ನವದೆಹಲಿ: ಈ ಬಾರಿ ಬರಗಾಲದ ಬಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೂ ತಟ್ಟಿದ್ದು, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು 2017ರಲ್ಲಿ ನಡೆಯುವ ಐಪಿಎಲ್ 10ನೇ ಆವೃತ್ತಿಯನ್ನು ವಿದೇಶದಲ್ಲಿ ಆಯೋಜಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.
ಐಪಿಎಲ್ ಆಡಳಿತ ಮಂಡಳಿ ಭಾರತ ಹಾಗೂ ವಿದೇಶ ಎರಡರಲ್ಲೂ ಸ್ಥಳಗಳನ್ನು ಪರಿಶೀಲಿಸುತ್ತಿದ್ದು, ಸ್ಥಳಗಳ ಲಭ್ಯತೆ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.
ಐಪಿಎಲ್ ಪಂದ್ಯಾವಳಿಗಳನ್ನು ಈಗಾಗಲೇ ಎರಡು ಬಾರಿ ವಿದೇಶದಲ್ಲಿ ಆಯೋಜಿಸಲಾಗಿದೆ. 2009ರಲ್ಲಿ ವಿಧಾನಸಭೆ ಚುನಾವಣೆ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014ರಲ್ಲಿ ಕೆಲವು ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು,
ಈ ಬಾರಿ ದೇಶದಲ್ಲಿ ತೀವ್ರ ಬರಗಾಲವಿರುವುದರಿಂದ ಮುಂಬೈ ಹಾಗೂ ಪುಣೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಐಪಿಎಲ್ ಪಂದ್ಯಾವಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಸಹ ಐಪಿಎಲ್ ಪಂದ್ಯಗಳನ್ನು ಬರಪೀಡಿತ ರಾಜ್ಯದಲ್ಲಿ ನಡೆಯಲು ಅವಕಾಶ ನೀಡಿದ ಕ್ರಮವನ್ನು ರಾಜಸ್ಥಾನ ಹೈಕೋರ್ಟ್ ಟೀಕಿಸಿದೆ. ಈ ಎಲ್ಲಾ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ಬಿಸಿಸಿಐ ಮುಂದಿನ ಬಾರಿ ಐಪಿಎಲ್ ಅನ್ನು ವಿದೇಶಕ್ಕೆ ಶಿಫ್ಟ್ ಮಾಡುವ ಚಿಂತನೆ ನಡೆಸಿದೆ.