ಪಂದ್ಯ ಸ್ಥಳಾಂತರ ಸುಲಭವಲ್ಲ: ಅನುರಾಗ್ ಠಾಕೂರ್

ಅತ್ತ ಬಾಂಬೇ ಹೈಕೋರ್ಟ್ ಬರಗಾಲ ಪೀಡಿತ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಕುರಿತಂತೆ ಕಿಡಿಕಾರಿದ್ದರೆ, ಇತ್ತ ಟೂರ್ನಿಯನ್ನು ಸ್ಥಳಾಂತರಿಸಲು ಬಿಸಿಸಿಐ ಬಾಸ್ ಗಳು ಹಿಂದೇಟು ಹಾಕಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ಬಾಂಬೇ ಹೈಕೋರ್ಟ್ (ಸಂಗ್ರಹ ಚಿತ್ರ)
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ಬಾಂಬೇ ಹೈಕೋರ್ಟ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಅತ್ತ ಬಾಂಬೇ ಹೈಕೋರ್ಟ್ ಬರಗಾಲ ಪೀಡಿತ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಕುರಿತಂತೆ ಕಿಡಿಕಾರಿದ್ದರೆ, ಇತ್ತ ಟೂರ್ನಿಯನ್ನು ಸ್ಥಳಾಂತರಿಸಲು ಬಿಸಿಸಿಐ ಬಾಸ್  ಗಳು ಹಿಂದೇಟು ಹಾಕಿದ್ದಾರೆ.

ಟೂರ್ನಿ ಆಯೋಜನೆ ಸಂಬಂಧ ಬಿಸಿಸಿಐ ವಿರುದ್ಧ ಬಾಂಬೇ ಹೈಕೋರ್ಟ್ ಕಿಡಿಕಾರಿರುವ ಕುರಿತಂತೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಪಂದ್ಯಗಳ  ವೇಳಾಪಟ್ಟಿ ತಿಂಗಳುಗಳ ಹಿಂದೆಯೇ ರಚನೆಯಾಗಿದ್ದು, ಇದೀಗ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಪಂದ್ಯಗಳನ್ನು ಸ್ಥಳಾಂತರ ಮಾಡುವುದು ಅಷ್ಟು ಸುಲಭವಲ್ಲ.  ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಕೊನೇ ಕ್ಷಣದಲ್ಲಿ ಪಂದ್ಯವನ್ನು ಸ್ಥಳಾಂತರ ಮಾಡಿ ಕೆಟ್ಟ ಹೆಸರು ಸಂಪಾದಿಸಿದ್ದೇವೆ. ಪಂದ್ಯ ಸ್ಥಳಾಂತರ ಮಾಡಿದರೆ ಯಾರಿಗೂ  ಲಾಭವಾಗುವುದಿಲ್ಲ. ಬದಲಿಗೆ ಸಾಕಷ್ಟು ನಷ್ಟ ಹಾಗೂ ಕೆಟ್ಟ ಹೆಸರು ಸಿಗುತ್ತದೆಯಷ್ಟೆ ಎಂದು ಹೇಳಿದ್ದಾರೆ.

ಇಂದು ಮಧ್ಯಂತರ ತೀರ್ಪು ಸಾಧ್ಯತೆ
ಇನ್ನು ಬಿಸಿಸಿಐ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಟೂರ್ನಿ ಆಯೋಜನೆ ಕುರಿತಂತೆ ಬಾಂಬೇ ಹೈಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ  ಇದೆ. ಬಿಸಿಸಿಐ ಹಾಗೂ ಮಹಾರಾಷ್ಟ್ರದ ಮೂರೂ ಕ್ರಿಕೆಟ್ ಸಂಸ್ಥೆಗಳಿಗೆ (ಮಹಾರಾಷ್ಟ್ರ, ಮುಂಬೈ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆ) ನೋಟಿಸ್ ನೀಡಿರುವ ಹೈಕೋರ್ಟ್ ಗುರುವಾರದ ಒಳಗಾಗಿ  ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತ್ತು. ಪಿಚ್‌ಗಳಿಗೆ ನೀರುಣಿಸಲು ಬಿಡದಂತೆ ಮಧ್ಯಂತರ ತೀರ್ಪು ನೀಡಬೇಕು ಎಂದು ಅರ್ಜಿದಾರರ  ಮನವಿಯ ಕುರಿತು ಗುರುವಾರ ನಿರ್ಧಾರ ಮಾಡುವುದಾಗಿ ನ್ಯಾಯಾಲಯ ತಿಳಿಸಿದ್ದು, ಸರ್ಕಾರದ ಪರ ವಕೀಲ ರೋಹಿತ್ ದಿಯೋ ಗುರುವಾರ ಕೋರ್ಟ್‌ಗೆ ಹಾಜರಾಗಬೇಕು ಎಂದಿದೆ. ಅಲ್ಲದೆ,  ಟೂರ್ನಿಗಾಗಿ ಎಷ್ಟು ಪ್ರಮಾಣದ ನೀರು ವ್ಯಯ ಮಾಡಲಾಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿರುವ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ ನೀರು ಪೋಲಾಗುವುದನ್ನು ತಡೆಯುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ರಾಜ್ಯ ಸರ್ಕಾರ. ಆದರೆ, ಬಿಸಿಸಿಐ ಪಂದ್ಯಗಳನ್ನು ನೀರು ಹೆಚ್ಚುವರಿಯಾಗಿ ಇರುವ  ರಾಜ್ಯಗಳಿಗೆ ಪಂದ್ಯವನ್ನು ಸ್ಥಳಾಂತರ ಮಾಡುವ ಬಗ್ಗೆ ಚಿಂತಿಸಬಹುದು ಎಂದೂ ನ್ಯಾಯಪೀಠ ಸಲಹೆ ನೀಡಿದೆ.

ವಾಂಖೆಡೆಗೆ 40 ಲಕ್ಷ ಲೀಟರ್ ನೀರು
ಮುಂಬೈ ಕ್ರಿಕೆಟ್ ಸಂಸ್ಥೆ ವಾಂಖೆಡೆ ಸ್ಟೇಡಿಯಂಗಾಗಿ ಎಷ್ಟು ನೀರು ಖರ್ಚು ಮಾಡುತ್ತದೆ ಎಂದು ಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ತನ್ನ ಪರ ವಕೀಲರ ಮೂಲಕ ಉತ್ತರಿಸಿದ್ದ ಕ್ರಿಕೆಟ್ ಸಂಸ್ಥೆ, 7  ಐಪಿಎಲ್ ಪಂದ್ಯಗಳಿಗಾಗಿ ಅಂದಾಜು 40 ಲಕ್ಷ ಲೀಟರ್ ನೀರನ್ನು ವ್ಯಯ ಮಾಡಲಿದೆ ಎಂದು ಹೇಳಿತ್ತು. ಇದು ಬಹಳ ದೊಡ್ಡ ಪ್ರಮಾಣ ಎಂದು ಕೋರ್ಟ್ ಹೇಳಿದೆ. ಮರುಬಳಕೆ ಮಾಡಿ  ಕುಡಿಯಲು ಸಾಧ್ಯವಾಗದಂಥ ನೀರನ್ನು ಮಾತ್ರ ಪಿಚ್‌ಗಳಿಗೆ ಬಳಸಲಾಗುತ್ತಿದೆ ಎಂದು ಎಂಸಿಎ ಪರ ವಕೀಲ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com