

ಮುಂಬೈ: ಐಪಿಎಲ್ ಗುಂಗಿನಿಂದ ಈಗಷ್ಟೇ ಹೊರಬಂದಿರುವ ಟೀಂ ಇಂಡಿಯಾ ಹುಡುಗರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನತ್ತ ತಮ್ಮ ಚಿತ್ತ ನೆಡಬೇಕಿದ್ದು, 2016-17ನೇ ಸಾಲಿನಲ್ಲಿ ಬಿಸಿಸಿಐ ಸಾಲು-ಸಾಲು ಸರಣಿಗಳನ್ನು ಆಯೋಜಿಸಿದೆ.
2016-17 ಸಾಲಿನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಒಟ್ಟು 13 ಟೆಸ್ಟ್, 8 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದ್ದು, ಟೆಸ್ಟ್ ಪಂದ್ಯಗಳಿಗಾಗಿ ಆರು ಹೊಸ ಕ್ರೀಡಾಂಗಣಗಳು ಸಜ್ಜಾಗಿವೆ. ಈ ಹಿಂದೆ ಟೆಸ್ಟ್ ಪಂದ್ಯಗಳಿಗಾಗಿ ಮಾನ್ಯತೆ ಪಡೆಯದೇ ಇದ್ದ ರಾಜ್ ಕೋಟ್, ವಿಶಾಖಪಟ್ಟಣ, ಧರ್ಮಶಾಲಾ, ರಾಂಚಿ ಮತ್ತು ಇಂದೋರ್ ಕ್ರೀಡಾಂಗಣಗಳನ್ನು ಟೆಸ್ಟ್ ಪಂದ್ಯಗಳಿಗಾಗಿ ಆಧುನೀಕರಣಗೊಳಿಸಲಾಗಿದೆ.
ಈ ನೂತನ ಕ್ರೀಡಾಂಗಣಗಳಲ್ಲಿ ಟೆಸ್ಟ್ ಪಂದ್ಯವನ್ನಾಡಲು ಐಸಿಸಿ ಗ್ರೀನ್ ಸಿಗ್ನಲ್ ನೀಡಿದ್ದು, ತವರಿನ ಸರಣಿಗಳಲ್ಲಿ ಈ ಕ್ರೀಡಾಂಗಣಗಳನ್ನು ಇದೇ ಮೊದಲ ಬಾರಿಗೆ ಬಳಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ತಿಳಿಸಿದ್ದಾರೆ. ತವರಿನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯ ಹಾಗೂ 5 ಏಕದಿನ ಪಂದ್ಯಗಳನ್ನಾಡಲಿದ್ದು, ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್, 3ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಗಳನ್ನಾಡಲಿದೆ.
ಅಂತೆಯೇ 2017 ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ 4 ಟೆಸ್ಟ್ ಪಂದ್ಯಗಳನ್ನಾಡಲಿದೆ. ಬಳಿಕ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ ಎಂದು ತಿಳಿದುಬಂದಿದೆ. ಈ ನಡುವೆ ಕಿವೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ವೇಳೆ ಇಂದೋರ್, ಕಾನ್ಪುರ ಮತ್ತು ಕೋಲ್ಕತಾದಲ್ಲಿ 3 ಟೆಸ್ಟ್ ಹಾಗೂ ಧರ್ಮಶಾಲಾ, ದೆಹಲಿ, ವಿಶಾಖಪಟ್ಟಣಂ, ಮೊಹಾಲಿ ಮತ್ತು ರಾಂಚಿಯಲ್ಲಿ ಐದು ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ.
ಅಂತೆಯೇ ಇಂಗ್ಲೆಂಡ್ ವಿರುದ್ಧ ಆಯೋಜನೆಗೊಂಡಿರುವ ಐದು ಟೆಸ್ಟ್ ಪಂದ್ಯಗಳನ್ನು ಮೊಹಾಲಿ, ರಾಜ್ ಕೋಟ್, ಮುಂಬೈ, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಪುಣೆ, ಕಟಕ್ ಮತ್ತು ಕೋಲ್ಕತಾದಲ್ಲಿ ಮೂರು ಏಕದಿನ ಪಂದ್ಯಗಳನ್ನು ನಡೆಸಲಾಗುತ್ತಿದೆ. ಬೆಂಗಳೂರುಸ ನಾಗ್ಪುರ ಮತ್ತು ಕಾನ್ಪುರದಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ.
ಆಸ್ಚ್ರೇಲಿಯಾ ವಿರುದ್ಧ ಸರಣಿಯ 4 ಟೆಸ್ಟ್ ಪಂದ್ಯಗಳು ಬೆಂಗಳೂರು, ಧರ್ಮಶಾಲಾ, ರಾಂಚಿ ಮತ್ತು ಪುಣೆಯಲ್ಲಿ ನಡೆಯಲಿದ್ದು, ಹೈದರಾಬಾದ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.