

ಕರಾಚಿ: ಟಿ20 ವಿಶ್ವಕಪ್ ನಲ್ಲಿ ಹೀನಾಯ ಪ್ರದರ್ಶನ ಮತ್ತು ಭಾರತದ ವಿರುದ್ಧದ ಸೋಲಿನಿಂದಾಗಿ ತೀವ್ರ ಮುಜುಗರಕ್ಕೀಡಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮತ್ತು ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ತಮ್ಮ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮಂಗಳವಾರ ಕರಾಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವಕಾರ್ ಯೂನಿಸ್, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಇದೀಗ ಹಲವಾರು ಆತಂರಿಕ ಸಮಸ್ಯೆಗಳಿವೆ. ಇದನ್ನು ಪರಸ್ಪರ ಕುಳಿತು ಮಾತನಾಡಿಕೊಳ್ಳುವ ಮೂಲಕ ಬಗೆಹರಿಸಿ ಕೊಳ್ಳಬೇಕಾದ ಅಗತ್ಯತೆ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ತಂಡದ ಪ್ರದರ್ಶನ ಅಸಮಧಾನ ತಂದಿದ್ದು, ವಿಶ್ವಕಪ್ನಲ್ಲಿ ಪಾಕ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ನನ್ನ ರಾಜೀನಾಮೆಯ ಹಿಂದೆ ಯಾವುದೇ ರೀತಿಯ ಒತ್ತಡವಿಲ್ಲ ಎಂದು ವಕಾರ್ ಯೂನಿಸ್ ಸ್ಪಷ್ಟಪಡಿಸಿದ್ದಾರೆ.