ಮೈದಾನಕ್ಕೆ ಪ್ರೇಕ್ಷಕರ ಸೆಳೆಯಲು ಮತ್ತೆ ಐಪಿಎಲ್ ವಿಫಲ!

ಐಪಿಎಲ್ ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಳೆಗುಂದುತ್ತದೆ ಎಂಬ ಹಿರಿಯ ಕ್ರಿಕೆಟಿಗರ ವ್ಯಾಖ್ಯಾನಗಳು ಸುಳ್ಳಾಗಿದ್ದು, ಸತತ ಎರಡನೇ ಬಾರಿಗೆ ಐಪಿಎಲ್ ಗೆ ಪ್ರೇಕ್ಷಕರ ಅಭಾವ ಎದುರಾಗಿದೆ...
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ (ಸಂಗ್ರಹ ಚಿತ್ರ)
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಐಪಿಎಲ್ ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಳೆಗುಂದುತ್ತದೆ ಎಂಬ ಹಿರಿಯ ಕ್ರಿಕೆಟಿಗರ ವ್ಯಾಖ್ಯಾನಗಳು ಸುಳ್ಳಾಗಿದ್ದು, ಸತತ ಎರಡನೇ ಬಾರಿಗೆ  ಐಪಿಎಲ್ ಗೆ ಪ್ರೇಕ್ಷಕರ ಅಭಾವ ಎದುರಾಗಿದೆ.

ಟಿ20 ವಿಶ್ವಕಪ್ ಬೆನ್ನಲ್ಲೇ ಆರಂಭವಾದ ಐಪಿಎಲ್ ಟೂರ್ನಿಗೂ ಅದೇ ಪ್ರಮಾಣದ ಪ್ರೇಕ್ಷಕರು ಧಾವಿಸಲಿದ್ದಾರೆ ಎಂಬ ಐಪಿಎಲ್ ಆಯೋಜಕರ ಆಲೋಚನೆ ಸುಳ್ಳಾಗಿದ್ದು  ಐಪಿಎಲ್ ಪಂದ್ಯಾವಳಿಗೆ ಪ್ರೇಕ್ಷಕರೇ ಇಲ್ಲದೇ ಗ್ಯಾಲರಿಗಳು ಬಿಕೋ ಎನ್ನುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಟಿ20 ವಿಶ್ವಕಪ್ ಫೈನಲ್ ಹಾಗೂ  ಸೆಮಿಫೈನಲ್ ಪಂದ್ಯಗಳಲ್ಲಿ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಹೋಗಿದ್ದ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮೊನ್ನೆ ತವರಿನ ತಂಡ ಕೋಲ್ಕತಾ ನೈಟ್  ರೈಡರ್ಸ್ ತಂಡ ಆಡಿದಾಗ ಸೇರಿದ್ದು 32.700 ಪ್ರೇಕ್ಷಕರು ಮಾತ್ರ. ಈಡನ್ ಕ್ರೀಡಾಂಗಣ ಸಾಮರ್ಥ್ಯ 66,349ರಷ್ಟಿದ್ದು, ಇದರ ಅರ್ಧದಷ್ಟು ಜನ ಕೂಡ ಮೊನ್ನೆಯ  ಪಂದ್ಯಕ್ಕೆ ಸೇರಿರಲಿಲ್ಲ.

ಕೇವಲ ಇದು ಕೋಲ್ಕತಾ ವಿಚಾರವಷ್ಟೇ ಅಲ್ಲ ಐಪಿಎಲ್ ನ ಪ್ರಮುಖ ಪಂದ್ಯಗಳು ನಡೆಯುತ್ತಿರುವ ಬೆಂಗಳೂರು, ದೆಹಲಿ ಮತ್ತು ಮುಂಬೈ ಕ್ರೀಡಾಂಗಣದಲ್ಲೂ ಇದೇ  ಕತೆ.. ಮುಂಬೈ ಇಂಡಿಯನ್ಸ್ ತಂಡ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದಾಗ ಅಲ್ಲಿ ಸೇರಿದ್ದು 3/4ರಷ್ಟು ಮಾತ್ರ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ  ಕ್ರೀಡಾಂಗಣದ ಪ್ರೇಕ್ಷಕರ ಸಾಮರ್ಥ್ಯ 70 ಸಾವಿರ ಇದ್ದು, ನಿನ್ನೆ ಮತ್ತು ಇದಕ್ಕೂ ಮೊದಲು ಆರ್ ಸಿಬಿ ತಂಡ ಆಡುವಾಗ ಅಲ್ಲಿ ಸೇರಿದ್ದು, 30 ಸಾವಿರ ಪ್ರೇಕ್ಷಕರು  ಮಾತ್ರ. ಈ ಅಂಶಗಳೇ ಐಪಿಎಲ್ ನ ಗತಕಾಲದ ವೈಭವ ಕಳೆಗುಂದಿದೆ ಎಂದು ತಿಳಿಸುತ್ತಿವೆ. 2011ರ ವಿಶ್ವಕಪ್ ಸಂದರ್ಭದಲ್ಲಿಯೂ ಹೀಗೆ ಆಗಿತ್ತು, ವಿಶ್ವಕಪ್ ಬೆನ್ನಲ್ಲೇ ಆರಂಭವಾದ ಐಪಿಎಲ್ ಗೂ ಪ್ರೇಕ್ಷಕರ ಅಭಾವ ಎದುರಾಗಿತ್ತು.

ಆದರೆ ಈ ಬಗ್ಗೆ ಐಪಿಎಲ್ ಆಯೋಜಕರು ಹೇಳುವುದೇ ಬೇರೆ, ಕಳೆದವಾರವಷ್ಟೇ ಸರಣಿ ಆರಂಭವಾಗಿದೆ, ಈಗಲೇ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವುದು  ಸೂಕ್ತವಲ್ಲ. ಕಳೆದ ತಿಂಗಳು ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲೇ ಆಯೋಜನೆಯಾಗಿತ್ತು. ಹೀಗಾಗಿ ಪ್ರೇಕ್ಷಕರು ಟಿ20 ವಿಶ್ವಕಪ್ ಗುಂಗಿನಿಂದ ಹೊರಬಂದಿಲ್ಲ.  ಮೈದಾನದ ಪ್ರತಿಯೊಂದು ಗ್ಯಾಲರಿ ತುಂಬಲು ಇನ್ನೊಂದಿಷ್ಟು ದಿನ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ ಐಪಿಎಲ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಧಕ್ಕೆಯಾಗುತ್ತದೆ ಎಂಬ ಶಂಕೆ ಈ ಅಂಕಿ ಅಂಶಗಳ ಪ್ರಕಾರ ದೂರವಾಗಿದ್ದು, ಐಪಿಎಲ್ ಗಿಂತ ಅಂತಾರಾಷ್ಟ್ರೀಯ  ಟೂರ್ನಿಗಳತ್ತಲೇ ಪ್ರೇಕ್ಷಕರು ಹೆಚ್ಚು ಉತ್ಸುರಾಗಿದ್ದಾರೆ ಎಂದು ತಿಳಿದುಬರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com