ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 536 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೆಹಲಿಯ ಮಾಲಿನ್ಯ ಹಿನ್ನಲೆ ಲಂಕಾ ಆಟಗಾರರು ಪಂದ್ಯದ ನಡುವೆ ಪದೇ ಪದೇ ಸಮಸ್ಯೆ ಉಂಟು ಮಾಡಿದ ಪರಿಣಾಮ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ವಿಕೆಟ್ ಬಾಕಿ ಇರುವಂತೆ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು.
ಲಂಕಾ ಆಟಗಾರರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಡುತ್ತಿದ್ದಾರೆ. ಇದೇ ವೇಳೆ ಬೌಲರ್ ಗಳು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದು ಪಂದ್ಯವನ್ನು ನಿಲ್ಲಿಸುವಂತೆ ಅಂಪೈರ್ ಗಳಿಗೆ ಮನವಿ ಮಾಡಿದರು. ಮೈದಾನದಲ್ಲಿದ್ದ ಅಂಪೈರ್ ಗಳು ಉಭಯ ತಂಡದ ನಾಯಕರನ್ನು ಸಮಲೋಚನೆ ನಡೆಸಿದರು. ಇದರಿಂದಾಗಿ ಪಂದ್ಯ 16 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ನಂತರ ಪಂದ್ಯ ಆರಂಭವಾದರೂ ಘಮಗೆ ಉಸಿರಾಟ ತೊಂದರೆಯಿಂದಾಗಿ ಪೆಲಿವಿಲಿಯನ್ ಸೇರಿದರು. ನಂತರ ಮತ್ತೊಬ್ಬ ಆಟಗಾರ ಸಹ ತನ್ನ ಕೈಯಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೆವಿಲಿಯನ್ ಸೇರಿದರು. ಇದರಿಂದಾಗಿ ಲಂಕಾ ನಾಯಕ ಚಾಂಡಿಮಲ್ ಮತ್ತೇ ಅಂಪೈರ್ ಗೆ ಪಂದ್ಯ ನಿಲ್ಲಿಸುವಂತೆ ಮನವಿ ಮಾಡಿದರು.
ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಪಂದ್ಯ ಪದೇ ಪದೇ ನಿಲ್ಲುತ್ತಿದ್ದರಿಂದ ಬೇಸತ್ತಿದ್ದರು. ವಿಚಲಿತರಾಗಿದ್ದ ಕೊಹ್ಲಿ ಸಂದಕನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ವೃದ್ಧಿಮಾನ್ ಸಾಹಾ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾಗ ಲಂಕಾ ಆಟಗಾರರು ಉಸಿರಾಟದ ಸಮಸ್ಯೆಯನ್ನು ಮತ್ತೆ ತಂದಾಗ ಕೊಹ್ಲಿ ಪಂದ್ಯವನ್ನು ಡಿಕ್ಲೇರ್ ಮಾಡಿಕೊಂಡರು.
ನಂತರ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಲಂಕಾ ಆಟಗಾರರಿಗೆ ಟೀಂ ಇಂಡಿಯಾದ ಆರಂಭಿಕ ಬೌಲರ್ ಗಳು ಆಘಾತ ನೀಡಿದರು. 18 ರನ್ ಗಳಿಗೆ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ಲಂಕಾಗೆ ಆರಂಭಿಕ ಆಘಾತವಾಗಿದೆ.
ಭಾರತ ಪರ ಮುರಳಿ ವಿಜಯ್ 155, ಶಿಖರ್ ಧವನ್ 23, ಪೂಜಾರ 23, ವಿರಾಟ್ ಕೊಹ್ಲಿ 243, ರಹಾನೆ 1, ರೋಹಿತ್ ಶರ್ಮಾ 65, ಅಶ್ವಿನ್ 4, ವೃದ್ಧಿಮಾನ್ ಸಾಹಾ ಅಜೇಯ 9, ರವೀಂಜ್ರ ಜಡೇಜಾ ಅಜೇಯ 5 ರನ್ ಗಳಿಸಿದ್ದಾರೆ.
ಲಂಕಾ ಪರ ಸಂದಕನ್ 4, ಘಮಗೆ 2, ಪೆರೇರಾ 1 ವಿಕೆಟ್ ಪಡೆದಿದ್ದಾರೆ.