ಜನರ ದಾಹಕ್ಕಿಂತ ಐಪಿಎಲ್ ಮುಖ್ಯವಾಯಿತೇ?

ತೀವ್ರ ಬರಗಾಲದ ನಡುವೆಯೂ ಮಹಾರಾಷ್ಟ್ರದಲ್ಲಿ ಐಪಿಎಲ್ ಆಯೋಜನೆಗೆ ಮುಂದಾಗಿರುವ ಕ್ರಿಕೆಟ್ ಮಂಡಳಿ ವಿರುದ್ಧ ಬಾಂಬೇ ಹೈಕೋರ್ಟ್ ಜನರ ದಾಹ ಮುಖ್ಯವೋ? ಅಥವಾ ಐಪಿಎಲ್ ಟೂರ್ನಿ ಮುಖ್ಯವೋ ಎಂದು ಕಿಡಿಕಾರಿದೆ.
ಬಾಂಬೇ ಹೈಕೋರ್ಟ್ ಮತ್ತು ಐಪಿಎಲ್ (ಸಂಗ್ರಹ ಚಿತ್ರ)
ಬಾಂಬೇ ಹೈಕೋರ್ಟ್ ಮತ್ತು ಐಪಿಎಲ್ (ಸಂಗ್ರಹ ಚಿತ್ರ)
Updated on: 

ಮುಂಬೈ: ತೀವ್ರ ಬರಗಾಲದ ನಡುವೆಯೂ ಮಹಾರಾಷ್ಟ್ರದಲ್ಲಿ ಐಪಿಎಲ್ ಆಯೋಜನೆಗೆ ಮುಂದಾಗಿರುವ ಕ್ರಿಕೆಟ್ ಮಂಡಳಿ ವಿರುದ್ಧ ಬಾಂಬೇ ಹೈಕೋರ್ಟ್ ಜನರ ದಾಹ ಮುಖ್ಯವೋ? ಅಥವಾ  ಐಪಿಎಲ್ ಟೂರ್ನಿ ಮುಖ್ಯವೋ ಎಂದು ಕಿಡಿಕಾರಿದೆ.

ಐಪಿಎಲ್ 9ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೇವಲ 2 ದಿನಗಳ ಮಾತ್ರ ಬಾಕಿ ಉಳಿದಿದ್ದು, ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬರಗಾಲದ ಕರಿನೆರಳು ಬಿಸಿಸಿಐನ  ಪ್ರತಿಷ್ಠಿತ ಟೂರ್ನಿ ಮೇಲೆ ಆವರಿಸಿದೆ. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಬಾಂಬೇ ಹೈಕೋರ್ಟ್ ಬಿಸಿಸಿಐಗೆ ಚಾಟಿ ಬೀಸಿದ್ದು, ಮಹಾರಾಷ್ಟ್ರದಲ್ಲಿ ತೀವ್ರ  ಬರಗಾಲದ ಪರಿಸ್ಥಿತಿ ಇರುವುದರಿಂದ ಮಹಾರಾಷ್ಟ್ರದಲ್ಲಿ ನಡೆಯಬೇಕಿರುವ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಲು ಬಿಸಿಸಿಐಗೆ ಸಲಹೆ ನೀಡಿದೆ. "ಮಹಾರಾಷ್ಟ್ರ ಭೀಕರ ಬರಗಾಲ  ಎದುರಿಸುತ್ತಿರುವ ಇಂಥಹ ಸಮಯದಲ್ಲಿ ಕ್ರೀಡಾಂಗಣದ ಪಿಚ್‌ಗಳಿಗೆ ಲಕ್ಷಾಂತರ ಲೀಟರ್ ನೀರುಣಿಸುವ ಮೂಲಕ ಪೋಲು ಮಾಡುವುದು ಸರಿಯಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಿಸಿಸಿಐಗೆ ನೀಡುತ್ತಿರುವ ನೀರಿನ ಸರಬರಾಜನ್ನು ನಿಲ್ಲಿಸಿದರೆ ಮಾತ್ರ, ಇಲ್ಲಿನ ವ್ಯಥೆ ಅರ್ಥವಾಗುತ್ತದೆ. ಈ ರೀತಿಯಲ್ಲಿ ನೀರನ್ನು ವ್ಯರ್ಥ ಮಾಡಲು ನಿಮಗೆ (ಬಿಸಿಸಿಐ) ಹೇಗೆ ಸಾಧ್ಯ. ಜನರಿಗಿಂತ  ನಿಮಗೆ ಐಪಿಎಲ್ ಮುಖ್ಯವಾಯಿತೇ? ಇಷ್ಟು ಬೇಜವಾಬ್ದಾರಿಯಾಗಿರಲು ಹೇಗೆ ಸಾಧ್ಯ? ನಿಮಗೆ ಮಹಾ ರಾಷ್ಟ್ರದ ಸದ್ಯದ ಪರಿಸ್ಥಿತಿಯ ಬಗ್ಗೆ ಅರಿವಿದೆಯೇ?’ ಎಂದು ಪ್ರಶ್ನಿಸಿದೆ. ಇದೇ ವೇಳೆ  ಬರಗಾಲದ ನಡುವೆಯೂ ಜನರ ದಾಹವನ್ನು ಕಡೆಗಣಿಸಿ ಅಮೂಲ್ಯ ನೀರನ್ನು ಪೋಲು ಮಾಡುವ ಕ್ರಿಕೆಟ್ ಮಂಡಳಿಗಳ ಬೇಜವಾಬ್ದಾರಿ ವರ್ತನೆಗೆ ನ್ಯಾಯಾಲಯ ಕಿಡಿಕಾರಿದೆ.

