

ಮುಂಬೈ: ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರಿಗಿಂತಲೂ ಒಂದು ಹಂತ ಮೇಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಕಪಿಲ್ ದೇವ್, ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಎಲ್ಲ ರೀತಿಯ ವಾತಾವರಣದಲ್ಲೂ ಸುಲಭವಾಗಿ ಒಗ್ಗಿಕೊಳ್ಳುವ ಗುಣ ಹೊಂದಿದ್ದಾರೆ. ಹೀಗಾಗಿ ಅವರು ವಿಶ್ವದ ಶ್ರೇಷ್ಠ ಆಟಗಾರರಿಗಿಂತಲೂ ಒಂದು ಹಂತ ಮೇಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಸಚಿನ್ ತೆಂಡೂಲ್ಕರ್ ನಿವೃತ್ತರಾದಾಗ ಭಾರತೀಯ ಕ್ರಿಕೆಟ್ ಜಗತ್ತು ಒಂದು ಕ್ಷಣ ಅವಾಕಾಗಿತ್ತು. ಆದರೆ ಬಳಿಕ ವಿರಾಟ್ ಕೊಹ್ಲಿ ಅವರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ನೋಡಲು ಆರಂಭಿಸಿದೆ. ಸಚಿನ್ ಅವರ ಸಮರ್ಥ ಪರ್ಯಾಯ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ ಎನ್ನುವಷ್ಟರ ಮಟ್ಟಿಗೆ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಅವರನ್ನು ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಭಾರತದ ಸರ್ವಕಾಲಿಕ ಬ್ಯಾಟಿಂಗ್ ಲೆಜೆಂಡ್ ಗಳಿಗಿಂತಲೂ ಕೊಹ್ಲಿ ಒಂದು ಹಂತ ಮೇಲಿದ್ದು, ವಿವಿಯನ್ ರಿಚರ್ಡ್ಸ್, ರಿಕ್ಕಿಪಾಟಿಂಗ್, ಬ್ರಿಯಾನ್ ಲಾರಾ ಮತ್ತು ಸಚಿನ್ ಅವರಿಗಿಂತಲೂ ಶ್ರೇಷ್ಠ ಎಂದು ಹೇಳುವ ಮೂಲಕ ಕೊಹ್ಲಿ ಅವರನ್ನು 1983ರ ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಕಪಿಲ್ ದೇವ್ ಹೊಗಳಿದ್ದಾರೆ.
ಕಳೆದ ಹಲವು ಸರಣಿಗಳಲ್ಲಿ ನಾನು ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿ ಮತ್ತು ವೈಖರಿಯನ್ನು ಗಮನಿಸಿದ್ದೇನೆ. ಕೊಹ್ಲಿ ಪ್ರಸ್ತುತ ತಮ್ಮ ವೃತ್ತಿಪರ ಜೀವನದ ಉತ್ತಂಗ ಸ್ಥಿತಿಯಲ್ಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪಾಕಿಸ್ತಾನದಂತಹ ಎದುರಾಳಿ ವಿರುದ್ಧ 37 ಎಸೆತದಲ್ಲಿ 55 ರನ್ ಸಿಡಿಸಿದ ಕೊಹ್ಲಿ ಬ್ಯಾಟಿಂಗ್ ನಿಂದಾಗಿ ಅವರು ಯಾವುದೇ ಪರಿಸ್ಥಿತಿಗೂ ಹೊಂದಿಕೊಂಡು ಆಡಬಲ್ಲ ಆಟಗಾರ ಎಂಬುದು ಸಾಬೀತಾಗಿದೆ. ಕೊಹ್ಲಿಯನ್ನು ಎಲ್ಲರೂ ಅಗ್ರೆಸ್ಸಿವ್ ಆಟಗಾರ ಎನ್ನುತ್ತಾರೆ. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅವರು ನಿಜಕ್ಕೂ ತಾಳ್ಮೆಯ ಆಟ ಪ್ರದರ್ಶಿಸಿದರು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.