

ನವದೆಹಲಿ: ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾಗ್ ಠಾಕೂರ್ ತಮ್ಮ ಹಿಂದಿನ ಅಧ್ಯಕ್ಷರ ಪರಂಪರೆಯನ್ನು ಜವಾಬ್ದಾರಿಯುತವಾಗಿ ಮುನ್ನಡೆಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಬಿಸಿಸಿಐ ನ ಅಧ್ಯಕ್ಷ ಹುದ್ದೆ ಮುಳ್ಳಿನ ಕಿರೀಟವಲ್ಲ, ಪ್ರತಿಯೊಂದು ಹುದ್ದೆಯಲ್ಲೂ ಸವಾಲುಗಳು ಇರುತ್ತವೆ, ಆದ್ದರಿಂದ ಬಿಸಿಸಿಐ ಅಧ್ಯಕ್ಷರ ಹುದ್ದೆಯನ್ನು ಮುಳ್ಳಿನ ಕಿರೀಟ ಎಂದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದು ಭಾರತ ಸದ್ಯದಲ್ಲೇ ಇಂತಹ ಪಂದ್ಯಗಳನ್ನು ಆಯೋಜಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಆಟಗಾರನ ಸಾಮರ್ಥ್ಯ ಅಳೆಯಲು ಟೆಸ್ಟ್ ಮಾದರಿಯ ಕ್ರಿಕೆಟ್ ಅತ್ಯುತ್ತಮವಾದ ಅವಕಾಶ, ಆದ್ದರಿಂದ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಶೀಘ್ರವೇ ಆಯೋಜಿಸಲಾಗುತ್ತದೆ ಎಂದು ಗಂಗೂಲಿ ತಿಳಿಸಿದ್ದಾರೆ.