಡಿದರೆ ಅದು ಭಾರತದ ಪರವಾಗಿದೆ. ಗ್ರೋಥ್ ರೇಟ್ 8.2 ಪ್ರತಿಶತವಿದೆ. ಇದು ಅತ್ಯಂತ ಆರೋಗ್ಯಕರ ಸಂಖ್ಯೆ. ಆದರೆ ಒಂದೇ ಸಮನೆ ಏರುತ್ತಿರುವ ತೈಲ ಬೆಲೆ ಮುಂಬರುವ ಮಾಸಿಕದಲ್ಲಿ ಈ ಸಂಖ್ಯೆಯನ್ನ ಖಂಡಿತ ಕುಗ್ಗಿಸಲಿವೆ. 
ಕೊನೆ ಮಾತು: ಒಂದೇ ಸಮನೆ ಏರುತ್ತಿರುವ ಫೆಡರಲ್ ಬಡ್ಡಿ ದರ, ಏರುತ್ತಿರುವ ತೈಲ ಬೆಲೆ, ಪರ್ಯಾಯವಿಲ್ಲದ ವರ್ಲ್ಡ್ ಕರೆನ್ಸಿ, ಬೆಲೆ ಇವೆಲ್ಲಾ ಒಗ್ಗೊಡಿ ಡಾಲರ್ ಅನ್ನು ಬಹಳ ಬಲಿಷ್ಟವಾಗಿಸಿವೆ. ತನಗೆ ಸೆಡ್ಡು ಹೊಡೆದು ಬೆಳೆದಿರುವ ಚೀನಾದ ಮೇಲೆ ನಿಯಂತ್ರಣ ಹೊಂದಲು ಅಥವಾ ಕನಿಷ್ಟ ಅದರ ಬೆಳವಣಿಗೆಯನ್ನ ತಡೆಯುವುದು ಅಮೆರಿಕಾದ ಉದ್ದೇಶ. ಗಮನಿಸಿ ತೈಲ ಬೆಲೆಯನ್ನ ಏರುಪೇರು ಮಾಡುವುದು ಅಮೇರಿಕಾ, ಫೆಡರಲ್ ಬಡ್ಡಿ ಏರಿಸುವುದು ಕೂಡ ಅದರ ಕೈಲಿದೆ, ಜಗತ್ತಿಗೆ ಇಂದು ಸದ್ಯದ ಮಟ್ಟಿಗಂತೂ ಡಾಲರ್ಗೆ ಪರ್ಯಾಯ ಸಿಕ್ಕಿಲ್ಲ. ಇದರ ಅರ್ಥವೇನು? ಇವತ್ತು ಜಗತ್ತಿನ ಆರ್ಥಿಕತೆಯನ್ನ ತನ್ನ ಲಾಭಕ್ಕೆ ತಿರುಚಿಕೊಳ್ಳುವ ಎಲ್ಲಾ ಸಾಧನಗಳು ಅಮೇರಿಕಾ ಕೈಲಿದೆ. ಇಂತಹ ಒಂದು ಉತ್ತಮ ಅವಕಾಶವನ್ನ ಅದೇಕೆ ಬಿಟ್ಟೀತು? ಇದೆಲ್ಲಾ ಸರಿ. ಇಲ್ಲಿ ಎಲ್ಲಕ್ಕಿಂತ ಹೆಚ್ಚು ನೆಮ್ಮದಿ ಕೊಡುವ ವಿಷಯವೆಂದರೆ ಅಮೇರಿಕಾ ಕೂಡ ಇಂತಹ ಹೊಲಸು ಆಟವನ್ನು ಹೆಚ್ಚು ಹೊತ್ತು ಆಡಲು ಆಗುವುದಿಲ್ಲ. ಏಕೆಂದರೆ ಅದು ತಿರುಗುಬಾಣವಾಗುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ. ಹೀಗಾಗಿ ಇದು ತಾತ್ಕಾಲಿಕ ಆಟ. ಆದರೆ ಗಮನಿಸಿ ಈ ಸಮಯದಲ್ಲಿ ಹತ್ತಾರು ಸಣ್ಣ ಪುಟ್ಟ ದೇಶಗಳು, ಕೋಟ್ಯಂತರ ಜನರ ಬದುಕು ಕೆಟ್ಟು ಹೋಗುತ್ತದೆ. ಹಲವು ದೇಶಗಳ ಭವಿಷ್ಯ ಬದಲಾಗುತ್ತದೆ. ಭಾರತದ ಮಟ್ಟಿಗೆ ಹೇಳಬೇಕೆಂದರೆ ಇದು ಮುಂಬರುವ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಜಗತ್ತಿನ ಅಧಿಪತಿಯಾಗೆ ಇರುವ ಅಮೇರಿಕಾದ ಆಸೆಗೆ ಅದು ಎಸೆದಿರುವ ಕಲ್ಲಿಗೆ ಅದೆಷ್ಟು ತಲೆಗೆ ಪೆಟ್ಟಾಗುವುದೋ? ಸಮಯವೇ ನಿಖರ ಲೆಕ್ಕ ನೀಡಲಿದೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com