
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಸೀಸನ್-9ರ ಮೊದಲ ಪ್ಲೇ ಆಫ್ ಪಂದ್ಯ ನಿರೀಕ್ಷೆಯಂತೆಯೇ ರೋಚಕವಾಗಿ ಅಂತ್ಯಕಂಡಿದ್ದು, ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಮತ್ತು ಗುಜರಾತ್ ತಂಡಗಳ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು.
ಪ್ಲೇ ಆಫ್ ನಲ್ಲಿ ಸ್ಥಾನ ಗಿಟ್ಟಿಸುವುದೇ ಅನುಮಾನ ಎಂಬಂತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನೆದುರಿಗಿದ್ದ ಎಲ್ಲ "ಚಾಲೆಂಜ್" ಗಳನ್ನು ಯಶಸ್ವಿಯಾಗಿ ಎದುರಿಸಿ ಇದೀಗ ಪ್ಲೇ ಆಫ್ ನಲ್ಲಿ ಸ್ಥಾನ ಗಿಟ್ಟಿಸುವುದಷ್ಟೇ ಅಲ್ಲ, ಪ್ಲೇ ಆಫ್ ನಲ್ಲಿ ಗುಜರಾತ್ ತಂಡವನ್ನು ಮಣಿಸಿ ಐಪಿಎಲ್ ಸೀಸನ್ 9ರ ಫೈನಲ್ ಗೆ ಲಗ್ಗೆ ಇಟ್ಟಿದೆ. ಆದರೆ ಗುಜರಾತ್ ಕೂಡ ಬೆಂಗಳೂರು ತಂಡಕ್ಕೆ ಅಷ್ಟು ಸುಲಭದ ತುತ್ತಾಗಿರಲಿಲ್ಲ. 158 ರನ್ ಗಳ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದ ಗುಜರಾತ್ ತಂಡ ಕೇವಲ 25 ರನ್ ಗಳಾಗುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಬಳಿಸಿತ್ತು. ಇದು ಪ್ರಸಕ್ತ ಸಾಲಿನ ಐಪಿಎಲ್ ದಾಖಲೆಗಳಲ್ಲಿ ಒಂದು. ಇಷ್ಟು ಕಡಿಮೆ ಮೊತ್ತಕ್ಕೆ ಅದೂ ಕೂಡ ಪವರ್ ಪ್ಲೇ ಅವಧಿಯಲ್ಲಿ ತಂಡವೊಂದು ಗಳಿಸಿದ ಗರಿಷ್ಠ ವಿಕೆಟ್ ಸಾಧನೆ ಇದಾಗಿದೆ.
ಇಂತಹ ಹಲವು ದಾಖಲೆಗಳು ನಿನ್ನೆಯ ಪಂದ್ಯದಲ್ಲಿ ಸೃಷ್ಟಿಯಾಗಿದೆ.
1.ಬೆಂಗಳೂರು ತಂಡದ ವಿರುದ್ಧ ಮಾರಕ ಬೌಲಿಂಗ್ ಮಾಡಿದ್ದ ಗುಜರಾತ್ ತಂಡದ ಧವಳ್ ಕುಲಕರ್ಣಿ ಪವರ್ ಪ್ಲೇ ಓವರ್ ಗಳ ಅವಧಿಯಲ್ಲಿ 4 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಪವರ್ ಪ್ಲೇ ಅವಧಿಯಲ್ಲಿ 4 ವಿಕೆಟ್ ಪಡೆದ ಮೊದಲ ಬೌಲರ್ ಧವಳ್ ಕುಲಕರ್ಣಿಯಾಗಿದ್ದಾರೆ. ಇದಕ್ಕೂ ಮೊದಲು ಇಶಾಂತ್ ಶರ್ಮಾ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ 2011ರಲ್ಲಿ 5 ವಿಕೆಟ್ ಪಡೆದಿದ್ದರು. ಅದಕ್ಕೂ ಮೊದಲು ಅಂದರೆ 2008ರಲ್ಲಿ ದೆಹಲಿ ವಿರುದ್ದ ಶೊಯೆಬ್ ಅಖ್ತರ್ ನಾಲ್ಕು ವಿಕೆಟ್ ಪಡೆದಿದ್ದರು. ಬಳಿಕ 2012ರಲ್ಲಿ ಚಾಂಡೀಲಾ ಪುಣೆ ವಿರುದ್ಧ 4 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
2. ನಿನ್ನೆ ಬೆಂಗಳೂರು ತಂಡದ ವಿರುದ್ಧ 4 ವಿಕೆಟ್ ಪಡೆದ ಕುಲಕರ್ಣಿ ಪವರ್ ಪ್ಲೇ ಅವಧಿಯಲ್ಲಿ ವೈಯುಕ್ತಿಕ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದರು. ನಿನೆಯ ನಾಲ್ಕು ವಿಕೆಟ್ ಗಳೊಂದಿದೆ ಕುಲಕರ್ಣಿ ಪವರ್ ಪ್ಲೇ ಅವಧಿಯಲ್ಲಿ ತಾವು ಗಳಿಸಿದ ವಿಕೆಟ್ ಗಳ ಸಂಖ್ಯೆಯನ್ನು 14ಕ್ಕೇರಿಸಿಕೊಂಡರು. ಅವರ ಬಳಿಕದ ಸ್ಥಾನದಲ್ಲಿ 9 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಇದ್ದಾರೆ.