ಈ ಹಿಂದೆ ಬರಗಾಲ ಎದುರಿಸುತ್ತಿರುವ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಲೋಕಸತ್ತಾ ಮೂವ್‌ಮೆಂಟ್ ಎಂಬ ಸಾಮಾಜಿಕ ಸಂಘಟನೆ  ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಎಂ ಕಾನಡೆ ಹಾಗೂ ಎಂಎಸ್ ಕಾರ್ನಿಕ್ ನೇತೃತ್ವದ  ವಿಭಾಗೀಯ ಪೀಠ, ‘ಜನರು ನೀರಿಲ್ಲದೆ ಬದುಕುತ್ತಿರುವ ವೇಳೆ ಲಕ್ಷಾಂತರ ಲೀಟರ್ ನೀರನ್ನು ಐಪಿಎಲ್ ಪಂದ್ಯಗಳ ವೇಳೆ ಪಿಚ್‌ಗಳಿಗೆ ಹಾಕುವ ಮೂಲಕ ನೀರನ್ನು ಪೋಲು ಮಾಡಲಾಗುತ್ತಿದೆ.  ಜನರ ದಾಹಕ್ಕಿಂತ ಐಪಿಎಲ್ ಪಂದ್ಯಗಳೇ ನಿಮಗೆ ಮುಖ್ಯವಾಯಿತೇ’ ಎಂದು ಬಿಸಿಸಿಐಗೆ ಪ್ರಶ್ನೆ ಮಾಡಿದೆ.

ಇದೇ ಏಪ್ರಿಲ್ 9 ಶನಿವಾರದಿಂದ 2016ನೇ ಸಾಲಿನ ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಐಪಿಎಲ್‌ನ ಉದ್ಘಾಟನಾ ಪಂದ್ಯ ಸೇರಿದಂತೆ, ಎಲಿಮಿನೇಟರ್, ಕ್ವಾಲಿ ಫೈಯರ್ ಹಂತದ 2  ಪಂದ್ಯಗಳು ಸೇರಿದಂತೆ ಮಹಾರಾಷ್ಟ್ರದ ಮುಂಬೈ (8), ನಾಗ್ಪುರ (3) ಮತ್ತು ಪುಣೆಯಲ್ಲಿ (9) ಒಟ್ಟು 20 ಪಂದ್ಯಗಳು ನಡೆಯಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com