ಮತ್ತೆ ಒಂದಾದ ಕೊಹ್ಲಿ-ಅನುಷ್ಕಾ?
ಬೆ೦ಗಳೂರು: ಭಾರತೀಯ ಕ್ರಿಕೆಟ್ ನ ಇತ್ತೀಚೆಗಿನ ಸೆನ್ಸೇಷನಲ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವಿನ ಬ್ರೇಕ್ ಅಪ್ ವಿಚಾರ ಭಾರಿ ಸುದ್ದಿ ಗ್ರಾಸವಾಗಿತ್ತಾದರೂ, ಬಳಿಕ ಮತ್ತೆ ಅನುಷ್ಕಾ-ಕೊಹ್ಲಿ ಒಂದಾದ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.
ಆದರೆ ಇದಾವುದಕ್ಕೂ ಪುರಾವೆಗಳು ದೊರೆತಿರಲಿಲ್ಲ. ಆದರೆ ಇತ್ತೀಚೆಗೆ ಐಪಿಎಲ್ ಪಂದ್ಯದ ವೇಳೆ ಈ ಮಾಜಿ ಜೋಡಿ ಹಕ್ಕಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರಿಬ್ಬರ ನಡುವಿನ ವಿರಸ ಅಂತ್ಯಗೊಂಡಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಗುಜರಾತ್ ಲಯನ್ಸ್ ವಿರುದ್ಧ ಬೆಂಗಳೂರು ತಂಡ ಗೆಲುವು ಸಾಧಿಸಿದ ಬಳಿಕ ಅನುಷ್ಕಾ-ವಿರಾಟ್ ಭೇಟಿ ಮಾಡಿದ್ದಾರಂತೆ.
ಕೇವಲ ಭೇಟಿ ಮಾಡಿದ್ದಷ್ಟೇ ಅಲ್ಲದೇ ಬೆಂಗಳೂರಿನ ಖ್ಯಾತ ಜಪನೀಸ್ ರೆಸ್ಟೋರೆಂಟ್ ಇಬ್ಬರೂ ಲೇಟ್ ನೈಟ್ ಪಾರ್ಟಿ ಕೂಡ ಮಾಡಿದ್ದಾರೆ. ಇಂತಹುದೊಂದು ಊಹಾಪೋಹ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಖ್ಯಾತ ಸಾಮಾಜಿಕ ಜಾಲತಾಣ ಇನ್ಸ್ ಟಾಗ್ರಾಮ್ ನಲ್ಲಿ ಒಂದು ಫೋಟೋ ಕೂಡ ಹರಿದಾಡುತ್ತಿದೆ. ಚಿತ್ರದಲ್ಲಿ ವಿರಾಟ್ ಮತ್ತು ಅನುಷ್ಕಾ ರೆಸ್ಟೋರೆಂಟ್ ನ ಸಿಬ್ಬಂದಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದು, ಈ ಚಿತ್ರ ಇದೀಗ ವೈರಲ್ ಆಗಿದೆ.
ಕೇವಲ ಇದಿಷ್ಟೇ ಅಲ್ಲ ಈ ಹಿಂದೆ ಬ್ರೇಕ್ ಅಪ್ ಆದ ಬಳಿಕ ಅನುಷ್ಕಾರನ್ನು ಇನ್ಸ್ ಟಾಗ್ರಾಮ್ ನಲ್ಲಿ ಫಾಲೋ ಮಾಡುವುದನ್ನು ಬಿಟ್ಟಿದ್ದ ಕೊಹ್ಲಿ ಪ್ಯಾಚ್ ಅಪ್ ಆಗುತ್ತಿದ್ದಂತೆಯೇ ಅವರ ಟ್ವಿಟರ್ ಖಾತೆಯನ್ನು ಫಾಲೋ ಮಾಡಲು ಶುರು ಮಾಡಿದ್ದಾರಂತೆ. ಒಟ್ಟಾರೆ ಬ್ರೇಕ್ ಬಳಿಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಈ ಜೋಡಿ ಇದೀಗ ಮತ್ತೆ ಒಂದಾಗುವ ಸುದ್ದಿ ಕೂಡ ವ್ಯಾಪಕವಾಗಿ ಹರಿದಾಡುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