3.ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಬರೊಬ್ಬರಿ 51 ಇನ್ನಿಂಗ್ಸ್ ಗಳ ಬಳಿಕ ಮೊದಲ ಬಾರಿಗೆ ಡಕ್ ಔಟ್ ಆಗಿದ್ದಾರೆ. ಇದು ಐಪಿಎಲ್ ಅಷ್ಟೇ ಅಲ್ಲ ಟಿ20 ಮಾದರಿ ಕ್ರಿಕೆಟ್ ನಲ್ಲೇ ಹೊಸ ದಾಖಲೆಯಾಗಿದೆ. ಕೊನೆಯ ಬಾರಿಗೆ ಕೊಹ್ಲಿ ಪಂಜಾಬ್ ವಿರುದ್ದ 2014ರಲ್ಲಿ ಡಕ್ ಔಟ್ ಆಗಿದ್ದರು.
4.ಗುಜರಾತ್ ಪರ ಅಮೋಘ ಬ್ಯಾಟಿಂಗ್ ಮಾಡಿದ ಡ್ವೇಯ್ನ್ ಸ್ಮಿತ್ ದಾಖಲೆಯ 182.50ಸರಸಾರಿಯ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಸ್ಮಿತ್ ಬರೊಬ್ಬರಿ 73 ರನ್ ಗಳಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಐದನೇ ಕ್ರಮಾಂಕದ ಬ್ಯಾಟ್ಸಮನ್ ನಿಂದ ಬಂದ ದಾಖಲೆಯ ಸ್ಟ್ರೈಕ್ ರೇಟ್ ಇದಾಗಿದೆ.
5.ಪವರ್ ಪ್ಲೇ ಅವಧಿಯಲ್ಲಿ ಗುಜರಾತ್ ಸಿಡಿಸಿದ 23 ರನ್ ಗಳು ಐಪಿಎಲ್ ನ ಅತ್ಯಂತ ಕಡಿಮೆ ರನ್ ಗಳಿಕೆಯಾಗಿ ದಾಖಲಾಗಿದೆ. ಈ ಹಿಂದೆ 2009ರಲ್ಲಿ ರಾಜಸ್ತಾನ ರಾಯಲ್ಸ್ ತಂಡ ಪವರ್ ಪ್ಲೇ ಅವಧಿಯಲ್ಲಿ ಕೇವಲ 14 ರನ್ ಗಳಿಸಿತ್ತು.
6.ಗುಜರಾತ್ ತಂಡ ಆರಂಭಿಕ ಆಟಗಾರರಾದ ಆ್ಯರಾನ್ ಫಿಂಚ್ ಮತ್ತು ಮೆಕ್ಕಲಮ್ ಗಳಿಸಿದ 5 ರನ್ ಗಳ ಜೊತೆಯಾಟ ಐಪಿಎಲ್ ಇತಿಹಾಸದಲ್ಲಿಯೇ ಆರಂಭಿಕ ಆಟಗಾರರ ಅತ್ಯಂತ ಕಡಿಮೆ ಜೊತೆಯಾಟವಾಗಿ ದಾಖಲಾಗಿದೆ. ಈ ಹಿಂದೆ ಇದೇ ಜೋಡಿ ಕೆಕೆಆರ್ ವಿರುದ್ಧ ಕಾನ್ಪುರಲ್ಲಿ 6 ರನ್ ಗಳ ಜೊತೆಯಾಟವಾಡಿತ್ತು.
7.ಬೆಂಗಳೂರು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಎಬಿಡಿವಿಲಿಯರ್ಸ್ ಮತ್ತು ಇಕ್ಬಾಲ್ ಅಬ್ದುಲ್ಲಾ ಅವರ ಅಜೇಯ ಜೊತೆಯಾಟ ಕೂಡ ಇದೀಗ ದಾಖಲೆಯಾಗಿ ಮಾರ್ಪಟ್ಟಿದ್ದು, ಏಳನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ ಗಳಿಸಿದ ಅಜೇಯ 91 ರನ್ ಗಳಿಕೆ ಎರಡನೇ ಅತಿ ಹೆಚ್ಚು ಜೊತೆಯಾಟದ ರನ್ ಗಳಿಕೆಯಾಗಿ ದಾಖಲೆಯಾಗಿದೆ. 2015ರಲ್ಲಿ ಏಳನೇ ವಿಕೆಟ್ ಜೊತೆಯಾಟದಲ್ಲಿ ಹರ್ಭಜನ್ ಸಿಂಗ್ ಮತ್ತು ಸುಚಿತ್ 100 ಗಳಿಸಿದ್ದರು. ಇದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
Advertisement